ಪ್ರಶ್ನೆ: ಯಾರಾದರೂ ನಿಮ್ಮ ಸಂಪರ್ಕಕ್ಕೆ ಬಂದರೆ, ಅದು ಅವರ ಕಡೆಯ ಜನ್ಮವೆಂದು ಅರ್ಥವೇ?

ಸದ್ಗುರು: ಕೆಲ ಸಮಯದ ಹಿಂದೆ ಯಾರೋ ನನ್ನನ್ನು, “ಬ್ರಹ್ಮಚಾರಿಗಳು ಮಾತ್ರ ನಿಮ್ಮ ಶಿಷ್ಯಂದಿರೆ?” ಎಂದು ಕೇಳಿದರು. ಹೌದು, ಅವರು ಮಾತ್ರ ನನ್ನ ಶಿಷ್ಯಂದಿರು. ನಾನು ಬ್ರಹ್ಮಚಾರಿಗಳು ಎಂದಾಗ, ಅಗತ್ಯವಾಗಿ ಅಧಿಕೃತ ದೀಕ್ಷೆಯನ್ನು ಪಡೆದ ಜನರು ಮಾತ್ರ ಎಂದೇನಲ್ಲ. ಅವರು ಬ್ರಹ್ಮಚಾರಿ ದೀಕ್ಷೆಯ ಔಪಚಾರಿಕ ಪ್ರಕ್ರಿಯೆಗೆ ಒಳಗಾಗಿದ್ದಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಯಾವುದೋ ಒಂದು ರೀತಿಯಲ್ಲಿ ಅವರು ಆಧ್ಯಾತ್ಮಿಕ ಪಥದಲ್ಲಿದ್ದಾರೆ ಎನ್ನುವುದೇ ಮುಖ್ಯ. 

ಕೇವಲ ಬ್ರಹ್ಮಚಾರಿಗಳು ಮಾತ್ರ ನನ್ನ ಶಿಷ್ಯಂದಿರು. ಅವರು ಬ್ರಹ್ಮಚಾರಿಗಳಲ್ಲದಿದ್ದರೆ, ಅವರು ಹೇಗಿದ್ದರೂ ನನ್ನ ಶಿಷ್ಯರಲ್ಲ. ಅವರ ಆಸಕ್ತಿ ಬೇರಿನ್ನೇನೋ ಆಗಿದ್ದರೆ, ಶಿಷ್ಯರಾಗುವ ಪ್ರಶ್ನೆ ಎಲ್ಲಿದೆ? ಅವರು ಯಾರ ಶಿಷ್ಯಂದಿರಾಗಲೂ ಸಹ ಸಾಧ್ಯವಿಲ್ಲ. ಶಿಷ್ಯನಾಗಿರುವುದು ಯಾರೊಬ್ಬರ ಬಗ್ಗೆಯೂ ಆಗಿರುವುದಿಲ್ಲ. ನೀವು ಆ ವ್ಯಕ್ತಿ ಅಥವಾ ಈ ವ್ಯಕ್ತಿಯ ಶಿಷ್ಯನಲ್ಲ. ನೀವೊಬ್ಬ ಶಿಷ್ಯನಾಗಿದ್ದರೆ, ನೀವೊಬ್ಬ ಶಿಷ್ಯ, ಅಷ್ಟೆ. ನೀವೊಬ್ಬ ಭಕ್ತನಾಗಿದ್ದರೆ, ನೀವೊಬ್ಬ ಭಕ್ತ, ಅಷ್ಟೆ. ನೀವು ಈ ದೇವರ ಅಥವಾ ಆ ದೇವರ ಭಕ್ತನಾಗಿರುವ ಪ್ರಶ್ನೆಯೇ ಬರುವುದಿಲ್ಲ. ಅದು ಕೇವಲ ಮುಟ್ಠಾಳತನ. ನೀವೊಬ್ಬ ಭಕ್ತ ಅಷ್ಟೆ. ಅದೊಂದು ಗುಣವೈಶಿಷ್ಟ್ಯ.

ಅಂಧಕಾರವಾಗಿಬಿಡುವುದು

ನನ್ನ ಮೇಲೆ ದೃಷ್ಟಿ ಹರಿಸಿದ ಆದರೆ ನನ್ನನ್ನು ತಮ್ಮ ಗುರುವನ್ನಾಗಿ ಸ್ವೀಕರಿಸದೇ ಇರುವಂತಹ ಬಹಳಷ್ಟು ಜನರಿದ್ದಾರೆ. ಅವರು ಮತ್ತೊಂದು ಸಲ ಈ ಭೂಮಿ ಮೇಲೆ ಹುಟ್ಟಿಬರಬಹುದು. ನಾನಿಲ್ಲಿರದೇ ಹೋಗಬಹುದು, ಆದರೆ ಅವರಿಲ್ಲೇ ಅಲೆದಾಡುತ್ತಿರುತ್ತಾರೆ, ಏಕೆಂದರೆ ಅವರು ಕೇವಲ ಗುರುವಿನ ವಾಸನೆಯನ್ನು ಹಿಡಿದಿದ್ದಾರಷ್ಟೆ, ಈಗವರಿಗೆ ಅದರ ರುಚಿಯನ್ನು ನೋಡಬೇಕಿದೆ. “ಗುರು” ಎಂದರೆ “ಕತ್ತಲನ್ನು ದೂರಮಾಡುವವನು”. “ಗು” ಎಂದರೆ ಕತ್ತಲು, “ರು” ಎಂದರೆ ದೂರವಾಗಿಸುವವನು. ನಿಮಗೆ ಒಬ್ಬ ಗುರುವಿದ್ದಾನೆ ಎಂದು ನೀವು ಹೇಳಿದಾಗ, ನಿಮ್ಮ ಅಂಧಕಾರವು ದೂರವಾಗುತ್ತದೆ. ಹಾಗಿದ್ದಾಗ ನೀವು ಮತ್ತೊಮ್ಮೆ ಈ ಭೂಮಿ ಮೇಲಕ್ಕೇಕೆ ಬರುತ್ತೀರಿ. ನಿಮ್ಮ ಕತ್ತಲು ಕಳೆದಿದ್ದು ನೀವು ಬೆಳಕಿನ ಕಡೆಗೆ ಬಂದಿರಿ ಎಂಬ ಕಾರಣಕ್ಕಲ್ಲ. ಅದು ಕಳೆದಿದ್ದು ನೀವು ಶೂನ್ಯವಾಗಿ ಹೋದಿರಿ ಎಂಬ ಕಾರಣಕ್ಕೆ. ನೀವು ಅಂಧಕಾರದೊಂದಿಗೆ ಬೆರೆತು ಹೋದಿರಿ, ಆದ್ದರಿಂದ ಏನನ್ನೂ ಓಡಿಸುವ ಅವಶ್ಯಕತೆಯೇ ಇಲ್ಲ. ನೀವು ಕತ್ತಲೆಯಿಂದ ದೂರ ಉಳಿದರೆ, ಕತ್ತಲೆನ್ನುವುದು ಒಂದು ಭಯಾನಕವಾದ ವಿಷಯವಾಗಿರುತ್ತದೆ. ಆದರೆ ನೀವು ಕತ್ತಲೇ ಆಗಿಹೋದರೆ, ಅದರೊಂದಿಗೆ ಬೆರೆತು ಹೋದರೆ, ಅಂಧಕಾರವೆನ್ನುವುದು ಒಂದು ಪರಿಮಿತಿಯೇ ಇಲ್ಲದಿರುವಂತಹ ಸ್ಥಿತಿ.

ನಿಮಗೆ ಒಬ್ಬ ಗುರುವಿದ್ದಾನೆ ಎಂದು ನೀವು ಹೇಳಿದಾಗ, ನಿಮ್ಮ ಅಂಧಕಾರವು ದೂರವಾಗುತ್ತದೆ. ಹಾಗಿದ್ದಾಗ ನೀವು ಮತ್ತೊಮ್ಮೆ ಈ ಭೂಮಿ ಮೇಲಕ್ಕೇಕೆ ಬರುತ್ತೀರಿ.

 

ನೀವಿಲ್ಲಿ ಒಂದು ಚಿಕ್ಕ ಮಿತಿಯೊಳಗೆ ಬದುಕುತ್ತಿರುವ ಕಾರಣ, ಕತ್ತಲೆಯೆನ್ನುವುದು ನಿಮಗೆ ಭಯಂಕರವಾದ ವಿಷಯ. ನೀವು ಅಂಧಕಾರದ ಜೊತೆ ಬೆರತು ಹೋದರೆ, ಅಪರಿಮಿತವಾದ ಸ್ಥಿತಿಗೆ ತಲುಪುತ್ತೀರಿ. “ನೀವು ಅಪರಿಮಿತವಾಗಲಿ” ಎಂದು ನಾನು ನಿಮ್ಮನ್ನು ಹರಸಿದರೆ, ನಿಮಗೆ ಸಂತೋಷವಾಗುತ್ತದೆ. ಅದೇ ನಾನು “ನೀವು ಅಂಧಕಾರವಾಗಿ ಹೋಗಲಿ” ಎಂದು ಹರಸಿದರೆ, ನಿಮಗದೊಂದು ಶಾಪವೆಂದು ಅನ್ನಿಸುತ್ತದೆ. ಆದರೆ ಅದು ಹಾಗಲ್ಲ. ಅಂಧಕಾರಕ್ಕೆ ಮಿತಿಯಿಲ್ಲ, ಮಿತಿಯಿಲ್ಲದಿರುವುದೇ ಅಂಧಕಾರ.

ಕತ್ತಲೆಯನ್ನು ದೂರಾಗಿಸುವವನು ಎಂದಾಗ ಅವನು ನಿಮ್ಮೊಳಗೊಂದು ಲೈಟ್ ಬಲ್ಬ್-ಅನ್ನು ಅಳವಡಿಸುತ್ತಾನೆ ಎಂದರ್ಥವಲ್ಲ. ವಿದ್ವಾಂಸರು ಮತ್ತು ಶಿಕ್ಷಕರುಗಳು ನೀವು ಏನನ್ನಾದರೂ ನೋಡಲಿ ಎಂಬ ಕಾರಣಕ್ಕೆ ನಿಮ್ಮಲ್ಲಿ ಒಂದು ಲೈಟ್ ಬಲ್ಬ್-ಅನ್ನು ಹಾಕಲು ಪ್ರಯತ್ನಿಸಿದರು. ಆದರೆ ಒಬ್ಬ ಗುರುವು ನಿಮ್ಮಲ್ಲಿ ಲೈಟ್ ಬಲ್ಬ್-ಅನ್ನು ಹಾಕಲು ಪ್ರಯತ್ನಿಸುವುದಿಲ್ಲ. ನಿಮ್ಮನ್ನು ನಿರ್ನಾಮಮಾಡುವುದು ಹೇಗೆಂದು ಅವನು ನೋಡುತ್ತಿರುತ್ತಾನೆ. ನೀವೊಬ್ಬ ಗುರುವನ್ನು ಕಂಡುಕೊಂಡಾಗ ನಿಮ್ಮ ಕತ್ತಲೆಯು ದೂರಾಗುವುದೇಕೆಂದರೆ, ನೀವು ಆ ಕತ್ತಲೆಯ ಒಂದು ಭಾಗವೇ ಆಗಿಹೋಗುತ್ತೀರ. ನಿಮಗೆ ಅಂಧಕಾರವೆನ್ನುವುದಿರುವುದಿಲ್ಲ; ನಿಮಗೇನಿದ್ದರೂ ಅಪರಿಮಿತವಾದ ಅಸ್ತಿತ್ವವಿರುತ್ತದೆ ಅಷ್ಟೆ.

Sadhguru's Poem "Boundless Bubble" | If I Meet my Guru, is this my Last Lifetime?

 

ಕೊನೆತನಕ ಹುಡುಕುತ್ತಲೇ ಉಳಿಯಬೇಡಿ

ನಿಮ್ಮ ಗುರುವ್ನನು ನೀವು ಭೇಟಿಯಾಗಿದ್ದೇ ಆದರೆ, ನೀವು ಮತ್ತೊಮ್ಮೆ ಇಲ್ಲಿ ಹುಟ್ಟಿ ಬರುವ ಪ್ರಶ್ನೆಯೇ ಇಲ್ಲ. ಆದರೆ ನೀವು ನಿಜವಾಗಿ ಅವರನ್ನು ನಿಮ್ಮ ಗುರುವಾಗಿ ಸ್ವೀಕರಿಸದೇ, ಅವರೊಳಗೆ ಬೆರೆತು ಹೋಗುವ ಧೈರ್ಯ ಮಾಡದೇ, ಸುಮ್ಮನೆ ಅವರ ಕಡೆಗೆ ಆಕರ್ಷಿತರಾಗಿದ್ದರೆ, ಅದು ಬೇರೆಯೇ ವಿಷಯ. ಗುಲಾಬಿ ಹೂವಿನ ಪರಿಮಳ ನಿಮಗೆ ಇಷ್ಟವಾದಾಗ, ಗುಲಾಬಿ ಹೂ ಎಲ್ಲಿರುತ್ತದೆಯೋ ನೀವಲ್ಲಿಗೆ ಹೋಗುತ್ತೀರಿ. ಆದರೆ ಕೊನೆವರೆಗೆ ಅದರ ಸುವಾಸನೆಯನ್ನಷ್ಟೇ ಮೂಸುತ್ತಾ ಉಳಿಯಬೇಡಿ. ಗುರುವಿನೊಳಕ್ಕೆ ಇಳಿದು ಅವನೊಟ್ಟಿಗೆ ದಹಿಸುವ ಸಮಯ ಬಂದಿದೆ. ನೀವು ಹಾಗೆ ಮಾಡದಿದ್ದಲ್ಲಿ, ಗುರುವಿನ ನಿಜವಾದ ಉದ್ದೇಶಕ್ಕಾಗಿ ನೀವವನನ್ನು ಬಳಸಿಕೊಳ್ಳುತ್ತಿಲ್ಲ.

ನಿಮ್ಮ ಗುರುವ್ನನು ನೀವು ಭೇಟಿಯಾಗಿದ್ದೇ ಆದರೆ, ನೀವು ಮತ್ತೊಮ್ಮೆ ಇಲ್ಲಿ ಹುಟ್ಟಿ ಬರುವ ಪ್ರಶ್ನೆಯೇ ಇಲ್ಲ. ಆದರೆ ನೀವು ನಿಜವಾಗಿ ಅವರನ್ನು ನಿಮ್ಮ ಗುರುವಾಗಿ ಸ್ವೀಕರಿಸದೇ, ಅವರೊಳಗೆ ಬೆರೆತು ಹೋಗುವ ಧೈರ್ಯ ಮಾಡದೇ, ಸುಮ್ಮನೆ ಅವರ ಕಡೆಗೆ ಆಕರ್ಷಿತರಾಗಿದ್ದರೆ, ಅದು ಬೇರೆಯೇ ವಿಷಯ.

ನಿಮ್ಮ ಬಳಿ ಹಾರಾಡುವ ಸಾಮರ್ಥ್ಯವಿರುವ ಒಂದು ವಿಮಾನವಿದ್ದು, ನೀವದನ್ನು ಒಂದು ಬಸ್ಸಿನ ಹಾಗೆ ಓಡಿಸಲು ನಿಶ್ಚಯಿಸಿದ್ದರೆ ಅದು ತಪ್ಪೇ? ಅದು ತಪ್ಪೆಂದು ನಾನು ಹೇಳುವುದಿಲ್ಲ, ಆದರೆ ಅದು, ಆ ವಿಮಾನವನ್ನು ಉಪಯೋಗಿಸುವ ಅತ್ಯಂತ ಕೆಟ್ಟದಾದ ರೀತಿ. ಒಂದು ವಿಮಾನವನ್ನು ಕಾರಿನಂತೆ ಓಡಿಸುವುದು ಸಹಿಸಲಾಗದ ಹಾಗೂ ದಡ್ಡತನದ ವಿಷಯ. ಅಸಹನೀಯ ಮತ್ತು ಮೂರ್ಖರಾಗಿರುವುದು ತಪ್ಪೇ? ಇಲ್ಲ. ಹಾಗಿರುವುದು ಕೆಟ್ಟದಾಗಿರುತ್ತದೆಯೇ ಹೊರತು ತಪ್ಪಾಗಿರಬೇಕಾಗಿಲ್ಲ. ನಿಮ್ಮನ್ನು ಮಹತ್ತರವಾದ ಸಾಮರ್ಥ್ಯಕ್ಕೆ ಕೊಂಡೊಯ್ಯಬಹುದಾದ ಒಂದು ಸಾಧನವನ್ನು ನೀವು ಸಾಮಾನ್ಯ ರೀತಿಯಲ್ಲಿ ಬಳಸಿದರೆ, ಅದು ಕೇವಲ ಮುಟ್ಠಾಳತನವಷ್ಟೆ. 

ಗುರುವಿನೊಂದಿಗಿನ ಸಂಬಂಧವು ಚಿರಂತನವಾದುದ್ದಲ್ಲ. ಈ ಸಂಬಂಧವನ್ನು ನೀವು ಬೆಳೆಸಿದರೆ, ಬೇರೆಲ್ಲವೂ ಕೊನೆಯಾಗುತ್ತದೆ. ಬೇರೆಲ್ಲಾ ವಿಷಯಗಳು ಕೊನೆಯಾದಾಗ, ಏನೂ ಅಲ್ಲದಿರುವಂತಹ ಒಂದು ಆಯಾಮವು ತೆರೆದುಕೊಳ್ಳುತ್ತದೆ. ಈ ಜೀವವು ವಿಸ್ತರಣೆಗಾಗಿ ಬಯಸುತ್ತಿರುವಾಗ ಹಂಬಲಿಸುವ ಆಯಾಮವೇ ಅದು. ಅದೊಂದು ಸ್ವಾಭಾವಿಕ ಗುರಿ. ಆದರೆ ದಾರಿಯಲ್ಲಿ ಬಹಳಷ್ಟು ಮಾರ್ಗ ಪಲ್ಲಟಗಳಿವೆ ಅಷ್ಟೆ. ಮತ್ತು ಪ್ರತಿಯೊಂದು ಮಾರ್ಗ ಬದಲಾವಣೆಯನ್ನು ತೆಗೆದುಕೊಂಡಾಗಲೂ, ಅದೇ ಸರಿಯಾದ ಮಾರ್ಗವೆಂದು ಸಾಬೀತುಪಡಿಸುವ ಸಲುವಾಗಿ ಜನರು ತಮ್ಮದೇ ಆದ ವೇದಾಂತಗಳನ್ನು ಪ್ರತಿಪಾದಿಸಲು ಶುರುಮಾಡುತ್ತಾರೆ.

ಒಬ್ಬ ಗುರುವು ಕೇವಲ ಒಂದು ಖಾಲಿ ರಂಗಮಂಚವಿದ್ದಂತೆ. ನೀವದರೊಳಗೆ ಪ್ರವೇಶಿಸಿದರೆ, ಆ ದಿನಕ್ಕೆ ಬೇಕಾದ ಯಾವುದೋ ಒಂದು ನಾಟಕವನ್ನವರು ರಚಿಸುತ್ತಾರೆ, ಆದರೆ ವಾಸ್ತವದಲ್ಲಿ, ಅವರೊಂದು ಖಾಲಿ ರಂಗಭೂಮಿಯಷ್ಟೆ – ನಾಲ್ಕು ಗೋಡೆಗಳು ಮಾತ್ರ, ಒಳಗೆಲ್ಲಾ ಖಾಲಿ. 

ಒಂದು ವೇಳೆ ನೀವು ಕಾರಿನಲ್ಲಿ ಎಲ್ಲಿಗಾದರೂ ಹೋಗುತ್ತಿರಬೇಕಾದರೆ ನಿತ್ಯದ ದಾರಿ ಮುಚ್ಚಿಹೋಗಿದ್ದು, ನೀವು ಬೇರೆ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿ ಬಂದರೆ, ಕಾರಿನಲ್ಲಿರುವ ಪ್ರತಿಯೊಬ್ಬರೂ ಬೇರೆ ಬೇರೆ ಮಾರ್ಗಗಳನ್ನು ಸೂಚಿಸಿ, ಅವರು ಹೇಳಿದ್ದೇ ಸರಿ ಎಂದು ವಾದಿಸಲು ಶುರುವಿಟ್ಟುಕೊಳ್ಳುತ್ತಾರೆ ಎನ್ನುವುದನ್ನು ನೀವು ಗಮನಿಸಿದ್ದೀರ? ಒಮ್ಮೆ ದಾರಿಯಲ್ಲಿ ಸ್ಪಷ್ಟವಾದ ಗುರುತು ಇಲ್ಲದಿದ್ದಾಗ, ಪ್ರತಿಯೊಬ್ಬರೂ ಸಹ ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ, ಮತ್ತು ಅದೊಂದೇ ಸರಿಯಾದ ದಾರಿ ಎಂದು ಪ್ರತಿಪಾದಿಸಲು ಶುರುಮಾಡುತ್ತಾರೆ. ಧೂಮಪಾನ ಮಾಡುವ ಒಬ್ಬ ಮನುಷ್ಯ ಅದೇ ಜೀವನವೆಂದು ಹೇಳುತ್ತಾನೆ, ಒಬ್ಬ ಕುಡುಕ ಕುಡಿಯುವುದೇ ಜೀವನವೆಂದು ಹೇಳುತ್ತಾನೆ, ಇನ್ಯಾವುದೋ ವಿಲಾಸದಲ್ಲಿ ತೊಡಗಿರುವವನು ಅದೇ ಜೀವನವೆಂದು ಹೇಳುತ್ತಾನೆ. ಮಾದಕ ವಸ್ತುಗಳನ್ನು ತೆಗೆದುಕೊಳ್ಳುವವನು ಅದೇ ಜೀವನವೆಂದು ಹೇಳುತ್ತಾನೆ, ಅತಿಯಾಗಿ ತಿನ್ನುವವನು ತಿನ್ನುವುದೇ ಜೀವನವೆಂದು ಹೇಳುತ್ತಾನೆ – ಅವರೆಲ್ಲರೂ “ಇದೇ ಜೀವನ” ಎಂದು ಪಟ್ಟುಹಿಡಿದಿದ್ದಾರೆ. ಅದರಿಂದಾಗಿ ನಿಮ್ಮ ದಿಕ್ಕು ತಪ್ಪುತ್ತಿರುತ್ತದೆ.

ಜೀವನದಲ್ಲಿ ಏನನ್ನಾದರೂ ಹೆಚ್ಚೆಚ್ಚು ಮಾಡಿದರೆ, ಅದು ಉತ್ತಮವಾಗುತ್ತ ಹೋಗಬೇಕು. ಆದರೆ ಅದು ಹಾಗಾಗುವುದಿಲ್ಲ. ನೀವು ಹೆಚ್ಚಾಗಿ ತಿಂದರೆ, ಹೆಚ್ಚಾಗಿ ಕುಡಿದರೆ, ಜಾಸ್ತಿ ಧೂಮಪಾನ ಮಾಡಿದರೆ, ಹೆಚ್ಚಾಗಿ ಸಂಭೋಗ ನಡೆಸಿದರೆ, ಜೀವನ ಉತ್ತಮವಾಗುವುದಿಲ್ಲ. ಜನರು ಅವುಗಳನ್ನೆಲ್ಲಾ ಪ್ರಯತ್ನಿಸಿ ನೋಡಿದ್ದಾರೆ, ಆದರೆ ಅವ್ಯಾವುವೂ ಸಹ ಕೆಲಸ ಮಾಡಿಲ್ಲ. ನೀವು ಕೊನೆಯೇ ಇರದಂತೆ ಮಾಡಬಹುದಾದ ಒಂದೇ ಒಂದು ವಿಷಯವೆಂದರೆ “ಏನನ್ನೂ ಮಾಡದೇ ಇರುವುದು”. ಒಬ್ಬ ಗುರುವೆಂದರೆ ಶೂನ್ಯವಷ್ಟೆ. ಕೇವಲ ಶೂನ್ಯತೆಯಷ್ಟೇ ಅಂಧಕಾರವನ್ನು ಓಡಿಸಲು ಸಾಧ್ಯ. ಅದು ಶೂನ್ಯವಾಗಿರುವ ಕಾರಣ ಅಲ್ಲಿ ಏನೂ ಸಹ ನಡೆಯುವುದಿಲ್ಲ. ಏನೂ ನಡೆಯದಿರುವಂತಹ ಕಡೆ, ನೀವು ಬಯಸುವುದಾದರೆ, ಏನು ಬೇಕಾದರೂ ಮಾಡಬಹುದು.

ಒಬ್ಬ ಗುರುವು ಕೇವಲ ಒಂದು ಖಾಲಿ ರಂಗಮಂಚವಿದ್ದಂತೆ. ನೀವದರೊಳಗೆ ಪ್ರವೇಶಿಸಿದರೆ, ಆ ದಿನಕ್ಕೆ ಬೇಕಾದ ಯಾವುದೋ ಒಂದು ನಾಟಕವನ್ನವನು ರಚಿಸುತ್ತಾನೆ, ಆದರೆ ವಾಸ್ತವದಲ್ಲಿ, ಅವನೊಂದು ಖಾಲಿ ರಂಗಭೂಮಿಯಷ್ಟೆ – ನಾಲ್ಕು ಗೋಡೆಗಳು ಮಾತ್ರ, ಒಳಗೆಲ್ಲಾ ಖಾಲಿ. ನೀವು ಒಳಗೆ ಕಾಲಿಟ್ಟರೆ, ನೀವೂ ಸಹ ಶೂನ್ಯವಾಗಿಬಿಡುತ್ತೀರಿ. ಬೇರೆ ಯಾವ ಮಾರ್ಗವೂ ಇಲ್ಲ. ನೀವು ಅವರತ್ತ ನೋಡಿದಿರಿ, ಅವರ ಮಾತುಗಳನ್ನು ಕೇಳಿಸಿಕೊಂಡಿರಿ ಎನ್ನುವುದು ಮುಖ್ಯವಲ್ಲ. ನೀವು ಅವರ ಅಂತರಂಗಕ್ಕಿಳಿಯಬೇಕು. ಆಗ ಮಾತ್ರ ಅವರು ನಿಮ್ಮ ಗುರುವೆಂದು ಅರ್ಥ. ಅಲ್ಲಿಯವರೆಗೆ ಅವರು ನಿಮ್ಮನ್ನು ಕೇವಲ ರಂಜಿಸುತ್ತಿರುತ್ತಾರಷ್ಟೆ, ಏಕೆಂದರೆ ಆ ದಿನಕ್ಕೆ ಸೂಕ್ತವಾದ ನಾಟಕದ ವ್ಯವಸ್ಥೆಯನ್ನವರು ಮಾಡುತ್ತಿರುತ್ತಾರೆ. 

 

ಒಮ್ಮೆ ನೀವು ಆ ಶೂನ್ಯದೊಳಕ್ಕೆ ಕಾಲಿಟ್ಟರೆ, ಮತ್ತೆ ಈ ಭೂಮಿಗೆ ಬರುವ ಸಾಧ್ಯತೆ ಇಲ್ಲ. ಆದರೆ ನೀವು ದೂರದಲ್ಲೆಲ್ಲೋ ನಿಂತು ಗುರುವಿನ ಕಡೆಗೆ ನೋಡುತ್ತಿದ್ದರೆ, ನಿಮಗೆ ಗುರುಗಳ ಚಟ ಹಿಡಿದಿರಬಹುದು, ಹಾಗಾಗಿ ನೀವವರನ್ನು ಹಿಂಬಾಲಿಸುತ್ತಿದ್ದೀರಿ ಎಂದರ್ಥ. ಆದರೆ ದೇಹ ಮತ್ತು ಮನಸ್ಸುಗಳಿಗಿಂತ ಆಳವಾದ ಪ್ರಕ್ರಿಯೆಯೊಂದು ನಿಮಲ್ಲಾಗಿದ್ದೇ ಆದರೆ, ಮತ್ತೊಮ್ಮೆ ಇಲ್ಲಿಗೆ ಬರುವುದು ಅಸಾಧ್ಯವಾದ ವಿಷಯ.

ಸಂಪಾದಕರ ಟಿಪ್ಪಣಿ: ಈ ಲೇಖನವು ಸದ್ಗುರುಗಳ “Emotion: The Juice of Life & Relationships: Bond or Bondage”  ಎಂಬ ಪುಸ್ತಕದಿಂದ ತೆಗೆದುಕೊಂಡ ಆಯ್ದ ಭಾಗವಾಗಿದೆ. ಈ ಪುಸ್ತಕವು Flipkart ಮತ್ತು Amazonನಲ್ಲಿ ಲಭ್ಯವಿದೆ.