ಸದ್ಗುರು: ಪ್ರಪಂಚದಾದ್ಯಂತ ಜನರಿಗೆ ಏನೂ ಮಾಡಲು ಇಲ್ಲದಿದ್ದಾಗ ವಾತಾವರಣದ ಬಗ್ಗೆ ಚರ್ಚೆ ಮಾಡುತ್ತಿದ್ದ ಒಂದು ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಯಾರೂ ವಾತಾವರಣದ ಬಗ್ಗೆ ಚರ್ಚಿಸುವುದಿಲ್ಲ. ನೀವೆಲ್ಲೇ ಹೋದರೂ, ನಿಮ್ಮ ಅಜ್ಜಿಯರಿಂದ ಹಿಡಿದು ನಿಮ್ಮ ಮೊಮ್ಮಕ್ಕಳವರೆಗೆ, ಎಲ್ಲರೂ ಆರ್ಥಿಕತೆಯ ಬಗ್ಗೆಯೇ ಮಾತನಾಡುತ್ತಾರೆ. ಪ್ರತಿಯೊಬ್ಬರ ಸಂಭಾಷಣೆಯಲ್ಲಿ ಇದು ಮುಖ್ಯ ವಿಷಯವಾಗಿಬಿಟ್ಟಿದೆ.

ಎಲೆಗಳಿಲ್ಲ,  ಪ್ರಾಣಿಗಳ ತ್ಯಾಜ್ಯಗಳಿಲ್ಲ - ಜೈವಿಕ ಪದಾರ್ಥಗಳು ಇಲ್ಲದಿರುವುದರಿಂದ ನಾವು ಮಣ್ಣನ್ನು ಮರಳನ್ನಾಗಿ ಪರಿವರ್ತಿಸುತ್ತಿದ್ದೇವೆ.

ಆರ್ಥಿಕತೆಯು ನಮ್ಮ ಬದುಕುಳಿಯುವ ಪ್ರಕ್ರಿಯೆಯ ಹೆಚ್ಚು ಸಂಕೀರ್ಣವಾದ ರೂಪಾಂತರವಾಗಿದೆ. ತಿನ್ನುವುದು, ಮಲಗುವುದು, ಮಕ್ಕಳನ್ನು ಮಾಡಿಕೊಳ್ಳುವುದು ಮತ್ತೊಂದು ದಿನ ಸಾಯುವುದು - ಇದು ಸರಳ ಬದುಕುಳಿಯುವಿಕೆ. ಇದನ್ನು ಈಗ ಅತ್ಯಂತವಾಗಿ ಜಟಿಲಗೊಳಿಸಲಾಗಿದೆ. ನಾನು ಅದರ ವಿರೋಧಿಯಲ್ಲ, ಆದರೆ ಆರ್ಥಿಕತೆಯು ಇಂದಿನ ಚಿಂತೆಯೆಂದು ಮತ್ತು ಪರಿಸರ ಸಂರಕ್ಷಣೆಯು ನಾಳಿನ ಚಿಂತೆಯೆಂದು ಜನರು ಭಾವಿಸುತ್ತಾರೆ. ಈ ಆಲೋಚನೆ ಬದಲಾಗಬೇಕಾಗಿದೆ.

ಪರಿಸರ ಸಂರಕ್ಷಣೆಯು ಇಂದಿನ ಸಮಸ್ಯೆ ಮತ್ತು ಇಂದಿನ ಕಳಕಳಿ. ನಮ್ಮ ಜೀವನವು ಅದ್ಭುತವಾಗಿರುವುದು ಷೇರು ಮಾರುಕಟ್ಟೆಯ ಏರಿಳಿತಗಳು ಅಥವಾ ಯಾವುದೋ ಒಂದು ಸಮಾಜ ಅಥವಾ ರಾಷ್ಟ್ರದ ಅಧಿಕ ಆರ್ಥಿಕ ಬೆಳವಣಿಗೆಯಿಂದಲ್ಲ. ನಾವು ಪೌಷ್ಟಿಕ ಆಹಾರವನ್ನು ತಿನ್ನುತ್ತಿದ್ದೇವೆ, ಶುದ್ಧ ನೀರನ್ನು ಕುಡಿಯುತ್ತೇವೆ ಮತ್ತು ಶುದ್ಧ ಗಾಳಿಯನ್ನು ಉಸಿರಾಡುತ್ತೇವೆ ಎನ್ನುವ ಕಾರಣದಿಂದ ನಮ್ಮ ಜೀವನ ಅದ್ಭುತವಾಗಿದೆ. ಇದನ್ನು ಸಂಪೂರ್ಣವಾಗಿ ಮರೆಯಲಾಗಿದೆ.

ಎಲ್ಲಡೆಯೂ ವಿಷ

ಇಂದು, ನಾವು ಸೇವಿಸುವ ಆಹಾರ, ನೀರು ರಾಸಾಯನಿಕಗಳಿಂದ ತುಂಬಿದೆ. ಮತ್ತು ಸಹಜವಾಗಿ, ಗಾಳಿಯು ಸಹ ವಿಷಮಯವಾಗಿದೆ. ತಂತ್ರಜ್ಞಾನದಿಂದಾಗಿ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಗಾಳಿಯನ್ನು ಶುದ್ಧೀಕರಿಸಲಾಗುವುದು ಎಂದು ಕೇಳಿದ್ದೇನಿ. ಆ ನಿಟ್ಟಿನಲ್ಲಿ ಭಾರಿ ಸಂಶೋಧನೆ ನಡೆಯುತ್ತಿದೆ. ಆದರೆ ಮಣ್ಣು ಮತ್ತು ನೀರೇ ದೊಡ್ಡ ಸಮಸ್ಯೆಯಾಗಿರುವುದು.

ಜೀವವು ವಿಕಸನಗೊಳ್ಳುವುದು ಮಣ್ಣಿನಲ್ಲಿ. ನೀವು ಮತ್ತು ನಾನು ಒಂದಿಷ್ಟು ಪ್ರಮಾಣದ ಮಣ್ಣು. ಯಾವುದು ಮಣ್ಣಾಗಿತ್ತೋ, ಅದು ಆಹಾರವಾಯಿತು. ಯಾವುದು ಆಹಾರವಾಗಿತ್ತೋ, ಅದು ಮಾಂಸ ಮತ್ತು ರಕ್ತವಾಯಿತು. ನಮಗಿದು ಈಗ ಅರ್ಥವಾಗದಿದ್ದರೆ, ನಾವು ಸತ್ತು ಸಮಾಧಿಯಾದಾಗ ಅರ್ಥವಾಗುತ್ತದೆ. ಹೆಚ್ಚಿನವರಿಗೆ ಇದು ಸ್ವಲ್ಪ ತಡವಾಗಿ ಅರ್ಥವಾಗುತ್ತದೆಯಾದರೂ ಪ್ರತಿಯೊಬ್ಬರಿಗೂ ಇದು ಒಂದಲ್ಲ ಒಂದು ಹಂತದಲ್ಲಿ ಅರ್ಥವಾಗುತ್ತದೆ!

ದುರದೃಷ್ಟವಶಾತ್, ಪರಿಸರ ಸಂರಕ್ಷಣೆಯ ವಿಷಯದಲ್ಲಿ ಹೆಚ್ಚಿನ ಜನರು ನಿರ್ಲಕ್ಷಿಸುವ ವಿಷಯ ಮಣ್ಣು. ಭೂಮಿಯ ಮೇಲಿನ ಮಣ್ಣಿಗೆ ನಾವು ಮಾಡಿರುವ ಹಾನಿ ಅಪಾರವಾದುದು. ಬೇರೆ ವಿಷಯಗಳು, ಉದಾಹರಣೆಗೆ ಎಲ್ಲೋ ಹಿಮ ಕರಗುತ್ತಿರುವುದು ನಮಗೆ ಕಾಣಿಸಬಹುದು. ಆದರೆ ನಾವು ಮಣ್ಣಿಗೆ ಮಾಡಿರುವ ಹಾನಿ ಅತ್ಯಂತ ಅಪಾಯಕಾರಿ. 

ಕಡಿಮೆಯಾಗುತ್ತಿರುವ ಪೌಷ್ಟಿಕಾಂಶ

ನಾವು ಭಾರತದಲ್ಲಿ ಬೆಳೆಯುತ್ತಿರುವ ತರಕಾರಿಗಳು ಮತ್ತು ಬೆಳೆಗಳಲ್ಲಿನ ಪೌಷ್ಟಿಕಾಂಶದ ಮಟ್ಟವು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಸುಮಾರು ಮೂವತ್ತು ಪ್ರತಿಶತದಷ್ಟು ಕುಸಿದಿದೆ. ಅದಕ್ಕಾಗಿಯೇ, ಏನೇ ತಿಂದರೂ, ಜನರು ತಮ್ಮ ಪೂರ್ಣ ಗಾತ್ರಕ್ಕೆ ಬೆಳೆಯುತ್ತಿಲ್ಲ. 

ನೀವು ಮಾಂಸವನ್ನು ಸೇವಿಸದಿದ್ದರೆ ನಿಮಗೆ ಸಾಕಷ್ಟು ಪೋಷಣೆ ಸಿಗುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಒಂದು ರೀತಿಯಲ್ಲಿ, ಅವರು ಹೇಳುತ್ತಿರುವುದು ಸಂಪೂರ್ಣವಾಗಿ ತಪ್ಪಲ್ಲ. ಸಸ್ಯಾಹಾರಿ ಆಹಾರ, ಅದು ಬೆಳೆಯುತ್ತಿರುವ ರೀತಿಯಿಂದಾಗಿ, ತನ್ನ ಪೋಷಣೆಯನ್ನು ಕಳೆದುಕೊಂಡಿದೆ. ಆಹಾರದಂತೆ ಕಾಣಲಿ ಎಂದು ಗಿಡಗಳಿಗೆ ಏನೋ ಔಷಧಿಯನ್ನು ಹೊಡೆಯುತ್ತಾರೆ. ಅದು ಆಹಾರವಲ್ಲ, ಅವರು ನಿಮಗೆ ಮಾರಾಟ ಮಾಡುತ್ತಿರುವುದು ಕಸ. ಮಣ್ಣಿನ ಗುಣಮಟ್ಟವು ಗಮನಾರ್ಹವಾಗಿ ಇಳಿದಿರುವುದರಿಂದ ಹೀಗಾಗುತ್ತಿದೆ. 

ನಮ್ಮ ಜೀವನವು ಅದ್ಭುತವಾಗಿರುವುದು ಷೇರು ಮಾರುಕಟ್ಟೆಯ ಏರಿಳಿತಗಳು ಅಥವಾ ಯಾವುದೋ ಒಂದು ಸಮಾಜ ಅಥವಾ ರಾಷ್ಟ್ರದ ಅಧಿಕ ಆರ್ಥಿಕ ಬೆಳವಣಿಗೆಯಿಂದಲ್ಲ.

ಕೇವಲ ಗೊಬ್ಬರ ಮತ್ತು ಟ್ರ್ಯಾಕ್ಟರ್‌-ನಿಂದ ನಿಮಗೆ ಮಣ್ಣನ್ನು ಸಮೃದ್ಧವಾಗಿಡಲು ಸಾಧ್ಯವಿಲ್ಲ. ಗದ್ದೆಗಳಲ್ಲಿ ಪ್ರಾಣಿಗಳಿರಬೇಕು. ನಾವು ಪ್ರಾಚೀನ ಕಾಲದಿಂದ ಬೆಳೆ ಬೆಳೆಯುತ್ತಿರುವಾಗಿನಿಂದಲೇ ನಾವು ಕೇವಲ ಬೆಳೆಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೆವು. ಉಳಿದ ಗಿಡ ಮತ್ತು ಪ್ರಾಣಿಗಳ ತ್ಯಾಜ್ಯ ಪದಾರ್ಥಗಳು ಯಾವಾಗಲೂ ಮಣ್ಣಿಗೇ ಮರಳುತ್ತಿದ್ದವು. 

ಇಂದು, ನಾವು ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದೇವೆ; ಯಾವುದನ್ನೂ ಮರಳಿ ಮಣ್ಣಿಗೆ ಹಾಕುತ್ತಿಲ್ಲ. ಒಂದಷ್ಟು ಗೊಬ್ಬರವನ್ನು ಎರಚುವುದರಿಂದ ಬೆಳೆ ಬೆಳೆಯುತ್ತದೆಯೆಂದು ನಾವು ಭಾವಿಸುತ್ತೇವೆ. ಈ ಕಾರಣಕ್ಕಾಗಿಯೇ ಆಹಾರದ ಗುಣಮಟ್ಟ ಮತ್ತು ಅದರ ಪೌಷ್ಟಿಕಾಂಶದ ಮೌಲ್ಯವು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ.

ನಾವು ಭೂಮಿಯನ್ನು ಮರುಭೂಮಿಯನ್ನಾಗಿ ಮಾರ್ಪಡಿಸುತ್ತಿರುವುದರಿಂದ ಆಹಾರವನ್ನು ಬೆಳೆಸುವ ನಮ್ಮ ಸಾಮರ್ಥ್ಯವೇ ಇಲ್ಲವಾಗುತ್ತಿದೆ. ಎಲೆಗಳಿಲ್ಲ,  ಪ್ರಾಣಿಗಳ ತ್ಯಾಜ್ಯಗಳಿಲ್ಲ - ಜೈವಿಕ ಪದಾರ್ಥಗಳು ಇಲ್ಲದಿರುವುದರಿಂದ ನಾವು ಮಣ್ಣನ್ನು ಮರಳನ್ನಾಗಿ ಪರಿವರ್ತಿಸುತ್ತಿದ್ದೇವೆ.

ರಸಗೊಬ್ಬರಗಳ ನಿಜವಾದ ಅಪಾಯ

ಸುಮಾರು ನಲವತ್ತು ವರ್ಷಗಳ ಹಿಂದೆ, ನಾನು ಕೃಷಿ ಕ್ಷೇತ್ರದಲ್ಲಿದ್ದಾಗ, ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಬಂದು ಹಳ್ಳಿಗಳಲ್ಲಿ ರಸಗೊಬ್ಬರದ ಲಾಭಗಳ ಬಗ್ಗೆ ಮತ್ತು ಅದೇನು ಮಾಡಬಹುದು ಎಂಬುದರ ಕುರಿತು ಮಾತನಾಡುತ್ತಿದ್ದವು. ಅವರೇನು ಹೇಳುತ್ತಿದ್ದರೋ, ನನಗದನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ. 

ಸಮಶೀತೋಷ್ಣ ವಾತಾವರಣದಲ್ಲಿ, ನೀವು ಮಣ್ಣಿನಲ್ಲಿ ಹಾಕುವ ರಸಗೊಬ್ಬರವು ಒಂಬತ್ತು ಹನ್ನೆರಡು ವರ್ಷಗಳವರೆಗೆ ಇರುತ್ತದೆ. ಆದರೆ ಉಷ್ಣವಲಯದ ವಾತಾವರಣದಲ್ಲಿ, ರಸಗೊಬ್ಬರವು ಮೂರರಿಂದ ನಾಲ್ಕು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಸಾವಯವ ವಿಧಾನವನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ನಾವು ಆಹಾರವನ್ನು ಬೆಳೆಯಬಹುದು ಎಂಬ ಕಲ್ಪನೆಯನ್ನು ನಾವು ಎಲ್ಲಿಂದಲೋ ಪಡೆದುಕೊಂಡುಬಿಟ್ಟಿದ್ದೇವೆ. ಇದು ಒಂದು ರೀತಿಯಲ್ಲಿ ನಂಬಲಿಕ್ಕೆ ಕಷ್ಟಸಾಧ್ಯ.

ಸಾವಯವ ಮಾರ್ಗವನ್ನು ಹೊರತುಪಡಿಸಿ ಆಹಾರವನ್ನು ಬೆಳೆಯಲು ಏನಾದರೂ ಮಾರ್ಗವಿದೆಯೇ? ಇಲ್ಲವೇ ಇಲ್ಲ. ಪ್ರಾಣಿಗಳ ತ್ಯಾಜ್ಯ ಮತ್ತು ತರಕಾರಿ ತ್ಯಾಜ್ಯವನ್ನು ಪುನಃ ಮಣ್ಣಿಗೆ ಹಾಕುವುದೇ ಮಣ್ಣನ್ನು ಸಂರಕ್ಷಿಸುವ ಏಕೈಕ ಮಾರ್ಗವಾಗಿದೆ. ಇದು ದೀರ್ಘಾವಧಿಯಲ್ಲಿ ನೆಲವನ್ನು ಉಳಿಸುವ ಏಕೈಕ ಮಾರ್ಗವಾಗಿದೆ. 

 

ಮಣ್ಣನ್ನು ಸರಿಮಾಡಿದರೆ ಎಲ್ಲವೂ ಸರಿಹೋಗುತ್ತದೆ

ಮುಂದಿನ ಐದರಿಂದ ಹತ್ತು ವರ್ಷಗಳಲ್ಲಿ ನಾವು ದೃಢವಾದ ಕ್ರಮಗಳನ್ನು ಕೈಗೊಂಡರೆ, ಮುಂದಿನ ಇಪ್ಪತ್ತೈದರಿಂದ ಮೂವತ್ತು ವರ್ಷಗಳಲ್ಲಿ, ನಾವು ಮಣ್ಣನ್ನು ಹಿಂದಿದ್ದ ಸ್ಥಿತಿಗೆ ಸಾಕಷ್ಟು ಮಟ್ಟಿಗೆ ಮರಳಿಸಬಹುದು. ಆದರೆ ನಾವು ಕಾದು ಐವತ್ತು ವರ್ಷಗಳ ನಂತರ ಕ್ರಮ ಕೈಗೊಂಡರೆ, ಮಣ್ಣನ್ನು ಸಮೃದ್ಧವಾಗಿಸಲು ನೂರರಿಂದ ನೂರೈವತ್ತು ವರ್ಷಗಳು ಬೇಕಾಗುತ್ತದೆ. ಇದರರ್ಥ ನಾಲ್ಕರಿಂದ ಐದು ತಲೆಮಾರುಗಳ ಜನರು ಮಣ್ಣಿನ ದುಃಸ್ಥಿತಿಯ ಕಾರಣದಿಂದ ಜೀವನದಲ್ಲಿ ಭಯಾನಕ ಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ.   

ನಾವು ಮಣ್ಣನ್ನು ಸರಿಪಡಿಸಿದರೆ, ನೀರು, ಗಾಳಿ ಮತ್ತೆಲ್ಲವೂ ಸರಿಹೋಗುತ್ತದೆ. ಮಣ್ಣು ಸಮೃದ್ಧವಾಗಿರಬೇಕು ಏಕೆಂದರೆ ಈ ಶರೀರವು ಅದೇ ಮಣ್ಣಿನಿಂದಾಗಿರುವುದು. ನಮ್ಮ ಮಕ್ಕಳಿಗೆ ನಾವು ಬಿಟ್ಟುಹೋಗಬಹುದಾದ ದೊಡ್ಡ ಆಸ್ತಿಯೆಂದರೆ ಫಲವತ್ತಾದ ಮಣ್ಣು ಮತ್ತು ಶುದ್ಧ ನೀರಿರುವ ಪರಿಸರ. ಮಣ್ಣಿನ ಗುಣಮಟ್ಟವನ್ನು ಕಾಪಾಡಿದರೆ ಮಾತ್ರ, ಭೂಮಿಯ ಮತ್ತು ಜೀವನದ ಗುಣಮಟ್ಟ ಉಳಿಯುತ್ತದೆ.

ಸಂಪಾದಕರ ಟಿಪ್ಪಣಿ: ಅರಣ್ಯಕೃಷಿ ಮತ್ತು ಸಾವಯವ ಕೃಷಿ ತಂತ್ರಗಳನ್ನು ಒಟ್ಟುಗೂಡಿಸಿ ತಮ್ಮ ಜಮೀನುಗಳ ಪರಿಸರ ಸಮತೋಲನವನ್ನು ಪುನರ್ಸ್ಥಾಪಿಸಲು ತಮಿಳುನಾಡಿನ ರೈತರಿಗೆ ಬೆಂಬಲ ಮತ್ತು ಸಹಾಯ ಮಾಡುವ ಉದ್ದೇಶವನ್ನು ಈಶ ಕೃಷಿ ಚಳುವಳಿ ಹೊಂದಿದೆ. ಅವರ ಪ್ರಯತ್ನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ ..