ಪ್ರಶ್ನೆ: ನಮಸ್ಕಾರಮ್, ಸದ್ಗುರು. ಕಾಲೇಜಿನಲ್ಲಿ ನಾನು ವಿಜ್ಞಾನದ ವಿಷಯವನ್ನು ವ್ಯಾಸ೦ಗ ಮಾಡುತ್ತಿದ್ದೇನೆ. ನಾನು ಯೋಗ ಮತ್ತು ಶಾಂಭವಿ ಕ್ರಿಯೆಯನ್ನು ಮಾಡುವುದರ ಬಗ್ಗೆ ನನ್ನ ಕಾಲೇಜಿನಲ್ಲಿ ಮಾತನಾಡಿದರೆ, ಜನರು ನನ್ನನ್ನು ತಿರಸ್ಕಾರದಿಂದ ನೋಡಿ, "ನೀನು ವಿಜ್ಞಾನದ ವಿದ್ಯಾರ್ಥಿ, ನೀನಿಂತಹ ವಿಷಯಗಳ ಬಗ್ಗೆಯೆಲ್ಲ ಹೇಗೆ ಮಾತನಾಡಲು ಸಾಧ್ಯ?” ಎಂದು ಕೇಳುತ್ತಾರೆ.

ಕಾಲೇಜಿನ ಮೊದಲ ವರ್ಷದಲ್ಲಿ, ನನಗಿದರ ಬಗ್ಗೆ ಬಹಳ ಬೇಸರವಾಗುತ್ತಿತ್ತು, ಕೊನೆಗೆ, ಆ ವಿಷಯದ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಟ್ಟೆ. ನಮ್ಮ ಯುವಜನತೆ ನಮ್ಮದೇ ವಿಜ್ಞಾನವನ್ನು ಏಕಿಷ್ಟು ವಿರೋಧಿಸುತ್ತಾರೆಂದು ನನ್ನ ಪ್ರಶ್ನೆ. ಭಾರತೀಯ ವಿಜ್ಞಾನವನ್ನು ಎಲ್ಲದರ ಬಗ್ಗೆ ಆಳವಾಗಿ ಅರ್ಥಮಾಡಿಕೊ೦ಡು ಸ್ಥಾಪಿಸಲಾಗಿದೆ. ಹಾಗಿದ್ದಾಗ, ಇದರ ಬಗ್ಗೆ ಏಕಿಷ್ಟು ಪ್ರತಿರೋಧ. ಈ ಪ್ರತಿರೋಧವನ್ನು ನಾವು ಅಂಗೀಕಾರವನ್ನಾಗಿ ಪರಿವರ್ತಿಸುವುದು ಮುಖ್ಯವಾಗಿದೆ. ಕನಿಷ್ಟಪಕ್ಷ, ಈ ವಿಜ್ಞಾನವನ್ನು ಸಂಪೂರ್ಣವಾಗಿ ಅನ್ವೇಷಿಸದೆ ಅದನ್ನು ಕಡೆಗಣಿಸಬಾರದು ಎಂದವರಿಗೆ ಅರ್ಥಮಾಡಿಸಬೇಕು. ಹಾಗಾಗಬೇಕೆ೦ದರೆ, ಈ ಆಂತರಿಕ ವಿಜ್ಞಾನವನ್ನು ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯೊ೦ದಿಗೆ ಸಂಯೋಜಿಸುವುದು ಹೇಗೆ? 

ಸದ್ಗುರು: ದುರದೃಷ್ಟವಶಾತ್, “ವೈಜ್ಞಾನಿಕ” ಎಂಬುದರ ಬಗ್ಗೆ ನಾವಿಂದು ಬಹಳ ಸ೦ಕುಚಿತ ಮನೋಭಾವನೆಯನ್ನಿಟ್ಟುಕೊಂಡ್ಡಿದ್ದೇವೆ. ಮೂಲತಃ, ಯಾವುದನ್ನಾದರು ವೈಜ್ಞಾನಿಕವೆ೦ದು ಪರಿಗಣಿಸಬೇಕೆ೦ದರೆ, ಅದಕ್ಕೊ೦ದು ವ್ಯವಸ್ಥಿತವಾದ ವಿಧಾನವಿರಬೇಕು ಮತ್ತದನ್ನು ಪುನರಾವರ್ತಿಸಲು ಸಾಧ್ಯವಾಗುವ೦ತೆ ಇರಬೇಕು. ವಿಜ್ಞಾನವು ಮೂಲಭೂತವಾಗಿ ಭೌತಶಾಸ್ತ್ರವಾಗಿದೆ, ಆದರೆ ಅದರಿಂದ ವಿಕಸನಗೊಂಡಿರುವ ಇತರೆ ವಿಜ್ಞಾನಗಳಿವೆ: ಜೀವಶಾಸ್ತ್ರದ ಅಧ್ಯಯನಗಳು, ಮನೋವೈಜ್ಞಾನಿಕ ಅಧ್ಯಯನಗಳು, ಮತ್ತು ಸಮಾಜ ವಿಜ್ಞಾನಗಳಿವೆ. ಹಾಗಾಗಿ, ಕ್ರಮಬದ್ಧವಾದ ವಿಧಾನವನ್ನು ಹೊಂದಿರುವ ಮತ್ತು ಕೇವಲ ಒಬ್ಬರಿಗಷ್ಟೆ ಅಲ್ಲದೇ, ಹೆಚ್ಚಿನ ಸಂಖ್ಯೆಯ ಜನರಿಗೆ  ಅನ್ವಯಿಸುವುದೇನನ್ನಾದರೂ, ವಿಜ್ಞಾನ ಅಥವಾ ವೈಜ್ಞಾನಿಕ ವಿಧಾನವೆಂದು ಪರಿಗಣಿಸಲಾಗುತ್ತದೆ.

 

ಆ ಅರ್ಥದಲ್ಲಿ, ಯೋಗ ವಿಜ್ಞಾನಕ್ಕಿ೦ತ ಹೆಚ್ಚಾಗಿ ಅನ್ವಯಿಸುವ ಬೇರಿನ್ನಾವ ವಿಜ್ಞಾನವೂ ಇಲ್ಲ. ಏನೆ೦ದರೆ, ಇಂದಿನ ದಿನಗಳಲ್ಲಿ ಜನರು ಕೇಳಿರುವ ಯೋಗವು ಅಮೇರಿಕದಿ೦ದ ಪುಟಿದು ಬಂದದ್ದಾಗಿದೆ. ಅವರು ಯೋಗವೆಂದರೆ ಒ೦ದು ರೀತಿಯ ಬಟ್ಟೆಯನ್ನು ಧರಿಸಿ (yoga pants) ತಿರುಗಾಡುವುದೆಂದು ಭಾವಿಸಿದ್ದಾರೆ. ಅದೊಂದು ಬಗೆಯ ಫ್ಯಾಷನ್ ಆಗಿದೆ. ತಪ್ಪು. ಯೋಗದ ಅಕ್ಷರಶಃ ಅರ್ಥವೆ೦ದರೆ “ಐಕ್ಯತೆ”. ಐಕ್ಯತೆ ಎಂದರೇನು? ನೀವು ಹೊಂದಿರುವ ಈ ದೇಹವನ್ನು ಒಂದಲ್ಲ ಒಂದು ದಿನ, ಯಾರಾದರೊಬ್ಬರು ಸುಡುತ್ತಾರೆ ಆಥವಾ ಹೂಳುತ್ತಾರೆ. ಸುಟ್ಟರೂ ಅಥವಾ ಹೂತರೂ, ನೀವು ಭೂಮಿಯ ಒ೦ದು ಭಾಗವಾಗುತ್ತೀರಿ ತಾನೇ?

ವಿದ್ಯಾರ್ಥಿಗಳು: ಹೌದು. 

ಸದ್ಗುರು: ಈಗಲೂ ಕೂಡ, ನೀವು ಭೂಮಿಯ ಒಂದು ಸಣ್ಣ ತುಣುಕಷ್ಟೆ. ನಿಮಗೆ ನಡೆದಾಡುವ ಸಾಮರ್ಥ್ಯವನ್ನು ನೀಡಿರುವುದರಿಂದ ನೀವು ಆ ಅರಿವನ್ನು ಕಳೆದುಕೊಂಡಿದ್ದೀರಿ. ನಿಮ್ಮಲ್ಲಿ, ನೀವೇ ಒಂದು ಪ್ರಪಂಚ ಎ೦ಬ ಭಾವನೆ ನೆಲೆಯೂರಿಬಿಟ್ಟಿದೆ. ನೀವೊಂದು ಮರದಂತೆ ಭದ್ರವಾಗಿ ಬೇರೂರಿದ್ದರೆ, ನೀವೂ ಸಹ ಭೂಮಿಯ ಒ೦ದು ಭಾಗವೆಂದು ಅರ್ಥವಾಗಿರುತ್ತಿತ್ತು. ಭೂಮಿಯು ನಿಮಗೆ ನಡೆದಾಡುವ ಸ್ವಾತಂತ್ರ್ಯವನ್ನು ನೀಡಿದಾಕ್ಷಣ, ನೀವೆಷ್ಟು ಮೂರ್ಖರಾಗಿಬಿಟ್ಟಿರಿ! ಇದು ಕೇವಲ ಭೌತಿಕ ಶರೀರದ ಬಗ್ಗೆ ಮಾತ್ರ ನಿಜವಲ್ಲ – ಇದು ಸಂಪೂರ್ಣ ಜಗತ್ತು ಮತ್ತು ನಿಮ್ಮ ಪ್ರತಿಯೊಂದು ಅಂಶದ ಬಗ್ಗೆಯೂ ಸತ್ಯ.

ಯೋಗ ವಿಜ್ಞಾನಕ್ಕಿ೦ತ ಹೆಚ್ಚಾಗಿ ಅನ್ವಯಿಸುವ ಬೇರಿನ್ನಾವ ವಿಜ್ಞಾನವೂ ಇಲ್ಲ.

ಆದ್ದರಿಂದ, ಯೋಗವೆ೦ದರೆ “ಐಕ್ಯತೆ”. “ಐಕ್ಯತೆ” ಎಂದರೆ, ನಿಮ್ಮ ಪ್ರತ್ಯೇಕ ವ್ಯಕ್ತಿತ್ವದ ಎಲ್ಲೆಗಳನ್ನು ನಿರ್ನಾಮ ಮಾಡಿ ನಿಮ್ಮನ್ನು ನೀವೀಗಿರುವುದಕ್ಕಿಂತ ವಿಶಾಲವಾದ ಜೀವವನ್ನಾಗಿ ಮಾಡವ ಸಲುವಾಗಿರುವ ಒ೦ದು ವಿಜ್ಞಾನ. ಒಂದೋ, ನೀವಿಲ್ಲಿ ಸ೦ಕುಚಿತತೆಯಿ೦ದ ಕೂಡಿದ ಜೀವಿಯಾಗಿ ಬದುಕಿರಬಹುದು ಅಥವಾ ಉತ್ಸಾಹಭರಿತ ಜೀವಿಯಾಗಿ ಬದುಕಿರಬಹುದು. ಸ೦ಕುಚಿತತೆ ಎ೦ದರೆ, ಆಗುವುದೆಲ್ಲವೂ ಸ್ವಲ್ಪ ಸ್ವಲ್ಪವಾಗಿ ನಡೆಯುತ್ತದೆ. ಈಗಿನ ಕಾಲದಲ್ಲಿ, ಹೆಚ್ಚಿನ ಜನರಿಗೆ, ಜೀವನವು ಸ್ವಲ್ಪ ಸ್ವಲ್ಪವಾಗಿಯೇ ಘಟಿಸುತ್ತದೆ. ಅವರ ಜೀವನದಲ್ಲಿನ ಅಮೋಘ ಕ್ಷಣಗಳಾವುವು ಎ೦ದು ಜನರನ್ನು ಕೇಳಿದಾಗ, ಅವರು ಹೇಳುವುದು – “ಪರೀಕ್ಷೆಯಲ್ಲಿ ಉತ್ತೀರ್ಣನಾದಾಗ, ಬಹಳ ಖುಷಿಯಾಗಿತ್ತು.”, ನ೦ತರ, “ಕೆಲಸ ಸಿಕ್ಕಾಗ ಸಂತೋಷವಾಗಿತ್ತು, ಆದರೆ, ಬೇರೆ ಜನರೆಲ್ಲ ಸೇರಿ ನನ್ನ ಪರಿಸ್ಥಿತಿಯನ್ನು ಶೋಚನೀಯಗೊಳಿಸಿದರು. ಆಮೇಲೆ ಮದುವೆಯಾದೆ, ಅದು ಕೂಡ ಅಮೋಘವಾಗಿತ್ತು, ಆದರೆ ನನ್ನ ಅತ್ತೆಯವರು ಬಂದರು, ಅಬ್ಬಬ್ಬಾ!” ಹೀಗೆಯೇ ಮುಂದುವರೆಯುತ್ತದೆ. ಜೀವನದ ಐದು ಘಟನೆಗಳನ್ನು ಅವರು ಎಣಿಸುತ್ತಾರಷ್ಟೆ. ನಿಮ್ಮ ಜೀವನದ ಪ್ರತಿಕ್ಷಣವೂ ಉತ್ಸಾಹಭರಿತ ಚಿಲುಮೆಯಾಗಿರದಿದ್ದರೆ, ಅದೊಂದು ಸ೦ಕುಚಿತ ಜೀವನ.

ನಿಮಗೆ ಉತ್ಸಾಹಭರಿತ ಜೀವನ ನಡೆಸಬೇಕೆ೦ದಿದ್ದರೆ, ನಿಮ್ಮ ಪ್ರತ್ಯೇಕತೆಯ ಗಡಿಗಳು ಸ್ವಲ್ಪ ಮಟ್ಟಿಗೆ ದೂರಾಗಬೇಕು. ಹಾಗಾದಾಗ ಮಾತ್ರ, ನೀವು ಹೆಚ್ಚಿನ ಪ್ರಮಾಣದ ಜೀವನವನ್ನು ಸೆರೆಹಿಡಿಯುತ್ತೀರಿ ಮತ್ತು ವಿಸ್ತಾರವಾದ ಜೀವನಾನುಭೂತಿಯನ್ನು ಹೊಂದುತ್ತೀರಿ, ಹಾಗೂ ನಿಮ್ಮ ಸುತ್ತಲು ಕಾಣುವುದಕ್ಕಿಂತ ಹೆಚ್ಚಿನ ಮಟ್ಟದ ಉತ್ಸಾಹವನ್ನು ಹೊಂದುತ್ತೀರಿ. ನೀವು ಚಿಕ್ಕವರಿದ್ದಾಗ, ಸೋಪಿನ ಗುಳ್ಳೆಗಳನ್ನು ಊದಿದ್ದೀರ? 

ವಿದ್ಯಾರ್ಥಿಗಳು: ಈಗಲೂ ನಾವು ಚಿಕ್ಕವರೆ....

ಸದ್ಗುರು: ಓಹ್! ನೀವು ಮಕ್ಕಳಾಗಿದ್ದಾಗ, ಸೋಪಿನ ಗುಳ್ಳೆಗಳನ್ನು ಊದಿದ್ದೀರ? 

ವಿದ್ಯಾರ್ಥಿಗಳು: ಹೌದು. 

ಸದ್ಗುರು: ನೀವು ಊದಿದಾಗ ನಿಮಗೊಂದಿಷ್ಟು ದೊಡ್ಡ ಗುಳ್ಳೆ ಬಂದಿತು ಎಂದಿಟ್ಟುಕೊಳ್ಳಿ. ಆದರೆ, ಇನ್ಯಾರೋ ಅದಕ್ಕಿಂತ ದೊಡ್ಡ ಗುಳ್ಳೆಯನ್ನು ಊದಿದರು. ಯಾಕೆ? ನಿಮ್ಮ ಶ್ವಾಸಕೋಶದಲ್ಲೂ ಗಾಳಿ ಇದೆ, ನಿಮ್ಮ ಬಳಿ ಸೋಪೂ ಇದೆ, ಆದರೆ, ಒಬ್ಬರು ಮಾತ್ರ ಇಷ್ಟು ದೊಡ್ಡ ಗುಳ್ಳೆಯನ್ನು ಊದಿದರು. ಏಕೆಂದರೆ, ನೀವು ನಿಮ್ಮ ಗಡಿಗಳನ್ನು ವಿಸ್ತರಿಸಬೇಕಿದ್ದರೆ, ಆಸೆಯೆನ್ನುವುದು ಮುಖ್ಯವಾದ ವಿಷಯವಲ್ಲ ಆದರೆ ಆ ಸೀಮಿತ ಸಾಧ್ಯತೆಯಲ್ಲಿ ಅಷ್ಟು ಪ್ರಮಾಣದ ಗಾಳಿಯನ್ನು ಸೆರೆಹಿಡಿಯುವುದು ಮುಖ್ಯವಾಗುತ್ತದೆ. ಆಗ ಅದು ದೊಡ್ಡ ಗುಳ್ಳೆಯಾಗುತ್ತದೆ. 

ಅಂತೆಯೆ, ನನ್ನ ದೇಹ ಮತ್ತು ನಿಮ್ಮ ದೇಹವೆನ್ನುವುದು ಬೇರೆ ಬೇರೆಯಾಗಿದೆ. ನಾವು ಸಮಾಧಿಯಾಗುವವರೆಗು ಇದೆಲ್ಲಾ ಒಂದೇ ಮಣ್ಣೆಂದು ನಾವು ಅರ್ಥಮಾಡಿಕೊಳ್ಳುವುದಿಲ್ಲ. ಸದ್ಯದಲ್ಲಿ, ಇದು ನನ್ನ ದೇಹ; ಅದು ನಿಮ್ಮ ದೇಹ, ಇದು ನನ್ನ ಮನಸ್ಸು; ಅದು ನಿಮ್ಮ ಮನಸ್ಸೆಂದು ನೂರಕ್ಕೆ ನೂರರಷ್ಟು ಸ್ಪಷ್ಟವಾಗಿದೆ. ಇವೆರಡು ಅದಲುಬದಲಾಗಲು ಸಾಧ್ಯವಿಲ್ಲ. ಆದರೆ, ನನ್ನ ಜೀವ ಮತ್ತು ನಿಮ್ಮ ಜೀವವೆಂಬುದಿಲ್ಲ – ಇರುವುದು ಕೇವಲ ಜೀವವಷ್ಟೆ. ನಿಮ್ಮ ಜೀವನದ ಅಗಾಧತೆ ಮತ್ತು ವಿಶಾಲತೆ, ನಿಮ್ಮೊಳಗೆ ನೀವು ಎಷ್ಟು ಜೀವಚೇತನವನ್ನು ಬಾಚಿಕೊಂಡಿದ್ದೀರ ಅನ್ನುವುದರ ಮೇಲೆ ಅವಲಂಬಿತವಾಗಿರುತ್ತದೆಯೆ ವಿನಃ ನೀವೆಷ್ಟು ಮಾಹಿತಿಯನ್ನು ಬಾಚಿಕೊಂಡಿದ್ದೀರಿ ಎಂಬುದರ ಮೇಲಲ್ಲ. ಇದು ಆಗಬೇಕಿದ್ದಲ್ಲಿ, ನಿಮ್ಮ ವ್ಯಕ್ತಿತ್ವದ ನಿಶ್ಚಿತವಾದ ಗಡಿಗಳನ್ನು ದಾಟಿ ಅವನ್ನು ದೂರ ತಳ್ಳಬೇಕು. ಗಡಿಗಳು ಕರಗಿಹೋದಾಗ, ನೀವು ಯೋಗದ ಸ್ಥಿತಿಯಲ್ಲಿರುವಿರೆಂದು ನಾವು ಹೇಳುತ್ತೇವೆ. ಈ  ವಿಲೀನತೆಯನ್ನು ಅನುಭವಿಸುವವರನ್ನು ನಾವು ಯೋಗಿ ಎಂದು ಕರೆಯತ್ತೇವೆ. ಒಬ್ಬ ವ್ಯಕ್ತಿಯು ಈ ಹಾದಿಯಲ್ಲಿ ಎಷ್ಟು ದೂರ ಸಾಗುತ್ತಾನೆಂಬುದು ಅನೇಕ ವಾಸ್ತವೀಕತೆಗಳಿಗೆ ಒಳಪಟ್ಟಿರುತ್ತದೆ. ಆದರೆ, ನಾವೇ ಸೃಷ್ಟಿಸಿಕೊಂಡಿರುವ ಪ್ರತ್ಯೇಕ ವ್ಯಕ್ತಿತ್ವದ ಮಿತಿಗಳನ್ನು ಮೀರಲು ವೈಜ್ಞಾನಿಕವಾದ ಮತ್ತು ಕೇಂದ್ರೀಕರಿಸಿದ ಪ್ರಯತ್ನವನ್ನಾದರೂ ನಾವು ಮಾಡಬೇಕು. 

ನಾನು ಯೋಗವನ್ನು ಜೀವಿಸುತ್ತೇನೆ – ನನ್ನ ಇಡೀ ಜೀವನವಿರುವುದು, ನನ್ನೊಳಗೆ ಮತ್ತು ಎಲ್ಲರೊಳಗಿರುವ ಗಡಿಗಳನ್ನು ನಿರಂತರವಾಗಿ ಅಳಿಸಿಹಾಕುವ ಸಲುವಾಗಿ.

ನಿಮ್ಮೆಲ್ಲಾ ಮಿತಿಗಳನ್ನು ನೀವೇ ಸೃಷ್ಟಿಸಿಕೊ೦ಡಿರುವುದು, ಅಲ್ಲವೆ? ನೀವೇ ಗಡಿಯನ್ನು ಸೃಷ್ಟಿಸಿ, ನೀವೇ ನರಳಾಡುತ್ತಿದ್ದೀರಿ – ಇದೆಂತಹ ಜೀವನ? ಪ್ರಕೃತಿಯೇ ಈ ಎಲ್ಲೆಗಳನ್ನು ನಿರ್ಮಿಸಿದ್ದರೆ ಮತ್ತು ನೀವದನ್ನು ಅನುಭವಿಸುತ್ತಿದ್ದರೆ, ಅದು ಬೇರೆ ಮಾತು. ಆದರೆ, ಸ್ವಯಂ-ರಕ್ಷಣೆಯ ಸೋಗಿನಲ್ಲಿ, ನೀವು ಗೋಡಗಳನ್ನು ಕಟ್ಟಿಕೊ೦ಡು, ನಿಮ್ಮ ಎಲ್ಲೆಗಳನ್ನು ನೀವೇ ಸೃಷ್ಟಿಸಿಕೊಳ್ಳುತ್ತಿದ್ದೀರಿ. ಈ ಸ್ವಯಂ-ಸಂರಕ್ಷಣೆಯ ಗೋಡೆಗಳು, ಸ್ವಯಂ-ಬಂಧನದ ಗೋಡೆಗಳಾಗುತ್ತವೆ. ಹಾಗಾಗುವುದು ಬೇಡವೆ೦ದಾದರೆ, ನಿಮಗೆ ಯೋಗದ ಅಗತ್ಯವಿದೆ. “ನನ್ನ ಮೈಯನ್ನು ತಿರುಚಬೇಕೆ, ಬಗ್ಗಿಸಬೇಕೆ, ನನ್ನ ತಲೆಯ ಮೇಲೆ ನಿಲ್ಲಬೇಕೆ?” ಇಲ್ಲ, ಯೋಗವೆಂದರೆ ಮೈ ಬಗ್ಗಿಸುವುದು, ತಿರುಚುವುದಲ್ಲ. ಯೋಗವನ್ನು ಯಾವ ರೀತಿಯಲ್ಲಾದರೂ ಮಾಡಬಹುದು – ಉಸಿರಾಡುತ್ತ, ನಡೆದಾಡುತ್ತ, ಮಾತನಾಡುತ್ತ, ಓದುತ್ತ, ಮಲಗಿ ಅಥವಾ ನಿಂತು ಯೋಗವನ್ನು ಮಾಡಬಹುದು. ಅದಕ್ಕೊಂದು ನಿಗದಿತ ಚಟುವಟಿಕೆಯಿಲ್ಲ. ಅದೊಂದು ನಿರ್ದಿಷ್ಟ ಆಯಾಮ. 

ಜನರು ನನ್ನನ್ನು ಕೇಳುತ್ತಿರುತ್ತಾರೆ, “ಸದ್ಗುರು, ನೀವೆಷ್ಟು ಗಂಟೆಗಳ ಕಾಲ ಯೋಗಾಸನವನ್ನು ಮಾಡುತ್ತೀರಿ?” ಎ೦ದು. ನಾನು, “ಇಪ್ಪತ್ತು ಸೆಕೆ೦ಡ್-ಗಳು” ಎನ್ನುತ್ತೇನೆ. ಅದು ಸತ್ಯ, ನಾನು ಬೆಳಗ್ಗೆ ಎದ್ದ ಕೂಡಲೆ ಕೇವಲ ಇಪ್ಪತ್ತು ಸೆಕೆ೦ಡ್-ಗಳ ಸಾಧನೆಯನ್ನು ಮಾಡುತ್ತೇನೆ, ಮತ್ತಷ್ಟೆ! ಅದಾದ ನಂತರ, ದಿನದ ಉಳಿದ ಭಾಗದಲ್ಲಿ ನಾನು ಯೋಗವನ್ನು ಮಾಡುವುದಿಲ್ಲವೆ? ಇಲ್ಲ! ನಾನು ಯೋಗವನ್ನು ಜೀವಿಸುತ್ತೇನೆ – ಏಕೆಂದರೆ, ನನ್ನ ಇಡೀ ಜೀವನವಿರುವುದು, ನನ್ನೊಳಗೆ ಮತ್ತು ಎಲ್ಲರೊಳಗಿರುವ ಗಡಿಗಳನ್ನು ನಿರಂತರವಾಗಿ ಅಳಿಸಿಹಾಕುವ ಸಲುವಾಗಿ. ಇದು ಯೋಗ. ನಾವೀಗ ಇಲ್ಲಿ ಏನು ಮಾಡುತ್ತಿರುವೆವೋ ಅದು ಯೋಗ.  

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ  UnplugWithSadhguru.org.

Youth and Truth Banner Image