ಪ್ರ: ಸಂಸಾರದಲ್ಲಿ ಸಂಘರ್ಷ ಮತ್ತು ಅಪಶ್ರುತಿ ಮಿಡಿಯುತ್ತಿದ್ದರೆ, ಉದಾಹರಣೆಗೆ ಪೋಷಕರೊಡನೆ ಅಥವಾ ಒಡಹುಟ್ಟಿದವರೊಡನೆ, ಕಾರಣ ಏನೇ ಇರಲಿ, ಸಾಮರಸ್ಯವನ್ನು ಮರಳಿಸುವುದು ಹೇಗೆ ?

ಸದ್ಗುರು: ನೀವು ಪೋಷಕರು ಮತ್ತು ಒಡಹುಟ್ಟಿದವರು ಎಂದು ಹೇಳಿದ್ದರಿಂದ ಒಂದು ಸಮರ್ಥನೆ ಇದೆ - ಅದೆಂದರೆ, ಅವರನ್ನು ನೀವು ಆಯ್ಕೆ ಮಾಡಿಕೊಂಡಿಲ್ಲ. ನೀವು ಪತಿ-ಪತ್ನಿಯರ ಬಗ್ಗೆ ಮಾತನಾಡುತ್ತಿದ್ದರೆ, ಆಯ್ಕೆ ಇರುತ್ತಿತ್ತು, ಆಗ ನೀವು ಯಾರನ್ನೂ ದೂಷಿಸಲು ಸಾಧ್ಯವಿರುತ್ತಿರಲಿಲ್ಲ!

ಸಂಸಾರವು ನಿಮ್ಮ ಸೀಮಿತತೆಗಳನ್ನು ತಿಳಿದುಕೊಳ್ಳಲು ಒಳ್ಳೆಯ ಆಧಾರವಾಗಿದೆ. ನೀವು ಕೆಲವೇ ಜನರ ನಡುವೆ ಒಂದು ಗೂಡಿನಲ್ಲಿ ಇರುತ್ತೀರಿ - ಅಂದರೆ, ಪ್ರತಿದಿನ ನೀವು ಏನೇ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಮೆಟ್ಟಲೇ ಬೇಕಾಗುತ್ತದೆ. ಅವರು ನಿಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದರೂ ನೀವು ಅವರ ಜೊತೆಯೇ ಇರಬೇಕಾಗುತ್ತದೆ. ಇದು ನಿಮ್ಮ 10,000 ಜನರ ಫೇಸ್ಬುಕ್ ಪರಿವಾರದಂತಲ್ಲ - ನಿಮಗೆ ಯಾರಾದರೂ ಇಷ್ಟವಾಗದಿದ್ದರೆ, ಅವರನ್ನು ಕ್ಲಿಕ್ ಮಾಡಿ ಹೊರಹಾಕುವುದಕ್ಕೆ.

ಸಂಸಾರವು ನಿಮ್ಮ ಸೀಮಿತತೆಗಳನ್ನು ತಿಳಿದುಕೊಳ್ಳಲು ಒಳ್ಳೆಯ ಆಧಾರವಾಗಿದೆ.

ನಿಮ್ಮ ಇಷ್ಟಗಳು ಮತ್ತು ಕಷ್ಟಗಳನ್ನು ಮೀರಿ ಬೆಳೆಯಲು ಕುಟುಂಬವು ಒಂದು ಸುಂದರವಾದ ಸ್ಥಳವಾಗಿದೆ. ನಿಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ನಿಮ್ಮೊಳಗಿನ ಪ್ರಚೋದನೆಗೆ ಆಧಾರವಾಗಿದೆ. ನೀವು ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳೊಂದಿಗೆ ಸಿಲುಕಿಕೊಂಡಾಗ, ಅರಿವಿನ ಪ್ರಶ್ನೆಯೇ ಉಧ್ಬವಿಸುವುದಿಲ್ಲ. ನೀವು ಏನನ್ನಾದರೂ ಇಷ್ಟಪಡುವ ಅಥವಾ ಇಷ್ಟಪಡದ ಕ್ಷಣ, ನೀವು ಸ್ವಾಭಾವಿಕವಾಗಿ ಪ್ರಚೋದನಕಾರಿಯಾಗಿ ವರ್ತಿಸುತ್ತೀರಿ - ನೀವು ಇಷ್ಟಪಡುವದಕ್ಕೆ ಅನುಕೂಲಕರವಾದ ಪ್ರಚೋದನೆಯಾಗಿ, ಪ್ರತಿಕ್ರಿಯಾತ್ಮಕ ಪ್ರಚೋದನಾಕಾರಿ ರೀತಿಯಲ್ಲಿ ಇಷ್ಟಪಡದಿದ್ದಕ್ಕೆ ವರ್ತಿಸುತ್ತೀರಿ..

ಜಾಗೃತರಾಗುವುದು

ಪರಿವಾರವೆಂದರೆ, ಒಂದೇ ಗೂಡಿನಲ್ಲಿ ನಿಮಗೆ ಇಷ್ಟವಿದ್ದರೂ, ಇಲ್ಲದಿದ್ದರೂ ಈ ಜನರ ಜೊತೆಗೆ ಒಂದು ನಿರ್ದಿಷ್ಟ ಸಮಯದವರೆಗೂ ಇರುವುದು. ಇದನ್ನು ಒಂದು ಕೆಟ್ಟ ಅನುಭವವನ್ನಾಗಿಯಾದರು ಮಾಡಿಕೊಳ್ಳಿ ಅಥವಾ ನಿಮ್ಮ ಇಷ್ಟ ಮತ್ತು ಇಷ್ಟವಿಲ್ಲದಿರುವೆಕೆಯನ್ನು ಮೆಟ್ಟಿ ನಿಲ್ಲುವುದನ್ನು ಕಲಿಯಿರಿ. ನಿಮ್ಮ ಗಂಡನಲ್ಲಿ ಕೆಲವು ಅಂಶಗಳು ನಿಮಗೆ ಇಷ್ಟವಾಗದೇ ಹೋಗಬಹುದು. ಸ್ವಲ್ಪ ಸಮಯದ ನಂತರ, ನೀವು, “ಅವರಿರುವುದೇ ಹಾಗೆ, ಪರವಾಗಿಲ್ಲ” ಎನ್ನಬಹುದು. ಆತ ಬದಲಾಗಿಲ್ಲ, ಆದರೆ, ನಿಮಗೆ ಅವರ ಯಾವ ಅಂಶ ಚಿಂತೆಗೀಡುಮಾಡಿತ್ತೋ ನೀವು ಅದನ್ನು ಮೀರಿ ನಿಂತಿದ್ದೀರಿ. ಅದೇ ನೀವು ಬೇಸರದಿಂದ ವಿಧಿಯಿಲ್ಲದೇ ಒಪ್ಪಿಕೊಳ್ಳುವಂತೆ, “ಬೇರೆ ಯಾವ ದಾರಿ ಇದೆ? ನಾನು ಅನುಸರಿಸಿಕೊಳ್ಳಬೇಕಷ್ಟೆ” ಎಂದುಕೊಂಡರೆ ಎಲ್ಲರೊಡನೆ ಇರುವ ನೋವು, ಒತ್ತಡ ಎಲ್ಲವೂ ವ್ಯರ್ಥವಾಗುತ್ತದೆ. ಆದರೆ, ನೀವು “ಹೌದು, ಅವರು ಇರುವುದೇ ಹೀಗೆ, ಆದರೆ ನನಗೇನೂ ಪರವಾಗಿಲ್ಲ. ನಾನು ಇವರೊಂದಿಗೆ ಸಂತೋಷದಿಂದ ಇರುತ್ತೇನೆ,” ಎಂದುಕೊಂಡರೆ ನೀವು ಜಾಗೃತರಾಗಿದ್ದೀರಿ ಎಂದು ಅರ್ಥ.

ಆದರೆ, ನೀವು “ಹೌದು, ಅವರು ಇರುವುದೇ ಹೀಗೆ, ಆದರೆ ನನಗೇನೂ ಪರವಾಗಿಲ್ಲ. ನಾನು ಇವರೊಂದಿಗೆ ಸಂತೋಷದಿಂದ ಇರುತ್ತೇನೆ,” ಎಂದುಕೊಂಡರೆ ನೀವು ಜಾಗೃತರಾಗಿದ್ದೀರಿ ಎಂದು ಅರ್ಥ.

ನೀವು ನಿಮ್ಮ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆಯನ್ನು ಮೀರಿ ನಿಂತಾಗ, ನಿಮಗೆ ಅರಿವಿಲ್ಲದೆಯೇ ನೀವು ಜಾಗೃತರಾಗುತ್ತೀರಿ. ನಿಮಗೆ ಗೊತ್ತಿಲ್ಲದೆಯೇ ಅಧ್ಯಾತ್ಮದತ್ತ ತಿರುಗಿರುತ್ತೀರಿ ಮತ್ತು ಇದು ಅಧ್ಯಾತ್ಮದತ್ತ ಸಾಗಲು ಉತ್ತಮವಾದ ಮಾರ್ಗ. “ನಾನು ಅಧ್ಯಾತ್ಮದ ದಾರಿಯಲ್ಲಿ ನಡೆಯುತ್ತೀನಿ” ಎಂದು ಹೇಳಿಕೊಳ್ಳುವುದರಿಂದಲ್ಲ. ಆದರೆ, ನೀವು ಜಾಗೃತರಾಗಿ ನಿಮ್ಮ ಸೀಮಿತತೆಯನ್ನು, ಇಷ್ಟಗಳನ್ನು, ಇಷ್ಟವಿಲ್ಲದಿರುವಿಕೆಯನ್ನು ಎಲ್ಲವನ್ನೂ ಮೀರಿ ಅಧ್ಯಾತ್ಮದತ್ತ ತಿರುಗಿದ್ದೀರಿ, “ಅಧ್ಯಾತ್ಮ” ಎನ್ನುವ ಪದವನ್ನು ಬಳಸದೆಯೇ. ಅಧ್ಯಾತ್ಮದತ್ತ ಸಾಗಲು ಇರುವ ಉತ್ತಮ ದಾರಿಯೆಂದರೆ, ಜಾಗೃತರಾಗಿ ವಿಕಸನಗೊಳ್ಳುತ್ತಾ ಯಾವುದೇ ನಿರ್ಬಂಧದಿಂದ ಪ್ರತಿಕ್ರಿಯಾತ್ಮಕವಾಗದ ಹಂತವನ್ನು ತಲುಪುವುದು. ಇದಕ್ಕಾಗಿ ನಿಮ್ಮನ್ನು ತಯಾರಿಸಲು ಸಂಸಾರವು ಸೂಕ್ತವಾದ ಜಾಗ. ನೀವು ಯಾವುದೇ ರೀತಿಯ ಸಂಸಾರದಲ್ಲಿ ಇರಿ, ಅದು ಕೇವಲ ನಿಗದಿತ ಸಮಯದವರೆಗೂ, ಅಷ್ಟೇ. ಈ ಸಮಯವನ್ನು ನೀವು ಇಷ್ಟ-ಇಷ್ಟ ಇಲ್ಲದಿರುವಿಕೆಯನ್ನು ಮೀರಿ ನೆಲೆಸಲು ಬಳಸಿಕೊಳ್ಳಬೇಕು.

ಎಲ್ಲಿ ನಿಮ್ಮ ಸುತ್ತಮುತ್ತ ಇರುವ ಜನರು ನಿಮ್ಮನ್ನು ಒಪ್ಪುವುದಿಲ್ಲವೋ ಅದು ನಿಮಗೆ ಒಳ್ಳೆಯ ಜಾಗ. ಆಶ್ರಮವಾಸಿಗಳಿಗೆ ನಾನು ಯಾವಾಗಲೂ ಹೇಳುತ್ತೇನೆ, “ಯಾರನ್ನು ನೀವು ಸಹಿಸಲು ಸಾಧ್ಯವಿಲ್ಲವೋ, ಅಂಥವರೊಂದಿಗೇ ಸಂತೋಷದಿಂದ ಕೆಲಸ ಮಾಡಲು ಕಲಿಯಿರಿ. ಆಗ ನೀವು ಅದ್ಭುತಗಳನ್ನು ಅನುಭವಿಸುತ್ತೀರಿ” ಎಂದು. ನೀವು ಇಷ್ಟಪಡುವವರ ಜೊತೆಯೇ ಇರಬೇಕೆಂದುಕೊಂಡರೆ, ಅಂಥವರೊಡನೇ ಇರಬೇಕೆಂಬ ನಿರ್ಬಂಧಕ್ಕೊಳಗಾಗುತ್ತೀರಿ. ಸಂಸಾರವು ಎಂದೂ ಸಮಸ್ಯೆಯಲ್ಲ. ನೀವು ಇಷ್ಟಪಡುವುದರೊಂದಿಗೆ ಇರುವುದೇ ಸಮಸ್ಯೆ. ನಿಮಗೆ ಇಷ್ಟವಾದದ್ದನ್ನು ಆರಿಸಿಕೊಳ್ಳಬೇಡಿ. ಇರುವುದನ್ನೇ ಅಂದ್ಬುತವನ್ನಾಗಿಸುವುದಕ್ಕೆ ಪ್ರಯತ್ನಿಸಿ. ನಿಮಗೇನು ಲಭ್ಯ ನಿಮ್ಮ ಕೈಯಲಿಲ್ಲ, ಆದರೆ, ಅದನ್ನು ನೀವು ಹೇಗೆ ಬಳಸುತ್ತೀರಿ ಅದು ಮುಖ್ಯ.

ಎಲ್ಲಿ ನಿಮ್ಮ ಸುತ್ತಮುತ್ತ ಇರುವ ಜನರು ನಿಮ್ಮನ್ನು ಒಪ್ಪುವುದಿಲ್ಲವೋ ಅದು ನಿಮಗೆ ಒಳ್ಳೆಯ ಜಾಗ.

“ ಒಹೋ, ಇಂದು ಎಷ್ಟು ಒಳ್ಳೆಯ ದಿನ” ಅಥವಾ “ಅಯ್ಯೋ ಇಂದು ಕೆಟ್ಟ ದಿನ”, ಎಂದೆಲ್ಲಾ ಜನರು ಹವಾಮಾನದ ಬಗ್ಗೆ ಹೇಳುತ್ತಿರುತ್ತಾರೆ. ಮೋಡಗಳಿದ್ದ ಮಾತ್ರಕ್ಕೆ ಅದು ಕೆಟ್ಟ ದಿನವಾಗುವುದಿಲ್ಲ. ಹವಾಮಾನವನ್ನು ಪ್ರಕೃತಿಗೆ ಬಿಟ್ಟುಬಿಡಿ. ಒಂದು ದಿನ ಬಿಸಿಲು, ಮತ್ತೊಂದು ದಿನ ಮೋಡ: ಒಂದು ದಿನ ಮಳೆ ಮತ್ತೊಂದು ದಿನ ಹಿಮಪಾತ - ಅಷ್ಟೇ. ಬಿಸಿಲಿದ್ದರೆ, ಮೇಲ್ವಸ್ತ್ರವಿಲ್ಲದೇ ಹೋಗಿ; ಮಳೆಯಿದ್ದರೆ ರೈನ್ ಕೋಟ್ ತೆಗೆದುಕೊಂಡು ಹೋಗಿ; ಹಿಮಪಾತವಾಗುತ್ತಿದ್ದರೆ, ಸ್ನೋ - ಬೋರ್ಡ್ ತೆಗೆದುಕೊಂಡು ಹೋಗಿ. ಅದೇನೇ , ಇರಲಿ ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ.

ಹಾಗೆಯೇ, ನಿಮ್ಮ ಸುತ್ತ ಈಗ ಯಾರು ಕುಳಿತುಕೊಂಡಿದ್ದಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ಆ ವ್ಯಕ್ತಿಯ ಜೊತೆ ಕುಳಿತಿರುವುದನ್ನು ಒಂದು ಅದ್ಭುತ ಅನುಭವನ್ನಾಗಿ ಮಾಡಿಕೊಳ್ಳಿ. ಹಾಗಂತ ನೀವು ಜೀವಮಾನವಿಡೀ ಜೊತೆಯೇ ಕುಳಿತಿರುತ್ತೀರಿ ಎಂದಲ್ಲ. ಪ್ರತಿಯೊಬ್ಬರೂ ಬರುತ್ತಾರೆ, ಹೋಗುತ್ತಾರೆ. ಒಂದೋ, ಅವರು ಬಂದು ಹೋಗುತ್ತಾರೆ, ಇಲ್ಲವೇ ನೀವು ಬಂದು ಹೋಗುತ್ತೀರಿ. ಇಲ್ಲಿ ಯಾರೇ ಇರಲಿ, ಏನೇ ಇರಲಿ, ಈ ಕ್ಷಣವನ್ನು ಅತ್ಯುತ್ತಮವಾಗಿಸಿಕೊಳ್ಳಿ. ನಿಮಗೆ ಬೇರೆ ಆಯ್ಕೆಗಳಿದ್ದರೆ, ನೀವು ಬದಲಾಗಬಹುದು, ಆದರೆ, ಮುಖ್ಯವಾದ ವಿಷಯ ಸಂತೋಷದಿಂದ ಬದಲಾಗಿ. ಇದು ಪ್ರಜ್ಞಾಪೂರ್ವಕ ಆಯ್ಕೆಯಾಗಬೇಕು, ನಿರ್ಬಂಧಿತ ಆಯ್ಕೆಯಲ್ಲ. ಏಕೆಂದರೆ, ನೀವು ಇಲ್ಲೇ ಇರುವುದಿಲ್ಲ, ನೀವು ಬೇರೆಡೆಗೆ ಹಾರುತ್ತೀರಿ. ನೀವು ಈ ಸ್ಥಿತಿಯಲ್ಲಿ ಹೊರಟರೆ, ನೀವು ಎಲ್ಲೇ ಹೋದರೂ, ಒಂದೇ ತರಹ ಇರುತ್ತೀರಿ. ಇಲ್ಲಿ ನಿಮಗೆ ಅದು ಹೇಗೆ ಮಾಡುವುದು ಎಂದು ಗೊತ್ತಾಗದಿದ್ದರೆ, ಬೇರೆಲ್ಲೂ ಗೊತ್ತಾಗುವುದಿಲ್ಲ.

ಫಲಿತಾಂಶಗಳನ್ನು ಅಳೆಯುವುದು

ಈ ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಗಳು ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಫಲಿತಾಂಶಗಳಿಂದ ಮಾತ್ರ. ಅದೇ ಜನರ ಜೊತೆ, ಸ್ವಲ್ಪ ಹೆಚ್ಚಿನ ಸಂತೋಷದಿಂದ ಏಳುವುದು, ಮತ್ತಷ್ಟು ಸರಾಗವಾಗಿರುವುದು, ಅವರಿಂದ ಈಗ ಮೊದಲಿನಂತೆ ಕಿರಿಕಿರಿಯಾಗದೇ ಇರುವುದು, ಇದೆಲ್ಲದರ ಅರ್ಥ ನೀವು ಪ್ರಗತಿ ಸಾಧಿಸುತ್ತಿದ್ದೀರಿ ಎಂದು ಅರ್ಥ. ಎಲ್ಲೆಡೆಯೂ ಪ್ರಗತಿಯನ್ನು ಅಳೆಯುವುದು ಫಲಿತಾಂಶಗಳಿಂದ - ಇಲ್ಲಿ ಕೂಡ ಅಷ್ಟೇ.

ಒಂದು ದಿನ ಹೀಗಾಯಿತು - ಸ್ವರ್ಗದ ಬಾಗಿಲಲ್ಲಿ ಕ್ಯೂ ಇತ್ತು. ಸಂತ ಪೀಟರ್ ಒಳಗೆ ಬಿಡುವ ಮೊದಲು ಎಲ್ಲರ ಲೆಕ್ಕವನ್ನೂ ಪರಿಶೀಲಿಸಿ ಬಿಡುತ್ತಿದ್ದ. ಅಲ್ಲಿ ಹೊಳೆಯುವ ಪೋಲ್ಕಾ ಡಾಟ್ ಶರ್ಟ್ ಮತ್ತು ಏವಿಯೇಟರ್ ಕನ್ನಡಕವನ್ನು ಧರಿಸಿ, ಸಿಗರೇಟನ್ನು ತೂಗಾಡಿಸುತ್ತ , ಒಬ್ಬ ಇಟಲಿಯ ಡ್ರೈವರ್ ನಿಂತಿದ್ದ. ಅವನ ಹಿಂದೆ ಒಬ್ಬ ಬಿಷಪ್(ಕ್ರೈಸ್ತ ಪ್ರಧಾನ ಗುರು) ನಿಂತಿದ್ದ. ಅವನ ಕಡೆ ಅಸಹ್ಯದಿಂದ ನೋದುತ್ತ, “ಈ ಸ್ವರ್ಗದ ಸಾಲಿನಲ್ಲಿ ಇಂತಹವನು ಯಾಕಾದರೂ ನಿಂತಿದ್ದಾನೆ? “ ಎಂದಕೊಂಡನು. ಆದರೆ ದೇವರ ವಿಚಿತ್ರ ಲೀಲೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಟ್ಯಾಕ್ಸಿ ಡ್ರೈವರ್ ನ ಸರದಿ ಬಂದಾಗ ತನ್ನ ಹಣೆಬರಹಕ್ಕೆ ಶರಣಾಗಿ, “ ಸರಿ, ಎಲ್ಲಾದರೂ ಕಳುಹಿಸಿ, ಅದರಿಂದ ನನಗೇನು?” ಎಂದನು. ಟ್ಯಾಕ್ಸಿ ಡ್ರೈವರ್ ಆಗಿ ಅವನು ತನ್ನ ಗ್ರಾಹಕರು ಎಲ್ಲಿ ಕರೆದರಲ್ಲಿಗೆ ಹೋಗುತ್ತಿದ್ದನು, ತನ್ನದೇ ಆದ ಆಯ್ಕೆಯೇನೂ ಇರಲಿಲ್ಲ. ಅವನ ಲೆಕ್ಕವನ್ನೆಲ್ಲಾ ಪರಿಶೀಲಿಸಿ ಆಯಿತು. ನಂತರ ಪೀಟರ್ ಅವನನ್ನು ಸ್ವಾಗತಿಸಿ, ಅಂದವಾದ ರೇಷ್ಮೆಯ ವಸ್ತ್ರವನ್ನು ನೀಡಿದ. ಇಬ್ಬರು ಸುಂದರವಾದ ಕಿನ್ನರಿಯರು ಅವನನ್ನು ಸ್ವರ್ಗದೊಳಗೆ ಕರೆದುಕೊಂಡು ಹೋದರು.

ಅದೇ ಜನರ ಜೊತೆ, ಸ್ವಲ್ಪ ಹೆಚ್ಚಿನ ಸಂತೋಷದಿಂದ ಏಳುವುದು, ಮತ್ತಷ್ಟು ಸರಾಗವಾಗಿರುವುದು, ಅವರಿಂದ ಈಗ ಮೊದಲಿನಂತೆ ಕಿರಿಕಿರಿಯಾಗದೇ ಇರುವುದು, ಇದೆಲ್ಲದರ ಅರ್ಥ ನೀವು ಪ್ರಗತಿ ಸಾಧಿಸುತ್ತಿದ್ದೀರಿ ಎಂದು ಅರ್ಥ

ಆ ಬಿಷಪ್ ನು ಇದನ್ನು ಪರಮಾಶ್ಚರ್ಯದಿಂದ ನೋಡುತ್ತಿದ್ದನು. ಅವನ ಸರದಿ ಬಂದಾಗ, ಅವನ ಪುಸ್ತಕವನ್ನು ಪರಿಶೀಲಿಸಿ, ಅವನನ್ನು ಸ್ವಾಗತಿಸಿ, ಅವನಿಗೆ ಕೆಲಸದವನ ಬಟ್ಟೆಗಳನ್ನು ಕೊಟ್ಟು, ಸಾರಿಸುವ ಕೋಲನ್ನು ಕೊಟ್ಟು , “ನೀನು ಹೋಗಿ 127ನೇ ಕಾರಿಡಾರ್ ಅನ್ನು ಸ್ವಚ್ಛ ಮಾಡು” ಎಂದು ಹೇಳಿದರು. ಆ ಬಿಷಪ್ಪನು ಬಹಳ ವಿಚಲಿತನಾಗಿ, “ಇದೇನಿದು? ಆ ಇಟಲಿಯ ಟ್ಯಾಕ್ಸಿ ಡ್ರೈವರ್ ಪಾಪದ ಪಟ್ಟಣದಿಂದ ಬಂದಿದ್ದಾನೆ - ಅವನ ಹೆಸರನ್ನು ಕೂಡ ನಾನು ಉಚ್ಛರಿಸಲಾರೆ - ಎಂತೆಂಥವರನ್ನೆಲ್ಲಾ ಅವನು ಸಾಗಿಸಿರುತ್ತಾನೆ - ಅಂಥವನಿಗೆ ರೇಷ್ಮೆಯ ವಸ್ತ್ರ ಮತ್ತು ಕಿನ್ನರಿಯರು, ಮತ್ತು ಸ್ವರ್ಗ.. ನಾನು ಒಬ್ಬ ಬಿಷಪ್ - ದೇವರ ಸೇವೆಯಲ್ಲಿಯೇ ಇದ್ದೇನೆ. ನನಗೆ ಕೆಲಸದವನ ದಿರಿಸು, ಸಾರಿಸುವ ಕೋಲು ಮತ್ತು 127ನೇ ಕಾರಿಡಾರ್ - ನನಗೆ ಗೊತ್ತು ಎಷ್ಟು ಹೊತ್ತಾಗಿದೆ ಎಂದು. ಏಕೆ ಹೀಗೆ?” ಎಂದು ಕೇಳಿದನು. ಪೀಟರ್ ಅವನನ್ನು ನೋಡಿ , “ದಯವಿಟ್ಟು ಕೇಳಿಸಿಕೋ, ಇದು ಚರ್ಚಿನಂತಲ್ಲ, ಇದು ಸ್ವರ್ಗ. ಇಲ್ಲಿ ನಾವು ಫಲಿತಾಂಶಗಳ ಮೇಲೆ ನಿರ್ಧರಿಸುತ್ತೇವೆ. ನೀನು ಧರ್ಮೋಪದೇಶ ನೀಡುವಾಗ ಜನರು ನಿದ್ದೆ ಮಾಡುತ್ತಿದ್ದರು. ಆದರೆ ಅವನು ಟ್ಯಾಕ್ಸಿ ಓಡಿಸುತ್ತಿದ್ದಾಗ ಜನರು, “ಓ ದೇವರೇ! ಓ ದೇವರೇ! ಓ ದೇವರೇ!” ಎನ್ನುತ್ತಿದ್ದರು” ಎಂದು ಹೇಳಿದನು

ನೀವು ಕೂಡ ಫಲಿತಾಂಶಗಳ ಮೇಲೇ ಹೋಗಬೇಕು. ನಿಮ್ಮ ಅಧ್ಯಾತ್ಮ ಪ್ರಕ್ರಿಯೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆಂದರೆ, ಸುಮ್ಮನೆ ಗಮನಿಸಿ - ಹೊರಗಡೆ ಏನೇ ಸನ್ನಿವೇಶವಿದ್ದರೂ, ನೀವು ನಿಮ್ಮೊಳಗೇ ಸಂಘರ್ಷದಲ್ಲಿದ್ದೀರಾ ಎಂದು. ನಿಮ್ಮಲ್ಲಿ ಸಂಘರ್ಷವಿದ್ದರೆ, ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಶಾರೀರಿಕವಾಗಿ ನಿಮ್ಮನ್ನೇನೂ ಹೊಡೆದುಬಡಿದು ಮಾಡಿಲ್ಲ. , ಆದರೆ, ಏನೇನೋ ಹೇಳುತ್ತಿದ್ದಾರೆ ಅಷ್ಟೇ. ಅವರಿಗೇನು ಚೆನ್ನಾಗಿ ತಿಳಿದಿದೆಯೋ ಅದನ್ನು ಅವರು ಮಾಡುತ್ತಾರೆ. ನಿಮಗೇನು ಚೆನ್ನಾಗಿ ತಿಳಿದಿದೆಯೋ ಅದನ್ನು ನೀವು ಅದನ್ನು ಮಾಡಿ. ನಿಮಗೆ ಅತ್ಯುತ್ತಮವಾದದ್ದು ಗೊತ್ತಿದ್ದರೆ, ನೀವು ಹಾಯಾಗಿರುತ್ತೀರಿ. ನೀವು ಸೌಖ್ಯವಾಗಿದ್ದರೆ, ಅವರನ್ನೂ ಪರಿವರ್ತಿಸಬಹುದೇನೋ, ಆದರೆ ತಕ್ಷಣಕ್ಕೆ ನೀವು ಅಷ್ಟೊಂದು ಮಾಡಬಹುದೆಂದು ಹೇಳುವಷ್ಟು ದೂರ ನಾನು ಹೋಗುವುದಿಲ್ಲ. ನಿಮ್ಮನ್ನು ಯಾರಾದರೂ ಬೈಯುತ್ತಿದ್ದರೆ ಅಥವಾ ನಿಮ್ಮ ಮೇಲೆ ರೇಗಾಡುತ್ತಿದ್ದರೂ ಪರವಾಗಿಲ್ಲ. ನಿಮಗೆ ಬೇಕೆಂದರೆ, ನೀವೇ ನಿಮಗೆ ಒಂದು ಪದಕೋಶವನ್ನು ಬರೆದುಕೊಂಡು, ಬೈಗಳನ್ನೆಲ್ಲಾ ಒಳ್ಳೆಯ, ಸಿಹಿಯಾದ ಪದಗಳಾಗಿ ಅನುವಾದಿಸಬಹುದು. ಏನೇ ಆದರೂ ಅವರಿಗೆ ಒಳ್ಳೆಯದೆನಿಸಿದ್ದನ್ನು ಮಾಡುತ್ತಿದ್ದಾರೆ ಎಂದು ನಿಮಗೆ ಅರಿವಿರಬೇಕು. ದುರದೃಷ್ಟವಶಾತ್ ಅವರ ಒಳ್ಳೆಯದು ಬರೀ ಹೊಲಸೇ ಆಗಿದೆ - ಏನ್ಮಾಡೋದು? ಅಂತಹ ಜನರಿಗೆ ಸಹಾನುಭೂತಿ ತೋರಿಸಬಹುದಷ್ಟೆ.

ಕೆಸರಿನಿಂದ ಸುಗಂಧದ ಕಡೆಗೆ

ಸದ್ಯಕ್ಕೆ ನೀವು ಅಲ್ಲಿರಬೇಕು. ಹಲವಾರು ಬಾರಿ, ನೀವಷ್ಟೇ ಅಲ್ಲ, ನಾವೆಲ್ಲರೂ ನಮಗಿಷ್ಟವಿಲ್ಲದ ಜನರು ಮತ್ತು ಸನ್ನಿವೇಶಗಳ ನಡುವೆ ಇರಬೇಕಾಗುತ್ತದೆ. ನಾವೆಲ್ಲಿರುತ್ತೇವೆ ಎಂಬುದು ನಮ್ಮ ಆಯ್ಕೆಯಲ್ಲ. ಆದರೆ ಅದರಿಂದ ಏನನ್ನು ಮಾಡುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮ ಆಯ್ಕೆ. ನೀವು ಪ್ರಯೋಗಿಸಿ ನೋಡಿ. ಹಾಗೆ ಮಾಡಿದಾಗ ಹೊರಗಿನದೂ ನಿಧಾನವಾಗಿ ಆಯ್ಕೆಯಾಗುತ್ತದೆ. ಸಮಯ ಕಳೆದಂತೆ, ಸನ್ನಿವೇಶಗಳು ನಿಮ್ಮ ಸುತ್ತ ಸುಂದರವಾಗಿ ಜೋಡಣೆಯಾಗುತ್ತಾ ಹೋಗುತ್ತದೆ.

ಮೊದಲು ನೀವು ವ್ಯವಸ್ಥಿತವಾಗಿ ಒಬ್ಬ ಸುಂದರ ಮನುಷ್ಯರಾಗಿ. ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು.

ನನ್ನ ಪ್ರಪಂಚಾನುಭವ ಬಹಳ ಅದ್ಭುತವಾದದ್ದು. ನಾನು ಎಲ್ಲೇ ಹೋದರೂ ಜನರು ಆನಂದಬಾಷ್ಪವನ್ನು ಸುರಿಸುತ್ತಾರೆ. ನನಗಿನ್ನೇನು ಬೇಕು? ಇದು ಪ್ರಪಂಚದೆಲ್ಲೆಡೆಯ ನಿಜಾಯ್ತಿಯಲ್ಲ ಎಂದು ನನಗೆ ಚೆನ್ನಾಗಿ ಗೊತ್ತು, ಆದರೆ ನನ್ನ ಸುತ್ತ ಪ್ರಪಂಚ ಆ ರೀತಿ ಇರುತ್ತದೆ. ಏಕೆಂದರೆ, ನಾನು ಎಲ್ಲೇ ಇದ್ದರೂ ಹೀಗೇ ಇರಬೇಕೆಂದು ನನ್ನನ್ನು ನಾನೇ ವ್ಯವಸ್ಥಿತವಾಗಿ ರೂಪಿಸಿಕೊಂಡಿದ್ದೇನೆ. ನಿಧಾನವಾಗಿ ಪ್ರಪಂಚವೂ ನನ್ನನ್ನು ಅನುಕರಿಸುತ್ತಿದೆ. ನೀವು ಇದನ್ನೇ ಮಾಡಿ. ಪ್ರಪಂಚದ ರಚನೆಯ ಬಗ್ಗೆ ಯೋಚಿಸಬೇಡಿ - ಸ್ವಲ್ಪ ಸಮಯದ ನಂತರ ಅದು ತಂತಾನೇ ಆಗುತ್ತದೆ. ಮೊದಲು ನೀವು ವ್ಯವಸ್ಥಿತವಾಗಿ ಒಬ್ಬ ಸುಂದರ ಮನುಷ್ಯರಾಗಿ. ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು.

ಸದ್ಯಕ್ಕೆ ಅವರಿಗೆ ಕೊಚ್ಛೆಯಲ್ಲೇ ನಡೆಯಬೇಕೆನಿಸಿದೆ - ಸ್ವಲ್ಪ ಸಮಯ, ಅವರಿಗದು ಬೇಸರವಾಗುವ ತನಕ ನಡೆಯಲಿ, ಬಿಡಿ. ನೀವು ಹೇಗಿರಬೇಕೆಂದರೆ, ಕೊಚ್ಛೆಯಲ್ಲಿರುವ ಜನರೂ, ಮುಂದೊಮ್ಮೆ ನಿಮ್ಮನ್ನು ನೋಡಿ, ನಿಮ್ಮಂತೆಯೇ ಬದುಕಬೇಕು ಎಂದು ಕೊಳ್ಳುವಂತೆ. ಅವರು ತಪ್ಪಿಸಲು ಸಾಧ್ಯವಿಲ್ಲ. ಅವರು ಕಟುವಾಗಿರುವುದಕ್ಕೆ ಕಾರಣ, ಅವರ ಜೀವನಾನುಭವ ಕಹಿಯಾಗಿರುವುದು ಮತ್ತು ಅತೃಪ್ತರಾಗಿರುವುದು. ಅವರ ಈ ಕಟುತ್ವ ಸಂಘರ್ಷಣೆಯ ರೂಪದಲ್ಲಿ ಹೊರಬರುತ್ತದೆ. ಇದಲ್ಲದೆ, ಬೇರೆ ರೀತಿಯಲ್ಲೂ ಬದುಕಬಹುದು ಎಂದು ಅವರಿಗೆ ತಿಳಿಸಲು ನೀವು ಉದಾಹರಣೆಯಾಗಿ. ಯೋಗದಲ್ಲಿ ಅತಿ ಸಹಿಷ್ಣುತೆಯ ಚಿಹ್ನೆ ಎಂದರೆ, ತಾವರೆ ಹೂವಿನದು. ಏಕೆಂದರೆ ತಾವರೆ ಹೂವು ಚೆನ್ನಾಗಿ ಬೆಳೆಯುವುದೇ ಜಾಸ್ತಿ ಕೆಸರಿರುವ ಕಡೆ. ಕೆಸರು ಹೆಚ್ಚಿದ್ದಷ್ಟೂ ಉತ್ತಮ. ಅಂತಹ ಕೆಸರೂ ಎಂತಹ ಅಲೌಕಿಕ ಸೌಂದರ್ಯ ಮತ್ತು ಸುಗಂಧವಾಗಿ ಪರಿವರ್ತನೆಯಾಗುತ್ತದೆ. ಇದು ಆಧ್ಯಾತ್ಮ ಪ್ರಕ್ರಿಯೆ. ಕೆಸರಿನ ಒಂದು ಭಾಗವಾಗುವುದು ಆಧ್ಯಾತ್ಮ ಪ್ರಕ್ರಿಯೆಯಲ್ಲ. ಕೆಸರನ್ನು ಸುಗಂಧವಾಗಿ ಪರಿವರ್ತಿಸುವುದು ಆಧ್ಯಾತ್ಮ ಪ್ರಕ್ರಿಯೆ.

Editor's Note: This article is based on an excerpt from the September 2014 issue of Forest Flower. Pay what you want and download. (set ‘0’ for free). Print subscriptions are also available.