ಪ್ರಶ್ನೆ : ಸದ್ಗುರು, ನಮಸ್ಕಾರ. ನಾವು ಮೃತದೇಹವನ್ನು ಸುಟ್ಟ ನಂತರ, ಚಿತಾಭಸ್ಮವನ್ನು ಯಾವಾಗಲೂ ಗಂಗಾನದಿ ಅಥವಾ ಯಾವುದಾದರೊಂದು ಹತ್ತಿರದ ನದಿಯಲ್ಲಿ ವಿಸರ್ಜಿಸುತ್ತೇವೆ. ಇದಕ್ಕೆ ಏನಾದರೂ ಮಹತ್ವವಿದೆಯೇ?

ಸದ್ಗುರು : ನಿಮಗೆ ಹತ್ತಿರವಾದವರು ಯಾರಾದರೂ ಸತ್ತರೆ, ಅವರು ಸತ್ತಿದ್ದಾರೆಂದು ನಿಮಗೆ ತಿಳಿದರೂ ಸಹ, ಎಲ್ಲೋ ಒಂದು ಕಡೆ ನಿಮ್ಮ ಮನಸ್ಸು ತನ್ನ ಕಪಟ ತಂತ್ರಗಳನ್ನು ಹೂಡಲು ಶುರು ಮಾಡುತ್ತದೆ. “ಅವರಿನ್ನೂ ಮಲಗಿರಬಹುದೇನೋ, ಅವರು ಈಗ ಎದ್ದು ಕುಳಿತುಕೊಳ್ಳಬಹುದೇನೋ, ಈ ಬೂದಿಯಿಂದ ಅವರು ಎದ್ದುಬರಬಹುದೇನೋ” ಎಂದೆಲ್ಲಾ ನಿಮಗೆ ಅನಿಸಬಹುದು. ಆದರೆ ನೀವು ಬೂದಿಯನ್ನು ನದಿಯಲ್ಲಿ ವಿಸರ್ಜಿಸಿದ ಕೂಡಲೇ, ಎಲ್ಲಾ ಮುಗಿದು ಹೋಯಿತು ಎಂಬ ಅರಿವು ನಿಮ್ಮಲ್ಲಿ ಮೂಡುತ್ತದೆ. ಬದುಕಿರುವವರಲ್ಲಿ ಆ ಸಾವಿನ ಬಗ್ಗೆ ಆಳವಾದ ಸ್ವೀಕಾರ ಮನೋಭಾವನೆ ಉಂಟಾಗುತ್ತದೆ – ಮತ್ತು ಸತ್ತವರಿಗೂ ಸಹ ತಮ್ಮ ಸಾವನ್ನು ಒಪ್ಪಿಕೊಳ್ಳಲು ಸುಲಭವಾಗುತ್ತದೆ.

ಸತ್ತವರು ಮುಂದಕ್ಕೆ ಸಾಗಬೇಕು

ಮರಣವಾಗಿ ನಲವತ್ತು ದಿನಗಳವರೆಗೂ, ಜೀವಚೈತನ್ಯವು ಸಂಪೂರ್ಣವಾಗಿ ಶರೀರವನ್ನು ಬಿಟ್ಟುಹೋಗಲು ಸಮಯ ತೆಗೆದುಕೊಳ್ಳುತ್ತದೆ. ನೀವು ಶರೀರವನ್ನು ಸುಟ್ಟು ಹಾಕಿದ್ದರೂ ಸಹ, ಅದು ತನ್ನ ಶರೀರದ ಬೂದಿ ಅಥವಾ ತಾನು ಬಳಸಿದ ಬಟ್ಟೆ, ಇತ್ಯಾದಿ ತನಗೆ ಸಂಬಂಧಿಸಿದಂತಹ ನಿರ್ದಿಷ್ಟವಾದ ವಸ್ತುಗಳಿಗಾಗಿ ಹುಡುಕಾಡುತ್ತದೆ. 

 

ಈ ಕಾರಣದಿಂದಾಗಿ, ಹಿಂದು ಕುಟುಂಬಗಳಲ್ಲಿ ಒಬ್ಬ ವ್ಯಕ್ತಿ ಸತ್ತ ಕೂಡಲೇ, ಆ ವ್ಯಕ್ತಿ ಬಳಸುತ್ತಿದ್ದ ಎಲ್ಲಾ ಬಟ್ಟೆಗಳನ್ನು, ವಿಶೇಷವಾಗಿ ಆ ಮನುಷ್ಯ ಧರಿಸುತ್ತಿದ್ದ ಬಟ್ಟೆಗಳನ್ನು ಸುಟ್ಟುಹಾಕಲಾಗುತ್ತದೆ.  ಏಕೆಂದರೆ ಆ ಜೀವವಿನ್ನೂ ಶರೀರದ ಅಂಶಗಳನ್ನು ಹುಡುಕುತ್ತಲೇ ಇರುತ್ತದೆ, ಅದು ಬೆವರಾಗಿರಬಹುದು, ಶರೀರದ ವಾಸನೆಯಾಗಿರಬಹುದು, ಏಕೆಂದರೆ ಆ ಜೀವಕ್ಕೆ ಎಲ್ಲಾ ಮುಗಿದಿದೆ ಎಂಬ ಅರಿವು ಇನ್ನೂ ಬಂದಿರುವುದಿಲ್ಲ. ನೀವೇನಾದರೂ ಆ ಭಸ್ಮವನ್ನು ಒಂದು ಕಡೆ ಇಟ್ಟುಬಿಟ್ಟರೆ, ಆ ಜೀವವು ಅದಕ್ಕಾಗಿ ಹುಡುಕಾಡಬಹುದಾದ ಪ್ರಮೇಯವಿರುತ್ತದೆ. ಹಾಗಾಗಿ ಚಿತಾಭಸ್ಮವನ್ನು ಒಂದು ನದಿಯಲ್ಲಿ ವಿಸರ್ಜಿಸಲಾಗುತ್ತದೆ, ಮತ್ತದು ಅಲ್ಲಿ ಹರಡಿಕೊಂಡು ನೀರಿನಲ್ಲಿ ಬೆರತುಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲಾ ಮುಗಿದಿದೆ ಎಂಬುದನ್ನು ಆ ಜೀವಕ್ಕೆ ತಿಳಿಸಿಕೊಡಲು ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಲಾಗುತ್ತದೆ.

ಋಣಾನುಬಂಧ: ಬಂಧನವನ್ನು ಕಡಿದು ಹಾಕುವುದು

ಇದರ ಇನ್ನೊಂದು ಅಂಶವೆಂದರೆ ನೀವು ಯಾರನ್ನಾದರೂ ಮುಟ್ಟಿದರೆ – ಅದು ರಕ್ತಸಂಬಂಧದಿಂದ ಅಥವಾ ಲೈಂಗಿಕ ಸಂಬಂಧಗಳಿಂದಾಗಬಹುದು, ಅಥವಾ ಸುಮ್ಮನೆ ನೀವು ಯಾರದ್ದಾದರೂ ಕೈಯನ್ನು ಹಿಡಿದುಕೊಂಡರೆ ಅಥವಾ ಅವರ ಬಟ್ಟೆಗಳನ್ನು ಧರಿಸಿದರೆ – ಆ ಎರಡೂ ಶರೀರಗಳಲ್ಲಿ ಋಣಾನುಬಂಧ, ಅಂದರೆ ಒಂದು ನಿರ್ದಿಷ್ಟ ರೀತಿಯ ಸಾಮ್ಯತೆ ಸೃಷ್ಟಿಯಾಗುತ್ತದೆ. ಒಂದು ರೀತಿಯ ದೈಹಿಕ ಸಾಮ್ಯತೆ ಅಲ್ಲಿ ಉಂಟಾಗುತ್ತದೆ.

 

ಯಾರಾದರೂ ಸತ್ತಾಗ, ಸಾಂಪ್ರದಾಯಿಕವಾಗಿ, ನೀವು ಈ ಋಣಾನುಬಂಧವನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಹೇಗೆಂಬುದರ ಕಡೆಗೆ ಗಮನ ಹರಿಸುತ್ತಿರುತ್ತೀರಿ. ಚಿತಾಭಸ್ಮವನ್ನು ಗಂಗೆ ಅಥವಾ ಸಮುದ್ರದಲ್ಲಿ ವಿಸರ್ಜಿಸುವುದರ ಉದ್ದೇಶವೇನೆಂದರೆ, ಅದನ್ನು ಎಷ್ಟು ಸಾಧ್ಯವೋ ಅಷ್ಟು ವಿಸ್ತಾರವಾಗಿ ಹರಡುವುದರ ಮೂಲಕ ಸತ್ತವರೊಂದಿಗಿನ ಋಣಾನುಬಂಧವನ್ನು ಕಡಿದುಕೊಳ್ಳುವುದಾಗಿದೆ. ನೀವು ನಿಮ್ಮ ಜೀವನವನ್ನು ಮುಂದುವರೆಸಲು, ಈ ಋಣಾನುಬಂಧವನ್ನು ಸರಿಯಾಗಿ ಕಡಿದುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದರೆ, ಈಗಾಗಲೇ ಇಂದಿನ ಆಧುನಿಕ ಸಮಾಜಗಳಲ್ಲಿ ಆಗುತ್ತಿರುವಂತೆ, ಅದು ನಿಮ್ಮ ದೈಹಿಕ ಮತ್ತು ಮಾನಸಿಕ ರಚನೆಯನ್ನು ಬಾಧಿಸಬಲ್ಲುದು. ಅದು ನಿಮ್ಮ ಶರೀರ ಮತ್ತು ಮನಸ್ಸುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅದರಿಂದಾಗಿ ನೀವು ನಿಮ್ಮ ಹಾಗೂ ಸತ್ತವರ ನಡುವಿನ ಸುಂದರವಾದ ಸಂಗತಿಗಳನ್ನು ನೆನಪಿಸಿಕೊಂಡು ಸಂತೋಷಿಸುವುದರ ಬದಲಾಗಿ ದುಃಖಿಸುವಂತಾಗುತ್ತದೆ. ಅಲ್ಲದೆ ಅದು ನಿಮ್ಮ ಜೀವನವನ್ನು ನಿರ್ದಿಷ್ಟವಾದ ರೀತಿಯಲ್ಲಿ ಅಸ್ತವ್ಯಸ್ತಗೊಳಿಸಲು ಕಾರಣವಾಗಲೂಬಹುದು.

ಇದನ್ನು ತಪ್ಪಿಸಲು, ನಾವು ಕೇವಲ ಭೌತಿಕ ನೆನಪನ್ನು ಮಾತ್ರ ನಾಶಮಾಡಲು ಪ್ರಯತ್ನಿಸುತ್ತೇವಷ್ಟೆ - ಮಾನಸಿಕ ನೆನಪನ್ನಲ್ಲ. ನೀವು ಮಾನಸಿಕ ಮತ್ತು ಭಾವನಾತ್ಮಕ ನೆನಪುಗಳನ್ನು ಕಳೆದುಕೊಳ್ಳಬಾರದು. ನಿಮಗೆ ಪ್ರೀತಿಪಾತ್ರರಾದವರನ್ನು ನೀವೇಕೆ ಮರೆಯಬೇಕು? ನೀವು ಆ ಸಂಬಂಧವನ್ನು ಸದಾಕಾಲ ನೆನೆದು ಸಂತೋಷಪಡಬೇಕು. ಆದರೆ ನಾವು ಭೌತಿಕ ನೆನಪನ್ನು ನಾಶಮಾಡಲು ಬಯಸುತ್ತೇವೆ.

ವಾಮಾಚಾರದ ಕುಚೇಷ್ಟೆ

ನಾವು ಚಿತಾಭಸ್ಮವನ್ನು ವಿಸರ್ಜಿಸಲು ಇನ್ನೊಂದು ಕಾರಣವಿದೆ.  ವ್ಯಕ್ತಿಯ ಗುಣಗಳು ಸತ್ತ ನಂತರವೂ ಬೂದಿಯಲ್ಲಿ ಉಳಿದುಕೊಂಡಿರುತ್ತವೆ. ನೀವು ಶರೀರವನ್ನು ಸುಟ್ಟರೂ, ಆ ಬೂದಿಯಿಂದ ಫೊರೆನ್ಸಿಕ್ ಲ್ಯಾಬೋರೇಟರಿಯಲ್ಲಿ ಡಿಎನ್ಎ ಪರೀಕ್ಷೆಯ ಮೂಲಕ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಿದೆ. ಹಾಗಾಗಿ ಒಂದು ವೇಳೆ ನೀವು ಬೂದಿಯನ್ನು ಒಂದು ಕುಡಿಕೆಯಲ್ಲಿಟ್ಟರೆ, ಆ ಜೀವಾತ್ಮವು ಅದರ ಸುತ್ತಲೂ ಸುತ್ತುತ್ತಲಿರುತ್ತದೆ! ಈ ಕಾರಣದಿಂದಲೇ ವಾಮಾಚಾರ ಮಾಡುವವರು ತಮ್ಮ ಕಾರ್ಯಸಾಧನೆಗಾಗಿ ಸ್ಮಶಾನಗಳಲ್ಲಿ ಚಿತಾಭಸ್ಮವನ್ನು ಸಂಗ್ರಹಿಸಿಕೊಳ್ಳಲು ಕಾಯುತ್ತಿರುತ್ತಾರೆ – ಪ್ರೇತವನ್ನು ತಮ್ಮ ಕಡೆಗೆ ಆಕರ್ಷಿಸಿಕೊಳ್ಳುವ ಉದ್ದೇಶ ಅವರದ್ದು. ಅವರು ಮಾಟ ಮಂತ್ರದ ಮೂಲಕ ಆ ಜೀವಾತ್ಮವನ್ನು ವಿಭಿನ್ನ ರೀತಿ ಹಾಗೂ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಪ್ರಯತ್ನಿಸುತಿರುತ್ತಾರೆ.

ನಿಮ್ಮ ಪ್ರೀತಿಪಾತ್ರರು ಸತ್ತಾಗ, ಅವರ ಚಿತಾಭಸ್ಮವು ಕೆಟ್ಟಜನರ ಕೈಗೆ ಸಿಗದಂತೆ ಕಾಳಜಿವಹಿಸಲು ನೀವು ಬಯಸುತ್ತೀರಿ. ನಿಮ್ಮ ಪೂರ್ವಜರು ಅಥವಾ ಸಂಬಂಧಿಗಳು ದೀರ್ಘಕಾಲದವರೆಗೆ ದುರುಪಯೋಗಕ್ಕೊಳಗಾಗುವುದು ಅಥವಾ ಮಾಟಮಾಡುವವರ ಬಲಿಪಶುವಾಗುವುದು ನಿಮಗೆ ಇಷ್ಟವಿಲ್ಲ. ಚಿತಾಭಸ್ಮವನ್ನು ವಿಸರ್ಜಿಸುವ ಇನ್ನೊಂದು ವಿಧಾನವೆಂದರೆ, ಎತ್ತರದ ಬೆಟ್ಟವನ್ನು ಏರಿ ಗಾಳಿ ಚೆನ್ನಾಗಿ ಬೀಸುವ ಕಡೆ ಚಿತಾಭಸ್ಮವನ್ನು ತೂರುವುದು ಮತ್ತು ಅದು ಎಲ್ಲೆಡೆ ಹರಡಿಹೋಗುವಂತೆ ಮಾಡುವುದಾಗಿದೆ. ಯಾರೂ ಆ ಭಸ್ಮವನ್ನು ಸಂಗ್ರಹಿಸಲು ಸಾಧ್ಯವಾಗಬಾರದೆಂಬುದೇ ಅದರ ಉದ್ದೇಶ.

ಸಂಪಾದಕರ ಟಿಪ್ಪಣಿ : ‘ಕಾಯಂತಸ್ಥಾನಂ’ ಈಶದ ಉತ್ತರಕ್ರಿಯಾ ಸೇವೆಯಾಗಿದೆ. ಇದು ಪ್ರಬಲವಾದ ಶಕ್ತಿಯ ಆಧಾರದ ಮೇಲೆ ಪ್ರಾಚೀನ ಸಂಪ್ರದಾಯಗಳನ್ನು ಮತ್ತು ಮರಣಾನಂತರದ ವಿಧಿಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ. ಇದನ್ನು ವಾಣಿಜ್ಯ ಉದ್ಯಮದಂತಲ್ಲದೇ ಸೇವೆಯ ಉದ್ದೇಶದಿಂದ ನೆರವೇರಿಸಲಾಗುತ್ತದೆ. ಈ ಸೇವೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ನಿಮ್ಮ ಪ್ರೋತ್ಸಾಹ ಮತ್ತು ದೇಣಿಗೆಯನ್ನು ನೀಡಿ ಸಹಾಯಮಾಡಬೇಕೆಂದು ನಿಮ್ಮನ್ನು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ Kayantha Sthanam – Isha’s Cremation Services ಅನ್ನು ಸಂಪರ್ಕಿಸಿ.