#1 ಮನಸ್ಸು ಮತ್ತು ದೇಹ ಖಾಲಿ ಹೊಟ್ಟೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ.

ಸದ್ಗುರು: ದಿನವಿಡೀ ಏನನ್ನಾದರೂ ತಿನ್ನುತ್ತಿರುವುದು ನಿಮ್ಮನ್ನು ಹೆಚ್ಚು ಚಟುವಟಿಕೆಯಿಂದಿಡಲು ಸಹಾಯ ಮಾಡುತ್ತದೆ ಎಂದು ನೀವು ಯೋಚಿಸಬಹುದು. ಆದರೆ, ನಿಮ್ಮ ಹೊಟ್ಟೆಯಲ್ಲಿ ಆಹಾರ ಇದ್ದಾಗ ನಿಮ್ಮ ದೇಹದ ಅನುಭವ ಮತ್ತು ನಿಮ್ಮ ಹೊಟ್ಟೆ ಖಾಲಿ ಇದ್ದಾಗ ನಿಮ್ಮ ದೇಹದ ಅನುಭವ ಹೇಗಿರುತ್ತದೆ ಎನ್ನುವುದರತ್ತ ನೀವು ಗಮನ ಹರಿಸಿದರೆ, ನಿಮ್ಮ ಶರೀರ ಮತ್ತು ಮನಸ್ಸು ಎರಡೂ ಸಹ ನಿಮ್ಮ ಹೊಟ್ಟೆ ಖಾಲಿ ಇದ್ದಾಗ ಅತ್ಯಂತ ಸಮರ್ಪಕವಾಗಿ ಕೆಲಸ ಮಾಡುತ್ತವೆ ಎಂಬುದನ್ನು ನೀವು ಗಮನಿಸುತ್ತೀರಿ. ಎಡೆಬಿಡದೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಆಹಾರ ಸಂಸ್ಕರಣೆಯಾಗುತ್ತಲೇ ಇದ್ದರೆ, ಸ್ವಾಭಾವಿಕವಾಗಿಯೇ ಒಂದು ನಿರ್ದಿಷ್ಟ ಪ್ರಮಾಣದ ಜೀವಶಕ್ತಿ ಅದಕ್ಕಾಗಿ ನಿಗದಿಯಾಗುತ್ತದೆ. ಆದ್ದರಿಂದ, ನಿಮ್ಮ ಮೆದುಳು ಮತ್ತು ಶರೀರ ಅವುಗಳ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವುದಿಲ್ಲ.

ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಬಯಸುವುದಾದರೆ, ಒಂದೂವರೆಯಿಂದ-ಎರಡೂವರೆ ಘಂಟೆಗಳೊಳಗಾಗಿ ನೀವು ತಿಂದ ಆಹಾರ ನಿಮ್ಮ ಹೊಟ್ಟೆಯಿಂದ ಖಾಲಿಯಾಗಿ, ಸಣ್ಣ ಕರುಳಿನೊಳಕ್ಕೆ ಹೋಗುವಂತಹ ಆಹಾರವನ್ನು ನೀವು ಪ್ರಜ್ಞಾಪೂರ್ವಕವಾಗಿ ತಿನ್ನಬೇಕು.

ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಬಯಸುವುದಾದರೆ, ಒಂದೂವರೆಯಿಂದ-ಎರಡೂವರೆ ಘಂಟೆಗಳೊಳಗಾಗಿ ನೀವು ತಿಂದ ಆಹಾರ ನಿಮ್ಮ ಹೊಟ್ಟೆಯಿಂದ ಖಾಲಿಯಾಗಿ, ಸಣ್ಣ ಕರುಳಿನೊಳಕ್ಕೆ ಹೋಗುವಂತಹ ಆಹಾರವನ್ನು ನೀವು ಪ್ರಜ್ಞಾಪೂರ್ವಕವಾಗಿ ತಿನ್ನಬೇಕು. ಆ ನಂತರದಿಂದ ಶರೀರ ಅಷ್ಟೊಂದು ಪ್ರಾಣಶಕ್ತಿಯನ್ನು ವ್ಯಯಿಸುವುದಿಲ್ಲ. ಮತ್ತು ನೀವು ತಿಂದ ಆಹಾರ ಹನ್ನೆರಡರಿಂದ ಹದಿನೆಂಟು ಘಂಟೆಗಳೊಳಗಾಗಿ ಸಂಪೂರ್ಣವಾಗಿ ನಿಮ್ಮ ವ್ಯವಸ್ಥೆಯಿಂದ ಹೊರಹೋಗಬೇಕು. ಯೋಗ ಯಾವಾಗಲೂ ಒತ್ತಿ ಹೇಳುವುದು ಇದನ್ನೇ.

ಹೊಟ್ಟೆ ಖಾಲಿ ಇರುವುದರ ಅರ್ಥ ಹಸಿವು ಎಂದಲ್ಲ. ನಿಮ್ಮ ಪ್ರಾಣಶಕ್ತಿಯ ಮಟ್ಟ ಕಡಿಮೆಯಾದಾಗ ಮಾತ್ರ ನಿಮಗೆ ಹಸಿವಾಗುತ್ತದೆ. ಇಲ್ಲದಿದ್ದರೆ, ನಿಮ್ಮ ಹೊಟ್ಟೆ ಖಾಲಿ ಇರಬೇಕು.

ಈ ಸರಳ ಅರಿವನ್ನು ನೀವು ಕಾಪಾಡಿಕೊಂಡು ಹೋದರೆ, ನೀವು ಇನ್ನೂ ಹೆಚ್ಚಿನ ಪ್ರಾಣಶಕ್ತಿ, ಚುರುಕುತನ ಹಾಗೂ ಜಾಗರೂಕತೆಯ ಅನುಭವವನ್ನು ಹೊಂದುತ್ತೀರಿ. ನೀವು ಜೀವನದಲ್ಲಿ ಯಾವುದೇ ಕೆಲಸವನ್ನು ಮಾಡಲು ಆಯ್ಕೆ ಮಾಡಿಕೊಂಡಿದ್ದರೂ ಸಹ, ಒಂದು ಯಶಸ್ವೀ ಜೀವನಕ್ಕೆ ಬೇಕಾದ ಸಾರಭೂತ ಅಂಶಗಳು ಇವಾಗಿವೆ.

#2 ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ನಿಮ್ಮ ವ್ಯವಸ್ಥೆಯ ಶುದ್ಧೀಕರಣ

ಜಠರದಲ್ಲಿ ಜೀರ್ಣಕ್ರಿಯೆ ನಡೆಯುತ್ತಿರುವಾಗ, ದೇಹದ ಕೋಶಗಳ ಮಟ್ಟದಲ್ಲಿ ನಡೆಯಬೇಕಾದ ಶುದ್ಧೀಕರಣ ಪ್ರಕ್ರಿಯೆ ಹೆಚ್ಚೂಕಡಿಮೆ ನಿಂತೇ ಹೋಗುತ್ತದೆ. ಹಾಗಾಗಿ, ನೀವು ದಿನವಿಡೀ ತಿನ್ನುತ್ತಲೇ ಇದ್ದರೆ, ಕೋಶಗಳು ಮಲಿನ ಪದಾರ್ಥವನ್ನು ಹೆಚ್ಚು ಅವಧಿಯವರೆಗೆ ಇಟ್ಟುಕೊಳ್ಳುತ್ತವೆ. ಇದು ಕಾಲಕ್ರಮೇಣ ವಿವಿಧ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಕರುಳಿನಿಂದ ವಿಸರ್ಜನೆಯ ಪ್ರಕ್ರಿಯೆ ಕೂಡಾ ಸಮರ್ಥವಾಗಿ ನಡೆಯುವುದಿಲ್ಲ. ತ್ಯಾಜ್ಯ ಪದಾರ್ಥಗಳು ಕರುಳಿನೊಳಕ್ಕೆ ಒಂದೇ ಬಾರಿಗೆ ಬಂದು ಸೇರುವ ಬದಲು, ನಿರಂತರವಾಗಿ ಬರುತ್ತಲೇ ಇರುತ್ತವೆ. 

ದೊಡ್ಡಕರುಳು ಸ್ವಚ್ಛವಾಗಿಲ್ಲದೇ ಇದ್ದರೆ, ನೀವು ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಯೋಗದ ಪ್ರಕಾರ ಚೊಕ್ಕಟವಾಗಿಲ್ಲದ ದೊಡ್ಡ ಕರುಳು ಮತ್ತು ಮಾನಸಿಕ ಕ್ಷೋಭೆಗಳು ನೇರವಾಗಿ ಸಂಬಂಧಿಸಿವೆ.

ದೊಡ್ಡಕರುಳು ಸ್ವಚ್ಛವಾಗಿಲ್ಲದೇ ಇದ್ದರೆ, ನೀವು ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಯೋಗದ ಪ್ರಕಾರ ಚೊಕ್ಕಟವಾಗಿಲ್ಲದ ದೊಡ್ಡ ಕರುಳು ಮತ್ತು ಮಾನಸಿಕ ಕ್ಷೋಭೆಗಳು ನೇರವಾಗಿ ಸಂಬಂಧಿಸಿವೆ. ದೊಡ್ಡ ಕರುಳು ಸ್ವಚ್ಛವಾಗಿಲ್ಲದಿದ್ದರೆ ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. 

ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಾದ ಆಯುರ್ವೇದ ಮತ್ತು ಸಿದ್ಧ ವೈದ್ಯಗಳಲ್ಲಿ, ರೋಗಿಯ ಖಾಯಿಲೆ ಏನೇ ಆಗಿರಲಿ, ಅವರು ಮಾಡುವ ಮೊಟ್ಟಮೊದಲ ವಿಷಯವೆಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಭೇದಿ ಮಾಡಿಸುವುದು! ಏಕೆಂದರೆ ನಿಮ್ಮ ಬಹುತೇಕ ಸಮಸ್ಯೆಗಳು ಅಶುದ್ಧವಾದ ದೊಡ್ಡ ಕರುಳಿನಿಂದ ಆಗಿರಬಹುದು. 

 

ಜನರು ಇಂದಿನ ದಿನಗಳಲ್ಲಿ ತಿನ್ನುತ್ತಿರುವ ರೀತಿಯನ್ನು ನೋಡಿದರೆ, ದೊಡ್ಡಕರುಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅವರಿಗೊಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದೇ ನೀವು ದಿನಕ್ಕೆ ಎರಡೇ ಬಾರಿ ಹೊಟ್ಟೆತುಂಬ ತಿಂದು, ಮಧ್ಯಮಧ್ಯದಲ್ಲಿ ಎನನ್ನೂ ತಿನ್ನುವುದಿಲ್ಲ ಎಂದಿಟ್ಟುಕೊಳ್ಳಿ, ಅಥವಾ ನೀವು ತುಂಬಾ ಕೆಲಸ ಮಾಡುತ್ತಿದ್ದೇ ಆದರೆ, ಒಂದು ಹಣ್ಣನ್ನು ತಿನ್ನಬಹುದು. ಹೀಗೆ ಮಾಡಿದಾಗ, ನಿಮ್ಮ ದೊಡ್ಡಕರುಳು ಯಾವಾಗಲೂ ಸ್ವಚ್ಛವಾಗಿರುತ್ತದೆ. ನಾವು ಸಾಮಾನ್ಯವಾಗಿ ಆಶ್ರಮದಲ್ಲಿ ಮಾಡುವುದು ಹೀಗೆಯೇ.

ಯೋಗ ಪದ್ಧತಿಯ ಪ್ರಕಾರ, ಎರಡು ಊಟಗಳ ನಡುವೆ ಆರರಿಂದ ಎಂಟು ಘಂಟೆಗಳ ಅಂತರ ಇರಬೇಕು. ಇದು ಸಾಧ್ಯವಿಲ್ಲವಾದರೆ, ಕನಿಷ್ಟಪಕ್ಷ ಐದು ಘಂಟೆಗಳ ಅಂತರವಾದರೂ ಇರಲೇಬೇಕು. ಇದಕ್ಕಿಂತಲೂ ಕಡಿಮೆ ಅಂತರವನ್ನು ನೀವು ನೀಡುತ್ತಿದ್ದರೆ, ನಿಮಗೆ ನೀವೇ ತೊಂದರೆಯನ್ನು ಉಂಟುಮಾಡಿಕೊಳ್ಳುತ್ತಿದ್ದೀರಿ.

#3 ವ್ಯವಸ್ಥೆಯೊಳಕ್ಕೆ ಆಹಾರವನ್ನು ಹೀರಿಕೊಳ್ಳುವಂತೆ ಮಾಡುವುದು

Sadhguru eating a mango near Kailash | 5 Reasons Why You Shouldn’t Be Snacking Between Meals

 

ನೀವು ನಿಮ್ಮ ದೇಹ ಮತ್ತು ನಿಮ್ಮ ಮನಸ್ಸು ಎಂದು ಯಾವುದನ್ನು ಕರೆಯುತ್ತಿರೋ ಅದು, ಒಂದು ನಿರ್ದಿಷ್ಟವಾದ ನೆನಪಿನ ಶೇಖರಣೆ. ನೀವದನ್ನು ಮಾಹಿತಿ ಎಂದೂ ಸಹ ಕರೆಯಬಹುದು. ಈ ನೆನಪಿನ ಕಾರಣದಿಂದಾಗಿಯೇ ನಿಮ್ಮ ಶರೀರ ಅದರ ಆಕಾರವನ್ನು ಪಡೆದಿರುವುದು. ಈ ನೆನಪನ್ನು ಆಧರಿಸಿಯೇ ನಾವು ಸೇವಿಸುವ ಆಹಾರ ನಮ್ಮ ದೇಹವಾಗಿ ಪರಿವರ್ತನೆಯಾಗುವುದು. ನಾನು ಒಂದು ಮಾವಿನಹಣ್ಣನ್ನು ತಿನ್ನುತ್ತೇನೆ ಎಂದಿಟ್ಟುಕೊಳ್ಳಿ. ಆ ಹಣ್ಣು ನನ್ನೊಳಗೆ ಸೇರಿಕೊಂಡು ಒಬ್ಬ ಗಂಡಸಿನ ಶರೀರವಾಗುತ್ತದೆ. ಒಂದು ಹೆಂಗಸು ಮಾವಿನಹಣ್ಣನ್ನು ತಿಂದರೆ, ಅದೇ ಮಾವಿನಹಣ್ಣು ಆಕೆಯೊಳಗೆ ಹೋಗಿ ಒಬ್ಬ ಹೆಂಗಸಿನ ಶರೀರವಾಗುತ್ತದೆ. ಒಂದು ಹಸು ಮಾವಿನಹಣ್ಣನ್ನು ತಿಂದರೆ, ಅದು ಹಸುವಿನೊಳಗೆ ಹೋಗಿ ಒಂದು ಹಸುವಿನ ಶರೀರವಾಗುತ್ತದೆ. ಈ ಮಾವಿನಹಣ್ಣು ನನ್ನೊಳಗೆ ಹೋಗಿ ಒಬ್ಬ ಗಂಡಸಾಗುತ್ತದೆ. ಅದು ಒಬ್ಬ ಹೆಂಗಸೋ ಅಥವಾ ಒಂದು ಹಸುವೋ ಆಗುವುದಿಲ್ಲವೇಕೆ? ಏಕೆಂದರೆ ಅದು ಮೂಲತಃ, ನನ್ನ ವ್ಯವಸ್ಥೆಯೊಳಗಿರುವ ಒಂದು ನಿರ್ದಿಷ್ಟ ರೀತಿಯ ನೆನಪಿನ ಕಾರಣದಿಂದ.

ನಿಮಗೆ ವಯಸ್ಸು ಹೆಚ್ಚಾದಂತೆಲ್ಲಾ, ನಿಮ್ಮ ದೇಹದ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆಯಾಗಲು ಆರಂಭವಾಗುತ್ತದೆ. ಏಕೆಂದರೆ, ನಿಮ್ಮ ಅನುವಂಶಿಕ ಹಾಗೂ ವಿಕಸನದ ನೆನಪುಗಳು ನೀವು ಸೇವಿಸುವ ಆಹಾರವನ್ನು ನಿಮ್ಮ ದೇಹವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ.

ಮತ್ತು ನಾನೊಂದು ಮಾವಿನಹಣ್ಣನ್ನು ತಿಂದರೆ, ಅದರ ಒಂದು ಭಾಗ ನನ್ನ ಚರ್ಮವಾಗುತ್ತದೆ ಮತ್ತದು ನನ್ನದೇ ಚರ್ಮದ ಬಣ್ಣಕ್ಕೆ ತಿರುಗುತ್ತದೆಯೇ ವಿನಃ ಇದ್ದಕ್ಕಿದ್ದ ಹಾಗೆ ನನ್ನ ಕೈ ಮೇಲೊಂದು ಹಳದಿ ಬಣ್ಣದ ತೇಪೆ ನಿಮಗೆ ಕಾಣಿಸುವುದಿಲ್ಲ. ಇಷ್ಟು ಉತ್ತಮವಾದ ನೆನಪಿನ ವ್ಯವಸ್ಥೆ ಇರುವ ಕಾರಣದಿಂದಾಗಿ, ನಾನು ಏನನ್ನೇ ತಿಂದರೂ ಸಹ ಅದು ನಾನೇ ಆಗುವಂತೆ ಮತ್ತು ಬೇರೊಬ್ಬ ವ್ಯಕ್ತಿಯಾಗದಂತೆ ಅದು ಖಚಿತಪಡಿಸುತ್ತದೆ.

ನಿಮಗೆ ವಯಸ್ಸು ಹೆಚ್ಚಾದಂತೆಲ್ಲಾ, ನಿಮ್ಮ ದೇಹದ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿ ಕಡಿಮೆಯಾಗಲು ಆರಂಭವಾಗುತ್ತದೆ. ಏಕೆಂದರೆ, ನಿಮ್ಮ ಅನುವಂಶಿಕ ಹಾಗೂ ವಿಕಸನದ ನೆನಪುಗಳು ನೀವು ಸೇವಿಸುವ ಆಹಾರವನ್ನು ನಿಮ್ಮ ದೇಹವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಬರುತ್ತವೆ. ನೀವು ಆರೋಗ್ಯವಾಗಿದ್ದು, ತಿಂದದ್ದನ್ನೆಲ್ಲಾ ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬಹುದು. ಆದರೆ ನಿಮ್ಮ ದೇಹಕ್ಕೆ ನೀವು ತಿಂದ ಮಾವಿನಹಣ್ಣನ್ನು ಮೊದಲಿನಷ್ಟೇ ಹುರುಪಿನಿಂದ ಮಾನವ ಶರೀರವಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಜೀರ್ಣ ಕ್ರಿಯೆ ನಡೆಯುತ್ತದೆ ಆದರೆ ನೆನಪು ದುರ್ಬಲವಾಗುತ್ತಿರುವ ಕಾರಣದಿಂದಾಗಿ, ಒಂದು ಜೀವ ಇನ್ನೊಂದು ಜೀವವಾಗಿ ಪರಿವರ್ತನೆಯಾಗುವ ಪ್ರಕ್ರಿಯೆ ಅಷ್ಟು ಚೆನ್ನಾಗಿ ನಡೆಯುವುದಿಲ್ಲ.

ನೀವು ಮೂವತ್ತೈದು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ದಿನಕ್ಕೆರಡು ಬಾರಿ ಊಟ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂಡ ಖಂಡಿತವಾಗಿಯೂ ಒಳ್ಳೆಯದು.

ದೇಹ ಕ್ರಮೇಣವಾಗಿ ಈ ನಿಧಾನಗತಿಗೆ ಒಗ್ಗಿಕೊಳ್ಳುತ್ತದೆ. ಆದರೆ ನೀವು ಏನನ್ನು ತಿನ್ನುತ್ತೀರಿ ಮತ್ತು ಹೇಗೆ ತಿನ್ನುತ್ತೀರಿ ಎನ್ನುವುದರ ಬಗ್ಗೆ ಜಾಗೃತರಾಗಿದ್ದರೆ, ನೀವದಕ್ಕೆ ಹೆಚ್ಚು ಸಂವೇದನಾಶೀಲವಾದ ರೀತಿಯಲ್ಲಿ ಹೊಂದಿಕೊಳ್ಳಬಹುದು. ನೀವು ದೈಹಿಕವಾಗಿ ಅಷ್ಟೇನು ಸಕ್ರಿಯವಾದ ವ್ಯಕ್ತಿಯಲ್ಲದಿದ್ದರೆ ಅಥವಾ ನಿಮಗೆ ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲದಿದ್ದರೆ ಮತ್ತು ನೀವು ಮೂವತ್ತೈದು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ದಿನಕ್ಕೆರಡು ಬಾರಿ ಊಟ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂಡ ಖಂಡಿತವಾಗಿಯೂ ಒಳ್ಳೆಯದು. ನೀವು ಹೆಚ್ಚು ತಿನ್ನುತ್ತಿದ್ದರೆ, ನೀವು ಅನಗತ್ಯವಾಗಿ ನಿಮ್ಮ ವ್ಯವಸ್ಥೆಯ ಮೇಲೆ ಹೊರೆ ಹಾಕುತ್ತಿದ್ದೀರಿ ಎಂದರ್ಥ. ನಿಮ್ಮ ಲಂಬವಾದ ಬೆಳವಣಿಗೆ ಸಂಪೂರ್ಣವಾಗಿ ನಿಂತು ಹೋಗಿರುವ ಕಾರಣ, ನಿಮಗೆ ಆಹಾರದ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ. ಸ್ವಲ್ಪ ಹಸಿವೆ ಅಥವಾ ಸುಸ್ತು ಎಂದು ನಿಮಗನಿಸಿದರೆ, ಮಧ್ಯದಲ್ಲಿ ಒಂದು ಹಣ್ಣನ್ನು ತಿಂದರೆ ಸಾಕಾಗುತ್ತದೆ. ಇದನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗಿದ್ದೇ ಆದರೆ, ನೀವು ತುಂಬ ಚೆನ್ನಾಗಿ ಬದುಕುತ್ತೀರಿ. ಇದು ಮಿತವ್ಯಯಕಾರಿ ಹಾಗೂ ಪರಿಸರ-ಸ್ನೇಹಿ ಕೂಡ ಹೌದು. ಜೊತೆಗೆ ನೀವು ಆರೋಗ್ಯವಾಗಿರುತ್ತೀರಿ.

#4 ಶರೀರವನ್ನು ಸುಸಂಘಟಿತವಾಗಿಟ್ಟುಕೊಳ್ಳುವುದು

ಒಂದು ಅರ್ಥದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ, ನಿಮ್ಮ ಶರೀರ ಮತ್ತು ಮನಸ್ಸಿಗೆ ಒಂದು ರೀತಿಯ ಸುಸಂಘಟಿತವಾದ ಭಾವವನ್ನು ತಂದುಕೊಳ್ಳುವುದಾಗಿದೆ. ನಿಮ್ಮ ವ್ಯವಸ್ಥೆ ಒಂದು ನಿರ್ದಿಷ್ಟ ರೀತಿಯಲ್ಲಿ ಬಿಗಿಯಾಗಿಲ್ಲವಾದರೆ, ಅದು ಸಡಿಲವಾಗಿದ್ದರೆ, ಯಾವುದೇ ವಿಷಯವನ್ನಾದರೂ ಅನುಭವಕ್ಕೆ ತಂದುಕೊಳ್ಳುವಲ್ಲಿ ಅದು ಅಸಮರ್ಥವಾಗುತ್ತದೆ. ಎಷ್ಟೇ ಅದ್ಭುತವಾದ ಸಂಗತಿಗಳು ನಡೆದರೂ ಸಹ ನೀವದನ್ನು ತಿಳಿಯದೇ ಹೋಗುತ್ತೀರಿ. ಹಾಗಾಗಿಯೇ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ನಿಮ್ಮೊಳಗೆ ಒಂದು ಮಟ್ಟದ ಶಾರೀರಿಕ ಹಾಗೂ ಮಾನಸಿಕ ದೃಢತೆಯನ್ನು ತರುವಂತೆ ಮಾಡಿ, ನಿಮ್ಮ ಅನುಭವ ಹೊಂದುವ ಸಾಮರ್ಥ್ಯವನ್ನು ಉತ್ತಮವಾಗಿಸುವ ರೀತಿಯಲ್ಲಿ ರೂಪಿಸಲಾಗಿದೆ. 

ಯೋಗಿಗಳು ಅಥವಾ ಸಾಧನೆಯ ಮಾರ್ಗದಲ್ಲಿರುವವರು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನುವ ಮತ್ತು ನಡುವಿನಲ್ಲಿ ಏನನ್ನೂ ತಿನ್ನದಿರುವ ಉದ್ದೇಶವೆಂದರೆ, ಅವರು ಅವರ ದೇಹವನ್ನು ಬೇರೆ ಇನ್ನೇನಕ್ಕೂ ತೆರೆಯಲು ಇಷ್ಟ ಪಡುವುದಿಲ್ಲ.

ನಿಮಗೆ ಯಾವುದೇ ವಿಷಯಗಳ ಬಗ್ಗೆ ಅನುಭವವನ್ನು ಹೊಂದಲು ಇರುವ ಏಕೈಕ ಸಾಧನವೆಂದರೆ ಅದು ನಿಮ್ಮ ದೇಹ ಮಾತ್ರ. ನೀವು ಮನಸ್ಸು ಎಂದು ಹೇಳಬಹುದು, ಆದರೆ ಅದೂ ಕೂಡ ದೇಹವೇ ಆಗಿದೆ. ನಿಮ್ಮ ದೇಹವನ್ನು ಹೊರಗಿನ ಯಾವುದಕ್ಕೋ ಒಡ್ಡುವ ಪ್ರಕ್ರಿಯೆಯಲ್ಲಿ ನೀವು ಅದರ ದೃಢತೆಯನ್ನು ಸಡಿಲಗೊಳಿಸುತ್ತೀರಿ. ಇದು ಜನರು ಅರ್ಥ ಮಾಡಿಕೊಂಡಿಲ್ಲದೇ ಇರುವಂತಹ ವಿಚಾರ. ಹೊರಗಿನ ವಿಷಯಗಳನ್ನು ಸ್ವೀಕರಿಸಲು ದಿನವೊಂದಕ್ಕೆ ನೀವು ನಿಮ್ಮ ದೇಹವನ್ನು ಎಷ್ಟು ಬಾರಿ ತೆರೆಯುತ್ತೀರಿ ಎನ್ನುವುದು ನಿಮ್ಮ ಜೀವಿತಾವಧಿಯನ್ನೂ ಸಹ ನಿರ್ಧರಿಸುತ್ತದೆ. ನೀವು ನಿಮ್ಮ ದೇಹವನ್ನು ಹೊರಗಿನ ಪದಾರ್ಥಗಳಿಗೆ ಪದೇ ಪದೇ ಒಡ್ಡುತ್ತಿದ್ದರೆ, ನೀವು ನಿಮ್ಮ ಜೀವವ್ಯವಸ್ಥೆಯ ಸಂಘಟನೆಯನ್ನು ದುರ್ಬಲಗೊಳಿಸುತ್ತೀರಿ. ಅಂತಹ ದೃಢತೆ ಇಲ್ಲದಿದ್ದಾಗ ಶರೀರಕ್ಕೆ ಏನನ್ನೂ ಮಾಡಲಾಗದು. ದೃಢತೆ ಇಲ್ಲದಿದ್ದಾಗ ಯಾವುದರೊಂದಿಗೂ ಅರ್ಥಪೂರ್ಣ ಸಂಪರ್ಕ ಸಾಧ್ಯವಾಗುವುದಿಲ್ಲ. ನೀವು ಹೇಗೋ ಒಂದು ರೀತಿಯಲ್ಲಿ ಬದುಕಿರುತ್ತೀರಿ ಅಷ್ಟೆ. ಅದಕ್ಕಿಂತ ಹೆಚ್ಚಿಗೆ ಮತ್ತಿನ್ನೇನೂ ಆಗುವುದಿಲ್ಲ.

ಯೋಗಿಗಳು ಅಥವಾ ಸಾಧನೆಯ ಮಾರ್ಗದಲ್ಲಿರುವವರು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನುವ ಮತ್ತು ನಡುವಿನಲ್ಲಿ ಏನನ್ನೂ ತಿನ್ನದಿರುವ ಉದ್ದೇಶವೆಂದರೆ, ಅವರು ಅವರ ದೇಹವನ್ನು ಬೇರೆ ಇನ್ನೇನಕ್ಕೂ ತೆರೆಯಲು ಇಷ್ಟ ಪಡುವುದಿಲ್ಲ. ಗಾಳಿ ಮತ್ತು ನೀರಿನ ವಿನಃ ಬೇರೆ ಯಾವುದೇ ಬಾಹ್ಯ ಅಂಶಗಳು ಅವರ ದೇಹವನ್ನು ಆಗಿಂದಾಗ್ಗೆ ಸೇರಬಾರದು, ಏಕೆಂದರೆ ಸೂಕ್ಷತೆಯ ದೃಷ್ಟಿಯಿಂದ, ಅದು ಅವರ ವ್ಯವಸ್ಥೆಯ ಸಂಯೋಜನೆಯನ್ನು ಸಡಿಲವಾಗಿಸುತ್ತದೆ. ನೀವು ಯಾರೆಂಬುದರ ತೀರ ಹೊರಗಿನ ಪದರವೇ ಸಂವೇದನೆ. ನೀವು ನಿಮ್ಮನ್ನು ಅತಿ ಸೂಕ್ಷ್ಮಗ್ರಾಹಿಗಳಾಗಿ ಇಟ್ಟುಕೊಳ್ಳಲು ಬಯಸುವಿರಾದರೆ, ನಿಮ್ಮ ಹಾದಿಯಲ್ಲಿ ಎದುರಾಗುವ ಯಾವುದಕ್ಕೂ ಮತ್ತು ಎಲ್ಲದಕ್ಕೂ ನಿಮ್ಮ ದೇಹವನ್ನು ಒಡ್ಡದೇ ಇರುವುದು ಬಹಳ ಮುಖ್ಯ. ನೀವು ಖಂಡಿತವಾಗಿ ಚೆನ್ನಾಗಿ ತಿನ್ನಬೇಕು. ಇಲ್ಲಿ ವಿಷಯ ಅದಲ್ಲ. ಆದರೆ ನೀವು ಪದೇ ಪದೇ ತಿನ್ನುತ್ತಲೇ ಇರಬಾರದು.

#5 ಪ್ರಚೋದನೆಯ ಸ್ಥಿತಿಯಿಂದ ಪ್ರಜ್ಞಾಪೂರ್ವಕ ಸ್ಥಿತಿಗೆ

Sadhguru along with Isha Home School students saying the invocation before eating at Bhiksha Hall | 5 Reasons Why You Shouldn’t Be Snacking Between Meals

 

ನಿಮಗೆ ತಿನ್ನಬೇಕೆನಿಸಿದಾಗ ತಿನ್ನದೇ ಇರುವುದು ಸಾಧನೆಯ ಒಂದು ಭಾಗ. ಆಹಾರ ಅಥವಾ ಜೀವನದ ಯಾವುದೇ ವಿಷಯದಲ್ಲಾದರೂ ಸರಿಯೇ, ನಿಮಗೆ ಬೇಕೇ ಬೇಕು ಎನ್ನುವ ಪ್ರಚೋದನಾತ್ಮಕ ಸ್ಥಿತಿಯಿಂದ ನೀವು ಹೊರಬರಬೇಕು. ಆಹಾರವೆನ್ನುವುದು ತೀರಾ ಮೂಲಭೂತವಾದ ವಿಷಯ. ಇದನ್ನು ಆಧರಿಸಿ, ಜೀವನದ ಇನ್ನೂ ಹಲವಾರು ಅಂಶಗಳು ಪ್ರಚೋದನೆಗೆ ಒಳಪಡುತ್ತವೆ. 

ನಿಮ್ಮಲ್ಲಿ ಅನೇಕರು ಆಶ್ರಮಕ್ಕೆ ಬಂದಾಗ ಈ ಚಿತ್ರಹಿಂಸೆಯನ್ನು ಅನುಭವಿಸಿರಬಹುದು. ಅದು ಊಟದ ಸಮಯ. ನೀವು ಆಗಲೇ ಹಸಿದಿರುತ್ತೀರಿ ಮತ್ತು ಭಿಕ್ಷಾಹಾಲ್‌ಗೆ ಬರುತ್ತೀರಿ. ನಿಮ್ಮ ಮುಂದೆ ಊಟ ಇದೆ. ಅದನ್ನು ಗಬಗಬನೆ ತಿನ್ನಲು ಮನಸ್ಸು ಹಾತೊರೆಯುತ್ತಿದೆ. ಆದರೆ ಜನರು ಕಣ್ಣು ಮುಚ್ಚಿಕೊಂಡು, ಪ್ರಾರ್ಥನೆಗಾಗಿ ಕೈಗಳನ್ನು ಜೋಡಿಸುತ್ತಿದ್ದಾರೆ. ನಿಮಗೆ ವಿಪರೀತ ಹಸಿವಾಗಿದೆ ಆದರೂ ಸಹ ನೀವು ಇನ್ನೆರಡು ನಿಮಿಷಗಳ ಕಾಲ ಕಾಯಲಿ ಎನ್ನುವುದೇ ಇದರ ಹಿಂದಿನ ಉದ್ದೇಶ. ನಿಮಗೆ ವಿವಶತೆಯನ್ನುಂಟು ಮಾಡುವ ಪ್ರತಿಯೊಂದು ವಿಷಯದ ಜೊತೆ ನೀವು ಹೀಗೆ ಮಾಡಲು ಪ್ರಯತ್ನ ಮಾಡಿ ನೋಡಿ. ನೀವು ಯಾವುದರ ಬಗ್ಗೆ ವಿವಶತೆಯನ್ನು ಹೊಂದಿರುತ್ತೀರೋ, ಅದರ ಬಗ್ಗೆ ಕೇವಲ ಎರಡು ನಿಮಿಷ ಕಾಯಿರಿ. ಅದು ನಿಮ್ಮನ್ನೇನು ಕೊಲ್ಲುವುದಿಲ್ಲ. ಬದಲಾಗಿ ಅದು ನಿಮ್ಮನ್ನು ಇನ್ನೂ ಬಲಶಾಲಿಯಾಗಿಸುತ್ತದೆ.
 

ಆಹಾರವೆನ್ನುವುದು ತೀರಾ ಮೂಲಭೂತವಾದ ಮತ್ತು ಸರಳವಾದ ಸಂಗತಿ. ಆದರೂ, ನೀವದನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದು ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ.

ದೇಹದ ಆ ಪ್ರಚೋದನೆಯನ್ನು ತೆಗೆದುಹಾಕುವುದು ತುಂಬ ಮಹತ್ವವಾದದ್ದು. ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಒಂದು ಸಂಯೋಜನೆಯಾಗಿದೆ. ಹಿಂದಿನ ಎಲ್ಲಾ ತರಹದ ಕುರುಹುಗಳು ನಿಮ್ಮಲ್ಲಿನ ಪ್ರವೃತ್ತಿಗಳನ್ನು ಸೃಷ್ಟಿಸಿವೆ ಮತ್ತು ಅವು ಪ್ರಚೋದನಾತ್ಮಕವಾಗಿವೆ. ನೀವು ಅವುಗಳ ಜೊತೆ ಹೋಗುವಿರಾದರೆ, ನೀವು ವಿಕಸನ ಹೊಂದದೇ ಇರಲು ನಿರ್ಧರಿಸಿದ್ದೀರಿ ಎಂದರ್ಥ. ಅವೇ ಮಾದರಿಗಳನ್ನು ಅನುಸರಿಸಿ ಬದುಕಲು ನಿಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ನೀವು ನಿರ್ಧರಿಸಿದ್ದೀರಿ. ಆ ಮಾದರಿಗಳನ್ನು ಮುರಿದು ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದು ನಿಮಗೆ ಬೇಕಾಗಿಲ್ಲ.

ಆಹಾರವೆನ್ನುವುದು ತೀರಾ ಮೂಲಭೂತವಾದ ಮತ್ತು ಸರಳವಾದ ಸಂಗತಿ. ಆದರೂ, ನೀವದನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವುದು ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ. ನಿಮ್ಮ ಅಂತರಾಳದಿಂದ ನಿಮ್ಮನ್ನು ಆಳುತ್ತಿರುವ, ನಿಮ್ಮೊಳಗೆ ಈಗಾಗಲೇ ಇರುವಂತಹ ಮಾಹಿತಿಯಿಂದ ನಿಮ್ಮನ್ನು ನೀವು ನಿಧಾನವಾಗಿ ದೂರವಾಗಿಸಿಕೊಳ್ಳುವ ಮೂಲಕ ಹೆಚ್ಚು ಪ್ರಜ್ಞಾಪೂರ್ವಕವಾದ ಬದುಕನ್ನು ಬದುಕುವ ಕಡೆಗೆ ಇದೊಂದು ಪಯಣ. ಬಂಧನಗಳು ಬೇರೆಬೇರೆ ವಿವಿಧ ಮಟ್ಟಗಳಲ್ಲಿವೆ. ಆದರೆ ನಿಮ್ಮೆಲ್ಲಾ ಬಂಧನಗಳ ತಳಹದಿ ನಿಮ್ಮ ದೇಹವೇ ಆಗಿದೆ. ಆದ್ದರಿಂದ, ನೀವು ನಿಮ್ಮ ದೇಹದ ಜೊತೆ ಕೆಲಸ ಮಾಡಬೇಕು.
 

ನಿಮಗೆ ತಿನ್ನಬೇಕೆನಿಸಿದಾಗ ತಿನ್ನದೇ ಇರುವುದು ಸಾಧನೆಯ ಒಂದು ಭಾಗ. ಆಹಾರ ಅಥವಾ ಜೀವನದ ಯಾವುದೇ ವಿಷಯದಲ್ಲಾದರೂ ಸರಿಯೇ, ನಿಮಗೆ ಬೇಕೇ ಬೇಕು ಎನ್ನುವ ಪ್ರಚೋದನಾತ್ಮಕ ಸ್ಥಿತಿಯಿಂದ ನೀವು ಹೊರಬರಬೇಕು.

ಗೌತಮ ಬುದ್ಧ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ”ನೀವು ತುಂಬಾ ಹಸಿದಿದ್ದಾಗ ಮತ್ತು ಆಹಾರದ ಅವಶ್ಯಕತೆ ನಿಮಗೆ ಬಹಳವಾಗಿದ್ದಾಗ, ನೀವು ನಿಮ್ಮ ಆಹಾರವನ್ನು ಬೇರೆ ಯಾರಿಗಾದರೂ ಕೊಟ್ಟುಬಿಟ್ಟರೆ, ನೀವು ಹೆಚ್ಚು ಬಲಶಾಲಿಯಾಗುತ್ತೀರಿ” ಎಂದು ಹೇಳಿದ. ನಾನು ಅಷ್ಟು ದೂರ ಹೋಗುತ್ತಿಲ್ಲ. ನಾನು ಹೇಳುತ್ತಿರುವುದು ”ಕೇವಲ ಎರಡು ನಿಮಿಷ ಕಾಯಿರಿ” ಎಂದು. ಅದು ನಿಮ್ಮನ್ನು ಖಂಡಿತವಾಗಿಯೂ ಬಲಶಾಲಿಯಾಗಿಸುತ್ತದೆ. 

ಸಂಪಾದಕರ ಟಿಪ್ಪಣಿ: "Food Body" - ಈ ಇಬುಕ್ ದೇಹಕ್ಕೆ ಅತ್ಯಂತ ಆರಾಮದಾಯಕವಾದ ಆಹಾರಗಳನ್ನು ಮತ್ತು ಅವುಗಳನ್ನು ಸೇವಿಸುವ ಸೂಕ್ತವಾದ ರೀತಿಗಳನ್ನು ತಿಳಿಸಿಕೊಡುತ್ತದೆ. ಈ 33 ಪುಟಗಳ ಪುಸ್ತಕವು ನಿಮ್ಮ ದೇಹಕ್ಕೆ ಗಮನವನ್ನು ನೀಡಿ, ಅದಕ್ಕೆ ಸರಿಹೊಂದುವುದೇನು ಎಂದು ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

Download Food Body