ಸದ್ಗುರು: ಒಂದು ಸಾಮ್ರಜ್ಯಕ್ಕೆ ನ್ಯಾಯಯುತವಾದ ಉತ್ತರಾಧಿಕಾರಿಯಾಗಿ, ತನ್ನ ಸಾಮ್ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೋದ ಮನುಷ್ಯನೊಬ್ಬನ ಹೆಸರಿನಲ್ಲಿ ಸುಮಾರು 2.77 ಎಕರೆ ಭೂಮಿಗಾಗಿ, ಈ ದೇಶ ಶತಮಾನಗಳ ಕಾಲ ತನ್ನ ರಕ್ತ ಹರಿಸಿದ್ದು ಒಂದು ದೊಡ್ಡ ವಿರೋಧಾಭಾಸವೇ ಸರಿ. ಆದಾಗ್ಯೂ, ಈ ದೇಶದ ಲಕ್ಷಾಂತರ ಜನರ ಹೃದಯಗಳಲ್ಲಿ ಆ ವ್ಯಕ್ತಿಯ ಕುರಿತಾದ ಅಸಾಧಾರಣವಾದ ಭಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ.

ಮೊದಲನೆಯದಾಗಿ, ನನ್ನನ್ನು ನಾನು ಹಿಂದು ಅಥವಾ ಮುಸ್ಲಿಂ ಎರಡೂ ಸಮುದಾಯದ ಬೆಂಬಲಿಗನಲ್ಲ ಎಂದು ಪರಿಗಣಿಸುತ್ತೇನೆ. ಒಬ್ಬ ಯೋಗಿಯಾಗಿ, ನಾನು ಯಾವುದೇ ನಿರ್ದಿಷ್ಟ ಮತದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಯೋಗವು ಗುರುತುಗಳನ್ನು ತ್ಯಜಿಸುವ ಬಗ್ಗೆ ಇದೆಯೇ ಹೊರತು ಗುರುತಿಸಿಕೊಳ್ಳುವುದರ ಬಗ್ಗೆಯಲ್ಲ. ದಕ್ಷಿಣ ಭಾರತದಲ್ಲಿ, ರಾಮನ ಜನ್ಮಸ್ಥಳ ನಿರ್ದಿಷ್ಟವಾಗಿ ಒಂದು ಪ್ರಧಾನವಾದ ಭಾವನಾತ್ಮಕ ವಿಷಯವಾಗಿಲ್ಲ ಎನ್ನುವುದು ವಾಸ್ತವಾಂಶವೂ ಆಗಿದೆ. ದಕ್ಷಿಣದಲ್ಲಿ ಹಲವಾರು ರಾಮಭಕ್ತರಿದ್ದಾರೆ, ಆದರೆ ಒಂದು ಪವಿತ್ರ ಸ್ಥಳವಾಗಿ ಅಯೋಧ್ಯೆಯು ಅವರಿಗೆ ಅಷ್ಟೊಂದು ಮುಖ್ಯವಾದ ಸ್ಥಳವಲ್ಲ.

ಆದಾಗ್ಯೂ, ನಾನು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದರೆ, ಅದಕ್ಕೆ ಕಾರಣ ಈ ದೇಶದ ಅಭಿವೃದ್ಧಿಯ ಹಾದಿಯಲ್ಲಿ ತೊಡಕಾಗಿರುವ ಸಂಗತಿಗಳು ನಿವಾರಣೆಯಾಗಬೇಕೆಂದು ಬಯಸುವ ಹಲವಾರು ಜನರಲ್ಲಿ ನಾನೂ ಒಬ್ಬನಾಗಿದ್ದೇನೆ. ದೇಶದ ಶೇಕಡಾ 95 ರಷ್ಟು ಜನರ ಭಾವನೆ ಇದೇ ಎಂಬುದು ನನಗೆ ತಿಳಿದಿದೆ. ಒಟ್ಟಾರೆಯಾಗಿ, ದೀರ್ಘಕಾಲದಿಂದ ಕಾಡುತ್ತಿರುವ ಈ ಸಮಸ್ಯೆ ಶಾಶ್ವತವಾಗಿ ಬಗೆಹರಿಯಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪು ಅದನ್ನು ಮಾಡಿದೆ ಅಷ್ಟೆ. ಅದೊಂದು ಮೈಲಿಗಲ್ಲಾಗಿದ್ದು ಎಲ್ಲರೂ ಅದನ್ನು ಸ್ವಾಗತಿಸಬೇಕಾಗಿದೆ.

ರಾಮ - ಒಬ್ಬ ಅಪ್ರತಿಮ ಮತ್ತು ಪ್ರೇರಣದಾಯಕ ವ್ಯಕ್ತಿ

ನಮ್ಮ ವೈಯಕ್ತಿಕ ಒತ್ತಾಸೆಗಳೇನೇ ಇರಲಿ, ರಾಮಾಯಣ ಈ ನಾಗರಿಕತೆಯ ಮೂಲಭೂತ ನಿರೂಪಣೆಗಳಲ್ಲಿ ಒಂದು ಎನ್ನುವುದನ್ನು ನಾವು ಮರೆಯಬಾರದು. ರಾಮನು ಸುಮಾರು 7000 ವರ್ಷಗಳಲ್ಲಿ ಕೋಟ್ಯಂತರ ಜನರ ಜೀವನಗಳ ಆಸರೆಯಾಗಿದ್ದಾನೆ. ಅವನು ಒಬ್ಬ ಧಾರ್ಮಿಕ ವ್ಯಕ್ತಿಯಲ್ಲ ಎನ್ನುವುದನ್ನು ಗಮನಿಸುವುದು ಅತ್ಯಂತ ಮುಖ್ಯ. ಯಾವುದೇ ಮತಪಂಥ ಅವನನ್ನು ತನ್ನ ಪರಿಧಿಗೆ ಒಳಪಡಿಸಿಕೊಳ್ಳಲಾಗದು. ರಾಮಾಯಣದಲ್ಲಿ ಎಲ್ಲೂ ಅವನು ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡಿಲ್ಲ. ರಾಮನು ಈ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರತಿಮೆಯಾಗಿದ್ದರೆ, ಅದಕ್ಕೆ ಕಾರಣ ಅವನ ಸ್ಥಿರತೆ, ಸಮತೋಲನ, ಶಾಂತಿ, ಸತ್ಯ, ಋಜುತ್ವ, ದಯೆ ಮತ್ತು ನ್ಯಾಯಪರತೆಯಾಗಿದೆ. ಒಂದು ಮಹಾನ್ ನಾಗರಿಕತೆಯನ್ನು ಕಟ್ಟಲು ಬೇಕಾಗಿರುವ ಗುಣಗಳನ್ನು ಅವನು ಹೊಂದಿರುವುದರಿಂದ ನಾವು ಅವನನ್ನು ಪೂಜ್ಯಭಾವದಿಂದ ಕಾಣುತ್ತೇವೆ. ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ಮುನ್ನೆಲೆಗೆ ತರಲು ಕಾರಣ, ಈ ನಿರ್ಮಾತೃ ಕಥಾನಕವು ನಮ್ಮ ಜೀವಕೋಶಗಳ ಭಾಗವಾಗಿ, ನಮ್ಮ ಒಟ್ಟು ಅಂತಃಪ್ರಜ್ಞೆಯಲ್ಲಿ ಆಳವಾಗಿ ಬೆಸೆದುಕೊಂಡಿದೆ. ನಾವು ಅಂತಹ ಕಥೆಯನ್ನು ಗಲಿಬಿಲಿಗೊಳಿಸದೇ ಇರುವುದು ಬಹಳ ಮುಖ್ಯ.

 

ಹೌದು, ಆಧುನಿಕ ಮನಸ್ಸು ‘ನಾವೇಕೆ ರಾಮನನ್ನು ಗೌರವಿಸಬೇಕು’ ಎಂದು ಅಚ್ಚರಿಪಡಬಹುದು. ಅವನೇನೂ ಒಂದು ‘ಯಶಸ್ವಿ ಬದುಕಿನ’ ಕಥೆಯನ್ನು ಪ್ರತಿನಿಧಿಸುವುದಿಲ್ಲ. ನಿಜವಾಗಿ ಹೇಳಬೇಕೆಂದರೆ, ಅವನ ಜೀವನವೊಂದು ಸರಣಿ ದುರಂತಗಳ ಕಥೆ. ಕೆಲವೇ ಕೆಲವರು ಮಾತ್ರ ಒಂದೇ ಜನ್ಮದಲ್ಲಿ ಅಷ್ಟೊಂದು ಸಂಕಟಗಳ ನಡುವೆ ಜೀವಿಸಿರಬಹುದು. ಒಂದು ಸಾಮ್ರಾಜ್ಯದ ನ್ಯಾಯಸಮ್ಮತ ಉತ್ತರಾಧಿಕಾರಿಯಾಗಿದ್ದರೂ, ಅವನು ತನ್ನ ಸಾಮ್ರಾಜ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ಕಾಡಿಗಟ್ಟಲ್ಪಡುತ್ತಾನೆ. ಆನಂತರ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ, ಅವಳನ್ನು ಮರಳಿ ತರಲು ಯುದ್ಧವನ್ನೇ ಹೂಡುತ್ತಾನೆ, ಆ ಪ್ರಕ್ರಿಯೆಯಲ್ಲಿ ಒಂದು ಇಡೀ ದೇಶವನ್ನೇ ಸುಟ್ಟುಹಾಕುತ್ತಾನೆ, ಅವಳನ್ನು ಮರಳಿ ಕರೆತರುತ್ತಾನೆ, ತನ್ನ ಜನರಿಂದಲೇ ಟೀಕಿಸಲ್ಪಡುತ್ತಾನೆ ಮತ್ತು ವಿಮರ್ಶಿಲ್ಪಡುತ್ತಾನೆ, ಮತ್ತೊಮ್ಮೆ ಅವಳನ್ನು ಕಾಡಿಗಟ್ಟುತ್ತಾನೆ! ಇನ್ನೊಂದು ದೌರ್ಭಾಗ್ಯವೆಂದರೆ ಅವನ ಪ್ರಿಯ ರಾಣಿ ಕಾಡಿನಲ್ಲಿ ಮಕ್ಕಳನ್ನು ಹೆರಬೇಕಾಗುತ್ತದೆ. ಆನಂತರ ಅವನು ತನ್ನ ಸ್ವಂತ ಮಕ್ಕಳೊಂದಿಗೇ ಅವರು ಯಾರು ಎಂದು ತಿಳಿಯದೇ ಯುದ್ಧಮಾಡಬೇಕಾಗಿ ಬಂದದ್ದು ಮತ್ತೊಂದು ಬಹಳ ದೊಡ್ಡ ವಿಪರ್ಯಾಸ. ಕೊನೆಗೆ ಅವನು ತನ್ನ ಜೀವನದಲ್ಲಿ ಪ್ರೀತಿಸಿದ ಏಕೈಕ ಸ್ತ್ರೀಯಾದ ಸೀತೆ ಕಾಡಿನಲ್ಲಿ ಸಾವನ್ನಪ್ಪುತ್ತಾಳೆ. ಸ್ಪಷ್ಟವಾಗಿ, ಇದೊಂದು ಅತ್ಯಂತ ದುಃಖಕರ ಕಥೆ, ಮತ್ತು ಒಬ್ಬ ವ್ಯಕ್ತಿಯ ಬೃಹತ್ ವೈಫಲ್ಯ. ಆದರೆ, ನಾವು ಅವನನ್ನು ಪೂಜಿಸುವುದು ಅವನು ತನ್ನ ಜೀವನವನ್ನು ನಡೆಸಿದ ರೀತಿಗಾಗಿ: ತನ್ನ ವೈಫಲ್ಯಗಳನ್ನು ಘನತೆ, ಗೌರವ, ಧೈರ್ಯ ಮತ್ತು ಸಹನೆಯಿಂದ ನಿರ್ವಹಿಸಿದ ರೀತಿಗಾಗಿ.

ನಾವು ಇಂದು ಒಂದು ಆಧುನಿಕ ದೃಷ್ಟಿಕೋನದಿಂದ ಈ ಕಥೆಯನ್ನು ಟೀಕಿಸಲು ಸಾಧ್ಯವಿದೆ: ರಾಮನು ಸೀತೆಯನ್ನು ನಡೆಸಿಕೊಂಡ ರೀತಿಯನ್ನು ನಾವು ಖಂಡಿಸಬಹುದು, ಅಥವಾ ವಾನರರ ಚಿತ್ರಣವನ್ನು ಕೀಳು ಮತ್ತು ಜನಾಂಗೀಯವೆಂದು ನೋಡಬಹುದು. ವಾಸ್ತವವಾಗಿ, ನಾವು ನಮ್ಮ ಭೂತತಕಾಲದ ಯಾವುದೇ ವ್ಯಕ್ತಿಯನ್ನು ತೆಗೆದುಕೊಂಡು ವಿಮರ್ಶಿಸುವುದು ಸುಲಭವಾಗಿದೆ. ಅದು ಕೃಷ್ಣ, ಬುದ್ಧ ಅಥವಾ ಯೇಸು ಯಾರೇ ಆದರೂ ಅವರನ್ನು ಸಮಕಾಲೀನ ಭೂತಕನ್ನಡಿಯಿಂದ ಪರಿಶೀಲಿಸಿ ಅವರನ್ನು ಯಾವುದೋ ಒಂದು ರೀತಿಯಲ್ಲಿ ಅಪರಿಪೂರ್ಣರು ಹಾಗೂ ದೋಷಪೂರಿತರು ಎಂದು ತೀರ್ಮಾನಿಸಬಹುದು. ಆದರೆ ನಾವು ಈ ವ್ಯಕ್ತಿಗಳನ್ನು ಸರಳವಾದ ತೀರ್ಪುಗಳ ಮೂಲಕ ನಿರಾಕರಿಸುವುದಕ್ಕೆ ಮೊದಲು ಮನುಕುಲಕ್ಕೆ ಲಾಂಛನಗಳ ಅವಶ್ಯಕತೆಯಿದೆ ಎಂಬುದನ್ನು ಮರೆಯದಿರೋಣ. ಈ ವ್ಯಕ್ತಿಗಳು, ಮೇಲ್ನೋಟಕ್ಕೆ ಕಾಣುವ ಕೊರತೆಗಳ ಹೊರತಾಗಿ, ಶತಮಾನಗಳ ಕಾಲ ಆ ಪ್ರಧಾನ ಕಾರ್ಯವನ್ನು ಪೂರೈಸಿದ್ದಾರೆ.

ರಾಮ ಇವತ್ತಿನ ಭಾರತಕ್ಕೆ ಎಷ್ಟು ಪ್ರಸ್ತುತ?

ಸಾರಭೂತವಾಗಿ ಹೇಳುವುದಾದರೆ ರಾಮನು ಒಬ್ಬ ನಾಯಕನೆನಿಸುವುದು ಅವನು ಒಂದು ಪರಿಪೂರ್ಣ ಜೀವನವನ್ನು ಸಾಗಿಸಿದ್ದಾನೆ ಎಂದಲ್ಲ, ಅವನು ಒಂದು ಅಸಾಧಾರಣ ಜೀವನವನ್ನು ನಡೆಸಿದ ಎಂಬುದರಿಂದ.

ರಾಮನೇಕೆ ಅಷ್ಟೊಂದು ವಿಶೇಷವಾದ ವ್ಯಕ್ತಿ ಎಂಬುದನ್ನು ನೋಡೋಣ. ಹಲವಾರು ಸಾವಿರ ವರ್ಷಗಳ ಹಿಂದೆ ಜಗತ್ತಿನ ಬಹುಭಾಗದ ಆಡಳಿತಗಾರರು ಕೇವಲ ಆಕ್ರಮಣಕಾರರಾಗಿದ್ದರು, ಅನಾಗರಿಕರಾಗಿದ್ದರು. ರಾಮನು ಮಾನವೀಯತೆ, ತ್ಯಾಗ ಮತ್ತು ನ್ಯಾಯಪರತೆಯ ವಿಶೇಷವಾದ ಪ್ರಜ್ಞೆಯನ್ನು ವ್ಯಕ್ತಪಡಿಸಿದನು. ಅವನನ್ನು ಪೂಜಿಸುವುದು ಅವನು ಹೊರಗಿನ ಪ್ರಪಂಚವನ್ನು ಗೆದ್ದನೆಂದಲ್ಲ; ಅವನು ಒಳಗಿನ ಜೀವನವನ್ನು ಗೆದ್ದ ಜಯಶಾಲಿಯಾಗಿದ್ದಾನೆ ಎಂದು. ಏಕೆಂದರೆ ಅವನು ಪ್ರತಿಕೂಲ ಪರಿಸ್ಥಿತಿಗಳಿಂದ ವಿಚಲಿತನಾಗುವುದಿಲ್ಲ. ಅವನು ರಾವಣನನ್ನು ಕೊಂದ ನಂತರವೂ, ಹಿಗ್ಗುವುದಿಲ್ಲ; ಅವನು ಪತನಗೊಂಡ ನಾಯಕನ ಶರೀರದ ಬಳಿ ಹೋಗಿ ತಾನು ಮಾಡಲೇಬೇಕಾದ ಕಾರ್ಯಕ್ಕೆ ಮರುಗುತ್ತಾನೆ. ಅವನ ಜೀವನದ ಎಲ್ಲಾ ಸಂಕಟಗಳಲ್ಲೂ ಅವನೆಂದಿಗೂ ತನ್ನ ಸಮಚಿತ್ತವನ್ನು ಕಳೆದುಕೊಳ್ಳುವುದಿಲ್ಲ, ಘಾಸಿಗೊಳ್ಳುವುದಿಲ್ಲ ಅಥವಾ ಪ್ರತೀಕಾರದ ಮನೋಭಾವ ತಾಳುವುದಿಲ್ಲ. ಅವನು ವಂಚನೆಯಿಲ್ಲದ ಜನಹಿತನೀತಿಯನ್ನು ಪಾಲಿಸುತ್ತಾನೆ ಮತ್ತು ಅಧಿಕಾರದ ದುರುಪಯೋಗದ ಕುರಿತು ಸದಾಕಾಲ ಎಚ್ಚರದಿಂದಿರುತ್ತಾನೆ. ಅವನು ಒಬ್ಬ ಸಮಚಿತ್ತದ ಮನುಷ್ಯನಾಗಿ, ಋಜುತ್ವ ಮತ್ತು ತ್ಯಾಗದ ಜೀವನವನ್ನು ನಡೆಸುತ್ತಾ, ತನ್ನ ಪ್ರಜೆಗಳಿಗಾಗಿ ತನ್ನ ಸುಖವನ್ನು ತ್ಯಜಿಸುವ ಮೂಲಕ ತಾನೊಂದು ಜೀವಂತ ಉದಾಹರಣೆಯಾಗಿ ನಿಲ್ಲುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಮುಕ್ತಿಯೇ ಪರಮೋಚ್ಛ ಮೌಲ್ಯವೆಂದು ಪರಿಗಣಿಸುವ ಸಂಸ್ಕೃತಿಯಲ್ಲಿ, ಅವನು ಋಣಾತ್ಮಕತೆ, ಸ್ವಹಿತಾಸಕ್ತಿ ಮತ್ತು ಸಂಕುಚಿತ ಮನಸ್ಥಿತಿಗಳಿಂದ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತಾನೆ. ಅವನು ತನ್ನ ಆಂತರ್ಯವು ಕರ್ಮದ ಕೋಲಾಹಲದಿಂದ ಘಾಸಿಯಾಗುವುದನ್ನು ನಿರಾಕರಿಸುತ್ತಾನೆ.

ಸಾರಭೂತವಾಗಿ ಹೇಳುವುದಾದರೆ ರಾಮನು ಒಬ್ಬ ನಾಯಕನೆನಿಸುವುದು ಅವನು ಒಂದು ಪರಿಪೂರ್ಣ ಜೀವನವನ್ನು ಸಾಗಿಸಿದ್ದಾನೆ ಎಂದಲ್ಲ, ಅವನು ಒಂದು ಅಸಾಧಾರಣ ಜೀವನವನ್ನು ನಡೆಸಿದ ಎಂಬುದರಿಂದ. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷ ಎಂದು ಪರಿಗಣಿಸಲಾಗಿದೆ. ಮತ್ತು ರಾಮರಾಜ್ಯವು ಒಂದು ಆದರ್ಶವನ್ನು ಪ್ರತಿನಿಧಿಸಿದರೆ, ಅದಕ್ಕೆ ಕಾರಣ ಅದು ಒಂದು ನ್ಯಾಯಪರ ಮತ್ತು ನಿಷ್ಪಕ್ಷಪಾತ ದೇಶದ ಲಾಂಛನವಾಗಿರುವುದೇ ಹೊರತು ಸರ್ವಾಧಿಕಾರಿ ಅಥವಾ ಅಧಿಕಾರಶಾಹಿ ದೇಶವಲ್ಲ.

ಅಯೋಧ್ಯಾ ತೀರ್ಪು

..ನಾವು ಒಂದಾಗಿ, ಒಂದು ದೇಶವಾಗಿ, ಒಂದು ಜನಸಮುದಾಯವಾಗಿ, ಒಂದು ಸಮಾನವಾದ ಗುರಿಯೆಡೆಗೆ ಮುನ್ನಡೆದೆವು. ಈಗ ಮತ್ತೆ ಅದನ್ನೇ ಮಾಡುವ ಸಮಯ ಬಂದಿದೆ.

ಒಂದು ಅಗಾಧವಾದ ಭಾವನಾತ್ಮಕವಾದ ವಿಷಯವನ್ನು, ಒಂದು ಭೂ-ವಿವಾದದಂತೆ ನಿರ್ವಹಿಸಲಾಗುವುದಿಲ್ಲ. ‘ದ ವಿಸ್ಡಂ ಆಫ್ ಸೋಲೋಮನ್’ ಪುಸ್ತಕವು ಇದು ಎಂದಿಗೂ ತೃಪ್ತಿಕರವಾಗಿರುವುದಿಲ್ಲ ಎಂದು ನಮಗೆ ಹೇಳುತ್ತದೆ. ಒಬ್ಬ ರಾಜನಲ್ಲಿಗೆ ಇಬ್ಬರು ಹೆಂಗಸರು ಬಂದು ಒಂದೇ ಮಗುವನ್ನು ತಮ್ಮದೆಂದು ಹೇಳಿದಾಗ, ಅವನು ಆ ಮಗುವನ್ನು ಎರಡು ಭಾಗವನ್ನಾಗಿ ತುಂಡರಿಸಿ ಇಬ್ಬರೂ ಅರ್ಧರ್ಧ ಭಾಗವನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಆ ಕೂಡಲೇ ನಿಜವಾದ ತಾಯಿ ಇನ್ನೊಂದು ಹೆಂಗಸಿಗೆ ‘ನೀನು ನನ್ನ ಮಗುವನ್ನು ತೆಗೆದುಕೋ. ನಾನು ನನ್ನ ಮಗುವಿಗೆ ಹೀಗೆ ಮಾಡಲಾರೆ’ ಎನ್ನುತ್ತಾಳೆ. ಸುಮ್ಮನೆ ಏನೋ ಒಂದನ್ನು ಎರಡು ಭಾಗಗಳನ್ನಾಗಿ ಕತ್ತರಿಸಿ ಹಾಕುವುದು ಎಂದಿಗೂ ಒಂದು ಪರಿಹಾರವಲ್ಲ. ಪರಿಹಾರವೆಂದರೆ ಅದು ಎಲ್ಲರಿಗೂ ಅರ್ಥಪೂರ್ಣ, ಗೌರವಯುತ ಮತ್ತು ಕಾರ್ಯಸಾಧುವಾಗಿರಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪು ಅದನ್ನು ನಮಗೆ ನೀಡಿದೆ. ಅದು ಈ ದೇಶವನ್ನು ಬಹಳ ದೀರ್ಘಕಾಲದಿಂದ ಹಾಳುಮಾಡಿದ ಸಮಸ್ಯೆಯೊಂದನ್ನು ನಿರ್ಣಾಯಕವಾಗಿ, ನಿಷ್ಪಕ್ಷಪಾತವಾಗಿ ಮತ್ತು ನಿಖರವಾಗಿ ಬಗೆಹರಿಸಿದೆ. ಎರಡೂ ಸಮುದಾಯಗಳ ಜವಾಬ್ದಾರಿಯುತ ಸದಸ್ಯರು ಈ ತೀರ್ಪನ್ನು ಸ್ವಾಗತಿಸಿದ್ದಾರೆ. ನಾವು ಇನ್ನು ಮುಂದುವರಿಯಬೇಕಾದ ಸಮಯ ಬಂದಿದೆ.

 

ಜವಾಬ್ದಾರಿಯನ್ನು ಸ್ವೀಕರಿಸಿ ಮುನ್ನಡೆಯುವುದು

ಒಂದು ಹಳತಾದ ಇತಿಹಾಸದ ನಿರೂಪಣೆಗಳಿಂದ ಗ್ರಸ್ತರಾಗಲು ನಿರಾಕರಿಸುತ್ತಾ, ಸೇತುವೆಗಳನ್ನು ನಿರ್ಮಿಸುತ್ತಾ ಮುಂದೆ ಸಾಗುವ ಕಾಲ ಈಗ ಬಂದಿದೆ.

ನಾವು ಐತಿಹಾಸಿಕ ಗಾಯಗಳ ನೋವುಗಳನ್ನು ಮತ್ತೆ ತೆರೆಯದಿರೋಣ, ರೋಷ ಮತ್ತು ಘರ್ಷಣೆಯ ಗಾಥೆಗಳನ್ನು ಮರುಬಳಕೆ ಮಾಡದಿರೋಣ, ಹಿಂಸೆ ಮತ್ತು ಸೇಡಿನ ಕಥೆಗಳಿಗೆ ಹೊಸರೂಪ ಕೊಡದಿರೋಣ. ಉಳಿದ ನೋವು ಏನಿದ್ದರೂ, ಅದು ಗುಣವಾಗಲಿ. ಹಿಂದು ಸಮುದಾಯ ತಾವು ಸಂರಕ್ಷಿಸಲು ಪ್ರಯತ್ನಿಸುತ್ತಿರುವ ಮೌಲ್ಯದ ಪ್ರತಿರೂಪವಾದ ವ್ಯಕ್ತಿಯು ಯಾರ ಬಗ್ಗೆಯೂ ಕೆಟ್ಟಭಾವನೆ ಅಥವಾ ಅಸಹನೆಯನ್ನು ಹೊಂದಿರಲಿಲ್ಲ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನೋವಿನಲ್ಲಿರುವವರನ್ನು ತಣಿಸುವ ಕಡೆಗೆ ಗಮನ ನೀಡಬೇಕು. ರಾಮನ ವಿನಯವನ್ನು ನೆನೆಯುತ್ತಾ ಅವನಿಗೆ ಘನತೆ ಮತ್ತು ಕೃತಜ್ಞತೆಯಿಂದ ತಲೆಬಾಗುವ ಸಮಯವಿದು. ಈ ನೆಲದ ಮುಸಲ್ಮಾನ ಸಮುದಾಯವೂ ಸಹ – ‘ಇಡೀ ಭೂಮಿಯೇ ಒಂದು ಪ್ರಾರ್ಥನಾ ಸ್ಥಳ’ ಎಂಬ ಬೋಧನೆಯ ವಾರಸುದಾರರು ತಾವು ಎಂಬುದನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಿಂತ ಹೆಚ್ಚಿನ ಒಳಗೂಡಿಸಿಕೊಳ್ಳುವಿಕೆಯ ಹೇಳಿಕೆ ಮತ್ತೊಂದಿಲ್ಲ.

ಸರ್ವೋಚ್ಛ ನ್ಯಾಯಾಲಯದ ತೀರ್ಪು ಒಂದು ಮೈಲಿಗಲ್ಲೇ ಸರಿ. ಅಂದರೆ ನಾವು ನಮ್ಮ ಗೊಂದಲದ ಹೊಣೆಗಾರಿಕೆಯನ್ನು ಹೊತ್ತಿದ್ದೇವೆ ಮತ್ತು ನಾವದನ್ನು ನಮ್ಮ ಮಕ್ಕಳು, ಮೊಮ್ಮಕ್ಕಳ ಹೆಗಲಿಗೆ ದಾಟಿಸಲು ನಿರಾಕರಿಸಿದ್ದೇವೆ ಎಂದರ್ಥ. ಈ ದೇಶದಲ್ಲಿ ಮುಂದಿನ ತಲೆಮಾರುಗಳು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿರುತ್ತವೆ, ಆದರೆ ಕೊನೆಯಪಕ್ಷ ನಾವು ಒಂದು ವ್ಯಾಧಿಯಂತಹ ಸಮಸ್ಯೆಯನ್ನು ಅವರ ಮೇಲೆ ಹೇರುತ್ತಿಲ್ಲ. ನಾವೆಲ್ಲರೂ ನಮ್ಮ ಭೂತಕಾಲದ ಕಾರಣದಿಂದ ದುಃಖಿಸುವುದನ್ನು ನಿರಾಕರಿಸೋಣ. ಒಂದು ಹಳತಾದ ಇತಿಹಾಸದ ನಿರೂಪಣೆಗಳಿಂದ ಗ್ರಸ್ತರಾಗಲು ನಿರಾಕರಿಸುತ್ತಾ, ಸೇತುವೆಗಳನ್ನು ನಿರ್ಮಿಸುತ್ತಾ ಮುಂದೆ ಸಾಗುವ ಕಾಲ ಈಗ ಬಂದಿದೆ.

ಸಂಪಾದಕರ ಟಿಪ್ಪಣಿ : ಈ ಲೇಖನದ ಇಂಗ್ಲೀಷ್ ಅವತರಣಿಕೆಯು 15 ನವಂಬರ್ 2019 ರ ’Open Magazine' ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು.