ನೀವು ಮಗುವಾಗಿದ್ದಾಗ, ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪೋಷಕರು ಮತ್ತು ಹಿರಿಯರು ನಿಮ್ಮ ಮೇಲೆ ಹೊರಿಸಿದ್ದ ಒಂದು ಅವಶ್ಯಕತೆಯಾಗಿದ್ದಿರಬಹುದು. ಆದರೆ ಈ ಸಾಮಾಜಿಕ ನಿರೀಕ್ಷೆಗಳನ್ನು ಮೀರಿ, ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸುವುದು ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಆಳವಾದ ಪರಿಣಾಮವನ್ನು ಬೀರಬಲ್ಲದೇ? ಸದ್ಗುರುಗಳು ಸ್ವಚ್ಛತೆಯ ಮಹತ್ವವನ್ನು ಚರ್ಚಿಸುತ್ತಾರೆ.

ಸದ್ಗುರು: ಶೌಚ, ಅಥವಾ ಶುಚಿತ್ವ / ಸ್ವಚ್ಛತೆ ಆಧ್ಯಾತ್ಮಿಕ ಬೆಳವಣಿಗೆಯ ಪ್ರಮುಖ ಅಂಶ. ಶುಚಿತ್ವವಿರುವುದು ಕೇವಲ ದೇಹದ ಬಗ್ಗೆಯಲ್ಲ. ಅದು ನಿಮ್ಮ ಸುತ್ತಲಿನ ಪರಿಸರದ ಬಗ್ಗೆಯೂ ಹೌದು. ನಮ್ಮ ಇಂದ್ರಿಯಗಳ ಮೂಲಕ ನಾವು ಗ್ರಹಿಸುವುದೆಲ್ಲವೂ ನಮ್ಮೊಳಗೆ ಹೊಲಸು ಅಥವಾ ಸ್ವಾಸ್ಥ್ಯವನ್ನು ಸೃಷ್ಟಿಸಬಹುದು.

ನಾವು ನಿರ್ಮಿಸುವ ಆಕಾರಗಳು, ನಮ್ಮ ಸುತ್ತಲಿರುವ ರೂಪಗಳು ಮತ್ತು ನಾವು ವಾಸಿಸುವ ಕಟ್ಟಡಗಳು ನಾವೇನು ಎನ್ನುವುದರ ಮೇಲೆ ಅಪಾರ ಪ್ರಭಾವ ಬೀರುತ್ತವೆ.

ನಾವು ಏನನ್ನಾದರೂ ಗ್ರಹಿಸಿದರೆ, ಅದು ನಮ್ಮ ಇಂದ್ರಿಯಗಳಿಗೆ ಹಿತವಾಗಿದ್ದರೆ, ನಾವದನ್ನು ಒಂದು ರೀತಿಯಲ್ಲಿ ಅನುಭವಿಸುತ್ತೇವೆ. ನಾವು ಗ್ರಹಿಸಿದ್ದು ನಮ್ಮ ಇಂದ್ರಿಯಗಳಿಗೆ ಅಹಿತವಾಗಿದ್ದರೆ, ಅದು ನಮ್ಮ ಅನುಭವದಲ್ಲಿ ಹೊಲಸು ಎಂದಾಗುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿಲ್ಲದಿದ್ದರೆ, ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಸುತ್ತಮುತ್ತಲಿನ ಪರಿಸರವು ನಮ್ಮ ಇಂದ್ರಿಯಗಳಿಗೆ ಹಿತವಾಗಿಲ್ಲದಿದ್ದರೆ, ನಾವು ನಮ್ಮ ಮನಸ್ಸಿನಲ್ಲಿ ರಚಿಸುವ ಚಿತ್ರಣಗಳು, ನಮ್ಮ ಅನುಭವಮಂಚದಲ್ಲಿ ಮೂಡುವ ಚಿತ್ತಾರಗಳು ಅಹಿತಕರವಾಗುತ್ತವೆ. ನೀವು ಈ ರೀತಿಯಲ್ಲಿ ಅಹಿತಕರತೆಯನ್ನು ಸೃಷ್ಟಿಸಿಕೊಂಡಾಗ, ಆನಂದದ ಸ್ಥಿತಿಗಳನ್ನು ತಲುಪುವುದು ಮತ್ತು ನಿಮ್ಮ ಅನುಭವದ ಸ್ವರೂಪವನ್ನು ಸೃಷ್ಟಿಸುವುದು ಕಷ್ಟವಾಗುತ್ತದೆ.

ನೀವು ದುಃಖದಲ್ಲಿರುವಿರೋ ಅಥವಾ ಸಂತೋಷದಲ್ಲಿರುವಿರೋ ಎನ್ನುವುದು ಮೂಲತಃ ನಿಮ್ಮೊಳಗೆ ನೀವೇನು ಮಾಡುತ್ತಿರುವಿರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಆಧ್ಯಾತ್ಮಿಕ ಪ್ರಕ್ರಿಯೆಯ ಅರ್ಥವಿದು: ನೀವೇನು ಎನ್ನುವುದೆಲ್ಲವೂ ಪ್ರಜ್ಞಾಪೂರ್ವಕವಾಗಿ ನಡೆಯಬೇಕು - ನಿಮ್ಮ ಜೀವನದ ಅನುಭವವು ನಿಮ್ಮಿಂದ ನಿರ್ಧರಿಸಲ್ಪಡುತ್ತದೆ. ಇದಾಗಬೇಕಿದ್ದರೆ, ನಮ್ಮ ಇಂದ್ರಿಯಗಳು ಯಾವುದನ್ನೂ ಅಹಿತಕರವೆಂದು ಗ್ರಹಿಸದಿರುವುದು ಬಹಳ ಮುಖ್ಯವಾಗುತ್ತದೆ.

ಮಲಗಲು ಸಿದ್ಧವಾಗುತ್ತಿದ್ದಂತೆ......

ಪ್ರತಿ ಸಂಸ್ಕೃತಿಯಲ್ಲಿಯೂ, ಯಾವುದಾದರೊಂದು ಸಮಯದಲ್ಲಿ ನಿಮಗೆ - ನಿಮ್ಮ ಹೆತ್ತವರು ಅಥವಾ ನಿಮ್ಮ ಅಜ್ಜಿತಾಂತಂದಿರು - ನಿಮ್ಮ ಬಟ್ಟೆ ಮತ್ತು ಹಾಸಿಗೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಹೇಳಿರುತ್ತಾರೆ. ನಿರ್ದಿಷ್ಟವಾಗಿ ಭಾರತದಲ್ಲಿ, ನೀವು ನಿಮ್ಮ ಹಾಸಿಗೆ ಹೊದಿಕೆಯನ್ನು ಮಡಚದೇ ಹಾಗೆ ಇಟ್ಟರೆ, ದೆವ್ವಗಳು ಬಂದು ಸೇರಿಕೊಳ್ಳುತ್ತವೆ;  ರಾತ್ರಿ ಹೊತ್ತು ನೀವು ಮಲಗಿದಾಗ ಅವುಗಳು ನಿಮ್ಮೊಂದಿಗೆ ಮಲಗಿ ನಿಮಗೆ ತೊಂದರೆ ಕೊಡುತ್ತವೆ ಎಂದು ಹೇಳುತ್ತಾರೆ. ಇಂಗ್ಲಿಷ್-ನಲ್ಲಿ ಒಂದು ಹೇಳಿಕೆ ಇದೆ - "ನಿಮ್ಮ ಹಾಸಿಗೆಯನ್ನು ಹೇಗೆ ಇಟ್ಟುಕೊಳ್ಳುತ್ತೀರೋ, ಹಾಗೆಯೇ ನೀವದರ ಮೇಲೆ ಮಲಗುತ್ತೀರಿ." ಇದು ಮೂಲತಃ ನಿಮ್ಮ ಸುತ್ತಲಿರುವ ರೂಪಗಳ ಬಗ್ಗೆ  ಇರುವುದು.  ಇಡೀ ಅಸ್ತಿತ್ವವು ಕೋಟ್ಯಂತರ ವಿಭಿನ್ನ ರೀತಿಗಳಲ್ಲಿ ಶಕ್ತಿಯ ಒಂದು ಅಭಿವ್ಯಕ್ತಿಯೆಂದು ಎಂದು ವಿಜ್ಞಾನಿಗಳು ಇಂದು ನಮಗೆ ಹೇಳುತ್ತಿದ್ದಾರೆ. ಶಕ್ತಿಯು ರೂಪಗಳನ್ನು ಸೃಷ್ಟಿಸಿದಂತೆ, ರೂಪಗಳೂ ಶಕ್ತಿಯನ್ನು ಸೃಷ್ಟಿಸುತ್ತವೆ. ಅದಲ್ಲದೇ ನಿಮ್ಮ ಸುತ್ತಲಿನ ಪ್ರತಿಯೊಂದು ರೂಪವೂ ನಿರ್ದಿಷ್ಟ ರೀತಿಯ ಶಕ್ತಿಯನ್ನು ಸೃಷ್ಟಿಸುತ್ತಿದೆ.

ನಾವು ನಿರ್ಮಿಸುವ ಆಕಾರಗಳು, ನಮ್ಮ ಸುತ್ತಲಿರುವ ರೂಪಗಳು ಮತ್ತು ನಾವು ವಾಸಿಸುವ ಕಟ್ಟಡಗಳು ನಮ್ಮ ಮೇಲೆ ಅಪಾರ ಪ್ರಭಾವ ಬೀರುತ್ತವೆ. ನಾವು ಕೂರುವ ರೀತಿ, ನಮ್ಮನ್ನು ನಾವು ವ್ಯವಸ್ಥಿತಗೊಳಿಸಿಕೊಳ್ಳುವ ರೀತಿ ಮತ್ತು ನಮ್ಮ ಸುತ್ತಲಿರುವ ವಿಷಯಗಳನ್ನು ನಾವು ಇರಿಸಿಕೊಳ್ಳುವ ರೀತಿಯ ಕುರಿತು ಸ್ವಲ್ಪ ಹೆಚ್ಚು ಜಾಗೃತಿ ಮೂಡಿದರೆ, ಆಂತರ್ಮುಖರಾಗಲು ಅನುವು ಮಾಡಿಕೊಡುವಂತಹ ದೈಶಿಕ ವ್ಯವಸ್ಥೆಯನ್ನು ನಾವು ರಚಿಸಬಹುದು. ಇದು ನಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಸಾಕಷ್ಟು ಸುಲಭಗೊಳಿಸುತ್ತದೆ. ನಿಮಗೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಪಯಣಿಸಬೇಕಾದರೆ, ಹೇಗಾದರೂ ಹೋಗಬಹುದು. ಆದರೊಂದು ಸರಿಯಾದ ರಸ್ತೆಯನ್ನು ನಿರ್ಮಿಸಿದ್ದರೆ, ಅಲ್ಲಿಗೆ ಹೋಗುವುದು ಸುಲಭವಾಗುತ್ತದೆ. ಆ ಹಿನ್ನಲೆಯಲ್ಲಿ, ನಮ್ಮ ಸುತ್ತಲಿರುವ ದೈಶಿಕ ವ್ಯವಸ್ಥೆಯನ್ನು ನಾವು ಅಂತರ್ಮುಖರಾಗುವಂತೆ ಅನುವು ಮಾಡಿಕೊಡುವಂತಹ ರೀತಿಯಲ್ಲಿ ನಿರ್ಮಿಸಿದರೆ, ಇದು ಬಹಳ ಸುಲಭವಾಗಿ ಆಗುತ್ತದೆ.

ಸಂಪಾದಕರ ಟಿಪ್ಪಣಿ: ಈಶ ಕ್ರಿಯಾ ಒಂದು ಉಚಿತ ಮಾರ್ಗದರ್ಶನ ಸಹಿತ ಧ್ಯಾನ ಪ್ರಕ್ರಿಯೆ. ಪ್ರತಿದಿನ ಬರೀ ಕೆಲವು ನಿಮಿಷ ಇದಕ್ಕಾಗಿ ಮೀಸಲಿಡಲು ನೀವು ಸಿದ್ಧರಿದ್ದರೆ ಇದು ನಿಮ್ಮ ಬದುಕನ್ನೇ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಯತ್ನಿಸಿ ನೋಡಿ!
 free online guided meditation