ಶರೀರವನ್ನು ಚೆನ್ನಾಗಿ ಬಳಸುವುದು ಮತ್ತು ಕಾಲ ಕ್ರಮೇಣ ನಮ್ಮ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವುದು, ಅದನ್ನು ಆರೋಗ್ಯವಾಗಿಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ಒಮ್ಮೆ ಓರ್ವ ಯುವ ವೈದ್ಯರಿಗೆ ವ್ಯಕ್ತಿಯೊಬ್ಬರ ರೋಗ ಲಕ್ಷಣ ನಿರೂಪಣೆಯಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಅವರು ಹಿರಿಯ ಸಹೋದ್ಯೋಗಿಯ ಬಳಿ ಸಲಹೆ ಕೇಳಲು ಹೋದರು. ಹಿರಿಯ ಸಹೋದ್ಯೋಗಿಯು, “ಓಹ್! ಆತಂಕ ಮತ್ತು ವಾಂತಿ ಆಗುತ್ತಿದೆಯೇ?” “ಹೌದು, ಆದರೆ ಆತನಿಗೆ ಆತಂಕ ಮತ್ತು ವಾಂತಿಯಾಗಲು ಯಾವುದೇ ವೈದ್ಯಕೀಯ ಕಾರಣವಿದ್ದಂತೆ ಕಾಣುತ್ತಿಲ್ಲ.” ಎಂದು ಕಿರಿಯ ವೈದ್ಯ ಹೇಳಿದ. ಇದನ್ನು ಕೇಳಿ ಹಿರಿಯ ಸಹೋದ್ಯೋಗಿ ಆತನಿಗೆ ಈ ಸಲಹೆಯನ್ನು ನೀಡಿದರು, “ಅವನು ಗಾಲ್ಫ್ ಆಡುತ್ತಾನೆಯೇ ಎಂದು ಕೇಳಿ. ಹೌದೆಂದರೆ, ಆಟವಾಡುವುದನ್ನು ನಿಲ್ಲಿಸಲು ಹೇಳಿ. ಇಲ್ಲವೆಂದರೆ, ಆಡಲು ಹೇಳಿ. ಅವನು ಸರಿಯಾಗುತ್ತಾನೆ!” ಆರೋಗ್ಯವೆಂದರೆ ಹಾಗೆ!

ಈ ಶರೀರವನ್ನು ಬಳಸುವುದರ ಮೂಲಕ ಮಾತ್ರ ನೀವು ಅದನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ನೀವು ಅದನ್ನು ಹೆಚ್ಚು ಬಳಸುವುದಂತೆಲ್ಲಾ ಅದು ಉತ್ತಮಗೊಳ್ಳುತ್ತಿರುತ್ತದೆ.

ಕೆಲವರು ಅತಿಯಾಗಿ ಕೆಲಸ ಮಾಡಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರು ಕಡಿಮೆ ಕೆಲಸ ಮಾಡಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನೀವು 200 ವರ್ಷಗಳ ಹಿಂದೆ ಬದುಕಿದ್ದರೆ, ನೀವು ಈಗ ಮಾಡುತ್ತಿರುವುದಕ್ಕಿಂತ ಕನಿಷ್ಠ 20 ಪಟ್ಟು ಹೆಚ್ಚು ಶಾರೀರಿಕ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ. ನೀವು ಎಲ್ಲೆಡೆ ನಡೆದುಕೊಂಡೇ ಹೋಗಿಬರುತ್ತಿದ್ದಿರಿ, ಎಲ್ಲವನ್ನೂ ನಿಮ್ಮ ಕೈಗಳಿಂದಲೇ ಮಾಡುತ್ತಿದ್ದೀರಿ. ನೀವು ಅಷ್ಟೊಂದು ಚಟುವಟಿಕೆಯನ್ನು ಮಾಡುತ್ತಿದ್ದರೆ, ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಾನು ನಿಮಗೆ ಹೇಳಿರುತ್ತಿದ್ದೆ. ಆದರೆ ಇಂದು ಹೆಚ್ಚಿನವರು ತಮ್ಮ ಶರೀರವನ್ನು ಸಾಕಷ್ಟು ಬಳಸುವುದಿಲ್ಲ. ಶಾರೀರಿಕ ಚಟುವಟಿಕೆಯ ವಿಷಯದಲ್ಲಿ, ಅನೇಕ 20 ವರ್ಷ ವಯಸ್ಸಿನವರು 100 ವರ್ಷದ ಹಿಂದೆ 60 ವರ್ಷ ವಯಸ್ಸಿನವರು ಏನು ಮಾಡುತ್ತಿದ್ದರೋ, ಅದನ್ನು ಮಾಡಲೂ ಅವರಿಗೆ ಸಾಧ್ಯವಾಗುವುದಿಲ್ಲ. ಇದರರ್ಥ ನಾವು ಮನುಷ್ಯರನ್ನು ದುರ್ಬಲಗೊಳಿಸುತ್ತಿದ್ದೇವೆ ಎಂದು. ಈ ಶರೀರವನ್ನು ಬಳಸುವುದರ ಮೂಲಕ ಮಾತ್ರ ನೀವು ಅದನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ನೀವು ಅದನ್ನು ಹೆಚ್ಚು ಬಳಸುವುದಂತೆಲ್ಲಾ ಅದು ಉತ್ತಮಗೊಳ್ಳುತ್ತಿರುತ್ತದೆ.

ವಾಕ್-ಕಿಂಗ್ಸ್!

ಅನೇಕ ವರ್ಷಗಳ ಹಿಂದೆ, ನಾನು ಒಂದು ಗುಂಪನ್ನು ಪಶ್ಚಿಮ ಘಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಕರೆದುಕೊಂಡುಹೋಗಿದ್ದೆ. ಇದು ನಾನು ವ್ಯಾಪಕವಾಗಿ ಟ್ರೆಕ್ಕಿಂಗ್ ಮಾಡಿದ ಹಾಸನ ಮಂಗಳೂರು ಪ್ರದೇಶವಾದ್ದರಿಂದ ಈ ಸ್ಥಳಗಳ ಸೌಂದರ್ಯ ಮತ್ತು ಸೊಬಗು ನನಗೆ ತಿಳಿದಿದೆ. ಇವು ಸಂಪೂರ್ಣವಾಗಿ ಮೋಡಿ ಮಾಡುವಂತಹ ಸ್ಥಳಗಳು - ವನ್ಯಜೀವಿಗಳು ಮತ್ತು ಗಾಢಾರಣ್ಯಳಿಂದ ತುಂಬಿವೆ. ಅದಕ್ಕೂ ಕೆಲವು ವಾರಗಳ ಹಿಂದೆ ಬೆಂಗಳೂರಿಗೆ ಹೋಗುತ್ತಿದ್ದ ನೌಕಾ ಹೆಲಿಕಾಪ್ಟರ್ ಕಾಡಿನ ಪ್ರದೇಶದಲ್ಲೆಲ್ಲೋ ಅಪಘಾತಕ್ಕೀಡಾಗಿತ್ತು. ರಕ್ಷಣಾ ತಂಡಗಳು ಎಲ್ಲಾ ರೀತಿಯ ವೈಮಾನಿಕ ಸಮೀಕ್ಷೆಯನ್ನು ಮಾಡಿದರೂ ಅದನ್ನು ಹುಡುಕಲಾಗಲಿಲ್ಲ. ನಂತರ ಅವರು 200 ಕ್ಕೂ ಹೆಚ್ಚು ಸೇನಾ ಸಿಬ್ಬಂದಿಯ ಬೆಟಾಲಿಯನ್-ಅನ್ನು ಕರೆತಂದರು. ಅವರುಗಳು ಅರಣ್ಯ ಪ್ರದೇಶದಲ್ಲಿ ನೌಕಾ ಹೆಲಿಕಾಪ್ಟರ್-ಅನ್ನು ಹುಡುಕಲು ಪ್ರಾರಂಭಿಸಿದರು. ಕೆಲ ವಾರಗಳ ನಂತರವೂ ಅವರಿಗೆ ಹೆಲಿಕಾಪ್ಟರ್-ಅನ್ನು ಹುಡುಕಾಗಲಿಲ್ಲ. ಅಲ್ಲಿನ ಅರಣ್ಯ ಅಷ್ಟು ದಟ್ಟವಾಗಿದೆ!

ಆರೋಗ್ಯದ ಬಗೆಗಿನ ಸರಳವಾದ ವಿಷಯವೆಂದರೆ ಶರೀರವನ್ನು ಬಳಸುವುದಷ್ಟೆ. ನೀವು ಶರೀರವನ್ನು ಸಾಕಷ್ಟು ಬಳಸಿದರೆ, ತನ್ನ ಆರೋಗ್ಯವನ್ನು ಕಂಡುಕೊಳ್ಳಲು ಎಲ್ಲವೂ ಅದರಲ್ಲಿಯೇ ಇದೆ.

ನಾವು ಸುಮಾರು 35-40 ಮಂದಿ ಈ ಪ್ರದೇಶದ ಮೂಲಕ ನಡೆದುಕೊಂಡು ಹೋಗುತ್ತಿದ್ದೆವು. ಮಳೆ ಸುರಿಯುತ್ತಿದ್ದ ಕಾರಣ ನಾವು ಅಡುಗೆ ಮತ್ತು ಬೇರೆಲ್ಲದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಿದ್ದೆವು, ಅಲ್ಲದೆ ನಾವು ಒಂದು ದಿನಪೂರ್ತಿ ನಡೆದಿದ್ದೆವು. ನಂತರ ನಾವು ಈ ಸೇನಾ ಶಿಬಿರಕ್ಕೆ ಆಹ್ವಾನವಿಲ್ಲದ ಅತಿಥಿಗಳಾಗಿ ಕಾಲಿಟ್ಟೆವು, ಏಕೆಂದರೆ ಊಟದ ಪರಿಮಳವು ಘಮಘಮಿಸುತ್ತಿತ್ತು! ನಿಮ್ಮ ಶರೀರವನ್ನು ನೀವು ಹಾಗೆ ಬಳಸಿದಾಗ ಮಾತ್ರ ನೀವು ಆಹಾರದ ಮೌಲ್ಯವನ್ನು ನಿಜವಾಗಿಯೂ ತಿಳಿಯುತ್ತೀರಿ. ಅಲ್ಲಿನ ಕಮಾಂಡಿಂಗ್ ಆಫೀಸರ್ ತುಂಬಾ ಉದಾರಹೃದಯದವರಾಗಿದ್ದರು - ಅವರು ನಮ್ಮನ್ನು ಆದರದಿಂದ ಬರಮಾಡಿಕೊಂಡರು.

ಬೆಟಾಲಿಯನ್‌ನ ಸಾರ್ಜೆಂಟ್‌ಗಳಲ್ಲಿ ಒಬ್ಬರು ನಾವು ಯಾಕೆ ನಡೆಯುತ್ತಿದ್ದೇವೆ ಎಂದು ಕೇಳಿದರು. ನಾವು ಇಷ್ಟಪಟ್ಟು ನಡೆಯುತ್ತಿದ್ದೇವೆಂದು ಕೇಳಿ ಅವರಿಗೆ ನಂಬಲಿಕ್ಕಾಗಲಿಲ್ಲ. "ಹಾಗೆ ನಡೆಯುತ್ತಿದ್ದೀರಾ?" ಎಂದು ಅವರು ಕೇಳಿದರು? "ನಾವು ಇಲ್ಲಿ ಹಲವು ವಾರಗಳಿಂದ ಇದು ಯಾವಾಗ ಮುಗಿಯುತ್ತದೆಯೆಂದು ಕಾಯುತ್ತಿದ್ದೇವೆ. ಪ್ರತಿದಿನ ನಾವು ಇನ್ನೂ ಸಿಗದ ಹೆಲಿಕಾಪ್ಟರ್‌ಗಾಗಿ ನಾವು 20-30 ಕಿಲೋಮೀಟರ್ ನಡೆದು ಹೋಗಬೇಕು. ನೀವು ಕೇವಲ ಮೋಜಿಗಾಗಿ ನಡೆಯುತ್ತಿದ್ದೀರಾ?!" ನಮ್ಮನ್ನು ನಂಬಲು ಅವರು ಸಿದ್ಧರಿರಲಿಲ್ಲ. "ಯಾರಿಗಾದರೂ ಕೇವಲ ಮೋಜಿಗಾಗಿ ನಡೆಯಲು ಸಾಧ್ಯವೇ? ಕಾಲುಗಳಲ್ಲಿ ಗಾಯ, ಹುಣ್ಣುಗಳೊಂದಿಗೆ?" ಬಲವಂತದ ವ್ಯಾಯಾಮವಾಗಿ ಅವರೇನು ಮಾಡುತ್ತಿದ್ದಾರೋ, ಅದು ಅವರನ್ನು ತುಂಬಾ ಆರೋಗ್ಯಕರವಾಗಿ ಮತ್ತು ಸ್ವಸ್ಥವಾಗಿಟ್ಟಿದೆ ಎಂದು ಅವರಿಗೆ ಅರ್ಥವಾಗಲಿಲ್ಲ.

ಜೀವಕ್ಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಅನುಮತಿಸಿ

ಆರೋಗ್ಯದ ಬಗೆಗಿನ ಸರಳವಾದ ವಿಷಯವೆಂದರೆ ಶರೀರವನ್ನು ಬಳಸುವುದಷ್ಟೆ. ನೀವು ಶರೀರವನ್ನು ಸಾಕಷ್ಟು ಬಳಸಿದರೆ, ತನ್ನ ಆರೋಗ್ಯವನ್ನು ಕಂಡುಕೊಳ್ಳಲು ಎಲ್ಲವೂ ಅದರಲ್ಲಿಯೇ ಇದೆ. ನನ್ನ ಪ್ರಕಾರ, ನಾವು ನಮ್ಮ ಶರೀರವನ್ನು ದೈಹಿಕವಾಗಿ ಬಳಸಿದರೆ, ಈ ಭೂಮಿಯಲ್ಲಿ 80% ಕಾಯಿಲೆಗಳು ಕಣ್ಮರೆಯಾಗುತ್ತವೆ. ಉಳಿದ 20% ರಲ್ಲಿ, ಮತ್ತೊಂದು 10% ಕಾಯಿಲೆಗಳಿಗೆ ಜನರು ತಿನ್ನುವ ಆಹಾರದ ಕಾರಣ. ನೀವು ಅದನ್ನು ಬದಲಾಯಿಸಿದರೆ, ಆ 10% ಕಣ್ಮರೆಯಾಗುತ್ತದೆ. ಅದರರ್ಥ ಕೇವಲ 10% ಕಾಯಿಲೆಗಳು ಮಾತ್ರ ಉಳಿದಿರುತ್ತವೆ. ಆ ಕಾಯಿಲೆಗಳ ಕಾರಣ ಹಲವಾರು. ಒಂದು ಕಾರಣ, ಕರ್ಮ; ಇನ್ನೊಂದು ಗಾಳಿಯಿರಬಹುದು, ಮತ್ತು ಜೀವವ್ಯವಸ್ಥೆಯಲ್ಲಿ ಆಗಬಹುದಾದ ಇತರ ಅಂಶಗಳಿವೆ. ಕಾಯಿಲೆಯಿರುವವರಲ್ಲಿ 90% ಜನರು ಶರೀರವನ್ನು ಬಳಸುವುದರ ಮೂಲಕ ಮತ್ತು ಸರಿಯಾದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವಂತರಾದರೆ, ಉಳಿದ 10% ಅನ್ನು ಸುಲಭವಾಗಿ ನಿಭಾಯಿಸಬಹುದು. ಆದರೆ ಈಗ, ಬಹಳ ಜನರು ಕಾಯಿಲೆಯಿಂದ ಬಳಲುತ್ತಿರುವ ಕಾರಣ ನಾವು ಸರಿಯಾಗಿ ತಿನ್ನದಿರುವುದು ಅಥವಾ ನಾವು ಸರಿಯಾಗಿ ತಿಂದು ಶರೀರವನ್ನು ಸರಿಯಾಗಿ ಬಳಸದೆ ಇರುವುದು.

ನಿಮ್ಮ ಶರೀರ, ನಿಮ್ಮ ಮನಸ್ಸು ಮತ್ತು ನಿಮ್ಮ ಪ್ರಾಣಶಕ್ತಿಯನ್ನು ನೀವು ಬಳಸಬೇಕಷ್ಟೆ. ಈ ಮೂರಕ್ಕೆ ಉತ್ತಮವಾದ ವ್ಯಾಯಾಮ ದೊರಕಿ ಮತ್ತು ಅವು ಸಮತೋಲಿತವಾಗಿದ್ದರೆ, ನೀವು ಆರೋಗ್ಯವಾಗಿರುತ್ತೀರಿ.

ಆರೋಗ್ಯವು ನಮ್ಮ ವಿಚಾರವೇನೋ ಮತ್ತು ನಾವು ಆರೋಗ್ಯವನ್ನು ಸೃಷ್ಟಿಸಿದ್ದು ಎನ್ನುವಂತೆ ಜನರು ವರ್ತಿಸುತ್ತಿದ್ದಾರೆ. ಆರೋಗ್ಯವು ನೀವು ಆವಿಷ್ಕರಿಸುವ ವಿಷಯವಲ್ಲ. ಇದು ನಿಮ್ಮ ವಿಚಾರವಲ್ಲ. ಜೀವನ ಪ್ರಕ್ರಿಯೆಯು ಉತ್ತಮವಾಗಿ ನಡೆಯುತ್ತಿದ್ದರೆ, ಅದು ಆರೋಗ್ಯ. ಜೀವವು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ನೀವು ಅನುಮತಿಸಿದರೆ, ಅದು ಆರೋಗ್ಯ.

ನಿಮ್ಮ ಶರೀರ, ನಿಮ್ಮ ಮನಸ್ಸು ಮತ್ತು ನಿಮ್ಮ ಪ್ರಾಣಶಕ್ತಿಯನ್ನು ನೀವು ಬಳಸಬೇಕಷ್ಟೆ. ಈ ಮೂರಕ್ಕೆ ಉತ್ತಮವಾದ ವ್ಯಾಯಾಮ ದೊರಕಿ ಮತ್ತು ಅವು ಸಮತೋಲಿತವಾಗಿದ್ದರೆ, ನೀವು ಆರೋಗ್ಯವಾಗಿರುತ್ತೀರಿ. ಎರಡನೆಯ ಅಥವಾ ಮೂರನೆಯ ಭಾವ ಸ್ಪಂದನ ಕಾರ್ಯಕ್ರಮದ ಸಮಯದಲ್ಲಿ ಒಮ್ಮೆ ಹೀಗಾಯಿತು. ಈ ಕಾರ್ಯಕ್ರಮವನ್ನು ಒಂದು ಸಣ್ಣ ಸ್ಥಳದಲ್ಲಿ ನೆಡೆಸುತ್ತಿದ್ದೆ, ಅಲ್ಲಿ ಮೆಟ್ಟಿಲುಗಳನ್ನು ಅನೇಕ ಬಾರಿ ಹತ್ತಿ ಇಳಿಯಬೇಕಿತ್ತು. ಒಂದು ದಿನ ನಾನು ಕಾರ್ಯಕ್ರಮವನ್ನು ನೆಡೆಸುತ್ತಿದ್ದಾಗ ನಾನು ಎಷ್ಟು ಬಾರಿ ಮೆಟ್ಟಿಲುಗಳನ್ನು ಹತ್ತಿ ಇಳಿದೆ ಎಂದು ಎಣಿಸಿದೆ. ಅಲ್ಲದೆ ನಾನು ಅಡುಗೆಮನೆಯನ್ನೂ ಸಹ ನಿರ್ವಹಿಸಬೇಕಿತ್ತು. ಆ ದಿನ ನಾನು 125 ಬಾರಿ ಮೆಟ್ಟಿಲುಗಳನ್ನು ಹತ್ತಿ ಇಳಿದಿದ್ದೆ ಮತ್ತು ಕೊನೆಯಲ್ಲಿ ನಾನು ತುಂಬಾ ಆರೋಗ್ಯವಾಗಿದ್ದೇನೆ ಎಂದು ನನಗಿಸಿತ್ತು.

ಒಮ್ಮೆಗೆ ಬಹಳಷ್ಟು ಚಟುವಟಕೆಯನ್ನು ತೊಡಗುವುದು ನಿಮ್ಮನ್ನು ಕೆಳಗಿಳಿಸಬಹುದು, ಆದರೆ ಶಾರೀರಿಕ, ಮಾನಸಿಕ ಮತ್ತು ಪ್ರಾಣಶಕ್ತಿಯ ಚಟುವಟಕೆಯನ್ನು ನೀವು ಕಾಲಕ್ರಮೇಣ ಬೆಳೆಸಿದರೆ ಆರೋಗ್ಯ ಬರುತ್ತದೆ. ನಿಮ್ಮ ಶರೀರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ನಿಮ್ಮ ಮನಸ್ಸು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಎಲ್ಲವೂ ತಪ್ಪಿಲ್ಲದೆ ನಡೆಯುತ್ತಿದೆಯೆಂದು ನಿಮ್ಮ ಪ್ರಾಣಶಕ್ತಿಯು ಈ ಎರಡನ್ನೂ ಬೆಂಬಲಿಸುತ್ತದೆ - ಇದುವೇ ಆರೋಗ್ಯ. ಜೀವನವು ಶಕ್ತಿ ಮತ್ತು ಉತ್ಸಾಹದಿಂದ ನಡೆಯುತ್ತಿದ್ದರೆ, ಅದುವೇ ಆರೋಗ್ಯ.

Editor’s Note: If you’re looking for tips on how food and health connect, try out our very popular ebooklet Food Body. Pay what you want and download it. (Set 0 for free).