ನಾವು ಗುರು ಪೌರ್ಣಮಿಯನ್ನು ಆಚರಿಸುವುದು ಏಕೆ?
ಆಷಾಢದ ಪೌರ್ಣಮಿಯನ್ನು ಗುರು ಪೌರ್ಣಮಿಯೆಂದು ಆಚರಿಸಲಾಗುತ್ತದೆ. ನಾವು ಗುರು ಪೌರ್ಣಮಿಯನ್ನು ಏಕೆ ಆಚರಿಸುತ್ತೇವೆ ಎನ್ನುವುದನ್ನು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ ಮತ್ತು 15,000 ವರ್ಷಗಳ ಹಿಂದಿನ, ಮೊದಲ ಗುರುವಿನ ಕಥೆಯನ್ನು ಮೆಲುಕು ಹಾಕುತ್ತಾರೆ.
ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ. ಈ ಪವಿತ್ರ ಹಬ್ಬವು ಈ ವರ್ಷ ಜುಲೈ 16 ನೇ ತಾರೀಖಿಗೆ ಬೀಳುತ್ತದೆ. ಈ ಲೇಖನದಲ್ಲಿ, ಸದ್ಗುರುಗಳು ನಾವು ಗುರು ಪೌರ್ಣಮಿಯನ್ನು ಏಕೆ ಆಚರಿಸುತ್ತೇವೆ ಎಂಬುದನ್ನು ವಿವರಿಸುತ್ತಾರೆ ಮತ್ತು 15,000 ವರ್ಷಗಳ ಹಿಂದಿನ ಮೊದಲ ಗುರುವಿನ ಕಥೆಯನ್ನು ಮೆಲುಕು ಹಾಕುತ್ತಾರೆ.
ಸದ್ಗುರು: ಯೋಗ ಸಂಸ್ಕೃತಿಯಲ್ಲಿ, ಶಿವನನ್ನು ದೇವರೆಂದು ಪರಿಗಣಿಸಲಾಗುವುದಿಲ್ಲ. ಅವನನ್ನು ಮೊದಲ ಯೋಗಿ, ಆದಿಯೋಗಿಯೆಂದು ಪರಿಗಣಿಸಲಾಗುತ್ತದೆ. ಆದಿಯೋಗಿಯು ಸ್ವತಃ ಆದಿಗುರು – ಮೊದಲ ಗುರುವಾಗಿ ರೂಪಾಂತರಗೊಂಡ ಪೌರ್ಣಮಿಯೇ ಗುರು ಪೌರ್ಣಮಿ.15,000 ವರ್ಷಗಳಿಗಿಂತಲೂ ಹಿಂದೆ, ವರ್ಷದ ಈ ಸಮಯದಲ್ಲಿ, ಆದಿಯೋಗಿಯ ಗಮನವು ಅವನ ಏಳು ಶಿಷ್ಯರು - ಈಗ ಸಪ್ತಋಷಿಗಳು ಎಂದು ಪ್ರಸಿದ್ಧರಾಗಿರುವವರ ಮೇಲೆ ಬಿದ್ದಿತು. ಅವರು ಸತತ 84 ವರ್ಷಗಳ ಕಾಲ ಕೆಲ ಸರಳ ಸಿದ್ಧತೆಗಳನ್ನು ಮಾಡಿದ್ದರು. ಸೂರ್ಯನ ಚಲನೆ ಬೇಸಿಗೆಯ ಅಯನ ಸಂಕ್ರಾಂತಿಯಿಂದ ಚಳಿಗಾಲದ ಅಯನ ಸಂಕ್ರಾಂತಿಗೆ ಬದಲಾದಾಗ - ಅಂದರೆ ದಕ್ಷಿಣಾಯನದಂದು, ಆದಿಯೋಗಿಯು ಈ ಏಳು ಶಿಷ್ಯಂದಿರನ್ನು ನೋಡಿದ. ಅವರೆಲ್ಲರೂ ಸಹ ಜ್ಞಾನವನ್ನು ಸ್ವೀಕರಿಸಲು ಸಿದ್ಧವಾಗಿ ಹೊಳೆಯುವ ಧಮನಿಗಳಂತಾಗಿರುವುದನ್ನು ಅವನು ಕಂಡ. ಹೀಗಿದ್ದಾಗ ಶಿವನಿಗೆ ಅವರನ್ನು ಇನ್ನು ಮುಂದೆ ಕಡೆಗಣಿಸಲು ಸಾಧ್ಯವಾಗಲಿಲ್ಲ. ಕೆಲ ದಿನಗಳವರೆಗೆ ಅವನು ಅವರನ್ನು ಹತ್ತಿರದಿಂದ ಗಮನಿಸಿ, ಮುಂದಿನ ಹುಣ್ಣಿಮೆ ಬಂದಾಗ, ಅವನೊಬ್ಬ ಗುರುವಾಗಲು ನಿರ್ಧರಿಸಿದ. ಆ ದಿನವನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ. ಅವನು ದಕ್ಷಿಣ ದಿಕ್ಕಿಗೆ ತಿರುಗಿ ತನ್ನ ಏಳು ಶಿಷ್ಯಂದಿರಿಗೆ ಯೋಗ ವಿಜ್ಞಾನದ ಪ್ರಸಾರಣೆಯನ್ನು ಆರಂಭಿಸಿದ.
ಗುರು ಪೌರ್ಣಮಿ: ಮೊದಲ ಗುರು ಉದಿತನಾದ ದಿನ
ಯೋಗ ವಿಜ್ಞಾನವು ದೇಹವನ್ನು ಬಗ್ಗಿಸುವುದರ ಬಗ್ಗೆಯಾಗಲಿ ಅಥವಾ ಉಸಿರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆಯಾಗಲಿ ಅಲ್ಲ. ಇದು ಮಾನವ ಜೀವವ್ಯವಸ್ಥೆಯ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳುವ, ಮತ್ತು ಬೇಕೆಂದಾಗ ಅದನ್ನು ಕಳಚುವ ಅಥವಾ ಒಟ್ಟುಗೂಡಿಸಲು ಸಾಧ್ಯವಾಗಿಸುವಂತಹ ವಿಜ್ಞಾನವಾಗಿದೆ. ಅಸ್ತಿತ್ವ ಮತ್ತು ಸೃಷ್ಟಿಯ ಮೂಲವನ್ನು ಜನಗಳು ಗ್ರಹಿಸುವ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಆದಿಯೋಗಿಯು ಒಂದು ಸಮಗ್ರ ಬದಲಾವಣೆಯನ್ನು ತಂದ. ಮತ್ತವನು, ಸೃಷ್ಟಿಯ ಒಂದು ಸಣ್ಣ ತುಣುಕು ಮತ್ತು ಸೃಷ್ಟಿಯ ಮೂಲದ ನಡುವಿನ ಸೇತುವೆಯಾಗಿ ತನ್ನನ್ನು ತಾನು ರಚಿಸಿಕೊಂಡ. "ನೀವು ಈ ಪಥದಲ್ಲಿ ಸಾಗಿದರೆ, ನಿಮ್ಮ ಹಾಗೂ ಸೃಷ್ಟಿಕರ್ತ ಎಂದು ನೀವು ಯಾರನ್ನು ಕರೆಯುತ್ತೀರೋ, ಇಬ್ಬರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ." ಎಂದವನು ಹೇಳಿದ. ಆ ಪಯಣವು ಸೃಷ್ಟಿಯಿಂದ ಸೃಷ್ಟಿಕರ್ತನ ಕಡೆಗಾಗಿದೆ.
ಆದಿಯೋಗಿಯು ಮಾತನಾಡಿದಾಗ, ಅವನು ಯಾವುದೇ ಧರ್ಮ, ತತ್ತ್ವಶಾಸ್ತ್ರ ಅಥವಾ ನಂಬಿಕೆಯ ಕಟ್ಟುಪಾಡುಗಳ ಬಗ್ಗೆ ಮಾತನಾಡಲಿಲ್ಲ. ಅವನೊಂದು ವಿಜ್ಞಾನದ ಬಗ್ಗೆ, ವೈಜ್ಞಾನಿಕವಾದ ವಿಧಾನದ ಬಗ್ಗೆ ಮಾತನಾಡಿದ. ಪ್ರಕೃತಿಯು ಮನುಷ್ಯ ಜೀವನದ ಮೇಲೆ ಹೇರಿರುವ ಮಿತಿಗಳನ್ನು ಆ ವಿಧಾನಗಳ ಮೂಲಕ ನೀವು ಅಳಿಸಿಹಾಕಬಹುದಾಗಿದೆ.
ನಾವು ನಿರ್ಮಿಸಿಕೊಳ್ಳುವ ಪ್ರತಿಯೊಂದು ಗಡಿಯೂ ಸಹ ಆರಂಭದಲ್ಲಿ ಸ್ವಯಂ-ರಕ್ಷಣೆಯ ಉದ್ದೇಶವನ್ನೇ ಹೊಂದಿರುತ್ತದೆ. ರಕ್ಷಣೆಯ ಉದ್ದೇಶದಿಂದಲೇ ನಾವು ನಮ್ಮ ಮನೆಯ ಸುತ್ತ ಬೇಲಿಯನ್ನು ಕಟ್ಟುತ್ತೇವೆ. ಆದರೆ ಆ ಪರಿಮಿತಿಗಳನ್ನು ನೀವೇಕೆ ನಿರ್ಮಿಸಿಕೊಂಡಿರಿ ಎನ್ನುವುದರ ಅರಿವು ಒಮ್ಮೆ ನಿಮ್ಮಲ್ಲಿ ಹೊರಟುಹೋದರೆ, ನಿಮ್ಮ ಸ್ವಯಂ-ರಕ್ಷಣೆಯ ಗಡಿಗಳೇ ನಿಮ್ಮ ಸ್ವಯಂ-ಬಂಧನದ ಗಡಿಗಳಾಗಿ ಪರಿಣಮಿಸುತ್ತವೆ. ಮತ್ತು ಆ ಗಡಿಗಳು ಯಾವುದೋ ಒಂದು ರೂಪದಲ್ಲಿ ಇರುವುದಿಲ್ಲ. ಅವು ಹಲವು ಸಂಕೀರ್ಣ ರೂಪಗಳನ್ನು ಪಡೆದುಕೊಂಡಿರುತ್ತವೆ.
ನೀವು ನಿಮಗಾಗಿ ನಿರ್ಮಿಸಿಕೊಂಡ ಮಾನಸಿಕ ಗಡಿಗಳ ಬಗ್ಗೆ ಮಾತ್ರ ನಾನಿಲ್ಲಿ ಮಾತನಾಡುತ್ತಿಲ್ಲ. ನಾನು ಮಾತನಾಡುತ್ತಿರುವುದು ನಿಮ್ಮ ಸುರಕ್ಷತೆ ಹಾಗೂ ಸೌಖ್ಯಕ್ಕಾಗಿ ಪ್ರಕೃತಿ ರಚಿಸಿರುವ ಗಡಿಗಳ ಬಗ್ಗೆ. ಆದರೆ ಮಾನವರ ಸ್ವಭಾವ ಹೇಗಿದೆಯೆಂದರೆ, ನೀವು ನಿಮ್ಮ ಮೇಲೆ ಹೇರಲಾಗಿರುವ ಗಡಿಗಳನ್ನು ಮೀರದ ಹೊರತು ನಿಮಗೆ ನಿಜವಾದ ಸೌಖ್ಯದ ಅನುಭವವಾಗಲಾರದು. ಇದು ಮಾನವರ ದುಃಸ್ಥಿತಿ. ನಿಮಗೆ ಅಪಾಯವಿದ್ದಾಗ, ನಿಮ್ಮ ಸುತ್ತ ಕೋಟೆಗಳು ಇರಬೇಕೆಂದು ನಿಮಗನಿಸುತ್ತದೆ. ಯಾವ ಕ್ಷಣದಲ್ಲಿ ಅಪಾಯ ಇಲ್ಲವಾಗುತ್ತದೆಯೋ, ಆತಕ್ಷಣ, ಆ ಕೋಟೆಗಳೆಲ್ಲಾ ಕುಸಿದು ಕಣ್ಮರೆಯಾಗಬೇಕೆಂದು ನೀವು ಬಯಸುತ್ತೀರಿ.
ಆದರೆ ನಿಮ್ಮ ಸ್ವಯಂ-ರಕ್ಷಣೆಗಾಗಿ ನೀವು ಕಟ್ಟಿಕೊಂಡಂತಹ ಗಡಿಗಳು, ನೀವು ಬಯಸಿದಾಗ ಬಿದ್ದುಹೋಗದೇ ಇದ್ದರೆ, ನೀವು ಸೆರೆಮನೆಯಲ್ಲಿದ್ದಂತೆ ಮತ್ತು ಉಸಿರುಗಟ್ಟುತಿರುವಂತೆ ನಿಮಗೆ ಭಾಸವಾಗುತ್ತದೆ. ಏಕೆಂದರೆ ನಿಮ್ಮಲ್ಲಿ ವಿವೇಚನಾ ಶಕ್ತಿಯಿರುವುದರಿಂದ, ಯಾವುದೇ ಮಿತಿ ಅಥವಾ ನಿರ್ಬಂಧಗಳು ಬಹಳ ಕೆಟ್ಟದೆನಿಸುತ್ತವೆ. ಮನುಷ್ಯರು ಚಿತ್ರಹಿಂಸೆಗಿಂತ ಬಂಧನದಿಂದ ಹೆಚ್ಚು ನರಳುತ್ತಾರೆ. ಒಬ್ಬ ಮನುಷ್ಯನಿಗೆ ತಾನು ಬಂಧನಕ್ಕೊಳಗಾಗಿದ್ದೇನೆ ಎಂಬ ಭಾವ ಮೂಡಿದ ತಕ್ಷಣ, ಅವನ ನರಳಾಟ ಹೇಳತೀರದು.
ಗುರು ಪೌರ್ಣಮಿಯು ಆದಿಯೋಗಿಯ ವಿಧಾನಗಳನ್ನು ಕೊಂಡಾಡುತ್ತದೆ
ನಿಮ್ಮ ಗಡಿಗಳನ್ನು ಮೀರಲು ಅನುವು ಮಾಡಿಕೊಡುವಂತಹ ಅರಿವಿನ ಸಾಧನಗಳನ್ನು ನಿಮಗೆ ನೀಡುವುದೇ ಶಿವನ ಕಾಯಕವಾಗಿತ್ತು - ನಿಮ್ಮ ಭದ್ರಕೋಟೆಗಳನ್ನು ಅವುಗಳ ಉದ್ದೇಶ ಪೂರೈಸುವವರೆಗಷ್ಟೇ ಇಟ್ಟುಕೊಂಡು, ನಿಮಗವು ಬೇಡವೆಂದಾಕ್ಷಣ ಕಣ್ಮರೆಯಾಗಲು ಅನುವು ಮಾಡಿಕೊಡುವಂತಹ ಸಾಧನಗಳವು.
ನಿಮ್ಮ ಅಸ್ತಿತ್ವಕ್ಕೆ ಅಪಾಯಕಾರಿಯಾಗಿರುವ ಶಕ್ತಿಗಳಿಗೆ ಮಾತ್ರ ಕಾಣುವಂತಹ, ಆದರೆ ಸ್ವತಃ ನಿಮಗೆ ಕಾಣಿಸದೇ ಇರುವಂತಹ ಈ ಮಾಯಾವೀ ಕೋಟೆಯನ್ನು ನಿರ್ಮಿಸುವುದಾದರೂ ಹೇಗೆ? ಇದೇ ಆದಿಯೋಗಿಯ ಕೆಲಸವಾಗಿತ್ತು. ಪ್ರಕೃತಿಯ ಮೂಲಭೂತ ಮಾಯೆಯ ಸ್ವರೂಪವನ್ನೇ ಬಳಸಿಕೊಂಡು, ನೀವು ಬಂದು ಹೋಗಿ ಮಾಡಬಹುದಾದಂತಹ, ಆದರೆ ನಿಮ್ಮ ಶತ್ರುಗಳಿಗೆ ಒಳನುಸುಳಲು ಸಾಧ್ಯವಿರದಂತಹ ಈ ಮಾಯಾವೀ ಕೋಟೆಯನ್ನು ನಿರ್ಮಿಸಲು ಅವನು ಹಲವಾರು ಅದ್ಭುತವಾದ ವಿಧಾನಗಳನ್ನು ಹೊರತಂದ. ಇಂತಹದ್ದೊಂದು ಸಂಕೀರ್ಣ ಮತ್ತು ಅಸಾಧಾರಣವಾದ ಪ್ರಕ್ರಿಯೆ ಮೊದಲನೆ ಬಾರಿ ಮಾನವತೆಗೆ ದೊರೆತದ್ದರ ಸಂಭ್ರಮಾಚರಣೆಯೇ ಗುರು ಪೌರ್ಣಮಿ.
ಈ ದಿನದಂದು, ಮಾನವಕುಲದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ, ಮಾನವರದು ನಿಗದಿತವಾದ ಜೀವನವಲ್ಲ ಎನುವುದನ್ನು ಅವರಿಗೆ ನೆನಪಿಸಲಾಯಿತು. ಅವರು ಶ್ರಮಿಸಲು ಸಿದ್ಧರಿದ್ದರೆ, ಅಸ್ತಿತ್ವದಲ್ಲಿನ ಪ್ರತಿಯೊಂದು ಬಾಗಿಲೂ ಸಹ ಅವರಿಗಾಗಿ ತೆರೆದಿದೆ.
ಗುರು ಪೌರ್ಣಮಿಯನ್ನು ಜಾತಿ ಮತಗಳ ಭೇದವಿಲ್ಲದೆ ಆಚರಿಸಲಾಗುತ್ತದೆ
ಹಾಗಾಗಿ, ಈ ದಿನ ಮಾನವ ಜನಾಂಗಕ್ಕೆ ಅತ್ಯಂತ ಮಹತ್ವವಾದ ದಿನ. ಇತ್ತೀಚಿನವರೆಗೂ ಈ ನಾಡಿನಲ್ಲಿ ಅದನ್ನು ಹಾಗೆಯೇ ಆಚರಿಸಲಾಗುತ್ತಿತ್ತು. ಗುರು ಪೌರ್ಣಮಿ ಈ ರಾಷ್ಟ್ರದ ಪ್ರಮುಖ ಹಬ್ಬಗಳಲ್ಲಿ ಒಂದಾಗಿತ್ತು. ಜಾತಿ ಮತವೆಂಬ ಭೇದವಿಲ್ಲದೆ ಜನರು ಇದನ್ನು ಆಚರಿಸುತ್ತಿದ್ದರು, ಏಕೆಂದರೆ ಈ ದೇಶದಲ್ಲಿ ಸಂಪತ್ತು ಅಥವಾ ಹಣ ಮುಖ್ಯವಾದ ವಿಷಯವಾಗಿರಲಿಲ್ಲ. ಜ್ಞಾನ ಅಥವಾ ತಿಳುವಳಿಕೆಗೆ ಅತ್ಯಧಿಕ ಮೌಲ್ಯವಿದೆ ಎಂದು ಸದಾ ಪರಿಗಣಿಸಲಾಗಿತ್ತು. ಒಬ್ಬ ಶಿಕ್ಷಕ ಅಥವಾ ಗುರುವಿಗೆ ಸಮಾಜದಲ್ಲಿ ಮಹೋನ್ನತ ಸ್ಥಾನವನ್ನು ನೀಡಲಾಗಿತ್ತು, ಏಕೆಂದರೆ ತಿಳುವಳಿಕೆಗೆ ಅತ್ಯಂತ ಮುಖ್ಯವಾದ ವಿಷಯವಾಗಿತ್ತು. ಆದರೆ ಯಾವುದೋ ಕಾರಣದಿಂದಾಗಿ, ನಾವು ಜ್ಞಾನವನ್ನು ಬಿಟ್ಟು ಅಜ್ಞಾನವನ್ನು ಕೊಂಡಾಡಲು ನಿರ್ಧರಿಸಿದೆವು. ಮತ್ತು ಕಳೆದ ಅರವತ್ತೈದು ವರ್ಷಗಳಲ್ಲಿ, ಗುರು ಪೌರ್ಣಮಿ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು, ಏಕೆಂದರೆ ಭಾರತ ಸರ್ಕಾರ ಅದನ್ನು ರಜಾದಿನವನ್ನಾಗಿ ಘೋಷಿಸಲಿಲ್ಲ.
ಬ್ರಿಟಿಷರು ಭಾರತಕ್ಕೆ ಬರುವ ಮುನ್ನ, ಅಮಾವಾಸ್ಯೆಯ ಸಮಯದಲ್ಲಿ ಮೂರು ದಿನಗಳ ರಜೆ ಮತ್ತು ಪೌರ್ಣಮಿಯ ಸಮಯದಲ್ಲಿ ಎರಡು ದಿನಗಳ ರಜೆ ಇರುತ್ತಿದ್ದವು. ನೀವು ದೇವಾಲಯಕ್ಕೆ ಹೋಗಿ, ನಿಮ್ಮ ಆಂತರ್ಯದ ಸ್ವಾಸ್ಥ್ಯಕ್ಕಾಗಿ ಸಾಧನೆಯನ್ನು ಮಾಡಲು ತಿಂಗಳಲ್ಲಿ ಐದು ದಿನಗಳ ರಜೆ ಇರುತ್ತಿದ್ದವು. ಆದರೆ ಬ್ರಿಟಿಷರು ಬಂದಾಗ, ಅವರು ಭಾನುವಾರವನ್ನು ರಜಾದಿನವನ್ನಾಗಿ ಮಾಡಿದರು. ಅದರ ಉದ್ದೇಶವಾದರೂ ಏನು? ಆ ದಿನಗಳಲ್ಲಿ ಏನು ಮಾಡಬೇಕೆಂದೇ ನಿಮಗೆ ತಿಳಿದಿಲ್ಲ, ಹಾಗಾಗಿ ನೀವಂದು ಚೆನ್ನಾಗಿ ತಿಂದು, ಟೀವಿಯನ್ನು ನೋಡುತ್ತಿದ್ದೀರಿ ಅಷ್ಟೆ!
ಆದ್ದರಿಂದ, ಈ ಆಚರಣೆ ನಿಧಾನವಾಗಿ ದೇಶದಾದ್ಯಂತ ನಿಂತುಹೋಯಿತು. ಅಲ್ಲಿ ಇಲ್ಲಿ, ಕೆಲವೊಂದು ಆಶ್ರಮಗಳಲ್ಲಿ ಈ ಆಚರಣೆ ಇನ್ನೂ ಜೀವಂತವಾಗಿದೆ. ಆದರೆ ಹೆಚ್ಚಿನವರಿಗೆ ಇದು ಅತ್ಯಂತ ಮಹತ್ವದ ದಿನವೆಂಬುದು ತಿಳಿದಿಲ್ಲ, ಏಕೆಂದರೆ ಮತಧರ್ಮದ ಕಲ್ಪನೆ ಎಲ್ಲರ ಮನಸ್ಸಿಗೆ ಬಂದುಬಿಟ್ಟಿದೆ. ಆದಿಯೋಗಿಯು ಮಾನವ ತನ್ನ ಈಗಿನ ಅಸ್ತಿತ್ವದ ಆಯಾಮಗಳನ್ನು ಮೀರಿ ವಿಕಸನಗೊಳ್ಳಬಹುದು ಎಂಬ ವಿಚಾರವನ್ನು ತಿಳಿಸಿದ; ಮತ್ತು ಅದನ್ನು ಸಾಕಾರಗೊಳಿಸಿಕೊಳ್ಳಲು ಸಾಧನಗಳನ್ನು ನೀಡಿದ. ಮಾನವ ಮನಸ್ಸಿನಲ್ಲಿ ಮೂಡಿದಂತಹ ಅತ್ಯಮೂಲ್ಯ ಕಲ್ಪನೆ ಇದು: ನಾವು ನಮ್ಮ ಈಗಿನ ಮಿತಿಗಳನ್ನು ಮೀರಿ ವಿಕಸನಗೊಂಡು, ಅನುಭವ ಮತ್ತು ಅಸ್ತಿತ್ವದ ಸಂಪೂರ್ಣ ವಿಭಿನ್ನ ಆಯಾಮವನ್ನು ಕಂಡುಕೊಳ್ಳಬಹುದು.
ಸಂಪಾದಕರ ಟಿಪ್ಪಣಿ: ಆದಿಯೋಗಿಯ ಉಪಸ್ಥಿತಿಯಲ್ಲಿ ಗುರು ಪೌರ್ಣಮಿಯನ್ನು ಸದ್ಗುರುಗಳೊಂದಿಗೆ ಆಚರಿಸಿ. ಈಶ ಯೋಗ ಕೇಂದ್ರಕ್ಕೆ ಖುದ್ದಾಗಿ ಬನ್ನಿ ಅಥವಾ ಉಚಿತ ಲೈವ್ ವೆಬ್‌ಸ್ಟ್ರೀಮ್ ಅನ್ನು ವೀಕ್ಷಿಸಿ.