ಸದ್ಗುರು: ರಾವಣ ಒಬ್ಬ ತೀವ್ರವಾದ ಶಿವ ಭಕ್ತನಾಗಿದ್ದ ಮತ್ತು ಅದರ ಕುರಿತಾದ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಬ್ಬ ಭಕ್ತನು ಎಂದೂ ದೊಡ್ಡವನಾಗಬಾರದು, ಆದರೆ ಅವನೊಬ್ಬ ದೊಡ್ಡ ಭಕ್ತನಾಗಿದ್ದನು. ಒಂದು ಸಾರಿ ಅವನು ದಕ್ಷಿಣದ ತುತ್ತತುದಿಯಿಂದ ಕೈಲಾಸಕ್ಕೆ ನಡೆದು ಬಂದನು - ಆ ಸಮಯದಲ್ಲಿ ಅವನು ಅಷ್ಟು ದೂರದಿಂದ ನಡೆದು ಬಂದನೆಂದರೆ, ನೀವದನ್ನು ಊಹಿಸಿಕೊಳ್ಳಬಹುದು! ಬಂದವನೇ ಶಿವನ ಪ್ರಶಂಸೆಗಳನ್ನು ಹಾಡಲು ಪ್ರಾರಂಭಿಸಿದನು. ಅವನ ಬಳಿ ತಾಳವನ್ನು ಹಾಕಲು ಬಳಸುತ್ತಿದ್ದ ಒಂದು ಮೃದಂಗ ಇದ್ದಿತು ಮತ್ತು ಅವನು ಕೈಲಾಸಕ್ಕೆ ಬರುತ್ತಿದ್ದಂತೆಯೇ, ಥಟ್ಟನೆ 1008 ಶ್ಲೋಕಗಳಿರುವ ಶಿವ ತಾಂಡವ ಸ್ತೋತ್ರವನ್ನು ರಚಿಸಿದನು. 

ರಾವಣನ ಸಂಗೀತಕ್ಕೆ ಮನಸೋತ ಶಿವ, ಪರಮಾನಂದದಿಂದ ಅದನ್ನು ಆಲಿಸುತ್ತಲಿದ್ದ. ಇತ್ತ ರಾವಣ, ಹಾಡುತ್ತ ಹಾಡುತ್ತ ನಿಧಾನವಾಗಿ ಕೈಲಾಸದ ದಕ್ಷಿಣ ಮುಖದಿಂದ ಅದನ್ನು ಏರಲು ಪ್ರಾರಂಭಿಸಿದ. ಇನ್ನೇನು ಅವನು ಪರ್ವತದ ತುದಿಗೆ ತಲುಪಬೇಕು ಎನ್ನುವಷ್ಟರಲ್ಲಿ, ಪಾರ್ವತಿ ಅವನು ಏರಿಬರುತ್ತಿರುವುದನ್ನು ಕಂಡಳು. ಆದರೆ ಶಿವ ಮಾತ್ರ, ಇನ್ನೂ ಅವನ ಸಂಗೀತದಲ್ಲೇ ಮುಳುಗಿಹೋಗಿದ್ದ. 

ಪರ್ವತದ ತುದಿಯಲ್ಲಿ ಇಬ್ಬರಿಗೆ ಮಾತ್ರ ಸ್ಥಳವಿತ್ತು! ಆದ್ದರಿಂದ ಪಾರ್ವತಿ ಶಿವನನ್ನು ಅವನ ಸಂಗೀತ ಪರವಶತೆಯಿಂದ ಹೊರತರಲು ಪ್ರಯತ್ನಿಸಿದಳು. "ಈ ಮನುಷ್ಯ ಮೇಲಕ್ಕೆ ಹತ್ತಿ ಬರುತ್ತಿದ್ದಾನೆ" ಎಂದವಳು ಹೇಳಿದಳು. ಆದರೆ ಶಿವ ಸಂಗೀತ ಮತ್ತು ಕವಿತೆಯಲ್ಲಿ ತಲ್ಲೀನನಾಗಿ ಹೋಗಿದ್ದ. ಕೊನೆಯಲ್ಲಿ ಹೇಗೋ, ಪಾರ್ವತಿ ಅವನನ್ನು ರಾವಣನ ಸಂಗೀತದ ಮೋಡಿಯಿಂದ ಹೊರತರುವಲ್ಲಿ ಯಶಸ್ವಿಯಾದಳು, ಮತ್ತು ರಾವಣ ಪರ್ವತದ ಶಿಖರವನ್ನು ತಲುಪಿದಾಗ, ಶಿವ ತನ್ನ ಪಾದವನ್ನು ಬಳಸಿ ಅವನನ್ನು ಕೆಳಕ್ಕೆ ತಳ್ಳಿದನು. ರಾವಣ ಕೈಲಾಸದ ದಕ್ಷಿಣ ಮುಖದಿಂದ ಜಾರುತ್ತಾ ಕೆಳಕ್ಕೆ ಬಿದ್ದನು. ಅವನು ಜಾರುತ್ತಿರುವಾಗ ಅವನ ಹಿಂದೆ ಅವನ ಮೃದಂಗವೂ ಸಹ ಎಳೆದುಕೊಂಡು ಬರುತ್ತಿತ್ತು ಮತ್ತದು ಪರ್ವತದ ಮೇಲಿಂದ ಕೆಳಗಿನವರೆಗೆ ಕೊರಕಲನ್ನು ಒಂದು ಕೊರಕಲನ್ನು ಸೃಷ್ಟಿಸಿತು ಎಂಬುದಾಗಿ ಹೇಳಲಾಗುತ್ತದೆ. ನೀವು ಕೈಲಾಸದ ದಕ್ಷಿಣ ಮುಖವನ್ನು ನೋಡಿದರೆ, ಅದರ ಮಧ್ಯದಿಂದ ಬೆಣೆಯಾಕಾರದ ಗುರುತೊಂದು ಕೆಳಗಿನ ತನಕ ಹೋಗಿರುವುದನ್ನು ನೀವು ಕಾಣುತ್ತೀರಿ.

ಕೈಲಾಸದ ನಾಲ್ಕು ಮುಖಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಥವಾ ಭೇದ ಮಾಡುವುದು ಸರಿಯಲ್ಲ, ಆದರೆ ದಕ್ಷಿಣದ ಮುಖ ನಮಗೆ ಪ್ರಿಯವಾದುದ್ದಾಗಿದೆ ಏಕೆಂದರೆ ಅಗಸ್ತ್ಯ ಮುನಿಗಳು ದಕ್ಷಿಣ ಮುಖದಲ್ಲಿ ವಿಲೀನಗೊಂಡರು ಎಂಬ ಕಾರಣಕ್ಕಾಗಿ. ನಾವು ದಕ್ಷಿಣದ ಮುಖವನ್ನು ಇಷ್ಟಪಡುವುದು ನಾವು ದಕ್ಷಿಣ ಭಾರತದವರು ಎಂಬ ಪೂರ್ವಾಗ್ರಹದಿಂದಾಗಿರಬಹುದು ಅಷ್ಟೆ ಮತ್ತು ಅದು ಪರ್ವತದ ಅತಿ ಸುಂದರವಾದ ಮುಖ ಎಂದು ನಾನು ಭಾವಿಸುತ್ತೇನೆ! ಅದು ಖಂಡಿತವಾಗಿಯೂ ಪರ್ವತದ ಅತ್ಯಂತ ಬಿಳಿಯ ಮುಖವಾಗಿದೆ ಏಕೆಂದರೆ ಅಲ್ಲಿ ತುಂಬ ಹಿಮ ಬೀಳುತ್ತದೆ.

 

ಅನೇಕ ವಿಧಗಳಲ್ಲಿ ಅದು ಪರ್ವತದ ಅತ್ಯಂತ ತೀಕ್ಷ್ಣವಾದ ಮುಖವಾಗಿದೆ ಆದರೆ ಕೆಲವೇ ಕೆಲವು ಜನ ಮಾತ್ರ ದಕ್ಷಿಣ ಮುಖದ ಕಡೆಗೆ ಹೋಗುತ್ತಾರೆ. ಅದರ ಪ್ರವೇಶ ದುರ್ಗಮವಾಗಿದ್ದು, ಪರ್ವತದ ಇತರ ಮುಖಗಳಿಗಿಂತ ಹೆಚ್ಚು ಕಷ್ಟವಾದ ಮಾರ್ಗವನ್ನು ಅದು ಒಳಗೊಂಡಿದೆ ಹಾಗೂ ಕೆಲವು ರೀತಿಯ ಜನರು ಮಾತ್ರ ಅಲ್ಲಿಗೆ ಹೋಗುತ್ತಾರೆ.

ಸಂಪಾದಕರ ಟಿಪ್ಪಣಿ:  Watch the YogiShiva web series,ಶಿವನ ಅಚಲತೆ, ಉತ್ಸಾಹ ಹಾಗೂ ಉನ್ಮತ್ತತೆಯ ಅಂಶಗಳನ್ನು ಹೇಳುವ, ಸದ್ಗುರುಗಳು ನಿರೂಪಿಸುವ ಕಥೆಗಳಿಗಾಗಿ, ’ಯೋಗಿಶಿವ’ ವೆಬ್ ಸರಣಿಗಳನ್ನು ವೀಕ್ಷಿಸಿ