ಕಟ್ಟುಕಥೆ1: ಯೋಗದ ಮೂಲ ಹಿಂದೂ ಧರ್ಮ

ಸದ್ಗುರು: ಗುರುತ್ವಾಕರ್ಷಣೆ ಕ್ರಿಶ್ಚಿಯನ್ ಎಂಬಂತಹ ರೀತಿಯಲ್ಲಿ ಯೋಗ ಹಿಂದೂ. ಕ್ರಿಶ್ಚಿಯನ್ ಸಂಸ್ಕೃತಿಯಲ್ಲಿದ್ದ ಐಸಾಕ್ ನ್ಯೂಟನ್ ಅವರು ಗುರುತ್ವಾಕರ್ಷಣೆಯ ನಿಯಮವನ್ನು ಪ್ರತಿಪಾದಿಸಿದ ಕಾರಣ ಅದು ಗುರುತ್ವಾಕರ್ಷಣೆಯನ್ನು ಕ್ರಿಶ್ಚಿಯನ್ ಆಗಿ ಮಾಡುತ್ತದೆಯೇ? ಯೋಗ ಒಂದು ತಂತ್ರಜ್ಞಾನ. ಅದನ್ನು ಬಳಸಿಕೊಳ್ಳಲು ಸಿದ್ಧರಿರುವ ಯಾರಾದರೂ ಅದನ್ನು ಬಳಸಿಕೊಳ್ಳಬಹುದು.

ಯೋಗಿಕ ವಿಜ್ಞಾನ ಮತ್ತು ತಂತ್ರಜ್ಞಾನವು ಈ ಸಂಸ್ಕೃತಿಯಲ್ಲಿ ಬೆಳೆದು ಅಭಿವೃದ್ಧಿ ಹೊಂದಿ, ಸ್ವಾಭಾವಿಕವಾಗಿ ಹಿಂದೂ ಜೀವನ ಶೈಲಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಇದಕ್ಕೆ ಕೆಲ ಅಜ್ಞಾನಿಗಳು "ಹಿಂದೂ" ಎಂದು ಹಣೆಪಟ್ಟಿ ಹಚ್ಚಿದ್ದಾರೆ. "ಹಿಂದೂ" ಎಂಬ ಪದವು ಒಂದು ನದಿಯಾದ "ಸಿಂಧು" ಎಂಬ ಪದದಿಂದ ಬಂದಿದೆ. ಈ ಸಂಸ್ಕೃತಿಯು ಸಿಂಧು ಅಥವಾ ಇಂಡಸ್ ನದಿಯ ದಡದಲ್ಲಿ ಬೆಳೆದ ಕಾರಣ, ಈ ಸಂಸ್ಕೃತಿಯನ್ನು ಹಿಂದೂ ಎಂದು ಕರೆಯಲಾಯಿತು. ಹಿಂದೂ ಒಂದು “ಧರ್ಮ” ಅಲ್ಲ. ಅದೊಂದು ಭೌಗೋಳಿಕ ಮತ್ತು ಸಾಂಸ್ಕೃತಿಕ ಗುರುತು.

ಕಟ್ಟುಕಥೆ2: ನಿಮಗೆ ಪ್ರೆಟ್ಜೆಲ್ ಆಗಿರಲು ಸಾಧ್ಯವಿರುವಾಗ, ಮಾನವರಾಗಿರುವುದು ಏಕೆ? ಯೋಗವಿರುವುದು ಅಸಾಧ್ಯ ಭಂಗಿಗಳ ಬಗ್ಗೆ.

ಸದ್ಗುರು: ನಾವು “ಯೋಗ” ಎಂದಾಗ, ಜಗತ್ತಿನಲ್ಲಿ ಹೆಚ್ಚಿನವರು ಆಸನಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಯೋಗದ ವಿಜ್ಞಾನವು ಅನ್ವೇಷಿಸುವ ಎಲ್ಲಾ ವಿಭಿನ್ನ ವಿಷಯಗಳ ಪೈಕಿ - ಜೀವನದ ಪ್ರತಿಯೊಂದು ಅಂಶಗಳ ಬಗ್ಗೆಯೂ - ಇಂದಿನ ಜಗತ್ತು ಯೋಗವನ್ನು ಭೌತಿಕ ಅಂಶಗಳೊಂದಿಗೆ ಪ್ರತಿನಿಧಿಸಲು ಆಯ್ಕೆ ಮಾಡಿಕೊಂಡಿದೆ. ಯೋಗಿಕ ಪದ್ಧತಿಯಲ್ಲಿ, ಆಸನಗಳಿಗೆ ಬಹಳ ಕಡಿಮೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಇನ್ನೂರು ಯೋಗ ಸೂತ್ರಗಳಲ್ಲಿ, ಕೇವಲ ಒಂದು ಸೂತ್ರವನ್ನು ಮಾತ್ರ ಆಸನಗಳಿಗೆ ಸಮರ್ಪಿಸಲಾಗಿದೆ. ಆದರೆ ಹೇಗೋ ಏನೋ, ಆಧುನಿಕ ಕಾಲದಲ್ಲಿ, ಈ ಒಂದು ಸೂತ್ರವು ಉಳಿದವಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಅನೇಕ ವಿಧಗಳಲ್ಲಿ, ಇದು ಜಗತ್ತು ಎಲ್ಲಿಗೆ ಸಾಗುತ್ತಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆಧುನಿಕ ಜಗತ್ತಿನ ಇಡೀ ಸಂಪೂರ್ಣ ಪ್ರಯಾಣವು ಆಳವಾದ ಆಯಾಮಗಳಿಂದ, ಚೈತನ್ಯದಿಂದ - ದೇಹದೆಡೆಗಷ್ಟೆ. ಅದನ್ನೇ ನಾವು ಹಿಮ್ಮುಖಗೊಳಿಸಬೇಕೆಂದಿದ್ದೇವೆ. ಮಾನವರು ದೇಹದೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ಅವರ ಆಂತರಿಕ ಸ್ವಭಾವದತ್ತ ಸಾಗಬೇಕು ಎಂಬುದನ್ನು ನಾವು ಬಯಸುತ್ತೇವೆ.

ನನಗೆ ಖಿನ್ನತೆಗೆಒಳಗಾಗಲು ಸಾಧ್ಯವಿಲ್ಲ, ಇಲ್ಲದಿದ್ದರೆ ಜಗತ್ತಿನಾದ್ಯಂತ ಜನರು ಹಠ ಯೋಗವನ್ನು ಅಭ್ಯಾಸ ಮಾಡುತ್ತಿರುವ ವಿಧಾನವನ್ನು ಮತ್ತು ಜನರು ಅದನ್ನೇ ಹಠಯೋಗವೆಂದು ತಿಳಿದಿರುವುದನ್ನು ನೋಡುವಾಗ ನಾನು ಖಿನ್ನತೆಗೆ ಒಳಗಾಗುತ್ತಿದ್ದೆ. ನೀವು ನೋಡುತ್ತಿರುವ ಅಭ್ಯಾಸ - ಅದರ ಕಾರ್ಯವೈಖರಿಯು ಕೇವಲ ದೇಹದೊಂದಿಗೆ ಮಾತ್ರ ಇರುತ್ತದೆ. ನೀವು ಅದರಲ್ಲಿ ಶಕ್ತಿಯನ್ನು ತುಂಬಬೇಕು, ಇಲ್ಲದಿದ್ದರೆ ಅದು ಜೀವಂತವಾಗುವುದಿಲ್ಲ. ಇದಕ್ಕಾಗಿಯೇ ಸಾಂಪ್ರದಾಯಿಕವಾಗಿ, ಜೀವಂತ ಗುರುವಿನಗೆ ಅಷ್ಟೊಂದು ಪ್ರಾಮುಖ್ಯತೆ ಅದನ್ನು ಜೀವಂತಗೊಳಿಸಲು. ಯೋಗಿಕ ಪದ್ಧತಿಯು ನಿಮ್ಮ ಜೀವ ವ್ಯವಸ್ಥೆಯು ಬೇರೊಂದು ಸ್ತರಕ್ಕೇರಲು ಅನುವು ಮಾಡಿಕೊಡುವ ಸೂಕ್ಷ್ಮ ಕುಶಲತೆಯಾಗಿದೆ. ಯೋಗ ಎಂದರೆ ನೀವು ನಿಮ್ಮ ಪರಮ ಸ್ವಭಾವವನ್ನು ಸಾಧಿಸಲು ಅನುವು ಮಾಡಿಕೊಡುವಂತಹುದು. ಪ್ರತಿಯೊಂದು ಆಸನ, ಪ್ರತಿಯೊಂದು ಮುದ್ರೆ, ಉಸಿರಾಟದ ಪ್ರತಿಯೊಂದು ವಿಧಾನ - ಎಲ್ಲವೂ ಈ ಕಡೆಗೆ ಕೇಂದ್ರೀಕೃತವಾಗಿದೆ.

ಕಟ್ಟುಕಥೆ3: ಸಿಕ್ಸ್-ಪ್ಯಾಕ್ ಆಬ್ಸ್ ಬೇಕೇ? ಯೋಗ ಉತ್ತಮ ವ್ಯಾಯಾಮದ ಅಭ್ಯಾಸ.

ಸದ್ಗುರು: ನಿಮಗೆ ಫಿಟ್‌ನೆಸ್ ಬೇಕಿದ್ದರೆ, ನಿಮಗೆ ಸಿಕ್ಸ್-ಪ್ಯಾಕ್ ಆಬ್ಸ್ ಅಥವಾ ಎಷ್ಟೇ ಸಂಖ್ಯೆಯ ಆಬ್ಸ್ ಬೇಕಿದ್ದರೆ, ಹೋಗಿ ಟೆನಿಸ್ ಆಟ ಆಡಿ ಅಥವಾ ಹೈಕ್ ಮಾಡಿ ಎಂದು ಹೇಳುತ್ತೇನೆ. ಯೋಗ ವ್ಯಾಯಾಮವಲ್ಲ, ಅದಕ್ಕೆ ಇತರ ಆಯಾಮಗಳಿವೆ. ಫಿಟ್‌ನೆಸ್‌ನ ವಿಭಿನ್ನ ಆಯಾಮ - ಹೌದು - ನೀವು ಅದರಿಂದ ಆರೋಗ್ಯವಂತರಾಗುತ್ತೀರಿ, ಆದರೆ ಸಿಕ್ಸ್-ಪ್ಯಾಕ್ ಆಬ್ಸ್ ಬರುವುದಿಲ್ಲ. ಕ್ಯಾಲೊರಿಗಳನ್ನು ದಹಿಸಲು ಅಥವಾ ನಿಮ್ಮ ಸ್ನಾಯುವನ್ನು ಹೆಚ್ಚಿಸಲು ನೀವು ಯೋಗ ಮಾಡುತ್ತಿದ್ದರೆ, ನಿಸ್ಸಂಶಯವಾಗಿ ನೀವು ಸರಿಯಲ್ಲದ ಯೋಗವನ್ನು ಮಾಡುತ್ತಿದ್ದೀರಿ, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಆಬ್ಸ್-ಗಳಿಗಾಗಿ, ನೀವು ಜಿಮ್-ಗೆ ಹೋಗಬಹುದು. ಯೋಗವನ್ನು ಬಹಳ ಸೂಕ್ಷ್ಮವಾದ, ಸೌಮ್ಯವಾದ ರೀತಿಯಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ, ಬಲವಾದ ಸ್ನಾಯುಗಳನ್ನು ಬೆಳೆಸುವಂತಹ ರೀತಿಯಲ್ಲಲ್ಲ, ಏಕೆಂದರೆ ಯೋಗವಿರುವುದು ವ್ಯಾಯಾಮದ ಬಗ್ಗೆಯಲ್ಲ.

ಭೌತಿಕ ಶರೀರವು ಒಂದು ಇಡೀ ನೆನಪಿನ ರಚನೆಯನ್ನು ಹೊಂದಿದೆ. ಈ ಭೌತಿಕ ಶರೀರವನ್ನು ಓದಲು ನೀವು ಸಿದ್ಧರಿದ್ದರೆ, ಎಲ್ಲವೂ - ಶೂನ್ಯದಿಂದ ಈ ಬ್ರಹ್ಮಾಂಡವು ಈ ಹಂತದವರೆಗೆ ಹೇಗೆ ವಿಕಸನಗೊಂಡಿತು - ಈ ಶರೀರದಲ್ಲಿ ಬರೆಯಲಾಗಿದೆ. ನೀವು ಆಸನಗಳನ್ನು ಮಾಡುವಾಗ, ನೀವು ಆ ನೆನಪುಗಳನ್ನು ತೆರೆದು ಈ ಜೀವನವನ್ನು ಪರಮ ಸಾಧ್ಯತೆಯ ಕಡೆಗೆ ಪುನರ್ರಚಿಸಲು ಪ್ರಯತ್ನಿಸುತ್ತಿದ್ದೀರಿ. ಹಠ ಯೋಗವನ್ನು ಸರಿಯಾದ ಪರಿಸರದಲ್ಲಿ ಕಲಿಸಿದರೆ, ಅದು ನಿಮ್ಮ ವ್ಯವಸ್ಥೆಯನ್ನು ಅದ್ಭುತವಾದ ಧಮನಿಯಂತೆ ರೂಪಿಸುವ ಒಂದು ಅದ್ಭುತ ಪ್ರಕ್ರಿಯೆಯಾಗಿದೆ, ದೈವೀಕತೆಯನ್ನು ಸ್ವೀಕರಿಸಲು ಒಂದು ಭವ್ಯ ಸಾಧನವಾಗಿದೆ.

ಕಟ್ಟುಕಥೆ 4: ಕಳೆದ ಶತಮಾನದಲ್ಲಷ್ಟೆ ಯೋಗ ಜಾಗತಿಕ ಸ್ತರಕ್ಕೇರಿರುವುದು

ಸದ್ಗುರು: ಇಂದು, ಇದನ್ನು ಎಲ್ಲಾ ರೀತಿಯ ಅಭಿವ್ಯಕ್ತಿಗಳು ಮತ್ತು ವಿರೂಪಗಳಲ್ಲಿ ಅಭ್ಯಾಸ ಮಾಡಲಾಗುತ್ತಿದ್ದರೂ, ಕನಿಷ್ಠ “ಯೋಗ” ಎಂಬ ಪದವು ಜಾಗತಿಕವಾಗಿ ಗುರುತಸಲ್ಪಡುತ್ತಿದೆ. ಇದನ್ನು ಪ್ರಚಾರ ಮಾಡಲು ಒಂದು ಸಂಘಟಿತ ಸಂಸ್ಥೆ ಎಂದಿಗೂ ಇದ್ದದ್ದಿಲ್ಲ, ಆದರೂ, ಇದು ಇನ್ನೂ ಉಳಿದುಕೊಂಡಿದೆ ಮತ್ತು ಜೀವಂತವಾಗಿದೆ ಏಕೆಂದರೆ ಬೇರೆ ಯಾವ ವಿಧಾನವೂ ಇದರ ರೀತಿ ಮಾನವ ಯೋಗಕ್ಷೇಮಕ್ಕಾಗಿ ದೀರ್ಘಕಾಲದವರೆಗೆ ಕೆಲಸ ಮಾಡಿಲ್ಲ.

ಲಕ್ಷಾಂತರ ಜನರು ಇದನ್ನು ಅಭ್ಯಾಸ ಮಾಡುತ್ತಿದ್ದಾರೆ, ಆದರೆ ಇದು ಬಂದಿದ್ದು ಎಲ್ಲಿಂದ? ಯೋಗವನ್ನು ಕಂಡುಹಿಡಿದವರು ಯಾರು? ಅದರ ಕಥೆ ಬಹಳ ಉದ್ದವಾಗಿದೆ; ಅದರ ಪ್ರಾಚೀನತೆಯು ಸಮಯಾಂತರದಲ್ಲಿ ಮಾಸಿ ಕಳೆದುಹೋಗಿದೆ. ಯೋಗ ಸಂಸ್ಕೃತಿಯಲ್ಲಿ, ಶಿವನನ್ನು ದೇವರೆಂದು ಗುರುತಿಸಲಾಗುವುದಿಲ್ಲ, ಬದಲಾಗಿ ಅವನನ್ನು ಯೋಗದ ಉಗಮಕಾರಕ, ಮೊದಲ ಯೋಗಿ –ಆದಿಯೋಗಿಯೆಂದು ಪರಿಗಣಿಸಲಾಗುತ್ತದೆ.ಈ ಬೀಜವನ್ನು ಮಾನವ ಮನಸ್ಸಿನಲ್ಲಿ ಮೊದಲು ಬಿತ್ತಿದವನು ಇವನೇ.

ಶಿವನ ಬೋಧನೆಯ ಮೊದಲ ಭಾಗ ಅವನ ಹೆಂಡತಿ ಪಾರ್ವತಿಗೆ. ಯೋಗ ಬೋಧನೆಗಳ ಎರಡನೇ ಭಾಗವನ್ನು ಮೊದಲ ಏಳು ಶಿಷ್ಯರಿಗೆ ಪ್ರತಿಪಾದಿಸಲಾಯಿತು. ಕೇದಾರನಾಥದ ಕಾಂತಿ ಸರೋವರದ ದಡದಲ್ಲಿ ಇದು ಘಟಿಸಿತು. ವಿಶ್ವದ ಮೊದಲ ಯೋಗ ಕಾರ್ಯಕ್ರಮ ನಡೆದದ್ದು ಇಲ್ಲಿಯೇ.

ಅನೇಕ ವರ್ಷಗಳ ನಂತರ, ಯೋಗ ವಿಜ್ಞಾನದ ಪ್ರಸರಣೆಯು ಪೂರ್ಣಗೊಂಡಾಗ, ಅದು ಏಳು ಸಂಪೂರ್ಣ ಜ್ಞಾನೋದಯವಾದ ಜೀವಿಗಳನ್ನು ಸೃಷ್ಟಿಸಿತ್ತು. ಏಳು ಪ್ರಸಿದ್ಧ ಋಷಿಗಳನ್ನು ಇಂದಿಗೂ ಸಪ್ತರ್ಷಿಗಳು ಎಂದು ಕರೆಯಲಾಗುತ್ತದೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅವರನ್ನು ಪೂಜಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ. ಶಿವನು ಈ ಏಳು ಜನರಲ್ಲಿ ಯೋಗದ ವಿಭಿನ್ನ ಅಂಶಗಳನ್ನು ತುಂಬಿದನು ಮತ್ತು ಈ ಅಂಶಗಳು ಯೋಗದ ಏಳು ಮೂಲ ರೂಪಗಳಾಗಿವೆ. ಇಂದಿಗೂ, ಯೋಗ ಈ ಏಳು ವಿಭಿನ್ನ ರೂಪಗಳನ್ನು ಉಳಿಸಿಕೊಂಡಿದೆ.

ಮನುಷ್ಯನು ತನ್ನ ಪ್ರಸ್ತುತ ಮಿತಿಗಳು ಮತ್ತು ವಿವಶತೆಯನ್ನು ಮೀರಿ ವಿಕಸನಗೊಳ್ಳುವ ಈ ಆಯಾಮವನ್ನು ಪಸರಿಸಲು ಸಪ್ತರ್ಷಿಗಳು ವಿಶ್ವದ ವಿವಿಧ ಭಾಗಗಳಿಗೆ ಏಳು ಬೇರೆ ಬೇರೆ ದಿಕ್ಕುಗಳಗೆ ಕಳುಹಿಸಲಾಯಿತು.

ಒಬ್ಬರು ಮಧ್ಯ ಏಷ್ಯಾಕ್ಕೆ ಹೋದರು, ಒಬ್ಬರು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾಕ್ಕೆ, ಒಬ್ಬರು ದಕ್ಷಿಣ ಅಮೆರಿಕಾಕ್ಕೆ, ಒಬ್ಬರು ಆದಿಯೋಗಿಯೊಂದಿಗೆ ಅಲ್ಲಿಯೇ ಉಳಿದುಕೊಂಡರು, ಒಬ್ಬರು ಹಿಮಾಲಯದ ಕೆಳಗಿನ ಪ್ರದೇಶಗಳಿಗೆ, ಒಬ್ಬರು ಪೂರ್ವ ಏಷ್ಯಾಕ್ಕೆ ಮತ್ತು ಒಬ್ಬರು ಭಾರತ ಉಪಖಂಡದ ದಕ್ಷಿಣಕ್ಕೆ ಹೊರಟರು. ಸಮಯವು ಅನೇಕ ವಿಷಯಗಳನ್ನು ಹಾಳುಗೆಡವಿದೆ, ಆದರೆ ಆ ದೇಶಗಳ ಸಂಸ್ಕೃತಿಗಳನ್ನು ಎಚ್ಚರಿಕೆಯಿಂದ ಅವಲೋಕಿಸಿದಾಗ, ಈ ಜನರ ಕೆಲಸದ ಸಣ್ಣ ಎಳೆಗಳನ್ನು ಕಾಣಬಹುದು, ಅದು ಇನ್ನೂ ಜೀವಂತವಾಗಿದೆ. ಇದು ವಿವಿಧ ಬಣ್ಣ ಮತ್ತು ರೂಪಗಳನ್ನು ಪಡೆದುಕೊಂಡಿದೆ ಮತ್ತು ಅದರ ಸ್ವರೂಪ ಲಕ್ಷಾಂತರ ವಿಭಿನ್ನ ರೀತಿಯಲ್ಲಿ ಬದಲಾಯಿಸಿದೆ, ಆದರೆ ಈ ಎಳೆಗಳನ್ನು ಇನ್ನೂ ಕಾಣಬಹುದು.

ಕಟ್ಟುಕಥೆ5: ನಿಮ್ಮ ಲಯವನ್ನು ಕಂಡುಕೊಳ್ಳಿ; ಯೋಗ ಮತ್ತು ಸಂಗೀತ ಚೆನ್ನಾಗಿ ಮೇಳೈಸುತ್ತದೆ.

ಸದ್ಗುರು: ನೀವು ಆಸನಗಳನ್ನು ಅಭ್ಯಾಸ ಮಾಡುವಾಗ ಎಂದಿಗೂ ಕನ್ನಡಿ ಅಥವಾ ಸಂಗೀತ ಇರಬಾರದು. ಹಠ ಯೋಗವು ನಿಮ್ಮ ದೇಹ, ಮನಸ್ಸು, ಶಕ್ತಿ ಮತ್ತು ಅಂತರಾಳದ ಒಂದು ನಿರ್ದಿಷ್ಟ ಒಳಗೊಳ್ಳುವಿಕೆಯನ್ನು ಬಯಸುತ್ತದೆ. ನಿಮ್ಮೊಳಗಿನ ಸೃಷ್ಟಿಯ ಮೂಲದ ಒಳಗೊಳ್ಳುವಿಕೆ ನಿಮಗೆ ಬೇಕಿದ್ದರೆ, ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಶಕ್ತಿಯು ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ನೀವು ಅದನ್ನು ಗೌರವ ಮತ್ತು ಏಕಾಗ್ರತೆಯಿಂದ ಮಾಡಬೇಕು. ಅಲ್ಲಿ ಹೋಗಿ ಸಂಗೀತ ಕೇಳುತ್ತಾ ಏನನ್ನೋ ಮಾಡುವುದಲ್ಲ. ಯೋಗ ಸ್ಟುಡಿಯೋಗಳಲ್ಲಿನ ಒಂದು ದೊಡ್ಡ ಸಮಸ್ಯೆ ಏನೆಂದರೆ ಶಿಕ್ಷಕರು ಆಸನಗಳನ್ನು ಮಾಡುತ್ತಿರುವಾಗ ಮಾತನಾಡುವುದು. ಇದು ನಿಮಗೆ ಹಾನಿ ಉಂಟುಮಾಡುವ ಖಚಿತವಾದ ಮಾರ್ಗವಾಗಿದೆ.

ಆಸನದಲ್ಲಿರುವಾಗ ಮಾತನಾಡುವುದು ಕೇವಲ ರೂಢಿಯಲ್ಲ, ಅದು ಒಂದು ನಿಯಮ. ನೀವು ಎಂದಿಗೂ ಭಂಗಿಗಳಲ್ಲಿರುವಾಗ ಮಾತನಾಡಬಾರದು. ನೀವು ಆಸನವನ್ನು ಮಾಡುವಾಗ ಉಸಿರು, ಮಾನಸಿಕ ಗಮನ ಮತ್ತು ಪ್ರಾಣಶಕ್ತಿಯ ಸ್ಥಿರತೆ ಬಹಳ ಮುಖ್ಯ. ನೀವು ಮಾತನಾಡಿದರೆ, ಅದೆಲ್ಲವನ್ನೂ ನಾಶಪಡಿಸುತ್ತೀರಿ. ಕನಿಷ್ಠ ಎಂಟರಿಂದ ಹತ್ತು ಜನರು ಗಂಭೀರ ಅಸಮತೋಲನದಿಂದ ನಮ್ಮ ಬಳಿಗೆ ಬಂದಿದ್ದು, ಅದನ್ನು ಪರಿಹರಿಸಿಕೊಳ್ಳಲು ನಾವು ಅವರಿಗೆ ಸಹಾಯ ಮಾಡಿದ್ದೇವೆ. ನನ್ನ ಪ್ರಕಾರ ಅವರಲ್ಲಿ ನಾಲ್ವರು ಈಗ ತಮ್ಮ ವೃತ್ತಿಯನ್ನು ತ್ಯಜಿಸಿದ್ದಾರೆ, ಏಕೆಂದರೆ ಅವರೇನು ಅಸಂಬದ್ಧವನ್ನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿತ್ತು.

ಕೆಲವು ವರ್ಷಗಳ ಹಿಂದೆ ನಾನು ಅಮೇರಿಕಾದಲ್ಲಿದ್ದಾಗ, ಒಬ್ಬರು ನನ್ನನ್ನು ಅಮೇರಿಕಾದ ಯೋಗ ಶಾಲೆಯೊಂದರಲ್ಲಿ ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ನಾನು ಅವರ ಯೋಗ ಶಾಲೆಗೆ ಹೋದಾಗ, ಅಲ್ಲಿ ಸಂಗೀತ ಕೇಳಿಸುತ್ತಿತ್ತು - ಚಂಗ್, ಚಂಗ್ಚಂಗ್. - ಎಲ್ಲರಲ್ಲೂ ಉತ್ಸಾಹ ತುಂಬಲು. ಅವರು ಅರ್ಧ ಮತ್ಸ್ಯೇಂದ್ರಾಸನದಲ್ಲಿದ್ದರು ಹಾಗೂ ಜನರೊಂದಿಗೆ ಮಾತನಾಡುತ್ತಿದ್ದರು. ಅವರು ನನ್ನನ್ನು ನೋಡಿದಾಗ, ಯೋಗಾಸನವನ್ನು ಅರ್ಧಕ್ಕೆ ಬಿಟ್ಟು, ಮೇಜಿನ ಮೇಲಿನಿಂದ ಹಾರಿ ನನ್ನ ಕಡೆಗೆ ಬಂದು ನನ್ನನ್ನು ತಬ್ಬಿಕೊಂಡರು.

ನಾನು ಅವರನ್ನು ಪಕ್ಕಕ್ಕೆ ಕರೆದೊಯ್ದು, " ನೀವು ನಿಮ್ಮ ಜೀವವ್ಯವಸ್ಥೆಯಲ್ಲಿ ಗಂಭೀರ ಅಸಮತೋಲನವನ್ನು ಉಂಟುಮಾಡಿಕೊಳ್ಳುತ್ತೀರಿ. ನೀವು ಇದನ್ನು ಎಷ್ಟು ಸಮಯದಿಂದ ಮಾಡುತ್ತಿದ್ದೀರಿ?" ಎಂದು ಕೇಳಿದೆ. ಅವರು ಸಮಾರು ಹದಿನೈದು, ಹದಿನಾರು ವರ್ಷಗಳಿಂದ ಎಂದರು. ನಾನಂದೆ, "ನೀವು ಇದನ್ನು ಹದಿನಾರು ವರ್ಷಗಳಿಂದ ಮಾಡುತ್ತಿದ್ದರೆ, ನೀವು ಇದರಿಂದ, ಇದರಿಂದ ಇದರಿಂದ ಬಳಲುತ್ತಿರಬೇಕು." ಅವರು ಭಯಗ್ರಸ್ಥರಾಗಿ ನನ್ನನ್ನು ನೋಡಿದರು. ಮರುದಿನ ನನ್ನ ಬಳಿ ಬಂದು, "ಸದ್ಗುರು, ನೀವು ಹೇಳಿದ್ದೇ ನನಗೆ ಆಗುತ್ತಿದೆ. ನಾನು ವೈದ್ಯರಿಂದ ಎಲ್ಲಾ ರೀತಿಯ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ." ಎಂದು ಹೇಳಿದರು. ನಾನಂದೆ, "ನಿಮಗೆ ವೈದ್ಯರ ಅಗತ್ಯವಿಲ್ಲ, ಇದಕ್ಕೆ ನೀವೇ ಕಾರಣ. ನೀವಿದನ್ನು ನಿಲ್ಲಿಸಿದರೆ, ಇದು ವಾಸಿಯಾಗುತ್ತದೆ. "ಸುಮಾರು ಒಂದೂವರೆ ವರ್ಷಗಳ ನಂತರ ಅವರು ಯೋಗ ಹೇಳಿಕೊಡುವುದನ್ನು ನಿಲ್ಲಿಸಿದರು.

ತಪ್ಪಾದ ಯೋಗ ಮಾಡಿದ ಬಹಳಷ್ಟು ಜನರು ತಮ್ಮ ಮಾನಸಿಕ ಸಂತುಲನೆಯನ್ನು ಕಳೆದುಕೊಂಡಿದ್ದಾರೆ. ಯೋಗ ಅಪಾಯಕಾರಿ ಎಂಬುದು ಇದಕ್ಕೆ ಕಾರಣವಲ್ಲ. ಮೂರ್ಖತನವು ಯಾವಾಗಲೂ ಭೂಮಿಯಲ್ಲಿನ ಅಪಾಯಕಾರಿ ವಿಷಯ. ನೀವು ಏನಾದರೂ ಮೂರ್ಖವಾದದ್ದು ಮಾಡಿದರೆ, ಅದು ನಿಮಗೆ ಹಾನಿಯನ್ನೇ ಉಂಟುಮಾಡುವುದು. ಪ್ರಾಚೀನ ಕಾಲದಿಂದಲೂ ಮೂರ್ಖತನವು ಯಾವಾಗಲೂ ಈ ಭೂಮಿಯಲ್ಲಿ ಅಪಾಯಕಾರಿ ವಿಷಯ.

ಕಟ್ಟುಕಥೆ6: ಯೋಗ ಕಲಿಯಲು ಮಾರ್ಗದರ್ಶಿ ಬೇಕೇ? ನೀವು ಯೋಗವನ್ನು ಒಂದು ಪುಸ್ತಕದಿಂದ ಕಲಿಯಬಹುದು.

ಸದ್ಗುರು: ಇವತ್ತು, ನೀವು ಯಾವುದಾದರೂ ಪ್ರಮುಖ ಪುಸ್ತಕ ಮಳಿಗೆಗಳಿಗೆ ಹೋದರೆ, ಕನಿಷ್ಠ 15 ರಿಂದ 20 ವಿಭಿನ್ನ ಯೋಗ ಪುಸ್ತಕಗಳು ನಿಮಗೆ ಅಲ್ಲಿ ಕಾಣ ಸಿಗಬಹುದು. 7 ದಿನಗಳಲ್ಲಿ ಯೋಗವನ್ನು ಹೇಗೆ ಕಲಿಯುವುದು, 21 ದಿನಗಳಲ್ಲಿ ಯೋಗಿಯಾಗುವುದು ಹೇಗೆ, ಇತ್ಯಾದಿ. ಅನೇಕರು ಪುಸ್ತಕಗಳನ್ನು ಓದಿ ಯೋಗವನ್ನು ಕಲಿಯುವ ಮೂಲಕ ತಮಗೆ ಅಪಾರ ಹಾನಿ ಉಂಟುಮಾಡಿಕೊಂಡಿದ್ದಾರೆ. ಯೋಗ ತುಂಬಾ ಸರಳವಾಗಿದೆ ಎಂದು ತೋರುತ್ತದೆ, ಆದರೆ ನೀವು ಅದನ್ನು ಮಾಡಿದಾಗ, ಅದೊಂದು ಬಹಳ ಸೂಕ್ಷ್ಮ ಅಂಶವೆಂದು ನಿಮಗೆ ತಿಳಿಯುತ್ತದೆ. ಇದನ್ನು ಪರಿಪೂರ್ಣ ತಿಳುವಳಿಕೆ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಇವೆರಡು ಇಲ್ಲದಿದ್ದರೆ, ನೀವು ತೀವ್ರ ತೊಂದರೆಗೆ ಸಿಲುಕಬಹುದು. ಪುಸ್ತಕವು ನಿಮಗೆ ಸ್ಫೂರ್ತಿ ನೀಡಬಹುದು, ಆದರೆ ಅದರ ಉದ್ದೇಶ ನಿಮಗೆ ಯೋಗವನ್ನು ಕಲಿಸುವುದಲ್ಲ.

ಕಟ್ಟುಕಥೆ7: ಯೋಗ ಎನ್ನುವುದು ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಮಾಡುವಂತಹದ್ದು

ಸದ್ಗುರು: ಯೋಗ ನೀವು ಬೆಳಿಗ್ಗೆ-ಸಂಜೆ ಮಾಡುವಂತದ್ದಲ್ಲ. ಇದು ಒಂದು ನಿರ್ದಿಷ್ಟ ವಿಧಾನದಲ್ಲಿ ಇರುವುದು. ಒಬ್ಬರು ಯೋಗವೇ ಆಗಬೇಕು. ಅದು ಬೆಳಿಗ್ಗೆ-ಸಂಜೆಯ ಯೋಗವಾಗಿದ್ದರೆ, ಉಳಿದ ಸಮಯ ಗೋಜಲು ಗಲಿಬಿಲಿಯೇ - ಇದು ಯೋಗವಲ್ಲ, ಇದು ಕೇವಲ ಯೋಗಾಭ್ಯಾಸ.

ಯೋಗಿಕ ಪ್ರಕ್ರಿಯೆಯಿಂದ ಹೊರಗಿಡಲ್ಪಟ್ಟ ಜೀವನದ ಯಾವುದೇ ಅಂಶಗಳಿಲ್ಲ. ನಿಮ್ಮ ಜೀವನವು ಯೋಗವಾದರೆ, ನೀವು ಎಲ್ಲವನ್ನೂ ಮಾಡಬಹುದು. ನಿಮ್ಮ ಕುಟುಂಬವನ್ನು ನಡೆಸಬಹುದು, ನೀವು ಕಚೇರಿಗೆ ಹೋಗಬಹುದು, ನಿಮ್ಮ ವ್ಯವಹಾರವನ್ನು ನಡೆಸಬಹುದು, ನಿಮ್ಮ ಮಾರ್ಗವು ಯೋಗವಾಗಿದ್ದರೆ ಯಾವುದೇ ತೊಂದರೆಯಿಲ್ಲದೆ ನೀವು ಏನು ಬೇಕಾದರೂ ಮಾಡಬಹುದು. ಜೀವನದ ಪ್ರತಿಯೊಂದು ಅಂಶಗಳು, ನೀವು ನಿಮ್ಮನ್ನು ಬಂಧನದಲ್ಲಿರಿಸಲು ಅಥವಾ ನಿಮ್ಮನ್ನು ಸ್ವತಂತ್ರಗೊಳಿಸಲು ಬಳಸಬಹುದು. ನಿಮ್ಮನ್ನು ಬಂಧಿಸಿಕೊಳ್ಳಲು ನೀವು ಅದನ್ನು ಬಳಸುತ್ತಿದ್ದರೆ, ನಾವು ಅದನ್ನು ಕರ್ಮ ಎಂದು ಕರೆಯುತ್ತೇವೆ. ನಿಮ್ಮನ್ನು ಸ್ವತಂತ್ರಗೊಳಿಸಲು ನೀವು ಅದನ್ನು ಬಳಸುತ್ತಿದ್ದರೆ, ನಾವು ಅದನ್ನು ಯೋಗ ಎಂದು ಕರೆಯುತ್ತೇವೆ.

ಸಂಪಾದಕರ ಟಿಪ್ಪಣಿ: ಈಶ ಹಠ ಯೋಗ ಶಾಲೆಯ 21 ವಾರಗಳ ಹಠ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಸದ್ಗುರುಗಳ ಪ್ರವಚನದಿಂದ ಆಯ್ದ ತುಣುಕು. ಈ ಕಾರ್ಯಕ್ರಮವು ಯೋಗ ವ್ಯವಸ್ಥೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯಲು ಮತ್ತು ಹಠ ಯೋಗವನ್ನು ಕಲಿಸುವ ಪ್ರಾವೀಣ್ಯತೆಯನ್ನು ಪಡೆಯಲು ಅಮೋಘವಾದ ಅವಕಾಶವನ್ನು ನೀಡುತ್ತದೆ. ಮುಂದಿನ 21 ವಾರಗಳ ತರಬೇತಿ ಕಾರ್ಯಕ್ರಮವು ಜುಲೈ 16 ರಿಂದ ಡಿಸೆಂಬರ್ 11, 2019 ರವರೆಗೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ, www.ishahathayoga.com ಗೆ ಭೇಟಿ ನೀಡಿ ಅಥವಾ info@ishahatayoga.com ಗೆ ಇಮೇಲ್ ಮಾಡಿ.