ಸದ್ಗುರು: ಇಷ್ಟಾನಿಷ್ಟಗಳು ಸಮನಾಗಿರುವುದು ಮತ್ತು ಪರಸ್ಪರ ಯೋಚನಾ ಶೈಲಿಯನ್ನು ಬೆಂಬಲಿಸುವುದು – ಇಂತಹ ಸಾಮಾನ್ಯ ನೆಲೆಗಳನ್ನು ಇಬ್ಬರು ಕಂಡುಕೊಂಡಾಗ ಗೆಳೆತನವು ಪ್ರಾರಂಭವಾಗುತ್ತದೆ. ಆದಾಗ್ಯೂ, 
ಪ್ರೀತಿ ಮತ್ತು ಅಕ್ಕರೆಯಿದ್ದೇ, ತಮ್ಮ ಗೆಳೆಯರ ಒಳಿತಿಗೆ ಏನು ಬೇಕಾದರೂ ಮಾಡುವ ಧೈರ್ಯವಿದ್ದರೆ, ವಿಭಿನ್ನ ವ್ಯಕ್ತಿತ್ವವಿರುವರೂ ನೆಚ್ಚಿನ ಗೆಳೆಯರಾಗಬಹುದೆಂದು ಸದ್ಗುರುಗಳು ವಿವರಿಸುತ್ತಾರೆ.

ಒಳ್ಳೆಯ ಗೆಳೆಯರು ಯಾವಾಗಲು ಒಳ್ಳೆಯವರಲ್ಲ

Illustration of a bird in a heap of dung

ಒಂದು ಚಳಿಗಾಲದಲ್ಲಿ ನಡೆದ ಘಟನೆಯಿದು. ಶರದೃತುವನ್ನು ಸ್ವಲ್ಪ ಹೆಚ್ಚುಕಾಲವೇ ಆನಂದಿಸುತ್ತಾ ಕಳೆದ ಒಂದು ಚಿಕ್ಕ ಹಕ್ಕಿಯು, ದಕ್ಷಿಣದತ್ತ ತನ್ನ ಪ್ರಯಾಣವನ್ನು ಸರಿಯಾದ ಸಮಯದಲ್ಲಿ ಪ್ರಾರಂಭಿಸಲಿಲ್ಲ. ಸ್ವಲ್ಪ ತಡವಾಗಿ, ಚಳಿಗಾಲದಲ್ಲಿ ತನ್ನ ಪ್ರಯಾಣವನ್ನು ಶುರುಮಾಡಿತು. ಚಳಿಯಿಂದ ಹಾರಲು ಸಾಧ್ಯವಾಗದೆ, ಮರಗಟ್ಟಿ ಕೆಳಗೆ ಬಿತ್ತು. ಅಲ್ಲೆ ಹಾದುಹೋಗುತ್ತಿದ್ದ ಹಸುವೊಂದು ಅದರ ಮೇಲೆ ಸೆಗಣಿಯನ್ನು ಹಾಕಿತು. ಸೆಗಣಿಯು ನೇರವಾಗಿ ಹಕ್ಕಿಯ ತಲೆಯ ಮೇಲೇ ಬಿದ್ದು, ಅದನ್ನು ಮುಚ್ಚಿಹಾಕಿತು. ಸೆಗಣಿಯ ಶಾಖವು ನಿಧಾನವಾಗಿ ಹಕ್ಕಿಯನ್ನು ಬೆಚ್ಚಾಗಾಗಿಸಿದಾಗ, ಅದು ಸಂತೋಷದಿಂದ ಚಿಲಿಪಿಲಿಗುಟ್ಟಲಾರಂಭಿಸಿತು.

 

ಪ್ರೀತಿ ಮತ್ತು ಅಕ್ಕರೆಯಿದ್ದೇ, ನಿಮ್ಮ ದೋಷಗಳನ್ನು ನಿಮಗೆ ತೋರಿಸುವ ಧೈರ್ಯವಿರುವವರೇ ನಿಮ್ಮ ನಿಜವಾದ ಗೆಳೆಯರು – ಅದೇ ಗೆಳೆತನ.

ಅಲ್ಲೆ ಹೋಗುತ್ತಿದ್ದ ಒಂದು ಬೆಕ್ಕಿಗೆ, ಹಕ್ಕಿಯ ಚಿಲಿಪಿಲಿಯು ಕೇಳಿಸಿತು. ತಿರುಗಿನೋಡಿದಾಗ, ಚಿಲಿಪಿಲಿ ಸದ್ದು ಸೆಗಣಿಯೊಳಗಿನಿಂದ ಬರುತ್ತಿರುವುದು ಗೊತ್ತಾಯಿತು. ಸೆಗಣಿಯನ್ನು ಸರಿಸಿ, ಹಕ್ಕಿಯನ್ನು ಅದರಿಂದಾಚೆ ಎಳೆದು, ಕಬಳಿಸಿಬಿಟ್ಟಿತು. ಹಾಗಾಗಿ, ನಿಮ್ಮ ತಲೆ ಮೇಲೆ ಸೆಗಣಿ ಹಾಕುವವರೆಲ್ಲ ನಿಮ್ಮ ವೈರಿಗಳಾಗಿರಬೇಕಿಲ್ಲ. ಹಾಗೂ ಸೆಗಣಿಯಿಂದ ನಿಮ್ಮನ್ನು ಮೇಲೆತ್ತುವವರೆಲ್ಲ ನಿಮ್ಮ ಗೆಳೆಯರಾಗಿರಬೇಕಿಲ್ಲ. ಎಲ್ಲಕ್ಕಿಂತ ಮೇಲಾಗಿ, ಸೆಗಣಿಯೊಳಗಿದ್ದರೆ, ಬಾಯಿ ಮುಚ್ಚಿಕೊಂಡಿರುವುದನ್ನು ಕಲಿಯಿರಿ!

ಒಳ್ಳೆಯ ಗೆಳೆಯರು ಹೇಳಬೇಕಾದುದ್ದನ್ನ ಹೇಳುತ್ತಾರೆ

ನಿಮಗೆ ಯಾರೊಂದಿಗಾದರೂ ಗೆಳೆತನವಿದ್ದರೆ, ಅವರ ದೋಷಗಳನ್ನು ಪದೇ ಪದೇ ಎತ್ತಿ ತೋರಿಸಬೇಕಿಲ್ಲ, ಅದು ಮುಖ್ಯವಲ್ಲ. ಆದರೆ, ಅದೇ ಸಮಯದಲ್ಲಿ, ಜನರ ಮೆಚ್ಚುಗೆಯನ್ನು ಕಳೆದುಕೊಳ್ಳುವ ಧೈರ್ಯವನ್ನೂ ನೀವು ಹೊಂದಿರಬೇಕು. ಜನರನ್ನು ಮೆಚ್ಚಿಸುವ ಪ್ರಯತ್ನದಲ್ಲಿ, ಒಂದು ರೀತಿಯ ಸೌಹಾರ್ದವನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ, ನಿಮ್ಮೊಳಗೆ ಎಂತಹ ಅಸಮಾಧಾನವನ್ನು ಹುಗಿದಿಟ್ಟುಕೊಂಡಿರುವಿರೆಂದು ನೋಡಿ. 

ನಿಮ್ಮ ಗೆಳೆತನದಲ್ಲಿ ಸ್ವಲ್ಪ ಹೆಚ್ಚಾಗಿಯೆ ಧೈರ್ಯವಂತರಾಗಿರಿ. ನಿಮ್ಮ ಗೆಳೆಯರನ್ನು ಕಳೆದುಕೊಳ್ಳಲು ಸಿದ್ಧರಿರಿ, ಚಿಂತಿಸದಿರಿ. ನಿಮ್ಮಲ್ಲಿ ಅವರಿಗಾಗಿ ಕಾಳಜಿಯಿದ್ದರೆ, ಅವರ ಒಳಿತಿಗೇನು ಬೇಕೋ, ಅದನ್ನು ಮಾಡಬೇಕು, ನಿಮ್ಮ ಒಳಿತಿಗೇನು ಬೇಕೋ ಅದನ್ನು ಮಾಡುವುದಲ್ಲ.

ಅಪ್ರಿಯವಾದದ್ದನ್ನು ನೀವು ಹುಗಿದಿಟ್ಟರೆ, ನೀವು ಅಸಮಾಧಾನದ ಬೀಜವನ್ನು ನೆಟ್ಟರೆ, ಅಪ್ರಿಯವಾದ ಹಣ್ಣುಗಳನ್ನಷ್ಟೇ ಪಡೆಯುತ್ತೀರಿ. ನಿಮಗೆ ನಿಜವಾಗಿಯೂ ಸ್ನೇಹಿತರಿದ್ದರೆ, ಅವರನ್ನು ಪ್ರೀತಿಸಿ ಮತ್ತು ಬೆಂಬಲಿಸಿಯೂ, ಅವನ ಅಥವಾ ಅವಳ ಅನಾದರವನ್ನು ಎದುರಿಸುವ ಧೈರ್ಯವಿರಬೇಕು. ಇಂದಿನ ಕಾಲದಲ್ಲಿ, ಗೆಳೆತನವನ್ನು ಒಪ್ಪಂದ, ಇಷ್ಟಾನಿಷ್ಟಗಳ ಮೇಲೆ ಬೆಳಸಲಾಗುತ್ತದೆ. ನಿಮ್ಮ ವ್ಯಕ್ತಿತ್ವಗಳು ವಿಭಿನ್ನವಾಗಿದ್ದರೂ, ನೀವು ಒಳ್ಳೆಯ ಗೆಳೆಯರಾಗಬಹುದು. ಪ್ರೀತಿ ಮತ್ತು ಅಕ್ಕರೆಯಿದ್ದೇ, ನಿಮ್ಮ ದೋಷಗಳನ್ನು ನಿಮಗೆ ತೋರಿಸುವ ಧೈರ್ಯವಿರುವವರೇ ನಿಮ್ಮ ನಿಜವಾದ ಗೆಳೆಯರು – ಅದೇ ಗೆಳೆತನ.

https://www.youtube.com/watch?v=lprsSVafYUk
 

ಒಳ್ಳೆಯ ಗೆಳೆಯರು ಅಪ್ರಿಯರಾಗೋ ಧೈರ್ಯವನ್ನ ಹೊ೦ದಿರುತ್ತಾರೆ

ಒಮ್ಮೆ, ಅಮೇರಿಕದ ಸೇನೆಯ ಮೂರು ಜೆನರಲ್‌ಗಳು ಭೇಟಿಯಾದರು. ತಮ್ಮ ಸೈನಿಕರ ತಂಡದೊಂದಿಗೆ ಗ್ರ್ಯಾಂಡ್ ಕೇನ್ಯನ್‌ನ ಪ್ರವಾಸದಲ್ಲಿದ್ದರು. ಮೊದಲನೆ ಜೆನರಲ್‌ಗೆ, ತನ್ನ ದಳದ ಧೈರ್ಯ ಮತ್ತು ವಿಧೇಯತೆಯ ಬಗ್ಗೆ ಜಂಬ ಕೊಚ್ಚಬೇಕಿತ್ತು. ಅದಕ್ಕಾಗಿ ಅವನಂದ, “ನನ್ನ ಬೆಟಾಲಿಯನ್‌ನಂತೆ ಯಾವುದೇ ಬೆಟಾಲಿಯನ್ ಇಲ್ಲ. ಅವರ ಧೈರ್ಯ ಹಾಗೂ ವಿಧೇಯತೆಯು ಉನ್ನತ ಮಟ್ಟದ್ದು. ಒಂದು ಉದಾಹರಣೆ ತೋರಿಸುತ್ತೇನೆ.”. ಹೀಗಂದು ಅವನು ಕೂಗು ಹಾಕಿದ, “ಪ್ರೈವೇಟ್‌ ಪೀಟರ್!” 

ಪ್ರೈವೇಟ್‌ ಪೀಟರ್ ಓಡುತ್ತ ಬಂದ, “ಹೇಳಿ, ಸರ್!”

“ಇದು ಕಾಣುತ್ತಿದೆಯೆ?” ಗ್ರ್ಯಾಂಡ್ ಕೇನ್ಯನ್ ಕಡೆಗೆ ಕೈ ಮಾಡುತ್ತ, ಜೆನರಲ್‌ ಕೇಳಿದ. “ಈ ಕಣಿವೆಯನ್ನು ನೀನು ಜಿಗಿದು ದಾಟಬೇಕು, ಈಗಲೇ”

ಪ್ರೈವೇಟ್‌ ಪೀಟರ್ ವೇಗವಾಗಿ ಓಡಿಬಂದು ಜಿಗಿದ. ಆದರೆ ಅವನೆಲ್ಲಿ ಬಿದ್ದನೆಂದು ಹೇಳಬೇಕಾಗಿಲ್ಲ ತಾನೆ?

ಇದನ್ನು ಕಂಡು ಎರಡನೆ ಜೆನರಲ್‌ ನಕ್ಕು ಹೇಳಿದ, “ಅದೇನು ದೊಡ್ಡದಲ್ಲ. ಇದನ್ನು ನೋಡು.” ಅವನು ಕೂಗಿ ಕರೆದ, “ಟ್ರೂಪರ್ ಹಿಗ್ಗಿನ್ಸ್!”

“ಹೇಳಿ, ಸರ್!” ಟ್ರೂಪರ್ ಹಿಗ್ಗಿನ್ಸ್ ಅಲ್ಲಿಗೆ ಬಂದ.

“ಒಂದು ತುರ್ತಾದ ಪರಿಸ್ಥಿತಿ ಏರ್ಪಟ್ಟಿದೆ. ಕಣಿವೆಯನ್ನು ಹಾರುತ್ತಾ ದಾಟಿ, ಅಲ್ಲಿಯ ಅಧಿಕಾರಿಗೆ ಈ ವಿಷಯದ ಬಗ್ಗೆ ತಿಳಿಸಿ.” 

ಟ್ರೂಪರ್ ಹಿಗ್ಗಿನ್ಸ್ ಕೈಗಳನ್ನು ರೆಕ್ಕೆಗಳಂತೆ ಬಡಿಯುತ್ತಾ ಹಾರಿದ. ಮುಂದೇನಾಯಿತೆಂದು ನಿಮಗೇ ಗೊತ್ತು.

ಮೂರನೇ ಜೆನರಲ್‌ ಸುಮ್ಮನಿದ್ದ. ಆ ಎರಡು ಜೆನರಲ್‌ಗಳು ಅವನನ್ನು ಮೆಲ್ಲಗೆ ತಿವಿದು, “ನಿನ್ನ ಬೆಟಾಲಿಯನ್ ಕಥೆಯೇನು? ಧೈರ್ಯವಿಲ್ಲವೆ?" ಎಂದು ಕೇಳಿ ನಕ್ಕರು.

ಈ ಜೆನರಲ್‌ನ ಕೆಲ ಸೈನಿಕರು ಅಲ್ಲೆ ಓಡಾಡುತ್ತಿದ್ದರು. ಅವನು ಒಬ್ಬನನ್ನು ಕರೆದ, “ಏ, ನೀನು, ಇಲ್ಲಿ ಬಾ.”  ಅವರಲ್ಲಿ ಒಬ್ಬನು ಅವನ ಬಳಿ ಬಂದ. ಜೆನರಲ್‌ ಹೇಳಿದ, “ಈಗ, ಅಲ್ಲಿ ಕೆಳಗೆ ನೋಡು.” ಕಡಿದಾದ ಜಲಪಾತವೊಂದಕ್ಕೆ ಕೇವಲ ಇನ್ನೂರು ಮೀಟರ್ ಹತ್ತಿರವಿದ್ದ, ಸುಳಿಯಿದ್ದ ಒಂದು ಹೊಳೆಯನ್ನು ತೋರಿಸಿದ. ಅದನ್ನು ತೋರಿಸಿ, ಅವನೆಂದ, “ಈ ಚಿಕ್ಕ ದೋಣಿಯಲ್ಲಿ ಆ ನದಿಯನ್ನು ದಾಟು.”

ಆ ಸೈನಿಕನು ಕೆಳಗೆ ನೋಡಿ, ಹೀಗೆಂದನು, “ಜೆನರಲ್‌, ನೀವು ಮತ್ತೆ ಕುಡಿದಿದ್ದೀರೆಂದು ತೋರುತ್ತದೆ. ನಾನೇನೂ ಇಂತಹ ಎಡವಟ್ಟಿನ ಕೆಲಸವನ್ನು ಮಾಡುವುದಿಲ್ಲ.”

ಆ ಜೆನರಲ್‌, ಇನ್ನಿಬ್ಬರ ಕಡೆಗೆ ತಿರುಗಿ, "ನೋಡಿ, ಇದು ನಿಜವಾದ ಧೈರ್ಯ" ಎಂದನು.

ನಿಮ್ಮ ಗೆಳೆತನದಲ್ಲಿ ಸ್ವಲ್ಪ ಹೆಚ್ಚಾಗಿಯೆ ಧೈರ್ಯವಂತರಾಗಿರಿ. ನಿಮ್ಮ ಗೆಳೆಯರನ್ನು ಕಳೆದುಕೊಳ್ಳಲು ಸಿದ್ಧರಿರಿ, ಚಿಂತಿಸದಿರಿ. ನಿಮ್ಮಲ್ಲಿ ಅವರಿಗಾಗಿ ಕಾಳಜಿಯಿದ್ದರೆ, ಅವರ ಒಳಿತಿಗೇನು ಬೇಕೋ, ಅದನ್ನು ಮಾಡಬೇಕು, ನಿಮ್ಮ ಒಳಿತಿಗೇನು ಬೇಕೋ ಅದನ್ನು ಮಾಡುವುದಲ್ಲ.  

ಒಳ್ಳೆಯ ಗೆಳೆಯರು ಷರತ್ತುಬದ್ಧರಾಗಿರುವುದಿಲ್ಲ

ನನಗೆ ಪರಿಚಯದ ಡಾಕ್ಟರ್ ಒಬ್ಬರಿದ್ದರು, ಅವರಿಗೆ ಬೀರ್ ಕುಡಿಯುವ ಅಭ್ಯಾಸವಿತ್ತು. ನಾನು ಅವರನ್ನು ಭೇಟಿ ಮಾಡಿದಾಗ, ಅವರಿಗೆ ಸರಿಸುಮಾರು ಎಪ್ಪತ್ತು ವರ್ಷಗಳಾಗುತ್ತ ಬಂದಿತ್ತು – ಡೊಳ್ಳು ಹೊಟ್ಟೆಯ ಭಾರೀ ಆಸಾಮಿ. ಕೆಲ ಸಮಯದ ಹಿಂದೆ, ಅವರು ತಮ್ಮ ಗೆಳೆಯನೊಬ್ಬನನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದರು. ಇವರು ಹೋದಾಗಲೆಲ್ಲ, ಅವರ ಗೆಳೆಯನೊಂದಿಗೆ ಬೀರ್ ಕುಡಿಯುತ್ತಿದ್ದರು. ಸಮಯ ದೊರಕಿದಾಗಲೆಲ್ಲ, ಒಂದೋ, ಇವರು ಅಲ್ಲಿಗೆ ಹೋಗುತ್ತಿದ್ದರು ಅಥವಾ ಅವರೇ ಇಲ್ಲಿಗೆ ಬರುತ್ತಿದ್ದರು – ಒಟ್ಟಾರೆ ಹೇಗೋ ಕುಡಿಯುತ್ತಿದ್ದರು!

ಇದ್ದಕ್ಕಿದ್ದಂತೆ ಒಂದು ದಿನ, ಆ ಗೆಳಯನಿಗೆ ಒಬ್ಬ ಗುರುವಿನ ಪರಿಚಯವಾಗಿ, ಆಧ್ಯಾತ್ಮಿಕ ಅಭ್ಯಾಸಗಳನ್ನು ಪ್ರಾರಂಭಿಸಿ, ಬೀರ್ ಕುಡಿಯುವುದನ್ನು ನಿಲ್ಲಿಸಿದರು. ಡಾಕ್ಟರ್ ಈ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತ, ಆನಂತರ ಅವರ ಅಮೋಘವಾದ ಗೆಳೆತನದ ಅಂತ್ಯವಾಯಿತೆಂದರು. ಗೆಳೆಯ ಬೀರ್ ಪೂರೈಕೆಯನ್ನು ನಿಲ್ಲಿಸಿದ ಕಾರಣ, ಈ ಡಾಕ್ಟರ್‌ಗೆ ಇನ್ನೆಂದೂ ಗೆಳೆಯನ ಮನೆಗೆ ಹೋಗುವ ಅಪೇಕ್ಷೆಯಿರಲಿಲ್ಲ. ಅನೇಕ ಗೆಳೆತನಗಳು ಈ ರೀತಿಯಲ್ಲಿ ಕೊನೆಯಾಗುತ್ತವೆ. ಏನಾದರೂ ಸಿಗುವಂತಿದ್ದರೆ, ಗೆಳೆತನವಿರುತ್ತದೆ. ಯಾವ ಕ್ಷಣದಲ್ಲಿ ಅದು ನಿಲ್ಲುತ್ತದೆಯೋ, ಗೆಳೆತನ ಕೊನೆಯಾಗುತ್ತದೆ. 

ನಿಮ್ಮ ಜೀವನದಲ್ಲಿ ನಿಜವಾದ ಸ್ನೇಹಿತರಿಲ್ಲದಿದ್ದರೆ, ನೀವು ಏನನ್ನೋ ಕಳೆದುಕೊಂಡಂತೆ. ಎಷ್ಟಾದರೂ, ಗೆಳೆಯನೆಂದರೇನು? ನಿಮ್ಮಂತೆಯೇ ಗೊಂದಲದಲ್ಲಿರುವ ಇನ್ನೋರ್ವ ವ್ಯಕ್ತಿ ತಾನೆ? ಗೆಳೆಯನೆಂದರೆ, ದೋಷರಹಿತ ವ್ಯಕ್ತಿ ಎಂದರ್ಥವಲ್ಲ. ಇಬ್ಬರೂ ಪ್ರಾಮಾಣಿಕತೆಯಿಂದ ಒಬ್ಬರನ್ನೊಬ್ಬರು ಸಮೀಪಿಸುವಷ್ಟು ಮುಕ್ತರಾಗಿದ್ದರೆ, ಆಗ ಅವರು ಗೆಳೆಯರಾಗುತ್ತಾರೆ. ನಿಮ್ಮ ಗೆಳೆಯರು, ನಿಮ್ಮಂತೆಯೇ ಗೋಜಲಿನಲ್ಲಿರುವವರು. ಆದರೆ, ಯಾವುದೇ ಸನ್ನಿವೇಶದಲ್ಲಿ, ಇಬ್ಬರು ವ್ಯಕ್ತಿಗಳು ಪರಸ್ಪರರೊಂದಿಗೆ ಪ್ರಾಮಾಣಿಕರಾಗಿರಲು ಸಾಧ್ಯವಿದ್ದರೆ, ಅವರು ಗೆಳೆಯರಾಗುತ್ತಾರೆ. ಕೇವಲ ಒಬ್ಬರಲ್ಲ, ಅನೇಕ ನಿಜವಾದ ಗೆಳೆಯರನ್ನು ನೀವು ಹೊಂದಿರಬೇಕು. ನಿಮಗೆ ಒಬ್ಬರೂ ನೆಚ್ಚಿನ ಗೆಳೆಯ/ಗೆಳೆತಿಯಿಲ್ಲದಿದ್ದರೆ, ನಿಮ್ಮ ಬದುಕಿನಲ್ಲಿ ನೀವೀಗಲೇ ಬದಲಾವಣೆಯನ್ನು ಮಾಡಿಕೊಳ್ಳಬೇಕು.
 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image