ಆಧ್ಯಾತ್ಮಿಕ ಪಥದಲ್ಲಿ, “ಅತ್ಯುತ್ತಮ” ಎಂಬುದಿಲ್ಲ
ಜೀವನದಲ್ಲಿ ಯಾವ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಹೇಗೆ ತೀರ್ಮಾನ ಮಾಡಬೇಕು? ಜೀವನದ ಮೂಲಭೂತವಾಗಿ ಆಯ್ಕೆ ಮಾಡುವ ವಿಷಯಗಳಲ್ಲಿ ಗೊಂದಲ ಇರುವವರಿಗೆ ಸದ್ಗುರುಗಳು ಇಲ್ಲಿ ಮಾರ್ಗದರ್ಶನ ನೀಡುತ್ತಾರೆ.
ಪ್ರಶ್ನೆ: ನನಗೆ ಅತ್ಯುತ್ತಮ ಪಥ ಯಾವುದೆಂದು ಹೇಗೆ ತೀರ್ಮಾನಿಸುವುದು? ಆ ತೀರ್ಮಾನ ತೆಗೆದುಕೊಳ್ಳಲು ತಮ್ಮ ಸಲಹೆ ಏನು?
ಸದ್ಗುರು: “ಅತ್ಯುತ್ತಮವಾದದ್ದು” ಎಂಬುದು ಯಾವುದೂ ಇರುವುದಿಲ್ಲ. ಜನರು ಮಾಡುವ ಒಂದು ದೊಡ್ಡ ತಪ್ಪೆಂದರೆ, ಯಾವಾಗಲೂ ಅತ್ಯುತ್ತಮವಾದದ್ದನ್ನೇ ಬಯಸುವುದು. ಅದು ಅದು ನಿಮ್ಮ ಉದ್ಯೋಗವೇ ಆಗಿರಲಿ, ಮದುವೆಯೇ ಆಗಿರಲಿ, ಆಧ್ಯಾತ್ಮವೇ ಆಗಿರಲಿ, ಆಯ್ಕೆ ಯಾವುದೇ ಇರಲಿ - ಯಾವ ವಿಷಯದಲ್ಲೂ “ಅತ್ಯುತ್ತಮವಾದುದನ್ನು” ಮಾಡುವುದು ಎಂದಿರುವುದಿಲ್ಲ. ನಿಮ್ಮ ಆಯ್ಕೆ ಯಾವುದೇ ಇರಲಿ, ಆ ವಿಷಯದಲ್ಲಿ ನೀವು ಸಂಪೂರ್ಣವಾಗಿ ತೊಡಗಿಸಿಕೊಂಡಿರೆಂದರೆ, ಅದುವೇ ಅದ್ಭುತ ವಿಷಯವಾಗುತ್ತದೆ. ನಿಮ್ಮಲ್ಲಿ ಯಾವಾಗಲೂ ಯಾವುದಾದರೂ ರೀತಿಯಲ್ಲಿ ಅದ್ಭುತವಾದ ವಿಷಯಗಳು ನಡೆಯುತ್ತಿರಬೇಕೇ ಹೊರತು, ಅತ್ಯುತ್ತಮವಾದದ್ದಲ್ಲ. ಏಕೆಂದರೆ, ’ಅತ್ಯುತ್ತಮ’ ಎನ್ನುವ ವಿಚಾರ ಬರುವುದು ಇನ್ನೊಂದರ ಹೋಲಿಕೆಯಲ್ಲಿ ಮಾತ್ರ. ಈ ಕ್ಷಣದಲ್ಲಿ ನನಗೆ ಅದ್ಭುತ ಅನುಭವವಾಗುತ್ತಿದೆ, ಅದು ನನ್ನ ಅತ್ಯುತ್ತಮ ದಿನ ಅಥವಾ ಅತ್ಯುತ್ತಮ ಸ್ಥಳ ಎಂಬ ಕಾರಣದಿಂದಲ್ಲ. ಅಂತಹ ಯಾವುದೇ ವಿಷಯ ಈ ಜಗತ್ತಿನಲ್ಲಿಲ್ಲ. ಆದರೆ, ನೀವು ನಿಮ್ಮ ಸರ್ವಸ್ವವನ್ನೂ ಹೂಡಿ, ನಿಮ್ಮನ್ನು ತೊಡಗಿಸಿಕೊಂಡರೆಂದರೆ, ಅದುವೇ ಅದ್ಭುತ ಸ್ಥಳವಾಗುತ್ತದೆ.
ಅತ್ಯುತ್ತಮವಾದುದನ್ನೇ ಆಯ್ಕೆ ಮಾಡಬೇಕು ಅಥವಾ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಯನ್ನೇ ಪಡೆಯಬೇಕು ಎಂಬ ಕಲ್ಪನೆಯನ್ನು ಬಿಟ್ಟುಬಿಡಿ. ಪ್ರಪಂಚದಲ್ಲಿ ಅಂತಹ ಯಾವುದೇ ವ್ಯಕ್ತಿ ಇಲ್ಲ. ನೀವು ಯಾವಾಗಲೂ ಹೋಲಿಕೆ ಮಾಡಿ, ಇದು ಅತ್ಯುತ್ತಮವಾದುದ್ದೇ ಅಥವಾ ಇದಕ್ಕಿಂತಲೂ ಉತ್ತಮವಾದದ್ದು ಇರಬಹುದೇ ಎಂದು ಚಿಂತಿಸುತ್ತಿದ್ದರೆ, ನೀವು ಸದಾಕಾಲ ಗೊಂದಲಮಯರಾಗಿರುತ್ತೀರಿ. ನಿಮ್ಮನ್ನು ಹೂಳುವಾಗ ಕೂಡಾ ನೀವು ಅತ್ಯುತ್ತಮ ಶವಪೆಟ್ಟಿಗೆಯಲ್ಲಿದ್ದೇನೆಯೆ ಎಂದು ಚಿಂತಿಸತೊಡಗುವಿರಿ. ನೀವು ನಿಮಗೆ ಮಹಾಗನಿ ಶವಪೆಟ್ಟಿಗೆಯೇ ಆಗಬೇಕು ಎಂದು ಬಯಸಿ, ಅವರು ನಿಮಗಾಗಿ ಬೇರೆಯದೇ ಆಯ್ಕೆ ಮಾಡಿದ್ದರೆ ಗತಿಯೇನು? ಜೀವನಪೂರ್ತಿ ಹೋಲಿಕೆಯಲ್ಲಿಯೇ ಜೀವಿಸಿರುವುದರಿಂದ, ನೀವು ಅಲ್ಲಿಯೂ ಹೊರಳಾಡಬೇಕಾಗುತ್ತದೆ.
ಆಧ್ಯಾತ್ಮಿಕತೆಯ ವಿಷಯಕ್ಕೆ ಬಂದಾಗ, ನಿಮ್ಮದೇ ತೀರ್ಮಾನದಂತೆ ನಡೆಯುವುದು ಉತ್ತಮವೋ ಅಥವಾ ನಿಮ್ಮ ತೀರ್ಮಾನಗಳನ್ನೆಲ್ಲಾ ನನಗೆ ಬಿಡುವುದು ಉತ್ತಮವೋ ಎಂಬುದನ್ನು ನೀವು ನಿರ್ಣಯಿಸಬೇಕು. ನಿಮ್ಮ ತೀರ್ಮಾನಗಳನ್ನು ಸಂಪೂರ್ಣ ನನ್ನ ಕೈಗೆ ವಹಿಸಿದಿರೆಂದರೆ, ನಿಮ್ಮ ಜೀವನಕ್ಕೆ ಯಾವುದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ನಾನು ನೋಡಿಕೊಳ್ಳುತ್ತೇನೆ. ಅದೇ ನೀವೇ ವಹಿಸಿಕೊಂಡರೆ, ಕೇವಲ ನಿಮಗೆ ಯಾವುದು ಹಿತವೊ ಅದನ್ನು ನೀವು ಆರಿಸಿಕೊಳ್ಳುತ್ತೀರಿ. ಅದು ಫಲ ಕೊಡುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ ಅಥವಾ ಅದು ಅನವಶ್ಯಕ ಸುತ್ತುಬಳಸಿನ ಮಾರ್ಗವಾಗಬಹುದು. ನನಗೆ ನಿಮ್ಮನ್ನು ಹಿತಕರ ಪರಿಸ್ಥಿತಿಯಲ್ಲಿ ಇರಿಸಿಕೊಂಡಿರಲು ಯಾವುದೇ ಆಸಕ್ತಿಯಿಲ್ಲ. ನೀವು ಸದಾಕಾಲ ಪೂರ್ಣ ಸನ್ನದ್ದರಾಗಿರಬೇಕು ಎಂದು ನಾನು ಅಪೇಕ್ಷಿಸುತ್ತೇನೆ . ಏಕೆಂದರೆ, ನಿಮಗಾದ ಸಮಯ ಮತ್ತು ಶಕ್ತಿ ಮಿತವಾಗಿದೆ. ನೀವು ಎಕ್ಸ್ಪ್ರೆಸ್ ವೇಗದಲ್ಲಿ ಸಾಗದೇ ಇದ್ದರೆ, ಅಲ್ಲಿ ಇಲ್ಲಿ ಸುತ್ತಿ ಕಳೆದು ಹೋಗುತ್ತೀರ ಅಷ್ಟೇ.
ಸಂಪೂರ್ಣ ತೀರ್ಮಾನವನ್ನು ನನಗೆ ಬಿಟ್ಟರಷ್ಟೇ ನಿಮ್ಮ ಜೀವನಕ್ಕೆ ಯಾವುದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದನ್ನು ನಾನು ಹೇಳಬಲ್ಲೆ. ನಾನು ಎಂದಿಗೂ ನನ್ನ ತೀರ್ಮಾನವನ್ನು ಬೇರೆಯವರ ಮೇಲೆ ಹೇರಲು ಅಥವಾ ಇತರರು ತಮ್ಮ ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿಸಲು ಇಚ್ಚಿಸುವುದಿಲ್ಲ. “ನೀವು ನರಕಕ್ಕೆ ಹೋಗಿ” ಎಂದರೂ ನೀವು ಅಲ್ಲಿಗೆ ಹೋಗಲು ಸಿದ್ಧವೆಂದು ನಿಮಗೆ ನೂರಕ್ಕೆ ನೂರು ಖಾತ್ರಿ ಇದ್ದಲ್ಲಿ, ಅದೇ ಸಮಯದಲ್ಲಿ ನಾನು ಖಂಡಿತವಾಗಿಯೂ ನೀವು ನರಕಕ್ಕೆ ಹೋಗುವುದನ್ನು ಬಯಸುವುದಿಲ್ಲ ಎಂಬ ವಿಶ್ವಾಸ ನಿಮಗೆ ಇದ್ದಲ್ಲಿ ಮಾತ್ರ, ನಾನು ನಿಮಗಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಅರ್ಧ ದಾರಿಯಲ್ಲಿಯೇ ನಿಮಗೆ ಸಂದೇಹ ಉಂಟಾಗಬಹುದು ಎಂಬ ಸಾಧ್ಯತೆಯನ್ನೇನಾದರೂ ಕಂಡೆನೆಂದರೆ, ನಾನು ನಿಮಗಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ.
ನೀವು ಅಲೆದಾಡುತ್ತಾ ಇರಲು ಬಯಸಿದರೆ ಅದು ನಿಮಗೆ ಬಿಟ್ಟಿದ್ದು. ಜನ್ಮಾಂತರಗಳವರೆಗೆ ಯೋಜನೆಗಳನ್ನು ಮಾಡುವಂತಹ ಮನುಷ್ಯ ನಾನಲ್ಲ. ಈ ಜನ್ಮದಲ್ಲೇ ಜನರಿಗೆ ಎಲ್ಲ ಘಟನೆಗಳೂ ನಡೆಯಬೇಕು ಎಂದು ನಾನು ಆಶಿಸುತ್ತೇನೆ. ನೀವು ಇನ್ನೂ ಹಲವಾರು ಜನ್ಮಾಂತರಗಳಲ್ಲಿ ಅದನ್ನು ಮಾಡಲು ಯೋಚಿಸಿದ್ದರೆ, ಅದಕ್ಕಾದ ನಿಧಾನಗತಿಯ ವಿಕಸನದ ಮಾರ್ಗವೂ ಇವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನನಗೆ ಆ ತಾಳ್ಮೆಯಿಲ್ಲ, ಏಕೆಂದರೆ, ಇದು ಇಲ್ಲಿನ ನನ್ನ ಕಡೆಯ ಸುತ್ತು - ಅದಂತೂ ಖಚಿತ.
ಸಂಪಾದಕರ ಟಿಪ್ಪಣಿ: ಎಲ್ಲ ಮಿತಿಗಳ ಮೀರಿ ನಡೆಯುವ ಅಪರೂಪದ ಕೊಡುಗೆಯನ್ನು ಕೊಡುತ್ತಾ, ಸದ್ಗುರುಗಳು ಅನ್ವೇಷಕರನ್ನು ಆಧ್ಯಾತ್ಮಿಕ ಪಥದಲ್ಲಿ ಮುಕ್ತಿಯೆಡೆಗೆ ಕೊಂಡೊಯ್ಯುತ್ತಾರೆ. “ಎ ಗುರು ಆಲ್ವೇಸ್ ಟೇಕ್ಸ್ ಯು ಫಾರ್ ಎ ರೈಡ್” ಎಂಬ ಇಂಗ್ಲಿಷ್ ಪುಸ್ತಕದಲ್ಲಿ ಸದ್ಗುರುಗಳು, ಗುರು ಶಿಷ್ಯ ಸಂಬಂಧದ ಅಪರೂಪದ ಒಳನೋಟ ಕೊಡುತ್ತಾರೆ. ಡೌನ್ ಲೋಡ್ ಮಾಡಿ.