ನವೆಂಬರ್ 2012 ರಲ್ಲಿ, ಸುಮಾರು 200 ಉದ್ಯಮಿಗಳು ತಮ್ಮ ವ್ಯವಹಾರ ಮತ್ತು ವೈಯಕ್ತಿಕ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಈಶಾದ, “ಇನ್‍ಸೈಟ್: ದಿ ಡಿಎನ್‌ಎ ಆಫ್ ಸಕ್ಸಸ್” ಎಂಬ ವಿಶೇಷ ವ್ಯವಹಾರ ನಾಯಕತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸದ್ಗುರುಗಳು ವಿನ್ಯಾಸಗೊಳಿಸಿದ ಮತ್ತು ಜಾಗತಿಕವಾಗಿ ಪ್ರಸಿದ್ಧ ಸಿಇಓ ತರಬೇತುದಾರರಾದ ಡಾ.ರಾಮ್ ಚರಣ್ ಅವರು ಬೆಂಬಲಿಸಿದ ಈ ಸಮಿತಿಯು ಕೆ.ವಿ.ಕಾಮತ್ ಮತ್ತು ಜಿ.ಎಂ.ರಾವ್ ಸೇರಿದಂತೆ ಭಾರತೀಯ ವ್ಯಾಪಾರ ಕ್ಷೇತ್ರದ ಕೆಲವು ಯಶಸ್ವಿ ವ್ಯಕ್ತಿಗಳನ್ನು ಒಳಗೊಂಡಿತ್ತು.

ಕಾರ್ಯಕ್ರಮದ ಸಂವಾದದ ಭಾಗವಾಗಿ, ಸದ್ಗುರುಗಳು ಮತ್ತು ಡಾ.ರಾಮ್ ಚರಣ್ ಅವರನ್ನು ಫೋರ್ಬ್ಸ್ ಇಂಡಿಯಾ ನಿಯತಕಾಲಿಕದ ಮಾಜಿ ಸಂಪಾದಕ ಇಂದ್ರಜಿತ್ ಗುಪ್ತಾ ಸಂದರ್ಶಿಸಿದರು. ಇಲ್ಲಿ, ಅವರು ಸೃಜನಾತ್ಮಕತೆ ಮತ್ತು ಆಧ್ಯಾತ್ಮಿಕತೆಯ ಮಧ್ಯೆ ಇರವ ಸಂಬಂಧಗಳ ಬಗ್ಗೆ ಚರ್ಚಿಸುತ್ತಾರೆ.

ಇಂದ್ರಜಿತ್ ಗುಪ್ತಾ: ಸೃಜನಶೀಲರಾಗಲು ಮತ್ತು ಹೊಸತನವನ್ನು ತರಲು, ಆಧ್ಯಾತ್ಮಿಕತೆಯು ನಿಜವಾಗಿಯೂ ಉತ್ತರವೇ? ನಾನು ಇದನ್ನು ಕೇಳುತ್ತಿರವ ಕಾರಣವೇನೆಂದರೆ, ಆಧ್ಯಾತ್ಮಿಕತೆಯ ವಿಷಯ ಬಂದಾಗಲೆಲ್ಲಾ ಕೆಲವರು ಧಾರ್ಮಿಕ ಅರ್ಥಗಳನ್ನು ನೀಡುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಅವರ ಮಟ್ಟಿಗೆ ಆಧ್ಯಾತ್ಮಿಕತೆಯು ಧಾರ್ಮಿಕ ಅರ್ಥಗಳನ್ನು ಹೊಂದಿದೆ.

ಸದ್ಗುರು: ಮೊದಲು, ನಾನು ಆಧ್ಯಾತ್ಮಿಕತೆಯನ್ನು ಸರಿಯಾಗಿ ವ್ಯಾಖ್ಯಾನಿಸುತ್ತೇನೆ, ಏಕೆಂದರೆ ಪ್ರಪಂಚದಲ್ಲಿ ಈ ಪದವನ್ನು ಅತ್ಯಂತ ಮಲಿನಗೊಳಿಸಲಾಗಿದೆ. ಜನರು ಇದನ್ನು ಹಲವು ವಿಧಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ದುರುಪಯೋಗಪಡಿಸಿಕೊಂಡಿದ್ದಾರೆ. ನಾವು ಮೊದಲು ಈಶಾದ ಜೊತೆ ಉಪ-ಶೀರ್ಷಿಕೆಯಾಗಿ, "ಈಶಾ – ಜೀವಿಸಲು ಮತ್ತು ಸಂಪೂರ್ಣವಾಗಿ ಜೀವಿಸಲು" ಎಂದು ಬಳಸುತ್ತಿದ್ದೆವು. ನಾನು “ಜೀವಿಸಲು ಮತ್ತು ಸಂಪೂರ್ಣವಾಗಿ ಜೀವಿಸಲು" ಎಂದು ಹೇಳಿದಾಗ ಹಲವರು ವಾರದ ಏಳೂ ದಿನ ಪಾರ್ಟಿ ಮಾಡಬೇಕೆಂದು ಭಾವಿಸುತ್ತಾರೆ. ಇಲ್ಲ, ನಾನು ಪಾರ್ಟಿ ಮಾಡುವ ಬಗ್ಗೆ ಮಾತನಾಡುತ್ತಿಲ್ಲ. ನೀವು ಸಂಜೆ ಮಾತ್ರ ಪೂರ್ಣವಾಗಿ ಜೀವಿಸಲು ಸಾಧ್ಯ ಎಂದು ಭಾವಿಸಿರುವುದರಿಂದಲೇ ಮತ್ತು ಯಾವುದಾದರೂ ಬಾಹ್ಯದ ಪದಾರ್ಥ ಸೇವಿಸದರೆ ಮಾತ್ರ ಜೀವಿಸಲು ಸಾಧ್ಯ ಎಂದು ಭಾವಿಸಿರುವುದರಿಂದಲೇ ಪಾರ್ಟಿ ಮಾಡುತ್ತೀರಿ.

ಇದು ಹಾಗಲ್ಲ. ನಾನು ಮಾತನಾಡುತ್ತಿರುವ ವಿಷಯವೆಂದರೆ - ಜೀವನ ಎಂಬುದು ನಿಮ್ಮ ಕೆಲಸದಲ್ಲಿಲ್ಲ, ಜೀವನ ಎಂಬುದು ನಿಮ್ಮ ಕುಟುಂಬದಲ್ಲಿಲ್ಲ, ಜೀವನ ಎಂಬುದು ನಿಮ್ಮ ಸುತ್ತಲಿನ ಜಗತ್ತಿನಲ್ಲಿಲ್ಲ. ಜೀವನ ಇಲ್ಲಿದೆ, ಈಗ ಇಲ್ಲಿರುವುದೇ ಜೀವನ ಅಲ್ಲವೇ? ನೀವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗುತ್ತೀರೋ ಇಲ್ಲವೋ ಅಥವಾ ಇಡೀ ಬ್ರಹ್ಮಾಂಡವನ್ನು ಅನ್ವೇಷಿಸುತ್ತೀರೋ ಇಲ್ಲವೋ ನಮಗದು ತಿಳಿದಿಲ್ಲ, ಆದರೆ ಸಾಯುವ ಮೊದಲು, ಕನಿಷ್ಠಪಕ್ಷ ಜೀವನದ ಒಂದು ಭಾಗವಾದ ನಿಮ್ಮ ’ಜೀವ’ವನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನೀವು ಏನನ್ನೇ ಮಾಡಲು ಬಯಸಿದರೂ ಸಹ - ಅಂದರೆ, ನೀವು ಉದ್ಯಮ ಅಥವಾ ವ್ಯವಹಾರವನ್ನು ನಡೆಸಲು ಬಯಸುತ್ತೀರೋ ಅಥವಾ ಮತ್ತಾವುದೇ ಉದ್ದೇಶಕ್ಕಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಲು ಬಯಸುತ್ತೀರೋ - ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ’ಜೀವ’ವನ್ನು ನೀವು ಸಂಪೂರ್ಣವಾಗಿ ತಿಳಿದಿರಬೇಕು. ನನ್ನ ಜೀವನದುದ್ದಕ್ಕೂ ನಾನು ಮಾಡಿದ್ದು ಅಷ್ಟೆ.

ಮನುಷ್ಯರು ತಾವು ಎನನ್ನೋ ‘ಸಾಧಿಸ’ಬೇಕೆಂದು ನಿರತವಾಗಿರುವುದರಿಂದಲೇ, ತಾವು ಮನುಷ್ಯ ಜೀವಿಯಾಗಿರುವುದರ ಅಗಾಧತೆಯನ್ನು ಮರೆತುಹೋಗುತ್ತಿದ್ದಾರೆ.

ನಾನು ನನ್ನ ಜೀವನದಲ್ಲಿ ಮಾಡಿದಂತಹ ಏಕೈಕ ಸಾಧನವೆಂದರೆ ’ಅಶಿಕ್ಷಿತ’ನಾಗಿ ಉಳಿದದ್ದು. ನಾನು ಇಲ್ಲಿ ಶಿಕ್ಷಣದ ಬಗ್ಗೆ ಅಗೌರವದಿಂದ ಮಾತನಾಡುತ್ತಿಲ್ಲ. ಆದರೆ ಒಬ್ಬ ಮನುಷ್ಯ ಅಶಿಕ್ಷಿತನಾಗಿ ಉಳಿಯುವುದು ಸುಲಭವಲ್ಲ, ಏಕೆಂದರೆ ನೀವು ಹುಟ್ಟಿದ ಕ್ಷಣದಿಂದಲೇ ನಿಮ್ಮ ಪೋಷಕರು, ನಿಮ್ಮ ಸುತ್ತಲಿನ ವಯಸ್ಕರು, ಶಿಕ್ಷಕರು ಮುಂತಾದವರೆಲ್ಲರೂ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಏನನ್ನಾದರೂ ಕಲಿಸಲು ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಜೀವನದಲ್ಲಿ ಆ ವಿಷಯಗಳು ನಡೆಯಲಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತು. ಅವರು ಐದು ವರ್ಷ ವಯಸ್ಸಾಗಿದ್ದಾಗ ಹೇಗಿದ್ದರು ಮತ್ತು ಮೂವತ್ತೈದು ಅಥವಾ ನಲವತ್ತು ವರ್ಷ ವಯಸ್ಸಾದ ಮೇಲೆ ಹೇಗಿದ್ದಾರೆ? - ಅವರು ಯಾವುದೇ ಆನಂದವಿಲ್ಲದೆ, ಸಪ್ಪೆ ಮೊರೆಯಿಟ್ಟುಕೊಂಡು, ಗೊಂದಲಮಯವಾಗಿದ್ದಾರೆ. ಸಹಜವಾಗಿಯೇ ಅವರ ಜೀವನದಲ್ಲಿ ಯಾವುದೇ ರೀತಿಯ ಉತ್ತಮ ಪರಿಣಾಮ ದೊರೆತಿಲ್ಲ. ತಮಗೆ ಉತ್ತಮ ಪರಿಣಾಮವನ್ನು ಕೊಡದ ವಿಷಯವನ್ನು ಮತ್ತೆಲ್ಲರಿಗೂ ಕಲಿಸಲು ಬಯಸುತ್ತಾರೆ.

ಆದ್ದರಿಂದ, ನೀವು ಅಶಿಕ್ಷಿತರಾಗಿ ಉಳಿಯುವುದು ಅಂದರೆ ನಿಮ್ಮ ಪೋಷಕರು, ಪರಿವಾರ, ಪಂಗಡ, ಜಾತಿ, ಮತ, ಸಮಾಜ, ಶಿಕ್ಷಕರು - ಇವರಿಂದ ಪ್ರಭಾವಿತರಾಗದಿರುವುದು. ಪರಿಪೂರ್ಣವಾಗಿ ಅಶಿಕ್ಷಿತರಾಗಿರುವುದು ಅಂದರೆ, ಸೃಷ್ಟಿಕರ್ತ ನೀವು ಹೇಗೆ ಇರಬೇಕು ಎಂದು ಬಯಸುವನೋ ಆ ರೀತಿ ಇರುವುದು- ನೀವು ಹೀಗಿರಲು ಸಾಧ್ಯವಾಯಿತೆಂದರೆ ಸಹಜವಾಗಿಯೇ ನವು ಜೀವನದ ಪರಿಪೂರ್ಣತೆಯನ್ನು ಅರಿಯುತ್ತೀರಿ.

ನೀವು ಮಾಡುವ ‘ಕೆಲಸ’ ನಿಮಗೆ ಮುಖ್ಯವಾದದ್ದು ಎಂದರೆ, ಮೊದಲು ನೀವು ಯಾರು ಎಂಬುದರ ಮೇಲೆ ‘ಕೆಲಸ’ ಮಾಡಬೇಕು

ನೀವು ಒಂದು ಉಪಕರಣವನ್ನು ಬಳಸುತ್ತಿದ್ದೀರಿ ಎಂದರೆ, ನೀವು ಅದರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ, ಅದನ್ನು ಉತ್ತಮ ರೀತಿಯಲ್ಲಿ ಬಳಸಬಹುದು. ಅಲ್ಲವೇ? ಇದುವೇ ಆಧ್ಯಾತ್ಮಿಕತೆ. ನೀವು ಈ ಜೀವನದ ತುಣುಕಾದ ನಿಮ್ಮ ‘ಜೀವ’ವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುವವರೆಗೂ ನಿಮಗೆ ಸಮಾಧಾನವಿರುವುದಿಲ್ಲ. ನೀವು ಇದನ್ನು ಮನಗಂಡರೆ, ಏನನ್ನು ಮಾಡಬಹುದೋ, ಅದನ್ನು ಮಾಡುತ್ತೀರಿ. ನೀವು ಏನನ್ನೆಲ್ಲಾ ಮಾಡಬಹುದೋ, ಅದನೆಲ್ಲಾ ಮಾಡಿದರೆ, ಜನರು ಅದನ್ನೇ ಚಮತ್ಕಾರವೆನ್ನುತ್ತಾರೆ.

ಮನುಷ್ಯರು ತಾವು ಎನನ್ನೋ ‘ಸಾಧಿಸ’ಬೇಕೆಂದು ನಿರತವಾಗಿರುವುದರಿಂದಲೇ, ತಾವು ಮನುಷ್ಯ ಜೀವಿಯಾಗಿರುವುದರ ಅಗಾಧತೆಯನ್ನು ಮರೆತುಹೋಗುತ್ತಿದ್ದಾರೆ. ನೋಡಿ, ನೀವು ಮಾವಿನ ಮರ ಫಲ ಕೊಡಬೇಕೆಂದು ಬಯಸಿದಲ್ಲಿ, ಮಾವನ್ನು ಕುರಿತು ಧ್ಯಾನ ಮಾಡುವ ಅವಶ್ಯಕತೆಯಿರುವುದಿಲ್ಲ. ನೀವು ಕುಳಿತು ಮಾವಿನ ಬಗ್ಗೆ ಕನಸು ಕಾಣಿತ್ತಿದ್ದರೆ, ಮಾವಿನ ಹಣ್ಣು ಸಿಗುವುದಿಲ್ಲ. ನೀವು ಅದಕ್ಕೆ ಬೇಕಾದ ಮಣ್ಣು, ಗೊಬ್ಬರ, ನೀರು, ಸೂರ್ಯನ ಬೆಳಕು ಇವುಗಳ ಕುರಿತು ಯೋಚಿಸಬೇಕು. ಈ ಸರಳ ವಿಷಯಗಳು ಎಲ್ಲರಿಗೂ ಗೊತ್ತಿದ್ದರೂ ಸಹ, ಯಾರೂ ಮಾಡುವುದಿಲ್ಲ.

ಯೋಗ ಸಂಸ್ಕೃತಿಯಲ್ಲಿ ನಾವು “ನೀವು ಒಂದು ಕಣ್ಣನ್ನು ಗುರಿಯ ಮೇಲಿಟ್ಟರೆ, ಅದಕ್ಕಾದ ದಾರಿಯನ್ನು ಕಂಡುಕೊಳ್ಳಲು ಒಂದು ಕಣ್ಣಷ್ಟೇ ನಿಮ್ಮಲ್ಲಿ ಉಳಿದಿರುತ್ತದೆ” ಎಂದು ಹೇಳುತ್ತೇವೆ. ಇದೊಂದು ಅಸಮರ್ಥವಾದ ಮಾರ್ಗ. ನಿಮ್ಮ ಎರಡೂ ಕಣ್ಣನ್ನು ದಾರಿಯನ್ನು ಕಂಡುಕೊಳ್ಳಲು ಬಳಸಿಕೊಂಡರಷ್ಟೇ, ನೀವು ಸಮರ್ಥವಾಗಿ ದಾರಿಯಲ್ಲಿ ಸಾಗಬಹುದು. ನೀವು ಎಷ್ಟು ದೂರ ಸಾಗುತ್ತೀರಿ ಎಂಬುದು ನೀವು ಯಾರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನೀವು ಮಾಡುವ ‘ಕೆಲಸ’ ನಿಮಗೆ ಮುಖ್ಯವಾದದ್ದು ಎಂದರೆ, ಮೊದಲು ನೀವು ಯಾರು ಎಂಬುದರ ಮೇಲೆ ‘ಕೆಲಸ’ ಮಾಡಬೇಕು. ಆದರೆ ನೀವು ಸದಾ ಕಾಲ ಬಾಹ್ಯದ ವಿಷಯದೊಂದಿಗೆ ಕೆಲಸ ಮಾಡುತ್ತಿರುತ್ತೀರಿ. ನೀವು ನಿರಂತರವಾಗಿ ನಿಮ್ಮ ಕಾರ್ಖಾನೆಯನ್ನು, ನಿಮ್ಮ ವ್ಯಾಪಾರವನ್ನು ಹೇಗೆ ಉತ್ತಮಗೊಳಿಸಬೇಕು ಎನ್ನುವ ಕುರಿತು ಕೆಲಸ ಮಾಡುತ್ತಿರುತ್ತೀರಿ, ಆದರೆ ನಿಮ್ಮನ್ನು ಉನ್ನತೀಕರಿಸಲಾದ ವಿಷಯಗಳ ಮೇಲೆ ಕೆಲಸ ಮಾಡುವುದಿಲ್ಲ. ನೀವು ಯಾರ ಎಂಬುದರ ಕುರಿತು ಕೆಲಸ ಮಾಡಬೇಕು – ಕೇವಲ ನಿಮ್ಮ ಜ್ಞಾನ, ಸಾಮರ್ಥ್ಯ, ಮಾಹಿತಿ ಸಂಗ್ರಹಣೆ, ತಂತ್ರಗಾರಿಕೆಯ ಕುರಿತು ಮಾತ್ರವಲ್ಲ. ನೀವು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳದ ವಿನಹ, ನೀವು ಏನು ಮಾಡುತ್ತೀರೋ ಆ ಕೆಲಸದಲ್ಲಿ ನೈಪುಣ್ಯತೆ ಪಡೆಯುವುದು ಅಸಾಧ್ಯ. ನೀವು ಮಾರುತಿ-800 ಕಾರನ್ನಿಟ್ಟುಕೊಂಡು ಫಾರ್ಮುಲಾ ಒನ್ ರೇಸ್‍ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ, ಅದಕ್ಕಾಗಿ ಹೆಚ್ಚಿನ ಸಾಮರ್ಥ್ಯವುಳ್ಳ ಯಂತ್ರದ ಅಗತ್ಯವಿರುತ್ತದೆ.

ಸಂಪಾದಕರ ಟಿಪ್ಪಣಿ: ಹೆಚ್ಚಿನ ಮಾಹಿತಿಗಾಗಿ www.ishainsight.org ಗೆ ಭೇಟಿ ನೀಡಿ ಅಥವಾ +91 83000 84888, leadership@ishainsight.org ಮೂಲಕ ಸಂಪರ್ಕಿಸಿ