ಧ್ಯಾನವು ಹೇಗೆ ಭೂಮಿಯನ್ನು ಕಾಪಾಡಬಲ್ಲದು?
ಧ್ಯಾನವು ವ್ಯಕ್ತಿಗತವಾಗಿ ಸ್ವಾಸ್ಥ್ಯವನ್ನು ಸುಧಾರಿಸುವಲ್ಲಿ ಅದ್ಭುತಗಳನ್ನು ಮಾಡಬಹುದು, ಆದರೆ ಅದು ಭೂಮಿಯನ್ನು ಉಳಿಸಬಲ್ಲದೇ? ಅಮೇರಿಕಾದ ಈಶ ಇನ್ಸ್ಟಿಟ್ಯೂಟ್ ಆಫ್ ಇನ್ನರ್-ಸೈನ್ಸಸ್-ನಲ್ಲಿನ ವಿಶ್ವ ಭೂಮಿ ದಿನದ ಆಚರಣೆಯ ಸಂದರ್ಭದಲ್ಲಿ, ಸದ್ಗುರುಗಳು ನಿಮ್ಮ ಅಸ್ತಿತ್ವವು ಭೂಮಿಯಿಂದ ಪ್ರತ್ಯೇಕವಲ್ಲ ಎಂಬ ಒಂದು ಜೀವಂತ ಅನುಭವವನ್ನು ಧ್ಯಾನವು ನೀಡುತ್ತದೆ ಎಂದು ವಿವರಿಸುತ್ತಾರೆ.
ಸದ್ಗುರು: ಭಾರತೀಯ ಪುರಾಣಕಥೆಗಳಲ್ಲಿ ಒಂದು ಸುಂದರವಾದ ದೃಷ್ಟಾಂತ ಕಥೆಯಿದೆ. ಒಬ್ಬ ವ್ಯಕ್ತಿಯು ಮರದ ಕೊಂಬೆಯ ಮೇಲೆ ಕುಳಿತುಕೊಂಡಿದ್ದಾನೆ – ಕೊಂಬೆಯ ಹೊರ ಅಂಚಲ್ಲಿ ಕುಳಿತು ಕೊಂಬೆಯನ್ನು ಕಡಿಯುತ್ತಿದ್ದಾನೆ. ಅವನು ಕೊಂಬೆಯನ್ನು ಕಡಿಯುವಲ್ಲಿ ಸಫಲನಾದರೆ, ಅವನು ವಿಫಲನಾಗುತ್ತಾನೆ. ಸದ್ಯದ ಪರಿಸ್ಥಿತಿಯಲ್ಲಿ, ಆರ್ಥಿಕ ವ್ಯವಸ್ಥೆಯ ಅವಸ್ಥೆಯೂ ಹೀಗೆಯೇ ಇರುವುದು. ಅದು ಸಫಲವಾದರೆ, ನಾವು ವಿಫಲರಾಗುತ್ತೇವೆ. ನಮ್ಮ ವೈಫಲ್ಯಕ್ಕಾಗಿ ನಾವು ಪ್ರಾರ್ಥಿಸುವುದು ಎಂತಹ ಅಸಂಬದ್ಧತೆಯಲ್ಲವೇ? ನಾವೀಗ ಇರುವುದು ಅಂತಹ ಪರಿಸ್ಥಿತಿಯಲ್ಲಿಯೇ.
ಈ ಭೂಮಿಯ ಮೇಲಿನ ಜೀವನವು ಕೊಡು-ತಗೊಳುವಿಕೆಯಲ್ಲ ಎಂದು ಹೆಚ್ಚಿನವರಿಗೆ ಅರ್ಥಮಾಡಿಕೊಳ್ಳಲಾಗಿಲ್ಲ. ಜೀವನವು ಪರಸ್ಪರರ ವಿಸ್ತರಣೆಯಷ್ಟೆ. ಸಮಾಜದಲ್ಲಿ ಕೊಡು-ತಗೊಳುವಿಕೆಗಳು ಇರಬಹುದು, ಆದರೆ ಜೀವಚೈತನ್ಯದ ವಿಷಯಕ್ಕೆ ಬಂದಾಗ, ಅದೊಂದು ಜೀವ ಸಮೂಹವಾಗಿದ್ದು, ಯಾರೂ ಇನ್ನೊಬ್ಬರಿಂದ ಪ್ರತ್ಯೇಕವಲ್ಲ. "ನನ್ನ ದೇಹ" ಎಂದು ನೀವೇನನ್ನು ಕರೆಯುತ್ತೀರೋ, ಅದು ಈ ಭೂಮಿಯ ಒಂದು ತುಣುಕಷ್ಟೆ. ದುರದೃಷ್ಟವಶಾತ್, ಹೆಚ್ಚಿನ ಜನರಿಗೆ ಅವರು ಮಣ್ಣಾಗುವ ತನಕ ಇದು ಅರ್ಥವಾಗುವುದಿಲ್ಲ.
ಧ್ಯಾನಾಸಕ್ತವಾದ ನಾಯಕತ್ವ
ನಾನು ಅಮೇರಿಕಾದ ಅತ್ಯಂತ ಸಕ್ರಿಯವಾದ ಪರಿಸರ ಕಾರ್ಯಕರ್ತರ ಜೊತೆಗಿದ್ದಾಗ ಅವರು ನನ್ನನ್ನು ಕೇಳಿದರು, "ಸದ್ಗುರುಗಳೇ, ನಾವು ಮಾಡಲೇ ಬೇಕಾದ ವಿಷಯಗಳೇನು? ನಾವೆಲ್ಲಾ ಏನನ್ನಾದರೂ ಮಾಡುತ್ತಿದ್ದೇವೆ. ಆದರೆ ಅದು ಯಶಸ್ವಿಯಾಗುವುದಿಲ್ಲವೆಂದು ನಮಗೆ ತಿಳಿದಿದೆ." ನಾನಂದೆ, "ವಿಶ್ವದ ನಾಯಕರೆಲ್ಲರೂ ಧ್ಯಾನಾಸಕ್ತರಾಗಬೇಕು." ನಾವು ಧ್ಯಾನವೆಂದಾಗ, ಪಾಶ್ಚಿಮಾತ್ಯ ದೇಶದವರು, "ಯಾವುದರ ಮೇಲೆ ಧ್ಯಾನ ಮಾಡಬೇಕು? ನಾನೊಂದು ಮರವನ್ನು ಕುರಿತು, ಭೂಮಿ ಅಥವಾ ವಿಶ್ವವನ್ನು ಕುರಿತು ಧ್ಯಾನ ಮಾಡಬೇಕೇ?" ಎಂದು ಕೇಳುತ್ತಾರೆ. ಧ್ಯಾನ ಯಾವುದರ ಬಗ್ಗೆಯೂ ಅಲ್ಲ. ಧ್ಯಾನವೆಂದರೆ, ನಿಮ್ಮನ್ನು ನೀವು ಸಡಿಲಮಾಡಿಕೊಳ್ಳುವುದು ಎಂದು. ಈಗ ನೀವೊಂದು ಸಿಮೆಂಟಿನ ಇಟ್ಟಿಗೆಯ ಹಾಗಿರುವಿರಿ, ಬೇರೆಲ್ಲದರಿಂದಲೂ ಪ್ರತ್ಯೇಕವಾಗಿರುವಿರಿ.
ನೀವು ಧ್ಯಾನಾಸಕ್ತರಾದರೆ, ನಿಧಾನವಾಗಿ, ಕೆಲ ಸಮಯದ ನಂತರ, ನೀವೊಂದು ಪ್ರತ್ಯೇಕ ಘಟಕವಲ್ಲವೆಂದು, ನೀವು ಎಲ್ಲದರೊಂದಿಗೆ ಒಂದಾಗಿರುವಿರಿ ಎಂದು ನಿಮಗೆ ಸ್ಪಷ್ಟವಾಗುತ್ತದೆ. ಈ ಭೂಮಿಯ ನಾಯಕರಿಗೆ ಇದೊಂದು ಜೀವಂತ ಅನುಭವವಾದರೆ, ಭೂಮಿಯನ್ನು ರಕ್ಷಿಸಲು ಮತ್ತೆ ಹೆಚ್ಚೇನೂ ಬೇಕಾಗದು. ಈಗಾಗಲೇ ಎಷ್ಟೆಲ್ಲ ಹಾನಿ ಸಂಭವಿಸಿದ್ದರೂ, ಭೂಮಿಯನ್ನು ಕಾಪಾಡಲು ಹೆಚ್ಚೇನೂ ಬೇಕಾಗದು. ಇಪ್ಪತ್ತೈದು ವರ್ಷಗಳಲ್ಲಿ, ನಾವು ಈ ಹಾನಿಯನ್ನು ಮಹತ್ತರವಾಗಿ ಹಿಮ್ಮೊಗವಾಗಿಸಬಹುದು. ನೀವು ಮತ್ತು ನಾನು ಸಾಯುವ ಮೊದಲು, ನಾವಿದನ್ನು ಸರಿಪಡಿಸಬಹುದು, ಆದರೆ ಇದಕ್ಕೆ ಅಧಿಕಾರದಲ್ಲಿ ಉನ್ನತ ಮಟ್ಟದಲ್ಲಿರುವವರ ಬೆಂಬಲ ಬೇಕಾಗುತ್ತದೆ.
ಸಂಪಾದಕರ ಟಿಪ್ಪಣಿ: "ಎ ಟ್ರೀ ಕ್ಯಾನ್ ಸೇವ್ ದಿ ವರ್ಲ್ಡ್" ಎನ್ನುವುದು ಒಂದು ಅಭಿಯಾನಕ್ಕೆ ಕರೆ ಆಗಿದೆ. ಪರಿಸರದ ಅಧೋಗತಿಯನ್ನು ನಿಯಂತ್ರಿಸುವಲ್ಲಿ ಮತ್ತು ಹಿಮ್ಮುಖವಾಗಿಸುವಲ್ಲಿ ವ್ಯಕ್ತಿಗಳು, ಕಾರ್ಪೋರೇಟ್ಗಳು ಮತ್ತು ಸರ್ಕಾರಗಳು ವಹಿಸಬಹುದಾದ ಪಾತ್ರವನ್ನು ಸದ್ಗುರುಗಳು ವರ್ಣಿಸುತ್ತಾ, "ಪರಿಸರದ ಕೆಲಸದ ವಿಷಯಕ್ಕೆ ಬಂದಾಗ, ಅದು ಯಾರೋ ಒಬ್ಬರ ಕೆಲಸವಲ್ಲ, ಅದು ಪ್ರತಿಯೊಬ್ಬರ ಕೆಲಸವೂ ಆಗಿದೆ" ಎಂದು ಸ್ಪಷ್ಟಪಡಿಸುತ್ತಾರೆ.