ಸದ್ಗುರು: ಜೀವನದ ಎಲ್ಲಾ ಅಪೇಕ್ಷಣೀಯ ವಿಷಯಗಳು, ಒಂದೋ ಅನೈತಿಕ, ಇಲ್ಲವೇ ಅಕ್ರಮ, ಇಲ್ಲವೇ ನಮ್ಮಲ್ಲಿ ಬೊಜ್ಜು ತರಿಸುತ್ತವೆ! ಏಕೆ ಹೀಗೆ? ಯುವಜನರು ಸಾಮಾನ್ಯವಾಗಿ ಈ ಪ್ರಶ್ನೆಯನ್ನು ಕೇಳುತ್ತಾರೆ ಅಥವಾ ಅದರ ಬಗ್ಗೆ ಯೋಚಿಸುತ್ತಾರೆ. ನಾವು ಮೊದಲ ಪದವನ್ನು ನೋಡೋಣ: "ಅನೈತಿಕ". ಜನರು ಈ ಪದವನ್ನು ಬಳಸುವಾಗ, ಅವರು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತನಾಡುತ್ತಿರುತ್ತಾರೆ. ಜನರು ಅವರ ಜೀವಿತಾವಧಿಯಲ್ಲಿ ನಂಬಲಾಗದ ಪ್ರಮಾಣದಲ್ಲಿ ಯೋಚಿಸುವ ವಿಷಯವೆಂದರೆ, ಲೈಂಗಿಕತೆ. ಒಂದು ಸರಳ ಜೈವಿಕ ಅಗತ್ಯವು ಅನೇಕರಿಗೆ ಜೀವಿತಾವಧಿಯ ಗೀಳಾಗಿ ಮಾರ್ಪಟ್ಟಿದೆ. ನಾವಿದನ್ನು ಅರ್ಥಮಾಡಿಕೊಳ್ಳೋಣ: ಲೈಂಗಿಕತೆಯು ನಮ್ಮೊಳಗಿರುವ ಒಂದು ಸರಳವಾದ ಪ್ರಚೋದನೆ, ಹದಿಹರೆಯದಲ್ಲಿ ನಡೆಯುವ ಒಂದು ರಾಸಾಯನಿಕ ಬದಲಾವಣೆಯಷ್ಟೆ. ಸಂತಾನೋತ್ಪತ್ತಿಯನ್ನು ಪ್ರೇರೇಪಿಸಲು ಇದು ಪ್ರಕೃತಿಯ ಮಾರ್ಗವಾಗಿರುವುದರಿಂದ, ಇದೊಂದು ಆನಂದದಾಯಕ ಅನುಭವವಾಗಿದೆಯಷ್ಟೆ. ಕಾಲ ಸರಿದಂತೆ, ನಾವು ಸಂತಾನೋತ್ಪತ್ತಿಯ ಅಂಶವನ್ನು ಐಚ್ಛಿಕಗೊಳಿಸಿದ್ದೇವೆ, ಆದರೆ ಭೋಗಸುಖದ ಆನಂದವಿನ್ನೂ ಉಳಿದಿದೆ. ಇದರಲ್ಲಿ ಸರಿ ಅಥವಾ ತಪ್ಪು ಎನ್ನುವುದಿಲ್ಲ. ನಮ್ಮ ಲೈಂಗಿಕತೆಯನ್ನು ಭೌತಿಕ ಅಸ್ತಿತ್ವದ ಒಂದು ಅಗತ್ಯವಾದ ಭಾಗವಾಗಿ ಸ್ವೀಕರಿಸುವುದು ಮುಖ್ಯವಾಗಿದೆ. ಇಬ್ಬರು ವ್ಯಕ್ತಿಗಳಲ್ಲಾದ ಲೈಂಗಿಕ ಪ್ರಚೋದನೆಯ ಕಾರಣದಿಂದ ಮಾತ್ರವೇ ನೀವು ಮತ್ತು ನಾನು ಅಸ್ತಿತ್ವದಲ್ಲಿರುವುದು. ಇದು ಸತ್ಯ.

ಮಾನವನ ಜೀವನದಲ್ಲಿ ಲೈಂಗಿಕತೆಯ ಪಾತ್ರವು ಉತ್ತಮವೇ, ಆದರೆ ಅದು ಮೂಲಭೂತವಾಗಿ ಸೀಮಿತವಾದದ್ದು. ಮನಸ್ಸಿನ ಮೇಲೆ ಹೆಚ್ಚು ಗಮನವನ್ನು ಹರಿಸುವವರು, ಈ ಪ್ರಚೋದನೆಯ ಒತ್ತಡವು ಕಡಿಮೆಯಾಗುವುದನ್ನು ಕಂಡುಕೊಳ್ಳುತ್ತಾರೆ.

ನಮ್ಮ ಜೈವಿಕತೆಯು ಪಾಪವೆಂದು ಮತಧರ್ಮಗಳು ಮತ್ತು ನೀತಿಪಾಠದ ಶಿಕ್ಷಕರು ನಮಗೆ ಹೇಳಿರುವುದು ಬಹು ದೊಡ್ಡ ಸಮಸ್ಯೆಯಾಗಿದೆ. ಇದು ಕಾಲಾಂತರಗಳಿಂದ, ವಿವರಿಸಲಾಗದಂತಹ ಅಪರಾಧಿ ಭಾವ ಮತ್ತು ದುಃಖವನ್ನು ಸೃಷ್ಟಿಸಿದೆ. ನೀವು ಏನನ್ನಾದರೂ ನಿರಾಕರಿಸಿದರೆ, ಮನಸ್ಸಿನಲ್ಲದು ಅಸಾಮಾನ್ಯವಾದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ನಿಗ್ರಹವು, ಮಾನವನ ಮನಸ್ಸಿನ ಮೇಲೆ ಹೇಳಲಾರದಷ್ಟು ಹಾನಿಯನ್ನು ಉಂಟುಮಾಡಿದೆ.

ಅದೇ ಸಮಯದಲ್ಲಿ, ನಾವು ದೇಹದ ರಾಸಾಯನಿಕ ಪ್ರಕ್ರಿಯೆಗಳ ಕೈಗೊಂಬೆಗಳಷ್ಟೆಯೇ? ಖಂಡಿತವಾಗಿಯೂ ಇಲ್ಲ. ಮಾನವನ ಜೀವನದಲ್ಲಿ ಲೈಂಗಿಕತೆಗೆ ಪಾತ್ರವಿದೆ, ಆದರೆ ಅದು ಮೂಲಭೂತವಾಗಿ ಸೀಮಿತವಾದದ್ದು. ಮನಸ್ಸಿನ ಮೇಲೆ ಹೆಚ್ಚು ಗಮನವನ್ನು ಹರಿಸುವವರು, ಈ ಪ್ರಚೋದನೆಯ ಒತ್ತಡವು ಕಡಿಮೆಯಾಗುವುದನ್ನು ಕಂಡುಕೊಳ್ಳುತ್ತಾರೆ. ಒಮ್ಮೆ ನೀವು ಮನಸ್ಸಿಗಿಂತ ಹೆಚ್ಚು ಆಳವಾದ ಸಂತೋಷಗಳನ್ನು ಕಂಡುಕೊಂಡರೆ, ಲೈಂಗಿಕತೆಯು ಗಮನಾರ್ಹವಾಗಿ ಹಿಂದೆಸರಿಯುತ್ತದೆ .

ಲೈಂಗಿಕತೆಗೆ ಅದರ ಸ್ಥಾನವನ್ನು ಕಂಡುಕೊಳ್ಳಲು ಸಹಕರಿಸುವುದು

ಲೈಂಗಿಕತೆಯ ಸಾಂಪ್ರದಾಯಿಕ, ಧಾರ್ಮಿಕ ಭಯಾನಕತೆಗೆ ಪ್ರತಿಕ್ರಯಿಸುತ್ತಾ, ಪಾಶ್ಚಾತ್ಯರು, ಇತ್ತೀಚಿನ ದಿನಗಳಲ್ಲಿ, ತಮ್ಮ ದೇಹದೊಂದಿಗೆ ತಮ್ಮನ್ನು ತಾವು ಹೆಚ್ಚಾಗಿ ಗುರುತಿಸಿಕೊಳ್ಳುವುದರ ಕಡೆಗೆ ವಾಲುತ್ತಿದ್ದಾರೆ. ನಾವಿದನ್ನು ಅನುಕರಿಸುವುದು ದುರದೃಷ್ಟಕರವಾಗುತ್ತದೆ. ನಮ್ಮ ಮೂಲಭೂತವಾದ ಜೈವಿಕ ಕ್ರಿಯೆಯನ್ನು ಮೂಲೆಗುಂಪಾಗಿಸುವುದು ಬೇಡ, ಆದರೆ ಅದನ್ನು ವೈಭವೀಕರಿಸಬೇಕಾದ ಅಗತ್ಯವೂ ಇಲ್ಲ. ಬಾಲ್ಯದಿಂದ ಹದಿಹರೆಯದವರೆಗೂ ನಿಮ್ಮ ಬೆಳವಣಿಗೆಯನ್ನು ನೀವು ಗಮನಿಸಿದರೆ, ಅದು ನಿಮ್ಮ ಕುತೂಹಲವನ್ನು ಕೆರಳಿಸಬೇಕೇ ವಿನಃ ನಿಮ್ಮನ್ನು ನಿಯಂತ್ರಿಸಬಾರದು. ನಾವು ನಮ್ಮ ಹಾರ್ಮೋನುಗಳ ಗುಲಾಮರಲ್ಲವೆಂದು ನಮ್ಮ ಸ್ವಭಾವಜನ್ಯ ಬುದ್ಧಿಶಕ್ತಿಯು ನಮಲ್ಲಿ ಅರಿವನ್ನು ಮೂಡಿಸುತ್ತದೆ. ಪ್ರಾಣಿಗಳ ತರಹ, ಮನುಷ್ಯರು ಅವರ ರಾಸಾಯನಿಕ ಕ್ರಿಯೆಯ ಹಿಡಿತದಲ್ಲಿಲ್ಲ. ಮಾನವರ ಭಾವನಾತ್ಮಕ ಮತ್ತು ಬೌದ್ಧಿಕ ಸಹಭಾಗಿತ್ವದ ಅವಶ್ಯಕತೆಯು ಅವರ ದೈಹಿಕ ಅಗತ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿದೆ.

 

ದುರದೃಷ್ಟವಶಾತ್, ಹಾರ್ಮೋನುಗಳ ಪ್ರಕ್ರಿಯೆಗೆ ತಮ್ಮ ಬುದ್ಧಿಶಕ್ತಿಯನ್ನು ನಿಯಂತ್ರಿಸುವ ಅವಕಾಶವನ್ನು ನೀಡುವವರು, ತಮ್ಮ ಆಂತರಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ. ಅನೇಕ ಯುವಜನರು ಎಲ್ಲಿಯೋ ಓದಿದ, ಅಂತರ್ಜಾಲ ಅಥವಾ ಸಿನೆಮಾಗಳಲ್ಲಿ ನೋಡಿದಂತಹ ವಿಷಯಗಳಿಗೆ ತಮ್ಮ ಬುದ್ಧಿಶಕ್ತಿಯನ್ನು ಕೈಗೊಂಬೆಯಾಗಿಸಿಕೊಂಡಿರುವುದು ಕರುಣಾಜನಕವಾಗಿದೆ. ಇದರ ಪರಿಣಾಮವಾಗಿ, ಅವರು ಲೈಂಗಿಕತೆಗೆ, ಅವರ ಆಂತರಿಕ ಅರಿವು ಮತ್ತು ಸಮತೋಲನವನ್ನು ಆಧರಿಸಿ ಪ್ರತಿಕ್ರಯಿಸುವ ಬದಲು, ಒಂದು ನಿರ್ದಿಷ್ಟ ಪೂರ್ವನಿರ್ಧಾರಿತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಜನರು ಲೈಂಗಿಕತೆಯ ಪರ ಮತ್ತು ವಿರೋಧವಾಗಿ ಮಾತನಾಡುತ್ತಲೇ ಇರುತ್ತಾರೆ. ಅವೆರಡರ ಅಗತ್ಯವೂ ಇಲ್ಲ. ದೇಹ ಮತ್ತು ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಆಂತರಿಕ ಸಮಚಿತ್ತತೆಯನ್ನು ಬೆಳೆಸುವುದು ಮುಖ್ಯವಾಗಿದೆ. ಹೀಗಾದಾಗ, ಲೈಂಗಿಕತೆಯು ತನ್ನ ಸಹಜವಾದ ಸ್ಥಾನವನ್ನು ಕಂಡುಕೊಳ್ಳುತ್ತದೆ. ಲೈಂಗಿಕ ಪ್ರವೃತ್ತಿಯನ್ನು ಅಂಗೀಕರಿಸುವುದು ಮತ್ತದನ್ನು ಜವಾಬ್ದಾರಿಯುತವಾಗಿ ನಡೆಸುವುದು ಮುಖ್ಯ. 

ಜನರು ಲೈಂಗಿಕತೆಯ ಪರ ಮತ್ತು ವಿರೋಧವಾಗಿ ಮಾತನಾಡುತ್ತಲೇ ಇರುತ್ತಾರೆ. ಅವೆರಡರ ಅಗತ್ಯವೂ ಇಲ್ಲ. ದೇಹ ಮತ್ತು ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಆಂತರಿಕ ಸಮಚಿತ್ತತೆಯನ್ನು ಬೆಳೆಸುವುದು ಮುಖ್ಯವಾಗಿದೆ. ಹೀಗಾದಾಗ, ಲೈಂಗಿಕತೆಯು ತನ್ನ ಸಹಜವಾದ ಸ್ಥಾನವನ್ನು ಕಂಡುಕೊಳ್ಳುತ್ತದೆ.

ಕೆಲವು ಸರಳವಾದ ಯೋಗಾಭ್ಯಾಸವನ್ನು ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಿದರೆ, ಅವರಿಗೆ ಅದು ಬಹಳ ಪ್ರಯೋಜನಕಾರಿಯಾಗಬಲ್ಲದು. ಯೋಗವು ಯಾವುದೇ ಬೋಧನೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ದೇಹ ಮತ್ತು ಮನಸ್ಸನ್ನು ಸಮನ್ವಯಗೊಳಿಸುತ್ತದೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image

A version of this article was originally published in Speaking Tree