ಸದ್ಗುರುಗಳು ಮಹಾಲಯ ಅಮಾವಾಸ್ಯೆ ಅಥವಾ ಪಿತೃಪಕ್ಷದ ಆಚರಣೆ ಮತ್ತು ನಮ್ಮ ಪೂರ್ವಜರನ್ನು ಗೌರವಿಸುವ ಸಂಪ್ರದಾಯದ ಮಹತ್ವವನ್ನು ವಿವರಿಸುತ್ತಾರೆ.

ಸದ್ಗುರು: ಮಹಾಲಯ ಅಮಾವಾಸ್ಯೆಯು ದಸರೆಯ ಪ್ರಾರಂಭದ ದಿನವಾಗಿದೆ. ಆ ದಿನವು ನಮ್ಮ ಜೀವನ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟ ಹಿಂದಿನ ಎಲ್ಲಾ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಮೀಸಲಾದ ವಿಶೇಷ ದಿನವಾಗಿದೆ.

ಈ ಭೂಮಿಯ ಮೇಲೆ ಮನುಷ್ಯರು ಮತ್ತು ಅವರ ಪೂರ್ವಜರು ಸುಮಾರು 20 ಮಿಲಿಯನ್ ವರ್ಷಗಳಿಂದ ಜೀವಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹಳ ದೀರ್ಘ ಸಮಯ. ನಮಗಿಂತ ಈ ಹಿಂದೆ ಈ ಭೂಮಿಯ ಮೇಲೆ ಜೀವಿಸಿದ ಈ ಎಲ್ಲ ನೂರಾರು ಸಾವಿರಾರು ತಲೆಮಾರುಗಳು ನಮಗೆ ಒಂದಲ್ಲ ಒಂದು ಕೊಡುಗೆಯನ್ನು ನೀಡಿದ್ದಾರೆ. ನಾವು ಮಾತನಾಡುವ ಭಾಷೆ, ನಾವು ಕುಳಿತುಕೊಳ್ಳುವ ರೀತಿ, ನಮ್ಮ ವಸ್ತ್ರಗಳು, ನಮ್ಮ ಕಟ್ಟಡಗಳು – ನಮಗೆ ಇಂದು ಗೊತ್ತಿರುವ ಬಹುತೇಕ ಸಂಗತಿಗಳು ನಮ್ಮ ಹಿಂದಿನ ತಲೆಮಾರುಗಳಿಂದ ಬಂದಿವೆ.

ಪಿತೃಪಕ್ಷ: ಹಿಂದಿನ ತಲೆಮಾರುಗಳ ಬಳುವಳಿ

ಮಹಾಲಯ ಅಮಾವಾಸ್ಯೆ ನಮ್ಮ ಜೀವನ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟ ಹಿಂದಿನ ಎಲ್ಲಾ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಮೀಸಲಾದ ವಿಶೇಷ ದಿನವಾಗಿದೆ.

ಈ ಭೂಮಿಯ ಮೇಲೆ ಪ್ರಾಣಿಗಳು ಮಾತ್ರ ಇದ್ದಾಗ, ಬದುಕುಳಿಯುವುದು, ತಿನ್ನುವುದು, ನಿದ್ರಿಸುವುದು, ಸಂತಾನೋತ್ಪತ್ತಿ ಮಾಡುವುದು ಮತ್ತು ಒಂದು ದಿನ ಸಾಯುವುದೇ ಜೀವನ ಪ್ರಕ್ರಿಯೆ ಆಗಿತ್ತು. ನಂತರ ನಿಧಾನವಾಗಿ, ಬದುಕುಳಿಯುವುದನ್ನು ಮಾತ್ರ ತಿಳಿದಿದ್ದ ಈ ಪ್ರಾಣಿಯು ವಿಕಾಸಗೊಳ್ಳಲು ಆರಂಭಿಸಿತು. ಅಡ್ಡವಾಗಿ ನಡೆದಾಡುತ್ತಿದ್ದ ಅದು ನೇರವಾಗಿ ನಿಂತುಕೊಳ್ಳಲು ಕಲಿಯಿತು; ಮೆದುಳು ಬೆಳೆಯಲು ಪ್ರಾರಂಭಿಸಿತು, ಮತ್ತು ಕೆಲಸಗಳನ್ನು ಮಾಡುವ ಸಾಮರ್ಥ್ಯ ಇದ್ದಕ್ಕಿದ್ದಂತೆಯೇ ವೃದ್ಧಿಸತೊಡಗಿತು. ಮನುಷ್ಯರ ವಿಶಿಷ್ಟತೆಯೇನೆಂದರೆ ನಾವು ಉಪಕರಣಗಳನ್ನು ಬಳಸಬಲ್ಲೆವು. ಉಪಕರಣಗಳನ್ನು ಬಳಸುವ ನಮ್ಮ ಈ ಸರಳ ಸಾಮರ್ಥ್ಯದಿಂದ, ನಾವು ತಂತ್ರಜ್ಞಾನಗಳನ್ನು ಸೃಷ್ಟಿಸಿ, ವೃದ್ಧಿಸಿಕೊಂಡಿದ್ದೇವೆ. ವಾನರವೊಂದು ಕೇವಲ ತನ್ನ ಕೈಗಳನ್ನು ಉಪಯೋಗಿಸುವ ಬದಲಾಗಿ, ಮತ್ತೊಂದು ಪ್ರಾಣಿಯ ತೊಡೆಯ ಮೂಳೆಯನ್ನು ಎತ್ತಿಕೊಂಡು ಹೋರಾಡಲು ಪ್ರಾರಂಭಿಸಿದ ದಿನ; ತನ್ನ ಜೀವನವನ್ನು ಸಾಗಿಸಲು ತನ್ನ ಶರೀರವನ್ನು ಉಪಯೋಗಿಸುವ ಬದಲಾಗಿ, ಉಪಕರಣಗಳನ್ನು ಬಳಸಲು ಬೇಕಾದ ಬುದ್ಧಿಶಕ್ತಿಯನ್ನು ಹೊಂದಿದಾಗ, ಒಂದು ರೀತಿಯಲ್ಲಿ ಭೂಮಿಯ ಮೇಲೆ ಮನುಷ್ಯನ ಜೀವನ ಪ್ರಾರಂಭವಾಯಿತು.

ನಂತರ, ಮನುಷ್ಯರು ತಾವು ಪ್ರಾಣಿಗಳಿಗಿಂತ ಉತ್ತಮವಾಗಿ ಜೀವಿಸಬಹುದೆಂಬುದನ್ನು ತಿಳಿದು ತಮ್ಮ ಜೀವನವನ್ನು ರೂಪಿಸಿಕೊಳ್ಳತೊಡಗಿದರು. ಮನೆಗಳು, ಕಟ್ಟಡಗಳು ನಿರ್ಮಿಸಲ್ಪಟ್ಟವು, ಬಟ್ಟೆಗಳನ್ನು ತಯಾರಿಸಲಾಯಿತು - ಮನುಷ್ಯರಿಂದ ಭೂಮಿಯ ಮೇಲೆ ಇನ್ನೂ ಅನೇಕ ಸಂಗತಿಗಳು ಸಂಭವಿಸಿದವು. ಬೆಂಕಿಯನ್ನು ಸೃಷ್ಟಿಸುವುದರಿಂದ ಹಿಡಿದು ಚಕ್ರವನ್ನು ಕಂಡು ಹಿಡಿಯುವವರೆಗೆ ಮತ್ತು ಇನ್ನೂ ಅಸಂಖ್ಯ ಸಂಗತಿಗಳೂ ಸೇರಿ, ಈ ಬಳುವಳಿಯು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಾ ಬಂದಿದೆ. ಆ ಬಳುವಳಿಯೇ ಇಂದು ನಾವು ಏನಾಗಿದ್ದೇವೋ ಅದಕ್ಕೆ ಕಾರಣ. ಮನುಷ್ಯರು ಇದುವರೆಗೂ ಬಟ್ಟೆಯನ್ನೇ ಹಾಕಿಕೊಂಡಿಲ್ಲ ಎಂದುಕೊಳ್ಳೋಣ, ಮತ್ತು ಒಂದು ಅಂಗಿಯನ್ನು ಹೊಲಿಯಬೇಕಾದ ಮೊದಲ ವ್ಯಕ್ತಿ ನೀವೇ ಎಂದುಕೊಳ್ಳಿ, ಅದೇನೂ ಅಷ್ಟು ಸುಲಭವಲ್ಲ; ಒಂದು ಅಂಗಿಯನ್ನು ಹೇಗೆ ಹೊಲಿಯಬೇಕೆನ್ನುವುದನ್ನು ಕಂಡುಕೊಳ್ಳಲು ಅನೇಕ ವರ್ಷಗಳು ಬೇಕಾಗುತ್ತದೆ.

ಪಿತೃಪಕ್ಷ: ಕೃತಜ್ಞತೆಗಳ ಅಭಿವ್ಯಕ್ತಿ

ಇಂದು ನಾವು ನಮಗೆ ಸಿಗುವ ಎಲ್ಲವನ್ನೂ ಸಾರಾಸಗಟಾಗಿ ನಮ್ಮದೇ ಎಂದು ಭಾವಿಸಿಕೊಂಡಿದ್ದೇವೆ. ಆದರೆ, ಹಿಂದಿನ ತಲೆಮಾರುಗಳಿಲ್ಲದೇ ಹೋದರೆ, ಮೊದಲನೆಯದಾಗಿ ನಾವೇ ಇರುತ್ತಿರಲಿಲ್ಲ; ಎರಡನೆಯದಾಗಿ, ಅವರ ಕೊಡುಗೆಯಿಲ್ಲದೇ ಇದ್ದಿದ್ದರೆ, ಈಗ ನಮ್ಮ ಬಳಿ ಇಷ್ಟೆಲ್ಲ ಇರುತ್ತಿರಲಿಲ್ಲ. ಹಾಗಾಗಿ, ಅವೆಲ್ಲವನ್ನೂ ನಮ್ಮದೇ ಎಂದು ಭಾವಿಸದೇ, ಈ ದಿನ ನಾವು ಅವರೆಲ್ಲರಿಗೂ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅದನ್ನು ಮೃತರಾದ ತಂದೆ ತಾಯಿಗಳಿಗೆ ಮಾಡುವ ಧಾರ್ಮಿಕ ಕ್ರಿಯೆ ಎಂಬಂತೆ ಮಾಡಲಾಗುತ್ತಿದೆ; ಆದರೆ ವಾಸ್ತವವಾಗಿ ಅದು ಹಿಂದಿನ ತಲೆಮಾರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ.

ಈ ಸಮಯದಲ್ಲಿ, ಭಾರತೀಯ ಉಪಖಂಡದಲ್ಲಿ, ಹೊಸ ಬೆಳೆಗಳು ಫಲನೀಡಲು ಪ್ರಾರಂಭಿಸಿರುತ್ತವೆ. ಹಾಗಾಗಿ, ಗೌರವ ಮತ್ತು ಕೃತಜ್ಞತೆಯ ಸೂಚಕವಾಗಿ ಮೊದಲ ಫಸಲನ್ನು ಪಿಂಡದ ರೂಪದಲ್ಲಿ ಪೂರ್ವಜರಿಗೆ ಸಲ್ಲಿಸಲಾಗುತ್ತದೆ. ನಂತರ ನವರಾತ್ರಿ, ವಿಜಯ ದಶಮಿ ಮತ್ತು ದೀಪಾವಳಿ ಮೊದಲಾದ ಇನ್ನಿತರ ಹಬ್ಬಗಳನ್ನು ಆಚರಿಸಿ ಸಂಭ್ರಮಿಸಲಾಗುತ್ತದೆ.

ಸಂಪಾದಕರ ಟಿಪ್ಪಣಿ: ಪೂರ್ವಜರು ಮತ್ತು ಮರಣಿಸಿದ ಸಂಬಂಧಿಕರ ಶ್ರೇಯಸ್ಸಿಗಾಗಿ ಲಿಂಗ ಭೈರವಿಯ ಸನ್ನಿಧಿಯಲ್ಲಿ ಮಹಾಲಯ ಅಮಾವಾಸ್ಯೆಯ ದಿನ ಕಾಲ ಭೈರವ ಶಾಂತಿ ಎನ್ನುವ ವಾರ್ಷಿಕ ಪ್ರಕ್ರಿಯೆಯನ್ನು ಆಯೋಜಿಸಲಾಗುತ್ತದೆ. ಈ ವರ್ಷದ ಮಹಾಲಯ ಅಮಾವಾಸ್ಯೆ ಅಕ್ಟೋಬರ್ 8, 2018 ರಂದು ಬರುತ್ತದೆ. ಈ ಪ್ರಕ್ರಿಯೆಗೆ, ಹೆಸರು, ಹುಟ್ಟಿದ ಮತ್ತು ಮರಣಿಸಿದ ದಿನಾಂಕದೊಂದಿಗೆ ಮೃತರ ಭಾವಚಿತ್ರ ಅಗತ್ಯವಿರುತ್ತದೆ. ಖಚಿತವಾಗಿ ಜನ್ಮ ದಿನಾಂಕ ಗೊತ್ತಿಲ್ಲದಿದ್ದರೆ, ಹುಟ್ಟಿದ ವರ್ಷವನ್ನು ತಿಳಿಸಿ. ಅದೂ ಗೊತ್ತಿಲ್ಲದಿದ್ದರೆ, ತಂದೆ ಮತ್ತು ತಾಯಿಯ ಹೆಸರನ್ನು ನೀಡಿರಿ. ಮುಂದಿನ 10 ವರ್ಷಗಳ ಶಾಂತಿ ಪ್ರಕ್ರಿಯೆಯನ್ನು ಒಮ್ಮೆಲೆ ನೋಂದಣಿ ಮಾಡಿಸಬಹುದು. ನೋಂದಣಿ ಅರ್ಜಿಯನ್ನು ಇಲ್ಲಿ ಸಲ್ಲಿಸಿರಿ. 

ನಿಮ್ಮ ಸಂಬಂಧಿಕರ ಕಾಲ ಭೈರವ ಶಾಂತಿಯನ್ನು ಮಾಡಿಸಲು ಸಂಪರ್ಕಿಸಿ, ಈಮೇಲ್: info@lingabhairavi.org ದೂರವಾಣಿ: +91 83000 83111 ಅಥವಾ ವೆಬ್‍ಸೈಟ್‍ಗೆ ಭೇಟಿ ನೀಡಿ.

ಮಹಾಲಯ ಅಮಾವಾಸ್ಯೆಯ ದಿನ, ನಿಮ್ಮ ಪೂರ್ವಜರ ಗೌರವಾರ್ಥವಾಗಿ, ಆಶ್ರಮದಲ್ಲಿರುವ ಆಧ್ಯಾತ್ಮಿಕ ಸಾಧಕರಿಗೆ ಅನ್ನದಾನವನ್ನು ಮಾಡಿರಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9442504655