ಕರ್ಮ ಎಂದರೇನು? ಒಳ್ಳೆಯ ಮತ್ತು ಕೆಟ್ಟ ಕ್ರಿಯೆಗಳ ವಿವರಣೆಯೊಂದಿಗೆ ಆಗಾಗ್ಗೆ ಉತ್ತರಿಸಲಾಗುವ ಪ್ರಶ್ನೆಯಿದು. ಆದರೆ ಕರ್ಮವು ಅದಕ್ಕಿಂತ ಹೆಚ್ಚು ಆಳವಾದ ವಿಷಯವಾಗಿದೆ. ಯೋಗಿ ಮತ್ತು ಅನುಭಾವಿಯಾದ ಸದ್ಗುರುಗಳು ಈ ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಧ್ಯಾತ್ಮಿಕ ಅನ್ವೇಷಕರ ಜೀವನದಲ್ಲಿ ಕರ್ಮವು ವಹಿಸಬಹುದಾದ ಪಾತ್ರವನ್ನು ವಿವರಿಸುತ್ತಾರೆ.

ಪ್ರಶ್ನೆ: ಕರ್ಮ ಎಂದರೇನು? ವಿವಿಧ ರೀತಿಯ ಕರ್ಮಗಳಿವೆಯೇ ಮತ್ತು ಅವು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಸದ್ಗುರು: ನೀವು "ನನ್ನ ಜೀವ" ಎಂದು ಕರೆಯುವುದು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯಿಂದ ನಿಯಂತ್ರಿಸಲ್ಪಡುವ ಒಂದು ನಿರ್ದಿಷ್ಟ ಪ್ರಮಾಣದ ಶಕ್ತಿಯಾಗಿದೆ. ಈ ಮಾಹಿತಿಯನ್ನು ಇಂದಿನ ಪರಿಭಾಷೆಯಲ್ಲಿ ಸಾಫ್ಟ್‌ವೇರ್ ಎನ್ನಬಹುದು. ಒಂದು ನಿರ್ದಿಷ್ಟ ಪ್ರಮಾಣದ ಜೀವ ಶಕ್ತಿಯನ್ನು ನಿರ್ದಿಷ್ಟ ಪ್ರಮಾಣದ ಮಾಹಿತಿಯೊಂದಿಗೆ ಸೇರಿಸಲಾಗಿರುತ್ತದೆ. ಒಟ್ಟಾಗಿ, ಈ ಮಾಹಿತಿ ತಂತ್ರಜ್ಞಾನ ನೀವು. ನಿಮ್ಮೊಳಗೆ ಸೇರಿರುವ ಮಾಹಿತಿಯ ಪ್ರಕಾರದಿಂದಾಗಿ ನೀವು ಒಂದು ನಿರ್ದಿಷ್ಟ ರೀತಿಯ ಪಾತ್ರವಾಗುತ್ತೀರಿ. ಜೀವನದ ಹಿಂದಿನ ಅಚ್ಚುಗಳು ನೀವು ಹುಟ್ಟಿದ ಕ್ಷಣಕ್ಕಿಂತಲೂ ಹಿಂದಿನವು. ಆದರೆ, ನಿಮಗೆ ಯಾವ ರೀತಿಯ ಪೋಷಕರಿದ್ದರು, ಕುಟುಂಬವಿತ್ತು ಮತ್ತು ಯಾವ ರೀತಿಯ ಶಿಕ್ಷಣವನ್ನು ಹೊಂದಿದ್ದೀರಿ, ನಿಮಗೆ ಯಾವ ರೀತಿಯ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯಿತ್ತು, ಯಾವ ರೀತಿಯ ಸಾಂಸ್ಕೃತಿಕ ವಾಸ್ತವತೆಗಳಿತ್ತು ಎನ್ನುವುದು ನೀವು ಜನಿಸಿದ ಕ್ಷಣದಿಂದ ಇಂದಿನವರೆಗೂ ನಿಮ್ಮ ಗ್ರಹಿಕೆಯಲ್ಲಿರುವ ಅಚ್ಚುಗಳು. ಒಬ್ಬರು ಅವರಿರುವ ರೀತಿಯಲ್ಲಿ ಇರುವುದು ಅವರಲ್ಲಿರುವ ಮಾಹಿತಿಯ ಕಾರಣದಿಂದ. ಇದು ಕರ್ಮ. ಈ ಮಾಹಿತಿಯನ್ನು ಸಾಂಪ್ರದಾಯಿಕವಾಗಿ ಕರ್ಮ ಅಥವಾ ಕರ್ಮ ದೇಹ ಅಥವಾ ಜೀವನಕ್ಕೆ ಕಾರಣೀಭೂತವಾದ ಕಾರಣಾತ್ಮಕ ದೇಹ ಎನ್ನಲಾಗುತ್ತದೆ.

ವಿವಿಧ ರೀತಿಯ ಕರ್ಮಗಳು

ಈ ಮಾಹಿತಿಯು ವಿವಿಧ ಹಂತಗಳಲ್ಲಿರುತ್ತದೆ. ನಾಲ್ಕು ಆಯಾಮಗಳಿವೆ, ಅವುಗಳಲ್ಲಿ ಎರಡು ಈಗ ಪ್ರಸ್ತುತವಲ್ಲ. ಅರ್ಥ ಮಾಡಿಕೊಳ್ಳಲು, ನಾವು ಇತರ ಎರಡರ ಬಗ್ಗೆ ಮಾತನಾಡಬಹುದು. ಒಂದು ಸಂಚಿತ ಕರ್ಮ. ಇದು ಕರ್ಮದ ಗೋದಾಮು, ಇದು ಏಕಕೋಶೀಯ ಜೀವಿ ಮತ್ತು ಜೀವ ವಿಕಸನಗೊಂಡ ಸ್ಥಳದಿಂದ ನಿರ್ಜೀವ ವಸ್ತುಗಳವರೆಗೂ ಹೋಗುತ್ತದೆ. ಎಲ್ಲಾ ಮಾಹಿತಿ ಅಲ್ಲಿದೆ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿ, ಸಾಕಷ್ಟು ಅರಿವನ್ನು ತಂದುಕೊಂಡು ನಿಮ್ಮ ಆಂತರ್ಯವನ್ನು ಅವಲೋಕಿಸಿದರೆ, ನೀವು ಬ್ರಹ್ಮಾಂಡದ ಸ್ವರೂಪವನ್ನು ತಿಳಿಯುವಿರಿ - ನೀವು ಅದನ್ನು ನಿಮ್ಮ ಬುದ್ಧಿಯ ಮೂಲಕ ನೋಡುತ್ತಿರುವ ಕಾರಣದಿಂದಲ್ಲ, ಆದರೆ ಈ ಮಾಹಿತಿಯು ದೇಹದಲ್ಲಿರುವುದರಿಂದ. ಸೃಷ್ಟಿ ಆರಂಭವಾದ ಸಮಯದಿಂದ ಮಾಹಿತಿಯು ಆಗೋದಾಮಿನಲ್ಲಿದೆ. ಅದು ನಿಮ್ಮ ಸಂಚಿತ ಕರ್ಮ. ಆದರೆ ನಿಮ್ಮ ಗೋದಾಮನ್ನು ತೆಗೆದುಕೊಂಡು ಚಿಲ್ಲರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಚಿಲ್ಲರೆ ವ್ಯಾಪಾರ ಮಾಡಲು ಅಂಗಡಿಯಿರಬೇಕು. ಈ ಜೀವನಕ್ಕಾಗಿ ಇರುವ ಆ “ಚಿಲ್ಲರೆ ಅಂಗಡಿ”ಯನ್ನು ಪ್ರಾರಬ್ಧ ಎನ್ನಲಾಗುತ್ತದೆ.

ಪ್ರಾರಬ್ಧ ಕರ್ಮ ಎನ್ನುವುದು ಈ ಜೀವನಕ್ಕಾಗಿ ನಿಗದಿಪಡಿಸಿದ ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯಾಗಿದೆ. ನಿಮ್ಮ ಜೀವದ ಚೈತನ್ಯವನ್ನು ಅವಲಂಬಿಸಿ, ಜೀವವು ಎಷ್ಟು ಮಾಹಿತಿಯನ್ನು ತೆಗೆದುಕೊಳ್ಳಬಹುದು ಎಂಬುದನ್ನು ಸ್ವತಃ ಜೀವವೇ ನಿಗದಿಪಡಿಸುತ್ತದೆ. ಸೃಷ್ಟಿಯು ಕರುಣಾಮಯಿ. ಅದು ನಿಮ್ಮಲ್ಲಿರುವ ಸಂಪೂರ್ಣ ಕರ್ಮವನ್ನು ನೀಡಿದರೆ, ನೀವು ಸತ್ತು ಹೋಗುತ್ತೀರಿ. ಈಗ, ಈ ಜೀವಿತಾವಧಿಯ 30-40 ವರ್ಷಗಳ ಸರಳ ನೆನಪುಗಳಿಂದ ಅನೇಕರು ಚಿತ್ರಹಿಂಸೆಗೆ ಒಳಗಾಗುತ್ತಾರೆ. ಅವರಿಗೆ ಆ ನೆನಪುಗಳನ್ನು ನೂರು ಪಟ್ಟು ಹೆಚ್ಚಾಗಿ ನೀಡಿದರೆ, ಅವರಿಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ, ಪ್ರಕೃತಿಯು ನಿಮಗೆ ನಿಭಾಯಿಸಬಲ್ಲ ನೆನಪುಗಳ ಒಂದು ಭಾಗವನ್ನು, ಅಂದರೆ ಪ್ರಾರಬ್ಧವನ್ನು ನೀಡುತ್ತದೆ.

Inner Engineering Online

ಕರ್ಮ ಎಂದರೇನು ಮತ್ತು ಅನ್ವೇಷಕರ ಜೀವನದಲ್ಲಿ ಅದರ ಪಾತ್ರವೇನು?

ಒಮ್ಮೆ ನೀವು ಆಧ್ಯಾತ್ಮಿಕ ಹಾದಿಯನ್ನು ಪ್ರವೇಶಿಸಿದಾಗ, "ನನ್ನ ಪರಮ ಗುರಿಯನ್ನು ತಲುಪುವ ಅವಸರದಲ್ಲಿದ್ದೇನೆ" ಎಂದು ಹೇಳುತ್ತಿರುತ್ತೀರಿ. ನಿಮಗೆ ನೂರು ಜನ್ಮಗಳನ್ನು ತೆಗೆದುಕೊಳ್ಳುವುದು ಬೇಕಿಲ್ಲ. ಮತ್ತು ಈ ನೂರು ಜನ್ಮಗಳನ್ನು ಜೀವಿಸುವ ಪ್ರಕ್ರಿಯೆಯಲ್ಲಿ ನೀವು ಇನ್ನೊಂದು ಸಾವಿರ ಜನ್ಮಗಳನ್ನು ತೆಳೆಯಲು ಸಾಕಷ್ಟು ಕರ್ಮವನ್ನು ಸಂಗ್ರಹಿಸಬಹುದು. ನೀವು ಅದನ್ನು ತ್ವರಿತಗೊಳಿಸಲು ಬಯಸುತ್ತೀರಿ. ಆದ್ದರಿಂದ, ಒಮ್ಮೆ ಆಧ್ಯಾತ್ಮಿಕ ಪ್ರಕ್ರಿಯೆಯು ಪ್ರಾರಂಭವಾದರೆ, ದೀಕ್ಷೆಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಮಾಡಿದರೆ, ತೆರೆದುಕೊಳ್ಳದೆ ಇರಬಹುದಾದ ಆಯಾಮಗಳನ್ನು ತೆರೆಯುತ್ತದೆ. ನೀವು ಆಧ್ಯಾತ್ಮಿಕರಲ್ಲದಿದ್ದರೆ ನೀವು ಹೆಚ್ಚು ಶಾಂತಿಯುತ ಜೀವನವನ್ನು ನಡೆಸುತ್ತಿದ್ದಿರಬಹುದು, ಆದರೆ ನಿರ್ಜೀವ ಜೀವನವು ಜೀವನಕ್ಕಿಂತ ಸಾವಿಗೆ ಹತ್ತಿರವಾಗಿದೆ. ನಿಮ್ಮೊಳಗೆ ಯಾವುದನ್ನೇ ಮೂಲಭೂತವಾಗಿ ಎಚ್ಚರಗೊಳಿಸದಿದ್ದರೆ, ಬಹುಶಃ ನೀವು ಆರಾಮವಾಗಿ ಜೀವನ ಮುಗಿಸಬಹುದು.

ಹಾಗಾದರೆ ನೀವು ಒಮ್ಮೆ ಆಧ್ಯಾತ್ಮಿಕ ಹಾದಿಯಲ್ಲಿ ನಡೆದರೆ ನಿಮಗೆ ಎಲ್ಲಾ ನಕಾರಾತ್ಮಕ ಸಂಗತಿಗಳು ಸಂಭವಿಸುತ್ತವೆ ಎಂದರ್ಥವೇ? ಅದು ಹಾಗಲ್ಲ. ಜೀವನವು ಪ್ರಚಂಡ ಗತಿಯಲ್ಲಿ ಚಲಿಸುವಾಗ - ನಿಮ್ಮ ಸುತ್ತಮುತ್ತಲಿನ ಜನರ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುವಾಗ - ನಿಮಗೆ ಕೆಲ ದುರಂತಗಳು ಸಂಭವಿಸುತ್ತಿವೆ ಎಂದು ನಿಮಗನಿಸುತ್ತದೆ. ನಿಮಗೆ ಯಾವುದೇ ದುರಂತ ಸಂಭವಿಸುತ್ತಿಲ್ಲ. ಅವರು ಸಾಮಾನ್ಯ ವೇಗದಲ್ಲಿ ಹೋಗುತ್ತಿದ್ದಾರೆ ಆದರೆ ನಿಮ್ಮ ಜೀವನವು ಅತ್ಯಂತ ಕ್ಷೀಪ್ರವಾಗಿ ಮುಂದಕ್ಕೆ ಸಾಗುತ್ತಿದೆ.

... ನೀವು ಪ್ರಾಮಾಣಿಕವಾಗಿ ಆಧ್ಯಾತ್ಮಿಕ ಹಾದಿಯಲ್ಲಿದ್ದರೆ, ಏನೂ ಸ್ಪಷ್ಟವಾಗಿರುವುದಿಲ್ಲ. ಎಲ್ಲವೂ ಮಸುಕು ಮಸಕಾಗಿರುತ್ತದೆ.

ನೀವು ಒಮ್ಮೆ ಆಧ್ಯಾತ್ಮಿಕ ಹಾದಿಗೆ ಬಂದಾಗ, ನೀವು ಶಾಂತವಾಗುತ್ತೀರಿ ಮತ್ತು ಎಲ್ಲವೂ ಸ್ಪಷ್ಟವಾಗುತ್ತದೆ ಎಂಬ ತಪ್ಪು ಕಲ್ಪನೆಯು ಅನೇಕರಿಗಿದೆ. ನೀವು ಅನುಕೂಲಕರ ನಂಬಿಕೆಯ ಕಟ್ಟುಪಾಡಿನ ವ್ಯವಸ್ಥೆಯನ್ನು ಕೈಗೆತ್ತಿಕೊಂಡರೆ ಮತ್ತು ಏಕಪಥ ಮನಸ್ಸಿನವರಾಗಿದ್ದರೆ, ಎಲ್ಲವೂ ಸ್ಪಷ್ಟವಾಗಿರುವಂತೆ ತೋರುತ್ತದೆ. ಆದರೆ ನೀವು ಪ್ರಾಮಾಣಿಕವಾಗಿ ಆಧ್ಯಾತ್ಮಿಕ ಹಾದಿಯಲ್ಲಿದ್ದರೆ, ಏನೂ ಸ್ಪಷ್ಟವಾಗಿರುವುದಿಲ್ಲ. ಎಲ್ಲವೂ ಮಸುಕು ಮಸಕಾಗಿರುತ್ತದೆ. ನೀವು ಹೆಚ್ಚು ಹೆಚ್ಚು ವೇಗವಾಗಿ ಚಲಿಸುವಾಗ ಅದು ಹೆಚ್ಚು ಹೆಚ್ಚು ಮಸುಕಾಗಿರುತ್ತದೆ.

ಕೆಲವು ವರ್ಷಗಳ ಹಿಂದೆ, ನಾನು ಜರ್ಮನಿಯಲ್ಲಿದ್ದೆ ಮತ್ತು ನಾವು ಕಾರ್ಯಕ್ರಮವನ್ನು ಮುಗಿಸಿದ ನಂತರ, ನಾನು ಫ್ರಾನ್ಸ್‍‍ಗೆ ಹೋಗಬೇಕಿತ್ತು, ಅದು ನಾನಿದ್ದ ಸ್ಥಳದಿಂದ ಸುಮಾರು 440 ಕಿ.ಮೀ ದೂರದಲ್ಲಿತ್ತು. ಸಾಮಾನ್ಯವಾಗಿ ಈ ಪ್ರಯಾಣದ ಅವಧಿಯು ಐದು ಗಂಟೆಗಳು. ಐದು ಗಂಟೆಗಳ ಕಾಲ ರಸ್ತೆಯಲ್ಲಿರುವ ಇರಾದೆ ನನಗಿರಲಿಲ್ಲ, ಹಾಗಾಗಿ ನಾವು ವೇಗವಾಗಿ ಹೋಗುತ್ತಿದ್ದೆವು; ಸುಮಾರು 200 ಕಿ.ಮೀ ವೇಗದ ಆಸುಪಾಸಿನಲ್ಲಿ ಹೋಗುತ್ತಿದ್ದೆವು. ಈ ಪ್ರದೇಶದಲ್ಲಿನ ಹಳ್ಳಿಗಾಡು ಸುಂದರವಾಗಿರುತ್ತದೆ; ಅದನ್ನು ನೋಡೋಣ ಎಂದೆಣಿಸಿ ನೋಡಲು ಪ್ರಯತ್ನಿಸಿದೆ. ಆದರೆ ಎಲ್ಲವೂ ಮಸುಕಾಗಿತ್ತು ಮತ್ತು ಒಂದು ಕ್ಷಣವೂ ಸಹ ರಸ್ತೆ ಮೇಲಿನಿಂದ ಬೇರೆಡೆಗೆ ದೃಷ್ಠಿ ಹರಿಸಲಾಗಲಿಲ್ಲ. ಅಂದು ಹಿಮಪಾತವಾಗುತ್ತಿತ್ತು ಮತ್ತು ನಾವು ಅತೀ ವೇಗದಿಂದ ಹೋಗುತ್ತಿದ್ದೆವು.

ಆದ್ದರಿಂದ, ನೀವು ಹೆಚ್ಚು ವೇಗವಾಗಿ ಹೋದಂತೆಲ್ಲಾ, ಎಲ್ಲವೂ ಮಸುಕಾಗಿ ಕಾಣುತ್ತದೆ, ಒಂದು ಕ್ಷಣವೂ ಸಹ ನೀವು ಏನು ಮಾಡುತ್ತಿರುವಿರೋ ಅದರಿಂದ ಬೇರೆಡೆಗೆ ದೃಷ್ಠಿ ಹರಿಸಲಾಗುವುದಿಲ್ಲ. ನಿಮಗೆ ಹಳ್ಳಿಗಾಡನ್ನು ಆನಂದಿಸಬೇಕಿದ್ದರೆ, ಆರಾಮವಾಗಿ ಮತ್ತು ನಿಧಾನವಾಗಿ ಹೋಗಬೇಕು. ನಿಮ್ಮ ಗುರಿಯನ್ನು ತಲುಪುವ ಅವಸರದಲ್ಲಿದ್ದರೆ, ನೀವು ಅತೀ ವೇಗವಾಗಿ ಹೋಗುತ್ತೀರಿ. ನೀವು ಏನನ್ನೂ ನೋಡುವುದಿಲ್ಲ. ನೀವು ಸುಮ್ಮನೇ ಹೋಗುತ್ತಿರುತ್ತೀರಿ. ಆಧ್ಯಾತ್ಮಿಕ ಪಥವೂ ಹೀಗಿಯೇ ಇರುತ್ತದೆ. ನೀವು ನಿಜವಾಗಿಯೂ ಆಧ್ಯಾತ್ಮಿಕ ಪಥದಲ್ಲಿದ್ದರೆ, ನಿಮ್ಮ ಸುತ್ತಲು ಎಲ್ಲವೂ ಪ್ರಕ್ಷುಬ್ಧವಾಗಿರತ್ತದೆ. ಆದರೂ ನೀವು ಹೋಗುತ್ತಿರುತ್ತೀರಿ, ಪರವಾಗಿಲ್ಲ. ಇದು ಸರಿಯೇ? ಅದು ಸರಿಯಾಗಿಲ್ಲದಿದ್ದರೆ, ನೀವು ವಿಕಸನದ ವೇಗದಲ್ಲಿ ಹೋಗಬಹುದು. ಬಹುಶಃ ಇದು ಲಕ್ಷಾಂತರ ವರ್ಷಗಳನ್ನು ತೆಗೆದುಕೊಳ್ಳಬವುದು ಹಾಗೂ ನೀವು ನಿಮ್ಮ ಗುರಿಯನ್ನು ತಲುಪುತ್ತೀರ.

ಅವಸರದಲ್ಲಿರುವವರಿಗೆ, ಒಂದು ರೀತಿಯ ಮಾರ್ಗವಿದೆ. ಅವಸರವಿಲ್ಲದವರಿಗೆ, ಇನ್ನೊಂದು ರೀತಿಯ ಮಾರ್ಗವಿದೆ. ನಿಮಗೇನು ಬೇಕು ಎಂಬುದರ ಬಗ್ಗೆ ನೀವು ಸ್ಪಷ್ಟವಾಗಿರಬೇಕು. ನೀವು ವೇಗದ ಪಥದಲ್ಲಿದ್ದು ನಿಧಾನವಾಗಿ ಹೋಗಲು ಪ್ರಯತ್ನಿಸಿದರೆ, ಬೇರೆಯವರು ನಿಮ್ಮನ್ನು ಹಾಯ್ದುಕೊಂಡು ಹೋಗುತ್ತಾರೆ. ನೀವು ಕಡಿಮೆ ವೇಗದ ಹಾದಿಯಲ್ಲಿದ್ದು ವೇಗವಾಗಿ ಹೋಗಲು ಪ್ರಯತ್ನಿಸಿದರೆ, ನಿಮಗೆ ದಂಡ ವಿಧಿಸಲಾಗುತ್ತದೆ. ಪ್ರತಿಯೊಬ್ಬ ಅನ್ವೇಷಕರು ಇದನ್ನು ನಿರ್ಧರಿಸಬೇಕು - ಅವರು ಕೇವಲ ಪ್ರಯಾಣವನ್ನು ಆನಂದಿಸಲು ಬಯಸುತ್ತಾರೋ ಅಥವಾ ಗುರಿಯನ್ನು ತ್ವರಿತವಾಗಿ ತಲುಪಲು ಬಯಸುತ್ತಾರೋ?

ಸಂಪಾದಕರ ಟಿಪ್ಪಣಿ: ’ಇನ್ನರ್ ಇಂಜಿನಿಯರಿಂಗ್ ಆನ್ಲೈನ್’ ಕನ್ನಡದಲ್ಲಿ ಲಭ್ಯ! ಇದು ಸದ್ಗುರುಗಳು ರೂಪಿಸಿದ 7 ಶಕ್ತಿಯುತ ಅಧ್ಯಾಯಗಳ ಆನ್ ಲೈನ್ ಕೋರ್ಸ್. ಸವಾಲಿನ ಈ ಸಮಯದಲ್ಲಿ 50%ಗೆ ಅರ್ಪಿಸಲಾಗುತ್ತಿದೆ(ಮೇ 31, 2020ರ ವರೆಗೆ ಮಾತ್ರ). ಇಲ್ಲಿ ನೋಂದಾಯಿಸಿ: kannada.sadhguru.org/ieo . COVID ಯೋಧರಿಗೆ ಉಚಿತ!

 

Inner Engineering Online

Purchase the Ebook