ದೇವರು ಇದ್ದಾನೆಯೇ? ದೇವರು ಎಲ್ಲಿದ್ದಾನೆ? ದೇವರು ಸರ್ವವ್ಯಾಪಿಯೇ? ಇಂತಹ ಹಲವು ಪರಿಣಾಮಕಾರಿಯಾದ ಆದರೆ ಉತ್ತರ ದೊರೆಯದ ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುತ್ತವೆ. ಸದ್ಗುರಗಳು ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡದೇ, ಭೌತಿಕ ಆಯಾಮವನ್ನು ಮೀರಿದುದನ್ನು ಪ್ರವೇಶಿಸಲು ಮತ್ತು ಜೀವನದಲ್ಲಿ ಸಾಧಿಸಬಹುದಾದ ಅಪಾರ ಸಾಧ್ಯತೆಗಳನ್ನು ಅನ್ವೇಷಿಸಿವ ವಿಧಾನವನ್ನು ತಿಳಿಸಿಕೊಡುತ್ತಾರೆ.

ಸದ್ಗುರು: ನೀವು ಆಧ್ಯಾತ್ಮಿಕ ಹಾದಿಯಲ್ಲಿದ್ದೀರಿ ಎಂದರೆ, ಸತ್ಯವನ್ನು ಅನ್ವೇಷಿಸುತ್ತಿದ್ದೀರಿ ಎಂದರ್ಥ. ಆದರೆ, ನೀವು ಯಾವ ರೀತಿಯ ಸತ್ಯವನ್ನು ಹುಡುಕುತ್ತಿದ್ದೀರಿ? ಸಾಮಾನ್ಯವಾಗಿ, ಹೆಚ್ಚಿನ ಜನರು - ದೇವಸ್ಥಾನ, ಚರ್ಚ್, ಮಸೀದಿ ಅಥವಾ ಆಶ್ರಮ – ಇವುಗಳಲ್ಲಿ ಎಲ್ಲಿಗೇ ಹೋಗಲಿ, ತಮಗಾಗುವ ಲಾಭವನ್ನು ಹುಡುಕುತ್ತಿರುತ್ತಾರೆ, ಅದರಿಂದ ತಮಗೆ ಯಾವುದಾದರೂ ರೀತಿಯಲ್ಲಿ ಪ್ರಯೋಜನವಾಗಬೇಕು ಎಂಬುದು ಅವರ ಅಪೇಕ್ಷೆ. ಆದರೆ, ಪ್ರಾಮಾಣಿಕವಾದ ಅನ್ವೇಷಕರಿಗೆ, ಸತ್ಯವು ಯಾವುದೇ ರೀತಿಯ ಲಾಭವನ್ನು ಕೊಡುವುದಿಲ್ಲ, ಬದಲಾಗಿ ಎಲ್ಲವನ್ನೂ ಕಬಳಿಸುತ್ತದೆ.

ಇದು ಪ್ರಪಂಚದಲ್ಲಿ ಏನೋ ಆಗಲು ಬಯಸುವ ಜಾಣರಿಗಲ್ಲ. ಎಲ್ಲರೂ ಏನನ್ನಾದರೂ ಪಡೆಯಲು ಬಯಸುತ್ತಾರೆ. ಮೂರ್ಖರು ಮಾತ್ರ ಏನೂ ಆಗಲು ಬಯಸುವುದಿಲ್ಲ. ಮೂರ್ಖರು ಮಾತ್ರ ಶರಣು ಹೊಂದಲು ಅಥವಾ ಮತ್ತೊಬ್ಬರ ವಶವಾಗಲು ಬಯಸುತ್ತಾರೆ. ಇಂತಹ ಶರಣು ಹೊಂದಲು ಬಯಸುವ, ಏನೂ ಆಗಲು ಬಯಸದ, ಹೆಮ್ಮೆಯ ಮಾನವರಾಗದೆ, ಕೇವಲ ಇಲ್ಲಿರುವ ಮಣ್ಣಿನಂತೆ ಅಥವಾ ನೆಲದಂತೆ ಆಗ ಬಯಸುವ ಮೂರ್ಖರ ದೊಡ್ಡ ಸಂಪ್ರದಾಯವೇ ಇದೆ. ಈ ಮೂರ್ಖರು ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಶಿವ ಮನಗಂಡು ಅವರ ಕೈ ಹಿಡಿದ. ಶಿವನು ಅವರೆಲ್ಲರನ್ನೂ ತನ್ನ ಸ್ವಂತವಾಗಿಸಿಕೊಂಡ. ತಮ್ಮ ಜಾಣ್ಮೆಯಿಂದಲ್ಲ, ಕೇವಲ ತಮ್ಮ ಮೂರ್ಖತನದಿಂದ ಅನುಗ್ರಹಕ್ಕೆ ಪಾತ್ರರಾದರು.

ನೀವು ಅತ್ಯಂತ ಜಾಣರು ಮತ್ತು ಬಲಶಾಲಿಗಳು ಆಗಿದ್ದರೆ, ನಿಮಗೆ ಸಾಧ್ಯತೆಯ ಬಾಗಿಲು ತೆರೆಯಬಹುದು, ಅಥವಾ ಸಹಾನುಭೂತಿಯಿಂದ ಜನರು ನಿಮಗಾಗಿ ಆ ಬಾಗಿಲನ್ನು ತರೆಯಬಹುದು. ಯಾವುದೋ ಒಂದು ರೀತಿಯಲ್ಲಿ ತೆವಳಿಕೊಂಡಾದರೂ ಸರಿಯೇ, ಗಡಿಯನ್ನು ಮೀರಲು ಬಯಸುವಂತಹ ಜನರ ಸಂಪ್ರದಾಯವೇ ನಡೆದುಕೊಂಡು ಬಂದಿದೆ. ಇವರೆಲ್ಲರೂ ನಾಚಿಕಯನ್ನು ತೊರೆದ ಮನುಷ್ಯರು – ಯಾವುದೇ ನಾಚಿಕೆ, ಕೋಪ, ಅಸೂಯೆಯಿಂದ ಅವರು ಪ್ರಚೋದಿತವಾಗುವುದಿಲ್ಲ. ಅವರು ನಾಚಿಕೆಯಿಲ್ಲದ, ಹೆಮ್ಮೆಯಿಲ್ಲದ, ಅಹಂಕಾರವಿಲ್ಲದ, ತಿಳಿವಿಲ್ಲದ ಜನರು. ಇಂತಹವರೇ ಜ್ಞಾನೋದಯ ಹೊಂದಿದವರು.

ಭಾರತ: ದೇವರು ಎಲ್ಲೆಡೆ ಇರುವ ಜಾಗ

ಭಾರತದ ಸಂಸ್ಕೃತಿಯಲ್ಲಿ ನೀವು ದೇವಾಲಯಕ್ಕೇ ಹೋಗಬೇಕೆಂದಿಲ್ಲ. ಯಾವುದೇ ವಸ್ತುವನ್ನು ದೈವವನ್ನಾಗಿ ಪರಿವರ್ತಿಸಬಹುದು. ಇದೊಂದು ಅದ್ಭುತ ತಂತ್ರಜ್ಞಾನ, ಪ್ರಚಂಡ ಕೌಶಲ್ಯ. ಕೇವಲ ಒಂದು ಕಲ್ಲಿನ ತುಂಡನ್ನು ದೇವರನ್ನಾಗಿ ಮಾಡಬಹುದು ಮತ್ತು ಮರುದಿನ ಬೆಳಿಗ್ಗೆ ಸಾವಿರ ಜನರು ಅದನ್ನು ಪೂಜಿಸುತ್ತಾರೆ. ಒಂದು ಕಲ್ಲಿನ ತುಂಡನ್ನು ದೈವವಾಗಿ ನೆನೆದು ಅದಕ್ಕೆ ಬಾಗಿ ನಮಸ್ಕರಿಸುವ ಈ ಇಚ್ಛಾಶಕ್ತಿ ನಂಬಲಾಗದ ತಂತ್ರಜ್ಞಾನವೇ ಸರಿ. ಯಾವುದಕ್ಕೂ ತಲೆಬಾಗಲು ಸಿದ್ದರಿರುವುದು ತುಂಬಾ ಸರಳ, ಅದೇ ಸಮಯ ಅದೊಂದು ಪ್ರಬಲ ಸಾಧನವಾಗಿದೆ. ಒಂದು ಮರ, ಹೂವು, ಕಲ್ಲು, ಕೋಲು – ಅದು ಯಾವುದೇ ವಿಷಯವಾಗಿರಲಿ – ಅದರೆಡೆಗೆ ಸಂಪೂರ್ಣ ಭಕ್ತಿಯ ಪ್ರಜ್ಞೆಯೊಂದಿಗೆ ನಮಸ್ಕರಿಸಲು ಸಿದ್ಧರಾಗುವ ಈ ಇಚ್ಛಾಶಕ್ತಿಯಿಂದಲೇ ಭಾರತದಲ್ಲಿ ಭೌತಿಕತೆಯನ್ನು ಮೀರಿ ಹೋದ ಅನೇಕ ಜನರನ್ನು ಕಾಣಬಹದಾಗಿದೆ.

ಆದುದರಿಂದಲೇ, ಈ ಸಂಸ್ಕೃತಿಯು ಅನೇಕ ಜ್ಞಾನೋದಯ ಹೊಂದಿದ ಜೀವಿಗಳಿಂದ ಅನುಗ್ರಹಿತವಾಗಿದೆ. ಪ್ರಪಂಚದ ಉಳಿದ ಭಾಗಗಳಲ್ಲಿ, ಯಾವುದಾದರೂ ಒಂದು ನಿರ್ದಿಷ್ಟ ರೂಪವನ್ನು ಕುರಿತಷ್ಟೇ ತಲೆ ಬಾಗುತ್ತಾರೆ. ಆದರೆ, ನೀವು ಯಾವುದೇ ಕಲ್ಲು, ಕೋಲು, ಕೀಟ ಅಥವಾ ಪಕ್ಷಿಗೆ ತಲೆ ಬಾಗಲು ಸಿದ್ದರಿದ್ದರೆ, ಅವುಗಳನ್ನೇ ಅವಕಾಶವನ್ನಾಗಿಸುವುದರ ಮೂಲಕ ಮಹತ್ತರವಾದ ಸಾಧ್ಯತೆಯನ್ನು ತೆರೆಯಬಹುದು, ಯಾಕೆಂದರೆ ನಿಮ್ಮ ಜೀವನದಲ್ಲಿನ ಸಾಧ್ಯತೆಗಳು ಅಪಾರ. ಇಂತಹ ಒಂದು ಧನ್ಯತಾ ಮನೋಭಾವದಿಂದಾಗಿಯೇ, ಹಲವು ಜನರು ಕೋಟಿ ಕೋಟಿ ಸಾಧ್ಯತೆಗಳನ್ನು ಎಲ್ಲಾಕಡೆ ತೆರೆದಿಟ್ಟರು.

“ಭಕ್ತನಿದ್ದಲ್ಲಿ ದೇವರು ಇರುತ್ತಾನೆ…”

ಭಕ್ತಿ ಎಂದರೆ ಒಂದು ನಿರ್ದಿಷ್ಟ ಮಟ್ಟದ ಏಕಾಗ್ರಚಿತ್ತತೆ – ಅಂದರೆ ನೀವು ಒಂದೇ ವಿಷಯದ ಕುರಿತು ನಿರಂತರವಾಗಿ ಗಮನ ಹರಿಸುತ್ತೀರಿ. ಒಮ್ಮೆ ನಿಮ್ಮ ಆಲೋಚನೆ, ಭಾವನೆ ಮತ್ತು ಮಿಕ್ಕ ಎಲ್ಲವೂ ಒಂದೇ ದಿಕ್ಕಿನಲ್ಲಿ ಕೇಂದ್ರೀಕೃತವಾಯಿತೆಂದರೆ, ಸಹಜವಾಗಿಯೇ ನೀವು ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಏಕೆಂದರೆ, ನಿಮ್ಮ ಗ್ರಹಿಕೆಯ ಶಕ್ತಿ ಹೆಚ್ಚುತ್ತದೆ. ನೀವು ಯಾರ ಕರಿತು ಅಥವಾ ಯಾವುದರ ಕುರಿತು ಭಕ್ತಿಯಿಂದಿದ್ದೀರಾ ಎಂಬುದು ಮುಖ್ಯವಲ್ಲ. ನೀವೀಗ “ನಾನು ಭಕ್ತನಾಗಲು ಬಯಸುತ್ತೇನೆ, ಆದರೆ ದೇವರು ಇದ್ದಾನೋ ಇಲ್ಲವೋ ಎಂಬ ಅನುಮಾನ ನನಗೆ ಇದೆ” ಎಂದು ಯೋಚಿಸಿದರೆಂದರೆ, ಅದು ನಿಮ್ಮ ಆಲೋಚನಾ ಮನಸ್ಸಿನ ಇಕ್ಕಟ್ಟಿನ ಸ್ಥಿತಿ. ನೀವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದುದು ಏನಂದರೆ - ದೇವರು ಇಲ್ಲ, ಆದರೆ ಭಕ್ತನಿದ್ದಲ್ಲಿ ದೇವರು ಇರುತ್ತಾನೆ.

ಭಕ್ತಿಯ ಶಕ್ತಿ ಎಂತಹದ್ದೆಂದರೆ, ಅದರಿಂದ ಸೃಷ್ಟಿಕರ್ತನನ್ನೇ ಸೃಷ್ಟಿಸಬಹುದು. ನಾವು ಭಕ್ತಿ ಎಂದು ಯಾವುದನ್ನು ಕರೆಯುತ್ತೀವೋ ಅದರ ಆಳ ಎಂತಹದ್ದೆಂದರೆ, ದೇವರು ಇಲ್ಲದಿದ್ದರೂ ಸಹ, ಭಕ್ತಿ ದೇವರನ್ನು ಅಸ್ತಿತ್ವಕ್ಕೆ ತರಬಲ್ಲದು.

ಸಂಪಾದಕರ ಟಿಪ್ಪಣಿ: “ಎನ್‍ಕೌಂಟರ್ ದಿ ಎನ್‍ಲೈಟಂಡ್” ಎಂಬ ಆಂಗ್ಲ ಪುಸ್ತಕವನ್ನು ಡೌನ್‌ಲೋಡ್ ಮಾಡಿ, ಅಲ್ಲಿ ಸದ್ಗುರುಗಳು ಜ್ಞಾನೋದಯ ಹೊಂದಿದವರ ಬಗ್ಗೆ ವಿವರಿಸುತ್ತಾರೆ.