ಸದ್ಗುರುಗಳು ಗೋಪಾಲ ಪಠಣದ ಅರ್ಥವನ್ನು ಇಲ್ಲಿ ವಿವರಿಸುತ್ತಾರೆ ಮತ್ತು ಕೃಷ್ಣನ ಹಲವಾರು ಮುಖಗಳನ್ನು ಪರಿಶೋಧಿಸುತ್ತಾ - ಅವನ ಸೌಂದರ್ಯ, ಅವನ ನಿರ್ಭಯತೆ ಮತ್ತು ಜೀವನದ ಸಾರದೊಂದಿಗೆ ಅವನು ಆಟವಾಡಿದ ರೀತಿಯನ್ನು ನಮಗಿಲ್ಲಿ ತಿಳಿಸುತ್ತಾರೆ.

ಗೋಪಾಲ ಗೋಪಾಲ ಗೋಪಿ ವಲ್ಲಭ ಗೋಪಾಲ
ಗೋವಿಂದ ಗೋವಿಂದ ರಾಸ ಲೀಲಾ ಗೋವಿಂದ

ಗೋಪಾಲ ಗೋಪಾಲ ಗೋಪಿ ವಲ್ಲಭ ಗೋಪಾಲ
ಗೋವಿಂದ ಗೋವಿಂದ ಯದುಕುಲ ಶೂರ ಗೋವಿಂದ

ಗೋಪಾಲ ಗೋಪಾಲ ಗೋಪಿ ವಲ್ಲಭ ಗೋಪಾಲ
ಗೋವಿಂದ ಗೋವಿಂದ ಮುರಳಿ ಲೋಲಾ ಗೋವಿಂದ

ಗೋಪಾಲ ಗೋಪಾಲ ಗೋಪಿ ವಲ್ಲಭ ಗೋಪಾಲ
ಗೋವಿಂದ ಗೋವಿಂದ ರಾಧೆ ಮೋಹನ ಗೋವಿಂದ

ಗೋಪಾಲ ಗೋಪಾಲ ಗೋಪಿ ವಲ್ಲಭ ಗೋಪಾಲ
ಗೋವಿಂದ ಗೋವಿಂದ ಶ್ಯಾಮ ಸುಂದರ ಗೋವಿಂದ

ಸದ್ಗುರು: ಗೋಪಾಲ ಎಂದರೇನು? ಅದರ ಅರ್ಥವೇನು? ಗೋ ಎಂದರೆ “ಹಸು.” ಪಾಲ ಎಂದರೆ “ಆರೈಕೆ ಮಾಡುವವನು” ಎಂದರ್ಥ. ಕೃಷ್ಣನನ್ನು ಒಬ್ಬ ಗೊಲ್ಲನಾಗಿ ನೋಡಲಾಗುತ್ತದೆ. ಸಾಮಾನ್ಯವಾಗಿ, ದೈವತ್ವವನ್ನು ಯಾವಾಗಲೂ ಮಹಾನ್ ತಪಸ್ವಿಗಳಾದ ಯೋಗಿಗಳಲ್ಲಿ ಅಥವಾ ಕೆಲವೊಮ್ಮೆ ರಾಜರುಗಳ ರೂಪದಲ್ಲಿ ಗುರುತಿಸಲಾಗಿದೆ. ಆದರೆ ಒಬ್ಬ ಗೊಲ್ಲ ಆಗಿನ ಸಾಮಾಜದಲ್ಲಿ ಅತ್ಯಂತ ಕೆಳಮಟ್ಟದ ಪಂಗಡಕ್ಕೆ ಸೇರಿದವನಾಗಿದ್ದನು. ಕೃಷ್ಣ ಕೇವಲ ಒಬ್ಬ ಗೊಲ್ಲನಾಗಿದ್ದರೂ ಸಹ ಯಾರಿಗೂ ಅವನನ್ನು ನಿರ್ಲಕ್ಷಿಸಲಾಗುವುದಿಲ್ಲ. ಅವನು ಹುಟ್ಟಿದ ಮೊದಲ ದಿನದಿಂದಲೂ ಅವನ ಸೌಂದರ್ಯ, ಬುದ್ಧಿವಂತಿಕೆ, ಶಕ್ತಿ, ಶೌರ್ಯವನ್ನು ನಿರ್ಲಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸಣ್ಣ ಮಗುವಾಗಿದ್ದರೂ, ಅವನ್ಯಾರೆಂಬ ಸಂಗತಿಯನ್ನು ಜನರಿಂದ ನಿರ್ಲಕ್ಷಿಸಲಾಗಲಿಲ್ಲ. "ಓ, ಅವನು ಕೇವಲ ಒಬ್ಬ ಗೊಲ್ಲ” ನೆಂದು ಅನೇಕರು ಆತನನ್ನು ಕಡೆಗಣಿಸಲು ಪ್ರಯತ್ನಿಸಿದರು. ಆದರೆ ಅದೇ ಸ್ವತಃ ಎಲ್ಲರ ಸಂಭ್ರಮಾಚರಣೆಗೆ ಕಾರಣವಾಯಿತು. “ಅವನೊಬ್ಬ ಗೊಲ್ಲ!” ನಾವವನನ್ನು ಗೋಪಾಲ ಎಂದು ಸಂಬೋಧಿಸುವಾಗ, ನಾವು ಅವನೊಂದಿಗೆ ಪ್ರೀತಿಯಿಂದ ಮಾತನಾಡುತ್ತೇವೆ. ಅವನನ್ನು ಗೋವಿಂದ ಎಂದು ಕರೆಯುವಾಗ, ಅವನು ದೈವವೆಂದು ನಾವು ನಮಸ್ಕರಿಸುತ್ತೇವೆ. ಈ ಕ್ಷಣ ಅವನು ದೇವರು, ಮುಂದಿನ ಕ್ಷಣ ಅವನೊಂದು ಮಗು, ಮರು ಕ್ಷಣ ಅವನು ಕೇವಲ ಒಬ್ಬ ಮನುಷ್ಯ - ಒಂದೇ ಸಮಯದಲ್ಲಿ ಅವನು ಅನೇಕ ರೂಪಗಳನ್ನು ಹೊಂದಿರುವವನಾಗಿದ್ದಾನೆ.

ಲೀಲೆ ಎಂದರೆ ಆಟ. ಜೀವನದ ಆಳವಾದ ಆಯಾಮಗಳನ್ನು, ಅಸ್ತಿತ್ವದ ಪರಮ ಸ್ವರೂಪವನ್ನು ಉಲ್ಲಾಸ ತುಂಬಿದ  ರೀತಿಯಲ್ಲಿ ಹೇಳಿಕೊಡಬಹುದಾಗಿದೆ. ’ರಾಸ ಎಂದರೆ’ ಜೀವನದ ರಸ ಎಂದು ನಾವು ಹೇಳಬಹುದು. ಆದ್ದರಿಂದ “ರಾಸ ಲೀಲಾ ಗೋವಿಂದ” ಎಂದು ನಾವು ಹಾಡುವಾಗ, ಅವನು ಜೀವನದ ಸಾರದೊಂದಿಗೆ ಆಟವಾಡಿದ ವ್ಯಕ್ತಿ ಎಂದು ನಾವು ಹೇಳುತ್ತಿದ್ದೇವೆ ಎಂದರ್ಥ. ಅವನ ಗೊಲ್ಲ ಸಮುದಾಯಗಳಲ್ಲಿ, ತಿಂಗಳ ಕೆಲವು ಸಮಯಗಳಲ್ಲಿ ಅಥವಾ ಕೆಲಸ ಮುಗಿದ ನಂತರ ಸಂಜೆಯ ಹೊತ್ತಿನಲ್ಲಿ ಅವನು ನಡೆಸಿದ ನೃತ್ಯ ಸಭೆಗಳನ್ನು ರಾಸ ಲೀಲೆ ಎಂದು ಕರೆಯಲಾಗುತ್ತದೆ. ಇದರರ್ಥ “ಜೀವನದ ರಸದೊಂದಿಗೆ ಆಟವಾಡುವುದು.” ಎಂದು. ನಿಧಾನವಾಗಿ, ಅದು ಕೋಪವಿಲ್ಲದ, ಯಾವುದೇ ಬಯಕೆಯಿಲ್ಲದ, ಕೇವಲ ಜೀವಚೈತನ್ಯದಿಂದ ತುಂಬಿದ ಸ್ಥಳವೆಂದು ಗುರುತಿಸಲ್ಪಟ್ಟಿತು. ಕೋಪ ಮತ್ತು ಬಯಕೆಗಳಿಲ್ಲದ ಕಾರಣ ಜೀವನದ ರಸ ಅಲ್ಲಿ ಉಕ್ಕಿ ಹರಿಯಿತು. ಆದ್ದರಿಂದ ಅವನ ನೃತ್ಯ ಕೇವಲ ನೃತ್ಯವಾಗಿರದೇ, ಅತೀತವಾದ ಒಂದು ವಿಭಿನ್ನ ಆಯಾಮವನ್ನು ಪಡೆದುಕೊಂಡಿತು.

ಈ ಅಂಶವನ್ನು ನಮ್ಮ ಸಂಸ್ಕೃತಿಯಲ್ಲಿ ಹಲವು ರೀತಿಗಳಲ್ಲಿ ಹೊರತರಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ, ಈ ಕೃಷ್ಣನ ಸಂಸ್ಕೃತಿಯು ವಿಭಿನ್ನ ರೀತಿಗಳಲ್ಲಿ ಅಭಿವೃದ್ಧಿ ಹೊಂದಿದ ಕಾರಣವೆಂದರೆ ನಮ್ಮ ಭಾರತ ಬಹುಸಾಂಸ್ಕೃತಿಕ ರೂಪವನ್ನು ಹೊಂದಿರುವುದು. ತಮಿಳುನಾಡಿನ ಜನ “ಆಸೆಯು ಕೋಪವು ಇಲ್ಲದ ನಗರ” ಎಂದು ಲೀಲೆಯ ಬಗ್ಗೆ ಹಾಡುತ್ತಾರೆ. ಒಮ್ಮೆ ಮನುಷ್ಯನಲ್ಲಿ ಕೋಪ ಮತ್ತು ಬಯಕೆಗಳು ಇಲ್ಲದೇ ಹೋದಾಗ, ಅವನು ಸ್ವಹಿತಾಸಕ್ತಿಯಿಂದ ಕೂಡಿರದೇ, ಸಂತೋಷ ಮತ್ತು ಪ್ರೀತಿಯಿಂದ ತುಂಬಿ ತುಳುಕುತ್ತಾನೆ.

ನಂತರ ನಾವು “ಯದು ಕುಲ ಶೂರ” ಎಂದು ಅವನನ್ನು ವರ್ಣಿಸುತ್ತಿದ್ದೇವೆ. ಅವನು ಯಾದವ ಅಥವಾ ಯದು ಕುಲಕ್ಕೆ ಸೇರಿದವನು. ಆ ಕುಲದವರು ರಾಜವಂಶಸ್ಥರಾಗಿದ್ದರು. ಕೆಲವು ರಾಜ ಮನೆತನಗಳು ಸೂರ್ಯವಂಶಕ್ಕೆ ಸೇರಿದವು, ಕೆಲವು ಚಂದ್ರವಂಶಕ್ಕೆ ಸೇರಿದವುಗಳಾಗಿದ್ದವು. ಯಾದವರು ಚಂದ್ರವಂಶಕ್ಕೆ ಸೇರಿದವರು. ಆದ್ದರಿಂದ, ಇಲ್ಲಿ ಯದು ಕುಲ ಎನ್ನುವುದು ರಾಜವಂಶದ ಕುರಿತು ಹೇಳುತ್ತಿದೆ. ಶೂರ ಎಂದರೆ “ಧೈರ್ಯಶಾಲಿ ಅಥವಾ ಧೀರ ವ್ಯಕ್ತಿ” ಎಂದರ್ಥ. ಆದರೆ ಅವನು ಹುಟ್ಟಿದ ಜನಾಂಗ ಅಥವಾ ಕುಲದ ಹೆಸರು ಕೂಡ ಅದೇ ಆಗಿತ್ತು. ಅವರ ತಂದೆ ವಸುದೇವ ಒಬ್ಬ ಶೂರ. ಇದನ್ನು ಎರಡೂ ರೀತಿಯಲ್ಲಿ ಇಲ್ಲಿ ಬಳಸಲಾಗುತ್ತಿದೆ.

ನಾವು ಹಾಡುತ್ತಿರುವ ಮುಂದಿನ ಸಾಲು “ಮುರಳಿ ಲೋಲಾ”, ಅಂದರೆ “ತನ್ನ ಕೊಳಲನ್ನು ನುಡಿಸಲು ಇಷ್ಟಪಡುವವನು.” ಎಂದು. ಮುರಳಿ ಎಂದರೆ “ಕೊಳಲು”. ತನ್ನ ಕೊಳಲಿನಿಂದ ಜನರನ್ನು ಮೋಡಿಮಾಡುವವನು ಮುರಳಿ ಲೋಲಾ. ನಾವು ಹಾಡುವ ಮುಂದಿನ ಸಾಲು “ರಾಧೆ ಮೋಹನ.” ಇದರರ್ಥ “ರಾಧೆಯನ್ನು ಪ್ರೀತಿಸಿದವನು” ಅಥವಾ “ರಾಧೆಯನ್ನು ಮಂತ್ರಮುಗ್ಧಗೊಳಿಸಿದವನು.” ಎಂದು. ಇದನ್ನು ಎರಡು ರೀತಿಗಳಲ್ಲಿ ಅರ್ಥಮಾಡಿಕೊಳ್ಳಬಹುದು - ರಾಧೆಯಿಂದ ಮೋಡಿಗೊಳಗಾದವನು ಮತ್ತು ರಾಧೆಯನ್ನು ಮೋಡಿಮಾಡಿದವನು.

ಕೊನೆಯ ಸಾಲು “ಶ್ಯಾಮ ಸುಂದರ.”. ಶ್ಯಾಮ ಎಂದರೆ “ಸಂಜೆ” ಎಂದರ್ಥ. ಅವನ ಚರ್ಮದ ಬಣ್ಣದಿಂದಾಗಿ, ಕೃಷ್ಣನನ್ನು ಮುಸ್ಸಂಜೆಯ ಸೌಂದರ್ಯ ಎಂದು ಕರೆಯಲಾಗುತ್ತಿತ್ತು. ಅವನು ಸಂಜೆಯ ಬಣ್ಣದಂತಿದ್ದನು. ಸೂರ್ಯನು ಅಸ್ತಮಿಸುತ್ತಿರುವಾಗ, ಬೆಳಗಿನ ಆಕಾಶದ ತಿಳಿ ನೀಲಿ ಬಣ್ಣವು ಹೋಗಿ, ಗಾಢವಾದ ಬಹುತೇಕ ಕಪ್ಪು ನೀಲಿ ಬಣ್ಣವು ಆಗಸವನ್ನು ತುಂಬುತ್ತದೆ - ಅದು ಅವನ ಬಣ್ಣವಾಗಿತ್ತು. ಆದ್ದರಿಂದ ಜನ ಅವನನ್ನು ಶ್ಯಾಮ ಸುಂದರ ಎಂದು ಕರೆದರು.

ಸಂಪಾದಕರ ಟಿಪ್ಪಣಿ: ಸದ್ಗುರುಗಳು ಕೃಷ್ಣನ ಜೀವನ ಮತ್ತವನ ಜೀವನ್ಮಾರ್ಗವನ್ನು ಪರಿಶೋಧಿಸುತ್ತಾರೆ. ಉಚಿತ ವೆಬ್‌ಸ್ಟ್ರೀಮ್‌ ಆಗಿ ಲಭ್ಯವಿರುವ ಲೀಲಾ ಸರಣಿಯನ್ನು ವೀಕ್ಷಿಸಿ - ಪ್ರತಿ ವಾರ ಒಂದು ಭಾಗ.

Get notified every week

Image courtesy: Krishna and Radha under a tree in a storm from Wikipedia.