32 ದೇಶಗಳಿಂದ 800ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ತಮ್ಮ ಆಂತರಿಕ ಬೆಳವಣಿಗೆಗಾಗಿ ಇಶಾ ಯೋಗ ಕೇಂದ್ರದ ಪ್ರಾಣಪ್ರತಿಷ್ಠಿತ ತಾಣದಲ್ಲಿ 7 ತಿಂಗಳು ಕಳೆಯಲು ಒಟ್ಟು ಸೇರುತ್ತಾರೆ.

Life in Sadhanapada - All Articles

ನಾವು ಅತ್ಯಂತ ಕಾಳಜಿವಹಿಸುವ ಯಾವುದೇ ಕಾರ್ಯಗಳಿಗೆ ನಮ್ಮ ಮನಸ್ಸು ಮತ್ತು ಶಕ್ತಿಯನ್ನು ಅರ್ಪಿಸುವುದರಿಂದ ಯಾವಾಗಲೂ ಒಳ್ಳೆಯ ಪ್ರತಿಫಲವೇ ದೊರೆಯುತ್ತದೆ ಮತ್ತು ಈ ಪ್ರಕ್ರಿಯೆಯೇ ನಮ್ಮ ಬೆಳವಣಿಗೆಯ ಮಾರ್ಗವಾದರೆ, ಒಬ್ಬ ಆಧ್ಯಾತ್ಮಿಕ ಆಕಾಂಕ್ಷಿಗೆ ಇದಕ್ಕಿಂತ ತೃಪ್ತಿಕರವಾದದ್ದು ಬೇರೊಂದಿಲ್ಲ. ಅತ್ಯಂತ ಕೌಶಲ್ಯದಿಂದ ಸದ್ಗುರುಗಳು ರೂಪಿಸಿರುವ ‘ಸೇವಾ’ ಅಂತಹ ಒಂದು ಸದವಕಾಶ.

ಅತಿ ಸೂಕ್ಷ್ಮವಾಗಿ ರೂಪಿತವಾದ ಇದು, ಪ್ರತಿಯೊಬ್ಬ ಸಾಧನಪಾದದ ಶಿಬಿರಾರ್ಥಿಗೆ ಎಲ್ಲಾ ವಿವಿಧ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ಒದಗುವಂತೆ ಖಚಿತಪಡಿಸಲಾಗಿದೆ. ಒಂದು ಸೇವೆಯಿಂದ ಇನ್ನೊಂದು ಸೇವೆಗೆ ಬದಲಾಯಿಸಲು ಅಗಾಧವಾದ ನಮ್ಯತೆಯನ್ನು ಬೇಡುತ್ತದೆ ಮತ್ತು ಸಾಧನಪಾದದ ಶಿಬಿರಾರ್ಥಿಗಳು ತಮ್ಮಲ್ಲಿನ ಪ್ರತಿರೋಧದ ಪದರಗಳನ್ನು ಕಳಚಿ ಹೊಸ ಸ್ಥಾನದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಸಮರ್ಪಣಾ ಭಾವವನ್ನು ಕಂಡುಕೊಳ್ಳುತ್ತಾರೆ. 

ಅನ್ನ ಸೇವಾ

life-in-sadhanapada-different-flavors-of-seva-vol-serving-food-20190903_SGR_0283-e

“ಅನ್ನ" ಎಂದರೆ ಸಂಸ್ಕೃತದಲ್ಲಿ “ಆಹಾರ” ಎಂದರ್ಥ. ಈಶ ಯೋಗ ಕೇಂದ್ರದಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಊಟ ಬಡಿಸಲಾಗುತ್ತದೆ. ಸದ್ಗುರುಗಳಿಂದ ಸೂಕ್ತವಾಗಿ ಹೆಸರಿಸಲ್ಪಟ್ಟಿರುವ ಭಿಕ್ಷಾ ಹಾಲಿನಲ್ಲಿ, ಅನ್ನದಾನವಾಗಿ ಎರಡು ಊಟಗಳನ್ನು ಬಡಿಸಲಾಗುತ್ತದೆ: ಬ್ರನ್ಚ್ -ಬೆಳಗಿನ ಭೋಜನ 10:00 ಘಂಟೆಗೆ ಮತ್ತು ರಾತ್ರಿಯ ಭೋಜನ 7:00 ಘಂಟೆಗೆ.

ಮೇಲ್ನೋಟಕ್ಕೆ ಊಟವನ್ನು ಸವಿಯುವುದು ಬಹಳ ಸರಳ ಮತ್ತು ಒಂದು ಸಾಮಾನ್ಯ ಕೆಲಸ ಎನಿಸಬಹುದು, ಆದರೆ, ಅನ್ನ ಸೇವಾ ಕಾರ್ಯ ಮಾಡುವಾಗ ಶಿಬಿರಾರ್ಥಿಗಳು ಅದನ್ನು ಮಾಡುವಾಗಿನ ನಿಜವಾದ ಕಾಠಿಣ್ಯವನ್ನು ಅರಿಯುತ್ತಾರೆ. ಊಟವನ್ನು ಜಾಗರೂಕತೆಯಿಂದ ಒಂದು ನಿರ್ದಿಷ್ಟ ಕ್ರಮದಲ್ಲಿ ಬಡಿಸಲಾಗುತ್ತದೆ....ಕೆಲವರು ಅನ್ನವನ್ನು ಸಲಾಡ್‍ಗಿಂತ ಮೊದಲು ಬಿಡಿಸಿ ಗದರಿಸಿಕೊಂಡಿದ್ದೂ ಕೂಡ ಇದ್ದಾರೆ.

ಎಲ್ಲವನ್ನು ಒಳಗೊಳ್ಳುವುದಕ್ಕೆ ಮತ್ತು ಸಮರ್ಪಣಾ ಭಾವವನ್ನು ಬೆಳೆಸಿಕೊಳ್ಳುವುದಕ್ಕೆ -ಹಸಿದ ಅಧ್ಯಾತ್ಮಿಕ ಆಕಾಂಕ್ಷಿಗಳ ಸೇವೆ ಮಾಡುವುದು ಒಂದು ನಿಶ್ಚಿತವಾದ ಮಾರ್ಗ. ಒಂದು ಸರಳವಾದ ಕೆಲಸವೂ ಎಷ್ಟೊಂದು ಪ್ರಮುಖವಾದುದು ಎಂಬ ಅರಿವನ್ನು ಮೂಡಿಸುತ್ತದೆ. ಶಿಬಿರಾರ್ಥಿಗಳಲ್ಲಿ ಈ ಒಂದು ಗುಣವನ್ನು ವೃದ್ಧಿಸಲು, ಸಾಧನಪಾದದಲ್ಲಿ ’ಅನ್ನ ಸೇವಾ’ ಅಳವಡಿಸಲಾಗಿದೆ.

ದೈಹಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ, ಧ್ಯಾನಸ್ಥರಾಗುವುದು ಬಹಳ ಸುಲಭ

“”ಅನ್ನ ಸೇವಾ, ಸ್ವಯಂ ಸೇವೆಗಳಲ್ಲೇ ಅತ್ಯುತ್ತಮವಾದ ಅನುಭವ! ಈ ಸೇವಾ ಸಮಯದಲ್ಲಿ ದೈಹಿಕವಾಗಿ ಚಟುವಿಟಿಕೆಯಿಂದ ಇದ್ದದು (ಏಕೆಂದರೆ ನನ್ನ ಸೇವೆಯೆಲ್ಲಾ ಸಾಮಾನ್ಯವಾಗಿ ಆಫಿಸಿನಲ್ಲೇ) ಒಂದು ಒಳ್ಳೆಯ ಅನುಭವ. ಮತ್ತು ಮಾನಸಿಕ ಚಟುವಟಿಕೆ (ಅಫೀಸ್ ಸೇವಾ) ಗಿಂತ ದೈಹಿಕ ಚಟುವಟಿಕೆ (ಅನ್ನ ಸೇವಾ) ಗಳಲ್ಲಿ ತೊಡಗಿದ್ದಾಗ ಧ್ಯಾನಸ್ಥನಾಗುವುದು ಬಹಳ ಸುಲಭ ಎಂಬುದು ನನ್ನ ಅನಿಸಿಕೆ! “ - ಜಿನಿವೇವ್, 30, ಕೆನಡಾ.

ಇಷ್ಟ ಕಷ್ಟಗಳ ಪದರಗಳು ಕಳಚಿದಾಗ

“ನನಗೆ ಜ್ಞಾಪಕವಿದೆ, ಒಮ್ಮೆ ನಾನು ಜನರು ಸಿಂಕಿನಲ್ಲಿ ಸಿಕ್ಕಿಕೊಂಡ ಆಹಾರವನ್ನು ಕೈಯಿಂದ ತೆಗೆದು ಸ್ವಚ್ಛ ಮಾಡುತ್ತಿದದ್ದು ನೋಡುತ್ತಿದ್ದಾಗ ನನ್ನಲ್ಲೇ ಯೋಚಿಸುತ್ತಿದ್ದೆ -‘ಖಂಡಿತ ನಾನಂತೂ ಈ ಕೆಲಸ ಮಾಡುವುದಿಲ್ಲ’. ಕೆಲವು ದಿನಗಳ ನಂತರ ನಾನಾಗಿಯೇ ನನ್ನನ್ನು ಅದೇ ಕೆಲಸ ಮಾಡುಲು ತೊಡಗಿಸಿಕೊಂಡೆ ಏಕೆಂದರೆ ಇದೊಂದು ನನ್ನೊಳಗೇ ಇರುವ ಸೀಮಿತವೆಂದು ನಾನು ಮನಗಂಡಿದ್ದೆ ಮತ್ತು ಆಗ ನನಗೇ ಆಶ್ಚರ್ಯವಾಯಿತು ಈ ಎಲ್ಲ ಕೆಲಸವನ್ನು ನಿರಾಯಾಸವಾಗಿ ಸಂತೋಷದಿಂದ ಮಾಡುತ್ತಿರುವುದನ್ನು ಗಮನಿಸಿ. ಅದಾದ ನಂತರ -ಸಿಂಕನ್ನು ಯಾರು ಸ್ವಚ್ಛ ಮಾಡಿದರು ಎಂದು ಯಾರೋ ಕೇಳಿದಾಗ, ’ನಾನೇ ಇರಬೇಕು‘ ಎಂದು ಉತ್ತರಿಸಿದ್ದೆ. ಬಹಳಷ್ಟು ರೀತಿಯಿಂದ ಈ ಅನ್ನ ಸೇವಾ ಕಾರ್ಯ ಹಲವಾರು ರೀತಿಗಳಲ್ಲಿ ನನ್ನ ಜೀವನದ ಅತ್ಯಂತ ಅಮೂಲ್ಯವಾದ ಅನುಭವ ಮತ್ತು ಖಂಡಿತವಾಗಿ ಅಲ್ಲಿ ಆ ಜನಗಳ ಜೊತೆ ಹಾಗೂ ನನ್ನೊಂದಿಗೆ ನಾನೇ ಒಂದು ಅದ್ಭುತ ಸಮಯವನ್ನು ಕಳೆದೆ". - ಬಿಯಾನ , 27, ಆಸ್ಟ್ರೇಲಿಯಾ

life-in-sadhanapada-different-flavors-seva-kitchen-volunteering-collage-pic

ಭಿಕ್ಷಾ ಹಾಲ್ ಧ್ಯಾನಲಿಂಗದಷ್ಟೇ ಪವಿತ್ರ ಸ್ಥಳ

“ಭಿಕ್ಷಾ ಹಾಲಿನಲ್ಲಿ ಬರುವ ಪ್ರತಿಯೊಬ್ಬರಿಗೂ ಉಪಚರಿಸುವಾಗ ಸದ್ಗುರುಗಳಿಗೇ ಉಪಚರಿಸುತ್ತಿದ್ದೀವೇನೋ ಎಂಬಂತೆ ಆತಿಥ್ಯ ನೀಡುವುದು ಪದಗಳಲ್ಲಿ ವರ್ಣಿಸಲಾಗದಂತಹ ಒಂದು ಅನುಭವ. ನನ್ನ ಪರಿವಾರದವರು ಮುಂದಿನ ಸಲ ಈಶದಲ್ಲಿರುವ ಮುಖ್ಯವಾದ ಸ್ಥಳಗಳನ್ನು ತೋರಿಸು ಎಂದಾಗ, ನಾನು ಅವರನ್ನು ಧ್ಯಾನಲಿಂಗ, ಲಿಂಗ ಭೈರವಿ, ಆದಿಯೋಗಿ, ಇವುಗಳ ಜೊತೆ ಭಿಕ್ಷಾ ಹಾಲನ್ನೂ ತೋರಿಸಲು ನಿರ್ಧರಿಸಿದ್ದೇನೆ. ಏಕೆಂದರೆ ಅಲ್ಲಿಯೂ ಧ್ಯಾನಲಿಂಗ ಅಥವಾ ಲಿಂಗ ಭೈರವಿಯಷ್ಟೇ ಪಾವಿತ್ರ್ಯತೆಯನ್ನು ಪಾಲಿಸುತ್ತಾರೆ. - ಶ್ರೀಕಾಂತ್, 26, ಆಂಧ್ರಪ್ರದೇಶ, ಭಾರತ.

ಲಿಂಗ ಸೇವಾ

life-in-sadhanapada-different-flavors-of-seva-vol-at-temple-in-namaskar-posture

ಪ್ರತಿದಿನ ಈಶ ಯೋಗ ಕೇಂದ್ರಕ್ಕೆ ಸಾವಿರಾರು ಭಕ್ತರನ್ನು ಸೆಳೆಯುತ್ತಿರುವ ಅತ್ಯಂತ ಪ್ರಬಲ ಶಕ್ತಿಯ ರೂಪವಾದ ಧ್ಯಾನಲಿಂಗವು ಜ್ಞಾನೋದಯ ಮತ್ತು ಮುಕ್ತಿಯೆಡೆಗೆ ನಡೆಸುವ ದ್ವಾರ. ಸುಮ್ಮನೆ ಧ್ಯಾನಲಿಂಗದ ಜಾಗದಲ್ಲಿದ್ದರೂ ಸಾಕು, ಎಂಥವರನ್ನಾದರೂ ಧ್ಯಾನಾಸಕ್ತರನ್ನಾಗಿ ಮಾಡುತ್ತದೆ. ಲಿಂಗ ಸೇವೆಯು ಎಂಬುದು ತಮ್ಮನ್ನು ತಾವೇ ಈ ಪವಿತ್ರ ಸ್ಥಳಕ್ಕೆ ಅರ್ಪಿಸಿಕೊಂಡು, ಅದನ್ನು ಇತರರೂ ಅನುಭವಿಸಲು ಅವಕಾಶವಾಗುವಂತೆ ಮಾಡಲು ಸದ್ಗುರುಗಳು ಒದಗಿಸಿರುವ ಒಂದು ಒಳ್ಳೆಯ ಸೇವಾ ಅವಕಾಶ.

ಲಿಂಗಸೇವೆ ಪ್ರತಿಯೊಬ್ಬ ಸಾಧನಪಾದದ ಶಿಬಿರಾರ್ಥಿಯೂ ಕಾತುರದಿಂದ ಎದುರುನೋಡುವ ಸೇವೆ. ನೀವು ಮಾಡುತ್ತಿರುವ ಸೇವೆ ಯಾವುದೇ ಇರಲಿ - ಹಣಕಾಸು, IT, ತೋಟಗಾರಿಕೆ, ಕಾನೂನು ಚಟುವಟಿಕೆ, ಗ್ರಾಫಿಕ್ ಡಿಸೈನಿಂಗ್ ಅಥವಾ ಭಾಷಾನುವಾದ, ಯಾವುದೇ ಸಮಯದಲ್ಲಾದರೂ ಯಾರನ್ನು ಬೇಕಾದರೂ 10 ದಿನಗಳ ಲಿಂಗ ಸೇವೆ ಕಳುಯಿಸಲಾಗುತ್ತದೆ! ಸೇವೆಗಳ ಈ “ಮ್ಯೂಸಿಕಲ್ ಚೇರ್” ವಿಶೇಷವಾಗಿ ವಿನ್ಯಾಸಗೊಂಡಿದೆ ಮತ್ತು ನಮ್ಮ ಬೆಳವಣಿಗೆಗೆ ಇದೊಂದು ಸಾಟಿಯಿಲ್ಲದ ಅವಕಾಶ.

ಮನೆಗೆ ಹಿಂದಿರುಗಿದ ಅನುಭವ

ನಾನು ಯಾವಾಗಲೂ ಧ್ಯಾನಲಿಂಗಕ್ಕೆ ಹೋಗದಿರಲು ಏನಾದರೊಂದು ನೆಪ ಹುಡುಕುತ್ತಲೇ ಇರುತ್ತಿದ್ದೆ. ಅಲ್ಲಿ ಏನಾಗುತ್ತಿದೆ ಎಂದು ಅರ್ಥವಾಗದೇ ಇದ್ದುದರಿಂದ ನನಗೆ ಯಾವಾಗಲು ಅಲ್ಲಿ ಹೋಗಲು ಇರುಸುಮುರುಸಾತುತ್ತಿತ್ತು. ಆದರೆ, ಅಲ್ಲಿ ನಿಮ್ಮದೇ ಆದ ಇಷ್ಟಕಷ್ಟ ಸಂಗತಿಗಳ ಹೊರತಾಗಿಯೂ, ಆ ಆವರಣದ ಪರಿಸರವನ್ನು ನಿರ್ವಹಿಸಲು ಅಗತ್ಯವಿರುವುದನ್ನು ಮಾಡುತ್ತಾ, ಲಿಂಗ ಸೇವಾ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವೇ ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತೀರಿ. ಈ ಸಮರ್ಪಣಾ ಭಾವವು ಧ್ಯಾನಲಿಂಗದ ಜೊತೆ ನನಗೆ ಸಂಪೂರ್ಣವಾಗಿ ಒಂದು ಹೊಸ ಆಯಾಮವನ್ನು ಕಲ್ಪಿಸಿದೆ. ಈ ಸ್ಥಳವಲ್ಲದೆ ನಾನು ಬೇರೆ ಯಾವ ಸ್ಥಳಕ್ಕೂ ಹೋಗಬೇಕಾಗಿಲ್ಲ, ಬೇಕಾದ್ದೆಲ್ಲವೂ ಇಲ್ಲೇ ಇದೆ ಎಂಬ ಭಾವನೆಯನ್ನು ಈ ಸ್ಥಳ ಮೂಡಿಸುತ್ತಿದೆ. ಪದಗಳಲ್ಲಿ ಇದನ್ನು ವ್ಯಕ್ತಪಡಿಸುವುದು ಬಹಳ ಕಷ್ಟ. ನನಗೆ ಮನೆಗೆ ಹಿಂದಿರುಗಿದ ಅನುಭವ ಆಗುತ್ತಿದೆ. - ಅನಾಬೆಲ್, 22, ಜರ್ಮನಿ

life-in-sadhanapada-different-flavors-of-seva-linga-seva-pic1

ಮೊಟ್ಟ ಮೊದಲ ಬಾರಿ ನಾನು ಭಕ್ತಿ ಎಂದರೇನು ಎಂದು ಅರ್ಥ ಮಾಡಿಕೊಂಡೆ್

ಮೊದಲು ನಾನು ಈಶಾದ IT ವಿಭಾಗಕ್ಕೆ ಸೇರಿಕೊಳ್ಳುತ್ತಿದ್ದೇನೆ ಎಂದು ತಿಳಿದಾಗ, ಒಂದು ರೀತಿಯ ಕಸಿವಿಸಿ ಶುರುವಾಯಿತು, ಏಕೆಂದರೆ ನಾನು ಯಾವುದರಿಂದ 7 ತಿಂಗಳುಗಳ ಕಾಲ ಓಡಿಹೋಗಲು ಪ್ರಯತ್ನಿಸುತ್ತಿದ್ದೇನೊ ಮತ್ತೆ ನಾನು ಅದೇ ಕಂಪ್ಯೂಟರ್‍ಗಳ ಜೊತೆ ಕೆಲಸ ಮಾಡಬೇಕಾ ಎಂದು? ಆಗ ಲಿಂಗ ಸೇವಾ ಅವಕಾಶವು ಸಮಯಕ್ಕೆ ಹೇಳಿ ಮಾಡಿಸಿದಂತೆ ಬಂದಿತು. ನಾನು ಎಲ್ಲಾ ರೀತಿಯ ಜನರನ್ನು -ಎಲ್ಲಾ ವಯೋಮಾನದವರನ್ನು ಮತ್ತು ನಾನಾ ವಿಧದ ಹಿನ್ನೆಲೆ ಹೊಂದಿದವರನ್ನೂ ಭೇಟಿ ಮಾಡಿದೆ. ಭಕ್ತಾದಿಗಳನ್ನು ಸ್ವಾಗತಿಸುವಾಗ ಅವರ ಜೊತೆ ಹೇಗಿರಬೇಕು ಎಂಬುದನ್ನು ಕಲಿತುಕೊಂಡೆ. ಬೇಗನೆ ಎದ್ದು ತಡವಾಗಿ ಮಲಗುತ್ತಾ, ಪ್ರತಿಕ್ಷಣ ಲವಲವಿಕೆಯಿಂದ ಇದ್ದ ಆ 10 ದಿನಗಳಲ್ಲಿ ನನ್ನಲ್ಲಿದ್ದ ಆತಂಕವೆಲ್ಲಾ ನಿವಾರಣೆಯಾಯಿತು. ನನಗೆ ಭಕ್ತಿ ಎಂದರೇನೆಂದೇ ಗೊತ್ತಿರಲಿಲ್ಲ. ಅದು ಪ್ರೀತಿ ಮತ್ತು ಸಮರ್ಪಣೆ ಎಂದಷ್ಟೇ ಭಾವಿಸಿದ್ದೆ. ಆದರೆ ಇದು ಇವೆರಡನ್ನೂ ಮೀರಿದ್ದು ಎನಿಸಿತು. ಏಕೆಂದರೆ, ಪ್ರೀತಿ ಎನ್ನುವುದು ಕೆಲವಕ್ಕೇ ಮೀಸಲಾಗಿರಬಹುದು. ಆದರೆ, ನನಗೆ ಒಮ್ಮೆ ಭಕ್ತಿಯ ಸ್ಪರ್ಶವಾಗಿದ್ದೇ ಅದರ ವ್ಯಾಪಕ ಶಕ್ತಿ ನಾನು ಮಾಡಿದ್ದೆಲ್ಲದರಲ್ಲೂ ಹರಿಯತೊಡಗಿತು.- ನಥಾಲಿ, 34, ಕೆನಡಾ

ಒಂಭತ್ತು ತಿಂಗಳಲ್ಲಿ ಸಾಧಿಸುವುದಕ್ಕಿಂತ ಹೆಚ್ಚಿನ ಪ್ರಗತಿಯನ್ನು ಒಂಭತ್ತು ದಿನಗಳಲ್ಲಿ ಸಾಧಿಸಿದೆ.

ಪ್ರತಿದಿನ ಒದ್ದಾಡುತ್ತಾ ಬೆಳಗ್ಗೆ 3:00 ಘಂಟೆಗೇ ಎದ್ದು, ರಾತ್ರಿ ತಡವವಾಗಿ 10:00 ಘಂಟೆಯ ನಂತರ ಮಲಗುತ್ತಿದ್ದ ನನ್ನ ಜೊತೆಗಾರನನ್ನು ನೋಡಿ, ಲಿಂಗ ಸೇವಾ ಬಹಳ ದೈಹಿಕ ಒತ್ತಡಗಳಿಂದ ಕೂಡಿದ ಪ್ರಕ್ರಿಯೆಎಂದು ಭಾವಿಸಿದ್ದೆ. ನಾನು ಸಿದ್ಧಗೊಳ್ಳಬೇಕು’ ಎಂಬ ಉದ್ದೇಶದಿಂದ, ಹಿಂದಿನ ದಿನ ಕೂಡ, ‘ಮಿಸ್ಟಿಕ್ಸ್ ಮ್ಯೂಸಿಂಗ್ಸ್’ ಪುಸ್ತಕದಲ್ಲಿ ಧ್ಯಾನಲಿಂಗದ ಅಧ್ಯಾಯವನ್ನು ಓದಿದ್ದೆ. ದೈಹಿಕವಾಗಿ ಆಗಲೀ ಅಥವಾ ನನ್ನ ಮಾನಸಿಕ ಮೂರ್ಖಗೆಗಳು ಇಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂಬುದು ಆಗ ನನಗೆ ಅರಿವಾಗಿರಲಿಲ್ಲ. ಆ ಒಂಭತ್ತು ದಿನಗಳಲ್ಲಿ ನಾನು ಎಷ್ಟು ಪ್ರಗತಿ ಹೊಂದಿದ್ದೆನೆಂದರೆ, ಒಂಭತ್ತು ತಿಂಗಳು ಶ್ರಮ ಪಟ್ಟಿದ್ದರೂ ಅಷ್ಟು ಆಗುತ್ತಿರಲಿಲ್ಲ. - ಗುಹನ್, 22, ತಮಿಳುನಾಡು.

ಕಾರ್ಯಕ್ರಮಗಳ ಸ್ವಯಂಸೇವೆ

ಸಾಧಾರಣವಾಗಿ ಕೆಲಸದಿಂದ ದೂರ ಇರುವುದು ಒಳ್ಳೆಯ ರಜೆಯ ಮಜಾ. ಆದರೆ ಸಾಧನಪಾದದಲ್ಲಿ ಕಾರ್ಯಕ್ರಮಗಳ ಸ್ವಯಂಸೇವೆಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವ ಕಾತರತೆಯಿಂದ ಜನರು ತಮ್ಮ ನಿತ್ಯದ ಕೆಲಸಗಳಿಂದ ರಜೆ ಪಡೆಯುತ್ತಾರೆ! ಆದರೆ ವಾರಾಂತ್ಯವನ್ನು ’ಬಾಲಿ’ಯಲ್ಲಿ ಕಳೆಯುವ ಬದಲು ಈಶ ಕಾರ್ಯಕ್ರಮದ ಸ್ವಯಂ ಸೇವೆಯನ್ನು ಏಕೆ ಆಯ್ದು ಕೊಳ್ಳುತ್ತಾರೆ? ತಿಳಿದುಕೊಳ್ಳಲು ನಿಮ್ಮ ಓದನ್ನು ಮುಂದುವರೆಸಿ.

life-in-sadhanapada-different-flavors-of-seva-program-volunteering

ಭಾವ ಸ್ಪಂದನ ಕಾರ್ಯಕ್ರಮದ ಸ್ವಯಂಸೇವೆ ನನಗೆ ಕೊಡುವುದರ ಆನಂದವನ್ನು ಕಲಿಸಿತು.

“350 ಸಾಧನಪಾದದ ಶಿಬಿರಾರ್ಥಿಗಳಿಗೆ ಭಾವಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮತ್ತು ನಾವು 108 ಸ್ವಯಂ ಸೇವಕರಿದ್ದೆವು. ನಾವು ರಾತ್ರಿ ಮಲಗುತ್ತಿದದ್ದು ಹೆಚ್ಚೆಂದರೆ ನಾಲ್ಕು ಘಂಟೆಗಳ ಕಾಲ ಅಷ್ಟೇ, ಆದರೂ ನಾನು ಇಷ್ಟು ಹುರುಪಿನ ಅನುಭವವನ್ನು, ಇದಕ್ಕಿಂತ ಮೊದಲು, ನಾನೇ ಭಾವ ಸ್ವಂದನ ಕಾರ್ಯಕ್ರಮದ ಶಿಬಿರಾರ್ಥಿಯಾಗಿದ್ದಾಗ ಕೂಡ ಕಂಡಿರಲಿಲ್ಲ, ಸ್ವಯಂಸೇವೆಯಿಂದ ಆಚೆ ಬಂದ ಮೇಲೆ ನಾನು ಬಹಳ ಬದಲಾಗಿದ್ದೆ. ಕೊಡುವುದರಲ್ಲಿನ ಆನಂದವನ್ನು ಅರ್ಥ ಮಾಡಿಕೊಂಡೆ- ಒಮ್ಮೆ ನೀವು ಅನುಗ್ರಹಿತರಾದರೆ, ನೀವು ಆ ಆಯಾಮದಲ್ಲಿಯೇ ಇರಲು ಬಯಸುತ್ತೀರಿ. ನನಗೆ ಬೇರೆಲ್ಲವು ಕ್ಷುಲ್ಲಕ ಎನಿಸಿಬಿಟ್ಟಿತು. ನನ್ನ ಸಾಧನಪಾದ ನಿಜವಾಗಿ ಆಗ ಶುರುವಾಯಿತು.” - ಪ್ರಾಂಶು, 27, ಮಹಾರಾಷ್ಟ್ರ, ಭಾರತ.

ಈಶ ಯೋಗ ಕೇಂದ್ರವು ಏಕಕಾಲದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಲೇ ಇರುವುದಕ್ಕೆ ಸಾಕ್ಷಿಯಾಗಿದೆ, ಕೆಲವೊಮ್ಮೆ ಒಂದರ ಹಿಂದೆ ಇನ್ನೊಂದು, ಹಾಗಾಗಿ ಆಶ್ರಮವಾಸಿಗಳೆಲ್ಲರಿಗೂ ಸ್ವಯಂಸೇವೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾರ್ಯಕ್ರಮಗಳಲ್ಲಿ ಭಾಗಿಗಳಾಗಲು ಅವಕಾಶವಿರುತ್ತದೆ. ಇದು ಸದ್ಗುರುಗಳ ಆಶಯದಂತೆ ಎಲ್ಲರಿಗೂ ಪರಿವರ್ತಿತರಾಗಲು ಸಾಧನಗಳನ್ನು ನೀಡುವುದಷ್ಟೇ ಅಲ್ಲದೆ, ಪ್ರಬಲವಾದ ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ಭಾಗಿಗಳಾಗಲು ಅವಕಾಶವನ್ನೂ ಒದಗಿಸುತ್ತದೆ.

ಡಮರು ಸೇವಾ  ಮತ್ತು ನಾದ ಸೇವಾ

life-in-sadhanapada-different-flavors-of-seva-vol-doing-damaru-seva

ನೀವೇನಾದರೂ ಈಶ ಕಛೇರಿಗಳಲ್ಲಿ ಒಂದು ಕಾರ್ಪೊರೇಟ್ ಪರಿಸರವನ್ನು ಊಹಿಸಿಕೊಂಡಿದ್ದರೆ, ಅಂಗವಸ್ತ್ರಗಳಿಂದ ಅಲಂಕೃತರಾಗಿ, ನಸುನಗೆಯೊಂದಿಗೆ, ಸಿಡಿಲನಂತೆ ಢಮರಿನ ಝೇಂಕಾರದೊಂದಿಗೆ ಬರುವ ಸ್ವಯಂಸೇವಕರನ್ನು ನೋಡಿ, ಆ ನಿಮ್ಮ ಕಲ್ಪನೆ ನುಚ್ಚು ನೂರಾಗುತ್ತದೆ. ಅವರು ತಮ್ಮ ಮಧ್ಯಾಹ್ನದ ಗಸ್ತಿನಲ್ಲಿ ಆಶ್ರಮದೆಲ್ಲೆಡೆ ಓಡಾಡುತ್ತಾ, ಪ್ರತಿಯೊಬ್ಬರೂ ಹುರುಪಿನಿಂದ ಮತ್ತು ಸಂಪೂರ್ಣ ಜಾಗೃತರಾಗಿ ಇರುವಂತೆ ಮಾಡುತ್ತಾರೆ! ಇದರಲ್ಲಿ ಭಾಗಿಯಾಗಲು ನೀವು ಸಂಗೀತಗಾರನಾಗಿರಬೇಕಿಲ್ಲ ಮತ್ತು ಇದಕ್ಕೆ ಮುಖ್ಯ ಅರ್ಹತೆಯೆಂದರೆ, ಮಾಡುವ ಇಚ್ಛೆ ಇರುವುದು.

ಢಮರು ಸೇವೆಯ ಮೊದಲ ಅನುಭವ

“ಸಾಮಾನ್ಯ ಸ್ವಯಂಸೇವೆ ಮಾಡುತ್ತಿದ್ದ ಸಂದರ್ಭದಲ್ಲಿ, ಅಂಗವಸ್ತ್ರ ಧರಿಸಿ ಢಮರು, ತಂಬೂರಿ ನುಡಿಸುತ್ತಾ, ಆಶ್ರಮದೆಲ್ಲೆಡೆ ಓಡಾಡುತ್ತಿದ್ದವರನ್ನು ಮೊದಲ ಸಲ ನೋಡಿ, ಆಗ ನನಗೂ ಇಂತಹ ಒಂದು ಅವಕಾಶ ಸಿಗುತ್ತದೆಯೇ ಎಂದು ಯೋಚಿಸುತ್ತಿದ್ದೆ. ಸಾಧನಪಾದದಲ್ಲಿದ್ದ ಕೆಲವು ವಾರಗಳಲ್ಲೇ, ನನ್ನ ತಂಡದವರಿಗೆ ಢಮರು ಸೇವೆ ಮಾಡಲು ಆಸಕ್ತಿಯಿದೆಯೇ ಎಂದು ಕೇಳಿದರು. ಹೊರಗಡೆಯ ಬಿಸಿಲನ್ನು ನೋಡಿ, ನಾನು ಈ ಚಟುಚಟಿಕೆಯನ್ನು ಮುಗಿಸುತ್ತೇನಾ ಎಂಬ ಹಿಂಜರಿಕೆಯಿತ್ತು. ಆದರೆ, ಒಮ್ಮೆ ನಾವು ಸೇವೆಯನ್ನು ಆರಂಭಿಸಿದ ನಂತರ, ನಿರಾಯಾಸವಾಗಿ ಮುಂದುವರಿಸಿದೆವು. ಆ ಕ್ಷಣಕ್ಕೆ ಬಿಸಿಲೂ ಗಣನೆಗೆ ಬರಲಿಲ್ಲ. ಅದೊಂದು ಸುಂದರವಾದ ಅನುಭವ, ನಾವು ಮುಂದಿನ ತಿಂಗಳು ಮತ್ತೆ ಢಮರು ಸೇವೆ ಮಾಡಬೇಕು ಎಂದು ನಿರ್ಧರಿಸಿಕೊಂಡು ನಮ್ಮ ಶಾಖೆಗೆ ಹಿಂದಿರುಗಿದೆವು.” - ಅಶೀನ್ ಪಾಲ್, 27, ಕರ್ನಾಟಕ, ಭಾರತ.

ಧ್ಯಾನಲಿಂಗದಲ್ಲಿ ಸಂಗೀತ ನುಡಿಸುವಾಗ ಸೃಜನಶೀಲತೆ ತಂತಾನೆ ತೆರೆದುಕೊಳ್ಳುತ್ತದೆ.

“ಧ್ಯಾನಲಿಂಗಕ್ಕೆ ಸಂಗೀತ ಸೇವೆ ಸಲ್ಲಿಸುವುದು ನನ್ನಲ್ಲಿ ಬದಲಾವಣೆಗಳನ್ನು ತಂದಿದೆ. ಗುಮ್ಮಟ್ಟದ ಅಕಾಸ್ಟಿಕ್ಸ್(ಸ್ವರ ತರಂಗಗಳ ಪ್ರಭಾವ) ಬಹಳ ವಿಶಿಷ್ಟ ಹಾಗೂ ಸ್ಫೂರ್ತಿದಾಯಕ- ನಾದವು ಲೀಲಾಜಾಲವಾಗಿ ಹೊಮ್ಮುವಂತೆ ಪ್ರತಿಯೊಂದು ಸ್ವರವೂ ತೀವ್ರತೆ ಮತ್ತು ಸೌಂದರ್ಯವನ್ನು ಪಡೆಯುತ್ತದೆ. ನನಗೆ ಅಲ್ಲಿ ಸಂಗೀತವನ್ನು ರಚಿಸುವುದು ಒಂದು ಎಣೆಯೇ ಇಲ್ಲದ ಅನುಗ್ರಹ ಎನಿಸುತ್ತದೆ ಮತ್ತು ನಾನು ನುಡಿಸುವ ಶೈಲಿ ಮತ್ತು ವಾದ್ಯವನ್ನು ಬಳಸುವ ರೀತಿ ಎಲ್ಲವೂ ಬದಲಾಗಿದೆ. ನಾನು ಧ್ಯಾನಲಿಂಗದಲ್ಲಿ ನುಡಿಸುವಾಗ, ನಾದ ಲಹರಿಯು ತಂತಾನೆ ಹೊರಹೊಮ್ಮುವಂತೆ ಭಾಸವಾಗುತ್ತದೆ. ಆ ಜಾಗದ ಶಕ್ತಿಯು ನನ್ನ ಸಮತೋಲನವನ್ನು ಕಳೆದುಕೊಳ್ಳದೆ, ಸಮರ್ಪಣಾ ಭಾವವನ್ನು ಕಾಯ್ದು ಕೊಳ್ಳುವಂತೆ ಮಾಡುತ್ತದೆ. ನಾನು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತೇನೆ, ನಾದದೊಂದಿಗೆ ಬೆಸೆದುಕೊಳ್ಳುತ್ತೇನೆ ಅಷ್ಟೇ, ಒಂದು ಸುಂದರವಾದ ಪ್ರಪಾತಕ್ಕೆ ಜಾರಿದ ಅನುಭವ..... ನಾನು ನಾನಾಗಿಯೇ ಇರುವುದಿಲ್ಲ.” - ಗ್ಯಾಬ್ರಿಯಲ್, 39, ಬ್ರೆಜಿಲ್

At the ಮಾಟುಮನೆ ಫಾರ್ಮ್ಸ್‍ನಲ್ಲಿ

ಮಾಟು ಮನೆ ಎಂದು ಕರೆಯಲ್ಪಡುವ ಈಶದ ಗೋಮಾಳ, ಗೋವುಗಳಿಗೆ ಒಂದು ಬೆಚ್ಚಗಿನ ಮನೆ. ದನಗಳ ಮತ್ತು ಹಸುಗಳ ಆರೈಕೆ ಮಾಡುವಾಗ, ಗಡಸುತನ ಮತ್ತು ಮೃದುತ್ವ ಎರಡೂ ಬೇಕಾಗುತ್ತದೆ. ಹಾಗಾಗಿ ನಿಮ್ಮ ಬೆಳವಣಿಗೆಗೆ ಇದು ಒಂದು ಸೂಕ್ತ ಸ್ಥಳ.

life-in-sadhanapada-different-flavors-of-seva-vol-at-maatu-mane

ನನ್ನ ಸೀಮಿತತೆಯು ಮುರಿದ ಅನುಭವ

“ಪಶು ವೈದ್ಯೆಯಾದ ನನ್ನನ್ನು, ಮಾಟು ಮನೆ ವಿಭಾಗದಲ್ಲಿ ಸೇವೆಗೆ ಕಳುಹಿಸಲಾಯಿತು. ನಾನು ನನ್ನ ಪಶುವೈದ್ಯಕೀಯ ಅಭ್ಯಾಸವನ್ನು ಮುಂದುವರಿಸಬಹುದೆಂದು ಮೊದಲಿಗೆ ಬಹಳ ಸಂತೋಷ ಪಟ್ಟೆ. ಆದರೆ ದಿನ ಕಳೆದಂತೆ, ವೈದ್ಯಕೀಯವಷ್ಟೇ ಅಲ್ಲದೆ, ಅವುಗಳಿಗೆ ಉಣಿಸುವುದು, ನೀರು ಕುಡಿಸುವುದು, ಸಗಣಿ ತೆಗೆದು ಸ್ವಚ್ಚ ಮಾಡುವುದು ಮತ್ತು ಅದನ್ನು ಗಿಡ ಮರಗಳನ್ನು ಬೆಳೆಸಲು ಗೊಬ್ಬರವನ್ನಾಗಿ ಬಳಸುವುದು, ಹೀಗೆ ಅನೇಕ ಕೆಲಸಗಳಿದ್ದವು. ಇವುಗಳನ್ನೆಲ್ಲ ಮಾಡುವಾಗ, ಈ ಕೆಲಸಗಳ ಬಗ್ಗೆ ನಾನು ಎಷ್ಟು ಪ್ರತಿರೋಧದ ಪದರಗಳನ್ನು ಹೊಂದಿದ್ದೆ ಎಂಬ ಆರಿವು ನನಗಾಯಿತು. ನಾನು ಹಿಂದೆಂದೂ ಇಷ್ಟು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿರಲಿಲ್ಲ ಮತ್ತು ನನ್ನ ಸುತ್ತಲಿನ ಪರಿಸರದ ವೈಭವದ ಅನುಭವ ನನಗಾಯಿತು. ನಿಜ ಹೇಳಬೇಕೆಂದರೆ ನನ್ನ ಪ್ರತಿರೋಧದ ಪದರಗಳು ಕಳಚಿ ಬೀಳುತ್ತಿವೆ. ಈಗ ಮೂರು ತಿಂಗಳಿನಿಂದ ನಾನು ಇಲ್ಲಿ ಸೇವೆ ಮಾಡುತ್ತಿದ್ದೇನೆ, ಹಿಂತಿರುಗಿ ನೋಡಿದಾಗ, ನಾನೀಗ ಬದಲಾದ ಮನುಷ್ಯಳಾಗಿದ್ದೇನೆ ಎಂಬುದು ನನ್ನ ಅರಿವಿಗೆ ಬಂದಿದೆ. ನನ್ನ ಈ ಬದಲಾವಣೆಗೆ ಕಾರಣರಾದ ಸೇವೆಯಲ್ಲಿ ನನ್ನ ಜೊತೆಯಲಿದ್ದ ಎಲ್ಲರಿಗೂ, ಮತ್ತು ನನ್ನ ಮಾರ್ಗದರ್ಶಕರಿಗೂ ನಾನು ಋಣಿಯಾಗಿದ್ದೇನೆ.“ - ಸೋನಿಕಾ, 24, ಕರ್ನಾಟಕ, ಭಾರತ.

ಪೃಥ್ವಿ ಪ್ರೇಮ ಸೇವಾ

life-in-sadhanapada-different-flavors-of-seva-vol-prithvi-prema-seva-planting-tree

ಪ್ರಕೃತಿಯ ಜೊತೆಯ್ಲಲೇ ಇದ್ದು ಮಣ್ಣು ಮತ್ತು ಸೂರ್ಯನೊಂದಿಗೆ ಬೆರೆತುಹೋಗಲು ಇರುವ ಒಂದು ಅದ್ಭುತ ಅವಕಾಶ. ಜನರು ಯೋಗದ ಮೂಲ ಅಂಶವಾದ ಪಂಚಭೂತಗಳ ಜೊತೆ ಆಳವಾಗಿ ಬೆಸೆದುಕೊಳ್ಳುವ ಅವಕಾಶ ಒದಗಿಸುವಂತೆ ಸದ್ಗುರುಗಳು ರೂಪಿಸಿರುವ ಸೇವೆ ಪೃಥ್ವಿ ಪ್ರೇಮ ಸೇವಾ.

ವೃತ್ತಿಯಿಂದ ಒಬ್ಬ ಇಂಜಿನಿಯರ್, ಹಾಡುಗಾರ, ಅಕೌಂಟೆಂಟ್, ಮತ್ತು ಸಾಫ್ಟ್‍ವೇರ್ ಡೆವೆಲಪರ್‍‍ನಂಥವರು ಸಾಧನಪಾದಕ್ಕೆ ಬಂದು ಘಂಟೆಗಟ್ಟಲೆ ಇಂತಹ ದೈಹಿಕ ಪರಿಶ್ರಮದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಹೇಗಿರಬಹುದೆಂದು ಊಹಿಸಿಕೊಳ್ಳಿ. ಭವ್ಯವಾಗಿರುವ ವೆಳ್ಳಯನಗಿರಿ ಬೆಟ್ಟದ ಹಿನ್ನೆಲೆಯಲ್ಲಿ, ಪ್ರಕೃತಿಗೆ ಬಹಳ ಹತ್ತಿರವಾಗಿ ಇದ್ದು, ಇಂತಹ ಸವಾಲನ್ನು ಸಂತೋಷದಿಂದ ಸ್ವೀಕರಿಸುವುದು ಒಂದು ಆಶಿರ್ವಾದ.

ಪೃಥ್ವಿ ಪ್ರೇಮ ಸೇವಾ ಚಟುವಟಿಕೆಯಲ್ಲಿ ಸಸಿಗಳನ್ನು ನೆಡುವುದು, ಕಳೆ ಕೀಳುವುದು, ಹೂವುಗಳನ್ನು ಬಿಡಿಸುವುದು, ಹತ್ತಿರದ ತೋಟಗಳಿಗೆ ಹೋಗಿ ಸೀಬೆಹಣ್ಣು, ನಿಂಬೆ ಹಣ್ಣು ಮತ್ತು ಸೀತಾಫಲ (ಹಣ್ಣು ಬಿಡಿಸುವಾಗ ತಿನ್ನುವಂತಿಲ್ಲ!) ಮುಂತಾದ ಹಣ್ಣುಗಳನ್ನು ಬಿಡಿಸುವ ಕೆಲಸ ಇರುತ್ತದೆ.

ಜೀವನ ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನೂ ಮೀರಿ ದೊಡ್ಡದಾಗುತ್ತಿದೆ.

“ನಿಸರ್ಗ ಪ್ರೇಮಿಯಾದ ನನಗೆ, ಪೃಥ್ವಿ ಪ್ರೇಮ ಸೇವಾದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದಾಗ ಬಹಳ ಉತ್ಸುಕಳಾದೆ. ಮೊದಲು, ಒಂದು ತಿಂಗಳು ನಾವು ಸಂಪೂರ್ಣವಾಗಿ ಬಿಸಿಲು, ಮಳೆ ಮತ್ತು ಇಡೀ ದಿನ ಮಣ್ಣಿನಲ್ಲೇ ಇರುತ್ತಿದ್ದುದರಿಂದ, ಬಹಳ ಕಷ್ಟವಾಯಿತು. ಒಮ್ಮೆ ದೈಹಿಕವಾಗಿ ನಾನು ಅದಕ್ಕೆ ಹೊಂದಿಕೊಂಡ ಮೇಲೆ, ನಾನು ಅದನ್ನು ಆನಂದಿಸಲು ಪ್ರಾರಂಭಿಸಿದೆ. ಜೀವನ ಎಲ್ಲ ಕಡೆಯೂ ಮಿಡಿಯುತ್ತಿದೆ ಎಂದು ಸದ್ಗುರು ಹೇಳುತ್ತಾರೆ - ಆದರೆ, ನಾನು ನನ್ನ ಮಾನಸಿಕ ತೊಳಲಾಟದಲ್ಲಿ ಎಷ್ಟು ಮುಳುಗಿ ಹೋಗಿದ್ದೆನೆಂದರೆ, ನನ್ನ ಸುತ್ತ ಮುತ್ತ ಏನನ್ನೂ ಗಮನಿಸಲೂ ಸಮಯವಿಲ್ಲದ ಹಾಗೆ. ಈಗ, ಆ ಕ್ರಿಮಿ-ಕೀಟಗಳು, ಸುಂದರವಾದ ಚಿಟ್ಟೆಗಳು, ಆಗ ತಾನೇ ಮೊಳಕೆಯೊಡೆಯುತ್ತಿರುವ ಹುಲ್ಲಿನ ಗರಿ, ಎಲ್ಲವನ್ನು ಕೂಡ ನಾನು ಸಂತೋಷದಿಂದ ಮತ್ತು ಗೌರವದಿಂದ ಕಾಣುತ್ತೇನೆ, ಇದು ನನ್ನ ವ್ಯಕ್ತಿತ್ವವನ್ನು ಕರಗಿಸುತ್ತಿದೆ.” - ಗೌರಿ, 28, ಮಹಾರಾಷ್ಟ್ರ, ಭಾರತ.

life-in-sadhanapada-different-flavors-of-seva-vol-prithvi-prema-seva-pic1

ನನ್ನ ಸಾಂಪ್ರದಾಯಿಕ ಎಲ್ಲೆಯನ್ನು ಹಿಗ್ಗಿಸಿದೆ

“ತೋಟಗಳಿಗೆ ಪ್ರತಿದಿನ ಹೋಗುವುದರಿಂದ ಮತ್ತು ಎಲ್ಲಾ ರೀತಿಯ ಜನಗಳೊಂದಿಗೆ ಬೆರೆಯುವುದರಿಂದ, ನಾನು ಸಾಂಪ್ರದಾಯಿಕವಾಗಿ ಶ್ರೀಮಂತವಾಗುತ್ತಿರುವ ಅನುಭವವಾಗುತ್ತದೆ. ಏಕೆಂದರೆ, ‘ನಾವೆಲ್ಲಾ ಒಂದೇ, ಎಲ್ಲರೂ ಒಂದೇ ರೀತಿಯ ಮನುಷ್ಯರು,” ಆದರೆ ನಮ್ಮ ಸಂಪ್ರದಾಯಗಳಲ್ಲಿ ಎಲ್ಲೋ ಒಂದಿಷ್ಟು ನವುರಾದ ವ್ಯತ್ಯಾಸಗಳಿರುತ್ತವೆ ಅಷ್ಟೇ. ಈ ವ್ಯತ್ಯಾಸಗಳನ್ನು ಗಮನಿಸುವುದು ಮತ್ತು ಭಾರತದಾದ್ಯಂತ ಹಾಗೂ ಪ್ರಪಂಚದಾದ್ಯಂತ ಸ್ನೇಹಿತರನ್ನು ಮಾಡಿಕೂಳ್ಳುವುದು ಒಂದು ರೀತಿ ಸಂತೋಷವೆನಿಸುತ್ತದೆ.” - ಮೈಕಸ್, 32, ಲಾಟ್ವಿಯಾ

ಸಂಪಾದಕರ ಟಿಪ್ಪಣಿ: ಸಾಧನಪಾದದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಮತ್ತು ಮುಂಬರಲಿರುವ ತಂಡಕ್ಕೆ ಪೂರ್ವ ನೋಂದಣಿಗಾಗಿ ಇಲ್ಲಿ ಸಂಪರ್ಕಿಸಿ.