ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆ ತಲೆದೋರಿದರೆ, ನೀವು ಅದನ್ನು ಬಿಟ್ಟುಬಿಡಲು ಪ್ರಯತ್ನಿಸಬಹುದು. “ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲಾಗದಿದ್ದರೆ, ಅದನ್ನು ಹೋಗಲು ಬಿಡಿ, ಶರಣಾಗಿ.” ಎಂದು ಜನ ನಿಮಗೆ ಹೇಳುತ್ತಿದ್ದಾರೆ, ನೀವೇನೋ ಅದನ್ನು ಹೋಗಲು ಬಿಡಬಹುದು, ಆದರೆ ಆ ನಿಮ್ಮ ಸಮಸ್ಯೆ ನಿಮ್ಮನ್ನು ಹೋಗಲು ಬಿಡದೇ ಇರಬಹುದು. ಯಾವಾಗಲೂ ಹೀಗೇ ಆಗುವುದು - ಜನ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ, ಆದರೆ ಹಿಂದಿರುಗಿಸಲು ಸಾಧ್ಯವಾಗುವುದಿಲ್ಲ. ಅವರು ಸಾಲವನ್ನು ಬಿಟ್ಟುಬಿಡಲು ಬಯಸುತ್ತಾರೆ, ಆದರೆ ಬ್ಯಾಂಕ್ ಅವರನ್ನು ಬಿಡುವುದಿಲ್ಲ. ಜೀವನವೂ ಹಾಗೆಯೇ - ನೀವು ಯಾವುದಾದರೂ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರಿ ಎಂದರೆ, ಅದು ಸಾಲದ ತರಹ. ದುಡ್ಡಿನಿಂದಲ್ಲ, ಆದರೆ, ಜೀವನದಿಂದ. ನೀವು ಬುದ್ಧಿವಂತರಾದರೆ, ಅದನ್ನು ಒಂದು ರೀತಿಯಲ್ಲಿ ಹಿಂದಿರುಗಿಸುತ್ತೀರಿ, ಇಲ್ಲವಾದರೆ, ಇನ್ನೊಂದು ರೀತಿಯಲ್ಲಿ ಹಿಂದಿರುಗಿಸುತ್ತೀರಿ, ಆದರೆ, ಹಿಂದಿರುಗಿಸಲೇಬೇಕು.

ಜೀವನದಲ್ಲಿ, ಯಾವುದೇ ಸಮಸ್ಯೆಗಳಿಲ್ಲ - ಇರುವುದು ಕೇವಲ ಸಂದರ್ಭಗಳಷ್ಟೆ.

ಪ್ರತಿಯೊಂದು ಸಮಸ್ಯೆಯೂ ಸಮಸ್ಯೆಯಾಗಿರುವುದು ನೀವದನ್ನು ಹಾಗೆ ಕರೆಯುವುದರಿಂದ ಮಾತ್ರ. ಜೀವನದಲ್ಲಿ, ಯಾವುದೇ ಸಮಸ್ಯೆಗಳಿಲ್ಲ - ಇರುವುದು ಕೇವಲ ಸಂದರ್ಭಗಳಷ್ಟೆ. ಎಲ್ಲವೂ ಒಂದು ಸಂದರ್ಭ. ನೀವು ಅದನ್ನು “ಸಮಸ್ಯೆ” ಎಂದು ಕರೆದರೆ ಅದು ಸಮಸ್ಯೆಯಾಗುತ್ತದೆ. ನೀವು ಅದನ್ನು “ಅದ್ಭುತ” ಎಂದರೆ ಅದು ಅದ್ಭುತವಾಗುತ್ತದೆ. ಎಲ್ಲೋ, ಯಾರೋ ಮದುವೆಯಾಗುತ್ತಿದ್ದಾರೆ, ಆದರೆ ಅವರಿಗದು ಇಷ್ಟವಿರುವುದಿಲ್ಲ. ಅವರು ಅದನ್ನು ದೊಡ್ಡ ಸಮಸ್ಯೆ ಎಂದುಕೊಳ್ಳುತ್ತಾರೆ. ಇದರಿಂದ ಅವರೆಷ್ಟು ದುಃಖಕ್ಕೊಳಗಾಗುತ್ತಾರೆಂದು ನಿಮಗೆ ಗೊತ್ತಿದೆಯಲ್ಲ? ಮತ್ತೊಬ್ಬರ್ಯಾರೋ ಸಹ ಮದುವೆಯಾಗುತ್ತಿರುತ್ತಾರೆ, ಆದರೆ ಅವರು ಇಷ್ಟಪಟ್ಟು ಮದುವೆಯಾಗುತ್ತಿರುತ್ತಾರೆ - ಅಂದು ಅವರಿಗೆ ಎಂತಹ ಸುದಿನವಾಗಿರುತ್ತದೆಂದು ನಿಮಗೆ ಗೊತ್ತು ತಾನೆ? ಜೀವನದಲ್ಲಿ ಎಲ್ಲವೂ ಒಂದು ಸನ್ನಿವೇಶ ಅಷ್ಟೇ. ಅದು ಸಮಸ್ಯೆಯೋ ಅಲ್ಲವೋ ಎನ್ನುವುದು ನೀವು ಅದನ್ನು ಸ್ವೀಕರಿಸುವ ರೀತಿಯಲ್ಲಿದೆ. ಯಾವುದೇ ಸನ್ನಿವೇಶವನ್ನು ಬಿಗಿಯಾಗಿದೆ ಎನ್ನಲಾಗುವುದಿಲ್ಲ, ಏಕೆಂದರೆ, ಪ್ರತಿಯೊಂದು ಸನ್ನಿವೇಶವೂ ರೂಪುಗೊಳ್ಳುತ್ತಿರುತ್ತದೆ. ನೀವು ಆ ಸನ್ನಿವೇಶದಲ್ಲಲ್ಲದೆ, ಬೇರೆ ಕಡೆ ಇರಲು ಬಯಸಿದರೆ, ಮೊದಲು ಕೂಲಂಕುಷವಾಗಿ ಆ ಪರಿಸ್ಥಿತಿನ್ನು ಪರಿಶೀಲಿಸಿ, ಆಗ ನಿಮಗೆ ದಾರಿಗಳು ಎಲ್ಲಿವೆ ಎಂದು ಕಾಣುತ್ತದೆ. ನಿಮಗೆ ಸ್ವಲ್ಪ ಶುದ್ಧವಾದ ಗಾಳಿ ಬೇಕೆಂದರೆ, ಒಂದು ಕಿಟಕಿಯನ್ನು ತೆಗೆದು ಸ್ವಲ್ಪ ಆರಾಮವಾಗಿರಬಹುದು. ಆದರೆ, ನಿಮಗೆ ಹೊರಗೆ ಹೋಗಬೇಕೆಂದಾದರೆ, ಬಾಗಿಲು ತೆಗೆದು ಹೊರನಡೆಯಬಹುದು, ಅದು ನಿಮ್ಮ ಆಯ್ಕೆ. ನೀವು ಅಲ್ಲೇ ಇದ್ದರೂ ಒಂದು ರೀತಿಯ ಪರಿಣಾಮವಿರುತ್ತದೆ, ಮತ್ತು ಹೊರನಡೆದರೂ ಒಂದು ರೀತಿಯ ಪರಿಣಾಮವಿರುತ್ತದೆ, ನೀವದನ್ನು ಎದುರಿಸಲು ತಯಾರಾಗಿದ್ದೀರಾ ಎನ್ನುವುದೇ ಪ್ರಶ್ನೆ?

ಬಹಳಷ್ಟು ಜನರ ಸಮಸ್ಯೆ ಏನೆಂದರೆ, ಅವರಿಗೆ ಪರಿಸ್ಥಿತಿಗಳು ಬೇಕು, ಆದರೆ ಅದಕ್ಕೆ ತೆರಬೇಕಾದ ಬೆಲೆ ಮಾತ್ರ ಬೇಡ ಅಷ್ಟೆ. ನಿಮಗೆ ಬಟ್ಟೆಗಳನ್ನು ಕೊಳ್ಳಲು ಅಸೆ, ಆದರೆ ಅದರ ಬೆಲೆ ಇಷ್ಟವಾಗಿಲ್ಲ ಎಂದರೆ ನೀವೊಬ್ಬ ಕಳ್ಳನಾಗಿ ಬಿಡಿ. ನೀವು ಕಳ್ಳನಾಗಿಬಿಟ್ಟರೆ ಎಲ್ಲವೂ ಉಚಿತವಾಗಿಯೇ ದೊರೆಯುತ್ತದೆ, ಆದರೆ ಯಾವಾಗಲೂ ಭಯದಲ್ಲಿಯೇ ಬದುಕಬೇಕಾಗುತ್ತದೆ, ಮತ್ತು ಯಾವಾಗ ಬೇಕಾದರೂ “ಜೈಲಿನ ಅತಿಥಿ”ಯಾಗಬಹುದು. ಇದು ನಿಮಗೆ ಇಷ್ಟವಿಲ್ಲದಿದ್ದರೆ, ನಿಮಗೆ ಏನೇ ಬೇಕಾದರೂ, ಅದಕ್ಕೊಂದು ಬೆಲೆ ತೆರಲೇಬೇಕು. ನಿಮ್ಮ ಜೀವನದಲ್ಲಿ ಅದಕ್ಕೆ ತೆರಬೇಕಾದ ಬೆಲೆಗೆ ಅದು ಯೋಗ್ಯವಾಗಿದೆಯೋ ಇಲ್ಲವೋ ಎಂಬುದನ್ನು ಅಂದಾಜು ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ.

ನಿಮಗೆ ಬೇಕಾದ ಯಾವುದಾದರೊಂದು ವಸ್ತುವಿನ ಬೆಲೆ ಹತ್ತು ರೂಪಾಯಿ ಎಂದಿಟ್ಟುಕೊಳ್ಳಿ, ನೀವದನ್ನು ಖರೀದಿಸಲು ನಿರ್ಧರಿಸಿಬಹುದು, ಆದರೆ ಅದು ಹನ್ನೊಂದು ರೂಪಾಯಿಯಾದರೆ, ನೀವದನ್ನು ಖರೀದಿಸದೇ ಇರಬಹುದು. ಅದು ನಿಮ್ಮ ತೀರ್ಮಾನ. ಹಾಗೆಯೇ ಪ್ರತಿಯೊಂದು ಪರಿಸ್ಥಿತಿಯಲ್ಲೂ, ಹಣ-ಕಾಸಿನ ಸನ್ನಿವೇಶವಷ್ಟೇ ಅಲ್ಲ, ಯಾವುದೇ ಪರಿಸ್ಥಿತಿಯಾದರೂ ಸಹ ಅದಕ್ಕೆ ಅದರದ್ದೇ ಆದ ಬೆಲೆ ಇರುತ್ತದೆ. ಅದಕ್ಕೆ ಅಷ್ಟು ಬೆಲೆಯನ್ನು ಕೊಡಬಹುದೇ ಇಲ್ಲವೇ ಎಂಬುದನ್ನು ನೀವೇ ನಿರ್ಣಯಿಸಬೇಕು. ನೀವಷ್ಟೇ ಅದನ್ನು ಮಾಡಲು ಸಾಧ್ಯ. ನಾನು ಆ ಪರಿಸ್ಥಿತಿಯನ್ನು ಬೇರೆಯದ್ದೇ ದೃಷ್ಟಿಕೋನದಿಂದ ನೋಡಬಹುದು ಮತ್ತು ನನಗದು ಹಾಸ್ಯಾಸ್ಪದವೆನಿಸಬಹುದು, ಆದರೆ ನಿಮಗೆ ಅದು ಅತಿ ಮುಖ್ಯವಾದುದ್ದಾಗಿರಬಹುದು. ಹಾಗಾಗಿ ಅದನ್ನು ಬೇರೆ ಯಾರೂ ನಿರ್ಧರಿಸಬಾರದು. ಆ ನಿಮ ಸನ್ನಿವೇಶಕ್ಕೆ ಅದು ತಕ್ಕ ಬೆಲೆಯೇ ಮತ್ತು ಅಷ್ಟು ಬೆಲೆ ತೆರಲು ನೀವು ಸಿದ್ಧರಿದ್ದೀರೇ ಎಂಬುದನ್ನು ನೀವು ನಿರ್ಧರಿಸಬೇಕು. ಒಮ್ಮೆ ನಿರ್ಧರಿಸಿದರೆ ಅದನ್ನು ಸಂತೋಷದಿಂದ ಕೊಟ್ಟುಬಿಡಿ. ನೀವದನ್ನು ಸಂತೋಷದಿಂದ ಕೊಡದೇ ಹೋದರೆ, ಅದು ನಿಮ್ಮ ಬಳಿ ಇರುತ್ತದೆಯಷ್ಟೆ, ಆದರೆ ನೀವು ಬಹಳ ಸಂಕಟವನ್ನು ಅನುಭವಿಸುತ್ತೀರಿ. ಒಮ್ಮೆ ನೀವು ನಿರ್ಣಯಿಸಿದ ಮೇಲೆ ತಪ್ಪು-ಒಪ್ಪಿನ ಪ್ರಶ್ನೆ ಬರುವುದಿಲ್ಲ. “ಒಳ್ಳೆಯ ಜೀವನ” ಎನ್ನುವಂತದ್ದು ಯಾವುದೂ ಇಲ್ಲ. ಆದರೆ ನೀವು ಮಾಡುವುದೆಲ್ಲವನ್ನೂ ಮನಃಪೂರ್ವಕವಾಗಿ ಮಾಡಿದರೆ, ಅದೇ ಉತ್ತಮವಾದ ಜೀವನ. ನೀವು ಮಾಡುವ ಕೆಲಸದಲ್ಲಿ ನಿಮ್ಮನ್ನು ನೀವು ಸಂಪೂರ್ಣವಾಗಿ ತೊಡಗಿಸಿಕೊಂಡರೆ, ಅದು ಎಷ್ಟೇ ಸರಳವಾದ ಸಂಗತಿಯಾದರೂ ನಿಮಗದು ಅದ್ಭುತವೆನಿಸಬಹುದು. ಬೇರೆಯವರು ನಿಮ್ಮ ಜೀವನವನ್ನು ನೋಡಿ ಅಪಹಾಸ್ಯ ಮಾಡಬಹುದು, ಅದು ಅವರ ಸಮಸ್ಯೆ. ನಿಮ್ಮ ಅನುಭವದಲ್ಲಿ, ನಿಮ್ಮ ಜೀವನ ಶ್ರೇಷ್ಠವಾದುದು ಮತ್ತು ಅದಷ್ಟೇ ಮುಖ್ಯವಾಗುವುದು.

ಜೀವನದಲ್ಲಿ ಯಾವುದೇ ಪರಿಸ್ಥಿತಿಗಳು ಇಲ್ಲದೇಯಿರುವುದೇ ಒಂದು ದೊಡ್ಡ ಸಮಸ್ಯೆ, ಮತ್ತು ಅದರರ್ಥ ಜೀವನ ಜಡವಾಗಿದೆ ಎಂದು.

ಹಾಗಾಗಿ, ನೀವು ಯಾವುದೇ ಸಂದರ್ಭವನ್ನು ತೀರ್ಮಾನಿಸಬೇಕೆಂದರೆ, ಅದರಲ್ಲಿ ತೊಡಗಿಸಿಕೊಳ್ಳಬೇಕು, ಬಿಟ್ಟು ಬಿಡುವುದಲ್ಲ. ಯಾವುದೇ ಪರಿಸ್ಥಿತಿಯಲ್ಲಿ, ನಿಮ್ಮನ್ನು ನೀವು ತೊಡಗಿಸಿಕೊಂಡು, ಅದರ ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಂಡಾಗ, ಏನನ್ನಾದರೂ ನಿರ್ಧರಿಸಲು ಸಾಧ್ಯ. ನೀವು ಸಂಪೂರ್ಣವಾಗಿ ಅರ್ಥಮಾಡಿಕೊಂಡು ತೆಗೆದುಕೊಳ್ಳುವ ನಿರ್ಣಯ ಬಹಳ ಅಮೂಲ್ಯವಾದುದು. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ತೆಗೆದುಕೊಳ್ಳುವ ನಿರ್ಣಯಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಆದ್ದರಿಂದ ಪರಿಸ್ಥಿತಿ ಏನೇ ಇರಲಿ, ಅದನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ, ಅದರಿಂದ ದೂರ ಓಡಬೇಡಿ. ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳಿ. ನೀವು ತೊಡಗಿಸಿಕೊಂಡಾಗ ಆ ಪರಿಸ್ಥಿತಿ ಅರ್ಥವಾಗುತ್ತದೆ. ಅದು ಅರ್ಥವಾದಾಗ ನಿಮ್ಮ ಜೀವನದಲ್ಲಿ ಆ ಪರಿಸ್ಥಿತಿ ಎಷ್ಟು ಬೆಲೆಬಾಳುವಂತದ್ದು ಎಂದು ನಿಮಗೆ ತಿಳಿಯುತ್ತದೆ. ನೀವು ಅದರಲ್ಲಿದ್ದರೆ ಒಂದು ಬೆಲೆ ತೆರಬೇಕಾಗುತ್ತದೆ, ಇಲ್ಲದಿದ್ದರೆ ಒಂದು ಬೆಲೆ ತೆರಬೇಕಾಗುತ್ತದೆ. ಯಾವ ಬೆಲೆ ತೆರಲು ನೀವು ಸಿದ್ಧರಿದ್ದೀರಿ ಎಂದು ನೋಡಿ. ಸರಿಯಾದ ನಿರ್ಣಯ ಎನ್ನುವುದು ಯಾವುದೂ ಇಲ್ಲ. ನಿಮ್ಮ ಜೀವನದಲ್ಲಿ ಅದು ಎಷ್ಟು ಸೂಕ್ತ ಎನ್ನುವುದಷ್ಟೇ ಪ್ರಶ್ನೆ.

ಪರಿಸ್ಥಿತಿಗಳ ನಿರಂತತೆಯೇ ಜೀವನ. ನೀವು ಬೆಳವಣಿಗೆಯ ಪಥದಲ್ಲಿದ್ದರೆ, ನೀವು ನಿಭಾಯಿಸಲಾಗದಂತಹ ನಾನಾ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಈ ಪರಿಸ್ಥಿತಿಗಳು ಸವಾಲಾಗಿರಬಹುದು ಆದರೆ ಸಮಸ್ಯೆಯಂತೂ ಖಂಡಿತ ಅಲ್ಲ. ಜೀವನದಲ್ಲಿ ಯಾವುದೇ ಪರಿಸ್ಥಿತಿಗಳು ಇಲ್ಲದೇಯಿರುವುದೇ ಒಂದು ದೊಡ್ಡ ಸಮಸ್ಯೆ, ಮತ್ತು ಅದರರ್ಥ ಜೀವನ ಜಡವಾಗಿದೆ ಎಂದು. ನೀವು ಸದಾ ಕಾಲ ಬೆಳವಣಿಗೆಯ ಹಾದಿಯಲ್ಲಿ ಇರಬೇಕೆಂದು ಬಯಸಿದರೆ, ನೀವು ಯಾವಾಗಲೂ ನಿಮಗೆ ನಿಭಾಯಿಸಲಾಗದಂತಹ ಹೊಸ ಹೊಸ ಪರಿಸ್ಥಿತಿಗಳನ್ನು ಎದುರಾಗುತ್ತಿರಬೇಕಾಗುತ್ತದೆ. ನೀವು ಇಂತಹ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೀರೆಂದರೆ, ನೀವು ಮಹತ್ತರವಾದ ಸಂಭವನೀಯತೆಯ ಬದುಕನ್ನು ಬದುಕುತ್ತಿದ್ದೀರಿ ಎಂದರ್ಥ.

Love & Grace