ಪ್ರಶ್ನೆ: ಗೃಹಪ್ರವೇಶದ ಮಹತ್ವವೇನು ಮತ್ತು ಅದನ್ನು ಮಾಡುವುದು ಹೇಗೆ?

ಸದ್ಗುರು: ಭಾರತದಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಗೃಹಪ್ರವೇಶವನ್ನು ಆಚರಿಸಲಾಗುತ್ತದೆ. ಒಂದು ಹೆಣ್ಣಿಗೆ ಮದುವೆಯಾಗಿ ಅವಳು ಮೊದಲ ಬಾರಿ ತನ್ನ ಗಂಡನ ಮನೆಗೆ ಕಾಲಿಡುವುದನ್ನು ಒಂದು ದೊಡ್ಡ ಸಮಾರಂಭವಾಗಿ ಆಚರಿಸಲಾಗುತ್ತಿತ್ತು. ಇಂದಿನ ದಿನಗಳಲ್ಲಿ, ಮದುವೆಗೆ ಮುನ್ನವೆ ಗಂಡು ಹೆಣ್ಣು ಒಟ್ಟಿಗೆ ಬಾಳುತ್ತಿರಬಹುದು, ಹಾಗಿಲ್ಲದಿದ್ದರೆ, ಇದೊಂದು ಪ್ರಮುಖ ಸಮಾರಂಭವಾಗಿರುತ್ತಿತ್ತು. ಅದಕ್ಕಾಗಿಯೇ ಇದನ್ನು ಬಹಳ ಪವಿತ್ರವಾದ ಪ್ರಕ್ರಿಯೆಯಾಗಿಸಿ ಒಂದು ಗೃಹಪ್ರವೇಶವನ್ನು ನೆರವೇರಿಸಲಾಗುತ್ತಿತ್ತು. ಏಕೆಂದರೆ, ಯಾವ ತರಹದ ಹೆಣ್ಣು ನಿಮ್ಮ ಮನೆಗೆ ಬರುತ್ತಾಳೆ, ಅವಳು ಹೇಗೆ ಬರುತ್ತಾಳೆ ಎನ್ನುವುದು ನಿಮ್ಮ ಭವಿಷ್ಯದ ಸ್ವರೂಪ, ನಿಮ್ಮ ಮಕ್ಕಳು ಮತ್ತು ಅವರು ಹೇಗೆ ಬದುಕುತ್ತಾರೆ ಎನ್ನುವುದುನ್ನು ನಿರ್ಧರಿಸುತ್ತದೆ. ಒಂದು ಹೆಣ್ಣು ತನ್ನ ಮನೆಗೆ ಮತ್ತು ಕುಟುಂಬಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಭಾವನೆಯಿಂದ ಮತ್ತು ಪ್ರೀತಿಯಿಂದ ಮನೆಯೊಳಕ್ಕೆ ಪ್ರವೇಶಿಸುವುದು ಬಹಳ ಮುಖ್ಯ. ಅವಳ ಹೃದಯ ಮತ್ತು ಮನಸ್ಸಿನಲ್ಲಿ ಬೇರೆ ಏನನ್ನಾದರೂ ಇಟ್ಟುಕೊಂಡು ಅವಳು ಮನೆಯೊಳಕ್ಕೆ ಪ್ರವೇಶಿಸಿದರೆ, ಲಕ್ಷಾಂತರ ವಿಧದಲ್ಲಿ ಅವಳು ಆ ಕುಟುಂಬವನ್ನು ನಾಶಮಾಡಬಹುದು. ಅವಳು ನಕಾರಾತ್ಮಕ ಭಾವನೆಗಳೊಂದಿಗೆ ಮನೆಯನ್ನು ಪ್ರವೇಶಿಸಿದರೆ, ಅವಳು ಗರ್ಭ ಧರಿಸಿದಾಗ, ಅವಳು ಉತ್ತಮವಲ್ಲದ ಜೀವನವನ್ನು ಸೃಷ್ಟಿಸಿ, ಯೋಗ್ಯರಲ್ಲದಿರುವ ಮಕ್ಕಳನ್ನು ಹೆರುತ್ತಾಳೆ ಮತ್ತದು ನಿಮ್ಮನ್ನು ಜೀವನಪರ್ಯಂತ ನರಳುವಂತೆ ಮಾಡುತ್ತದೆ. ಆದ್ದರಿಂದ ಒಂದು ಹೆಣ್ಣು ಅತ್ಯಂತ ಗೌರವ ಹಾಗೂ ಮಂಗಳಕರವಾದ ರೀತಿಯಲ್ಲಿ ಮನೆಯೊಳಗೆ ಪ್ರವೇಶಿಸುವಂತೆ ಹಿಂದೆಲ್ಲಾ ಖಚಿತಪಡಿಸಲಾಗುತ್ತಿತ್ತು.

ಆ ಸಂದರ್ಭದ ಸುತ್ತಲೂ ಬಹಳಷ್ಟು ವಿಧಿವಿಧಾನಗಳಿವೆ. ಕ್ರಮೇಣವಾಗಿ, ಈ ವಿಧಿವಿಧಾನಗಳು ಚಿಕ್ಕದಾಗುತ್ತ ಹೋದವು, ಮತ್ತೀಗ, ಮದುವೆಯಾಗುವ ಮುನ್ನವೇ ಹೆಣ್ಣು ಮನೆಯನ್ನು ಪ್ರವೇಶಿಸುತ್ತಾಳೆ. ಅವಳು ಹೇಗೆ ಮನೆಯನ್ನು ಪ್ರವೇಶಿಸುತ್ತಾಳೆ ಎನ್ನುವುದು ಈಗೆಲ್ಲಾ ಮುಖ್ಯವಾಗಿ ಉಳಿದಿಲ್ಲ. ಇಂದು, ಮದುವೆಯೆಂದರೆ, ಇಬ್ಬರ ನಡುವೆ ಇರುವ ಕೊಂಚ ಮಟ್ಟಿಗಿನ ರೋಮಾನ್ಸ್ ಅಷ್ಟೆ. ಮುಂಚೆ, ಇದು ಹೀಗಿರಲಿಲ್ಲ. ಮದುವೆಯೆಂದರೆ, ಆ ದಂಪತಿಗಳ ಬಗ್ಗೆ ಮತ್ತು ಅವರಿಗಾಗುವ ಮಕ್ಕಳ ಬಗ್ಗೆ ಎಲ್ಲವನ್ನೂ ನಿರ್ಧರಿಸುವ ಒಂದು ಪಾಲುದಾರಿಕೆಯಾಗಿತ್ತು. ಹಾಗಾಗಿ ಒಂದು ಹೆಣ್ಣು ಸರಿಯಾದ ರೀತಿಯಲ್ಲಿ ಮನೆಯನ್ನು ಪ್ರವೇಶಿಸುವ ಸಲುವಾಗಿ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಇದು ಒಂದು ರೀತಿಯ ಗೃಹಪ್ರವೇಶ.

ವಾಸಿಸುವ ಜಾಗವನ್ನು ಜೀವಂತವಾಗಿಸುವುದು

ಇನ್ನೊಂದು ರೀತಿಯ ಗೃಹಪ್ರವೇಶವೆಂದರೆ, ಹೊಸ ಕಟ್ಟಡವೊಂದನ್ನು ನಿರ್ಮಿಸಿದಾಗ, ಆ ಸ್ಥಳವನ್ನು ಜೀವಂತಗೊಳಿಸಲು ನೀವು ಮಾಡುವ ಒಂದು ಪ್ರಕ್ರಿಯೆ. ನೀವು ಕಟ್ಟಿದ ಮನೆ ಸುಸ್ಥಿತಿಯಲ್ಲಿರಬೇಕು ಎಂದು ನೀವು ಬಯಸುತ್ತೀರಿ. ಮನೆಯ ವಿನ್ಯಾಸ, ಅದರ ಸೌಂದರ್ಯ, ಮತ್ತು ಅದಕ್ಕೆ ಹಚ್ಚುವ ಬಣ್ಣ ಎಲ್ಲವು ಮುಖ್ಯವೆ, ಆದರೆ, ಆ ಸ್ಥಳದಲ್ಲಿ ಯಾವ ರೀತಿಯ ಶಕ್ತಿ ಆವರಿಸುತ್ತದೆ ಎನ್ನುವುದು ಬಹಳ ಮುಖ್ಯ. ಗೃಹಪ್ರವೇಶದ ಪ್ರಕ್ರಿಯೆಯು ಒಂದು ಸ್ಥಳವನ್ನು ಪ್ರತಿಷ್ಠಾಪಿಸುವ ಒಂದು ಸಣ್ಣ ವಿಧಾನ. ಪ್ರತಿಷ್ಠಾಪಿಸದೇ ಇರುವಂತಹ ಒಂದು ಮನೆಯಲ್ಲಿ ಯಾರೂ ಸಹ ವಾಸಿಸುತ್ತಿರಲಿಲ್ಲ. ಮೂಲತಃ, ಈ ಎಲ್ಲಾ ವಿಷಯಗಳನ್ನು ಹೆಚ್ಚಿನ ಪ್ರಾಣಶಕ್ತಿಯನ್ನು ಉಂಟುಮಾಡಲು ಮಾಡಲಾಗುತ್ತಿತ್ತು. ಹಾಗೆ ಮಾಡಿದಾಗ, ಆ ಮನೆಯಲ್ಲಿ ವಾಸಿಸುವ ಜನ ಸಹಜವಾಗಿವಾಗಿಯೇ ತಮ್ಮ ಒಳಿತಿನತ್ತ ಸಾಗುತ್ತಾರೆ ಎನ್ನುವುದಾಗಿತ್ತು.

ಹಿಂದಿನ ಜನರು ಯಾವಾಗಲೂ, ಅವರಿಗೆ ಉತ್ತಮವೆಂದು ತಿಳಿದಿದ್ದ ರೀತಿಯಲ್ಲಿ ಅವರ ಮನೆಗಳನ್ನು ಪ್ರತಿಷ್ಠಾಪಿಸಿದ ಬಳಿಕವೇ ಅದರಲ್ಲಿ ವಾಸಿಸುತ್ತಿದ್ದರು. ವಿವೇಚನಾಯುಕ್ತರು ಮತ್ತು ಉದಾರ ಮನಸ್ಸಿನವರಾಗಿದ್ದ ಕೆಲವು ರಾಜರುಗಳು, ಇಡೀ ನಗರವನ್ನೇ ಪ್ರತಿಷ್ಠಾಪಿಸುತ್ತಿದ್ದರು. ಒಂದು ನಗರದಲ್ಲಿ ಅವರು ಅನೇಕ ಪ್ರತಿಷ್ಠಾಪಿತ ಸ್ಥಳಗಳನ್ನು ನಿರ್ಮಿಸುತ್ತಿದ್ದರು, ಏಕೆಂದರೆ ಅವರು, ಎಲ್ಲರೂ ಸಹ ಪ್ರತಿಷ್ಠಾಪಿತ ಸ್ಥಳಗಳಲ್ಲಿ ವಾಸ ಮಾಡಬೇಕೆಂದು ಬಯಸುತ್ತಿದ್ದರು. ಜನರು ರಸ್ತೆಗಳಲ್ಲಿ ನಡೆಯುತ್ತಿದ್ದರೂ, ಅಥವಾ ಅಲ್ಲಿ ವ್ಯವಹಾರ ಮಾಡುತ್ತಿದ್ದರೂ, ಅಥವಾ ವಾಸಿಸುತ್ತಿದ್ದರೂ, ಎಲ್ಲರೂ ಸಹ ನಿರಂತರವಾಗಿ ಒಂದು ಪ್ರತಿಷ್ಠಾಪಿತ ಜಾಗದಲ್ಲಿ ಇರುತ್ತಿದ್ದರು. ಏಕೆಂದರೆ, ಅತ್ಯದ್ಭುತವಾದ ಪ್ರಾಣಶಕ್ತಿಯ ಅರಿವಿರುವಂತಹ, ಬುದ್ಧಿ ಮತ್ತು ಸಾಮರ್ಥ್ಯವಿರುವಂತಹ ಮಾನವ ಪೀಳಿಗೆಗಳನ್ನು ನೀವು ಬೆಳೆಸಬೇಕಾದರೆ, ನಿಮಗೆ ಇಂತಹ ಶಕ್ತಿ ಮತ್ತು ಸ್ಥಳದ ಅಗತ್ಯವಿರುತ್ತದೆ. ಇಲ್ಲದಿದ್ದರೆ, ಆಕಸ್ಮಿಕವಾಗಿ ಅಥವಾ ಅದೃಷ್ಟದಿಂದಷ್ಟೇ ಯಾರಾದರೂ ಅಸಾಧಾರಣವಾದ ವ್ಯಕ್ತಿಗಳಾಗಬಹುದೇ ವಿನಃ, ಅದ್ಭುತವಾದ ಜನರ ಒಂದಿಡೀ ಪೀಳಿಗೆಯನ್ನೇ ನೀವು ಸೃಷ್ಟಿಸಲಾಗುವುದಿಲ್ಲ.

ಯಾವೊಬ್ಬ ಮನುಷ್ಯನೂ ಸಹ ಪ್ರತಿಷ್ಠಾಪಿಸದೇ ಇರದ ಸ್ಥಳಗಳಲ್ಲಿ ವಾಸಿಸಬಾರದು ಎಂಬ ಅರಿವು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ.

ಯಾವೊಬ್ಬ ಮನುಷ್ಯನೂ ಸಹ ಪ್ರತಿಷ್ಠಾಪಿಸದೇ ಇರದ ಸ್ಥಳಗಳಲ್ಲಿ ವಾಸಿಸಬಾರದು ಎಂಬ ಅರಿವು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಇದು ಹೇಗೆಂದರೆ, ನೀವು ಭೂಮಿಯಲ್ಲಿ ಒಂದು ಸಸಿಯನ್ನು ನೆಟ್ಟರೆ, ಅದು ಫಲವತ್ತಾದ ಮಣ್ಣಿನಲ್ಲಿ ಬೇರು ಬಿಟ್ಟರೆ ಮಾತ್ರ, ಹೂ ಹಣ್ಣುಗಳು ಬೆಳೆಯುತ್ತವೆ. ಅದೇ ಆ ಭೂಮಿ ಸಮೃದ್ಧವಾಗಿರದೆ, ಜೀವವನ್ನು ಬೆಳಸಲು ಸಶಕ್ತವಾಗಿರದೇ ಇದ್ದರೆ, ಹೂ ಹಣ್ಣುಗಳು ಬೆಳೆಯುವುದಿಲ್ಲ. ಹಾಗೊಂದು ವೇಳೆ, ಅದು ಹೂ ಮತ್ತು ಹಣ್ಣುಗಳು ಬಿಟ್ಟರೂ, ಅವು ಪುಷ್ಕಳವಾಗಿರುವುದಿಲ್ಲ ಮತ್ತು ಆ ಗಿಡ ಎಂದಿಗೂ ಪೂರ್ಣ ಫಲವನ್ನು ನೀಡುವುದಿಲ್ಲ. ಹಾಗಾಗಿ ನಮ್ಮ ಸಂಸ್ಕೃತಿಯಲ್ಲಿ, ನಾವು ಸದಾ ಜೀವನದ ಈ ಅಂಶಗಳಿಗೆ ಅಪಾರವಾದ ಪ್ರಾಮುಖ್ಯತೆಯನ್ನು ನೀಡಿದ್ದೆವು.

ಈ ಕಾರಣದಿಂದಲೇ ನಮ್ಮ ಸಂಸ್ಕೃತಿಯು ಜ್ಞಾನ ಹಾಗೂ ಸಾಕ್ಷಾತ್ಕಾರವನ್ನು ಹೊಂದಿದ ಚೇತನಗಳನ್ನು ಅಪಾರವಾದ ಸಂಖ್ಯೆಯಲ್ಲಿ ಸೃಷ್ಟಿಸಿರುವುದು. ಇಂತಹ ಅಂಶಗಳ ಬಗ್ಗೆ ಗಮನಹರಿಸಿದ ಕಾರಣಕ್ಕಾಗಿಯೇ, ಪ್ರತಿ ಪೀಳಿಗೆಯಲ್ಲೂ ಇಂತಹ ಜನರಿದ್ದರು. ನಮ್ಮ ಸಂಸ್ಕೃತಿಯನ್ನು ಹೊರತುಪಡಿಸಿ, ಈ ಭೂಮಿಯಲ್ಲಿ ಮತ್ತೆಲ್ಲೂ ಸಹ, ಒಂದೇ ಪೀಳಿಗೆಯ ಅನೇಕ ಜನ ಅರಿವಿನ ಅತ್ಯುನ್ನತ ಸ್ತರಗಳನ್ನು ತಲುಪಿದ ನಿದರ್ಶನಗಳಿಲ್ಲ.

ಸರಿಯಾದ ರೀತಿಯ ಪೋಷಣೆ

ದುರದೃಷ್ಟವಶಾತ್, ಕಳೆದ 800 ರಿಂದ 900 ವರ್ಷಗಳಲ್ಲಿ, ಈ ಅಂಶವು ತೀವ್ರವಾಗಿ ಘಾಸಿಗೊಳಗಾಗಿದೆ. ನಮ್ಮ ಬಹಳಷ್ಟು ಕುಟುಂಬಗಳಿಗೆ ತಮ್ಮ ನೂತನ ಮನೆಯಲ್ಲಿ ವಾಸಿಸುವುದಕ್ಕಿಂತ ಮೊದಲು ಗ್ರಹಪ್ರವೇಶವನ್ನು ಮಾಡುವ ಸುಯೋಗವಿದ್ದಂತಹ ಕಾಲವೊಂದಿತ್ತು. ಕಾಲಕಾಲಕ್ಕೆ, ಅವರು ತಮ್ಮ ಮನೆಗಳನ್ನು ವರ್ಧಿಸಲು ಏನಾದರೊಂದನ್ನು ಮಾಡುತ್ತಿದ್ದರು; ಇದು ಬಹುತೇಕವಾಗಿ ಪ್ರತಿಯೊಂದು ಕುಟುಂಬದ ಭಾಗವಾಗಿತ್ತು. ಅವರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮನೆಯ ಜಾಗವನ್ನು ವರ್ಧಿಸಲು ಅಗತ್ಯವಾದ ಆಚರಣೆಗಳು ಮತ್ತು ಪ್ರಕ್ರಿಯೆಗಳನ್ನು ನೆರವೇರಿಸುತ್ತಿದ್ದರು. ಮನುಷ್ಯನೊಬ್ಬ ತನ್ನ ಸಂಪೂರ್ಣ ಸಾಧ್ಯತೆಗೆ ಬೆಳೆಯಲು ಒಂದು ಅನುಕೂಲಕರವಾದ ವಾತಾವರಣವನ್ನು ಹೇಗೆ ಸೃಷ್ಟಿಸಬೇಕೆಂಬುದರ ಬಗ್ಗೆ ಇದು ಅತ್ಯಾವಶ್ಯಕವಾದ ತಿಳುವಳಿಕೆಯಾಗಿತ್ತು.

ಗೃಹಪ್ರವೇಶ ಎನ್ನುವುದು, “ನೀವು” ಎಂಬ ಸಸಿ ಬೆಳೆದು, ಹೂ ಮತ್ತು ಹಣ್ಣನ್ನು ನೀಡಲು ಸರಿಯಾದ ರೀತಿಯ ಮಣ್ಣನ್ನು ತಯಾರಿಸುವುದರ ಬಗ್ಗೆಯಾಗಿದೆ.

ನಾವು "ಸಂಪೂರ್ಣ ಸಾಧ್ಯತೆ" ಎಂದಾಗ, ಅದನ್ನು ಇಂದಿನ ಜಗತ್ತು, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಷ್ಟು ಹಣವನ್ನು ಗಳಿಸಬಹುದು ಎನ್ನುವ ಪರಿಭಾಷೆಯಲ್ಲಿ ಯೋಚಿಸುತ್ತದೆ. ಯಶಸ್ಸಿನ ಬಗ್ಗೆಯಿರುವ ಆಧುನಿಕ ಮನೋಭಾವನೆಯು ದುರದೃಷ್ಟಕರವಾಗಿ ತೀರ ಮೂಲಭೂತ ಮತ್ತು ಒರಟಾಗಿ ಹೋಗಿದೆ. ಸಾಮಾಜಿಕವಾಗಿ ನೀವೆಷ್ಟು ಎತ್ತರಕ್ಕೆ ಬೆಳೆಯಬಲ್ಲಿರಿ, ಎಷ್ಟು ಹಣವನ್ನು ಗಳಿಸಿದ್ದೀರಿ ಎನ್ನುವುದಷ್ಟೇ ಈಗಿನ ಯಶಸ್ಸಿನ ಪರಿಕಲ್ಪನೆಯಾಗಿಬಿಟ್ಟಿದೆ.

ಹಿಂದಿನ ಕಾಲದಲ್ಲಿ, ಯಶಸ್ಸಿನ ಪರಿಕಲ್ಪನೆ ಹೀಗಿರಲಿಲ್ಲ. ಅದು ತುಂಬಾ ವಿಶಾಲ ಮತ್ತು ಆಳವಾಗಿತ್ತು. ಯಾರಾದರೂ ಆನಂದ ಸ್ಥಿತಿಯಲ್ಲಿದ್ದರೆ ಹಾಗೂ ಸ್ವತಃ ತಮ್ಮನ್ನು ಮತ್ತು ತಾವಿರುವ ಜಗತ್ತನ್ನು ಅರಿತುಕೊಂಡಿರುವಂತಹ ಸ್ಥಿತಿಯಲ್ಲಿದ್ದರೆ ಮಾತ್ರ ಅವರನ್ನು ಯಶಸ್ವಿಯೆಂದು ಪರಿಗಣಿಸಲಾಗುತ್ತಿತ್ತು. ಸಾಮಾಜಿಕವಾಗಿ ಗೌರವಿಸಲ್ಪಡುವಂತಹ, ಲೌಕಿಕ ಸಮೃದ್ಧಿಯನ್ನು ಹೊಂದಿರುವಂತಹ ಮತ್ತು ತನ್ನ ಕುಟುಂಬ, ಸ್ನೇಹಿತರು ಮತ್ತು ಸಮಾಜದ ಪ್ರೀತಿಯನ್ನು ಗಳಿಸಲು ಸಮರ್ಥನಾಗಿರುವಂತಹ ವ್ಯಕ್ತಿಯು ಮಾತ್ರ ಯಶಸ್ವಿ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತಿದ್ದ. ಆದರೆ ಅವನು ಎಷ್ಟೇ ಹಣವನ್ನು ಹೊಂದಿದ್ದರೂ, ಜನರ ಪ್ರೀತಿಯನ್ನು ಗಳಿಸದೇ ಇದ್ದರೆ, ಅವನ ಜೀವನ ವ್ಯರ್ಥವೆಂದು ಹೇಳಲಾಗುತ್ತಿತ್ತು. ನಮ್ಮ ಹಿಂದಿನ ತಲೆಮಾರಿನವರೆಗೂ ಇದು ನಿಜವಾಗಿತ್ತು, "ನೀವೆಷ್ಟು ಹಣವನ್ನು ಹೊಂದಿದ್ದರೇನು? ಜನರ ಪ್ರೀತಿಯನ್ನು ಗಳಿಸಿದ್ದೀರೆ? ನಿಮ್ಮ ಸುತ್ತಲಿನ ಜನ ನಿಮ್ಮನ್ನು ಪ್ರೀತಿಸುತ್ತಾರೆಯೇ?" ಎನ್ನುವುದೇ ಅತ್ಯಂತ ಮುಖ್ಯವಾದ ವಿಷಯವಾಗಿತ್ತು. ಆದರೆ ಕೇವಲ 30 ರಿಂದ 40 ವರ್ಷಗಳಲ್ಲಿ, ನಾವಿದನ್ನು ಗಣನೀಯವಾಗಿ ಬುಡಮೇಲು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.

ಗ್ರಗೃಹಪ್ರವೇಶ ಎನ್ನುವುದು, “ನೀವು” ಎಂಬ ಸಸಿ ಬೆಳೆದು, ಹೂ ಮತ್ತು ಹಣ್ಣನ್ನು ನೀಡಲು ಸರಿಯಾದ ರೀತಿಯ ಮಣ್ಣನ್ನು ತಯಾರಿಸುವುದರ ಬಗ್ಗೆಯಾಗಿದೆ. ದುರದೃಷ್ಟವಶಾತ್, ಈ ವಿಷಯಗಳನ್ನು ನಡೆಸಿಕೊಡುತ್ತಿದ್ದ ಹೆಚ್ಚಿನ ಜನ, ಇದನ್ನು ಅರ್ಥ ಮಾಡಿಕೊಳ್ಳುವ ಮತ್ತು ಅರ್ಥ ಮಾಡಿಕೊಂಡಿದ್ದನ್ನು ಜನರಿಗೆ ವಿವರಿಸುವ ಬದಲು ಭ್ರಷ್ಟರಾಗಿ ಹೋದರು. ಮತ್ತವರು ಕೇವಲ ವಿಧಿವಿಧಾನಗಳ ಕ್ರಮಕ್ಕೆ ಒಗ್ಗಿಹೋದ ಕಾರಣ, ನಿಜವಾದ ಆಚರಣೆಗಳ ಮಹತ್ವ ಕಳೆದುಹೋಗಿ, ಜನರು ಆ ಪ್ರಕ್ರಿಯೆಗಳನ್ನು ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಇಂದು, ಒಂದು ಹೊಸ ಮನೆಗೆ ಹೋಗುವುದು ಎಂದರೆ, ಒಂದು ಮೋಜಿನ ಕೂಟವನ್ನು ಏರ್ಪಡಿಸಿ, ಬೇಕಿರುವುದಕ್ಕಿಂತ ಹೆಚ್ಚಿಗೆ ತಿಂದು ಕುಡಿದು ಮಜಾ ಮಾಡುವುದಾಗಿದೆ. ಹೀಗೆ ಮಾಡುವುದರಿಂದ, ನೀವು ನಿಮ್ಮ ಅಭ್ಯುದಯದ ಕಡೆಗೆ ಸಾಗುವುದಿಲ್ಲ; ವಾಸ್ತವದಲ್ಲಿ, ನಿಮ್ಮ ಅಭ್ಯುದಯವು ತುಂಬಾ ಕಷ್ಟಕರವಾಗುತ್ತದೆ.

ಎಷ್ಟೇ ಪ್ರಮಾಣದ ಭೌದ್ಧಿಕ ಜ್ಞಾನ ಅಥವಾ ಹಣ ನಿಮಗೆ ಹಿತವನ್ನು ತಂದುಕೊಡಲಾರದು. ಇದನ್ನು ಇಂದು ನೀವು ಈ ಜಗತ್ತಿನಲ್ಲಿ ಕಾಣಬಹುದು: ಶ್ರೀಮಂತ ಸಮಾಜಗಳು ಉತ್ತಮ ರೀತಿಯಲ್ಲಿ ಬದುಕುತ್ತಿಲ್ಲ, ಏಕೆಂದರೆ, ಬದುಕಿಗೆ ಅಗತ್ಯವಿರುವ ಮೂಲಭೂತ ಅಂಶಗಳನ್ನು ಅಲ್ಲಿ ಸರಿಯಾಗಿ ಪರಿಗಣಿಸಲಾಗಿಲ್ಲ. ನೀವು ಚೆನ್ನಾಗಿ ಬಾಳಿ ಬದುಕಬೇಕೆಂದಾದರೆ, ನಿಮ್ಮ ಸುತ್ತಲೂ ಸರಿಯಾದ ರೀತಿಯ ಸ್ಥಳವನ್ನು ಸೃಷ್ಟಿಸುವುದು ತುಂಬಾ ಮುಖ್ಯ.

ಸಂಪಾದಕರ ಟಿಪ್ಪಣಿ: ಭೈರವಿ ಪುಣ್ಯ ಪೂಜೆಯು ಒಂದು ಜಾಗವನ್ನು ಶಕ್ತಿಯುತವಾದ, ಈಗಿನ ಪರಿಸರಕ್ಕೆ ರೂಪಾಂತರಗೊಳಿಸುವ ಒಂದು ವಿಶಿಷ್ಟ ಪ್ರಕ್ರಿಯೆಯಾಗಿದೆ. ಇದನ್ನು ಸದ್ಗುರು ವಿನ್ಯಾಸಗೊಳಿಸಿದ್ದು, ಹೊಸ ಮನೆಗಳು, ಹಳೆಯ ಮನೆಗಳು, ಕಚೇರಿ ಜಾಗಗಳು, ಆಸ್ಪತ್ರೆಗಳು, ಅಥವಾ ಯಾವುದೇ ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ info@lingabhairavi.org ಅಥವಾ ಕರೆಮಾಡಿ +919443365631