ಸೆಪ್ಟೆಂಬರ್ 3 ಸದ್ಗುರುಗಳ ಜನ್ಮದಿನ! ಧ್ಯಾನಲಿಂಗವನ್ನು ಪ್ರತಿಷ್ಠಾಪಿಸಿದ ಮೂರು ವರ್ಷಗಳ ನಂತರ 2002 ರಲ್ಲಿ ಈಶಾ ಯೋಗ ಕೇಂದ್ರದಲ್ಲಿ ನಡೆದ ಸದ್ಗುರುಗಳ ಸತ್ಸಂಗದ ಆಯ್ದ ಭಾಗ ಇಲ್ಲಿದೆ.

ಸದ್ಗುರು: ಮೂರು ವರ್ಷಗಳ ಹಿಂದೆ, ಧ್ಯಾನಲಿಂಗವನ್ನು ಪ್ರತಿಷ್ಠಾಪಿಸಿದ ನಂತರ, ನಾವು ಈ ದಿನವನ್ನು ನೋಡುತ್ತೇವೆಂದು ಎಂದಿಗೂ ಭಾವಿಸಿರಲಿಲ್ಲ, ಆದರೆ ಅನೇಕ ಜನರ ಪ್ರೀತಿ ಮತ್ತು ಇಚ್ಛಾಶಕ್ತಿ ನಮ್ಮನ್ನು ಇಲ್ಲಿಯವರೆಗೆ ತಂದಿದೆ. ಯಾವುದೋ ಕೆಲವು ಕಾರಣಗಳಿಂದಾಗಿ ನಾನು ಬದುಕಬೇಕೆಂದು ಅವರೆಲ್ಲರೂ ಬಯಸಿದ್ದರು, ಆದರೆ ನಾನು ಜೀವನವನ್ನು ಎಂದಿಗೂ ಆ ರೀತಿ ನೋಡಿಲ್ಲ. ನಾನು ಇಂದು ಬೆಳಿಗ್ಗೆ ಕೆಲವು ಜನರ ಬಳಿ ಈ ಬಗ್ಗೆ ಮಾತನಾಡುತ್ತಿದ್ದೆ, ನನಗೆ ಇಷ್ಟು ವಯಸ್ಸಾಗಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ನಿನ್ನೆಯೋ ಮೊನ್ನೆಯೋ ಜನಿಸಿದಂತೆ ಭಾಸವಾಗುತ್ತಿದೆ. ಕಾಲವು ತುಂಬಾ ತ್ವರಿತವಾಗಿಯೂ ಮತ್ತು ಸರಳವಾಗಿಯೂ ಕಳೆದಿದೆ - ಬಹುಶಃ ಇದಕ್ಕೆ ಕಾರಣ ನಾನು ಎಂದಿಗೂ ಯಾವ ಕೆಲಸವನ್ನೂ ಗಂಭೀರವಾಗಿ ಪರಿಗಣಿಸದೇ ಇದ್ದದ್ದು ಇರಬಹುದು, ನಾನು ಜೀವನವನ್ನು ಕೇವಲ ಒಂದು ಆಟದ ರೀತಿ ನಡೆಸಿದ್ದೇನೆ.

ವ್ಯವಹಾರ ಕುದುರಿಸುವವರೇ ವ್ಯವಹಾರವನ್ನು ಮುರಿಯುವವರು

ಆಧ್ಯಾತ್ಮಿಕ ಸಾಧ್ಯತೆ ಎಲ್ಲರಿಗೂ ಲಭ್ಯವಿದೆ ಆದರೆ ದುರದೃಷ್ಟವಶಾತ್, ಕೆಲವೇ ಜನರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ. ಮನುಕುಲದ ಇತಿಹಾಸದಲ್ಲಿ ಇದುವರೆಗೆ ಹೀಗೆಯೇ ಸಾಗುತ್ತಾ ಬಂದಿದೆ. ಪ್ರತಿ ಪೀಳಿಗೆಯಲ್ಲಿಯೂ ಕೆಲವರಷ್ಟೇ ಅರಳುತ್ತಾರೆ. 21 ನೇ ಶತಮಾನದಲ್ಲಿ ಅಧಿಕ ಸಂಖ್ಯೆಯ ಮಾನವರು ಅರಳಬೇಕು ಎಂಬುದು ನನ್ನ ಕನಸಾಗಿದೆ.

ಇದು ನನ್ನ ಜನ್ಮದಿನವಾಗಲಿ ಅಥವಾ ನಿಮ್ಮ ಜನ್ಮದಿನವಾಗಲಿ ಅಥವಾ ಯಾರೊಬ್ಬರ ಜನ್ಮದಿನವಾಗಲಿ - ಪ್ರತಿದಿನ ಯಾರದ್ದಾದರೂ ಜನ್ಮದಿನವಾಗಿರುತ್ತದೆ - ಇದನ್ನು ‘ನಮ್ಮ ಚೀಲ ಸೋರಿಕೆಯಾಗುತ್ತಿದೆ’ ಎಂಬುದಾಗಿ ಎಣಿಸೋಣ. ಮುಂದೊಂದು ದಿನ ಜೀವದಿಂದ ಪೂರ್ಣವಾಗಿ ಖಾಲಿಯಾಗಬಹುದು. ಅದಕ್ಕೂ ಮೊದಲು ಏನಾದರೂ ಸಂಭವಿಸಬೇಕು.

ಜನರು ತಮ್ಮ ಜೀವನವನ್ನು ಪೂರ್ಣಪ್ರಮಾಣದಲ್ಲಿ ನಡೆಯಲು ಅನುಮತಿಸದಿರಲು ಒಂದು ಕಾರಣವೆಂದರೆ ಅವರು ಯಾವಾಗಲೂ ತಮ್ಮ ಜೀವನದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ - ಸಾಧ್ಯವಾದಷ್ಟು ಉತ್ತಮವಾದ ವ್ಯವಹಾರ ಕುದುರಿಸಲು ನೋಡುತ್ತಾರೆ. ಒಂದು ದಿನ, ಶಂಕರನ್ ಪಿಳ್ಳೈ ಮೀನು ಹಿಡಿಯಲು ಹೋಗಿದ್ದನು. ಸ್ವಲ್ಪ ಸಮಯದ ನಂತರ, ಒಂದು ಮೀನು ಸಿಕ್ಕಿತು. ಅದಕ್ಕೆ ಬೆಳ್ಳಿ ಹಾಗೂ ಚಿನ್ನದ ಬಣ್ಣದಲ್ಲಿ ರೆಕ್ಕೆಗಳಿರುವುದನ್ನು ಕಂಡನು. ಅದು ತುಂಬಾ ಸುಂದರವಾಗಿತ್ತು. ಅವನು ಅದನ್ನು ಬುಟ್ಟಿಯಲ್ಲಿ ಹಾಕಿದನು, ಮೀನು ಜೀವ ಉಳಿಸಿಕೊಳ್ಳುವುದಕ್ಕಾಗಿ ಹೋರಾಡುತ್ತಿತ್ತು.

ನಂತರ, ಅವನ ಆಶ್ಚರ್ಯಕ್ಕೆ, ಅದು ಮಾತನಾಡಲು ಆರಂಭಿಸಿತು, “ನನ್ನನ್ನು ನದಿಗೆ ಹೋಗಲು ಬಿಡು. ನನ್ನನ್ನು ಮತ್ತೆ ನೀರಿನಲ್ಲಿ ಇಳಿಸು. ನಾನು ನಿನ್ನ ಮೂರು ಆಸೆಗಳನ್ನು ಪೂರೈಸುತ್ತೇನೆ. ನೀನು ಏನು ಬೇಕಾದರೂ ಕೇಳಬಹುದು, ಆದರೆ ಮೊದಲು ನನ್ನನ್ನು ಮತ್ತೆ ನೀರಿನಲ್ಲಿ ಇಳಿಸು” ಎಂದು ಕೇಳಿಕೊಂಡಿತು. ಇದನ್ನು ಕೇಳಿದ ಶಂಕರನ್ ಪಿಳ್ಳೈ ಕೆಲವು ನಿಮಿಷ ಯೋಚಿಸಿದ. ಮೀನು ಜೀವಕ್ಕಾಗಿ ಹೋರಾಡುತ್ತಿತ್ತು. ದುರ್ಬಲವಾಗುತ್ತಿತ್ತು. ನಂತರ ಅವನು, “ಸರಿ ಅದನ್ನು ಐದು ಆಸೆಗಳನ್ನಾಗಿ ಮಾಡು, ನಿನ್ನನ್ನು ಬಿಡುತ್ತೇನೆ” ಎಂದನು. ಮೀನು, "ಇಲ್ಲ, ಮೂರು" ಎಂದು ಹೇಳಿತು. ಆಗಲೇ ಅದರ ಧ್ವನಿ ದುರ್ಬಲವಾಗಿತ್ತು. ಶಂಕರನ್ ಪಿಳ್ಳೈ ಇನ್ನೂ ಕೆಲವು ನಿಮಿಷ ಯೋಚಿಸಿ, “ಸರಿ ನಾಲ್ಕೂವರೆ” ಎಂದು ಕೇಳಿದನು. ಮೀನು ತುಂಬಾ ದುರ್ಬಲವಾಗಿತ್ತು. ಆದರೂ ಅದು, "ಇಲ್ಲ, ಕೇವಲ ಮೂರು, ನಾನು ಕೇವಲ ಮೂರನ್ನು ಮಾತ್ರ ನೀಡಬಲ್ಲೆ" ಎಂದಿತು. ಶಂಕರನ್ ಪಿಳ್ಳೈ ಮತ್ತೆ, “ಸರಿ ನಾವು ಕಡೆಯದಾಗಿ ಒಪ್ಪಂದ ಮಾಡಿಕೊಳ್ಳೋಣ - ನಾಲ್ಕು” ಎಂದು ಕೇಳಲು, ಮೀನು ಏನನ್ನೂ ಹೇಳಲಿಲ್ಲ, ಅದು ಆಗಲೇ ಸತ್ತಿತ್ತು.

https://twitter.com/SadhguruJV/status/639333538865762304
https://twitter.com/SadhguruJV/status/639333796073066496

ಜೀವನವು ಬಹಳ ಸಂಕ್ಷಿಪ್ತ. ನೀವು ಅದರೊಂದಿಗೆ ವ್ಯವಹಾರಗಳನ್ನು ಮಾಡಲು ಪ್ರಯತ್ನಿಸಿದರೆ, ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಅದು ಮುಗಿದು ಹೋಗುತ್ತದೆ. ಜನ್ಮದಿನಗಳು, ನಮ್ಮ ಜೀವನ ಮುಗಿಯುತ್ತಿದೆ ಎಂಬುದನ್ನು ನಮಗೆ ಜ್ಞಾಪಿಸುತ್ತಿದೆಯಷ್ಟೇ. ಇದು ಒಂದು ರಂಧ್ರವಿರುವ ಚೀಲದಂತೆ. ಏನಾಗುತ್ತಿದೆ ಎಂದು ನಿಮಗೆ ತಿಳಿಯುವ ಮೊದಲೇ, ಚೀಲವು ಖಾಲಿಯಾಗಿ ಬೇರ್ಪಡುತ್ತದೆ. ಜೀವನವು ಸದಾ ಕಾಲ ಜಾರುತ್ತಲೇ ಇದೆ. ಇದರ ಬಗ್ಗೆ ಎಚ್ಚರವಾಗಿರದಿದ್ದರೆ, ಒಬ್ಬ ವ್ಯಕ್ತಿಯು ತನ್ನ ಆಂತರಿಕ ಯೋಗಕ್ಷೇಮದತ್ತ ಗಮನ ಹರಿಸದಿದ್ದರೆ, ಸಾವಿನ ಕ್ಷಣವು ವಿಷಾದಕರವಾಗಿರುತ್ತದೆ. ಮತ್ತು, ನೀವು ಇನ್ನೂ ಎಷ್ಟು ಜನ್ಮದಿನಗಳನ್ನು ನೋಡುತ್ತೀರಿ ಎಂಬುದು ನಿಮಗೆ ತಿಳಿದಿಲ್ಲ, ಅಲ್ಲವೇ?


 

ನಾನು ಇನ್ನೂ ಎಷ್ಟು ಜನ್ಮದಿನಗಳನ್ನು ನೋಡಬೇಕೆಂದು ಇನ್ನೂ ನಿರ್ಧರಿಸಿಲ್ಲ. ಆದರೆ ಕನಿಷ್ಠ ಪಕ್ಷ ನಾನು ‘ಇನ್ನೆಷ್ಟು ನೋಡಬಹುದು’ ಅನ್ನುವುದರ ಬಗ್ಗೆ ನನ್ನಲ್ಲಿ ಆಯ್ಕೆಯಾದರೂ ಇದೆ. ನಿಮಗೆ ಆ ಆಯ್ಕೆಯೂ ಇಲ್ಲ. ನಿಮ್ಮ ಮೇಲೆ ಹಲವಾರು ಶಕ್ತಿಗಳ ಪ್ರಭಾವಗಳಿವೆ. ಯಾವುದೇ ಕ್ಷಣ ಅದು ಸಂಭವಿಸಬಹುದು. ಆದ್ದರಿಂದ, ಇದು ನನ್ನ ಜನ್ಮದಿನವಾಗಲಿ ಅಥವಾ ನಿಮ್ಮ ಜನ್ಮದಿನವಾಗಲಿ ಅಥವಾ ಯಾರೊಬ್ಬರ ಜನ್ಮದಿನವಾಗಲಿ - ಪ್ರತಿದಿನ ಯಾರದ್ದಾದರೂ ಜನ್ಮದಿನವಾಗಿರುತ್ತದೆ - ಇದನ್ನು ‘ನಮ್ಮ ಚೀಲ ಸೋರಿಕೆಯಾಗುತ್ತಿದೆ’ ಎಂಬುದಾಗಿ ಎಣಿಸೋಣ. ಮುಂದೊಂದು ದಿನ ಜೀವದಿಂದ ಪೂರ್ಣವಾಗಿ ಖಾಲಿಯಾಗಬಹುದು. ಅದಕ್ಕೂ ಮೊದಲು ಏನಾದರೂ ಸಂಭವಿಸಬೇಕು.

100% ಗಮನದ ಅವಶ್ಯಕತೆ

ನಿಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯ ಮೇಲೆ 100% ಗಮನಹರಿಸುವುದರಿಂದ ನೀವು ಇತರ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದರ್ಥವಲ್ಲ. ನೀವು ಹೊರಜಗತ್ತಿನಲ್ಲಿ ಅಗತ್ಯವಿರುವ ಕಾರ್ಯಗಳೆಲ್ಲವನ್ನೂ ಮಾಡಬಹುದು. ನೀವು ಹೊರಗೆ ಏನೇ ಮಾಡುತ್ತಿರಬಹುದು - ನೀವು ನಡೆಯುತ್ತಿರಬಹುದು, ಮಾತನಾಡುತ್ತಿರಬಹುದು, ಅಡುಗೆ ಮಾಡುತ್ತಿರಬಹುದು, ಊಟ ಮಾಡುತ್ತಿರಬಹುದು ಅಥವಾ ಬೇರಾವುದೇ ಕೆಲಸ ಮಾಡುತ್ತಿರಬಹುದು - ಅವೆಲ್ಲದುದರ ಜೊತೆಜೊತೆಗೇ ನಿಮ್ಮ ಆಂತರಿಕ ಪ್ರಕ್ರಿಯೆಯನ್ನೂ ಹಿಡಿತದಲ್ಲಿಟ್ಟುಕೊಳ್ಳಬಹುದು. ನಾವು ಕೇವಲ ಬೆಳಿಗಿನ ಯೋಗ ಅಥವಾ ಸಂಜೆ ಯೋಗ ಮಾಡುತ್ತೇವೆ, ಉಳಿದ ಸಮಯ ನಾವು ನಮ್ಮದೇ ಮೂರ್ಖ ಜೀವನವನ್ನು ಮುಂದುವರೆಸುತ್ತೇವೆ ಎಂದರೆ ಅದು ಒಳ್ಳೆಯದಲ್ಲ. ಅದು ಪ್ರತಿ ಕ್ಷಣದಲ್ಲೂ ನಡೆಯದ ಹೊರತು, ಏನೂ ಪ್ರಯೋಜನಕಾರಿಯಾಗುವುದಿಲ್ಲ.

ನಿಮ್ಮಲ್ಲಿ ಆಧ್ಯಾತ್ಮಿಕದ ಹಾದಿಯ ಹಾತೊರೆಯುವಿಕೆಯು ಬಂದ ನಂತರ, ಅದನ್ನು ಮತ್ತಷ್ಟು ತೀವ್ರಗೊಳಿಸುವುದರ ಮೂಲಕ ಅರಳಿಸಬಹುದು. ನೀವು ಏನನ್ನು ಮಾಡುತ್ತಿದ್ದೀರಿ ಎಂಬುದು ಮುಖ್ಯವಾಗುವುದಿಲ್ಲ, ಯವುದೇ ಕೆಲಸವಾಗಿರಲಿ, ಅದು ಎಷ್ಟು ತೀವ್ರವಾಗಿ ನಡೆಯುತ್ತಿದೆ ಎಂಬುದು ಮುಖ್ಯವಾಗುತ್ತದೆ. ಒಮ್ಮೆ, ಕೆಲವು ಜನರು ಜೀವನದ ಯಾವುದೋ ಒಂದು ಅಂಶದ ಬಗ್ಗೆ ಕೇಳಿದಾಗ, ಯೇಸು “ಲಿಲ್ಲಿ ಹೂವುಗಳನ್ನು ನೋಡಿ. ಅವು ಗಾಣ ತಿರುಗುವುದಿಲ್ಲ, ನೇಯ್ಗೆ ಮಾಡುವುದಿಲ್ಲ, ಅದು ಬೇರೇನು ಶ್ರಮ ಪಡುವುದಿಲ್ಲ, ಆದರೆ ಅದು ಎಷ್ಟು ಸುಂದರವಾಗಿವೆಯೆಂದು ನೋಡಿ” ಎಂದರು. ಅದರ ಜೀವನದ ತೀವ್ರತೆಯೇ ಅದನ್ನು ಸುಂದರವಾಗಿಸುತ್ತದೆ. ನೀವು ಸುಂದರವಾಗುವುದು ನೀವು ಮಾಡುವ ಕೆಲಸದಿಂದಲ್ಲ. ನೀವು ಏನು ಮಾಡುತ್ತಿದ್ದರೂ ಸರಿ - ನೀವು ಕುಳಿತುಕೊಂಡರೂ, ನಿಂತರೂ, ಊಟ ಮಾಡಿದರೂ, ಸೇವೆ ಮಾಡಿದರೂ, ಗುಡಿಸಿದರೂ, ಪ್ರಾಣಾಯಾಮ ಅಥವಾ ಧ್ಯಾನ ಮಾಡುತ್ತಿದ್ದರೂ - ಏನೇ ಇರಲಿ ನೀವು ಎಷ್ಟು ತೀವ್ರತೆಯಿಂದ ಮಾಡುತ್ತಿದ್ದೀರಿ ಅದರಿಂದಲೇ ನೀವು ಸುಂದರವಾಗುತ್ತೀರಿ.

ಸಂಪಾದಕರ ಟಿಪ್ಪಣಿ: ಈಶಾ ಡೌನ್‌ಲೋಡ್‌ಗಳಲ್ಲಿ ಲಭ್ಯವಿರುವ “A Guru Always Takes You For A Ride” ಎಂಬ ಇ- ಪುಸ್ತಕದಲ್ಲಿ ಆಧ್ಯಾತ್ಮಿಕ ಪ್ರಕ್ರಿಯೆ ಮತ್ತು ಗುರುಗಳ ಪಾತ್ರವನ್ನು ಸದ್ಗುರುಗಳು ಆಳವಾಗಿ ತಿಳಿಸಿಕೊಟ್ಟಿದ್ದಾರೆ. ನೀವು ಬಯಸಿದದನ್ನು ಪಾವತಿಸಿ ಮತ್ತು ಅದನ್ನು ಡೌನ್‌ಲೋಡ್ ಮಾಡಿ. ಉಚಿತ ಡೌನ್‌ಲೋಡ್‌ಗಾಗಿ “0” ಅನ್ನು ನಮೂದಿಸಿ ಅಥವಾ “ಉಚಿತವಾಗಿ ಪಡೆಯಿರಿ” ಕ್ಲಿಕ್ ಮಾಡಿ.