ಪ್ರಶ್ನೆ :ಗಾಂಜಾ ಸೇದುವುದರಿಂದ ಜ್ಞಾನೋದಯವಾಗುತ್ತದೆಯೇ? ಶಿವನೂ ಸಹ ಗಾಂಜಾ ಸೇದುತ್ತಿದ್ದನೆಂದು ಹೇಳುತ್ತಾರೆ.

ಸದ್ಗುರು: ನೀವು ನನ್ನ ಕಣ್ಣುಗಳನ್ನು ಹತ್ತಿರದಿಂದ ನೋಡಿದರೆ, ನಾನು ಯಾವಾಗಲೂ ಮತ್ತಿನಲ್ಲಿರುವುದು ನಿಮಗೆ ಕಂಡುಬರುತ್ತದೆ.  ಹಿಮಾಲಯ ಮತ್ತು ಇತರ ಸ್ಥಳಗಳಿಗೆ ನಾನು ಹೋದಾಗಲೆಲ್ಲಾ, ಬಹಳಷ್ಟು ಸಲ ಅಲ್ಲಿರುವ ಧೂಮಪಾನಿಗಳು ನನ್ನನ್ನು ನೋಡಿ, ನಾನೂ ಸಹ ಧೂಮಪಾನ ಮಾಡುವವನೆಂದು ತಿಳಿದು, ತಮ್ಮೊಂದಿಗೆ ಸೇರಲು ಆಹ್ವಾನಿಸುತ್ತಾರೆ! ಆದರೆ ನಾನೆಂದೂ ಮಾದಕವಸ್ತುವನ್ನು ಮುಟ್ಟಿದವನಲ್ಲ. ನೀವು ನನ್ನೊಂದಿಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಇರಬಹುದಾದರೆ, ನಾನು ನಿಮ್ಮನ್ನೂ ಮತ್ತಿನಲ್ಲಿರುವ ಹಾಗೆ ಮಾಡುತ್ತೇನೆ ಏಕೆಂದರೆ, ಈ ಮಾದಕ ವಸ್ತು ಇರುವುದು ಹೊರಗಲ್ಲ, ಒಳಗೆ. ನೀವು ಸ್ವಯಂಚಾಲಿತವೋ ಅಥವಾ ಯಾರಾದರೂ ತಳ್ಳಿ ನಿಮ್ಮನ್ನು ಸ್ಟಾರ್ಟ್ ಮಾಡಬೇಕೋ ಎನ್ನುವುದೇ ಪ್ರಶ್ನೆ! 

ನಾವು ನಮ್ಮ ಶರೀರದೊಳಕ್ಕೆ ಯಾವುದೇ ರೀತಿಯ ರಾಸಾಯನಿಕಗಳನ್ನು ಹಾಕಿದರೂ, ಅದೊಂದು ರೀತಿಯ ಅನುಭವವನ್ನು ಪ್ರಚೋದಿಸುತ್ತದೆ ಅಷ್ಟೆ. ಅದನ್ನು ಒಳಗಿನಿಂದಲೇ ಪ್ರಚೋದಿಸುವುದು ಹೇಗೆಂದು ನಿಮಗೆ ತಿಳಿದಿದ್ದರೆ, ನೀವಿಲ್ಲಿ ಅತ್ಯಂತ ಆನಂದದಿಂದ ಕುಳಿತುಕೊಳ್ಳಬಹುದು; ಹೊರಗಿನಿಂದ ಏನನ್ನೂ ಸೇವಿಸುವ ಅಗತ್ಯವಿರುವುದಿಲ್ಲ.

ಸೋಮಶೇಖರ ಅಥವಾ ಸೋಮಸುಂದರ ಎನ್ನುವುದು ಶಿವನ ಪ್ರಧಾನ ಹೆಸರುಗಳಲ್ಲಿ ಒಂದಾಗಿದೆ – ಸದಾ ಮತ್ತನಾಗಿದ್ದರೂ, ಪೂರ್ತಿ ಎಚ್ಚರದ ಸ್ಥಿತಿಯಲ್ಲಿರುವುದು.

ಶಿವನ ಹಲವಾರು ಹೆಸರುಗಳಲ್ಲಿ, ಸೋಮಶೇಖರ ಎನ್ನುವುದು ಪ್ರಮುಖವಾದ ಹೆಸರುಗಳಲ್ಲೊಂದು. ಸೋಮ ಎಂದರೆ ಮತ್ತು ಬರಿಸುವುದು ಎಂದರ್ಥ. ಹೊರಗಿನಿಂದ ರಾಸಾಯನಿಕಗಳನ್ನು ಬಳಸಬೇಕಾದ ಅನಿವಾರ್ಯತೆ ಶಿವನಿಗಿರಲಿಲ್ಲ. ಅವನಂತಹ ಅಸಹಾಯಕನೇನಲ್ಲ. ಅವನು ಸದಾ ಮತ್ತಿನಲ್ಲಿರುತ್ತಿದ್ದ, ಅದರಲ್ಲೇನೂ ಸಂಶಯವಿಲ್ಲ. ಆದರೆ ಅವನು ಯಾವುದೇ ರೀತಿಯ ಮಾದಕವಸ್ತುವನ್ನು ಬಳಸುವವನಲ್ಲ, ಅವನೇ ಒಂದು ಮಾದಕವಸ್ತು.

ನೀವು ಅಮಲಿನಲ್ಲಿರದಿದ್ದರೆ, ಮುಕ್ತಿಯ ಏಕೈಕ ನೆಲೆಯಾದ ಪರಮ ಶೂನ್ಯದೊಳಕ್ಕೆ ಧುಮುಕುವಷ್ಟು ಹುಚ್ಚು ನಿಮಗೆಂದಿಗೂ ಹಿಡಿಯುವುದಿಲ್ಲ. ಕೇವಲ ಅಮಲೇರಿದ ಸ್ಥಿತಿಯಲ್ಲಿ ಮಾತ್ರ, ಶರೀರ ಮತ್ತು ಮನಸ್ಸು ಯಾವುದೇ ಅಡಚಣೆಗಳಾಗಿರುವುದಿಲ್ಲ. ಹಾಗಾಗಿ ಸೋಮಶೇಖರ ಅಥವಾ ಸೋಮಸುಂದರ ಎನ್ನುವುದು ಶಿವನ ಪ್ರಧಾನ ಹೆಸರುಗಳಲ್ಲಿ ಒಂದಾಗಿದೆ – ಸದಾ ಮತ್ತನಾಗಿದ್ದರೂ, ಪೂರ್ತಿ ಎಚ್ಚರದ ಸ್ಥಿತಿಯಲ್ಲಿರುವುದು. ಗಾಂಜಾದಂತಹ ಚಿಲ್ಲರೆ ವಸ್ತುಗಳನ್ನು ಬಳಸಿ ಅವನು ಅಮಲಿನ ಸ್ಥಿತಿಗೆ ತಲುಪಲಿಲ್ಲ. ಅವನ ಶಕ್ತಿಗಳು ಪರಮ ಮಿತಿಯನ್ನು ತಲುಪಿದ್ದವು. ಅಂದರೆ ಅವನು ಜೀವನದ ಪರಮಸ್ಥಿತಿಯಾಗಿದ್ದಾನೆ – ಪರಿಪೂರ್ಣ ಜೀವನವಾಗಿದ್ದಾನೆ. ಅವನು ಪರವಶತೆ, ತೀವ್ರತೆ ಮತ್ತು ಸಾಮರ್ಥ್ಯದ ಉತ್ತುಂಗದಲ್ಲಿದ್ದಾನೆ.

ಒಮ್ಮೆ ಹೀಗಾಯಿತು, ಆದಿಶಂಕರಾಚಾರ್ಯರು ನಡೆದುಕೊಂಡು ಹೋಗುತ್ತಿದ್ದರು. ಅವರೊಬ್ಬ ವೇಗದ ನಡಿಗೆಯವರಾಗಿದ್ದಿರಬೇಕು, ಏಕೆಂದರೆ ಮೂವತ್ತೆರಡನೆ ವಯಸ್ಸಿಗೇ ಅವರು ಶರೀರವನ್ನು ತ್ಯಜಿಸಿದರು. ಆದರೆ ತಮ್ಮ ಹನ್ನೆರಡನೆ ವಯಸ್ಸಿನಿಂದ ಹಿಡಿದು ಮೂವತ್ತೆರಡು ವಯಸ್ಸಿನೊಳಗೆ, ಆ ಕಾಲದಲ್ಲಿ, ಅವರು ಭಾರತವನ್ನು ಹಲವಾರು ಬಾರಿ ಸುತ್ತಿದರು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ಕೇರಳದಿಂದ ಬದರೀನಾಥದವರೆಗೆ ಮತ್ತು ಅಲ್ಲಿಂದ ಮತ್ತೆ ಕೇರಳಕ್ಕೆ, ಎಲ್ಲೆಡೆ ಮತ್ತು ಎಲ್ಲಾ ದಿಕ್ಕುಗಳಲ್ಲೂ ಸಂಚರಿಸಿದ್ದರು. ಅಷ್ಟು ಕಡಿಮೆ ಸಮಯದಲ್ಲಿ ಅಷ್ಟೊಂದು ನಡೆದಾಡಿ ಸಾವಿರಾರು ಪುಟಗಳ ಸಾಹಿತ್ಯವನ್ನೂ ರಚಿಸಿದ್ದಾರೆಂದರೆ, ನಿಜವಾಗಿಯೂ ಅವರೊಬ್ಬ ಬಿರುಸಿನ ನಡಿಗೆಯವರಾಗಿದ್ದಿರಬೇಕು.

ಒಮ್ಮೆ, ತಮ್ಮ ಶಿಷ್ಯರೊಂದಿಗೆ ವೇಗವಾಗಿ ನಡೆಯುತ್ತಾ ಒಂದು ಹಳ್ಳಿಗೆ ಬಂದರು. ಹಳ್ಳಿಯ ಹೊರಗೆ ಕೆಲವರು ಸಾರಾಯಿ ಕುಡಿಯುತ್ತಿರುವುದನ್ನು ನೋಡಿದರು. ಆಗಿನ ಕಾಲದಲ್ಲಿ, ಮತ್ತು ಈಗಿನ ಇಪ್ಪತ್ತೈದು-ಮೂವತ್ತು ವರ್ಷಗಳ ಹಿಂದಿನವರೆಗೂ, ಮದ್ಯದಂಗಡಿಗಳು ಊರಿನಿಂದ ಹೊರಗಿರುತ್ತಿದ್ದವು. ಅವುಗಳನ್ನು ಊರಿನೊಳಕ್ಕೆ ಎಂದೂ ತರುತ್ತಿರಲಿಲ್ಲ. ಈಗಿನ ಹಳ್ಳಿಗಳಲ್ಲಿ, ನಿಮ್ಮ ಮನೆಯ ಪಕ್ಕದಲ್ಲಿ ಮತ್ತು ನಿಮ್ಮ ಮಕ್ಕಳ ಶಾಲೆಯ ಎದುರಿನಲ್ಲೇ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. ಆಗೆಲ್ಲಾ, ಅದು ಯಾವಾಗಲೂ ಊರಿನ ಹೊರಗಿರುತ್ತಿತ್ತು. 

ಆದಿಶಂಕರರು ಅಮಲೇರಿದ ಸ್ಥಿತಿಯಲ್ಲಿದ್ದ ಕೆಲವರನ್ನು ನೋಡಿದರು. ನಿಮಗೆ ಗೊತ್ತಲ್ಲ, ಕುಡುಕರು ಯಾವಾಗಲೂ ತಾವು ತಮ್ಮ ಜೀವನದ ಅತ್ಯುತ್ತಮ ಸ್ಥಿತಿಯಲ್ಲಿದ್ದೇವೆ ಮತ್ತು ಬೇರೆಯವರು ಅದನ್ನು ಕಳೆದುಕೊಂಡಿದ್ದಾರೆ ಎಂದು ಭಾವಿಸಿರುತ್ತಾರೆ. ಹಾಗಾಗಿ, ಆ ಕುಡುಕರು ಶಂಕರರನ್ನು ಲೇವಡಿ ಮಾಡುತ್ತಾರೆ. ಆದಿಶಂಕರರು ಏನನ್ನೂ ಮಾತನಾಡದೇ ಮದ್ಯದಂಗಡಿಯೊಳಕ್ಕೆ ಹೋಗಿ, ಒಂದು ಕುಡಿಕೆ ಮದ್ಯವನ್ನು ಎತ್ತಿಕೊಂಡು ಕುಡಿದುಬಿಡುತ್ತಾರೆ ಮತ್ತು ಅಲ್ಲಿಂದ ಮುಂದೆ ಹೋಗುತ್ತಾರೆ.

ಅವರ ಹಿಂದೆ ಬರುತ್ತಿದ್ದ ಶಿಷ್ಯರು ತಮ್ಮೊಳಗೇ ಮಾತನಾಡಿಕೊಳ್ಳಲು ಪ್ರಾರಂಭಿಸುತ್ತಾರೆ, “ನಮ್ಮ ಗುರುಗಳೇ ಕುಡಿದರು, ನಾವ್ಯಾಕೆ ಕುಡಿಯಬಾರದು?” ಆದಿಶಂಕರರಿಗೆ ಏನಾಗುತ್ತಿದೆ ಎನ್ನುವುದರ ಅರಿವಿತ್ತು. ಅವರು ಮುಂದಿನ ಹಳ್ಳಿಗೆ ಬಂದಾಗ, ಅಲ್ಲೊಬ್ಬ ಕಮ್ಮಾರ ತನ್ನ ಕೆಲಸ ಮಾಡುತ್ತಿದ್ದ. ಆದಿಶಂಕರರು ಒಳಗೆ ಹೋಗಿ, ಅಲ್ಲಿದ್ದ ಕಾದು ಕರಗಿದ ಕಬ್ಬಿಣದ ದ್ರವವಿದ್ದ ಮಡಿಕೆಯನ್ನು ಎತ್ತಿಕೊಂಡು ಕುಡಿದು ಮುಂದಕ್ಕೆ ಹೋದರು. ಈಗ ನೀವು ಅವರನ್ನು ಅನುಕರಿಸುವುದಕ್ಕೆ ಹೋಗುವುದಿಲ್ಲ! ಆದ್ದರಿಂದ, ಶಿವ ಧೂಮಪಾನ ಮಾಡುತ್ತಿದ್ದ ಎಂದು ನೀವು ತಿಳಿದರೂ ಸಹ, ನೀವವನನ್ನು ಅನುಕರಿಸುವುದಕ್ಕೆ ಹೋಗಬೇಡಿ.

 

ನನ್ನ ಪ್ರಕಾರ, ಜೀವನವನ್ನು ಅತ್ಯಂತ ಸ್ಪಷ್ಟ ರೀತಿಯಲ್ಲಿ ಜೀವಿಸುದೇ ಬಹಳ ದೊಡ್ಡ ವಿಷಯವಾಗಿದೆ. ಗಾಂಜಾ ಸೇದಿ ಪ್ರಜ್ಞೆ ತಪ್ಪುವುದು ಜೀವನವಲ್ಲ. ನೀವು ಅಸ್ವಸ್ಥರಾಗಿ ಸಾಯುವಂತಿದ್ದರೆ, ಜೀವನ ಮಬ್ಬು ಮಬ್ಬಾಗಿರಬಹುದು. ನೀವು ಜೀವಂತವಾಗಿದ್ದಾಗ, ಸ್ಪಷ್ಟತೆಯೇ ಅತ್ಯಂತ ಮುಖ್ಯವಾದ ಸಂಗತಿ. ಮತ್ತು ಸ್ಪಷ್ಟತೆ ಅಮಲೇರಿಸುವಂತದ್ದಾಗಿರಬಹುದು. ಬೆಟ್ಟದಿಂದ ಜಿಗಿಯುವುದು, ವಿಮಾನಗಳಿಂದ ಧುಮುಕುವುದು ಹಾಗೂ ಮತ್ತಿತರ ಅದ್ಭುತ ಹಾಗೂ ಅಪಾಯಕಾರಿ ಸಾಹಸಗಳನ್ನು ಮಾಡುವವರನ್ನು ನೀವು ನೋಡಿರಬಹುದು. ಜಾಗೃತಾವಸ್ಥೆಯ ಅತ್ಯುನ್ನತ ಸ್ಥಿತಿಯಲ್ಲಿರುವುದು ಬೇರೆಯದ್ದೇ ರೀತಿಯ ಅಮಲು ಮತ್ತು ಜೀವಂತಿಕೆಯನ್ನು ಹೊಂದಿರುವ ಕಾರಣದಿಂದಾಗಿಯೇ ಅವರದನ್ನೆಲ್ಲಾ ಮಾಡುತ್ತಿದ್ದಾರೆ. 

ಅವರು ಅನೇಕಾನೇಕ ದೈಹಿಕ ಕಸರತ್ತುಗಳನ್ನು ಮಾಡುವ ಮೂಲಕ ಶರೀರದ ರಾಸಾಯನಿಕತೆಯನ್ನು ಉದ್ದೀಪನಗೊಳಿಸುತ್ತಾರೆ. ಆದರೆ ನೀವಿಲ್ಲಿ ಹೊರಗಿನ ಪ್ರಚೋದನೆಯಿಲ್ಲದೆ ಪೂರ್ತಿ ಜೀವಂತಿಕೆ, ಎಚ್ಚರ ಮತ್ತು ಮತ್ತಿನಲ್ಲಿ ಕುಳಿತರೆ, ಶಿವನ ಒಂದು ಅಂಶ ನಿಮ್ಮಲ್ಲಿ ವ್ಯಕ್ತವಾಗಿದೆ ಎಂದು ನಾನು ಹೇಳುತ್ತೇನೆ. ನಿಮಗಿಲ್ಲಿ ಸುಮ್ಮನೆ ಸಂಪೂರ್ಣ ಎಚ್ಚರದಲ್ಲಿ ಮತ್ತಿನಿಂದ ಕುಳಿತುಕೊಳ್ಳಲು ಸಾಧ್ಯವಾದರೆ, ಅದೇ ಮತ್ತನ್ನು ಹೊಂದುವ ಸರಿಯಾದ ವಿಧಾನ, ಮಾದಕವಸ್ತು(ಕಳೆಗಿಡ)ಗಳನ್ನು ಸೇವಿಸುವುದಲ್ಲ. ಗಿಡಗಳನ್ನು ಪ್ರಾಣಿಗಳಿಗೆ ಬಿಡಿ. ಮನುಷ್ಯರು ಅದಕ್ಕೂ ಉತ್ತಮ ಸಂಗತಿಗಳನ್ನು ಮಾಡಬಹುದು. 

ಮದ್ಯ, ಮಾದಕವಸ್ತು ಮತ್ತು ಇನ್ಯಾವುದೇ ಅಮಲೇರಿಸುವ ಪದಾರ್ಥವಾಗಿರಬಹುದು - ಅವುಗಳಿಂದ ಒಂದು ರೀತಿಯಲ್ಲಿ, ನೀವು ನಿಮ್ಮ ಮಾನವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೀರಿ. ಅವುಗಳು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವಂತಿದಿದ್ದರೆ, ನಾನು ಎಲ್ಲರಿಗೂ ಯಾವಾಗಲೂ ಕುಡಿದಿರಲು ಹೇಳಿರುತ್ತಿದ್ದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಅವು ನಿಮ್ಮ ಮನುಷ್ಯರಾಗಿ ಇರುವ ಅಂಶವನ್ನು ಕುಗ್ಗಿಸುತ್ತವೆ. ನೀವೊಂದು ವೇಳೆ ಅರವತ್ತರಿಂದ ತೊಂಭತ್ತು ದಿನಗಳಿಗಿಂತ ಹೆಚ್ಚು ಕಾಲದವರೆಗೆ ನಿರಂತರವಾಗಿ ಧೂಮಪಾನ ಮಾಡಿದರೆ, ನಿಮ್ಮ ಬುದ್ಧಿಶಕ್ತಿಯ ಮಟ್ಟ ಸುಮಾರು ಎಂಟು ಅಂಶಗಳಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಮತ್ತು ಈ ಮಾನಸಿಕ ಸಾಮರ್ಥ್ಯದಲ್ಲಿನ ಕುಗ್ಗುವಿಕೆಯನ್ನು ಪೂರ್ತಿಯಾಗಿ ಮೊದಲಿನ ಸ್ಥಿತಿಗೆ ತರಲು ಬರುವುದಿಲ್ಲ.

 

ನೀವು ಯಾವ ಸಂಶೋಧನೆಗಳನ್ನೂ ಅವಲಂಬಿಸಬೇಕಾಗಿಲ್ಲ. ನೀವು ಸುಮ್ಮನೆ ಧೂಮಪಾನ ಮಾಡುವವರನ್ನು ಗಮನಿಸಿದರೆ, ಮತ್ತಿನಲ್ಲಿದ್ದಾಗ ಅವರು ಶಾಂತರಾಗಿರುವವರಂತೆ ತೋರುತ್ತಾರೆ. ಆದರೆ ನೀವು ಅವರಿಗೆ ಎರಡು ದಿನ ಧೂಮಪಾನ ಮಾಡಲು ಬಿಡದಿದ್ದರೆ, ಅವರೆಷ್ಟು ಹುಚ್ಚರಾಗುತ್ತಾರೆ ಎಂಬುದನ್ನು ನೀವು ನೋಡುತ್ತೀರಿ. ನೀವು ಅಸ್ಪಷ್ಟರಾಗಿದ್ದಾಗ ಶಾಂತಿಯುತವಾಗಿರಬಹುದು, ಆದರೆ ಆ ಶಾಂತಿಗೆ ಬೆಲೆಯಿಲ್ಲ. ನೀವು ಯಾವುದೇ ರೀತಿಯ ಮಾದಕ ವಸ್ತುವನ್ನು ಉಪಯೋಗಿಸಿದರೂ, ನಿಮ್ಮಲ್ಲಿ ಏನೋ ಒಂದು ಕುಗ್ಗುತ್ತದೆ. ಆದರೆ ನೀವು ಒಳಗಿನಿಂದಲೇ ಮತ್ತರಾದರೆ, ನಿಮ್ಮೊಳಗಿನ ಏನೋ ಒಂದು ತಂತಾನೇ ವರ್ಧಿಸುತ್ತದೆ. ಅದೇ ದೊಡ್ಡ ವ್ಯತ್ಯಾಸ.

ಇಂದು, ಅಮೇರಿಕದ ಹಲವು ರಾಜ್ಯಗಳಲ್ಲಿ ಗಾಂಜಾ(ಮಾರಿಜುವಾನ) ಸೇವನೆ ಕಾನೂನುಬದ್ಧವಾಗಿದೆ, ಹಾಗಾಗಿ ಅನೇಕ ದೊಡ್ಡ ವ್ಯಾಪಾರೀ ಸಂಸ್ಥೆಗಳು ವಿವಿಧ ರೀತಿಯ ಮಾರಿಜುವಾನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿವೆ. 2018 ರಲ್ಲಿ ಮಾರಿಜುವಾನದ ವ್ಯಾಪಾರ ಅಮೇರಿಕದಲ್ಲಿ 10.4 ಬಿಲಿಯನ್ ಡಾಲರ್ ತಲುಪಿದೆ.

ಮನುಷ್ಯನ ಮೆದುಳಿನ ಕಾರ್ಯಸಾಮರ್ಥ್ಯ ಈಗಿನ ಮಟ್ಟವನ್ನು ತಲುಪಲು ಲಕ್ಷಾಂತರ ವರ್ಷಗಳ ಸಮಯವನ್ನು ತೆಗೆದುಕೊಂಡಿದೆ. ಆದರೆ ನಿಮಗೆ ಈ ಸಾಮರ್ಥ್ಯವನ್ನು ನಿರ್ವಹಿಸುವುದು ಹೇಗೆಂದು ತಿಳಿದಿಲ್ಲ ಮತ್ತು ನೀವು ನಿಮ್ಮನ್ನು ಮಾದಕ ವಸ್ತುಗಳಿಂದ ಮಂದವಾಗಿಸಿಕೊಳ್ಳಲು ಬಯಸುತ್ತಿದ್ದೀರಿ. ಖಂಡಿತವಾಗಿಯೂ ಅದೊಂದು ಹಿನ್ನಡೆಯ ಹೆಜ್ಜೆಯಾಗಿದೆ. ಅದರಲ್ಲಿ ಯಾವ ಆಧ್ಯಾತ್ಮಿಕತೆಯೂ ಇಲ್ಲ.

ದಕ್ಷಿಣ ಅಮೇರಿಕ ಮೂಲದ ಅಯಹೌಸ್ಕಾ(ayahuasca) ಎಂಬುದು ಆಧ್ಯಾತ್ಮಿಕತೆಯ ಹೆಸರಿನಲ್ಲಿ ಚಲಾವಣೆಯಲ್ಲಿರುವ ಇನ್ನೊಂದು ಮಾದಕವಸ್ತು. ನೀವದನ್ನು ಸೇವಿಸಿದರೆ, ಹೊಟ್ಟೆಯೊಳಗಿನ ಎಲ್ಲವನ್ನೂ ಕಕ್ಕಿಬಿಡುತ್ತೀರಿ ಅಷ್ಟೆ! ನೀವದನ್ನು ಆಧ್ಯಾತ್ಮಿಕತೆ ಎಂದು ಭಾವಿಸುವುದಾರೆ, ನಿಮಗೆ ಶುಭವಾಗಲಿ! ನಾವು ಸಣ್ಣವರಿದ್ದಾಗ, ಒಂದು ಬ್ರ್ಯಾಂಡಿನ ಭೇದಿಯ ಔಷಧವಿತ್ತು, ಅದರ ಹೆಸರು ಕುಂತಿಕುಮಾರಿ ಭೇದಿ ಎಣ್ಣೆ ಎಂದು. ಅದು ಹರಳೆಣ್ಣೆ ಮತ್ತು ಜಾಪಾಳಬೀಜದ ಮಿಶ್ರಣವಾಗಿತ್ತು. ಯಾರಾದರೂ ಹುಚ್ಚುಚ್ಚಾಗಿ ಆಡುತ್ತಿದ್ದರೆ, ಅಂತಹವರಿಗೆ “ಕುಂತಿ ಕುಮಾರಿ ಭೇದಿ ಎಣ್ಣೆ ಕೊಡಿ” ಎನ್ನುತ್ತಿದ್ದರು, ಏಕೆಂದರೆ ಅವರ ತಲೆಗೇರಿದ ಮಲವನ್ನು ಹೊರ ಹಾಕಬೇಕಾಗಿತ್ತು. ಅವರು ಹೇಳುತ್ತಿದಿದ್ದು ನಿಜವಾಗಿಯೂ ವಾಸ್ತವಾಂಶವಾಗಿತ್ತು ಮತ್ತು ಹಿಡಿದ ಹುಚ್ಚು ಪೂರ್ತಿಯಾಗಿ ಭೇದಿಯ ಮೂಲಕ ಹೊರಹೋಗಬೇಕಾಗಿತ್ತು. ಏನೋ ಅರ್ಥವಿಲ್ಲದ್ದು ನಿಮ್ಮ ತಲೆಗೆ ಹತ್ತಿಬಿಟ್ಟಿದೆ, ಮತ್ತು ನೀವದನ್ನು ಒಳಗೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದೀರಿ - ಇಲ್ಲ, ನಿಮಗೆ ಕುಂತಿಕುಮಾರಿ ಬೇಧಿ ಎಣ್ಣೆಯ ಅಗತ್ಯವಿದೆ ಅಷ್ಟೆ!

ಸಂಪಾದಕರ ಟಿಪ್ಪಣಿ: ನೃತ್ಯ ಮತ್ತು ಸಂಗೀತದ ಜೊತೆಗೆ ಶಕ್ತಿಯುತವಾದ ಧ್ಯಾನ ಪ್ರಕ್ರಿಯೆಗಳು, ಸದ್ಗುರುಗಳೊಡನೆ ರಾತ್ರಿಯಿಡೀ ಸತ್ಸಂಗ, ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳೊಂದಿಗೆ ಮಹಾಶಿವರಾತ್ರಿಯನ್ನು ಈಶ ಯೋಗ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಿ. ಆದಿಯೋಗಿ - ಶಿವನ ಅನುಗ್ರಹದಲ್ಲಿ ತೊಯ್ದುಹೋಗಿ! ಮಹಾಶಿವರಾತ್ರಿಯ ಕಾರ್ಯಕ್ರಮದಲ್ಲಿ ನೀವು ಪಾಲ್ಗೊಳ್ಳಬಹುದಾದ ಅನೇಕ ರೀತಿಗಳನ್ನು ತಿಳಿಯಲು ಮಹಾಶಿವರಾತ್ರಿ ವೆಬ್‌ಪೇಜ್ ಗೆ ಭೇಟಿ ನೀಡಿ.