ಪ್ರಶ್ನೆ: ಸದ್ಗುರು, ನನ್ನ ಶಾಲಾಕಾಲೇಜಿನ ದಿನಗಳಲ್ಲಿ, ಬಹಳ ಬುದ್ಧಿವಂತರಾದವರು ತಮ್ಮ ಪಾಡಿಗೆ ತಾವಿರುವುದನ್ನು ನಾನು ನೋಡಿದ್ದೇನೆ. ಸಂತೋಷದಿಂದಿರಲು ಜನಗಳು ಮಾಡುವ ಸಾಮಾನ್ಯ ಸಂಗತಿಗಳನ್ನು ಮಾಡಲು ಅವರು ಒಲವು ತೋರುವುದಿಲ್ಲ. ಅವರು ಹೊರಗಡೆ ಸುತ್ತಾಡಲು ಹೋಗುವುದಿಲ್ಲ, ವಿನೋದಗಳಲ್ಲಿ ಭಾಗಿಯಾಗುವುದಿಲ್ಲ, ಪಾರ್ಟಿಗಳಿಗೆ ಹೋಗುವುದಿಲ್ಲ – ಕೇವಲ ತಮ್ಮ ಕೆಲಸದ ಬಗ್ಗೆಯಷ್ಟೆ ಗಮನ ಕೊಡುತ್ತಾರೆ. ಬುದ್ಧಿಶಕ್ತಿ ಮತ್ತು ಸಂತೋಷದ ನಡುವೆ ಸಂಬಂಧವೇನಾದರೂ ಇದೆಯೆ?

ಸದ್ಗುರು: ಜೀವನದಲ್ಲಿ ಹಲವಾರು ರೀತಿಯ ಆನಂದಗಳಿವೆ: ಭೌತಿಕ ಆನಂದಗಳು, ಶಾರೀರಿಕ ಆನಂದಗಳು, ಬೌದ್ಧಿಕ ಆನಂದಗಳು, ಆಳವಾದ ಬುದ್ಧಿಶಕ್ತಿಯ ಆನಂದಗಳು, ಭಾವನೆಗಳಿಂದಾಗುವ ಆನಂದಗಳು ಮತ್ತು ಪ್ರಜ್ಞೆಯ ಅಗಾಧವಾದ ಆನಂದಗಳು. ತಮ್ಮ ಬುದ್ಧಿಶಕ್ತಿಯ ಮೂಲಕ ಸಂತೋಷವನ್ನು ಹೊಂದುತ್ತಿರುವವರಿಗೆ, ನೀವು ಯೋಚಿಸುವಂತಹ ಆನಂದ ಕೊಡುವ ವಿಷಯಗಳು, ಅಂದರೆ, ಪಬ್-ಗೆ ಹೋಗುವುದು ಅಥವಾ ಮತ್ತಿನ್ನೇನನ್ನೋ ಮಾಡುವುದು, ಇಂತವುಗಳೆಲ್ಲಾ ಅರ್ಥವಾಗುವುದಿಲ್ಲ. ಅವರು ಬೇರೆ ಇನ್ನೇನನ್ನೋ ಅನುಭವಿಸಿ ಆನಂದಿಸುತ್ತಿರುತ್ತಾರೆ.

ಒಬ್ಬೊಬ್ಬರು ಆನಂದಕ್ಕಾಗಿ ತೊಡಗಿಸಿಕೊಳ್ಳುವ ವಿಷಯಗಳು ಬೇರೆ ಬೇರೆಯಾಗಿರಬಹುದು, ಮತ್ತು ಅದು ಬೇರೆ ಬೇರೆಯಾಗಿರಬೇಕು ಕೂಡ. ಎಲ್ಲರೂ ಸಹ ಒಂದೇ ವಿಷಯದಿಂದ ಆನಂದವನ್ನು ಹೊಂದುತ್ತಿದ್ದರೆ, ಅದೊಂದು ದಡ್ಡ ಸಮಾಜವಾಗುತ್ತದೆ.

ಬೇರೆಲ್ಲಾ ಜೀವಿಗಳಿಗೂ, ಅವುಗಳ ಜೀವನದಲ್ಲಿ ಶಾರೀರಿಕ ವಿಷಯಗಳು ಬಹು ಪ್ರಭಾವಶಾಲಿಯಾದ ಅಂಶವಾಗಿದೆ. ಆದರೆ, ಒಮ್ಮೆ ನೀವಿಲ್ಲಿ ಮಾನವರಾಗಿ ಬಂದಿರುವಾಗ, ನಿಮ್ಮ ಶರೀರವು ನಿಮ್ಮ ಜೀವನದ ಮುಂಚೂಣಿಯಲ್ಲಿಲ್ಲ. ಬಹುಶಃ, ನಿಮಗೆ ಹದಿನೆಂಟು ಅಥವಾ ಇಪ್ಪತ್ತು  ವರ್ಷವಾಗಿದ್ದಾಗ ನೀವು ಹಾಗೆ ಯೋಚಿಸಬಹುದು, ಆದರೆ ಅದು ನಿಜವಲ್ಲವೆಂದು ಮುಂದೆ ನಿಮಗರ್ಥವಾಗುತ್ತದೆ. ಒಮ್ಮೆ ನೀವು ಮಾನವರಾಗಿ ಭೂಮಿಗೆ ಬಂದಿರೆಂದರೆ, ನಿಮ್ಮಲ್ಲಿ ಅಗಾಧವಾದ ಬುದ್ಧಿಮತ್ತೆಯಿರುತ್ತದೆ (intellect). ಬುದ್ಧಿಶಕ್ತಿ (intelligence), ಭಾವನೆಗಳು ಮತ್ತು ಪ್ರಜ್ಞೆಯ ಬೇರೆ ಆಯಾಮಗಳೂ ಇವೆ. ಕೆಲವರು ಕೇವಲ ಭೌತಿಕವಾಗಿರುವುದನ್ನು ಮಾತ್ರ ಆನಂದಿಸಬಹುದು. ಕೆಲವರು, ಬುದ್ಧಿಮತ್ತೆ ಅಥವಾ ಬೇರೆ ಆಯಾಮಗಳಿಂದ ಸಿಗುವ ಸಂತೋಷವನ್ನು ಅನುಭವಿಸಬಹುದು. ನೀವು ಏನನ್ನು ಆನಂದವೆಂದು ಪರಿಗಣಿಸಿದ್ದೀರೋ ಅದನ್ನು ಅವರು ಮಾಡುತ್ತಿಲ್ಲ ಎಂದ ಮಾತ್ರಕ್ಕೆ, ಅವರು ಆನಂದಿಸುತ್ತಿಲ್ಲವೆಂದು ಅರ್ಥವಲ್ಲ. ನೀವು ಚದುರಂಗದ ಆಟವನ್ನು ಆಡುತ್ತೀರ ಎಂದಿಟ್ಟುಕೊಳ್ಳಿ. ಇನ್ಯಾರಿಗೋ ಅದು ಅಸಂಬದ್ಧವೆಂದು ತೋರಬಹುದು - ಏನಿದು ಬರೀ ಕಾಯಿಗಳನ್ನು ಆಚೀಚೆ ಚಲಿಸುವುದು! ಖಂಡಿತವಾಗಿ ಬಹಳಷ್ಟು ಜನರು ಹೀಗೆ ಯೋಚಿಸುತ್ತಾರೆ. ಆದರೆ, ಒಂದು ಕಾಯಿಯನ್ನು ಅದ್ಭುತವಾದ ರೀತಿಯಲ್ಲಿ ಚಲಾಯಿಸುವುದರಲ್ಲಿ ನೀವು ಪರಮಾನಂದವನ್ನು ಅನುಭವಿಸುತ್ತಿರಬಹುದು. ಹಾಗಾಗಿ, ಒಬ್ಬೊಬ್ಬರು ಆನಂದಕ್ಕಾಗಿ ತೊಡಗಿಸಿಕೊಳ್ಳುವ ವಿಷಯಗಳು ಬೇರೆ ಬೇರೆಯಾಗಿರಬಹುದು; ಅದು ಬೇರೆ ಬೇರೆಯಾಗಿರಬೇಕು ಕೂಡ. ಎಲ್ಲರೂ ಸಹ ಒಂದೇ ವಿಷಯದಿಂದ ಆನಂದವನ್ನು ಹೊಂದುತ್ತಿದ್ದರೆ, ಅದೊಂದು ದಡ್ಡ ಸಮಾಜವಾಗುತ್ತದೆ.   

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ  UnplugWithSadhguru.org.

Youth and Truth Banner Image