ನಮ್ಮ ಶಿಕ್ಷಣವು ನಿರರ್ಥಕವೆಂದು ಏಕನಿಸುತ್ತದೆ?

ಇತ್ತೀಚಿನ ಯೂತ್ ಅಂಡ್ ಟ್ರೂತ್ ಕಾರ್ಯಕ್ರಮದಲ್ಲಿ, ನಮ್ಮ ಶಿಕ್ಷಣದಲ್ಲಿನ ಅನೇಕ ವಿಷಯಗಳು ಯಾಕೆ ಅರ್ಥಹೀನವಾಗಿ ತೋರುತ್ತವೆ ಎಂದು ವಿದ್ಯಾರ್ಥಿಯೊಬ್ಬಳು ಸದ್ಗುರುಗಳನ್ನು ಕೇಳುತ್ತಾಳೆ. ಭಾರತದ ಶಿಕ್ಷಣ ವ್ಯವಸ್ಥೆಯತ್ತ ಇನ್ನೊಮ್ಮೆ ಗಮನವನ್ನು ಹರಿಸುವ ನಿಟ್ಟಿನಲ್ಲಿ, ಇತ್ತೀಚೆಗೆ ಇಡಲಾಗುತ್ತಿರುವ ದಾಪುಗಾಲಿನ ಬಗ್ಗೆ ವಿವರಿಸುತ್ತಾ, ಸದ್ಗುರುಗಳು, ಪ್ರತಿಯೊಬ್ಬ ವಿದ್ಯಾರ್ಥಿಯ ಸಹಜ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಪೋಷಿಸುವ ವ್ಯವಸ್ಥೆಯ ಅಗತ್ಯತೆಯ ಮೇಲೆ ಬೆಳಕು ಚೆಲ್ಲುತ್ತಾರೆ.
how to improve the education system in india
 

ಪ್ರಶ್ನೆ: ನಾನು CEG ಕಾಲೇಜಿನಲ್ಲಿ, ಕಂಪ್ಯೂಟರ್ ವಿಜ್ಞಾನ ಪದವಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಪ್ರಶ್ನೆ ಏನೆಂದರೆ, ಇಲ್ಲಿರುವ ನಾವೆಲ್ಲರೂ ಹದಿನೈದು ವರ್ಷಗಳಿಗಿಂತ ಜಾಸ್ತಿ ಕಾಲ ಶಿಕ್ಷಣವನ್ನು ಪಡೆದಿದ್ದರೂ ಸಹ, ನಾವು ಕಲಿತ ಅನೇಕ ವಿಷಯಗಳಿಗೆ ಯಾವುದೇ ಉಪಯೋಗ ಅಥವಾ ಪ್ರಯೋಜನವನ್ನೂ ಕಂಡಿಲ್ಲ. ಹಾಗಾಗಿ, ನಾವು ಓದಿದ ಕೆಲ ವಿಷಯಗಳು ಏಕೆ ನಿರರ್ಥಕವೆಂದನಿಸುತ್ತವೆ?

ಸದ್ಗುರು: ಇಲ್ಲ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೆಲ್ಲಾ ಆಗಬಾರದು! ಪ್ರೌಢ ಶಾಲೆಯಲ್ಲಿ ಹಾಗೆನಿಸಬಹುದು ಎಂದು ನಾನು ಅರ್ಥಮಾಡಿಕೊಳ್ಳುತ್ತೇನೆ – ಅಲ್ಲಿ ಓದುವ ಹಲವಾರು ವಿಷಯಗಳು ನಿರರ್ಥಕ. ಆದರೆ, ಒಂದು ತಾಂತ್ರಿಕ ಕಾಲೇಜಿನಲ್ಲಿ ಅಂತಹದೆಲ್ಲಾ ಆಗಬಾರದು.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಇಂಗ್ಲೆಂಡಿನ ರಾಣಿಯ ಸೇವೆಗಾಗಿ ಗುಮಾಸ್ತರನ್ನು ಒದಗಿಸಲು ಸೃಷ್ಟಿಸಲಾಯಿತು. ಅದರ ಹಿಂದೆ ಯಾವುದೇ ಸೃಜನಶೀಲತೆ ಇರಲಿಲ್ಲ - ವಿಧೇಯತೆ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಮುಖ ಅಂಶವಾಗಿತ್ತು.

ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಇಂಗ್ಲೆಂಡಿನ ರಾಣಿಯ ಸೇವೆಗಾಗಿ ಗುಮಾಸ್ತರನ್ನು ಒದಗಿಸಲು ಸೃಷ್ಟಿಸಲಾಯಿತು. ಅದರ ಹಿಂದೆ ಯಾವುದೇ ಸೃಜನಶೀಲತೆ ಇರಲಿಲ್ಲ - ವಿಧೇಯತೆ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಮುಖ ಅಂಶವಾಗಿತ್ತು. ಇದಕ್ಕಾಗಿಯೇ ನೀವೊಂದು ಸಂಪೂರ್ಣ ಪಠ್ಯಪುಸ್ತಕವನ್ನು ಕಂಠಪಾಠ ಮಾಡಿ ಕೇವಲ ಅದನ್ನೇ ಪರೀಕ್ಷೆಯಲ್ಲಿ ಕಕ್ಕಬೇಕಿತ್ತು. ಅದನ್ನು ಶಿಕ್ಷಣದಲ್ಲಿನ ಹಿರಿಮೆಯೆಂದು ಭಾವಿಸಲಾಗಿತ್ತು. ತಾಂತ್ರಿಕ ಶಿಕ್ಷಣದಲ್ಲಿ ಈ ಪರಿಸ್ಥಿತಿ ಇದೆ ಎಂದು ನಾನು ಅಷ್ಟಾಗಿ ಹೇಳುವುದಿಲ್ಲ. ಅದು ಭಿನ್ನವಾಗಿದೆ ಎಂದು ನಾನು ತಿಳಿಯುತ್ತೇನೆ.

 

ಶಿಕ್ಷಣದ ಆದ್ಯತೆಯ ಬದಲಾವಣೆ

 

ಭಾರತದ ಜವಳಿ ಉದ್ಯಮದ ಮೇಲೆ ನಾವೊಂದು ನೀತಿಯನ್ನು ಬರೆದೆವು, ನದಿಗಳು ಮತ್ತು ಕೃಷಿಯ ಬಗ್ಗೆ ನಾವೊಂದು ನೀತಿಯನ್ನು ಬರೆದೆವು. ಮತ್ತೀಗ, ಶಿಕ್ಷಣದ ಬಗ್ಗೆ ಒಂದು ನೀತಿಯನ್ನು ಬರೆಯುವುದರಲ್ಲಿ ಕಾರ್ಯನಿರತರಾಗಿದ್ದೇವೆ. ನಾನು ನಿರಂತರವಾಗಿ ಹೇಳಿದ ಬಳಿಕ, ಸರ್ಕಾರವು ಇತ್ತೀಚೆಗಷ್ಟೆ, ವಿದ್ಯಾರ್ಥಿಗಳು ಶಾಲೆಯಲ್ಲಿ ಕೇವಲ ಐವತ್ತು ಪ್ರತಿಶತದಷ್ಟು ಸಮಯವನ್ನು ಮಾತ್ರ ಶೈಕ್ಷಣಿಕ ವಿಷಯಗಳೆಡೆಗೆ ನೀಡಬೇಕು ಮತ್ತು ಉಳಿದ ಸಮಯದಲ್ಲಿ ಕ್ರೀಡೆ, ಕಲೆ, ಸಂಗೀತ, ಕರಕುಶಲ ಮತ್ತು ಇನ್ನಿತರ ವಿಷಯಗಳ ಕಡೆಗೆ ಗಮನಹರಿಸಬೇಕು ಎಂಬುದಾಗಿ ಘೋಷಿಸಿತು. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಇದನ್ನು ಘೋಷಿಸಲಾಯಿತು. ಪ್ರಕಟಣೆ ಹೊರಡಿಸುವುದು ಒಳ್ಳಯದೇ, ಆದರೆ ಶಾಲೆಗಳು ಈ ಬದಲಾವಣೆಗೆ ಸಜ್ಜುಗೊಂಡಿಲ್ಲ. ಮಕ್ಕಳಿಗೆ ನಾವೆಷ್ಟು ಗಣಿತ ಮತ್ತು ವಿಜ್ಞಾನವನ್ನು ಹೇಳಿಕೊಡುತ್ತೇವೆಯೋ, ಅಷ್ಟೇ ಸಂಗೀತ, ಕಲೆ, ಮತ್ತು ಇನ್ನಿತರ ವಿವಿಧ ವಿಷಯಗಳನ್ನು ಕಲಿಸಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ನಮ್ಮ ಶಾಲೆಗಳು ಈ ರೀತಿಯಲ್ಲೇ ನಿರ್ವಹಿಸಲ್ಪಡುತ್ತಿವೆ, ಆದರೆ ಅವುಗಳ ಸಂಖ್ಯೆ ಬಹಳ ಕಡಿಮೆ.

ಇದೀಗ ಕೇಂದ್ರಸರ್ಕಾರವು ಇದನ್ನು ಘೋಷಿಸಿದೆಯಾದರೂ, ಇದನ್ನು ಕಾರ್ಯರೂಪಕ್ಕೆ ತರಲು ಬಹಳಷ್ಟು ಸಮಯ ಬೇಕಾಗುವುದು. ಇದಕ್ಕೆ ಮೂಲಭೂತವಾದ ಮಾನವ ಸೌಕರ್ಯ, ಕಟ್ಟಡಗಳ ಸೌಕರ್ಯ, ತರಬೇತಿ ಮತ್ತಿನ್ನಿತರ ಅನೇಕ ವಿಷಯಗಳ ಅಗತ್ಯತೆ ಇದ್ದು, ಈ ದೇಶದಲ್ಲಿ ಇನ್ನೂ ಇದೆಲ್ಲಾ ಆಗಬೇಕಾಗಿದೆ. ಇದು ಸಮಯವನ್ನು ತೆಗೆದುಕೊಳ್ಳುತ್ತದೆ, ಆದರೆ ಕನಿಷ್ಠಪಕ್ಷ, ಆ ಉದ್ದೇಶವಾದರೂ ಮೂಡಿಬಂದಿದೆ. ಶಾಲೆಯ ಶೈಕ್ಷಣಿಕ ಭಾಗವನ್ನು ದಿನಕ್ಕೆ ಗರಿಷ್ಠ ಮೂರರಿಂದ ನಾಲ್ಕು ಗಂಟೆಗಳಿಗಷ್ಟೇ ಹೇಗೆ ಸೀಮಿತಗೊಳಿಸಬಹುದೆಂದು ನಾವು ನೋಡುತ್ತಿದ್ದೇವೆ. ಉಳಿದ ಸಮಯದಲ್ಲಿ ಅವರು ಇನ್ನಿತರ ವಿಷಯಗಳನ್ನು ಕಲಿತುಕೊಳ್ಳಬೇಕು.

 

ಬೆಳೆಯುತ್ತಿರುವ ಅಪಾಯ

 

ನಾವೀಗ ಕಟ್ಟಿರುವ ರಾಷ್ಟ್ರವು ಹೇಗಿದೆಯೆಂದರೆ, ಒಬ್ಬ ರೈತನ ಮಗ, ತನ್ನ ತಂದೆಯೊಂದಿಗೆ ಜಮೀನಿಗೆ ಹೋಗಿ ಕೃಷಿಕೆಲಸ ಮಾಡುತ್ತಿದ್ದರೆ, ಆ ತಂದೆಯನ್ನು ಬಾಲಕಾರ್ಮಿಕ ಕಾಯಿದೆಯಡಿ ಬಂಧಿಸಬಹುದು. ಹೌದು, ಇದು ಸತ್ಯ! ದೇಶದಲ್ಲಿ ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿ ಬೆಳೆಯುತ್ತಿದೆ. ನಮ್ಮ ದೇಶದಲ್ಲಿನ ಕೇವಲ ಎರಡರಿಂದ ನಾಲ್ಕು ಪ್ರತಿಶತದಷ್ಟು ರೈತರು ಮಾತ್ರ ತಮ್ಮ ಮಕ್ಕಳು ಕೃಷಿಕೆಲಸ ಮಾಡಬೇಕೆಂದು ಬಯಸುತ್ತಾರೆ. ಹಾಗಾಗಿ, ಇನ್ನು ಇಪ್ಪತ್ತೈದು  ವರ್ಷಗಳಲ್ಲಿ, ಈ ಪೀಳಿಗೆಯು ಮುಗಿದ ನಂತರ, ನಮ್ಮ ದೇಶದಲ್ಲಿ ಆಹಾರವನ್ನು ಬೆಳಯುವವರು ಯಾರು?

ನಮ್ಮ ದೇಶದಲ್ಲಿನ ಕೇವಲ ಎರಡರಿಂದ ನಾಲ್ಕು ಪ್ರತಿಶತದಷ್ಟು ರೈತರು ಮಾತ್ರ ತಮ್ಮ ಮಕ್ಕಳು ಕೃಷಿಕೆಲಸ ಮಾಡಬೇಕೆಂದು ಬಯಸುತ್ತಾರೆ. ಹಾಗಾಗಿ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ, ಈ ಪೀಳಿಗೆಯು ಮುಗಿದ ನಂತರ, ನಮ್ಮ ದೇಶದಲ್ಲಿ ಆಹಾರವನ್ನು ಬೆಳಯುವವರು ಯಾರು?

ನಿಮಗೆ ತಾಂತ್ರಿಕ ಜ್ಞಾನವಿರಬಹುದು, ನೀವು ಎಂ.ಬಿ.ಎ. ಮತ್ತಿತರ ವಿಷಯಗಳನ್ನು ಮಾಡಬಹುದು, ಆದರೆ ವ್ಯವಸಾಯವನ್ನು ಮಾಡಿ ಒಂದು ಬೆಳೆಯನ್ನು ತೆಗೆಯಿರಿ, ನೋಡೋಣ. ಇದು ತುಂಬಾ ಜಟಿಲವಾದ ಪ್ರಕ್ರಿಯೆ! ಕೃಷಿ ಕೆಲಸವು ಅನಕ್ಷರಸ್ಥರಿಗೆ ಎಂದು ನಾವು ಭಾವಿಸುತ್ತೇವೆ, ಆದರೆ ಅದು ತಪ್ಪು. ಕೃಷಿಯೆನ್ನುವುದು ಒಂದು ಅತ್ಯಂತ ಜಟಿಲ ಹಾಗೂ ಅತಿಸೂಕ್ಷ್ಮವಾದ ಕೆಲಸ. ಸಾಂಪ್ರದಾಯಿಕ ಶಿಕ್ಷಣವನ್ನು ಹೊಂದಿಲ್ಲದ ಕಾರಣ ಅವರಿಗೆ ಬುದ್ಧಿಯಿಲ್ಲವೆಂದಲ್ಲ. ಅವರಿಗೆ ತುಂಬಾ ಪ್ರಮುಖವಾದ ವಿಷಯವು ತಿಳಿದಿದೆ, ಮತ್ತು ಅದರಿಂದಾಗಿಯೇ ನಾವೆಲ್ಲರೂ ಸಹ ಊಟ ಮಾಡುತ್ತಿದ್ದೇವೆ ಮತ್ತು ನಮ್ಮ ಹೊಟ್ಟೆಗಳು ತುಂಬಿವೆ. ಆದರೆ, ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಈ ದೇಶವು ತನ್ನ ಆಹಾರವನ್ನು ತಾನೇ ಉತ್ಪಾದಿಸಲು ಸಾಧ್ಯವಾಗದಂತಹ ಅಪಾಯದ ಸ್ಥಿತಿಯಲ್ಲಿದೆ. 

ಸಾಮರ್ಥ್ಯವನ್ನು ಗುರುತಿಸುವುದು

 

ಕೇವಲ ಒಂದು ನಿರ್ದಿಷ್ಟ ಸಂಖ್ಯೆಯ ಮಕ್ಕಳು ಮಾತ್ರ ಶೈಕ್ಷಣಿಕ ವ್ಯಾಸಂಗವನ್ನು ಮಾಡಬೇಕು. ಇತರರು ಬೇರೆ ಕೌಶಲಗಳು ಮತ್ತು ದೇಶದಲ್ಲಿ ಮಾಡಬಹುದಾದಂತಹ ಇನ್ನಿತರ ವಿಷಯಗಳನ್ನು ಕಲಿತುಕೊಳ್ಳಬೇಕು. ಇದು ಅವರ ಯೋಗಕ್ಷೇಮಕ್ಕಾಗಿಯೇ! ಎಲ್ಲರ ಮೆದುಳೂ ಸಹ ಶೈಕ್ಷಣಿಕ ವ್ಯಾಸಂಗಕ್ಕಾಗಿ ಮಾಡಲ್ಪಟ್ಟಿರುವುದಿಲ್ಲ. ಬಹಳಷ್ಟು ಜನರು ತಮ್ಮ ಶೈಕ್ಷಣಿಕ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಾರೆ. ಕೆಲವರು ಶೈಕ್ಷಣಿಕ ವಿಷಯಗಳಲ್ಲಿ ಬಹಳಷ್ಟು ಆನಂದವನ್ನು ಕಾಣುತ್ತಾರೆ, ಆದರೆ ಹಲವರು ಓದುವುದಕ್ಕೆ ಮತ್ತು ಪರೀಕ್ಷೆಗಳನ್ನು ಎದುರಿಸುವುದಕ್ಕೆ ನರಳುತ್ತಾರೆ. ಇಂತಹವರು ಶೈಕ್ಷಣಿಕ ವ್ಯಾಸಂಗವನ್ನು ಮಾಡಬಾರದು; ತಮ್ಮ ಸಹಜ ಸಾಮರ್ಥ್ಯಕ್ಕನುಸಾರವಾಗಿ ಅವರು ಬೇರೆ ರೀತಿಯ ಕೌಶಲಗಳನ್ನು ಕಲಿಯಬೇಕು. ಆದರೆ, ನಿಮ್ಮ ಸಹಜ ಸಾಮರ್ಥ್ಯವನ್ನು, ನೀವು ಆನಂದದಿಂದ, ಚೆನ್ನಾಗಿ ಮಾಡಬಹುದಾದುದ್ದೇನು ಎಂದು ಗುರುತಿಸುವವರು ಯಾರೂ ಇಲ್ಲ. 

ಒಬ್ಬ ಎಲೆಕ್ಟ್ರಿಷಿಯನ್ ಅಥವಾ ಬಡಗಿಯೂ ಕೂಡ, ಒಬ್ಬ ವೈದ್ಯ ಅಥವಾ ಇಂಜಿನಿಯರ್ ಹೊಂದಿರುವಷ್ಟೇ ಪ್ರತಿಷ್ಠೆಯನ್ನು ಹೊಂದಿರಬೇಕು. ಆಗ ಮಾತ್ರ, ಶಿಕ್ಷಣವು ಸರಿಸಮವಾಗುತ್ತದೆ. 

ಹತ್ತರಿಂದ ಹದಿನೈದು ವಯಸ್ಸಿನ ನಡುವೆ, ಮಕ್ಕಳು ತಮ್ಮ ಕಲಿಕೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾದ ಒಂದು ಪ್ರಕ್ರಿಯೆಯನ್ನು ನಾವು ಶಿಕ್ಷಣ ವ್ಯವಸ್ಥೆಯಲ್ಲಿ ತರಬೇಕು. ಇಂದಿನ ದಿನಗಳಲ್ಲಿ, ಎಲ್ಲರೂ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯುವುದು ಕೇವಲ ಸಾಮಾಜಿಕ ಪ್ರತಿಷ್ಠೆಯ ಕಾರಣಕ್ಕಾಗಿ ಮಾತ್ರ. ಒಬ್ಬ ಎಲೆಕ್ಟ್ರಿಷಿಯನ್ ಅಥವಾ ಬಡಗಿಯೂ ಕೂಡ, ಒಬ್ಬ ವೈದ್ಯ ಅಥವಾ ಇಂಜಿನಿಯರ್ ಹೊಂದಿರುವಷ್ಟೇ ಪ್ರತಿಷ್ಠೆಯನ್ನು ಹೊಂದಿರಬೇಕು. ಆಗ ಮಾತ್ರ, ಶಿಕ್ಷಣವು ಸರಿಸಮವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಸಮಾಜದಲ್ಲಿ ಎಲ್ಲರಿಗಿಂತ, ರೈತರು ಉನ್ನತ ಸ್ಥಾನವನ್ನು ಹೊಂದಿರಬೇಕು. ಅವರು ನಮ್ಮ ಅನ್ನದಾತರು. 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.