ನಾವು ಜೀವನ ಎಂದು ಕರೆಯುವ ಪ್ರಕ್ರಿಯೆಯಲ್ಲಿ, ಪ್ರತಿಯೊಬ್ಬ ಮನುಷ್ಯನೂ ಸಹ ಪ್ರಜ್ಞಾಪೂರ್ವಕವಾಗಿ ಅಥವಾ ತನಗೇ ಅರಿವಿಲ್ಲದಂತೆ, ತನ್ನದೇ ಆದ ಒಂದು ನಿರ್ದಿಷ್ಟ ರೂಪವನ್ನು, ಒಂದು ನಿರ್ದಿಷ್ಟ ವ್ಯಕ್ತಿತ್ವವನ್ನು ಸ್ವತಃ ಸೃಷ್ಟಿಸಿಕೊಳ್ಳುತ್ತಾನೆ. ನಿಮ್ಮೊಳಗೆ ನೀವೇ ರಚಿಸಿಕೊಂಡ ಆ ಚಿತ್ರಣಕ್ಕೆ ವಾಸ್ತವದೊಂದಿಗೆ ಯಾವುದೇ ಸಂಬಂಧವೂ ಇರುವುದಿಲ್ಲ. ಅದಕ್ಕೆ ನಿಮ್ಮ ಆಂತರ್ಯದ ಸ್ವಭಾವದೊಂದಿಗೆ ಯಾವ ನಂಟೂ ಇಲ್ಲ. ಅದು ನೀವೇ ನಿರ್ಮಿಸಿಕೊಂಡಂತಹ ಒಂದು ರೀತಿಯ ಚಿತ್ರಣವಾಗಿದ್ದು, ಹೆಚ್ಚಿನ ಸಮಯ ಅದನ್ನು ನೀವು ಅರಿವಿಲ್ಲದಂತೆಯೇ ಸೃಷ್ಟಿಸಿಕೊಂಡಿರುತ್ತೀರಿ. ಪ್ರತಿಯೊಬ್ಬರೂ ಸಹ, ತಾವು ಏನು ಎನ್ನುವುದರ ಬಗ್ಗೆ ಒಂದಲ್ಲ ಒಂದು ರೀತಿಯ ಕಲ್ಪನೆಯನ್ನು ಇಟ್ಟುಕೊಂಡಿರುತ್ತಾರೆ. ನಮ್ಮಲ್ಲಿ ಕೆಲವೇ ಕೆಲವು ಮನುಷ್ಯರು ಮಾತ್ರ ಪ್ರಜ್ಞಾಪೂರ್ವಕವಾಗಿ ತಮ್ಮ ಬದುಕಿನ ಚಿತ್ರಣವನ್ನು ನಿರ್ಮಿಸಿಕೊಂಡಿದ್ದಾರೆ. ಬೇರೆಲ್ಲರೂ ಸಹ, ಜೀವನದಲ್ಲಿ ಅವರಿಗೆ ಸಂಭವಿಸಿದ ಆವರ್ತಗಳು ಅಥವಾ ಅವರಿಗೆ ಎದುರಾದ ಬಾಹ್ಯ ಸನ್ನಿವೇಶಗಳ ಪ್ರಕಾರವಾಗಿ ಅವರವರ ಚಿತ್ರಣಗಳನ್ನು ನಿರ್ಮಿಸಿಕೊಂಡಿದ್ದಾರೆ.

ಈಗ ನಾವು ನಮ್ಮದೊಂದು ಹೊಸ ಸ್ವಯಂ-ಚಿತ್ರಣವನ್ನು ಜಾಗೃತವಾಗಿ, ನಮಗೆ ನಿಜವಾಗಿಯೂ ಹೇಗೆ ಬೇಕೋ ಹಾಗೆ ಸೃಷ್ಟಿಸಿಕೊಳ್ಳಬಾರದೇಕೆ? ನೀವು ಸಾಕಷ್ಟು ಬುದ್ಧಿವಂತರಾಗಿದ್ದರೆ, ಸ್ವಲ್ಪ ತಿಳಿದವರಾಗಿದ್ದರೆ, ನಿಮ್ಮ ಚಿತ್ರಣವನ್ನು ಸಂಪೂರ್ಣ ಹೊಸದಾಗಿ, ನಿಮಗೆ ಬೇಕಾದ ರೀತಿಯಲ್ಲಿ ಮರುಸೃಷ್ಟಿಸಿಕೊಳ್ಳಬಹುದಾಗಿದೆ. ಆದರೆ ಹಳೆಯದನ್ನು ಬಿಡಲು ನೀವು ಸಿದ್ಧರಿರಬೇಕು ಅಷ್ಟೆ. ಇದು ನಟನೆಯಲ್ಲ. ನೀವು ಪ್ರಜ್ಞಾರಹಿತವಾಗಿ ವರ್ತಿಸುವ ಬದಲು ಪ್ರಜ್ಞಾಪೂರ್ವಕವಾಗಿ ವರ್ತಿಸುತ್ತೀರಿ. ನಿಮಗೆ ಉತ್ತಮವಾಗಿ ಸರಿಹೊಂದುವಂತಹ, ನಿಮ್ಮ ಸುತ್ತಲೂ ಗರಿಷ್ಠ ಸಾಮರಸ್ಯವನ್ನು ತರಬಲ್ಲಂತಹ ಹಾಗೂ ಅತಿ ಕಡಿಮೆ ಘರ್ಷಣೆಯನ್ನು ಉಂಟುಮಾಡುವಂತಹ ಚಿತ್ರಣವನ್ನೇ ನೀವು ಸೃಷ್ಟಿಸಿಕೊಳ್ಳಬಹುದು. ನಿಮ್ಮ ಆಂತರ್ಯಕ್ಕೆ ತೀರ ಹತ್ತಿರವಾದಂತಹ ಚಿತ್ರಣವನ್ನು ನೀವು ಸೃಷ್ಟಿಸಿಕೊಳ್ಳಿ. ನಿಮ್ಮ ಪ್ರಕಾರ ನಿಮ್ಮ ಆಂತರ್ಯದ ಸ್ವಭಾವಕ್ಕೆ ತೀರ ಹತ್ತಿರವಾದ ಚಿತ್ರಣ ಯಾವುದು? ದಯವಿಟ್ಟು ಇದನ್ನು ಗಮನಿಸಿ, ಆಂತರ್ಯದ ಸ್ವಭಾವವು ತುಂಬಾ ಶಾಂತಿಯುತವಾಗಿದೆ. ಪ್ರಾಬಲ್ಯತೆ ಹೊಂದಿಲ್ಲದಿದ್ದರೂ ಬಹಳ ಶಕ್ತಿಶಾಲಿಯಾಗಿದೆ. ಅದು ತುಂಬಾ ಸೂಕ್ಷ್ಮ ಆದರೆ ಅಷ್ಟೇ ಶಕ್ತಿಯುತ ಕೂಡ. ಈಗ ನಾವು ಮಾಡಬೇಕಾದುದು ಇದು: ನಿಮ್ಮೊಳಗಿನ ಒರಟು ಅಂಶಗಳನ್ನು, ನಿಮ್ಮ ಕೋಪ-ತಾಪಗಳು, ನಿಮ್ಮ ಇತಿಮಿತಿಗಳು ಎಲ್ಲವನ್ನೂ ಕತ್ತರಿಸಿಹಾಕಬೇಕು. ಸೂಕ್ಷ್ಮವಾದ ಆದರೆ ಅಸಾಧಾರಣ ಶಕ್ತಿಯನ್ನು ಹೊಂದಿರುವಂತಹ ಒಂದು ಹೊಸ ಸ್ವಯಂ ಚಿತ್ರಣವನ್ನು ಸೃಷ್ಟಿಸಿಕೊಳ್ಳಬೇಕು.

ಮುಂದಿನ ಒಂದೆರಡು ದಿನಗಳು ನೀವಿದರ ಬಗ್ಗೆ ಯೋಚಿಸಿ ಮತ್ತು ನಿಮಗಾಗಿ ಒಂದು ಸರಿಯಾದ ಚಿತ್ರಣವನ್ನು ಸೃಷ್ಟಿಸಿಕೊಳ್ಳಿ; ಅದು ನಿಮ್ಮ ಚಿಂತನೆ ಮತ್ತು ಭಾವನೆಯ ಮೂಲಭೂತ ಸ್ವರೂಪವಾಗಿರಬೇಕು. ಅದನ್ನು ರಚಿಸುವ ಮೊದಲು, ಅದು ಈಗಾಗಲೇ ನಮ್ಮಲ್ಲಿರುವುದಕ್ಕಿಂತ ಉತ್ತಮವಾಗಿದೆಯೆ ಎಂದು ಪರಿಶೀಲಿಸಿಕೊಳ್ಳಬೇಕು. ಇದಕ್ಕಾಗಿ ನಿಮಗೆ ಯಾವುದೇ ಅಡಚಣೆಗಳು ಬಾರದಂತಹ ಸಮಯವನ್ನು ಆರಿಸಿಕೊಳ್ಳಿ. ನಿಮ್ಮ ಬೆನ್ನನ್ನು ಒರಗಿಸಿ ಆರಾಮವಾಗಿ ಕುಳಿತುಕೊಳ್ಳಿ ಮತ್ತು ಮನಸ್ಸನ್ನು ಶಾಂತವಾಗಿರಿಸಿ. ಈಗ, ನಿಮ್ಮ ಕಣ್ಣುಗಳನ್ನು ಮುಚ್ಚಿ, ಬೇರೆಯವರು ನಿಮ್ಮನ್ನು ಯಾವ ರೀತಿಯಲ್ಲಿ ಕಾಣಬೇಕು ಎಂಬುದನ್ನು ಚಿತ್ರಿಸಿಕೊಳ್ಳಿ. ಒಂದು ಸಂಪೂರ್ಣ ಹೊಸ ಮನುಷ್ಯನನ್ನು ರಚಿಸಿ. ಸಾಧ್ಯವಾದಷ್ಟು ವಿವರವಾಗಿ ಅದನ್ನು ಗಮನಿಸಿ. ಈ ಹೊಸ ಚಿತ್ರಣವು ಹೆಚ್ಚು ಮಾನವೀಯ, ಹೆಚ್ಚು ಪರಿಣಾಮಕಾರಿ, ಹೆಚ್ಚು ಪ್ರೀತಿಯಿಂದ ತುಂಬಿದೆಯೇ ಎಂದು ನೋಡಿ.

ಈ ಹೊಸ ಚಿತ್ರಣವನ್ನು ಸಾಧ್ಯವಾದಷ್ಟು ಶಕ್ತಿಯುತವಾಗಿ ಕಲ್ಪಿಸಿಕೊಳ್ಳಿ. ಅದನ್ನು ನಿಮ್ಮೊಳಗೆ ಜೀವಂತವಾಗಿಸಿ. ನಿಮ್ಮ ಕಲ್ಪನೆ ಮತ್ತು ನಿಮ್ಮ ಚಿತ್ರಣ ಸಾಕಷ್ಟು ಪ್ರಬಲವಾಗಿದ್ದರೆ, ಅದು ನಿಮ್ಮ ಕರ್ಮದ ಸಂಕೋಲೆಗಳನ್ನೂ ಸಹ ಮುರಿಯಬಹುದಾಗಿದೆ. ನೀವು ಏನಾಗಬೇಕು ಎಂಬುದರ ದೃಢವಾದ ಚಿತ್ರಣವನ್ನು ಸೃಷ್ಟಿಸುವ ಮೂಲಕ ಕರ್ಮದ ಮಿತಿಗಳನ್ನು ಮೀರಬಹುದು. ಇದು ನಿಮ್ಮ ಚಿಂತನೆ, ಭಾವನೆ ಮತ್ತು ಕ್ರಿಯೆಗಳ ಎಲ್ಲಾ ಮಿತಿಗಳನ್ನು ಮೀರಿ ಬೆಳೆಯಲು ಇರುವಂತಹ ಒಂದು ಸದವಕಾಶವಾಗಿದೆ. 

Love & Grace