ಆಧ್ಯಾತ್ಮಿಕ ಪ್ರಕ್ರಿಯೆಯು ಜೀವನದಲ್ಲಿ ಮಿತಿಯಿಲ್ಲದ ಉತ್ಸಾಹವನ್ನು ಹೊಂದಿರುವುದಕ್ಕಿಂತ ಭಿನ್ನವಾಗಿಲ್ಲ ಎಂದು ಸದ್ಗುರುಗಳು ಹೇಳುತ್ತಾರೆ.

ಸದ್ಗುರು: ಸಾಮಾನ್ಯವಾಗಿ ಜಗತ್ತಿನಲ್ಲಿ, ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ಈಡೇರಿಸುವ ಬಗ್ಗೆ ಯೋಚಿಸುತ್ತಾರೆ. ನಿಮ್ಮ ಕನಸು ಏನೇ ಆಗಿರಲಿ, ಅದು ನಿಮ್ಮ ಗತಕಾಲದ ಉತ್ಪ್ರೇಕ್ಷಿತ ವಿಸ್ತರಣೆಯಾಗಿದೆ. ನಿಮಗೆ ಗೊತ್ತಿಲ್ಲದೇ ಇರುವುದನ್ನು ನೀವು ಕನಸು ಕಾಣಲು ಸಾಧ್ಯವಿಲ್ಲ. ಮೂಲಭೂತವಾಗಿ, ನಿಮಗೆ ತಿಳಿದಿರುವ ಆಧಾರದ ಮೇಲೆಯೇ ನೀವು ಗುರಿಯನ್ನು ನಿರ್ಧರಿಸಿದ್ದೀರಿ. ನಿಮಗೆ ಈಗಾಗಲೇ ತಿಳಿದಿರುವ ವಿಚಾರಗಳನ್ನು ಕುರಿತೇ ನಿಮ್ಮ ಗುರಿಯನ್ನು ನಿರ್ಧರಿಸಿದರೆ ಹೊಸತೇನನ್ನೂ ಮಾಡಿದಂತೆ ಆಗುವುದಿಲ್ಲ ಎಂದರ್ಥ. ಈ ರೀತಿಯ ಕನಸು ಒಂದು ಸಾಧ್ಯತೆಯಲ್ಲ, ಇದು ಒಂದು ನಿರ್ದಿಷ್ಟ ಹತಾಶೆಯಶ್ಟೇ. ನೀವು ಭವಿಷ್ಯದಲ್ಲಿ ಭೂತಕಾಲವನ್ನು ಹುಡುಕುತ್ತಿದ್ದೀರಿ. ನೀವು ನಿಜವಾಗಿಯೂ ಮುಂದೆ ಸಾಗುತ್ತಿರುವಿರಿ ಏಂದು ಭಾವಿಸುತ್ತಾ ನಿಮ್ಮನ್ನು ನೀವು ಹಿಂದಕ್ಕೆ ತಳ್ಳಿಕೊಳ್ಳುತ್ತಿದ್ದೀರಿ

ಗುರಿಯಿಲ್ಲದೆ ಸುಮ್ಮನೇ ಜೀವಿಸುವುದೇ ಆಧ್ಯಾತ್ಮಿಕ ಪ್ರಕ್ರಿಯೆ.

ಗುರಿಯಿಲ್ಲದೆ ಸುಮ್ಮನೇ ಜೀವಿಸುವುದೇ ಆಧ್ಯಾತ್ಮಿಕ ಪ್ರಕ್ರಿಯೆ. ಇದರರ್ಥ ಆಲಸ್ಯ ಮತ್ತು ಸೋಂಬೇರಿತನದಿಂದ ಇರುವುದು ಎಂದಲ್ಲ. ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಇದೀಗ ಏನು ಇದೆಯೊ ಅದರಲ್ಲಿ ಯಾವುದೇ ಗುರಿಯಿಲ್ಲದೆ ತೀವ್ರವಾಗಿ ತೊಡಗಿಸಿಕೊಳ್ಳುವುದು. ಈ ರೀತಿಯಾಗಿ ಇಲ್ಲಿ ಕುಳಿತುಕೊಳ್ಳಲು ನಿಮಗೆ ಧೈರ್ಯವಿದ್ದರೆ, “ನಾಳೆ ನನಗೆ ಏನಾದರೂ ಸರಿ, ಆದರೆ ಈಗ ನನ್ನಿಂದ ಎಷ್ಟು ಸಾಧ್ಯವೋ ಅದನ್ನು ಮಾಡುತ್ತೇನೆ”. ಹೀಗಿದ್ದಾಗ ನೀವು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕರಾಗಿರುತ್ತೀರಿ.

ಕೆಲವು ವರ್ಷಗಳ ಹಿಂದೆ, ಪ್ರಪಂಚದ ಅತಿ ಎತ್ತರದ ಪರ್ವತ ಶಿಖರಗಳನ್ನು ಏರಿದ ಸಾಹಸಿಗರ ಒಂದು ಸಣ್ಣ ಗುಂಪನ್ನು ನಾನು ಭೇಟಿಯಾದೆ. ಅವರು ಉತ್ತರ ಧ್ರುವದಾದ್ಯಂತ ನಡೆದು, ಆಂಡಿಸ್‌ನಲ್ಲಿ ಮೂರು ತಿಂಗಳ ಕಾಲ ಚಳಿಗಾಲದಲ್ಲಿ ಸಮುದ್ರ ಮಟ್ಟದಿಂದ ಇಪ್ಪತ್ತೆರಡು ಸಾವಿರ ಅಡಿಗಳಷ್ಟು ಏರಿದರು. ಮುಂದಿನ ಕ್ಷಣದಲ್ಲಿ ಏನು ಬರಲಿದೆ ಎಂದು ಅರಿಯದ ಪರಿಸ್ಥಿತಿಯಲ್ಲಿ ಇರಲು ಅವರು ಬಯಸುತ್ತಾರೆ. ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು ಮತ್ತು ನಮ್ಮ ಸ್ವಯಂಸೇವಕರೊಬ್ಬರು ಅವರೊಂದಿಗೆ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದರು. ನಾನು ಅವರನ್ನು ನೋಡುತ್ತಲೇ ಅವರೊಂದಿಗೆ ಮೂರು ದಿನಗಳನ್ನು ವ್ಯರ್ಥ ಮಾಡುವ ಅವಶ್ಯಕತೆ ಇಲ್ಲ ಎಂದು ಮನಗಂಡೆ. ನನ್ನೊಂದಿಗೆ ಕುಳಿತು ಕಣ್ಣು ಮುಚ್ಚಿಕೊಳ್ಳಿ ಎಂದಷ್ಟೇ ನಾನು ಅವರಿಗೆ ಹೇಳಿದೆ. ಒಂದು ಪದವನ್ನೂ ಹೇಳದೆ ಎಲ್ಲವೂ ಸಂಭವಿಸಿತು. ಅವರು ತಮ್ಮ ಜೀವನದಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ, ಅವರು ಸಾಹಸವನ್ನು ಮಾತ್ರ ಬಯಸುತ್ತಿದ್ದರು - ಮುಂದಿನ ಕ್ಷಣದಲ್ಲಿ ಏನಾಗಬಹುದು ಎಂದು ಅವರಿಗೆ ತಿಳಿಯದ ರೀತಿಯಲ್ಲಿ ಬದುಕಲು ಅವರು ಬಯಸುವವರು. ನಾನು ಅವರಿಗೆ ಏನನ್ನೂ ಕಲಿಸಬೇಕಾಗಿರಲ್ಲ, ಅವರು ಚೆನ್ನಾಗಿ ತಯಾರಾಗಿದ್ದರಿಂದ ನಾನು ಅವರಲ್ಲಿ ಒಂದು ಕಿಚ್ಚನ್ನು ಹತ್ತಿಸಬೇಕಾಗಿತ್ತು ಅಷ್ತೇ. ಅವರ ದೇಹಗಳು ಉತ್ತಮ ಮತ್ತು ಆರೋಗ್ಯಕರವಾಗಿದ್ದವು, ಮನಸ್ಸು ಮುಕ್ತವಾಗಿತ್ತು ಮತ್ತು ಎಲ್ಲದಕ್ಕೂ ಸಿದ್ಧವಾಗಿತ್ತು. ಅದಷ್ಟೇ ಬೇಕಾಗಿರುವುದು.

ನೀವು ನಾಳೆಗಾಗಿ ಎದುರು ನೋಡುತ್ತಿದ್ದೀರಿ. ಅದು ಏನಾದರೂ ಆಗಿರಬಹುದು. ಅದು ಏನೆಂಬುದಕ್ಕೆ ಪ್ರಾಮುಖ್ಯತೆಯಿಲ್ಲ...

ಸುಮ್ಮನೆ ಈ ಕ್ಷಣದಲ್ಲಿ ಇರಲು, ನೀವು ಹುಚ್ಚು ಧೈರ್ಯದಿಂದಲೋ ಅಥವಾ ಸೃಷ್ಟಿಕರ್ತನ ಮೇಲಿನ ವಿಶ್ವಾಸದಿಂದಲೋ ಇರಬಹುದು. ಇವು ಎರಡು ಮಾರ್ಗಗಳು. ಈ ಸಾಹಸಿಗರು ಅದನ್ನೊಂದು ಹುಚ್ಚು ಧೈರ್ಯದಿಂದ ಮಾಡುತ್ತಿದ್ದರು. ಪ್ರತಿಯೊಬ್ಬರಿಗೂ ಆ ಧೈರ್ಯವಿರುವುದಿಲ್ಲ ಆದರೆ ಕನಿಷ್ಟ ನೀವು ಸೃಷ್ಟಿಕರ್ತನ ಮೇಲೆ ವಿಶ್ವಾಸವನ್ನು ಹೊಂದಿರಬೇಕು. ಸೃಷ್ಟಿಕರ್ತನ ಮೇಲೆ ವಿಶ್ವಾಸವಿಡುವುದು ಎಂದರೆ ನಿಮ್ಮ ಮನಸ್ಸಿನಲ್ಲಿ ದೇವರೊಂದಿಗೆ ಮಾತನಾಡುವುದು ಅಥವಾ ಅಂತಹದ್ದಲ್ಲ. ನೀವು ಎಲ್ಲಿದ್ದೀರೋ ಅಲ್ಲಿ ಆರಾಮವಾಗಿ ಕುಳಿತಿದ್ದೀರಿ ಎಂಬ ಸತ್ಯವೇ ವಿಶ್ವಾಸ. ಏಕೆಂದರೆ ಭೂಮಿಯು ತೆರೆದು ಜನರನ್ನು ನುಂಗಿದ ಘಟನೆಗಳು ನಡೆದಿವೆ. ಆಕಾಶದಿಂದ ತುಣುಕುಗಳು ಜನರ ಮೇಲೆ ಬಿದ್ದ ಕಾರಣ ನುಜ್ಜುಗುಜ್ಜಾಗಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಉಸಿರಾಡುವ ಗಾಳಿಯೇ ತಮ್ಮ ವಿರುಧ್ಧ ತಿರುಗಿಬಿದ್ದು, ಜನರು ಸಾವನ್ನಪ್ಪಿರುವ ಸಂದರ್ಭಗಳಿವೆ. ಗೋಲಾಕಾರದ ಈ ಭೂಮಿಯು ಭಾರಿ ವೇಗದಲ್ಲಿ ತಿರುಗುತ್ತಿದೆ ಹಾಗೂ ಸೌರಮಂಡಲ ಮತ್ತು ನಕ್ಷತ್ರಪುಂಜವು ಯಾವ ವೇಗದಲ್ಲಿ ಚಲಿಸುತ್ತಿದೆ ಎಂಬುದು ನಮಗೆ ತಿಳಿದೇ ಇಲ್ಲ. ಭೂಮಿ ಇದ್ದಕ್ಕಿದ್ದಂತೆ ವಿರುದ್ಧ ದಿಕ್ಕಿನಲ್ಲಿ ತಿರುಗಲು ನಿರ್ಧರಿಸುತ್ತದೆ ಎಂದು ಭಾವಿಸೋಣ, ನೀವು ಇದೀಗ ಕುಳಿತಿರುವ ಸ್ಥಳದಿಂದ ನೀವು ಹಾರಿಹೋಗಬಹುದು. ನೀವು ಒಂದು ಕಡೆ ಕುಳಿತುಕೊಳ್ಳಲು, ನಗಲು, ಯಾರೊಂದಿಗಾದರೂ ಮಾತನಾಡಲು, ವಿಶ್ವಾಸ ಬೇಕು, ಅಗಾಧವಾದ ವಿಶ್ವಾಸ, ಅಲ್ಲವೇ?

ನೀವು ಈ ವಿಶ್ವಾಸವನ್ನು ಹೊಂದಿದ್ದರೆ, ನೀವು ಸುಮ್ಮನೆ ಇಲ್ಲಿ ಇರಬಹುದು ಹಾಗೂ ಅದು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ಮೊದಲ ಹೆಜ್ಜೆಯಾಗಿದೆ. ನೀವು ನಾಳೆಗಾಗಿ ಎದುರು ನೋಡುತ್ತಿದ್ದೀರಿ. ಅದು ಏನಾದರೂ ಆಗಿರಬಹುದು. ಅದು ಏನೆಂಬುದು ಇಲ್ಲಿ ವಿಷಯವಲ್ಲ, ನೀವು ಅದನ್ನು ಎದುರು ನೋಡುತ್ತಿದ್ದೀರಿ. ಇದುವೇ ಜೀವನಕ್ಕೆ ಮಿತಿಯಿಲ್ಲದ ಉತ್ಸಾಹ.

Editor's Note: Find out more about the incredible potential every human being carries, in the free ebook, “From Creation to Creator”.