ಸಾಮಾಜಿಕ ಜಾಲತಾಣಗಳ ಮೂಲಕ ಗಮನವನ್ನು ಬಯಸುವುದು ತಪ್ಪೇ?

ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಜೀವನದ ಬಗ್ಗೆ ಪೋಸ್ಟ್ ಮಾಡುವುದು ಈ ಕ್ಷಣಕ್ಕೆ ಮೋಜು ಎಂದೆನಿಸಿದರೂ, ಇಂದಿನ ಪೋಸ್ಟ್-ಗಳು, ಸ್ನಾಪ್ ಮತ್ತು ಗ್ರಾಮ್-ಗಳ ಬಗ್ಗೆ ಇಪ್ಪತ್ತು ವರ್ಷಗಳ ನಂತರ ನಿಮಗೆ ಹೇಗನಿಸುತ್ತದೆ? “ಯೂತ್ ಅಂಡ್ ಟ್ರೂತ್” ನ ಸಂಭಾಷಣೆಯೊಂದರಲ್ಲಿ ವಿದ್ಯಾರ್ಥಿಯೊಬ್ಬರು, ಸಾಮಾಜಿಕ ಜಾಲತಾಣಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ಬೇರೆಯವರ ಗಮನವನ್ನು ನಮ್ಮೆಡೆಗೆ ಸೆಳೆಯುವುದು ತಪ್ಪೇ ಎಂದು ಸದ್ಗುರುಗಳನ್ನು ಕೇಳುತ್ತಾರೆ.
Two girls having a cold drink and taking selfie | Is it Wrong to Seek Attention Through Social Media?
 

ಪ್ರಶ್ನೆ: ಸದ್ಗುರು, ನಾವು ಬೇರೆಯವರ ಗಮನವನ್ನು ಬಯಸುವ ಪೀಳಿಗೆಯವರು. ನಮ್ಮಲ್ಲಿ ಹಲವರು ಇದನ್ನು ಒಪ್ಪಿಕೊಳ್ಳುತ್ತಾರೆಂದು ನನ್ನ ಅನಿಸಿಕೆ. ನಮ್ಮ ಸಂತೋಷ, ನಮ್ಮ ದುಃಖ, ಇಂದು ನಾವೇನು ಮಾಡಿದೆವು ಎಂಬುದರ ವಿವರಣೆ, ನಮ್ಮ ಊಟತಿಂಡಿ, ನಾವು ಭೇಟಿಯಾದ ಜನ – ಇವೆಲ್ಲವನ್ನು WhatsApp, Facebook, Snapchat, Instagram-ಗಳಲ್ಲಿ ಪೋಸ್ಟ್ ಮಾಡುತ್ತೇವೆ. ವಿಶೇಷವಾಗಿ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಅಥವಾ ನಮ್ಮ ಗೆಳೆಯರೊಂದಿಗೆ ಚರ್ಚಿಸುವ ಬದಲು, ಅದನ್ನು ಪೋಸ್ಟ್ ಮಾಡಿ, ಇಡೀ ಜಗತ್ತಿಗೆ ನಮ್ಮ ದುಃಖವನ್ನು ಕೂಗಿ ಹೇಳುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಅಭಿವ್ಯಕ್ತಿಸುವುದು ಮತ್ತು ಗಮನವನ್ನು ಬೇಡುವುದು ತಪ್ಪೇ?

ಸದ್ಗುರು: ಇದರಲ್ಲಿ ಸರಿ ತಪ್ಪು ಎನ್ನುವುದೇನಿಲ್ಲ. ನಿಮ್ಮ ಜೀವನದ ಈ ಹಂತದಲ್ಲಿ, ನೀವು ಸರಿಯಾಗಿರುವುದನ್ನು ಹೇಳುವಿರೋ, ತಪ್ಪಾಗಿರುವುದನ್ನು ಹೇಳುವಿರೋ, ಅದು ಗಣ್ಯವಾಗುವುದಿಲ್ಲ. ಅದು ಸರಿಯೋ ತಪ್ಪೋ ಎನ್ನುವುದನ್ನು ವಿಮರ್ಶಿಸುವುದು ಸಹ ನಮಗೆ ಬೇಡ. ಆದರೆ, ಇದೊಂದು ಖಾಸಗಿ ವಿಷಯ. ಅದನ್ನು ನೀವು ಅರ್ಥ ಮಾಡಿಕೊಳ್ಳಲೇ ಬೇಕು. ವಿಶೇಷವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ, ನೀವೇನೇ ಹೇಳಿದರೂ ಅದು ನಿಮ್ಮ ಜೀವನಪರ್ಯಂತ ಅಲ್ಲಿಯೇ ಇರುತ್ತದೆ. ಫೇಸ್ಬುಕ್-ನಿಂದ ನೀವದನ್ನು ಅಳಿಸಿಹಾಕಿದರೂ, ಇನ್ಯಾರೋ ಅದನ್ನು ಇನ್ನೊಂದೆಡೆ ಸಂಗ್ರಹಿಸಿಟ್ಟಿರುತ್ತಾರೆ. ನಿಮ್ಮ ಜೀವನದ ಮುಂದೊಂದು ದಿನ, ಬೇಡವಾದ ಸಮಯದಲ್ಲಿ, ಅದು ನಿಮ್ಮೆದುರು ಬಂದು ನಿಮ್ಮನ್ನು ಕಾಡಬಹುದು. ಹೌದು, ಇಂದು ನೀವೇನಾಗಿರುವಿರಿ ಎನ್ನುವುದು ಹತ್ತು ವರ್ಷ ಕಳೆದ ಮೇಲೆ ನಿಮಗೆ ಮುಜುಗರವನ್ನುಂಟುಮಾಡಬಹುದು.  

 

ಸಾಮಾಜಿಕ ಮಾಧ್ಯಮ ನಮ್ಮ ಜೀವನದಲ್ಲೊಂದು ಅಮೋಘವಾದ ಉಪಕರಣ. ಹಿಂದೆಂದೂ ಸಹ ಮಾನವರು ಈ ರೀತಿಯಲ್ಲಿ ಸಂಪರ್ಕವನ್ನು ಹೊಂದಿರಲು, ಪರಸ್ಪರರೊಡನೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ನಾವೇನನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ? ನನ್ನ ಪ್ರಕಾರ ಇದರ ಬಗ್ಗೆ ನಾವಿನ್ನೂ ಸ್ವಲ್ಪ ಹೆಚ್ಚಾಗಿ ಆಲೋಚನೆ ಮಾಡಬೇಕು. ನಿಮ್ಮ ಐಸ್-ಕ್ರೀಮ್ನೊಂದಿಗೆ ನೀವು ಸೆಲ್ಫಿಯನ್ನು ತೆಗೆದುಕೊಂಡು ಅದನ್ನು ಅಲ್ಲಿ, ಇಲ್ಲಿ ಎಂದೆಲ್ಲಾ ಕಡೆ ಪ್ರಚಾರ ಮಾಡಿದರೆ, ಅದು ಸರಿ, ತಪ್ಪು ಎಂದು ನಾನು ಹೇಳುತ್ತಿಲ್ಲ. ಅದು ಸ್ವಲ್ಪ ನಾಟಕೀಯ, ಅಷ್ಟೆ. ನಾಳೆ ನಿಮ್ಮದೇ ಈ ವಿಚಿತ್ರ ನಡತೆಗಳು ನಿಮಗೆ ಮುಜುಗರವನ್ನುಂಟುಮಾಡಬಹುದು. ನಿಮಗೆ ಹಾಗಾಗುವುದಿಲ್ಲ ಎಂದೆನಿಸಿದರೆ, ಪರವಾಗಿಲ್ಲ. ನೀವದನ್ನು ಮಾಡಬೇಕು ಅಥವಾ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ನಿಮ್ಮಲ್ಲಿ ಸ್ವಲ್ಪ ವಿವೇಚನೆಯಿದ್ದರೆ, ಅದು ಜೀವನದುದಕ್ಕೂ ನಿಮ್ಮನ್ನು ಕಾಯುತ್ತದೆ. ಏಕೆಂದರೆ, ನೀವಿಂದು ಮಾಡುವುದು, ಮುಂದೆಂದೋ ನಿಮ್ಮ ಎದುರುಬಂದು ನಿಮ್ಮನ್ನು ಕಾಡುವಂತಾಗಬಾರದು. 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image
 
 
 
 
  0 Comments
 
 
Login / to join the conversation1