ಪ್ರಶ್ನೆ: ನಾನು ಆಧ್ಯಾತ್ಮಿಕ ಪಥದಲ್ಲಿ ಮುಂದುವರೆದಷ್ಟೂ ಹೆಚ್ಚು ಗೊಂದಲಗೊಳ್ಳುತ್ತೇನೆ. ಆದರೂ ಯಾವುದೊ ಒಂದು ರೀತಿಯ ಸ್ಪಷ್ಟತೆಯೂ ಇರುವಂತೆ ತೋರುತ್ತದೆ - ಒಂದು ಗೊಂದಲದಿಂದ ಕೂಡಿದ ಸ್ಪಷ್ಟತೆ. ಗೊಂದಲವೇ ಇಲ್ಲದ ಸ್ಪಷ್ಟತೆ ಇರುವ ಸಮಯ ಬರುತ್ತದೆಯೇ, ಹಾಗಿದ್ದರೆ, ನಾನು ಅದನ್ನು ಹೇಗೆ ಸೃಷ್ಟಿಸಿಕೊಳ್ಳುವುದು?

ಸದ್ಗುರು: ನೀವು ಹೆಚ್ಚೆಚ್ಚು ಅಧ್ಯಾತ್ಮಿಕತೆಯನ್ನು ಅರಸಿದಾಗ ಮತ್ತಷ್ಟು ಗೊಂದಲಕ್ಕೆ ಒಳಗಾಗುವಿರಿ. ಅದೊಂದು ಒಳ್ಳೆಯ ಸೂಚನೆಯಾಗಿದೆ. ಏಕೆಂದರೆ, ಈ ಗೊಂದಲದ ಸ್ಥಿತಿಯಲ್ಲಿರುವುದು, ಒಂದು ದಡ್ಡತನದ ನಿರ್ಣಯದಲ್ಲಿ ಜೀವಿಸುವುದಕ್ಕಿಂತಲೂ ಒಳ್ಳೆಯ ಸ್ಥಿತಿಯಾಗಿದೆ. ನೀವು ಜೀವನದಲ್ಲಿ ಮಾಡಿದ ದಡ್ಡತನದ ನಿರ್ಣಯಗಳಲ್ಲಿ ನಿಮಗೊಂದು ರೀತಿಯ ನೆಮ್ಮದಿ, ಸಮಾಧಾನ ಮತ್ತು ಅನುಕೂಲತೆಗಳಿದ್ದವು

ಆದರೆ ಒಮ್ಮೆ ನೀವು ಅಧ್ಯಾತ್ಮಿಕ ಪಥದಲ್ಲಿ ಕಾಲಿರಿಸಿದಾಗ, ಎಲ್ಲವೂ ಗೊಂದಲಮಯವಾಗುತ್ತವೆ. ನೀವು ಎಲ್ಲದರೊಡನೆ ಹೊಂದಿದ್ದ ನೆಮ್ಮದಿ ಈಗ ಮೂರ್ಖತನವೆನಿಸುತ್ತದೆ. ನೀವು ಎಲ್ಲ ವಿಷಯಗಳೊಂದಿಗೆ ಇರಿಸಿಕೊಂಡಿದ್ದ ಮೌಲ್ಯಗಳು ಹಾಗೂ ಮಾನ್ಯತೆಗಳು ಒಮ್ಮೆಗೇ ಅರ್ಥಹೀನವಾಗಿ ಯೋಗ್ಯವಲ್ಲವೆನಿಸುತ್ತದೆ. ಜ಼ೆನ್‌ನಲ್ಲಿ ಒಂದು ಸುಂದರವಾದ ಮಾತಿದೆ. ನೀವು ಅಜ್ಞಾನಿಗಳಾಗಿದ್ದಾಗ ಪರ್ವತಗಳು, ನದಿಗಳು, ಮೋಡಗಳು, ಮರಗಳು ಎಲ್ಲವೂ ಅವುಗಳಿದ್ದ ಹಾಗೆಯೇ ತೋರುತ್ತವೆ. ಒಮ್ಮೆ ನೀವು ಅಧ್ಯಾತ್ಮಿಕ ಪಥವನ್ನು ಪ್ರವೇಶಿಸಿದಾಗ, ಪರ್ವತಗಳು ಕೇವಲ ಪರ್ವತಗಳೇ ಆಗಿರುವುದಿಲ್ಲ, ನದಿಗಳು ಕೇವಲ ನದಿಗಳೇ ಆಗಿರುವುದಿಲ್ಲ. ಮೋಡಗಳು ಕೇವಲ ಮೋಡಗಳೇ ಆಗಿರುವುದಿಲ್ಲ, ಆದರೆ ಒಮ್ಮೆ ನಿಮಗೆ ಜ್ಞಾನೋದಯವಾದಾಗ, ಮತ್ತೊಮ್ಮೆ ಎಲ್ಲವೂ ಅವುಗಳಿದ್ದ ಹಾಗೆಯೇ ತೋರುತ್ತವೆ. ಅಜ್ಞಾನದಿಂದ ಜ್ಞಾನೋದಯದವರೆಗೆ ಒಂದು ಸಂಪೂರ್ಣ ವೃತ್ತವಾಗಿ ಅದೇ ಸ್ಥಳಕ್ಕೆ ಬಂದು ಸೇರುತ್ತದೆ, ಆದರೆ ಅಲ್ಲೊಂದು ಅಗಾಧವಾದ ವ್ಯತ್ಯಾಸವಿರುತ್ತದೆ, ವಿವರಿಸಲಾಗದಂತಹ ವ್ಯತ್ಯಾಸವಿರುತ್ತದೆ.

ನಿಮ್ಮ ನರಳುವಿಕೆಯ ಬಗ್ಗೆ ಅರಿವಿನಿಂದ ಇರುವುದು

ಒಮ್ಮೆ ನೀವು ಅಧ್ಯಾತ್ಮಿಕ ಪಥವನ್ನು ಪ್ರವೇಶಿಸಿದರೆ, ಎಲ್ಲವನ್ನೂ ಪ್ರಶ್ನಿಸುವಂತಿರುತ್ತದೆ. ನೀವು ಎಲ್ಲಿ ಸ್ಥಿತರಾಗಿರುವಿರಿ ಎನ್ನುವುದೇ ನಿಮಗೆ ತಿಳಿದಿರುವುದಿಲ್ಲ. ಅಧ್ಯಾತ್ಮಿಕತೆಯ ಕುರಿತು ಎನನ್ನಾದರೂ ತಿಳಿದುಕೊಳ್ಳುವ ಮುನ್ನ ನೀವು ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಇದ್ದಿರಿ, ಸಂತೃಪ್ತಿಯಿಂದಿದ್ದಿರಿ. ನೀವು ಬೆಳಗಿನ ತಿಂಡಿ ತಿಂದಿರಿ, ಕಾಫಿ ಕುಡಿದಿರಿ, ಅದನ್ನೇ ಸರ್ವೋತ್ಕೃಷ್ಟವೆಂದು ತಿಳಿದಿರಿ. ಈಗ ಅವೆಲ್ಲ ಏನೂ ಅಲ್ಲ ಎಂದೆನುಸುತ್ತಿದೆ. ನಿಮಗೆ ತಿನ್ನುವುದಕ್ಕಾಗಲಿ, ಮಲಗುವುದಕ್ಕಾಗಲಿ ಅಥವಾ ಏನನ್ನಾದರು ಮಾಡುವುದಕ್ಕಾಗಲಿ ಇಷ್ಟವಾಗುತ್ತಿಲ್ಲ, ಏಕೆಂದರೆ, ನಿಮಗೆ ಯಾವುದೂ ವಾಸ್ತವದಲ್ಲಿ ಯೋಗ್ಯವೆನಿಸುತ್ತಿಲ್ಲ. ಅದು ಎಂದಿಗೂ ಯೋಗ್ಯವಾಗಿರಲಿಲ್ಲ. ಅದು ಯೋಗ್ಯವೆಂದು ನಂಬಿ ನಿಮಗೆ ನೀವೇ ವಂಚಿಸಿಕೊಂಡಿದ್ದೀರಿ ಅಷ್ಟೆ. ಅದು ಯೋಗ್ಯವಾಗಿದ್ದಿದ್ದರೆ, ಅದು ಏಕೆ ದೂರ ಸರಿಯುತ್ತಿತ್ತು? ನಿಮಗೆ ನಿಜವಾಗಿಯೂ ಯಾವುದು ಏನು ಎಂದು ತಿಳಿದಿದ್ದರೆ, ನೀವೇಕೆ ಕಂಗೆಡುತ್ತಿದ್ದಿರಿ? ನೀವೇಕೆ ಕೆಂಗೆಟ್ಟಿರುವಿರೆಂದರೆ, ನಿಮಗದರ ಅರಿವಿರಲಿಲ್ಲವೆಂದರ್ಥ. ನೀವು ನಿಮ್ಮ ಅನುಕೂಲತೆ ಮತ್ತು ರಕ್ಷಣೆಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಿರಿ.

IEO

ನೀವು ಬದುಕಿನಲ್ಲಿ ಕೇವಲ ಸೌಕರ್ಯಗಳನ್ನೇ ಎದುರು ನೋಡುತ್ತಿದ್ದರೆ, ನೀವು ನೀವಾಗಿಯೇ ಪರಿಪೂರ್ಣರು, ನಿಮ್ಮ ಬದುಕಿನಲ್ಲಿ ಎಲ್ಲವೂ ಸರಿಯಾಗಿದೆಯೆಂದು ನಂಬಲು ಸಿದ್ಧರಾಗುವಿರಿ. `ನನ್ನ ಮನೆಯು ಚೆನ್ನಾಗಿದೆ, ನನ್ನ ಸಂಗಾತಿ ಉತ್ತಮ, ನನ್ನ ಮಕ್ಕಳು ಚೆನ್ನ, ನನ್ನ ನಾಯಿಯೂ ಸಹ ಅದ್ಭುತವಾಗಿದೆ, ನನ್ನ ಜೀವನ ಶ್ರೇಷ್ಠ! ಇದು ಹೀಗೆಯೇ ಇದೆ. ಇದುವೇ ಜೀವನ’. ನೀವು ಪ್ರತಿದಿನವೂ ಇದನ್ನೇ ಹೇಳುತ್ತಾ ಹೋಗಬೇಕು. ಅದು ಸರಿಯಾಗಿಯೇ ಇರುತ್ತದೆ, ಅದರಲ್ಲಿ ತಪ್ಪೇನಿಲ್ಲ. ಅದು ಕೇವಲ ಮಿತಿಯಲ್ಲಿದೆಯಷ್ಟೆ, ಆದರೆ ಈ ಶರೀರವು ಈ ಮಿತಿಯಲ್ಲಿ ತನ್ನನ್ನು ಇರಿಸಿಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ. ನೀವು ನಿಮ್ಮನ್ನು ಎಷ್ಟೇ ರೀತಿಯಲ್ಲಿ ಮೂರ್ಖರಾಗಿಸಿಕೊಳ್ಳಲು ಪ್ರಯತ್ನಿಸಿದರೂ, ಎಲ್ಲಿಯೋ ಒಂದು ಆಕಾಂಕ್ಷೆ ಇದ್ದೇ ಇರುತ್ತದೆ. ನಿಮ್ಮ ಜೀವನದಲ್ಲಿ ನಿಮಗೆ ತಿಳಿದ ಎಲ್ಲ ಸಂತೋಷದ ಸಂದರ್ಭಗಳನ್ನು ಎಚ್ಚರಿಕೆಯಿಂದ ಅವಲೋಕಿಸಿ. ಮೇಲ್ನೋಟಕ್ಕೆ ಸಂತೋಷವಿರುತ್ತದೆ. ಆದರೆ, ನಿಮ್ಮ ಅಂತರಾಳದಲ್ಲಿ ಎಲ್ಲದರಲ್ಲಿಯೂ ಏನೋ ನಿರ್ದಿಷ್ಟ ನರಳುವಿಕೆ ಇರುತ್ತದೆ. ಆ ನರಳುವಿಕೆಯು ಏಕೆಂದರೆ, ನಿಮ್ಮ ಅದುಮಿಟ್ಟ ಅಸ್ತಿತ್ವವು ಸದಾ ಹಂಬಲಿಸುತ್ತಿರುತ್ತದೆ; ಈ ನರಳುವಿಕೆಯನ್ನು ಪ್ರಜ್ಞಾಯುತವಾಗಿ ಅರಿಯಬೇಕಾದರೆ, ಜನರು ಜನ್ಮಗಳನ್ನೇ ತೆಗೆದುಕೊಳ್ಳುತ್ತಾರೆ.

ಅಧ್ಯಾತ್ಮಿಕ ಪಥವನ್ನು ಪ್ರವೇಶಿಸುವುದೆಂದರೆ, ನೀವು ನಿಮ್ಮ ನರಳುವಿಕೆಗೆ ಪ್ರಜ್ಞಾಪೂರ್ವಕವಾಗಿರುವಿರಿ ಎಂದರ್ಥ. ನೀವು ಪ್ರಜ್ಞಾರಹಿತರಾಗಿ ನೋವನ್ನು ಅನುಭವಿಸುತ್ತಿದ್ದಿರಿ. ಈಗ ನಿಮಗೆ ಅದರ ಅರಿವಾಗಿದೆ. ಪ್ರಜ್ಞಾಯುತ ನೋವು, ಪ್ರಜ್ಞಾರಹಿತ ನೋವಿಗಿಂತಲೂ ತೀವ್ರವಾಗಿರುತ್ತದೆ. ಆದರೆ ಅದು ಒಳ್ಳೆಯದು, ಏಕೆಂದರೆ, ನಿಮಗೆ ಅದರ ಕುರಿತಾಗಿ ಅರಿವಿದೆ. ನಿಮಗೆ ಅರಿವಿಲ್ಲದೇ ಇದ್ದಾಗಲೂ ನರಳುವಿಕೆಯು ಹಾಗೆಯೇ ಇರುತ್ತದೆ. ಒಮ್ಮೆ ನೀವು ಪ್ರಜ್ಞಾಯುತರಾದರೆ, ಅದು ಅಲ್ಲಿ ಉಳಿಯುವ ಅಗತ್ಯವಿಲ್ಲ. ಅಲ್ಲೊಂದು ಸಾಧ್ಯತೆ ಇದೆಯಲ್ಲವೇ?

ಅಧ್ಯಾತ್ಮಿಕ ಪಥವನ್ನು ಪ್ರವೇಶಿಸುವುದೆಂದರೆ, ನೀವು ನಿಮ್ಮ ನರಳುವಿಕೆಗೆ ಪ್ರಜ್ಞಾಪೂರ್ವಕವಾಗಿರುವಿರಿ ಎಂದರ್ಥ.

ಅಧ್ಯಾತ್ಮಿಕ ಪಥದ ಪ್ರವೇಶವು ಒಂದು ಸಾಧ್ಯತೆ, ಒಬ್ಬ ಗುರುವಿನೊಡನೆ ಇರುವುದು ಒಂದು ಸಾಧ್ಯತೆ. ಈ ಸಾಧ್ಯತೆಯು ಸಾಕಾರವಾಗಬೇಕಾದರೆ, ಮೊಟ್ಟ ಮೊದಲನೆಯದಾಗಿ ಎಲ್ಲವನ್ನು ಯಥಾಸ್ಥಿತಿಯಲ್ಲಿ ನೋಡಲು ಇಚ್ಛಿಸಬೇಕು. ನೀವು ಕನಿಷ್ಠ ನಿಮ್ಮ ಮಿತಿಗಳನ್ನು ಒಪ್ಪಿಕೊಳ್ಳಲು ಸಿದ್ಧರಿರಬೇಕು. ನೀವು ನಿಮ್ಮ ಮಿತಿಗಳನ್ನು ಮುಚ್ಚಿಡಲು ಇಚ್ಛಿಸಿದರೆ, ಮುಕ್ತಿಯ ಪ್ರಶ್ನೆ ಎಲ್ಲಿದೆ? ನೀವು ಆ ಸಾಧ್ಯತೆಯನ್ನು ಸಂಪೂರ್ಣವಾಗಿ ನಾಶಗೊಳಿಸುವಿರಿ. ನೀವು ಈಗ ಸಂಕೋಲೆಗಳಿಂದ ಬಂಧಿತರಾಗಿದ್ದು ಬಿಡುಗಡೆಯು ಬೇಕೆಂದರೆ, ನೀವು ಗಮನಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ನಿಮ್ಮ ಸಂಕೋಲೆಗಳು. ನೀವು ಬಂಧಿತರಾಗಿರುವುದನ್ನೇ ನೀವು ಒಪ್ಪಿಕೊಳ್ಳದಿದ್ದರೆ, ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರಶ್ನೆ ಎಂದಿಗೂ ಉದ್ಭವಿಸುವುದಿಲ್ಲ.

ನೀವು ಸಂಕೋಲೆಗಳೊಂದಿಗೆ ಬಂಧಿತರಾಗಿರುವುದನ್ನು ಅರಿತುಕೊಂಡಾಗ ಅಲ್ಲಿ ನಿಮಗೆ ನೋವು, ನರಳುವಿಕೆ, ಗೊಂದಲಗಳು ಇರುತ್ತದೆ. ಹಳೆಯ ನೆನಪುಗಳು, ’ನಾನು ಹಿಂದೆಯೇ ಚೆನ್ನಾಗಿದ್ದೆ’ ಎಂದು ಹೇಳುತ್ತವೆ. ಇದು ನಿಮ್ಮ ಮನಸ್ಸಿನ ಸ್ಥಿತಿಯಾಗಿದೆ. ನೀವು ಹೈಸ್ಕೂಲಿನಲ್ಲಿರುವಾಗ, ನಿಮ್ಮ ಮನಸ್ಸು, ’ಓಹ್! ಶಿಶುವಿಹಾರ ಚೆನ್ನಾಗಿತು’, ಎಂದು ಹೇಳುತ್ತದೆ. ನೀವು ಶಿಶುವಿಹಾರಕ್ಕೆ ಹೇಗೆ ಹೋದಿರೆಂದು ನಿಮಗೆ ತಿಳಿದಿದೆ. ನೀವು ಕಾಲೇಜಿಗೆ ಹೋದಾಗ, ’ಓಹ್! ನನ್ನ ಹೈಸ್ಕೂಲ್ ದಿನಗಳು ಅದ್ಭುತವಾಗಿತ್ತು; ಎಂದು ಹೇಳುವಿರಿ. ಆದರೆ ನೀವು ಹೈಸ್ಕೂಲ್‌ನಲ್ಲಿ ಹೇಗಿದ್ದಿರೆಂಬುದು ನಮಗೆ ತಿಳಿದಿದೆ. ನಿಮ್ಮ ವಿದ್ಯಾಭ್ಯಾಸವು ಮುಗಿದಾಗ, ’ನನ್ನ ಯೂನಿವರ್ಸಿಟಿ ದಿನಗಳು ಬಲು ಆನಂದದ ದಿನಗಳಾಗಿದ್ದವು’, ಎಂದು ಹೇಳುವಿರಿ. ನೀವು ಅಲ್ಲಿ ನಿಮಗೆ ವಹಿಸಿದ ಕೆಲಸಗಳನ್ನು ಹೇಗೆ ಮಾಡಿದಿರಿ, ಲೈಬ್ರರಿಯಲ್ಲಿ ನಿಮಗೆ ಬೇಕಾದ ಪುಸ್ತಕಗಳಿಗಾಗಿ ಹುಡುಕಾಟ, ನೀವು ಆ ತರಗತಿಗಳಲ್ಲಿ ಕುಳಿತುಕೊಳ್ಳಲು ಹಾಗೂ ಪ್ರೊಫೆಸರುಗಳ ಪಾಠವನ್ನು ಕೇಳಲು ಪಟ್ಟಪಾಡು, ಇವನ್ನೆಲ್ಲ ನಾವು ಬಲ್ಲೆವು, ಆದರೆ ಈಗ ಅವೆಲ್ಲ ಮುಗಿದಮೇಲೆ ಆ ದಿನಗಳು ಅದ್ಭುತವಾಗಿದ್ದುವೆಂದು ಕೊಚ್ಚಿಕೊಳ್ಳುತ್ತಿದ್ದಿರಿ. ನಿಮ್ಮ ಬದುಕುಳಿಯುವ ತಂತ್ರದ ಒಂದು ಭಾಗವಾಗಿ, ನಿಮ್ಮ ನೆನಪಿನ ಶಕ್ತಿಯು ಕೆಲವು ಅಹಿತಕರ ವಿಷಯಗಳನ್ನು ಅಳಿಸಿಹಾಕುವ ಮತ್ತು ಹಿಂದಿನದನ್ನು ಈಗ ಇರುವದಕ್ಕಿಂತ ಹೆಚ್ಚು ಆಹ್ಲಾದಕರವಾಗಿಸುವ ವಿಧಾನವನ್ನು ಹೊಂದಿದೆ. ಇದು ಉಳಿವಿನ ಚಾತುರ್ಯವಾಗಿದೆ. ಇಲ್ಲದಿದ್ದಲ್ಲಿ, ಮಾನಸಿಕವಾಗಿ ನೀವು ನರದೌರ್ಬಲ್ಯ ಪೀಡಿತರಾಗುತ್ತಿದ್ದಿರಿ - ನೀವು ಯಾವಾಗಲೂ ಯಾವುದಾದರೊಂದನ್ನು ಅವಲಂಬಿಸಿ, ’ಓಹ್! ಅದು ಅದ್ಭುತವಾಗಿತ್ತು’ ಎಂದು ಹೇಳುವಿರಿ.

ಗೊಂದಲಮಯವಾದ ಸ್ಪಷ್ಟತೆ

ಆದರೆ ಇಲ್ಲೊಂದು ಗೊಂದಲಮಯವಾದ ಸ್ಪಷ್ಟತೆ ಇದೆ. ಅದು ಒಳ್ಳೆಯದಲ್ಲವೇ? ನೀವು ಗಲಿಬಿಲಿಗೊಂಡರೂ, ಸ್ಪಷ್ಟತೆಯಿದೆ. ಒಂದು ಬಾರಿ ಹೀಗಾಯ್ತು. ಒಬ್ಬ ರೈತ ಅವನ ಪ್ರಾಣಿಗಳನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕಲು ಒಂದು ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದನು. ದಾರಿಯಲ್ಲಿ ಸಿಕ್ಕಿದ ಒಬ್ಬ ಮನುಷ್ಯನನ್ನು ತನ್ನ ಗಾಡಿಯಲ್ಲಿ ಜೊತೆಗೆ ಕರೆದುಕೊಂಡು ಹೊರಟನು. ಪೇಟೆಗೆ ಹೋಗುವ ದಾರಿಯಲ್ಲಿ ಆ ರೈತನು ಸ್ವಲ್ಪ ಹೆಂಡವನ್ನು ಕುಡಿದು ಸರಿಯಾಗಿ ಗಾಡಿಯನ್ನು ಓಡಿಸಲಾಗದೆ ಒಂದು ದೊಡ್ಡ ಚರಂಡಿಗೆ ಡಿಕ್ಕಿ ಕೊಟ್ಟನು, ಗಾಡಿಯು ಉರುಳಿ ಬಿದ್ದು ಆ ಪ್ರಾಣಿಗಳೆಲ್ಲಾ ಹೊರೆಗೆ ಬಿದ್ದು ಚೆಲ್ಲಾಪಿಲ್ಲಿಯಾದವು. ಜೊತೆಗೆ ಬರುತ್ತಿದ್ದ ವ್ಯಕ್ತಿ ಹೊರಕ್ಕೆ ಬಿದ್ದು ಮೈಕೈಯಲ್ಲಿರುವ ಮೂಳೆಗಳನ್ನೆಲ್ಲಾ ಮುರಿದುಕೊಂಡನು. ಆ ಪ್ರಾಣಿಗಳೂ ಗಾಯಗೊಂಡವು. ಆ ರೈತನೊಬ್ಬನೇ ಅಲ್ಪಸ್ವಲ್ಪ ಗಾಯಗಳೊಂದಿಗೆ ಸರಿಯಾಗಿದ್ದನು. ಅವನು ಗಾಡಿಯಿಂದ ಆಚೆಗೆ ಬಂದು ಆ ಪ್ರಾಣಿಗಳನ್ನು ಪರೀಕ್ಷಿಸಿದನು. ಕೋಳಿಗಳ ಕಾಲುಗಳು ಮತ್ತು ರೆಕ್ಕೆಗಳು ಮುರಿದುಹೋಗಿತ್ತು, ಅವುಗಳಿಗೆ ಕದಲುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಈ ಕೋಳಿಮರಿಗಳು ಇನ್ನು ಉಪಯೋಗಕ್ಕೆ ಬರುವುದಿಲ್ಲ, ಇವನ್ನು ಯಾರೂ ಕೊಂಡುಕೊಳ್ಳುವುದಿಲ್ಲವೆಂದು ಕೂಗಾಡುತ್ತಾ ಬಂದೂಕನ್ನು ತೆಗೆದುಕೊಂಡು ಅವುಗಳನ್ನು ಅಲ್ಲೇ ಸುಟ್ಟುಹಾಕಿದನು. ಅದಾದಮೇಲೆ ಅವನು ಹಂದಿಗಳನ್ನು ಪರೀಕ್ಷಿಸಿದನು. ಅವೂ ಕೂಡಾ ಗಾಯಗೊಂಡು ರಕ್ತ ಸೋರುತ್ತಾ ಬಿದ್ದಿದ್ದವು. ಈ ಹಂದಿಗಳೂ ಪ್ರಯೋಜನಕ್ಕೆ ಬರುವುದಿಲ್ಲವೆಂದು ಅವನು ಬಂದೂಕನ್ನು ತೆಗೆದು ಅವುಗಳನ್ನೂ ಸುಟ್ಟು ಹಾಕಿದನು. ನಂತರ ರೈತ ಕೋಳಿ ಮತ್ತು ಹಂದಿಗಳಂತೆಯೇ ಕುರಿಗಳನ್ನು ನೋಡುತ್ತಾ “ನಿಷ್ಪ್ರಯೋಜಕ ಕುರಿಗಳು!” ಎಂದು ಕಿರುಚುತ್ತಾ ತನ್ನ ಶಾಟ್‌ಗನ್ ಅನ್ನು ಪುನಃ ಲೋಡ್ ಮಾಡಿ ಕುರಿಗಳನ್ನೂ ಸುಟ್ಟನು. ಗಾಯಗೊಂಡು ಕೈಕಾಲಿನ ಮೂಳೆಯನ್ನೆಲ್ಲಾ ಮುರಿದುಕೊಂಡು ಬಿದ್ದಿದ್ದ ಆ ವ್ಯಕ್ತಿ ಈ ಎಲ್ಲಾ ಹತ್ಯಾಕಾಂಡವನ್ನು ಗಾಭರಿಯಾಗಿ ನೋಡುತ್ತಿದ್ದನು. ನಂತರ ರೈತ ಆ ವ್ಯಕ್ತಿಯ ಹತ್ತಿರ ಹೋಗಿ, "ನೀನು ಸರಿಯಾಗಿದ್ದೀಯಾ" ಎಂದನು. ತಕ್ಷಣವೇ ಈ ವ್ಯಕ್ತಿ ವೇಗವಾಗಿ ತೆವಳಿ ಮೇಲಕ್ಕೆ ಬಂದು “ಖಂಡಿತ, ನನ್ನ ಸಂಪೂರ್ಣ ಜೀವನದಲ್ಲಿ ನಾನು ಎಂದಿಗೂ ಇಷ್ಟೊಂದು ಚೆನ್ನಾಗಿರಲಿಲ್ಲ” ಎಂದನು!

ನೀವು ಪ್ರಜ್ಞಾವಂತರಾಗುವವರೆಗೂ, ನರಳುವಿಕೆ ಇದ್ದೇ ಇರುತ್ತದೆ.

ಹಾಗಾಗಿ ಈಗ ನಾವು ನಿಮ್ಮನ್ನು ನರಕಕ್ಕೆ ತಳ್ಳಿದರೂ ಪರವಾಗಿಲ್ಲ, ನೀವು ಚೆನ್ನಾಗಿಯೇ ಇರುತ್ತೀರಿ. ನನಗೆ ಜನರನ್ನು ಸ್ವರ್ಗಕ್ಕೆ ಕಳುಹಿಸುವುದರಲ್ಲಿ ಆಸಕ್ತಿಯಿಲ್ಲ. ಜನರು ನರಕಕ್ಕೆ ಹೋದರೂ ಅವರು ಯಾರಿಂದಲೂ ಸಂಕಟಕ್ಕೀಡಾಗದಂತೆ ಇರುವ ರೀತಿಯಲ್ಲಿ ರೂಪಿಸಬೇಕೆಂಬುದು ನನ್ನ ಆಸಕ್ತಿ. ಅದುವೇ ಸ್ವಾತಂತ್ರ್ಯ, ’ನಾನು ಸ್ವರ್ಗಕ್ಕೆ ಹೋಗಬೇಕು’, ಎನ್ನುವುದು ಒಂದು ದೊಡ್ಡ ಬಂಧನ. ಒಂದು ವೇಳೆ ನೀವು ತಪ್ಪಾದ ಸ್ಥಳದಲ್ಲಿ ಇಳಿದರೆ? ಸ್ವರ್ಗದ ಹಾದಿಯಲ್ಲಿ ನಿಮ್ಮ ವಿಮಾನವನ್ನು ಯಾರಾದರು ಹೈಜಾಕ್ ಮಾಡಿದರೆ! ಚಾಲಕನೇನು ಡಿಕ್ಕಿ ಹೊಡೆಯಲಿಲ್ಲ, ಆದರೆ ತಪ್ಪಾದ ಪ್ರದೇಶದಲ್ಲಿ ಇಳಿದರೂ ಸಹ ನೀವು ಅಪಾಯಕ್ಕೆ ಸಿಲುಕುವಿರಿ. ನೀವು ಸದಾ ’ಯಾವುದರೊಡನೆಯೋ ಜೀವಿಸುತ್ತಿದ್ದಿರಿ’, ಅದನ್ನು ಯಾರಾದರೂ ನಿಮ್ಮಿಂದ ಕಸಿದುಕೊಂಡು ಹೋಗಬಹುದು. ನಿಜವಾದ ಮುಕ್ತಿಯೆಂದರೆ, ಯಾರೂ ಯಾವುದನ್ನೂ ನಿಮ್ಮಿಂದ ಕಸಿದುಕೊಳ್ಳದೇ ಇರುವುದಾಗಿದೆ; ನಿಮ್ಮಿಂದ ಕಸಿದುಕೊಳ್ಳಲು ಸಾಧ್ಯವಾಗದ ಸಂಗತಿಗಳೆಂದರೆ, ನಿಮ್ಮ ಆನಂದ ಮತ್ತು ನರಳುವಿಕೆಗೊಳಗಾಗುವ ನಿಮ್ಮ ಅಸಮರ್ಥತೆ. ’ನಾನು ಸ್ವರ್ಗಕ್ಕೆ ಹೋಗಬೇಕು’ ಎಂದರೆ ನೀವಿನ್ನೂ ನರಳುವಿಕೆಯನ್ನು ಅನುಭವಿಸಲು ಸಮರ್ಥರಾಗಿದ್ದೀರಿ ಎಂದಾಗುತ್ತಿದೆ. ಆದ್ದರಿಂದಲೇ ನೀವು ಒಳ್ಳೆಯ ಸ್ಥಳಕ್ಕೆ ಹೋಗಲು ಇಚ್ಛಿಸುತ್ತಿರುವಿರಿ.

ಗೌತಮ ಬುದ್ಧನು ಯಾವಾಗಲೂ, ನಾನು ಸ್ವರ್ಗಕ್ಕೆ ಹೋಗಲು ಇಚ್ಛಿಸುವುದಿಲ್ಲ. ನಾನು ನರಕಕ್ಕೆ ಹೋಗಲು ಇಚ್ಛಿಸುತ್ತೇನೆ ಎಂದು ಹೇಳುತ್ತಿದ್ದನು. ಜನರು ಅವನನ್ನು ಮೂರ್ಖನೆಂದು ತಿಳಿದರು. ಆದರೆ, ಮುಕ್ತನಾದ ವ್ಯಕ್ತಿಯು ಇರುವುದು ಹಾಗೆಯೇ. ನರಕದೊಂದಿಗೆ ನನಗೆ ಸಮಸ್ಯೆ ಏನಿದೆ? ಹೇಗೂ ಅವರು ನನ್ನನ್ನು ನರಳುವಿಕೆಗೆ ಈಡುಮಾಡಲಾರರು, ಆದ್ದರಿಂದ ನಾನು ನರಕಕ್ಕೆ ಹೋಗುತ್ತೇನೆ. ಈ ವ್ಯಕ್ತಿಯು ಮುಕ್ತ. ಆದ್ದರಿಂದ ನೀವು ಗೊಂದಲಗೊಂಡಿದ್ದರೂ ಸ್ಪಷ್ಟವಾಗಿದ್ದರೆ ಅದು ಒಳ್ಳೆಯದು. ಹಾಗಾದರೆ ನನ್ನೆಲ್ಲಾ ಗೊಂದಲಗಳು ಯಾವಾಗ ಹೋಗುತ್ತವೆ? ನನಗೆ ಸಂಪೂರ್ಣ ಸ್ಪಷ್ಟತೆ ಯಾವಾಗ ಬರುತ್ತದೆ? ಎಂದು ಕೇಳಿದರೆ, ನಾನು ಯಾವ ತಾರೀಕನ್ನು ನಿಗದಿಪಡಿಸಲು ಇಷ್ಟ ಪಡುವುದಿಲ್ಲ. ಆದರೆ ಅದು ಇಂದೇ ಆಗಲಿ ಎಂದು ನಿಮಗೆ ಹರಸುತ್ತೇನೆ, ನಾಳೆಗೆ ಏಕೆ ಮುಂದೂಡುವುದು? ಇವತ್ತಿನ್ನೂ ಬಹಳ ಸಮಯ ಉಳಿದಿದೆ. ಅದು ಇಂದೇ ಆಗಲಿ.

ಸಂಪಾದಕರ ಟಿಪ್ಪಣಿ: ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. isha.sadhguru.org/in/kn). ಸದ್ಗುರುಗಳ ಇತರ ಕನ್ನಡ ಪುಸ್ತಕಗಳು/ವಿವರಗಳಿಗೆ ಸಂಪರ್ಕಿಸಿ: Kannadapublications@ishafoundation.org