ಸದ್ಗುರು: ದೇವರನ್ನು ನಂಬಬೇಕೋ ಬೇಡವೋ ಎಂದು ಜನ ನನ್ನನ್ನು ಕೇಳುತ್ತಲೇ ಇರುತ್ತಾರೆ. ನಿಮಗೊಂದು ಪ್ರಶ್ನೆ: ನಿಮಗೆ ಎರಡು ಕೈಗಳಿವೆ ಎಂದು ನೀವು ನಂಬುತ್ತೀರೋ ಅಥವಾ ನಿಮಗೆ ಎರಡು ಕೈಗಳಿವೆ ಎಂದು ನಿಮಗೆ ತಿಳಿದಿದೆಯೋ? ನಿಮಗೆ ಕೈಗಳಿವೆಯೆ ಎಂದು ನೀವೇನೂ ನೋಡಿಕೊಳ್ಳಬೇಕಾಗಿಲ್ಲ, ಏಕೆಂದರೆ ನಿಮಗೆ ಎರಡು ಕೈಗಳಿವೆಯೆಂದು ಅನುಭವದಿಂದ ನಿಮಗೆ ಗೊತ್ತಿದೆ. ಕೈಗಳ ವಿಷಯಕ್ಕೆ ಬಂದಾಗ, ನಿಮಗದು ತಿಳಿದಿದೆ, ಆದರೆ ದೇವರ ವಿಷಯಕ್ಕೆ ಬಂದಾಗ ಮಾತ್ರ, ನೀವದನ್ನು ನಂಬುತ್ತೀರ, ಏಕೆ ಹಾಗೆ? ಏಕೆಂದರೆ ಮೂಲತಃ, “ನಿಮಗೆ ತಿಳಿದಿಲ್ಲ” ಎಂಬುದನ್ನು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕತೆ ನಿಮ್ಮಲ್ಲಿ ಇಲ್ಲದ ಕಾರಣಕ್ಕೆ.

ನಿಮಗೆ ತಿಳಿದಿಲ್ಲ ಎಂದು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕರು ನೀವಲ್ಲದಿರುವ ಕಾರಣದಿಂದಲೇ ನಂಬಿಕೆ ಹುಟ್ಟಿಕೊಳ್ಳುವುದು. "ನನಗೆ ಗೊತ್ತಿಲ್ಲ" ಎನ್ನುವುದು ಒಂದು ಅದ್ಭುತವಾದ ಸಾಧ್ಯತೆ. "ನನಗೆ ಗೊತ್ತಿಲ್ಲ" ಎನ್ನುವುದು ನಿಮಗೆ ಮನವರಿಕೆಯಾದಾಗ ಮಾತ್ರ, ತಿಳಿಯುವ ಹಾತೊರೆತ ಬರುತ್ತದೆ. ತಿಳಿಯುವ ಹಾತೊರೆತ ಬಂದಾಗ, ಹುಡುಕುವಿಕೆ ಬರುತ್ತದೆ. ಹುಡುಕುವಿಕೆ ಬಂದಾಗ, ತಿಳಿಯುವ ಸಾಧ್ಯತೆಯಿರುತ್ತದೆ. ಆದರೆ, ನಿಮಗೆ ತಿಳಿದಿಲ್ಲದೇ ಇರುವುದನ್ನು ನೀವು ಸುಮ್ಮನೆ ನಂಬಿಬಿಟ್ಟರೆ, ನೀವೆಂದಿಗೂ ತಿಳಿಯುವುದಿಲ್ಲ ಎನ್ನುವುದನ್ನು ನೀವು ಖಾತ್ರಿಪಡಿಸಿಕೊಂಡಂತೆಯೇ. 

 

“ನನಗೆ ಗೊತ್ತಿಲ್ಲ” ಎನ್ನುವುದು ಒಂದು ಸಾಧ್ಯತೆ

ನಿಮಗೆ ತಿಳಿದಿರುವುದರಿಂದ ಆಚೆಗೆ ಏನಿದೆ ಎನ್ನುವುದನ್ನು ನೀವು ಊಹಿಸಿಕೊಂಡರೆ ನಿಜವಾದ ಅನ್ವೇಷಣೆ ಸಾಧ್ಯವಾಗುವುದಿಲ್ಲ. ಯಾರೇ ಆದರೂ “ನನಗೆ ಗೊತ್ತಿಲ್ಲ” ಎನ್ನುವ ಅರಿವನ್ನು ಇಟ್ಟುಕೊಂಡಾಗ ಮಾತ್ರ ಅವರ ಅನ್ವೇಷಣೆ ನಿಜವಾದದ್ದಾಗಿರುತ್ತದೆ. ಅನ್ವೇಷಣೆಯು ಯಾವಾಗಲೂ "ನನಗೆ ಗೊತ್ತಿಲ್ಲ" ಎನ್ನುವುದರಿಂದ ಆರಂಭವಾಗುತ್ತದೆ. ನಿಮಗೆ ಗೊತ್ತಿಲ್ಲ, ಆದ್ದರಿಂದಲೇ ನೀವು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಅನ್ವೇಷಣೆಯು ಮುಗ್ಧತೆಯ ಒಂದು ನಿರ್ದಿಷ್ಟವಾದ ಸ್ಥಿತಿಯಿಂದ, ನೀವು ಹೊರಬರಲು ಬಯಸುವ ಒಂದು ಖಾಲಿತನಯಿಂದ ಉದ್ಭವಿಸುತ್ತದೆ. ಅನ್ವೇಷಣೆಯು ಒಂದು ಹುಡುಕಾಟ – ನೀವು ಏನನ್ನು ಹುಡುಕುತ್ತಿದ್ದೀರೋ ಅದೇನೆಂದು ನಿಮಗೆ ತಿಳಿದಿಲ್ಲ; ನೀವು ಹುಡುಕುತ್ತಿದ್ದೀರಿ ಅಷ್ಟೆ, ನಿಮ್ಮ ದಾರಿಯನ್ನು ನೀವು ಕಂಡುಕೊಳ್ಳುತ್ತಿದ್ದೀರಿ.

ನಾವು "ಶಿವ" ಎಂದಾಗ, ನಾವು ಯಾವುದೋ ದೇವರ ಬಗ್ಗೆ ಮಾತನಾಡುತ್ತಿಲ್ಲ. “ಶಿವ" ಎಂಬುದರ ಅಕ್ಷರಶಃ ಅರ್ಥ "ಯಾವುದು ಇಲ್ಲವೋ ಅದು" ಎಂದು.

ದುರದೃಷ್ಟವಶಾತ್, ಜಗತ್ತಿನಲ್ಲಿ ಹೆಚ್ಚಿನ ಜನರು ಸತ್ಯವನ್ನು ಅರಿಯುವ ಪ್ರಯತ್ನವನ್ನು ಮಾಡಲು ಸಿದ್ಧರಿಲ್ಲ, ಮತ್ತು ನಂಬಿಕೆಯ ಕಟ್ಟುಪಾಡುಗಳು ಸುಲಭವಾದ ಪರ್ಯಾಯವಾಗಿ ಮಾರ್ಪಟ್ಟಿವೆ. "ಹೌದು, ದೈವವಿದೆ. ಹೌದು, ದೆವ್ವವಿದೆ." ಎಂದು ನೀವು ನಂಬುತ್ತೀರಿ ಅಷ್ಟೆ. ಇದರಿಂದ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬಹುದಷ್ಟೇ. ನೀವಿದನ್ನು ನಿಮ್ಮ ಮನಸ್ಸಿನಲ್ಲಿ ಸೃಷ್ಟಿಸಿಕೊಂಡಿರುವುದರಿಂದ ಇದಕ್ಕೆ ಯಾವುದೇ ಅರ್ಥವಿಲ್ಲ.

ಜನರಲ್ಲಿ ಅನೇಕಾನೇಕ ನಂಬಿಕೆಯ ಕಟ್ಟುಪಾಡುಗಳಿವೆ. ಊಟ, ಅಪ್ಸರೆಯರು, ದೇವರು ಇತ್ಯಾದಿ ತಮಗೆ ಇಲ್ಲಿ ದೊರಕದ ಎಲ್ಲಾ ವಿಷಯಗಳಿರುವ ಒಂದು ಸ್ಥಳವನ್ನು ಜನರು ಕಲ್ಪಿಸಿಕೊಂಡು, ಸ್ವರ್ಗದ ಬಗ್ಗೆ ಮಾತನಾಡುತ್ತಾರೆ. ನೀವಿಲ್ಲಿ ಯಾವುದರಿಂದೆಲ್ಲಾ ವಂಚಿತರಾಗಿರುವಿರೋ, ಅವುಗಳನ್ನೆಲ್ಲಾ ನೀವು ಸ್ವರ್ಗದಲ್ಲಿಟ್ಟುಬಿಟ್ಟಿರಿ. ಹಾಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ, ನಾವು "ಶಿ-ವ" ಎಂದು ಹೇಳಿದೆವು, ಮತ್ತು ಅದರರ್ಥ, "ಯಾವುದು ಇಲ್ಲವೋ ಅದು" ಎಂದು.

ನಾವು "ಶಿವ" ಎಂದಾಗ, ನಾವು ಯಾವುದೋ ದೇವರ ಬಗ್ಗೆ ಮಾತನಾಡುತ್ತಿಲ್ಲ. “ಶಿವ" ಎಂಬುದರ ಅಕ್ಷರಶಃ ಅರ್ಥ "ಯಾವುದು ಇಲ್ಲವೋ ಅದು" ಎಂದು. ಇಡೀ ಅಸ್ತಿತ್ವವು ಶೂನ್ಯದಿಂದ ಬಂದಿದ್ದು ಮುಂದೊಂದು ದಿನ ಶೂನ್ಯತೆಗೆ ಮರಳುತ್ತದೆ ಎನ್ನುವುದನ್ನು ಭೌತವಿಜ್ಞಾನಿಗಳು ಇಂದು ಸಾಬೀತುಪಡಿಸಿದ್ದಾರೆ. ಈ ವಿಶಾಲವಾದ ಶೂನ್ಯತೆಯೇ ಅಸ್ತಿತ್ವದ ಮೂಲ ಮತ್ತು ಬ್ರಹ್ಮಾಂಡದ ಮೂಲಭೂತ ಗುಣಲಕ್ಷಣವಾಗಿದೆ. ಕೋಟ್ಯಾನುಕೋಟಿ ಬೃಹತ್ ನಕ್ಷತ್ರಪುಂಜಗಳೆಲ್ಲಾ, ನಾವು ಶಿವ ಎಂದು ಉಲ್ಲೇಖಿಸುವ ಈ ವಿಶಾಲವಾದ ಶೂನ್ಯತೆಯಲ್ಲಿ ಒಂದು ಸಣ್ಣ ಬಿಂದುವಷ್ಟೆ..  

ಏನೂ ಇಲ್ಲದ್ದನ್ನು ಕಲ್ಪಿಸಿಕೊಳ್ಳಿ

ಹಾಗಿದ್ದರೆ, ಮೇಲೇನಿದೆ? ’ಏನೂ-ಇಲ್ಲ’! ’ಏನೂ-ಇಲ್ಲದ್ದನ್ನು’ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಯತ್ನಿಸಿ ನೋಡಿ! ನೀವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಆಕಾರ ವಿಕಾರಗಳನ್ನು ಅಳಿಸಿಹಾಕುತ್ತದೆ. ಈ ಸಂಸ್ಕೃತಿಯಲ್ಲಿ ನಿಮಗೆ ಯಾವಾಗಲೂ "ಶಿವ" ಎಂದು ಜಪಿಸುತ್ತಿರಲು ಹೇಳುತ್ತಿದ್ದರು, ಏಕೆಂದರೆ ನೀವಾಗಿಯೇ ಸೃಷ್ಟಿಸಿಕೊಂಡಂತಹ ಎಲ್ಲಾ ರೂಪಗಳನ್ನೂ ನಾಶಪಡಿಸುವುದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನೀವು ದೇವರು, ದೆವ್ವ ಅಥವಾ ಬೇತಾಳಗಳನ್ನು ಸೃಷ್ಟಿಸಿಕೊಂಡಿದ್ದೀರೋ ಎನ್ನುವುದು ಪ್ರಸ್ತುತವಾಗುವುದಿಲ್ಲ. ಅವುಗಳನ್ನು ಸೃಷ್ಟಿಸಿಕೊಂಡಿದ್ದು ನೀವು. ಅವುಗಳನ್ನು ನೀವು ದಮನ ಮಾಡದಿದ್ದರೆ, ನೀವೆಂದಿಗೂ ಸಹ ವಾಸ್ತವತೆಯನ್ನು ಅದಿರುವ ರೀತಿಯಲ್ಲಿ ನೋಡುವುದಿಲ್ಲ. ನೀವು ಸೃಷ್ಟಿಸಿಕೊಂಡ ಅಸಂಬದ್ಧ ಸಂಗತಿಗಳು ನಿಮ್ಮ ಸುತ್ತ ತೇಲಾಡುತ್ತಿವೆ ಎಂದು ನೀವು ಸದಾ ಕಲ್ಪಿಸಿಕೊಳ್ಳುತ್ತೀರಿ. ಅವನ್ನೆಲ್ಲಾ ನೀವು ನಾಶಪಡಿಸಲೆಂದೇ ಶಿವ ಎನ್ನುವುದನ್ನು ಒಂದು ವಿಧಾನವಾಗಿ ನೀಡಲಾಯಿತು.  

ಏನೂ ಇಲ್ಲದ್ದನ್ನು ಕಲ್ಪಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿರುವುದರಿಂದಲೇ ನೀವು "ಶಿವ" ಎನ್ನುತ್ತೀರಿ. ನೀವಿದರ ಕಡೆಗೆ ಹೆಚ್ಚು ಪ್ರಯತ್ನಿಸಿದಷ್ಟೂ ನಿಮ್ಮ ಮನಸ್ಸು ಅಷ್ಟೇ ಹೆಚ್ಚು ತಿಳಿ ಮತ್ತು ನೇರವಾಗುತ್ತದೆ.

ನೀವು ಏನನ್ನೂ ಊಹಿಸಿಕೊಳ್ಳಬಾರದು ಎನ್ನುವುದೇ ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲಭೂತ ಅಂಶ. ನಾವು "ಶಿವ" ಎಂದಾಗ, ಶಿವ ಮೇಲೆಲ್ಲೋ ಕುಳಿತಿದ್ದಾನೆಂದು ನೀವು ನಂಬುತ್ತೀರಿ ಎಂದಲ್ಲ. ನೀವು ಒಂದು ಶಬ್ದವನ್ನು ಸಾಧನವನ್ನಾಗಿ ಬಳಸುತ್ತಿದ್ದೀರಿ ಅಷ್ಟೆ. ಈ ಶಬ್ದವನ್ನು ಯಾವುದೇ ಆಧಾರವಿಲ್ಲದೆ ನೀಡಲಾಗಿಲ್ಲ. ವಿವಿಧ ರೀತಿಯ ಶಬ್ದಗಳು ನಿಮ್ಮೊಂದಿಗೆ ಏನು ಮಾಡುತ್ತವೆ ಎಂಬುದನ್ನು ನಾವು ಗಮನಿಸಿ ಕಂಡುಕೊಂಡಿದ್ದೇವೆ. ಶಿ-ವ ಎನ್ನುವುದು ಇರುವುದನ್ನೆಲ್ಲಾ ಸುಟ್ಟುಹಾಕುವುದಕ್ಕೊಂದು ಮಾರ್ಗ. ಹಾಗಾದಾಗ ಜೀವನವು ಪ್ರತಿ ಕ್ಷಣ ಹೊಸದಾಗಿ ಆರಂಭವಾಗುತ್ತದೆ. ನಿಮ್ಮ ಮನಸ್ಸು ತಿಳಿ ಕನ್ನಡಿಯ ರೀತಿಯಾಗುತ್ತದೆ. ಏನಿದೆಯೋ ಅದನ್ನು ಮಾತ್ರ ನಿಮಗೆ ತೋರಿಸುತ್ತದೆ, ಬೇರಿನ್ನೇನನ್ನೂ ತೋರಿಸುವುದಿಲ್ಲ. ನಿಮ್ಮ ಮನಸ್ಸು ಇರಬೇಕಾದುದು ಹಾಗೆಯೇ. ಹಾಗಿದ್ದಾಗ ಅದೊಂದು ಉಪಯುಕ್ತವಾದ ಮನಸ್ಸು. ಸದ್ಯದಲ್ಲಿ, ಅನೇಕ ವಿಷಯಗಳು ಅದಕ್ಕೆ ಅಂಟಿಕೊಳ್ಳುತ್ತಿವೆ. ನಿಮ್ಮ ಮನೆಯ ಕನ್ನಡಿ ಹೀಗಾದರೆ ಹೇಗಿರಬಹುದೆಂದು ಸ್ವಲ್ಪ ಊಹಿಸಿಕೊಳ್ಳಿ: ಅದರ ಮುಂದೆ ಯಾರೇ ನಿಂತರೂ, ಅದು ಅವರ ಹತ್ತು ಪ್ರತಿಶತದಷ್ಟು ಪ್ರತಿಫಲನವನ್ನು ತನ್ನಲ್ಲಿಯೇ ಉಳಿಸಿಕೊಂಡರೆ, ಅದು ಬಹು ಬೇಗನೆ ನಿಷ್ಪ್ರಯೋಜಕವಾಗಿಬಿಡುತ್ತದೆ.

ಪರಿಕಲ್ಪನೆ ಮಾಡಲಾಗದ್ದನ್ನು ನೀವು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ನೀವು ಒಂದು ರೂಪವಿಲ್ಲದಿರುವಂತದ್ದನ್ನು ನೋಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ನೀವು ನಿಜವಾಗಿಯೂ ಅದನ್ನು ಮುಂದುವರೆಸಿದರೆ, ಅದೇ ಅನ್ವೇಷಣೆ. ಆಗ ನೀವು ಭೌತಿಕ ಸೃಷ್ಟಿಯನ್ನು ಮೀರಿ ಹೋಗುತ್ತೀರಿ. ನೀವು ಭೌತಿಕತೆಯನ್ನು ಮೀರಿದ ನಂತರವೂ ಇಲ್ಲಿಯೇ ಇದ್ದರೆ, ನೀವು ಬೇರಿನ್ನೇನನ್ನೋ ಸ್ಪರ್ಶಿಸಿದಿರಿ ಎಂದರ್ಥ. ಆ ಬೇರೆ ಇನ್ನೇನನ್ನೋ ನಾವು "ಯಾವುದು ಇಲ್ಲವೋ ಅದು" ಎಂದು ಕರೆಯುತ್ತೇವೆ. 

ಹಾಗಾಗಿ, ಏನೂ ಇಲ್ಲದ್ದನ್ನು ಕಲ್ಪಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿರುವುದರಿಂದಲೇ ನೀವು "ಶಿವ" ಎನ್ನುತ್ತೀರಿ. ನೀವಿದರ ಕಡೆಗೆ ಹೆಚ್ಚು ಪ್ರಯತ್ನಿಸಿದಷ್ಟೂ ನಿಮ್ಮ ಮನಸ್ಸು ಅಷ್ಟೇ ಹೆಚ್ಚು ತಿಳಿ ಮತ್ತು ನೇರವಾಗುತ್ತದೆ. ನಿಮ್ಮ ಇಷ್ಟ ಮತ್ತು ಅನಿಷ್ಟ; ನಿಮ್ಮ ಪ್ರೀತಿ ಮತ್ತು ದ್ವೇಷ; ಎಲ್ಲವೂ ಹೊರಟುಹೋಗುತ್ತವೆ. ಒಮ್ಮೆ ನಿಮ್ಮ ಬಳಿ ನೇರವಾದ, ಸ್ವಚ್ಛವಾದ ಕನ್ನಡಿಯಿದ್ದರೆ, ನೀವು ಎಲ್ಲವನ್ನೂ ಅದಿರುವ ರೀತಿಯಲ್ಲೇ ನೋಡುತ್ತೀರಿ, ಏಕೆಂದರೆ ನೀವು ಅಸ್ತಿತ್ವದಲ್ಲಿರುವ ಯಾವುದನ್ನೇ ಆದರೂ ನೋಡುವ ಏಕೈಕ ಸ್ಥಳವೆಂದರೆ, ಅದು ನಿಮ್ಮ ಮನದಲ್ಲಿ ಮಾತ್ರ. ನೀವದನ್ನು ಸ್ವಚ್ಛ ಹಾಗೂ ಸಮನಾಗಿ ಇಟ್ಟುಕೊಳ್ಳದೇ ಹೋದರೆ, ನಿಮ್ಮದೇ ಪ್ರೇತಗಳನ್ನು ನೀವಲ್ಲಿ ನೋಡುತ್ತೀರಿ. 

ಪ್ರೇತಗಳೊಂದಿಗೆ ಹೋರಾಟ

ನಿಮಗೊಂದು ಜೋಕ್ ಹೇಳುತ್ತೇನೆ ಕೇಳಿ. ವೈದ್ಯಕೀಯ ತಪಾಸಣೆಗೆಂದು ಒಬ್ಬ ವ್ಯಕ್ತಿ ಆಸ್ಪತ್ರೆಗೆ ಬಂದ. ಅವನೋ ತುಂಬಾ ಸಂಕೋಚ ಪ್ರವೃತ್ತಿಯ ಮನುಷ್ಯ ಮತ್ತು ಅವನಿಗೆ ಈ ದೈಹಿಕ ತಪಾಸಣೆಯೆಲ್ಲ ಅಭ್ಯಾಸವಿರಲಿಲ್ಲ. ಅಲ್ಲಿ ಅವನ ಉಡುಗೆಯನ್ನೆಲ್ಲ ಕಳಚಿ, ಅವನಿಗೆ ಆ ಪರೀಕ್ಷೆ, ಈ ಪರೀಕ್ಷೆ, ದೇಹದ ತೂಕ, ಎತ್ತರ, ಟ್ರೆಡ್‌ಮಿಲ್ ಮತ್ತಿತರ ಪರೀಕ್ಷೆಗಳನ್ನೆಲ್ಲಾ ಮಾಡಲಾಯಿತು. ಇದನ್ನೆಲ್ಲಾ ಮಾಡುವಾಗ, ಆಸ್ಪತ್ರೆಯವರು ಅವನನ್ನು ಬಾತ್‌ರೂಮಿಗೆ ಹೋಗಲು ಬಿಡಲಿಲ್ಲ. ಅವನಿಗೆ ತಡೆದುಕೊಳ್ಳಲು ಸಾಧ್ಯವಾಗದೆ, ಹಾಸಿಗೆಯಲ್ಲೇ ಎಲ್ಲವೂ ವಿಸರ್ಜನೆಯಾಗಿಬಿಟ್ಟಿತು! ಮೊದಲೇ ಅವನು ಸಂಕೋಚ ಸ್ವಭಾವದವನಾದ್ದರಿಂದ ಅವನನ್ನು ನೋಡಿಕೊಳ್ಳುತ್ತಿದ್ದ ಚೆಂದದ ನರ್ಸ್ ಅವನು ಮಾಡಿರುವುದನ್ನು ನೋಡಬಾರದೆಂದು ಆ ಹೊದಿಕೆಯನ್ನು ತೆಗೆದು ಮೂರನೆ ಮಹಡಿಯ ಕಿಟಕಿಯಿಂದಾಚೆಗೆ ಎಸೆದುಬಿಟ್ಟ.

ಅದೇ ಸಮಯದಲ್ಲಿ ಕುಡುಕನೊಬ್ಬ ಭೂಮಿಯ ಆಕಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತ ಅಲ್ಲೇ ಕೆಳಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆ, ಆ ಬಿಳೀ ಹೊದಿಕೆಯು ತೇಲುತ್ತಾ ಅವನ ಮೇಲೆ ಬಂದು ಬಿದ್ದಿತು. ಅವನು ತನ್ನ ಕೈಕಾಲುಗಳನ್ನು ಬಡಿಯುತ್ತಾ, ನೆಲದ ಮೇಲೆ ಹೊರಳಾಡಿ, ಒದ್ದಾಡಿ ಅದು ಇದು ಮಾಡಿದ. ಅಂತೂ ಹೇಗೋ ಆ ಹೊದಿಕೆಯಿಂದ ಹೊರಬಂದು, ಹೊಲಸಾಗಿದ್ದ ಆ ಹೊದಿಕೆ ಅವನ ಕಾಲಿಡಿಯಲ್ಲಿದಿದ್ದನ್ನು ನೋಡಿದ. ಯಾರೋ ಬಂದು ಅವನನ್ನು, "ಏನಾಯಿತು?" ಎಂದು ಕೇಳಿದರು. ಅದಕ್ಕವನು, "ನಾನು ಒಂದು ದೆವ್ವವನ್ನು ಸಾಯುವ ಹಾಗೆ ಹೊಡೆದೆ ಎಂದೆನಿಸುತ್ತದೆ." ಎಂದನು. ಬಹಳಷ್ಟು ಜನರೊಂದಿಗೆ ನಡೆಯುತ್ತಿರುವುದು ಇದೇ. ಇಲ್ಲದಿರುವ ದೆವ್ವಗಳ ವಿರುದ್ಧ ನೀವು ಹೋರಾಡುತ್ತಿದ್ದೀರಿ. ಅವುಗಳೊಂದಿಗೆ ಹೋರಾಡಿ ನೀವು ಗೆಲ್ಲಬಹುದು, ಆದರೆ ನೀವು ಹೆಚ್ಚು ಗೆದ್ದಂತೆಲ್ಲ, ನೀವು ಹೆಚ್ಚು ಹೆಚ್ಚು ಕಳೆದುಹೋಗುತ್ತೀರಿ.

ಅನ್ವೇಷಣೆಯ ಅರ್ಥ ನೀವೇನನ್ನೋ ಕಲ್ಪಿಸಿಕೊಂಡು, ಅಲ್ಲಿಗೆ ತೆರಳಲು ಪ್ರಯತ್ನಿಸುವುದಲ್ಲ - ಅದು ಹುಚ್ಚುತನ. ನೀವು ಏನನ್ನೂ ಕಲ್ಪಿಸಿಕೊಳ್ಳಬಾರದು. ಕಲ್ಪನೆ ಮಾಡಿಕೊಳ್ಳದೆ ಹೇಗಿರುವುದು? ಏಕೆಂದರೆ, ಒಮ್ಮೆ ನಿಮ್ಮಲ್ಲಿ ನೆನಪುಗಳಿದ್ದರೆ, ಕಲ್ಪನೆಯು ಬಂದೇ ಬರುತ್ತದೆ. ಹಾಗಾಗಿ, ಈ ಸಾಧನವನ್ನು ನೀಡಲಾಯಿತು - ಏನೂ ಅಲ್ಲದ್ದನ್ನು ಕಲ್ಪಿಸಿಕೊಳ್ಳಿ. ಬಿಡದೆ ಪ್ರಯತ್ನಿಸುತ್ತಲೇ ಇರಿ, ಆಗ ನೀವೇ ನೋಡುತ್ತೀರಿ - ಮನಸ್ಸೆನ್ನುವುದು ಮಾಯವಾಗಿಬಿಡುತ್ತದೆ.

ಸಂಪಾದಕರ ಟಿಪ್ಪಣಿ: ನೃತ್ಯ ಮತ್ತು ಸಂಗೀತದ ಜೊತೆಗೆ ಶಕ್ತಿಯುತವಾದ ಧ್ಯಾನ ಪ್ರಕ್ರಿಯೆಗಳು, ಸದ್ಗುರುಗಳೊಡನೆ ರಾತ್ರಿಯಿಡೀ ಸತ್ಸಂಗ, ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳೊಂದಿಗೆ ಮಹಾಶಿವರಾತ್ರಿಯನ್ನು ಈಶ ಯೋಗ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಿ. ಆದಿಯೋಗಿ - ಶಿವನ ಅನುಗ್ರಹದಲ್ಲಿ ತೊಯ್ದುಹೋಗಿ! ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಬಹುದಾದ ಅನೇಕ ರೀತಿಗಳನ್ನು ತಿಳಿಯಲು ಮಹಾಶಿವರಾತ್ರಿ ವೆಬ್‌ಪೇಜ್ ಗೆ ಭೇಟಿ ನೀಡಿ.