ಆಧ್ಯಾತ್ಮಿಕತೆಯ ದೃಷ್ಟಿಕೋನದಿಂದ ಆತ್ಮಸಮ್ಮಾನ ಗುರಿಯಾಗದೆ, ಒಂದು ಅಡಚಣೆಯಾಗುವುದು ಹೇಗೆ ಎಂದು ಸದ್ಗುರುಗಳು ವಿವರಿಸುತ್ತಾರೆ. ನೀವು ನಿಜವಾಗಿ ಆತ್ಮಸಮ್ಮಾನಕ್ಕಾಗಿ ಹೋರಾಟ ಮಾಡಬೇಕೆ? ಸದ್ಗುರುಗಳು ವಿವರಿಸುತ್ತಾರೆ, ಆಧ್ಯಾತ್ಮಿಕ ಪಥದಲ್ಲಿರುವ ಒಬ್ಬ ಭಕ್ತ, ಅಸಾಧಾರಣ ವ್ಯಕ್ತಿ ಆಗಲು ಪ್ರಯತ್ನಿಸುವುದಿಲ್ಲ, ಅತಿ - ಸಾಧಾರಣ ವ್ಯಕ್ತಿ ಆಗಲು ಬಯಸುತ್ತಾನೆ.

ಸದ್ಗುರು: ‘ಆತ್ಮಸಮ್ಮಾನ’ ಇಂದು ತುಂಬಾ ಬಳಕೆಯಲ್ಲಿರುವ ಶಬ್ದ. ಅದು ಸ್ವಲ್ಪ ಮಟ್ಟಿಗೆ ಮಾನಸಿಕ ಸಮಾಧಾನವನ್ನು ಕೊಡಬಹುದು. ಆದರೆ ಆಧ್ಯಾತ್ಮಿಕ ಗುರುಗಳೂ ಸಹ ಈ ಪರಿಕಲ್ಪನೆಯನ್ನು ಮನಃಪೂರ್ವಕವಾಗಿ ಸಮರ್ಥಿಸುತ್ತಿರುವುದು ದುರದೃಷ್ಟಕರ ಸಂಗತಿ. ಅಸ್ತಿತ್ವದ ದೃಷ್ಟಿಕೋನದಿಂದ, ‘ಆತ್ಮ’ ಮತ್ತು ‘ಸಮ್ಮಾನ’ ಎರಡೂ ಸಮಸ್ಯೆಗಳೇ. ಎರಡೂ ಸೀಮಿತವಾಗಿವೆ, ದುರ್ಬಲ ಮತ್ತು ಅಸ್ಥಿರವಾಗಿವೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ದೃಷ್ಟಿಕೋನದಿಂದ, ನಿಮಗೆ "ಸಮ್ಮಾನ" ಇಲ್ಲದಿದ್ದರೆ, ತುಂಬಾ ಒಳ್ಳೆಯದು. "ಆತ್ಮ" ಇಲ್ಲದಿದ್ದರೆ, ಅದೊಂದು ಅದ್ಭುತ!

ಗಂಭೀರ ಆಧ್ಯಾತ್ಮಿಕ ಪ್ರಯಾಣದಲ್ಲಿರುವ ವ್ಯಕ್ತಿಗೆ ‘ಅಸಾಧಾರಣನಾಗುವುದು’ ಗುರಿ ಅಲ್ಲ. ಅದರ ಬದಲಾಗಿ ಭಕ್ತನು ‘ಅತಿ-ಸಾಧಾರಣನಾಗಲು’ ಪ್ರಯತ್ನಿಸುತ್ತಾನೆ

ಗಂಭೀರ ಆಧ್ಯಾತ್ಮಿಕ ಪ್ರಯಾಣದಲ್ಲಿರುವ ವ್ಯಕ್ತಿಗೆ ‘ಅಸಾಧಾರಣನಾಗುವುದು’ ಗುರಿ ಅಲ್ಲ. ಅದರ ಬದಲಾಗಿ ಭಕ್ತನು ‘ಅತಿ-ಸಾಧಾರಣನಾಗಲು’ ಪ್ರಯತ್ನಿಸುತ್ತಾನೆ. ಆದರೂ, ಅನ್ವೇಷಕರಿಗೆ, ಭಕ್ತಿಯು ಜೀವನದ ಅತ್ಯಂತ ಮಧುರ ಅನುಭವವನ್ನು ಕೊಡುತ್ತದೆ. ಭಕ್ತಿ ಜೀವನವನ್ನು ವಿಭಜಿಸುವುದಲ್ಲ; ಅದು ಸಂಪೂರ್ಣ ಆಲಿಂಗನ; ಅದರಲ್ಲಿ ಸ್ವಲ್ಪವೂ ವಿವೇಕ ಇಲ್ಲ, ಅದರಿಂದ ಹೊರ ಬರಲು ಬೇರೆ ದಾರಿಯೂ ಇಲ್ಲ.

ಭಕ್ತಿ ಅಂದರೆ ನಿಮ್ಮಲ್ಲಿರುವ ಎಲ್ಲ ಪ್ರತಿರೋಧವನ್ನು ಕರಗಿಸಿದ್ದೀರಿ, ಹೀಗಾಗಿ ದೈವಿಕತೆಯು ನಿಮ್ಮ ಉಸಿರಿನಷ್ಟೇ ಸರಾಗವಾಗಿ ಸಂಭವಿಸುತ್ತದೆ. ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ, ದೈವಿಕತೆ ಜೀವಂತ ಶಕ್ತಿಯಾದಾಗ, ವರ್ಣಿಸಲಾಗದ ಭಾವಪರವಶತೆಯ ಅನುಭವ ನಿಮಗಾಗುತ್ತದೆ. ಬೇರೆಯವರಿಗೆ ಭಕ್ತರು ಹುಚ್ಚರಂತೆ ಕಾಣಬಹುದು, ಆದರೆ ಅವರು ಭೂಮಿಯ ಮೇಲೆ ಅತ್ಯದ್ಭುತ ಸಮಯ ಅನುಭವಿಸುತ್ತಿದ್ದಾರೆ. ಅದಕ್ಕೇ ನಾನು ಆಗಾಗ ಹೇಳುತ್ತಿರುತ್ತೇನೆ - ಭಕ್ತಿಯು ಬುದ್ಧಿವಂತಿಕೆಯ ಒಂದು ಗಹನವಾದ ಸ್ವರೂಪ.

ಯೋಗ ಪರಂಪರೆಯಲ್ಲಿ ಒಂದು ಸುಂದರವಾದ ಕಥೆ ಇದೆ. ಅಲ್ಲಮಪ್ರಭುಗಳು ಪ್ರಸಿದ್ಧ ಸಂತರು ಮತ್ತು ಹನ್ನೆರಡನೆಯ ಶತಮಾನದ ವೀರಶೈವ ಚಳುವಳಿಯ ಪ್ರಮುಖ ನೇತಾರರು. ಆ ಸಮಯದ ರೋಮಾಂಚಕ ಆಧ್ಯಾತ್ಮಿಕ ಇತಿಹಾಸದಲ್ಲಿ, ಅವರು ಅನೇಕ ಸಂತರು, ಜ್ಞಾನಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು. ಸೂಕ್ಷ್ಮ ಮತ್ತು ಗಹನ ಸ್ವಭಾವದ ವ್ಯಕ್ತಿಯಾಗಿದ್ದರು. ಅಸಾಧಾರಣವಾದ, ಆಳವಾದ, ದಾರ್ಶನಿಕ ಒಳನೋಟವುಳ್ಳ ಸಾವಿರಾರು ವಚನಗಳನ್ನು ಅವರು ರಚಿಸಿದ್ದಾರೆ.

ಒಂದು ದಿನ, ಮತ್ತೊಬ್ಬ ಶ್ರೇಷ್ಠ ಯೋಗಿ ಮತ್ತು ಶಿವ ಭಕ್ತರಾದ ಗೋರಕ್ಷರು ಅಲ್ಲಮರನ್ನು ಭೇಟಿಯಾದರು. ಗೋರಕ್ಷ ಒಬ್ಬ ಯೋಗಿ ಮತ್ತು ಕಾಯಕಲ್ಪದ ಮಾರ್ಗದಲ್ಲಿದ್ದರು. ‘ಕಾಯ’ ದ ಅಕ್ಷರಶಃ ಅರ್ಥ ದೇಹ; ‘ಕಲ್ಪ’ ಅಂದರೆ ‘ಪುನರುಜ್ಜೀವನ’. ಇದು ಆರೋಗ್ಯ, ಪ್ರಾಣಶಕ್ತಿ ಮತ್ತು ದೀರ್ಘಾಯುಷ್ಯವನ್ನು ಮಾತ್ರವಲ್ಲದೆ ದೇಹವನ್ನು ಪ್ರಜ್ಞೆಯ ಮತ್ತೊಂದು ಆಯಾಮಕ್ಕೆ ಏರಿಸುವು ಪ್ರಾಚೀನ ಯೋಗ ವಿಜ್ಞಾನವಾಗಿದೆ. ಗೋರಕ್ಷರ ಯೋಗ ಪ್ರಾವಿಣ್ಯ ಅವರ ದೇಹವನ್ನು ಬಂಡೆಯಂತೆ ಗಟ್ಟಿಯಾಗಿ ಮತ್ತು ಸ್ಥಿರವಾಗಿಸಿತ್ತು.

ಸುಲಭ ತುತ್ತಾಗುವಿಕೆ ಭಕ್ತನ ಶಕ್ತಿಯೇ ಹೊರತು ನ್ಯೂನತೆ ಅಲ್ಲ

ಹಲವು ಯೋಗಾಭ್ಯಾಸಗಳು ಮನುಷ್ಯನ ವ್ಯವಸ್ಥೆಯನ್ನು ಶುದ್ಧೀಕರಿಸುತ್ತವೆ ಮತ್ತು ಪಂಚಭೂತಗಳ ಮೇಲೆ ಪ್ರಭುತ್ವ ತಂದು ಕೊಡುತ್ತವೆ. ವಿಶೇಷ ಸಾಧನೆಯಿಂದ, “ಭೂತ ಸಿದ್ಧಿ”ಯನ್ನು ಪಡೆಯಬಹುದು - ಪಂಚಭೂತಗಳ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಬಹುದು. ಇಂಥ ಸಾಧಕರು, ಮನುಷ್ಯನ ಸಾಮಾನ್ಯ ಆಯುಷ್ಯಕ್ಕಿಂತ ಹೆಚ್ಚು ಕಾಲ ಜೀವಿಸಬಲ್ಲರು. ಇದು ಯೋಗ ಪರಂಪರೆಯಲ್ಲಿ, ಸಾವಿರಾರು ವರ್ಷ ಬದುಕಿದ ಸಿದ್ಧ ಯೋಗಿಗಳ ಅಸಂಖ್ಯಾತ ಕಥೆಗಳಿಗೆ ಕಾರಣವಾಗಿದೆ.

ಆ ಸಮಯದಲ್ಲಿ, ಗೋರಕ್ಷರಿಗೆ ಆಗಲೇ ಸುಮಾರು 280 ವರ್ಷ ವಯಸ್ಸಾಗಿತ್ತು ಎಂದು ನಂಬಲಾಗುತ್ತದೆ. ಗೋರಕ್ಷರು ಅಲ್ಲಮರಿಗೆ ಸವಾಲು ಹಾಕಿದರು; "ನಿಮ್ಮನ್ನು ಮಹಾನ್ ಯೋಗಿ ಮತ್ತು ಶಿವ ಭಕ್ತರೆಂದು ಪರಿಗಣಿಸಲಾಗುತ್ತದೆ. ನೀವು ಎಷ್ಟು ಸಮರ್ಥರು ಎನ್ನುವದನ್ನು ಪರೀಕ್ಷಿಸೋಣ’. ಎಂದ ಅವರು ವಜ್ರದಂಚಿನ ಖಡ್ಗವನ್ನು ಅಲ್ಲಮರ ಕೈಗೆ ಕೊಟ್ಟು ಹೇಳಿದರು, ‘ಈ ಖಡ್ಗ ತೆಗೆದುಕೊಂಡು ನನ್ನ ತಲೆಗೆ ಜೋರಾಗಿ ಹೊಡೆಯಿರಿ. ಏನಾಗುತ್ತದೆ ನೋಡಿ."

ಅಲ್ಲಮರಿಗೆ ವಿನೋದವೆನಿಸಿತು. ಎರಡೂ ಕೈಗಳಿಂದ ಸಂಪೂರ್ಣ ಶಕ್ತಿ ಉಪಯೋಗಿಸಿ, ಖಡ್ಗವನ್ನು ಗೋರಕ್ಷರ ತಲೆಯ ಮೇಲೆ ಹೊಡೆದರು. ಗೋರಕ್ಷರು ಅಲ್ಲಿ ಕಲ್ಲಿನಂತೆ ನಿಂತಿದ್ದರು, ಸುರಕ್ಷಿತವಾಗಿ. ಖಡ್ಗ ಅವರ ತಲೆಯಿಂದ ಪುಟಿಯಿತು.

ಆಗ ಗೋರಕ್ಷರು ಹೇಳಿದರು, ‘ನೀವು ನನ್ನ ಮೇಲೆ ಖಡ್ಗ ಪ್ರಯೋಗ ಮಾಡಿ ಆಯಿತು. ನಾನೂ ನಿಮ್ಮ ಮೇಲೆ ಅದರ ಪ್ರಯೋಗ ಮಾಡಲು ನನಗೆ ಅನುಮತಿ ಇದೆ ಎಂದು ತಿಳಿಯುತ್ತೇನೆ ”

ಅಲ್ಲಮರು ಒಪ್ಪಿದರು. ಗೋರಕ್ಷರು ಖಡ್ಗವನ್ನು ಎತ್ತಿ ಅಲ್ಲಮರ ಮೇಲೆ ಶಕ್ತಿಯಿಂದ ತೀವ್ರವಾಗಿ ಬೀಸಿದರು. ಅವರಿಗೆ ಆಶ್ಚರ್ಯವಾಗುವಂತೆ ಖಡ್ಗವು ಅಲ್ಲಮರ ದೇಹದ ಮೂಲಕ ಹಾಯ್ದು ಹೋಯಿತು. ಅಲ್ಲಮರು ಅಲ್ಲೇ ನಿಂತಿದ್ದರು, ಅವಿಚಲಿತರಾಗಿ. ಗೋರಕ್ಷರ ಯೋಗ ಅವರ ದೇಹವನ್ನು ಕಲ್ಲಿನಂತೆ ಮಾಡಿದ್ದರೆ, ಅಲ್ಲಮರ ಯೋಗ ಅವರ ದೇಹವನ್ನು ತೆಳುವಾದ ಗಾಳಿಯಂತೆ ಮಾಡಿತ್ತು.

ಗೋರಕ್ಷರು ಖಡ್ಗವನ್ನು ಅಲ್ಲಿ ಇಲ್ಲಿ ಎಲ್ಲ ಕಡೆ ಅಲ್ಲಮರ ಮೇಲೆ ಬೀಸಿದರು, ಆದರೆ ಅದು ಅಲ್ಲಮರ ದೇಹದ ಮುಖಾಂತರ ಮತ್ತೆ ಮತ್ತೆ ಹಾಯ್ದು ಹೋಯಿತು. ಗೋರಕ್ಷರಿಗೆ ಸೋಲೊಪ್ಪಿಕೊಳ್ಳುವ ನಮ್ರತೆ ಇತ್ತು. ಅವರು ಹೇಳಿದರು “ನನಗೆ ಯೋಗದ ಶಕ್ತಿ ಗೊತ್ತಿದೆ. ಆದರೆ ವೀಲೀನದ ಯೋಗ ನನಗೆ ಗೊತ್ತಿಲ್ಲ”. ಮತ್ತು ಕೂಡಲೇ ಗೋರಕ್ಷರು ಅಲ್ಲಮರ ಶಿಷ್ಯರಾದರು.

ಈ ಅಜ್ಞಾತ ಕಥೆ ಒಂದು ಮುಖ್ಯ ಅಂಶವನ್ನು ಸ್ಪಷ್ಟಪಡಿಸುತ್ತದೆ. ಸುಲಭ ತುತ್ತಾಗುವಿಕೆ ಭಕ್ತನ ಶಕ್ತಿಯೇ ಹೊರತು ನ್ಯೂನತೆ ಅಲ್ಲ. ಶಿ-ವ ಅಂದರೆ ಅಕ್ಷರಶಃ - ‘ಯಾವುದು ಇಲ್ಲವೋ ಅದು’ ಅಥವಾ ‘ಏನೂ ಇಲ್ಲದ್ದು.’ ಶಿವನ ಭಕ್ತರಾಗಿದ್ದ ಅಲ್ಲಮರು ತಮ್ಮ ಭಕ್ತಿಯ ವಸ್ತುವಿನಲ್ಲಿ ಲೀನರಾಗಿದ್ದರು. ‘ಏನೂ ಇಲ್ಲವಾದದ್ದನ್ನು’ ಆಲಂಗಿಸುವ ಸ್ವೀಕಾರ ಅವರನ್ನು ಅಜೇಯರನ್ನಾಗಿ ಮಾಡಿತ್ತು. ದುರ್ಬಲರಾಗಲು ಅವರಲ್ಲಿದ್ದ ಸಮ್ಮತಿ ಅವರನ್ನು ಅಭೇದ್ಯರನ್ನಾಗಿ ಮಾಡಿತ್ತು. ಆತ್ಮ ಮತ್ತು ಸಮ್ಮಾನವನ್ನು ವಿಲೀನ ಮಾಡುವುದರಿಂದ (ತ್ಯಜಿಸಿದ್ದರಿಂದ) ಅವರು ಎಲ್ಲ ಮಿತಿಗಳಿಂದ ಮುಕ್ತರಾಗಿದ್ದರು. ಶಕ್ತಹೀನತೆಯನ್ನು ಆಯ್ಕೆ ಮಾಡುವುದರಿಂದ ಬರುವ ಶಕ್ತಿ ಇದು.

ಸಂಪಾದಕರ ಟಿಪ್ಪಣಿ: “ಇನ್ನರ್ ಮ್ಯಾನೇಜ್‌ಮೆಂಟ್” ಇಂಗ್ಲಿಷ್ ಇ-ಪುಸ್ತಕವನ್ನು ಡೌನ್‌ಲೋಡ್ ಮಾಡಿ. ಅದರಲ್ಲಿ ಸದ್ಗುರುಗಳು ನಿಮ್ಮ ಸಾಮರ್ಥ್ಯ ಹೆಚ್ಚಿಸಲು, ಜೀವನವನ್ನು ಬದಲಾಯಿಸಲು ಮತ್ತು ಬಾಹ್ಯ ಪ್ರಭಾವಗಳಿಂದ ನಮ್ಮನ್ನು ಮುಕ್ತಗೊಳಿಸುವು ಹೊಸ ಆಯಾಮವನ್ನು ತೆರೆಯಲು ಪರಿಣಾಮಕಾರಿ ಸಾಧನಗಳನ್ನು ವಿವರಿಸಿದ್ದಾರೆ. ಉಚಿತವಾಗಿ ಡೌನ್‌ಲೋಡ್ ಮಾಡಲು ಬೆಲೆ ಕ್ಷೇತ್ರದಲ್ಲಿ “0” ಅನ್ನು ಹೊಂದಿಸಿ.