1. ಅಸಮರ್ಪಕ ಕೃಷಿ

ಭಾರತದಲ್ಲಿ, ನಾವು ವ್ಯವಸಾಯಕ್ಕಾಗಿ ಶೇ.50 ರಷ್ಟು ಭೂಮಿಯನ್ನು ಉಪಯೋಗಿಸುತ್ತಿದ್ದೇವೆ. ಅಂದರೆ ನಾವು ಶೇ.50 ರಷ್ಟು ಭೂಮಿಯನ್ನು ಉತ್ತು ಬಿತ್ತುತ್ತಿದ್ದೇವೆ. ಆದರೆ ನಾವು ಕೃಷಿಯಲ್ಲಿ ಇನ್ನಷ್ಟು ಹೆಚ್ಚಿನ ವೈಜ್ಞಾನಿಕತೆಯನ್ನುಅಳವಡಿಸಿಕೊಂಡರೆ, ಕೇವಲ ಶೇಕಡಾ 30ರಷ್ಟು ಭೂಮಿಯಿಂದ ಪೂರ್ತಿ ಜನಸಂಖ್ಯೆಗೆ ಆಹಾರವನ್ನು ಒದಗಿಸಬಹುದು.

ಈಗ ನಾವು ಮಾಡುತ್ತಿರುವ ಕೃಷಿ ಪದ್ಧತಿಯು ಕಳೆದ ಸಾವಿರ ವರ್ಷಗಳಿಂದ ಬದಲಾಗಿಲ್ಲ, ಅದನ್ನು ಬಹಳ ಅಸಮರ್ಪಕವಾಗಿ ಮಾಡಲಾಗುತ್ತಿದೆ. ಉದಾಹರಣೆಗೆ, ಒಂದು ಕಿಲೋಗ್ರಾಂ ಅಕ್ಕಿಯನ್ನು ಬೆಳೆಯಲು ನಾವು ಸುಮಾರು 3500 ಲೀಟರುಗಳಷ್ಟು ನೀರನ್ನು ಉಪಯೋಗಿಸುತ್ತೇವೆ. ಚೀನಾದಲ್ಲಿ ಇದರ ಅರ್ಧದಷ್ಟು ನೀರನ್ನು ಮಾತ್ರ ಉಪಯೋಗಿಸಲಾಗುತ್ತಿದೆ ಮತ್ತು ಅವರ ಉತ್ಪಾದಕತೆಯೂ ಸಹ ನಮಗಿಂತ ಎರಡರಷ್ಟಿದೆ. ನಾವು ಆಧುನಿಕ ವಿಜ್ಞಾನವನ್ನು ನಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಪಾರ ಪ್ರಮಾಣದ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಣತಿಯಿದೆ, ಆದರೆ ಅದು ಭೂಮಿಗಿಳಿಯುತ್ತಿಲ್ಲ.

ರಾಲಿ ಫಾರ್ ರಿವರ್ಸ್(ನದಿಗಳನ್ನು ರಕ್ಷಿಸಿ) ಚಳವಳಿಯ ಸಮಯದಲ್ಲಿ, ನಾವು ವಿಯಟ್ನಾಂ ದೇಶದ ಮೂವರು ಪರಿಣತರನ್ನು ಕರೆಸಿದ್ದೆವು, ಏಕೆಂದರೆ ವಿಯಟ್ನಾ ದೇಶವು ಜಗತ್ತಿನಲ್ಲೇ ಹಣ್ಣುಗಳನ್ನು ಬೃಹತ್ ಪ್ರಮಾಣದಲ್ಲಿ ರಫ್ತುಮಾಡುವ ದೇಶವಾಗಿದೆ. ನಾವು ಅವರೊಡನೆ ಮಾತನಾಡಲು ಪ್ರಾರಂಭಿಸಿದಾಗ, ಅವರು ನಮ್ಮನ್ನು ನೋಡಿ ನಕ್ಕರು! ಅವರು “ಇಪ್ಪತ್ತೆರಡು ವರ್ಷಗಳ ಹಿಂದೆ, ನಾವು ಮೂರೂ ಜನ ದೆಹಲಿಯ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೆವು. ನಾವು ಇಲ್ಲಿ ಎಲ್ಲವನ್ನೂ ಕಲಿತೆವು ಮತ್ತು ಅದನ್ನು ನಾವು ನಮ್ಮ ಭೂಮಿಯಲ್ಲಿ ಪ್ರಯೋಗಿಸಿದೆವು. ನೀವು, ನಿಮ್ಮ ಜ್ಞಾನವನ್ನೆಲ್ಲಾ ಕಾಗದಲ್ಲಿ ಬರೆಯುತ್ತೀರಿ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಹೋಗಿ ಪ್ರಬಂಧಗಳನ್ನು ಮಂಡಿಸುತ್ತೀರಿ, ಆದರೆ ಅದನ್ನು ನೆಲಕ್ಕಿಳಿಸುವುದಿಲ್ಲ. ಅದೇ ನಿಮ್ಮ ಸಮಸ್ಯೆ !” ಎಂದು ಹೇಳಿದರು.

ಈ ಕಾರಣದಿಂದಲೇ ನಾವು ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ಯವಿದ್ಯಾಲಯ ಮತ್ತು ಅರಣ್ಯ ಕಾಲೇಜಿನೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಈ ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಎಲ್ಲಾ ವಿಜ್ಞಾನವನ್ನು ಹೇಗೆ ಭೂಮಿಯಲ್ಲಿ ಜಾರಿಗೊಳಿಸಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ.

2. ಹಸಿರುಹೊದಿಕೆಯ ನಾಶ

ನಲವತ್ತು ವರ್ಷಗಳ ಹಿಂದೆ, ನಾನು ಒಂದು ಹೊಲದಲ್ಲಿ ಕೃಷಿ ಮಾಡಿಕೊಂಡು ಜೀವಿಸುತ್ತಿದ್ದಾಗ, ಪ್ರತಿಯೊಬ್ಬ ರೈತನೂ ಅವನ ಭೂಮಿಯಲ್ಲಿ ಕೆಲವು ಮರಗಳನ್ನು ಹೊಂದಿರುವುದು ಒಂದು ಸಹಜ ಸಂಗತಿಯಾಗಿತ್ತು. ಅದು ಅವನಿಗೆ ವಿಮೆಯಾಗಿರುತ್ತಿತ್ತು.

ಈ ಅಭ್ಯಾಸವು ವಿಶೇಷವಾಗಿ ಕರ್ನಾಟಕದಲ್ಲಿ ಬಲವಾಗಿದೆ. ಅವರು ಮರಕ್ಕೆ ತಮ್ಮ ಮಗ ಅಥವಾ ಮಗಳ ಹೆಸರಿಡುತ್ತಿದ್ದರು. ರೈತನ ಮಗಳ ಮದುವೆಯ ಸಮಯಕ್ಕೆ ಮರವನ್ನು ಕಡಿಯುತ್ತಿದ್ದರು ಮತ್ತು ಅದರಿಂದ ಮದುವೆಯ ಖರ್ಚು ಕಳೆದುಹೋಗುತ್ತಿತ್ತು. ಅವನ ಮಗ ಉನ್ನತ ಶಿಕ್ಷಣಕ್ಕೆ ಹೋಗಬೇಕೆಂದಾಗ, ಇನ್ನೊಂದು ಮರವನ್ನು ಕಡಿಯುತ್ತಿದ್ದುದರಿಂದ ಅವನ ಮಗನ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿತ್ತು.

ಕೃಷಿಭೂಮಿಯಲ್ಲಿ ಯಾವಾಗಲೂ ಮರಗಳಿರುತ್ತಿದ್ದವು. ಆದರೆ ನಲವತ್ತು ವರ್ಷಗಳ ಹಿಂದೆ, ರಾಸಾಯನಿಕ ಗೊಬ್ಬರಗಳ ಕಂಪನಿಗಳು ಭಾರತದ ಹಳ್ಳಿಗಳಲ್ಲಿ, ನೀವು ನಿಮ್ಮ ಭೂಮಿಯಲ್ಲಿ ಮರಗಳನ್ನು ಇಟ್ಟುಕೊಂಡರೆ, ಅವುಗಳ ಬೇರುಗಳು ಗೊಬ್ಬರವನ್ನೆಲ್ಲಾ ತಿಂದುಹಾಕುವುದರಿಂದ ನಿಮ್ಮ ಬೆಳೆಗೆ ಹಾನಿಯಾಗುತ್ತದೆ ಎಂದು ಪ್ರಚಾರ ಮಾಡಲು ಪ್ರಾರಂಭಿಸಿದರು. ಅವರು ರೈತರ ಜಮೀನಿನಲ್ಲಿದ್ದ ಮರಗಳನ್ನೆಲ್ಲಾ ಕಡಿದುಹಾಕಲು ಹೇಳಿದರು. ನಾವು ಲಕ್ಷಗಟ್ಟಲೆ ಮರಗಳನ್ನು ಕಡಿದುಹಾಕಿದೆವು ಏಕೆಂದರೆ ಮರಗಳಿಂದ ರಾಸಾಯನಿಕ ಗೊಬ್ಬರ ನಷ್ಟವಾಗುತ್ತದೆ ಎಂದು ನಾವು ಭಾವಿಸಿದೆವು.

ನಾವು ಇಂದು, ಅಂತರ್ಜಲ ಮತ್ತು ನದಿ ನೀರನ್ನೂ ಸೇರಿ, ನಮ್ಮ ಎಲ್ಲಾ ನೀರಿನ ಮೂಲಗಳೂ ಕ್ಷೀಣಿಸಿರುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇದಕ್ಕೆ ಕಾರಣ, ನಮ್ಮ ಉಪಖಂಡದಲ್ಲಿ ಕಳೆದ ಶತಮಾನದಲ್ಲಿ ಮಳೆಯ ಪ್ರಮಾಣ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿದ್ದರೂ, ನಮ್ಮ ಮಣ್ಣಿನಲ್ಲಿ ನೀರನ್ನು ಹಿಡಿದಿಡುವ ಸಾಮರ್ಥ್ಯ ನಾಶವಾಗಿದೆ ಏಕೆಂದರೆ ನಾವು ಕಾಡನ್ನು ನಾಶಮಾಡಿದ್ದೇವೆ. ಮಳೆ ಬಂದಾಗ, ನೀರು ಹರಿದುಹೋಗುತ್ತದೆ ಮತ್ತು ಪ್ರವಾಹ ಉಂಟಾಗುತ್ತದೆ. ಮಳೆ ನಿಂತ ಮೇಲೆ, ಬರ ಉಂಟಾಗುತ್ತದೆ. ಎಲ್ಲಾ ನೀರು ವೇಗವಾಗಿ ನದಿಗೆ ಸೇರದಿರುವಂತೆ ನಾವು ಮಾಡಬೇಕು. ಇದನ್ನು ಮಾಡಲು ಇರುವ ಏಕೈಕ ವಿಧಾನವೆಂದರೆ ಹೆಚ್ಚು ಹೆಚ್ಚು ಸಸ್ಯಸಂಪತ್ತನ್ನು ಸೃಷ್ಟಿಸುವುದು. ಇದೇನೂ ರಾಕೆಟ್ ವಿಜ್ಞಾನವಲ್ಲ. ಇದನ್ನು ನಾನು - ವಿಶ್ವಸಂಸ್ಥೆ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಸೇರಿ ಜಗತ್ತಿನ ಎಲ್ಲಾ ಕಡೆಗಳಲ್ಲೂ ಪ್ರತಿಪಾದಿಸುವುದು ನನ್ನ ಧ್ಯೇಯವಾಗಿದೆ. ಸೇತುವೆಗಳು, ಚೆಕ್ ಡ್ಯಾಂಗಳು ಮತ್ತು ಬ್ಯಾರೇಜುಗಳೂ ನೀರನ್ನು ಉಪಯೋಗಿಸಲು ಸೂಕ್ತ, ಆದರೆ ನೀವು ಇವುಗಳಿಂದ ನೀರಿನ ಮೊತ್ತವನ್ನು ಹೆಚ್ಚಿಸಲು ಆಗುವುದಿಲ್ಲ. ನೀವು ನಿಜವಾಗಲೂ ನೀರನ್ನು ಹಿಡಿದಿಡಲು ಸಾಧ್ಯವಾಗುವ ಏಕೈಕ ಮಾರ್ಗವೆಂದರೆ ಅದು ಸಸ್ಯಸಂಪತ್ತನ್ನು ಹೆಚ್ಚಿಸುವುದು.

ಆದ್ದರಿಂದಲೇ ನಾವು ‘ಕಾವೇರಿ ಕೂಗು’ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ನಾವು ಅರಣ್ಯಕೃಷಿಯ ಮೂಲಕ ರೈತರು ತಮ್ಮ ಜಮೀನಿನಲ್ಲಿ 242 ಕೋಟಿ ಮರಗಳನ್ನು ನೆಡಲು ಬೆಂಬಲಿಸಲು ಉದ್ಧೇಶಿಸಿದ್ದೇವೆ. ಕಾವೇರಿ ಮೊದಲನೆಯ ಹೆಜ್ಜೆಯಷ್ಟೆ. ನಾವು ಇದನ್ನು ಹನ್ನೆರಡು ವರ್ಷಗಳಲ್ಲಿ ಮಾಡಲು ಸಾಧ್ಯವಾದರೆ, ಇದು ದೇಶಕ್ಕೆ ಮತ್ತು ಉಷ್ಣವಲಯದ ಜಗತ್ತಿಗೆ ಒಂದು ವರದಾನವಾಗಲಿದೆ.

3. ಏರುತ್ತಿರುವ ಜನಸಂಖ್ಯೆ

ನಾವು ಎದುರಿಸುತ್ತಿರುವ ಯಾವುದೇ ಸಮಸ್ಯೆಯಾಗಲಿ - ಪರಿಸರ, ನೀರು ಅಥವಾ ಇನ್ನಿತರ ಯಾವುದೇ ಆಗಲಿ, ಈ ಸಮಸ್ಯೆಗಳಿಗೆ ಒಂದು ಪ್ರಧಾನ ಕಾರಣವೆಂದರೆ ಮನುಷ್ಯರ ಹೊಣೆಗಾರಿಕೆಯಿಲ್ಲದ ಸಂತಾನೋತ್ಪತ್ತಿ ಪ್ರಕ್ರಿಯೆ. ಭಾರತವೀಗ ಸುಮಾರು 130 ಕೋಟಿ ಜನಸಂಖ್ಯೆಯಿರುವ ದೇಶವಾಗಿದೆ. ಇಲ್ಲಿ ಈಗ ಈ 130 ಕೋಟಿ ಜನರಿಗೆ ಸಾಕಾಗುವಷ್ಟು ನೆಲವಾಗಲೀ, ನದಿಯಾಗಲೀ, ಬೆಟ್ಟಗಳಾಗಲೀ ಅಥವಾ ಒಂದು ಚೂರು ಆಕಾಶವಾಗಲೀ ಇಲ್ಲ.

ನೀವು ಭಾರತವು ಎದುರಿಸುತ್ತಿರುವ ನೀರಿನ ಪರಿಸ್ಥಿತಿಯನ್ನು ಗಮನಿಸಿದರೆ, ಇಂದಿನ ನೀರಿನ ತಲಾವಾರು ಲಭ್ಯತೆ 1947 ಕ್ಕೆ ಹೋಲಿಸಿದರೆ ಕೇವಲ 25% ಅಷ್ಟೇ ಆಗಿದೆ. ಇದು ಪ್ರಗತಿಯಲ್ಲ. ಇದು ಅಭಿವೃದ್ಧಿಯಲ್ಲ. ಅದು ಈಗಾಗಲೇ ತಮಿಳುನಾಡಿನ ಅನೇಕ ಪಟ್ಟಣಗಳಲ್ಲಿ ಆಗುತ್ತಿದೆ, ಅಲ್ಲಿ ಜನರು ಮೂರು ದಿನಗಳಿಗೊಮ್ಮೆ ಸ್ನಾನ ಮಾಡುತ್ತಾರೆ.

ನಮ್ಮದು ನೀವು ಊಟ ಮಾಡದಿದ್ದರೂ ಪರವಾಗಿಲ್ಲ, ಸ್ನಾನ ಮಾತ್ರ ಮಾಡಲೇಬೇಕು ಎನ್ನುವ ಸಂಸ್ಕೃತಿಯಾಗಿದೆ. ನಮ್ಮ ಹವಾಮಾನ ಹಾಗಿದೆ. ಆದರೆ ಈಗ ಜನರು ಸ್ನಾನವನ್ನು ತ್ಯಜಿಸುತ್ತಿದ್ದಾರೆ. ಇದು ಅಭಿವೃದ್ಧಿಯಲ್ಲ ಅಥವಾ ಶ್ರೇಯಸ್ಸಲ್ಲ. ಮುಂದೆ ನೀವು ಎರಡು ದಿನಕ್ಕೊಮ್ಮೆ ನೀರು ಕುಡಿಯಬೇಕಾಗಿ ಬರಬಹುದು!

ನಾವು ಮರಣವನ್ನು ಮುಂದೂಡಲು ಸಮರ್ಥರಾಗಿದ್ದೇವೆ, ಆದರೆ ನಾವು ಜನನವನ್ನು ನಿಯಂತ್ರಿಸಲಿಲ್ಲ. ನಾವು ಪ್ರಜ್ಞಾಪೂರ್ವಕವಾಗಿ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸಬೇಕು ಅಥವಾ ಪ್ರಕೃತಿಯು ಅದನ್ನು ಕ್ರೂರವಾದ ರೀತಿಯಲ್ಲಿ ಮಾಡುತ್ತದೆ – ನಮಗಿರುವ ಆಯ್ಕೆ ಇದೇ. ನಾವು ಪ್ರಜ್ಞಾಪೂರ್ವಕವಾದ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎನ್ನುವುದೇ ಮಾನವರಾಗಿರುವುದರ ಮೂಲಭೂತ ಸಾರವಾಗಿದೆ. ನಾವು ಮನುಷ್ಯರಾದರೆ, ನಾವದನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು ಮತ್ತು ನಮಗೆ ಅಂತಹ ದುರಂತಗಳು ಆಗದೇ ಇರುವ ಹಾಗೆ ಎಚ್ಚರವಹಿಸಬೇಕು.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. isha.sadhguru.org/in/kn) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ - kannadapublications@ishafoundation.org)