ಜಾಗೃತಿ ಮತ್ತು ನೋವಿನ ಚಿಕಿತ್ಸೆಯ ನಡುವಿನ ಸಮತೋಲನ
ಸಾವಿನ ಕ್ಷಣದಲ್ಲಿ ನೋವನ್ನು ನಿಯಂತ್ರಣಕ್ಕೆ ತರಲು ಮಾಡುವ ಚಿಕಿತ್ಸೆ ಒಬ್ಬರ ಅರಿವಿನ ಅವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ.
ಪ್ರಶ್ನೆ: ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದ ನನ್ನ ಒಬ್ಬ ಸ್ನೇಹಿತೆಯನ್ನು ಕಳೆದುಕೊಂಡೆ. ಕೊನೆಯ ಕಾಲದಲ್ಲಿ, ಅವಳು ಸಹಿಸಲಾಗದ ನೋವಿನಿಂದ ಬಳಲುತ್ತಿದ್ದಳು. ಆ ನೋವನ್ನು ನಿಯಂತ್ರಿಸಲು ಮತ್ತು ಅವಳನ್ನು ಆರಾಮದಿಂದಿರಿಸಲು ಬಳಕೆಯಾದ ಮಂಪರು ಔಷಧಿಯ ಪ್ರಮಾಣವು ಅವಳನ್ನು ಸ್ಪಂದನವೇ ಇಲ್ಲದಂತೆ ಮಾಡಿತ್ತು. ನನ್ನ ಪ್ರಶ್ನೆ ಏನೆಂದರೆ, ಸಾಯುವ ಸಮಯದಲ್ಲಿ, ದೇಹವನ್ನು ಸಂಪೂರ್ಣ ಜಾಗೃತಿಯಿಂದ ಬಿಡಲು ಪ್ರಯತ್ನಿಸಬೇಕು ಎನ್ನುವಾಗ, ದೇಹಕ್ಕೆ ಮಂಪರು ತರುವಂತಹ ಔಷಧಗಳನ್ನು ತೆಗೆದುಕೊಳ್ಳುವುದು ಸರಿಯೇ? ಅಥವಾ ನಾವು ಜಾಗೃತಿಯಿಂದ ದೇಹವನ್ನು ಬಿಡಬೇಕು ಎಂಬ ಕಾರಣವನ್ನು ಮನಸ್ಸಿನಲ್ಲಿಟ್ಟುಕೊಂಡು ನೋವನ್ನು ನಿಯಂತ್ರಿಸುವ ಔಷಧಗಳನ್ನು ಸೇವನೆ ಮಾಡದೆ ಇರುವುದು ಉತ್ತಮವೇ?
ಸದ್ಗುರು: ಯಾರಾದರೂ ತೀವ್ರ ನೋವಿನಿಂದ ಬಳಲುತ್ತಿರುವಾಗ, ಔಷಧಿಗಳನ್ನು ತೆಗೆದುಕೊಳ್ಳದಿರುವುದು ತುಂಬಾ ಕ್ರೂರವಾಗಬಹುದು, ಅದಲ್ಲದೇ ಒಬ್ಬರು ನೋವಿನಲ್ಲಿರುವಾಗ ಅರಿವನ್ನು ಕಾಪಾಡಿಕೊಳ್ಳುವುದು ಸಹ ಕಷ್ಟಕರವಾಗಿರುತ್ತದೆ. ಆದರೆ, ಒಬ್ಬರನ್ನು ಸ್ಪಂದನವೇ ಇಲ್ಲದಂತಹ ಅವಸ್ಥೆಗೆ ಒಯ್ಯದೇ, ನೋವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುವ ದಾರಿಯಿದೆ ಎಂಬುದು ನನ್ನ ಭಾವನೆ. ಎಲ್ಲದಕ್ಕೂ ಹೆಚ್ಚಾಗಿ, ಒಬ್ಬರು ಬಾಹ್ಯ ಪ್ರಪಂಚಕ್ಕೆ ಸ್ಪಂದಿಸದಿದ್ದರೂ ಸಹ, ತಮ್ಮ ಆಂತರಿಕ ಮಟ್ಟದಲ್ಲಿ ಅರಿವಿನಿಂದಿರಬಹುದು. ನೋವಿನ ಔಷಧವು ದೇಹವನ್ನು ನಿಶ್ಚೇಷ್ಟಿತಗೊಳಿಸುತ್ತಿರಬಹುದು. ಇದರಿಂದಾಗಿ ದೇಹದ ಮರಗಟ್ಟುವಿಕೆಗೆ, ವ್ಯಕ್ತಿಯು ಬಾಹ್ಯದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರಬಹುದು, ಆದರೆ ಇದು ತನ್ನೊಳಗೆ ಪ್ರಜ್ಞಾಪೂರ್ವಕವಾಗಿರಲು ಸೂಕ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಒಂದು ಮಿತಿಯನ್ನು ದಾಟಿದ ಮೇಲೆ, ಮಂಪರು ಮತ್ತು ಇತರ ಔಷಧ ಸೇವನೆಯ ಪ್ರಮಾಣವನ್ನು ಅವಲಂಬಿಸಿ, ವ್ಯಕ್ತಿಯು ಸಂಪೂರ್ಣವಾಗಿ ಪ್ರಜ್ಞಾಹೀನನಾಗಬಹುದು.
ಹೆಚ್ಚಿನ ವೈದ್ಯರು ನೋವನ್ನು ನಿವಾರಿಸುವಷ್ಟರ ಮಟ್ಟಿಗಷ್ಟೇ ವ್ಯವಸ್ಥೆಯನ್ನು ನಿಶ್ಚೇಷ್ಟಿತಗೊಳಿಸಲು ಅದನ್ನು ಬಳಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೆಲವು ದೇಶಗಳಲ್ಲಿನ ವೈದ್ಯರು ಇದರ ಸಲುವಾಗಿ ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ, ದೇಹದ ಒಂದು ನಿರ್ದಿಷ್ಟ ಭಾಗ ನೋವನ್ನು ಅನುಭವಿಸದಂತೆ ಖಾತ್ರಿಪಡಿಸಲು ನರಗಳ ಸಂಪರ್ಕ ತಪ್ಪಿಸುವುದು, ಲೇಸರ್ ಮೂಲಕ ನರಮಂಡಲವನ್ನು ನೋವಿನ ಅನಭವಕ್ಕೆ ಸ್ಪಂದಿಸದ ರೀತಿ ಮಾಡುವುದು ಇತ್ಯಾದಿ. ಆಧುನಿಕ ತಂತ್ರಜ್ಞಾನ ನೋವನ್ನು ನಿವಾರಿಸಲು ಹಲವು ಮಾರ್ಗಗಳನ್ನು ಅನ್ವೇಷಿಸುತ್ತಿದೆ - ಅದು ಒಳ್ಳೆಯದು. ಯಾವುದೇ ಕಾರಣಕ್ಕೂ ಯಾರೂ ಬೇರೆಯವರಿಗೆ ನೋವನ್ನು ಪ್ರತಿಪಾದಿಸುವುದಿಲ್ಲ.
ಯಾರಾದರೂ ನೋವು ಮತ್ತು ಪ್ರಜ್ಞಾವಸ್ಥೆಯ ನಡುವಿನ ದುರದೃಷ್ಟಕರ ಪರಿಸ್ಥಿತಿಯಲ್ಲಿದ್ದರೆ, ನೋವಿನಿಂದ ಮುಕ್ತಗೊಳಿಸುವುದು ಆದ್ಯತೆಯಾಗಬೇಕು ಎಂಬುದು ನನ್ನ ವಿಚಾರ. ಏಕೆಂದರೆ ಪ್ರಜ್ಞೆ ನೀವು ತರಬಹುದಾದ ವಿಷಯವಲ್ಲ. ಪ್ರಜ್ಞೆ ವಿವಿಧ ಹಂತದಲ್ಲಿ ಸಂಭವಿಸುತ್ತದೆ ಏಕೆಂದರೆ ಪ್ರಜ್ಞೆಯೇ ಜೀವನ. ಅದು ತನ್ನನ್ನು ತಾನೇ ಕಂಡುಕೊಳ್ಳುವ ತನ್ನದೇ ಆದ ಮಾರ್ಗವನ್ನು ಹೊಂದಿದೆ. ಪ್ರಜ್ಞೆಯಿಂದಿರಲು ಪ್ರಯತ್ನಿಸುವುದು ಅನಿವಾರ್ಯವಲ್ಲ. ಒಬ್ಬರು ಸ್ವಲ್ಪ ಮಟ್ಟಿಗೆ ಪ್ರಜ್ಞಾಪೂರ್ವಕ ಜೀವನವನ್ನು ನಡೆಸಿದ್ದರೆ, ಯಾವುದಾದರೂ ದೀಕ್ಷೆಯನ್ನು ಪಡೆದಿದ್ದರೆ, ಶಕ್ತಿಯ ಇನ್ನೊಂದು ಆಯಾಮವನ್ನು ಕಂಡುಕೊಂಡಿದ್ದರೆ, ಸಾವಿನ ಕ್ಷಣದಲ್ಲಿ ಸಹಜವಾಗಿಯೇ ಪ್ರಜ್ಞೆಯಲ್ಲಿರಬಹುದು. ಪ್ರಜ್ಞೆ ನಾವು ನಿರ್ವಹಿಸುವ ಕ್ರಿಯೆಯಲ್ಲ - ಅದು ಒಂದು ಸ್ಥಿತಿ, ನಮ್ಮ ಅಸ್ತಿತ್ವದ ಆಯಾಮ. ಆದುದರಿಂದ, ಯಾರನ್ನಾದರೂ ನಿಶ್ಚೇಷ್ಟಿತಗೊಳಿಸಲಾಗಿದೆ ಎಂದು ಕಳವಳಪಡುವ ಅಗತ್ಯವಿಲ್ಲ. ಅವರು ಸ್ಪಂದಿಸದೇ ಇರಬಹುದು, ಆದರೆ ಅವರು ಪ್ರಜ್ಞೆಯಿಂದಿರಲು ಅಸಮರ್ಥರು ಎಂದರ್ಥವಲ್ಲ. ಔಷಧವನ್ನು ಕೇವಲ ದೇಹವನ್ನು ನಿಶ್ಚೇಷ್ಟಿಸಲು ಮಾತ್ರ ಬಳಸಿದರೆ, ಅದರಿಂದ ಒಬ್ಬರನ್ನು ಪ್ರಜ್ಞಾವಂತರಾಗಿಸುವುದು ತುಂಬಾ ಸುಲಭ.
The ebook “Life and Death in One Breath” has more about the process of living and dying. It can be purchased at Isha Downloads.
Editor’s Note: This article is based on an excerpt from the January 2015 issue of Forest Flower. Pay what you want and download. (set ‘0’ for free). Print subscriptions are also available.