ಕೈಲಾಸ ಪರ್ವತವನ್ನು ಅನಾದಿ ಕಾಲದಿಂದಲೂ ಒಂದು ಪವಿತ್ರವಾದ ಪರ್ವತವೆಂದು ಪರಿಗಣಿಸಲಾಗಿದೆ. ವಾಸ್ತವದಲ್ಲಿ ಇದೊಂದು ಅತೀಂದ್ರೀಯದ ಜ್ಞಾನಭಂಡಾರ ಎಂದು ಸದ್ಗುರುಗಳು ವಿವರಿಸುತ್ತಾರೆ, ಮತ್ತು ಆ ಸ್ಥಳದ ಮಹತ್ವ ಹಾಗೂ ಯಾತ್ರಾರ್ಥಿಗಳ ಅನುಭವಗಳ ಬಗ್ಗೆ ಒಳನೋಟವನ್ನು ನೀಡುತ್ತಾರೆ.

Read in Telugu: కైలాస పర్వతం – ఓ మార్మిక అనుభూతి

ಪ್ರಶ್ನೆ: ನಾನು 2012 ರಲ್ಲಿ ಕೈಲಾಸಕ್ಕೆ ಹೋಗಿದ್ದೆ, ಮತ್ತು ಅಲ್ಲಿ ನೀವು ಪ್ರತಿಯೊಬ್ಬರೊಂದಿಗೂ ಒಂದು ದೀಕ್ಷೆಯ ಪ್ರಕ್ರಿಯೆಯನ್ನು ಮಾಡಿದಿರಿ. ಇವತ್ತಿನವರೆಗೂ ಅದು ನನ್ನ ಜೀವನದಲ್ಲಿನ ಅತ್ಯಂತ ಮಹತ್ವದ ಅನುಭವಗಳಲ್ಲಿ ಒಂದಾಗಿದೆ. ಅದರ ಬಗ್ಗೆ ನೀವು ಇನ್ನೂ ಹೆಚ್ಚಿನ ವಿವರಣೆಯನ್ನು ನೀಡಬಹುದೇ?

ಸದ್ಗುರು: ಸಾಮಾನ್ಯವಾಗಿ, ದೀಕ್ಷೆಯ ಪ್ರಕ್ರಿಯೆಯು ಒಂದು ನಿರ್ದಿಷ್ಟವಾದ ಉದ್ದೇಶದ ಕಡೆಗಿರುತ್ತದೆ. ನಾವು ನಿಮಗೆ ಶೂನ್ಯ-ಧ್ಯಾನಕ್ಕೆ ದೀಕ್ಷೆ ನೀಡುವುದರ ಉದ್ದೇಶವಿದು: ನೀವು ಧ್ಯಾನಸ್ಥರಾಗಲು ಸಾಧ್ಯವಾಗಲಿ, ಸಾಕಷ್ಟು ಶಕ್ತಿಯನ್ನು ಹೊಂದಲಿ, ಹಾಗೂ ನಿಮ್ಮ ಮಾನಸಿಕ ಪ್ರಕ್ರಿಯೆಯಿಂದ ನಿಮ್ಮನ್ನು ನೀವು ಬೇರ್ಪಡಿಸಿಕೊಳ್ಳುವಂತಾಗಲು ನೀವು ಸಾಕಷ್ಟು ಪ್ರಜ್ಞಾಪೂರ್ವಕರಾಗಲಿ ಎನ್ನುವುದಾಗಿದೆ. ಅದೇ ರೀತಿಯಲ್ಲಿ, ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನ ರೀತಿಯ ದೀಕ್ಷೆಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಕೈಲಾಸದಲ್ಲಿದ್ದಾಗ ಮಾಡುವ ಪ್ರಕ್ರಿಯು ಸಾಮಾನ್ಯವಾಗಿ ನಿಮಗೆ ನಿರ್ದಿಷ್ಟವಾದ ಅನುಭವವನ್ನು ತರುವುದರ ಬದಲಾಗಿ, ಅಲ್ಲಿರುವ ಅಗಾಧವಾದ ಸಾಧ್ಯತೆಗೆ ನಿಮ್ಮನ್ನು ಮುಕ್ತವಾಗಿ ತೆರೆದುಕೊಳ್ಳುವಂತೆ ಮಾಡುವುದರ ಬಗ್ಗೆಯಾಗಿದೆ - ಇದು ಈ ದೀಕ್ಷೆಯ ಅತ್ಯಂತ ಪ್ರಮುಖವಾದ ವಿಷಯ. ಅಂತಹ ಒಂದು ದೀಕ್ಷೆಯು, ಒಂದು ಬಾಗಿಲನ್ನು ತೆರೆದು ನೀವೆಷ್ಟನ್ನು ಗ್ರಹಿಸಿಕೊಳ್ಳಬಹುದು ಎನ್ನುವ ಬಗ್ಗೆಯಾಗಿರುತ್ತದೆ, ಏಕೆಂದರೆ ಕೈಲಾಸದ ಸಂಪೂರ್ಣ ಪ್ರದೇಶವು ಅಂತದ್ದೊಂದು ಅದ್ಭುತವಾದ ಸಾಧ್ಯತೆಯಾಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಈ ದೀಕ್ಷೆಯನ್ನು ವಿಭಿನ್ನ ರೀತಿಯಲ್ಲಿ ಅನುಭವಿಸುತ್ತೀರಿ. ನೀವು ಸಿದ್ಧರಿದ್ದರೆ ಮತ್ತು ಮುಕ್ತವಾಗಿದ್ದರೆ, ನಿಮಗಾಗಿ ಅಮೋಘವಾದದ್ದೇನೋ ತೆರೆದುಕೊಳ್ಳುವುದನ್ನು ನೀವು ಕಾಣಬಹುದು.

ಪ್ರಶ್ನೆ: ಸದ್ಗುರು, ನೀವು ಕೈಲಾಸವನ್ನು ಅತೀಂದ್ರೀಯದ ಜ್ಞಾನಭಂಡಾರವೆಂದು ವರ್ಣಿಸಿದ್ದೀರಿ. ಈ ಜ್ಞಾನವೆಲ್ಲಾ ನಿಖರವಾಗಿ ಎಲ್ಲಿ ಸಂಗ್ರಹವಾಗಿದೆ?  ಪಂಚಭೂತಗಳಲ್ಲಿ ಒಂದಾದ ಆಕಾಶದಲ್ಲಿದೆಯೋ ಅಥವಾ ಇಡೀ ಪರ್ವತದಲ್ಲಿದೆಯೋ?

ಸದ್ಗುರು: ಜ್ಞಾನವನ್ನು ಸಂಗ್ರಹಿಸಿಡುವ ವಿಷಯಕ್ಕೆ ಬಂದಾಗ, ಆಕಾಶ ಮುಖ್ಯವಾದುದು, ಆದರೆ ಅದನ್ನು ಮೂಲಭೂತ ಪ್ರಕೃತಿಯ ಆಕಾಶ ಅಂಶದಲ್ಲಿ ಮಾತ್ರ ಸಂಗ್ರಹಿಸಿದರೆ ಅದು ತುಂಬಾ ಸೂಕ್ಷ್ಮವಾಗಿರುತ್ತದೆ. ಮಾಹಿತಿಯನ್ನು ಶೇಖರಿಸಿಡಲು ಪಂಚಭೂತಗಳನ್ನು ಒಳಗೊಂಡಂತೆ ಇಡೀ ಭೌತಿಕ ದ್ರವ್ಯರಾಶಿಯನ್ನು ಬಳಸಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಭೌತಿಕವಲ್ಲದ ಒಂದು ಆಯಾಮವನ್ನು, ಪಂಚಭೂತಗಳೊಂದಿಗೆ ಯಾವ ಸಂಬಂಧವೂ ಇರದ ಒಂದು ಶಕ್ತಿಯನ್ನು ಶಾಶ್ವತವಾದ ಶೇಖರಣೆಯಾಗಿ ಬಳಸಲಾಗುತ್ತದೆ - ಕೈಲಾಸವು ಪ್ರಮುಖವಾಗಿ ಅಂತದ್ದೇ ಒಂದು ಶಕ್ತಿಯಾಗಿದೆ. ಆ ಕಾರಣದಿಂದ, ಅಲ್ಲಿ ಪಂಚಭೂತಗಳೂ ಸಹ ಒಂದು ನಿರ್ದಿಷ್ಟವಾದ ರೀತಿಯಲ್ಲಿ ಅನುರಣಿಸುತ್ತಿರುತ್ತವೆ. ಈ ಅಭೌತಿಕವಾದ ಆಯಾಮದ ಕಾರಣದಿಂದಾಗಿ ಪಂಚಭೂತಗಳು ತಮ್ಮ ಉತ್ತಂಗದಲ್ಲಿರುತ್ತವೆ.

ಆಧುನಿಕ ಜಗತ್ತು ಮತ್ತು ಆಧುನಿಕ ವಿಜ್ಞಾನದ ಪ್ರಕಾರ, ಜ್ಞಾನವೆಂದರೆ ಪ್ರಕೃತಿಯ ಒಂದು ನಿರ್ದಿಷ್ಟವಾದ ಆಯಾಮ ಅಥವಾ ಅಂಶವನ್ನು ಗಮನಿಸುವುದರ ಮೂಲಕ ಎಳೆದಂತಹ ನಿರ್ಣಯಗಳ ಒಂದು ಕಂತೆಯಷ್ಟೆ. ಇದಕ್ಕೆ ಭಿನ್ನವಾಗಿ, ಕೈಲಾಸದಲ್ಲಿನ ಜ್ಞಾನವು ಯಾವ ನಿರ್ಣಯಗಳ ಕಂತೆಯೂ ಅಲ್ಲ - ಅದೊಂದು ಪ್ರಬಲವಾದ ಪ್ರಚೋದಕವಿದ್ದಂತೆ. ನೀವದನ್ನು ಸ್ಪರ್ಶಿಸಿದರೆ, ಅದು ನಿಮ್ಮೊಳಗೆ ಮತ್ತು ನಿಮ್ಮ ಸುತ್ತಲೂ ಹಲವು ಆಯಾಮಗಳನ್ನು ತೆರೆಯುತ್ತದೆ. ಇದೊಂದು ನಿರ್ಣಾಯಕವಾದ ಜ್ಞಾನವಲ್ಲ ಆದರೆ ಪ್ರಚೋದಿಸುವಂತದ್ದು. ನೀವದನ್ನು ಸ್ಪರ್ಶಿಸಿದರೆ, ನಿಮ್ಮೊಳಗೊಂದು ಕಿಚ್ಚು ಹೊತ್ತಿಕೊಳ್ಳುತ್ತದೆ, ಮತ್ತು ನಿಮಗದು ಓದಲು ಲಭ್ಯವಾಗುತ್ತದೆ.

ಪ್ರಶ್ನೆ: ಜನಸಾಮಾನ್ಯರ ಅನುಭವದಲ್ಲಿ ಇರದಂತಹ ಆಯಾಮವನ್ನು ಅರಿತಿರುವ ಸೌಭಾಗ್ಯ ಮತ್ತು ಭಾರವನ್ನು ಹೊತ್ತಂತಹ ಯೋಗಿಗಳು ತಮ್ಮ ಜ್ಞಾನವನ್ನು ಕೈಲಾಸದಲ್ಲಿ ನಿಕ್ಷೇಪವಾಗಿಟ್ಟಿದ್ದಾರೆ ಎಂದು ನೀವು ಹೇಳಿದ್ದೀರಿ. ನೀವು ಪ್ರತಿ ವರ್ಷ ಕೈಲಾಸಕ್ಕೆ ತೆರೆಳುವುದು ಅದೇ ಕಾರಣದಿಂದಲೇ?

ಸದ್ಗುರು: ನೀವು ಕೈಲಾಸಕ್ಕೆ ಹೋಗುವುದು ನಿಮ್ಮ ಗುರುತನ್ನು ಅಲ್ಲಿ ಬಿಟ್ಟುಬರುವುದಕ್ಕಲ್ಲ. ನಾನು ಮಾಡಬಹುದಾದ ಕಟ್ಟಕಡೆಯ ಕೆಲಸವದು. ನೀವು ಕೈಲಾಸಕ್ಕೆ ಹೋಗುವುದೇಕೆಂದರೆ, ಅದು ಅಷ್ಟೊಂದು ಅಗಾಧವಾಗಿದೆ ಮತ್ತು ನೀವು ನಿಮ್ಮಿಡೀ ಜೀವಿತವನ್ನು ಅಲ್ಲಿ ಕಳೆದರೂ ಅದು ನಿಮ್ಮನ್ನು ಆಕರ್ಷಿಸುತ್ತದೆ ಎಂಬ ಕಾರಣಕ್ಕಾಗಿ. ಸಾಮಾನ್ಯವಾಗಿ ನಾನು ತೀರ್ಥಯಾತ್ರೆಗಳಿಗೆ ಹೋಗುವಂತವನಲ್ಲದಿದ್ದರೂ, ಇದು ಕೈಲಾಸಕ್ಕೆ ನನ್ನ ಹತ್ತನೆಯ ಯಾತ್ರೆಯಾಗಿದೆ. ಒಂದು ವಿಷಯವೇನೆಂದರೆ, ನಾನು ನನ್ನ ಕಣ್ಣುಗಳನ್ನು ಮುಚ್ಚಿದರೆ, ನಾನೆಲ್ಲೇ ಇದ್ದರೂ ಚೆನ್ನಾಗಿರುತ್ತೇನೆ - ನನಗೆ ಎಲ್ಲಿಯೂ ಹೋಗಬೇಕಾದ ಅವಶ್ಯಕತೆಯಿಲ್ಲ. ಯಾವುದೇ ಚಂಚಲತೆಯಿಂದಾಗಿ ನಾನು ಕೈಲಾಸಕ್ಕೆ ಹೋಗುತ್ತಿಲ್ಲ. ಶಿವನನ್ನು ಹುಡುಕಲು ನಾನಲ್ಲಿಗೆ ಹೋಗುತ್ತಿಲ್ಲ. ನನ್ನನ್ನು ನಾನು ಕಂಡುಕೊಳ್ಳಲು ನಾನಲ್ಲಿಗೆ ಹೋಗುತ್ತಿಲ್ಲ. ಆದರೆ ಕೈಲಾಸದ ಅಗಾಧತೆಯು ನನ್ನನ್ನು ಅಲ್ಲಿಗೆ ಸೆಳೆಯುತ್ತದೆ. ಅದನ್ನು ಎಷ್ಟು ಬಾರಿ ನೋಡಿದರೂ, ಎಷ್ಟು ವಿಧದಲ್ಲಿ ನೋಡಿದರೂ, ಅದನ್ನು ನೋಡಲು ಕೊನೆಯೇ ಇಲ್ಲದಷ್ಟು ವಿಧಗಳಿವೆ. ಇನ್ನು ಮುಂದೆ ಅಲ್ಲಿಗೆ ಹೋಗದೇ ಇರಲು ಏಕೈಕ ಕಾರಣ ಕಾಲು ಅಥವಾ ಶ್ವಾಸಕೋಶಗಳಾಗಿರಬೇಕು, ಅಷ್ಟೆ.

ಆದರೆ ಕೈಲಾಸದ ಅಗಾಧತೆಯು ನನ್ನನ್ನು ಅಲ್ಲಿಗೆ ಸೆಳೆಯುತ್ತದೆ. ಅದನ್ನು ಎಷ್ಟು ಬಾರಿ ನೋಡಿದರೂ, ಎಷ್ಟು ವಿಧದಲ್ಲಿ ನೋಡಿದರೂ, ಅದನ್ನು ನೋಡಲು ಕೊನೆಯೇ ಇಲ್ಲದಷ್ಟು ವಿಧಗಳಿವೆ.

ಖಂಡಿತವಾಗಿಯೂ , ಕೈಲಾಸ ಮತ್ತು ಹಿಮಾಲಯದ ಅನೇಕ ಭಾಗಗಳು, ದಕ್ಷಿಣ ಭಾರತದ ವೆಳ್ಳಿಯಂಗಿರಿ ಪರ್ವತಗಳಂತಹ ಹಲವಾರು ಸ್ಥಳಗಳಲ್ಲಿ ಯೋಗಿಗಳು ಬಿಟ್ಟು ಹೋದ ಗುರುತುಗಳಿವೆ. ಕಾಲ ಮತ್ತು ಘಟನಾಂತರಗಳಲ್ಲಿ ಅನೇಕ ವಿಷಯಗಳು ಸಂಭವಿಸಿದ್ದರೂ ಸಹ, ಆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಉಳಿದಿವೆ. ಯಾರು ತಮ್ಮ ಶರೀರ ಅಥವಾ ಮನಸ್ಸನ್ನು ಬಳಸದೆಯೇ, ತಮ್ಮ ಆಂತರ್ಯದಿಂದ ಕೆಲಸ ಮಾಡಿರುತ್ತಾರೋ, ಅಂತಹವರ ಗುರುತು ಸದಾ ಕಾಲ ಇದ್ದೇ ಇರುತ್ತದೆ. ಆ ಗುರುತು ರಕ್ಷಿಸಲ್ಪಟ್ಟಿರುತ್ತದೆ, ಆದರೆ ಜನಗಳು ಅದನ್ನು ತಮ್ಮ ಅನುಭವಕ್ಕೆ ತಂದುಕೊಳ್ಳಲು ಅನುವು ಮಾಡಿಕೊಡುವಂತಹ ಒಂದು ಪರಿಸರವನ್ನು ರಕ್ಷಿಸುವುದೂ ಸಹ ಬಹಳ ಮುಖ್ಯ. ಅದು ಇಂದಿನ ಜನರ ಜವಾಬ್ದಾರಿಯಾಗಿದೆ. ಒಂದು ವೇಳೆ ಧ್ಯಾನಲಿಂಗದ ಬಳಿ ನೀವೊಂದು ಮಾರುಕಟ್ಟೆಯನ್ನು ಸ್ಥಾಪಿಸಿದಿರಿ ಎಂದಿಟ್ಟುಕೊಳ್ಳೋಣ. ಆ ಸ್ಥಳದ ಕಂಪನವಿನ್ನೂ ಹಾಗೆ ಇರುತ್ತದೆ, ಆದರೆ ಜನರಿಗೆ ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೈಲಾಸ ಅಥವಾ ಅದೇ ರೀತಿಯಾದ ಸ್ಥಳಗಳಲ್ಲಿ ನಿರ್ದಿಷ್ಟವಾದ ಪರಿಸರವನ್ನು ಕಾಪಾಡುವುದು ಬಹಳ ಮುಖ್ಯ.

ಸಂಪಾದಕರ ಟಿಪ್ಪಣಿ: ’ಈಶ ಸೇಕ್ರೆಡ್ ವಾಕ್ಸ್’ ಪುರಾಣ ಕಥೆಗಳನ್ನು, ಕೈಲಾಸದ ದಿವ್ಯದರ್ಶನ ಹಾಗೂ ಮಾನಸಸರೋವರದ ವಿದ್ಯಮಾನಗಳನ್ನು ಅನುಭವಿಸಲು ಜೀವಮಾನದ ಒಂದು ಅವಕಾಶವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಯನ್ನು sacredwalks.org ನಲ್ಲಿ ತಿಳಿಯಿರಿ.