ಯೋಗ ಪಥದಲ್ಲಿ, ದೇವರನ್ನು ಜೀವದ ಮೂಲವಾಗಿ ಪರಿಗಣಿಸಲಾಗುವುದಿಲ್ಲ, ಬದಲಾಗಿ ಜೀವದ ಪರಮೋತ್ಕೃಷ್ಟ ವಿಕಸನವಾಗಿ ನೋಡಲಾಗುತ್ತದೆ ಎಂದು ಸದ್ಗುರುಗಳು ವಿವರಿಸುತ್ತಾರೆ. ಈ ಹಂತವನ್ನು ತಲುಪುವುದು ಹೇಗೆ? ಯೋಗದ ಸಂಪೂರ್ಣ ವಿಜ್ಞಾನವು ಒಂದು ಉತ್ತಮವಾದ ಆರೈಕೆಯ ಪ್ರಕ್ರಿಯೆಯಾಗಿದೆ ಎಂದು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ಯೋಗದಲ್ಲಿ ಪರಮ ವಿಕಸನದ ಸಾಂಕೇತಿಕತೆಯು ಒಂದು ಹೂವಾಗಿದೆ, ಏಕೆಂದರೆ ಯೋಗ ಮಾರ್ಗದಲ್ಲಿ ದೇವರನ್ನು ಜೀವದ ಪರಮ ಅರಳುವಿಕೆಯಾಗಿ ನೋಡಲಾಗುತ್ತದೆ; ದೇವರನ್ನು ಸೃಷ್ಟಿಕರ್ತ ಅಥವಾ ಜೀವದ ಮೂಲಾಂಶವಾಗಿ ನೋಡಲಾಗುವುದಿಲ್ಲ. ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯೋಗಕ್ಕೆ ಆಸಕ್ತಿಯಿಲ್ಲ. ನೀವು ಎಲ್ಲಿಗೆ ಹೋಗಲಿದ್ದೀರಿ ಎಂಬುದರ ಬಗ್ಗೆ ಮಾತ್ರ ಅದಕ್ಕೆ ಆಸಕ್ತಿ. ಆದರೆ ಸದ್ಯದಲ್ಲಿ ಇರುವುದನ್ನು ಕಡೆಗಣಿಸಿ ಇನ್ನೂ ಆಗಿಲ್ಲದಿರುವುದರ ಬಳಿಸಾರಲು ಸಾಧ್ಯವಿಲ್ಲ. ಆದ್ದರಿಂದ ಇರುವುದರಲ್ಲಿ ನಾವು ನಮಗಾಗಿ ಸ್ವಲ್ಪ ಸ್ಥಳಾವಕಾಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಹೊರತುಪಡಿಸಿದರೆ, ಈಗ ಇರುವುದು ಅಥವಾ ಹಿಂದೆ ಇದ್ದುದರಲ್ಲಿ ನಮಗೆ ಆಸಕ್ತಿಯಿಲ್ಲ. ನಮ್ಮ ಆಸಕ್ತಿಯಿರುವುದೇನಿದ್ದರೂ "ಇನ್ನೂ ಆಗಬೇಕಿರುವುದರಲ್ಲಿ".

ಬೀಜದ ಆರೈಕೆ

ಎಲ್ಲರೂ ದೇವರನ್ನು ತಂದೆಯಾಗಿ ನೋಡುವಂತೆ, ನಾವು ಅವನನ್ನು ತಂದೆಯಾಗಿ ನೋಡುವುದಿಲ್ಲ. ಇದರರ್ಥ, ನಾವು ನಮ್ಮ ವಂಶಾವಳಿಯನ್ನು ತ್ಯಜಿಸುತ್ತಿದ್ದೇವೆ ಎಂದು. ದೇವರೆಂದರೆ, ನಿಮ್ಮ ಗರ್ಭದಲ್ಲಿ ಇರಿಸಿಕೊಳ್ಳಬಹುದಾದಂತದ್ದು ಎಂದು ನಾವು ನೋಡುತ್ತೇವೆ. ನೀವದನ್ನು ಪೋಷಿಸಿದರೆ, ನೀವದಕ್ಕೆ ಜನ್ಮ ನೀಡಬಹುದು. ಮತ್ತು ನೀವದನ್ನು ಪೋಷಿಸದೇ ಹೋದರೆ, ಅದು ನಿಮ್ಮೊಳಗೆ ಶಾಶ್ವತವಾಗಿ ಬೀಜವಾಗಿಯೇ ಉಳಿದುಹೋಗುತ್ತದೆಯಷ್ಟೆ.

ಯೋಗದ ಸಂಪೂರ್ಣ ವಿಜ್ಞಾನ ಮತ್ತು ನಾವು ಆಧ್ಯಾತ್ಮಿಕತೆ ಎಂದು ಕರೆಯುವ ಪ್ರಕ್ರಿಯೆಯು ಕೇವಲ ಬೀಜದ ಉತ್ತಮ ಪೋಷಣೆಯ ಬಗ್ಗೆಯಾಗಿದೆ - ಬೀಜವು ಹೂವಾಗಿ ಅರಳಲು ಅದರ ಉತ್ತಮ ಆರೈಕೆ ಮಾಡುವುದಾಗಿದೆ.

ಹೂವಿನ ಸೌಂದರ್ಯ ಹಾಗೂ ಸುಗಂಧ ಮತ್ತು ಹಣ್ಣಿನ ರುಚಿ ಹಾಗೂ ಅದು ನೀಡುವ ಪೋಷಣೆಯ ಕಾರಣದಿಂದಾಗಿ ಮಾತ್ರ ನಮಗೆ ಬೀಜದ ಬಗ್ಗೆ ಆಸಕ್ತಿಯಿರುವುದು. ಅದಿರದಿದ್ದರೆ ನಮಗೆ ಬೀಜದ ಬಗ್ಗೆ ಆಸಕ್ತಿಯೇ ಇರುತ್ತಿರಲಿಲ್ಲ. ಯೋಗದ ಸಂಪೂರ್ಣ ವಿಜ್ಞಾನ ಮತ್ತು ನಾವು ಆಧ್ಯಾತ್ಮಿಕತೆ ಎಂದು ಕರೆಯುವ ಪ್ರಕ್ರಿಯೆಯು ಕೇವಲ ಬೀಜದ ಉತ್ತಮ ಪೋಷಣೆಯ ಬಗ್ಗೆಯಾಗಿದೆ - ಬೀಜವು ಹೂವಾಗಿ ಅರಳಲು ಅದರ ಉತ್ತಮ ಆರೈಕೆ ಮಾಡುವುದಾಗಿದೆ.

ಈ ಕಾರಣಕ್ಕಾಗಿಯೇ ಯೋಗಿಗಳು ನಿಮ್ಮನ್ನು ತಲೆಕೆಳಗಾಗಿ ನಿಲ್ಲುವಂತೆ ಮಾಡಿದ್ದು! ನೀವು ಸತ್ಯವನ್ನು ಆರಾಮದಾಯಕವಾದ ಸ್ಥಿತಿಯಲ್ಲಿರುವುದಕ್ಕಿಂತ ಇರುಸುಮುರುಸಾದ ಸ್ಥಿತಿಯಲ್ಲಿದ್ದಾಗ ಚೆನ್ನಾಗಿ ನೋಡುತ್ತೀರೇನೋ ಎಂದು. ಯೋಗವು ಎಲ್ಲಾ ಹಂತಗಳಲ್ಲೂ ಸಹ ಅಂತರಂಗದ ಪರಿವರ್ತನೆಗಾಗಿ ಒಂದು ತಂತ್ರಜ್ಞಾನವಾಗಿದೆ, ಆದರೆ ನೆನಪಿನಲ್ಲಿಡಬೇಕಾದ ಅಂಶವಿದು: ನಿರ್ದಿಷ್ಟವಾದ ಅಭ್ಯಾಸವನ್ನು ಮಾಡುವುದು ನಿಮ್ಮ ರೂಪಾಂತರಕ್ಕೆ ಕಾರಣವಾಗಬಲ್ಲಂತಹ ಸಹಜ ಗುಣಗಳನ್ನು ಹೊಂದಿದ್ದರೂ ಸಹ, ಅದೇ ಎಲ್ಲವೂ ಅಲ್ಲ. ಅದನ್ನು ನೀವು ಹೇಗೆ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯ.

ಒಂದು ವಿಧಾನವು ನಿಜವಾಗಿಯೂ ಒಂದು ವಿಧಾನವಾಗಬೇಕಾದರೆ, ಮೊಟ್ಟಮೊದಲನೆಯದಾಗಿ, ನೀವು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತೇವೆಂದು ನಿರ್ಧರಿಸಬೇಕು. ಆಗ ಮಾತ್ರ ಅದೊಂದು ವಿಧಾನವಾಗಿ ಕಾರ್ಯನಿರ್ವಹಿಸಬಹುದು. ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಒಂದು ನಿರ್ದಿಷ್ಟ ಅವಧಿಗೆ ಬೇಷರತ್ತಾದ ಬದ್ಧತೆಯೊಂದಿಗೆ ಆರಂಭಿಸುವುದು ಯಾವಾಗಲೂ ಉತ್ತಮ - ಸುಮ್ಮನೆ ಆರು ತಿಂಗಳವರೆಗೆ ಅಭ್ಯಾಸ ಮಾಡಿ. ನಿಮಗೆ ಯಾವುದೇ ಪ್ರಯೋಜನವಾಗಬೇಕಿಲ್ಲ. ಸುಮ್ಮನೆ ಅದನ್ನು ಮಾಡುತ್ತಾ ಹೋಗಿ. ನಂತರ, ನಿಮ್ಮ ಜೀವನವನ್ನು ಅವಲೋಕಿಸಿ ನೋಡಿ - ನೀವೆಷ್ಟು ಶಾಂತಿಯುತ, ಸಂತೋಷಭರಿತ ಮತ್ತು ನೆಮ್ಮದಿಯಿಂದ ಇದ್ದೀರಿ ಎಂಬುದನ್ನು ಗಮನಿಸಿ. ಅದು ನಿಮ್ಮೊಂದಿಗೆ ಏನು ಮಾಡುತ್ತಿದೆ ಎಂಬುದನ್ನು ನೋಡಿ.

ನಿಮ್ಮೊಳಗಿನ ಬೆಳಕು

ಎಲ್ ಗ್ರೆಕೊ ಎಂಬ ಸ್ಪೇನ್ ದೇಶದ ಒಬ್ಬ ವರ್ಣಚಿತ್ರಕಾರರಿದ್ದರು. ವಸಂತ ಮಾಸದ ಒಂದು ಚೆಂದದ ಬೆಳಗಿನ ಹೊತ್ತಿನಲ್ಲಿ ಆತ ತನ್ನ ಮನೆಯ ಎಲ್ಲಾ ಕಿಟಕಿಗಳನ್ನು ಮುಚ್ಚಿಕೊಂಡು ಕುಳಿತಿದ್ದ. ಅವನ ಸ್ನೇಹಿತ ಒಳಗೆ ಬಂದು, “ನೀವು ಈ ಕಿಟಕಿಗಳನ್ನೆಲ್ಲಾ ಮುಚ್ಚಿಕೊಂಡು ಏಕೆ ಒಳಗೆ ಕುಳಿತಿದ್ದೀರಿ? ಹೊರಗೆ ಹೋಗೋಣ ಬನ್ನಿ. ಹೊರಗೆ ವಾತಾವರಣ ಬಹಳ ಸೊಗಸಾಗಿದೆ. ಕನಿಷ್ಠಪಕ್ಷ ಕಿಟಕಿಗಳನ್ನಾದರೂ ತೆರೆಯಿರಿ.” ಎಂದ. ಅದಕ್ಕೆ ಎಲ್ ಗ್ರೆಕೊ,“ ನನಗೆ ಕಿಟಕಿಗಳನ್ನು ತೆರೆಯುವುದು ಇಷ್ಟವಿಲ್ಲ. ಏಕೆಂದರೆ ಒಳಗಿರುವ ಬೆಳಕು ಹೊಳೆಯುತ್ತಿದೆ, ಈ ಒಳಗಿನ ಬೆಳಕಿಗೆ ಹೊರಗಿನ ಬೆಳಕು ತೊಂದರೆ ಮಾಡುವುದು ನನಗೆ ಬೇಕಿಲ್ಲ.” ಎಂದು ಹೇಳಿದರು.

ಆದ್ದರಿಂದ, ಬೀಜ ಹೂವಾಗುವಂತೆ ಪೋಷಿಸಬೇಕಿದ್ದರೆ, ನಾವು ದೀಪವನ್ನು ಹೊತ್ತಿಸಬೇಕೇ? ಬೇಡ, ದೀಪವು ಈಗಾಗಲೇ ಬೆಳಗುತ್ತಿದೆ. ಸಮಸ್ಯೆಯೇನೆಂದರೆ, ನೀವು ಅದನ್ನು ಎಷ್ಟು ಕಸಕಡ್ಡಿಗಳಿಂದ ಮುಚ್ಚಿದ್ದೀರೆಂದರೆ, ಬೆಳಕಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಒಮ್ಮೆ ಈ ಬೆಳಕು ಒಳಗಿನಿಂದ ಬೆಳಗಲು ಆರಂಭವಾಯಿತೆಂದರೆ, ಉಳಿದಿದ್ದು ಸಹಜವಾದ ಪ್ರಕ್ರಿಯೆ. ಅದನ್ನು ನಾವು ಸುಲಭವಾಗಿ ಮಾಡಬಹುದು. ಅದನ್ನು ತ್ವರಿತವಾಗಿ ಮಾಡಲು ನಮ್ಮ ಬಳಿ ಅಗತ್ಯವಿರುವ ಅಂತರಂಗದ ವಿಜ್ಞಾನವಿದೆ. ಹಾಗಾಗಿ, ನಾವು ಸಹಜವಾದ ಪ್ರಕ್ರಿಯೆ ಮೂಲಕವೂ ಹೋಗುವುದು ಬೇಡ, ಏಕೆಂದರೆ ಅದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ವಿಜ್ಞಾನಿಗಳ ಬಳಿ ಜೆನೆಟಿಕ್ ಇಂಜಿನಿಯರಿಂಗ್ ಇರುವ ಹಾಗೆ ನಮ್ಮ ಬಳಿ ಇನ್ನರ್ ಇಂಜಿನಿಯರಿಂಗ್ ಇದೆ! ಎಂಟು ವರ್ಷಗಳಲ್ಲಿ ಫಲ ಕೊಡುವ ತೆಂಗಿನ ಮರವು ಒಂದೂವರೆ ವರ್ಷಗಳಲ್ಲಿ ಫಲ ನೀಡುತ್ತದೆ - ಇದು ಜೆನೆಟಿಕ್ ಎಂಜಿನಿಯರಿಂಗ್. ಇನ್ನರ್ ಎಂಜಿನಿಯರಿಂಗ್‌-ನಲ್ಲೂ ಇದು ನಿಜ - ಹತ್ತು ಜನ್ಮಗಳು ಹಿಡಿಯುವ ಕೆಲಸವನ್ನು ಒಂದೇ ಜನ್ಮದಲ್ಲಿ ಮಾಡಬಹುದು!

ವಿಶೇಷ ಸೂಚನೆ: 2019ರ ಡಿಸೆಂಬರ್ 21 ಮತ್ತು 22 ರಂದು ಚೆನ್ನೈನಲ್ಲಿ ನಡೆಯುತ್ತಿರುವ ’ಇನ್ನರ್ ಇಂಜಿನಿಯರಿಂ ಸಮಾಪ್ತಿ’ ಕಾರ್ಯಕ್ರಮದಲ್ಲಿ ಸದ್ಗುರುಗಳೊಂದಿಗೆ ನೇರವಾಗಿ ಭಾಗವಹಿಸಿ ಮತ್ತು 21 ನಿಮಿಷದ ’ಶಾಂಭವಿ ಮಹಾಮುದ್ರ’ ಎಂಬ ಶಕ್ತಿಯುತವಾದ ಯೋಗಕ್ರಿಯೆಗೆ ದೀಕ್ಷೆ ಪಡೆದುಕೊಳ್ಳಿ. ನೇರ ಕನ್ನಡ ಅನುವಾದ ಲಭ್ಯ. “ಇಲ್ಲಿ ನೋಂದಾಯಿಸಿ!

ಸಂಪಾದಕರ ಟಿಪ್ಪಣಿ : From Creation to Creator” ಎಂಬ ಇಬುಕ್ ನಲ್ಲಿ ಸದ್ಗುರುಗಳ ಇನ್ನಷ್ಟು ಒಳನೋಟಗಳನ್ನು ಓದಿ ತಿಳಿಯಿರಿ. ನಿಮ್ಮಿಷ್ಟದ ಬೆಲೆಗೆ ಇದನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ