ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದು ಏಕೆ ಹಾನಿಕರ?
ಗ್ರಹಣದ ಸಮಯದಲ್ಲಿ ಆಹಾರ ಸೇವನೆ ಮಾಡುವುದು ಮನುಷ್ಯನ ಶರೀರ ವ್ಯವಸ್ಥೆಯ ಮೇಲೆ ಏಕೆ ಋಣಾತ್ಮಕ ಪ್ರಭಾವವನ್ನು ಬೀರುತ್ತದೆ ಎಂದು ಸದ್ಗುರುಗಳು ತಿಳಿಸುತ್ತಾರೆ.

ಸದ್ಗುರು: ಚಂದ್ರ ಗ್ರಹಣದ ಸಮಯದಲ್ಲಿ, 28 ದಿನಗಳ ಒಂದು ಪೂರ್ಣ ಚಾಂದ್ರಮಾನ ಆವರ್ತನೆಯ ಅವಧಿಯಲ್ಲಿ ಆಗುವ ಅಷ್ಟೂ ಪ್ರಕ್ರಿಯೆಗಳು ಗ್ರಹಣಕಾಲದ ಎರಡರಿಂದ ಮೂರು ಗಂಟೆಗಳ ಅವಧಿಯಲ್ಲಿ ಸೂಕ್ಷ್ಮವಾದ ರೀತಿಯಲ್ಲಿ ನಡೆದು ಹೋಗುತ್ತದೆ. ಶಕ್ತಿಯ ದೃಷ್ಟಿಯಿಂದ, ಭೂಮಿಯ ಶಕ್ತಿಯು ಈ ಗ್ರಹಣವನ್ನು ಒಂದು ಸಂಪೂರ್ಣ ಚಾಂದ್ರಮಾನ ಆವರ್ತನೆಯೆಂದು ತಪ್ಪಾಗಿ ತಿಳಿಯುತ್ತದೆ. ಭೂಮಿಯಲ್ಲಿ ಕೆಲವು ನಿರ್ದಿಷ್ಟ ಸಂಗತಿಗಳು ಆಗುತ್ತವೆ. ತಮ್ಮ ಸ್ವಾಭಾವಿಕ ಸ್ಥಿತಿಯಿಂದ ದೂರ ಹೋಗಿರುವಂತಹ ಯಾವುದೇ ವಸ್ತು ಅತ್ಯಂತ ವೇಗವಾಗಿ ಶಿಥಿಲಗೊಳ್ಳುತ್ತದೆ. ಆದ್ದರಿಂದ ಹಸಿ ತರಕಾರಿಗಳು ಮತ್ತು ಹಣ್ಣುಗಳಲ್ಲಿ ಯಾವುದೇ ರೀತಿಯ ಬದಲಾವಣೆಗೊಳಗಾಗುವುದಿಲ್ಲ. ಆದರೆ ಗ್ರಹಣದ ಮೊದಲು ಮತ್ತು ನಂತರದಲ್ಲಿ ಬೇಯಿಸಿದ ಆಹಾರದಲ್ಲಿ ಸ್ಪಷ್ಟವಾದ ಬದಲಾವಣೆಯಾಗುತ್ತದೆ. ಪೋಷಣೆಯನ್ನು ನೀಡಬೇಕಾದ ಆಹಾರ ವಿಷವಾಗಿ ಪರಿವರ್ತನೆಯಾಗುತ್ತದೆ.
ಗ್ರಹಣದ ಪರಿಣಾಮ: ತಿಂದ ಆಹಾರ ವಿಷವಾಗುವುದು!
ವಿಷವೆಂದರೆ ನಿಮ್ಮ ಜಾಗೃತಿಯನ್ನು ನಾಶ ಮಾಡುವ ವಸ್ತು. ಅದು ಸಣ್ಣ ಪ್ರಮಾಣದಲ್ಲಿ ಜಾಗೃತಿಯನ್ನು ಮರೆಸಿದರೆ, ನೀವು ಮಂಕಾಗಿದ್ದೀರೆಂದರ್ಥ. ಅದು ಜಾಗೃತಿಯನ್ನು ಇನ್ನಷ್ಟು ಆಳವಾಗಿ ಮರೆಸಿದರೆ, ನೀವು ನಿದ್ರಿಸುತ್ತಿರುವಿರಿ ಎಂದರ್ಥ. ಯಾವುದಾದರೂ ಒಂದು ಸಂಗತಿ ನಿಮ್ಮ ಪ್ರಜ್ಞೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದರೆ, ನೀವು ಮರಣಿಸಿದಿರಿ ಎಂದರ್ಥ. ಮಂಕು, ನಿದ್ರೆ, ಮರಣ - ಇದೊಂದು ಸರಣಿ ಪ್ರಕ್ರಿಯೆ. ಹಾಗಾಗಿ, ಬೇಯಿಸಿದ ಆಹಾರವು ಸೂಕ್ಷ್ಮ ಸ್ತರದಲ್ಲಿ ಇತರ ದಿನಗಳಿಗಿಂತ ಗ್ರಹಣದ ದಿನದಲ್ಲಿ ವೇಗವಾಗಿ ಶಿಥಿಲತೆಯ ಹಂತಗಳನ್ನು ಸಾಗಿಹೋಗುತ್ತದೆ.
ಗ್ರಹಣದ ಪರಿಣಾಮ: ನಾವು ಹಸಿ ಆಹಾರವನ್ನು ತಿನ್ನಬಹುದೇ?
ನಿಮ್ಮ ಶರೀರದಲ್ಲಿ ಆಹಾರವಿದ್ದರೆ, ಕೇವಲ ಎರಡು ಗಂಟೆಗಳಲ್ಲಿ ನಿಮ್ಮ ಶಕ್ತಿಗಳಿಗೆ ಸುಮಾರು ಇಪ್ಪತ್ತೆಂಟು ದಿನಗಳಷ್ಟು ವಯಸ್ಸಾಗಿಬಿಡುತ್ತದೆ. ಹಾಗಾದರೆ, ನೀವು ಇಂತಹ ದಿನ ಹಸಿ ಆಹಾರವನ್ನು ಸೇವಿಸಬಹುದೇ? ಇಲ್ಲ, ನಿಮ್ಮ ಶರೀರದೊಳಕ್ಕೆ ಆಹಾರ ಹೋದ ತಕ್ಷಣ, ನಿಮ್ಮ ಹೊಟ್ಟೆಯಲ್ಲಿನ ಜೀರ್ಣರಸಗಳು ಅದರ ಮೇಲೆ ದಾಳಿ ಮಾಡಿ ಕೊಂದು ಬಿಡುತ್ತವೆ. ಆಗ ಅದು ಅರ್ಧ ಬೇಯಿಸಿದ ಆಹಾರವಾಗಿ ಬಿಡುತ್ತದೆ ಮತ್ತು ಅದು ಬೇಯಿಸಿದ ಆಹಾರದಂತೆಯೇ ಪರಿಣಾಮವನ್ನುಂಟು ಮಾಡುತ್ತದೆ.
ಇದು ಕೇವಲ ಆಹಾರದ ವಿಷಯವಲ್ಲ. ಇದು ನೀವು ಇರುವ ರೀತಿಯ ಕುರಿತಾದದ್ದು. ನೀವು ಯಾವುದಾದರೂ ರೀತಿಯಲ್ಲಿ ನೀವೇನಾಗಿದ್ದೀರೋ ಆ ನಿಮ್ಮ ಸಹಜ ಆಯಾಮದಿಂದ ದೂರ ಸರಿದಿದ್ದೀರಾದರೆ, ನೀವು ಈ ಶಕ್ತಿಗಳ ಪರಿಣಾಮಕ್ಕೊಳಗಾಗುವಿರಿ. ನೀವು ನಿಮ್ಮ ಸಹಜ ಸ್ಥಿತಿಯಲ್ಲಿದ್ದರೆ, ನೀವು ಈ ಶಕ್ತಿಗಳ ಪರಿಣಾಮಕ್ಕೆ ಈಡಾಗುವ ಸಂಭವ ಅತ್ಯಂತ ಕಡಿಮೆ.
ಗ್ರಹಣದ ಪರಿಣಾಮ: ಚಂದ್ರ ಮತ್ತು ಮನುಷ್ಯನ ಶರೀರ


ಚಂದ್ರನ ಆವರ್ತನೆಗಳು ಮನುಷ್ಯನ ಶರೀರ ವ್ಯವಸ್ಥೆಯ ಮೇಲೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಶಕ್ತಿಯ ಮಟ್ಟದಲ್ಲಿ ಪರಿಣಾಮವನ್ನು ಬೀರುತ್ತವೆ. ನಮ್ಮ ತಾಯಂದಿರು ಸಾಗಿ ಹೋಗುವ ಮಾಸಿಕ ಋತು ಚಕ್ರದಿಂದ ಇದು ನಮಗೆ ಸ್ಪಷ್ಟವಾಗುತ್ತದೆ. ನಾನು ತಾಯಂದಿರ ಬಗ್ಗೆ ಹೇಳುತ್ತಿರುವುದೇಕೆಂದರೆ, ನಮ್ಮ ತಾಯಂದಿರ ಋತು ಚಕ್ರವು ಚಂದ್ರನ ಆವರ್ತನದೊಂದಿಗೆ ಹೊಂದಿಕೊಂಡಿರುವುದರಿಂದಲೇ ನಾವು ಇಲ್ಲಿ ಅಸ್ತಿತ್ವದಲ್ಲಿರುವುದು. ನಮ್ಮ ತಾಯಂದಿರ ಶರೀರಗಳು ಚಂದ್ರನೊಂದಿಗೆ ಹೊಂದಿಕೊಂಡಿಲ್ಲದಿದ್ದರೆ, ನಾವು ಇಂದು ಇಲ್ಲಿರುತ್ತಿರಲಿಲ್ಲ. ಚಂದ್ರನು ಎರಡು ಮೂರು ಗಂಟೆಗಳ ಅವಧಿಯಲ್ಲಿ ಇಡೀ ಆವರ್ತನದಲ್ಲಿ ಸಾಗುವಾಗ, ನಮ್ಮ ಎಲ್ಲಾ ತಾಯಂದಿರ ಶರೀರಗಳಲ್ಲಿ ಸ್ವಲ್ಪ ಗೊಂದಲವುಂಟಾಗುತ್ತದೆ. ಇದು ಪುರುಷರ ಶರೀರದಲ್ಲೂ ಆಗುತ್ತದೆ, ಏಕೆಂದರೆ ನಿಮ್ಮ ತಾಯಂದಿರು ನಿಮ್ಮಲ್ಲಿ ಭೌತಿಕವಾಗಿಯಲ್ಲದಿದ್ದರೂ, ಇನ್ನಿತರ ಕೆಲವು ನಿರ್ದಿಷ್ಟ ರೀತಿಗಳಲ್ಲಿ ಇದ್ದೇ ಇದ್ದಾರೆ.
ಗ್ರಹಣದ ಪರಿಣಾಮ: ಶರೀರಕ್ಕೆ ಗೊಂದಲವಾದಾಗ…..
ಶರೀರವು ಗೊಂದಲಮಯ ಸ್ಥಿತಿಯಲ್ಲಿದ್ದಾಗ, ಅದನ್ನು ಸಾಧ್ಯವಾದಷ್ಟೂ ಖಾಲಿಯಾಗಿಡುವುದು ಅತ್ಯಂತ ಒಳ್ಳೆಯದು, ಮತ್ತು ನೀವು ಸಾಧ್ಯವಾದಷ್ಟೂ ಪ್ರಜ್ಞಾಪೂರ್ಣವಾಗಿರಬೇಕು. ಪ್ರಜ್ಞಾಪೂರ್ಣರಾಗಿರಲು ಅನುಸರಿಸಬಹುದಾದ ಒಂದು ಸರಳ ವಿಧಾನವೆಂದರೆ ಉಪವಾಸವಿರುವುದು. ಆಗ ನೀವು ಕೊನೆಯ ಪಕ್ಷ ಒಂದು ಸಂಗತಿಯ ಬಗ್ಗೆಯಾದರೂ ಸತತವಾಗಿ ಪ್ರಜ್ಞಾಪೂರ್ವಕರಾಗಿರುತ್ತೀರಿ. ನಿಮ್ಮ ಹೊಟ್ಟೆ ಖಾಲಿಯಾಗಿರುವುದರಿಂದ, ಪ್ರಜ್ಞಾಪೂರ್ಣರಾಗಿರುವ ನಿಮ್ಮ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ನಿಮ್ಮ ಶರೀರ ಹೆಚ್ಚು ಪಾರದರ್ಶಕವಾಗುತ್ತದೆ ಮತ್ತು ನಿಮ್ಮ ಶರೀರ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ಇನ್ನಷ್ಟು ಚೆನ್ನಾಗಿ ಗಮನಿಸಬಹುದು.
ಸಂಪಾದಕರ ಟಿಪ್ಪಣಿ: ಈಶ ಲೂನಾರ್ ಕ್ಯಾಲೆಂಡರ್ ಮೂಲಕ ಚಂದ್ರನಿಗೆ ಸಂಬಂಧಿಸಿದಂತೆ ಮಹತ್ವದ ದಿನಗಳನ್ನು ತಿಳಿಯಿರಿ.