ಪ್ರತಿಯೊಬ್ಬ ಮನುಷ್ಯನೂ ಹೇಗೆ ಸೃಷ್ಟಿಕರ್ತನ ಮೂಲವನ್ನು ತನ್ನೊಳಗೆ ಹೊಂದಿದ್ದಾನೆ ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ ಹಾಗೂ ಅದಕ್ಕೆ ಚಿಗುರೊಡೆದು ಬೆಳೆಯಲು ನಾವು ಅವಕಾಶ ಮಾಡಿಕೊಡುವ ಸಲುವಾಗಿ ಮೂರು ಸೂತ್ರಗಳನ್ನು ನಮಗೆ ನೀಡುತ್ತಾರೆ.

Read in Telugu: ఆధ్యాత్మిక ప్రగతికి మూడు సూత్రాలుర

ಸದ್ಗುರು: ಕೆಲ ಸಮಯದ ಹಿಂದೆ, ಸತ್ಸಂಗದಲ್ಲಿ ಒಬ್ಬರು "ನಾನು ಅನೇಕ ಆಧ್ಯಾತ್ಮಿಕ ಗುರುಗಳನ್ನು ನೋಡಿದ್ದೇನೆ. ಆದರೆ ನಾನು ನಿಮ್ಮತ್ತ ಆಕರ್ಷಿತನಾದ ರೀತಿಯಲ್ಲಿ, ಬೇರೆ ಯಾವ ಗುರುವಿನ ಕಡೆಗೂ ಆಕರ್ಷಿತನಾಗಲಿಲ್ಲ. ನಿಮ್ಮಲ್ಲಿರುವುದು ಏನು?" ಎಂಬ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ನಾನು, "ನಿಮ್ಮಲ್ಲಿ ಇಲ್ಲದಿರುವಂತದ್ದೇನೂ ನನ್ನ ಬಳಿ ಇಲ್ಲ. ನಮಗೆಲ್ಲರಿಗೂ ಅಪರಿಮಿತ ಸಾಧ್ಯತೆಯಿರುವಂತಹ ಬೀಜವನ್ನು ನೀಡಲಾಗಿದೆ. ವಿಷಯವೇನೆಂದರೆ, ನೀವು ಬಹಳ ಜಾಗರೂಕರು ಮತ್ತು ಒಳ್ಳೆಯವರಾಗಿರುವ ಕಾರಣ, ನೀವು ಆ ಬೀಜವನ್ನು ಸಂರಕ್ಷಿಸಿ ಇಟ್ಟುಕೊಂಡಿದ್ದೀರಿ. ನಾನು ಆ ಬೀಜವನ್ನು ನಾಶಮಾಡಿ, ಅದನ್ನೊಂದು ಮರವಾಗಿ ಮಾಡಿದೆ."

ನೀವೊಂದು ಬೀಜವನ್ನು ಮರವಾಗಿ ಮಾಡಬೇಕೆಂದಿದ್ದರೆ, ಆ ಬೀಜ ಇಲ್ಲವಾಗಬೇಕು. ಆ ಬೀಜವನ್ನು ಬೀಜವಾಗೇ ಇಟ್ಟುಕೊಳ್ಳುವುದು ಶುದ್ಧ ಮೂರ್ಖತನ. ಆದರೆ ದುರದೃಷ್ಟವಶಾತ್, ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದನ್ನು ಸಮಾಜದಲ್ಲಿ ಜಾಣತನವೆಂದು ಪರಿಗಣಿಸಲಾಗುತ್ತದೆ. ನಿಮ್ಮನ್ನು ನಿರ್ನಾಮಗೊಳಿಸುವ ಅವಕಾಶ ನೀಡುವುದನ್ನು, ಒಬ್ಬ ವ್ಯಕ್ತಿ ಇರುವ ಸೀಮಿತ ಸಾಧ್ಯತೆಯನ್ನು ನಾಶಪಡಿಸಲು ಅವಕಾಶ ಕೊಡುವುದನ್ನು ಜಾಣತನವೆಂದು ಪರಿಗಣಿಸಲಾಗುವುದಿಲ್ಲ. ಕೊನೆಯಲ್ಲಿ, ನೀವೆಷ್ಟು ಜಾಣರೆಂದರೆ, ನೀವು ಜೀವನವನ್ನೇ ವಂಚಿಸಿದ ಜಾಣರಾಗಿರುತ್ತೀರಿ.

ಕಳೆ ತೆಗೆಯುವ ಪ್ರಕ್ರಿಯೆ

ನಾವೆಲ್ಲರೂ ಒಂದೇ ಬಗೆಯ ಬೀಜದೊಂದಿಗೆ ಬಂದಿದ್ದೇವೆ. ಪ್ರತಿಯೊಂದು ಬೀಜವೂ ಅದೇ ಸಾಧ್ಯತೆಯೊಂದಿಗೆ ಬಂದಿದ್ದರೂ ಸಹ, ಆ ಬೀಜ ಮರವಾಗಲು, ಅದೊಂದು ಪಯಣವನ್ನು ಮಾಡಬೇಕಾಗುತ್ತದೆ. ಬೀಜವು ಮರವಾಗಬೇಕೆಂದು ನೀವು ಬಯಸುವುದಾದರೆ, ನೀವದನ್ನು ಪೋಷಿಸಬೇಕು, ಅದನ್ನು ರಕ್ಷಿಸಬೇಕು; ಹಾಗೂ ಕಳೆಗಳನ್ನು ಕೀಳಬೇಕು – ಸಾವಿರಾರು ಕಳೆಗಳು. ಮಾನವತೆಯನ್ನು ಲಕ್ಷಾಂತರ ವರ್ಷಗಳಿಂದ ಕಾಡುತ್ತಿರುವ ಅದೇ ಬೇಡದಿರುವ ಕಳೆಗಳು. ಅವುಗಳನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ಮನುಷ್ಯರು ಇನ್ನೂ ತಿಳಿದುಕೊಂಡಿಲ್ಲ. ಸರಳ ವಿಷಯಗಳಾದ ಕೋಪ, ಹಗೆತನ, ಅಸೂಯೆ, ಭಯ, ಸಂದೇಹ – ಅವವೇ ಕಳೆಗಳು ಬಹಳ ಕಾಲ ಉಳಿದುಕೊಂಡುಬಿಟ್ಟಿವೆ, ಏಕೆಂದರೆ, ಕಳೆಗಳಿಗೆ ಪೋಷಣೆ ಅಥವಾ ರಕ್ಷಣೆಯ ಅಗತ್ಯವಿರುವುದಿಲ್ಲ - ಅವುಗಳು ಹಾಗೆ ಸುಮ್ಮನೆ ಬೆಳೆಯುತ್ತವೆ. ಆದರೆ, ಪರಿಶುದ್ಧವಾದ ಒಂದು ಬೀಜವು ಚಿಗುರೊಡೆದು ಬೆಳೆಯಬೇಕೆಂದು ನೀವು ಬಯಸಿದರೆ, ನೀವು ಕಳೆಯನ್ನು ಕಿತ್ತು, ನೆಲವನ್ನು ಉತ್ತು, ಅದಕ್ಕೆ ಗೊಬ್ಬರ ಹಾಕಿ, ಅಲ್ಲಿ ಸಾಕಷ್ಟು ನೀರು ಮತ್ತು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು. ನಿಮಗೆ ಸೂರ್ಯನ ಬೆಳೆಕಿನ ಕಠೋರತೆಯ ಬಗ್ಗೆ ಭಯವಿದ್ದು ಅದರಿಂದ ತಪ್ಪಿಸಿಕೊಳ್ಳಲು ನೋಡಿದರೆ, ನೀವು ಜೀವವನ್ನು ಪೋಷಿಸುವ ಶಾಖದಿಂದಲೂ ತಪ್ಪಿಸಿಕೊಳ್ಳುತ್ತೀರಿ.

ಮನುಷ್ಯರು ಕೋಟ್ಯಾಂತರ ವರ್ಷಗಳವರೆಗೆ ಅನುಭವಿಸಿದ ಅದೇ ಅಸಂಬದ್ಧತೆಯನ್ನು ನೀವೂ ನಿರಂತರವಾಗಿ ಅನುಭವಿಸುತ್ತ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಕಡೇಪಕ್ಷ ಹೊಸ ಮೂರ್ಖತನವನ್ನು ಮಾಡುವ ಸಮಯ ಬಂದಿದೆ!

ಯಾವುದು ಜೀವದ ತಳಹದಿಯಾಗಿದೆಯೋ, ಅದೇ ಜೀವವನ್ನು ಕೊನೆಗೊಳಿಸುತ್ತದೆ ಕೂಡ. ಯಾವುದು ಬೇಯಿಸುತ್ತದೆಯೋ ಅದು ಸುಡುತ್ತದೆ ಕೂಡ. ನೀವು ಒಳ್ಳೆಯ ಅಡುಗೆಯವರಾಗಿದ್ದರೆ, ನೀವು ಬೇಯಿಸುತ್ತೀರಿ; ಅದೇ ನೀವು ಕೆಟ್ಟ ಅಡುಗೆಯವರಾಗಿದ್ದರೆ, ಅಡುಗೆಯನ್ನು ಸುಟ್ಟು ಕರಕಲಾಗಿಸುತ್ತೀರಿ. ನೀವು ಸೂರ್ಯನ ಬೆಳಕನ್ನು ತಪ್ಪಿಸಿಕೊಂಡು ನೆರಳಿನಲ್ಲಿ ಹೋಗಿ ನಿಲ್ಲಲು ಬಯಸಿದರೆ, ಜೀವವನ್ನು ಪೋಷಿಸುವ ಬೆಳೆಕಿನ ಶಾಖದಿಂದ ನೀವು ವಂಚಿತರಾಗುವಿರಿ. ಅಡುಗೆ ಮಾಡುವುದು ಒಂದು ಸರಳ, ಆದರೆ ಸೂಕ್ಷವಾದ ಪ್ರಕ್ರಿಯೆ. ಅದನ್ನು ತಿಳಿದಿರುವವರು, ಸಲೀಸಾಗಿ ಮಾಡುತ್ತಾರೆ. ತಿಳಿದಿಲ್ಲದವರು ಅಡುಗೆಯನ್ನು ಸುಟ್ಟು ಇದ್ದಲಾಗಿಸುತ್ತಾರೆ. ಆಧ್ಯಾತ್ಮಿಕದ ಇಡೀ ಪ್ರಕ್ರಿಯೆಗೆ ನಿಮ್ಮನ್ನು ನೀವು ಸಮರ್ಪಿಸಿಕೊಂಡರೆ, ಅದು ಫಲಿತಾಂಶವನ್ನು ಕೊಡುವ ಹಾಗೆ ಮಾಡುವುದು ತುಂಬಾ ಸರಳ. ಅದೇ ನೀವು ನಿಮಗೆ ನೀಡಿರುವ ಸರಳವಾದ ಪ್ರಕ್ರಿಯೆಯನ್ನು ವಿರೋಧಿಸಿ, ಅದರೊಂದಿಗೆ ಹೋರಾಡಿದರೆ, ಆ ಪ್ರಕ್ರಿಯೆಯು ಬಹಳ ಕಠಿಣವಾಗುತ್ತದೆ.

ಮನುಷ್ಯರು ಕೋಟ್ಯಾಂತರ ವರ್ಷಗಳವರೆಗೆ ನಡೆಸಿದ ಅದೇ ಅಸಂಬದ್ಧತೆಯನ್ನು ನಿರಂತರವಾಗಿ ನಡೆಸುತ್ತ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಕಡೇಪಕ್ಷ ಹೊಸ ಮೂರ್ಖತನವನ್ನು ಮಾಡುವ ಸಮಯ ಬಂದಿದೆ! ಆದರೆ ಅದೇ ಅಸಂಬದ್ಧತೆಗಳು: ಈ ಕ್ಷಣ ಸತ್ಯ, ಮುಂದಿನ ಕ್ಷಣ ಸತ್ಯವಲ್ಲ; ಈ ಕ್ಷಣ ವಿಶೇಷ, ಮುಂದಿನ ಕ್ಷಣ ವಿಶೇಷವಲ್ಲ. “ನೀನು ಅದ್ಭುತವಾಗಿದ್ದೀಯ ಎಂದೆಣಿಸಿದೆ, ಆದರೆ ನೀನು ತೀರ ಭಯಂಕರ.” ಈ ಕ್ಷಣಕ್ಕೆ "ಓಹ್! ಇದೇ ಜೀವನ;" ಮತ್ತು ಮರುಕ್ಷಣದಲ್ಲಿ, ನಿಮಗದರ ಬಗ್ಗೆ ಸಂದೇಹ. ಈ ರೀತಿಯಾದ ಸಂಗತಿಗಳಿಗೆ ನಿಮ್ಮನ್ನು ನೀವೇ ಒಡ್ಡಿಕೊಳ್ಳಬೇಡಿ. ನೀವು ಮಾಡುತ್ತಿರುವುದೇನಾದರು ಒಂದು ವಿಶಿಷ್ಟವಾದ ಅವಿವೇಕತೆಯಾಗಿದ್ದರೆ, ಸರಿ. ಆದರೆ ಇವುಗಳೆಲ್ಲಾ ಅದೇ ಹಳೇ ಕಳೆಗಳು. ಹೊಸ ಕಳೆಗಳು ಯಾವುವೂ ಇಲ್ಲ - ಜನರು ಇವುಗಳನ್ನೆಲ್ಲಾ ಮಾಡಿಯಾಗಿದೆ. ಈ ಹಾಳಾದ ಕಳೆ ಬೆಳೆಯುವ ವ್ಯವಹಾರ ಬಹಳ ಸರಳವಾದದ್ದು. ಯಾವ ಮುಟ್ಠಾಳನಾದರೂ ಇದನ್ನು ಮಾಡಬಹುದು.

ಆಧ್ಯಾತ್ಮಿಕ ಬೆಳವಣಿಗೆಗೆ ಮೂರು ಸೂತ್ರಗಳು

ಅಮೇರಿಕಾದಲ್ಲಿ ನಮ್ಮ ಈಶ ಇನ್ಸ್ಟಿಟ್ಯೂಟ್ ಆಫ್ ಇನ್ನರ್ ಸೈನ್ಸ್ ಸ್ಥಾಪಿತವಾಗಿದೆ. ಇಂಗ್ಲೀಷ್‌ನಲ್ಲಿ ಇದರ ಸಂಕ್ಷಿಪ್ತ ರೂಪ ಐ.ಐ.ಐ. ಎಂದು. ಈ ಮೂರು “ಐ”ಗಳು ಏನನ್ನು ಸೂಚಿಸುತ್ತವೆ? ಮೊದಲನೆ “ಐ” – ಇನ್ಸ್ಟ್ರಕ್ಷನ್ (Instruction), ಅಂದರೆ ಬೋಧನೆ. ಎರಡನೆಯ “ಐ” – ಇಂಟೆಗ್ರಿಟಿ (Integrity) ಅಂದರೆ ಋಜುತ್ವ. ಕೊನೆಯ “ಐ” – ಇಂಟೆನ್ಸಿಟಿ (Intensity of purpose) ಅಂದರೆ ಉದ್ದೇಶದ ತೀವ್ರತೆ.

ನೀವು ಈ ಮೂರು ವಿಷಯಗಳನ್ನು ಕಾಪಾಡಿಕೊಂಡು ಬಂದರೆ, ಆಧ್ಯಾತ್ಮಿಕ ಪ್ರಕ್ರಿಯೆಯು ಅದ್ಭುತವಾಗಿ ಕೆಲಸ ಮಾಡುತ್ತದೆ. ಪ್ರತಿ ದಿನ ನೀವಿದರತ್ತ ಗಮನಹರಿಸಬೇಕು.

ಬೋಧನೆಯನ್ನು ಗಮನವಿಟ್ಟು ಕೇಳಿ ಅದನ್ನು ಪರಿಪಾಲಿಸಿ. ಎರಡನೆಯದು ಋಜುತ್ವ. ನಾನು ಋಜುತ್ವ ಎಂದಾಗ ಅದರ ಅರ್ಥವಿದು: ನಿಮಗೆ ನೀಡಲಾಗುವ ಯಾವುದೇ ಆಧ್ಯಾತ್ಮಿಕ ಪ್ರಕ್ರಿಯೆಯು ಒಳಗೂಡಿಸಿಕೊಳ್ಳುವಿಕೆಯ ನಿಟ್ಟಿನಲ್ಲಿರುತ್ತದೆ. ನೀವು ನಿಮ್ಮನ್ನು ಪ್ರತ್ಯೇಕವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅದು ಋಜುತ್ವದ ಕೊರತೆ. ಈಗ, ಬೇರೆಯವರು ಬಿಟ್ಟ ಉಸಿರನ್ನು ನೀವು ಒಳಗೆಳೆದುಕೊಳ್ಳುತ್ತಿದ್ದೀರಿ. ನೀವೇನಾದರೂ, "ನನಗಿದು ಇಷ್ಟವಿಲ್ಲ, ಈ ಭೂಮಿಯ ಬೇರೊಂದು ಜೀವಿ ಬಿಟ್ಟ ಉಸಿರನ್ನು ನಾನು ಒಳತೆಗೆದುಕೊಳ್ಳುವುದಿಲ್ಲ." ಎಂದರೆ ನೀವು ಸಾಯುತ್ತೀರಿ. ಹಾಗಾಗಿ, ಉಳಿವಿನ ವಿಷಯಕ್ಕೆ ಬಂದಾಗ, ನಿಮ್ಮಲ್ಲಿ ತುಂಬಾ ಒಳಗೂಡಿಸಿಕೊಳ್ಳುವಿಕೆ ಇದೆ. ಶರೀರಿದ ವಿಷಯದಲ್ಲಿ ನೀವು ಒಳಗೂಡಿಸಿಕೊಳ್ಳುವಿಕೆಯಿಂದಿದ್ದೀರಿ, ಆದರೆ ಮನಸ್ಸಿನಲ್ಲಿ ನೀವು ಪ್ರತ್ಯೇಕವಾಗಿದ್ದೀರಿ. ಇದನ್ನೇ ಋಜುತ್ವವಿಲ್ಲದಿರುವುದು ಎಂದು ಹೇಳಲಾಗುವುದು. 

ಮೂರನೆಯದು, ಉದ್ದೇಶದ ತೀವ್ರತೆ. ನಿಮ್ಮನ್ನು ನೀವು ದೊಡ್ಡ ವ್ಯಕ್ತಿಯಾಗಿ ಮಾಡಿಕೊಳ್ಳದೆ, ಶೂನ್ಯದಲ್ಲಿ ವಿಲೀನವಾಗಿಸಿಕೊಳ್ಳುವುದೇ ಇಡೀ ಪ್ರಕ್ರಿಯೆಯ ಉದ್ದೇಶ, ಏಕೆಂದರೆ, ನೀವು ಹುಡುಕುತ್ತಿರುವುದು ಅನಂತತೆಯನ್ನು, ದೊಡ್ಡತನವನ್ನಲ್ಲ. ನೀವು ಸೀಮಾರಹಿತರಾಗುವುದು ದೊಡ್ಡದಾಗಿ ಬೆಳೆದಾಗಲ್ಲ. ದೊಡ್ಡದು ಎನ್ನುವುದಕ್ಕೂ ಸಹ ಒಂದು ಗಡಿ ಇದ್ದೇ ಇದೆ. ನೀವು ಶೂನ್ಯವಾದಾಗ ಮಾತ್ರ ನೀವು ಅನಂತವಾಗುತ್ತೀರಿ. ಹಾಗಾಗಿ, ದೊಡ್ಡದಾಗಿ ಬೆಳೆಯಲು ನೀವಿದನ್ನು ಬಳಸಬೇಡಿ. ಇದನ್ನು ವಿಲೀನವಾಗುವ ಪ್ರಕ್ರಿಯೆಯಾಗಿ ಬಳಸಿ.
 

ನೀವು ಈ ಮೂರು ವಿಷಯಗಳನ್ನು ಕಾಪಾಡಿಕೊಂಡು ಬಂದರೆ, ಆಧ್ಯಾತ್ಮಿಕ ಪ್ರಕ್ರಿಯೆಯು ಅದ್ಭುತವಾಗಿ ಕೆಲಸ ಮಾಡುತ್ತದೆ. ಪ್ರತಿ ದಿನ ನೀವಿದರತ್ತ ಗಮನಹರಿಸಬೇಕು. "ಓಹ್! ನನಗದು ಗೊತ್ತು ಬಿಡು." ಎಂದು ನೀವಂದುಕೊಂಡರೆ - ಆ ರೀತಿಯಲ್ಲದು ಕೆಲಸ ಮಾಡುವುದಿಲ್ಲ. ಇದು ಬರೀ ನೀವು ಯೋಗದ ಕ್ರಿಯೆಯನ್ನು ಮಾಡುವ ಮೊದಲು ಮಾಡುವಂತದ್ದಲ್ಲ. ನೀವು ಪ್ರತಿದಿನ ಬೆಳಗ್ಗೆ ಎದ್ದಾಗ "ನಾನಿವತ್ತು ಈ ರೀತಿಯಲ್ಲಿ ಇರುತ್ತೇನೆಯೇ?" ಎನ್ನುವುದನ್ನು ಪರೀಕ್ಷಿಸಿ ನೋಡಿ. ಹಾಗೆ ಮಾಡಿದಾಗ ಅದು ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ಏನನ್ನೋ ಬಯಸಿದ ಕಾರಣದಿಂದಷ್ಟೇ ಅದು ನಿಮಗೆ ದೊರೆಯುವುದಿಲ್ಲ. ನೀವು ಸರಿಯಾದದ್ದನ್ನು ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ನಿಮ್ಮ ಆಶಯವು ನೆರವೇರುವುದು.

ನೀವಿದೊಂದನ್ನು ಕಾಪಾಡಿಕೊಂಡು ಹೋದರೆ, ಇಡೀ ಪ್ರಕ್ರಿಯೆಯು ನಿಮ್ಮನ್ನು ಒಳಗೂಡಿಸಿಕೊಳ್ಳುವಿಕೆಯ ಸ್ಥಿತಿಗೆ ಕೊಂಡೊಯ್ಯುತ್ತದೆ. ಇದು ನನ್ನ ವಿಚಾರ ಅಥವಾ ಇದು ನಿಮಗಾಗಿ ನನ್ನ ಆಶಯವೆನ್ನುವ ಕಾರಣಕ್ಕಲ್ಲ, ಆದರೆ ಇದು ಆ ಸೃಷ್ಟಿಕರ್ತನ ಸ್ವಭಾವವೇ ಆಗಿರುವ ಕಾರಣಕ್ಕಾಗಿದೆ.

ಸಂಪಾದಕರ ಟಿಪ್ಪಣಿ: ಆಧ್ಯಾತ್ಮಿಕ ಅನ್ವೇಷಕರ ಜೀವನದಲ್ಲಿ ಗುರುವಿನ ಪಾತ್ರವನ್ನು ಸದ್ಗುರುಗಳು ಆಳವಾಗಿ ಈ ಇಬುಕ್ ನಲ್ಲಿ ವಿಶ್ಲೇಷಿಸುತ್ತಾರೆ. ಉಚಿತವಾಗಿ ಓದಿ. “A Guru Always Takes You For A Ride.”