ಪ್ರಶ್ನೆ: ಜೀವನದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ನಾನು ಏನನ್ನು ಪರಿಗಣಿಸಬೇಕು?

ಸದ್ಗುರು: ಮೂಲತಃ, ನಿಮ್ಮ ಜೀವನವನ್ನು ಯಾವುದರಲ್ಲಿ ಹೂಡಬೇಕೆಂದು ನೀವು ಕೇಳುತ್ತಿದ್ದೀರಿ. ಯಾವ ಶಿಕ್ಷಣವನ್ನು ಪಡೆಯಬೇಕು, ಯಾವ ವೃತ್ತಿಯನ್ನು ಆಯ್ಕೆ ಮಾಡಬೇಕು ಎನ್ನುವುದರ ಬಗ್ಗೆ ಯೋಚಿಸಬೇಡಿ. ಮುಖ್ಯವಾದ ವಿಷಯವೆಂದರೆ ಈ ಜೀವನ. ಎಲ್ಲರಿಗೂ ಸಹ, ಅವರವರ ಜೀವನ ಅಮೂಲ್ಯವಾದದ್ದು. ನಿಮ್ಮ ಈ ಅಮೂಲ್ಯವಾದ ಜೀವನವನ್ನು ಯಾವುದರಲ್ಲಿ ತೊಡಗಿಸಬೇಕೆಂಬ ನಿಟ್ಟಿನಲ್ಲಿ ಯೋಚಿಸಿದರೆ, ಮಾಡುವುದಕ್ಕೆ  ಯೋಗ್ಯವಾದದ್ದು ಏನಾದರನ್ನು ನೀವು ಕಂಡುಕೊಳ್ಳುತ್ತೀರ. ನೀವು ಜೀವನ ನಿರ್ವಹಣೆಗೆ ಹಣವನ್ನು ಗಳಿಸುವ ಬಗ್ಗೆ ಅಥವಾ ಇನ್ನೇನನ್ನಾದರೂ ಪಡೆಯುವ ಬಗ್ಗೆ ಯೋಚಿಸಿದರೆ, ನೀವು ಜೀವನಪರ್ಯಂತ ಪಶ್ಚಾತ್ತಾಪ ಪಡುವ ಹೆಡ್ಡತನದ ಕೆಲಸವನ್ನೇನಾದರೂ ಮಾಡುತ್ತೀರ. 

 

ಬಹಳಷ್ಟು ಜನರ ಕಥೆಯು ವಿಷಾದಕರವಾಗಿರುವ ಕಾರಣದಿಂದಲೇ ಅವರು ಸಂತೋಷವಿಲ್ಲದೆ ಬದುಕುತ್ತಿದ್ದಾರೆ. ಅವರಿಗೆ ಏನು ಬೇಕೋ ಅದನ್ನವರು ಮಾಡುತ್ತಿಲ್ಲ. ಅವರಿಗೆ ನಿಜವಾಗಿಯೂ ಮುಖ್ಯವಾಗಿರುವುದನ್ನು ಸೃಷ್ಟಿಸುವ ಬದಲು, ಜೀವನೋಪಾಯಕ್ಕಾಗಿ ಬೇರೆ ಇನ್ನೇನನ್ನೋ ಮಾಡುತ್ತಿದ್ದಾರೆ. ಪ್ರತಿಯೊಂದು ಜೀವಿ – ಕ್ರಿಮಿ, ಕೀಟ, ಪ್ರಾಣಿ ಮತ್ತು ಪಕ್ಷಿಗಳು ತಮ್ಮ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿವೆ. ಮನುಷ್ಯನಿಗೆ ತನ್ನ ಹೊಟ್ಟೆಪಾಡನ್ನು ನಿರ್ವಹಿಸುವುದು ಅಂತಹ ದೊಡ್ಡ ವಿಷಯವೇನಲ್ಲ. ದುರದೃಷ್ಟವಶಾತ್, ಈ ದೇಶದಲ್ಲಿ ಹಿಂದಿನ ಹತ್ತರಿಂದ ಇಪ್ಪತ್ತು ತಲೆಮಾರುಗಳು ಕಂಡ ಬಡತನದಿಂದಾಗಿ, ಜನರು ಈ ಮಾರ್ಗಕ್ಕೆ ಇಳಿದಿದ್ದಾರೆ. ತಂದೆತಾಯಿಗಳು ಹೊಟ್ಟೆಪಾಡಿಗಾಗಿ ದುಡಿಯುವ ಬಗ್ಗೆ, ತಮ್ಮ ಮಕ್ಕಳ ತಲೆಯನ್ನು ನಿರಂತರವಾಗಿ ಕೊರೆಯುತ್ತಿದ್ದಾರೆ. ಒಂದು ಎರೆಹುಳು ತನ್ನ ಜೀವನೋಪಾಯವನ್ನು ಕಂಡುಕೊಳ್ಳುತ್ತಿರುವಾಗ, ಇಷ್ಟು ದೊಡ್ಡ ಮೆದುಳಿರುವ ಮನುಷ್ಯರಿಗೆ ಜೀವನೋಪಾಯವನ್ನು ಕಂಡುಕೊಳ್ಳುವುದು ಒಂದು ಸಮಸ್ಯೆಯೇ?

 

ನೀವೇನನ್ನು ಸೃಷ್ಟಿಸುತ್ತೀರಿ ಎನ್ನುವುದೇ ಪ್ರಶ್ನೆ, ಏಕೆಂದರೆ ಜೀವನವೆಂದು ನೀವು ಏನನ್ನು ಕರೆಯುತ್ತೀರೋ ಅದು, ಕೇವಲ ಒಂದು ನಿರ್ದಿಷ್ಟ ಪ್ರಮಾಣದ ಸಮಯ ಹಾಗೂ ಶಕ್ತಿಯಷ್ಟೆ. ನಿಮ್ಮ ಜೀವನವೆಂದು ನೀವು ಕರೆಯುವ ಈ ಶಕ್ತಿಯನ್ನು ನೀವು ಹೇಗೆ ತೊಡಗಿಸಿಕೊಳ್ಳುತ್ತೀರಿ? ನೀವು ನಿಜವಾಗಿಯೂ ಯೋಗ್ಯವಾದದ್ದೇನನ್ನಾದರೂ ಮಾಡುತ್ತಿದ್ದರೆ, ನಿಮಗೆ ತಿಳಿಯುವ ಮುನ್ನವೇ ಅದು ಮುಗಿದುಹೋಗುತ್ತದೆ. ನೀವೇನಾದರೂ ನಿರುಪಯುಕ್ತವಾದ ಕೆಲಸವನ್ನು ಮಾಡುತ್ತಿದ್ದರೆ ಮಾತ್ರ ಜೀವನವು ಸುದೀರ್ಘವಾದುದ್ದೆಂದು ಭಾಸವಾಗುತ್ತದೆ ಎನ್ನುವುದನ್ನು ನೀವು ಗಮನಿಸಿದ್ದೀರ? ಒಂದು ವಿಶೇಷವಾದ ದಿನದಂದು ನೀವು ಬಹಳ ಸಂತೋಷದಿಂದಿದ್ದಾಗ, ಇಪ್ಪತ್ನಾಲ್ಕು ಗಂಟೆಗಳು ಒಂದು ಕ್ಷಣದಂತೆ ಮುಗಿದು ಹೋಗಿರುತ್ತದೆ. ಅದೇ ನೀವು ದುಃಖದಲ್ಲಿದ್ದಾಗ, ಇಪ್ಪತ್ನಾಲ್ಕು ಗಂಟೆಗಳು 10 ವರ್ಷಗಳಂತೆ ಭಾಸವಾಗುತ್ತದೆ.

ನೀವು ನಿಜವಾಗಿಯೂ ಯೋಗ್ಯವಾದದ್ದೇನನ್ನಾದರೂ ಮಾಡುತ್ತಿದ್ದರೆ, ನಿಮಗೆ ತಿಳಿಯುವ ಮುನ್ನವೇ ಅದು ಮುಗಿದುಹೋಗುತ್ತದೆ. ನೀವೇನಾದರೂ ನಿರುಪಯುಕ್ತವಾದ ಕೆಲಸವನ್ನು ಮಾಡುತ್ತಿದ್ದರೆ ಮಾತ್ರ ಜೀವನವು ಸುದೀರ್ಘವಾದುದ್ದೆಂದು ಭಾಸವಾಗುತ್ತದೆ.

ಪ್ರತಿಯೊಬ್ಬ ಯುವ ವ್ಯಕ್ತಿಯೂ ಸಹ ಮಾಡಬೇಕಾದ ಒಂದು ವಿಷಯವೆಂದರೆ, ಕನಿಷ್ಟಪಕ್ಷ ಎರಡರಿಂದ ಮೂರು ದಿನಗಳವರೆಗೆ, ತಮ್ಮ ಗೆಳೆಯರು, ಶಿಕ್ಷಕರು ಅಥವಾ ಹೆತ್ತವರ ಪ್ರಭಾವವಿಲ್ಲದೆ ತಮ್ಮಷ್ಟಕ್ಕೆ ತಾವಿದ್ದು, ಅವರ  ಅಮೂಲ್ಯವಾದ ಜೀವನವನ್ನು ಯಾವುದರಲ್ಲಿ ತೊಡಗಿಸಿಕೊಳ್ಳಬೇಕೆಂಬುದನ್ನು ಅವರು ಅರಿತುಕೊಳ್ಳಬೇಕು. ಅದು ದೊಡ್ಡದೋ ಚಿಕ್ಕದೋ ಎನ್ನುವುದು ಮುಖ್ಯವಾಗುವುದಿಲ್ಲ. ನೀವು ನಿಜವಾಗಿಯೂ ಯಾವುದನ್ನಾದರೂ ಯೋಗ್ಯವಾದುದ್ದೆಂದು ಪರಿಗಣಿಸಿ ನಿಮ್ಮ ಜೀವನವನ್ನು ಅದರಲ್ಲಿ ತೊಡಗಿಸಿಕೊಂಡರೆ, ಅದು ಸಾರ್ಥಕತೆಯಿಂದ ತುಂಬಿದ ಜೀವನವಾಗುತ್ತದೆ. 

 

ಸಂಪಾದಕರ ಟಿಪ್ಪಣಿ: ಬಹಳಷ್ಟು ಜನರಿಗೆ ಸೌಖ್ಯಕ್ಕೆ ದಾರಿಯು ಯಾವಾಗಲೂ ಸ್ಪಷ್ಟವಾಗಿ ಕಾಣುವುದಿಲ್ಲ. ನಿರ್ದಿಷ್ಟವಾದ ಸನ್ನಿವೇಶದಲ್ಲಿ ಉತ್ತಮವಾದ ಯಾವ ದಾರಿಯನ್ನು ತೆಗೆದುಕೊಳ್ಳುವುದು? ಸದ್ಗುರುಗಳಿಂದ ಇಲ್ಲಿ ಕೇಳಿ ತಿಳಿಯಿರಿ Listen to this podcast