ಹಣ ಯಾವ ಸನ್ನಿವೇಶಗಳಲ್ಲಿ ಮಹತ್ವ ಪಡೆಯುತ್ತದೆ ಮತ್ತು ಯಾವ ಸನ್ನಿವೇಶಗಳಲ್ಲಿ ಅದಕ್ಕೆ ಮಹತ್ವ ಇರುವುದಿಲ್ಲ, ಹಾಗೂ ಹಣಕಾಸಿನ ನಿರ್ವಹಣೆಯ ವಿಚಾರಕ್ಕೆ ಬಂದಾಗ ಅದರ ಸದ್ಬಳಕೆ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಸದ್ಗುರಗಳು ಬೆಳಕು ಚೆಲ್ಲುತ್ತಾರೆ.

ಸದ್ಗುರು: ಹಿಂದೊಮ್ಮೆ, ನನ್ನ ಬಳಿಗೆ ಒಬ್ಬ ಮನುಷ್ಯನನ್ನು ಒಬ್ಬರು ಕೆರೆದುಕೊಂಡು ಬಂದರು. ಅವರು ತೀವ್ರ ನಿರುತ್ಸಾಹಿಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದರು. ಅದಕ್ಕೆ ಕಾರಣ, 5 ವರ್ಷಗಳ ಹಿಂದೆ ಅವರ ಬಳಿ ಮೂರುಸಾವಿರ ಕೋಟಿಯಷ್ಟು ಅಸ್ತಿ ಇತ್ತು. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದ್ದು, ಯಾವುದೋ ಅನಿರೀಕ್ಷಿತ ದುರ್ಘಟನೆ ನಡೆದಿದ್ದರಿಂದ ಅವರು ಸ್ವಲ್ಪ ಮಟ್ಟಿಗೆ ನಷ್ಜ್ಟ ಎದುರಿಸಬೇಕಾಗಿ ಬಂದಿತು. ಅವರು ನನ್ನ ಹತ್ತಿರ ಬಂದಾಗ ಅವರ ಅಸ್ತಿಯ ಮೊತ್ತ 250 ಕೋಟಿ ರೂಪಾಯಿಗಳು ಆಗಿತ್ತು. ಆ ಕಾರಣ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದರು. ಬಹುಪಾಲು ಭಾರತದ ಜನರಿಗೆ ಅಷ್ಟು ಹಣವನ್ನು ಕೊಟ್ಟು, "ನಿಮಗೆ ಹಣ ಬೇಕೇ ಅಥವಾ ಸ್ವರ್ಗ ಬೇಕೇ ಎಂದು ಕೇಳಿದರೆ" ಅವರು ಹಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಮನುಷ್ಯ ಕುಗ್ಗಿಹೋಗಿದ್ದಾನೆ! ನೀವು ಹಣವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡರೆ ಉತ್ತಮ. ಆದರೆ ಅದು ನಿಮ್ಮ ತಲೆಯೊಳಗೆ ಇಳಿಯಿತೆಂದರೆ ಆಗ ನಿಮ್ಮ ಜೀವನ ಸಂಕಟಮಯವಾಗುತ್ತದೆ. ಏಕೆಂದರೆ ಅದನ್ನಿಟ್ಟುಕೊಳ್ಳಲು ತಲೆ ಸೂಕ್ತ ಜಾಗವಲ್ಲ.

ಸಂಪತ್ತು ಮಾನವನ ಯೋಗಕ್ಷೇಮಕ್ಕೆ ಒಂದು ಉಪಕರಣವಷ್ಟೇ, ಅದೇ ಎಲ್ಲವೂ ಅಲ್ಲ.

ಪ್ರಪಂಚದಲ್ಲಿ ಈಗ “ಸಂಪತ್ತಿನ ವೃದ್ಧಿ” ಮುಖ್ಯ ಅಲ್ಲ, ಬದಲಿಗೆ “ಯೋಗಕ್ಷೇಮ”ದ ವೃದ್ಧಿ ಮುಖ್ಯವಾಗಿದೆ. ನಾವು ಇಂದು ಜಗತ್ತಿನಲ್ಲಿ ಯೋಗಕ್ಷೇಮವನ್ನು ವೃದ್ಧಿಸಬೇಕು. ಸಂಪತ್ತು ಮಾನವನ ಯೋಗಕ್ಷೇಮಕ್ಕೆ ಬೇಕಾದ ಒಂದು ಉಪಕರಣವಷ್ಟೇ ಹೊರತು, ಅದೇ ಎಲ್ಲವೂ ಅಲ್ಲ. ಸಂಪತ್ತು ಎಂದರೆ ಬಾಹ್ಯಪ್ರಪಂಚವನ್ನು ನಮಗೆ ಅನುಕೂಲಕರವನ್ನಾಗಿಸುವ ಬಗೆ. ಆದರೆ ಇವತ್ತು ಜನರು ಅದನ್ನು ತಮ್ಮ ಮತಧರ್ಮ ಎಂಬಂತೆ ಹಿಂಬಾಲಿಸುತ್ತಿದ್ದಾರೆ. ಹಣ ಕೇವಲ ಒಂದು ಮಾಧ್ಯಮವೇ ಹೊರತು, ಅದುವೇ ಅಂತಿಮ ಗುರಿಯಲ್ಲ. ನಾವು ವಿನಾ ಕಾರಣ ಸಂಪತ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದೇವೆ. ಅದು ಕೆಟ್ಟದ್ದೇ? ಅದು ಒಳ್ಳಯದ್ದೇ? ಎರಡೂ ಅಲ್ಲ. ಅದು ನಾವೇ ಸೃಷ್ಟಿಸಿರುವ ಒಂದು ಸಾಧನ ಅಥವ ಉಪಕರಣ ಅಷ್ಟೇ.

ಯಾವ ಮನುಷ್ಯನೂ ಹಣವನ್ನು ಯಾಚಿಸುತ್ತಿಲ್ಲವೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದು ನಿಮಗೆ ಹಾಸ್ಯಾಸ್ಪದ ಎನ್ನಿಸಬಹುದಾದರೂ, ನಾನು ಏನು ಹೇಳ ಬಯಸುತ್ತಿದ್ದೇನೆಂದರೆ, ಅವರ ನಿಜವಾದ ಅಪೇಕ್ಷೆ ಹಣವಲ್ಲ. ಅವರು ತಮ್ಮ ಜೀವನದಲ್ಲಿ ಯಾವುದು ಉತ್ಕೃಷ್ಟ ಎಂದು ಭಾವಿಸುತ್ತಾರೆಯೋ ಅದನ್ನು ಪಡೆಯಲು ಹಣ ಒಂದು ಮಾಧ್ಯಮವಾಗಿದೆ ಅಷ್ಟೆ.

ಹಣವು ನಿಮ್ಮ ಜೇಬಿನಲ್ಲಿರದೇ ನಿಮ್ಮ ಮೆದುಳಿಗೆ ಏರಿತೆಂದರೆ, ನಿಮ್ಮ ಜೀವನ ದುಃಖಕರವಾಗುತ್ತದೆ.

ಎಲ್ಲರಿಗೂ ಅವರ ಜೀವನ ಹಿತಕರವಾಗಿರಬೇಕೆಂದು ಆಸೆ ಇರುತ್ತದೆ. ನಾವು ಹಿತ ಎಂದಾಗ, ಅದು ಐದು ಬೇರೆ ಬೇರೆ ರೀತಿಗಳಲ್ಲಿ ಇರುತ್ತದೆ. ಶರೀರವು ಬಹಳ ಹಿತಕರವಾದಾಗ ಅದನ್ನು ನಾವು ಸುಖ ಅಥವಾ ವಿಲಾಸವೆನ್ನುತ್ತೇವೆ. ನಿಮ್ಮ ಮನಸ್ಸು ಹಿತವಾದಾಗ ಅದನ್ನು ನಾವು ಶಾಂತಿಯೆಂದು ಕರೆಯುತ್ತೇವೆ. ಅದು ಬಹಳ ಹಿತವಾದಾಗ ಅದನ್ನು ನಾವು ಮಹದಾನಂದವೆಂದು ಕರೆಯುತ್ತೇವೆ. ನಿಮ್ಮ ಭಾವನೆಗಳು ಹಿತವಾದಾಗ ನಾವು ಅದನ್ನು ಪ್ರೇಮವೆಂದು ಕರೆಯುತ್ತೇವೆ. ಅದು ಇನ್ನೂ ಹೆಚ್ಚು ಹಿತವಾದಾಗ ಅದನ್ನು ಅನುಕಂಪವೆಂದು ಕರೆಯುತ್ತೇವೆ. ನಿಮ್ಮ ಪ್ರಾಣಶಕ್ತಿಗಳು ಹಿತವಾದಾಗ ಅದನ್ನು ಪರಮಾನಂದವೆಂದು ಕರೆಯುತ್ತೇವೆ. ಅದು ಹೆಚ್ಚು ಹಿತವಾದಾಗ ನಾವು ಅದನ್ನು ಬ್ರಹ್ಮಾನಂದವೆಂದು ಕರೆಯುತ್ತೇವೆ. ನಿಮ್ಮ ಸುತ್ತಮುತ್ತಲಿನ ಪರಿಸರ ಹಿತವಾದಾಗ ಅದನ್ನು ನಾವು ಯಶಸ್ಸು ಎಂದು ಕರೆಯುತ್ತೇವೆ. ನಿಮಗೆ ಇವುಗಳೇ ಬೇಕು ಅಲ್ಲವೇ? "ಇಲ್ಲ, ನಾನು ಸ್ವರ್ಗಕ್ಕೆ ಹೋಗಬೇಕು." – ಅನ್ನುವವರಿಗೆ, “ಏಕೆ?” ಎಂದು ಕೇಳಿದಾಗ ಅದು ಬಹಳ ಹಿತವಾದ ಸ್ಥಳವೆಂದು ಪ್ರಚಾರಗಳು ಹೇಳುತ್ತವೆ ಎನ್ನುತ್ತಾರೆ. ಆದ್ದರಿಂದ, ನಿಮಗೆ ಬೇಕಾಗಿರುವುದೆಲ್ಲಾ ಹಿತಕರವಾಗಿರುವುದು. ಮತ್ತು ಈಗ ಈ ಪ್ರಪಂಚದಲ್ಲಿ, ನಿಮಗೆ ಏನೆಲ್ಲಾ ಬೇಕೋ ಅದನ್ನು ಹಣದಿಂದ ಪಡೆಯಬಹುದು ಅಂದುಕೊಂಡಿದ್ದೀರ. ಅದು ಸ್ವಲ್ಪ ಮಟ್ಟಕ್ಕೆ ನಿಜ ಕೂಡ.

ಆದರೆ ಹಣ ನಿಮಗೆ ಬಾಹ್ಯ ಜಗತ್ತಿನ ಹಿತವನ್ನು ಕೊಡಿಸಬಹುದು. ಅದು ನಿಮ್ಮಲ್ಲಿ ಆಂತರಿಕ ಹಿತವನ್ನು ನೀಡಲು ಸಾಧ್ಯವಿಲ್ಲ. ನಿಮ್ಮ ಬಳಿ ಬಹಳ ಹಣವಿದ್ದರೆ ನೀವು ಒಂದು ಐಷಾರಾಮಿ ಹೋಟೆಲ್‍ನಲ್ಲಿ ತಂಗಬಹುದು, ಆದರೆ ನಿಮ್ಮ ಶರೀರ, ಮನಸ್ಸು, ಭಾವನೆಗಳು ಮತ್ತು ಪ್ರಾಣಶಕ್ತಿ ಹಿತಕರವಾಗಿಲ್ಲದಿದ್ದರೆ. ನೀವು ಐಷಾರಾಮಿ ಹೋಟೆಲ್ ನಲ್ಲಿ ಸಂತೋಷದಿಂದ ಇರಬಲ್ಲರೇ? ಇಲ್ಲ. ಈ ನಾಲ್ಕು ಅಂಶಗಳು ಬಹಳ ಹಿತಕರವಾಗಿತ್ತೆಂದರೆ ನೀವು ಒಂದು ಮರದ ಕೆಳಗಿದ್ದರೂ ಸಹ ಆನಂದದಿಂದಿರಬಹುದು. ಅಂದರೆ ಅದರ ಅರ್ಥ ನಿಮ್ಮ ಹತ್ತಿರ ಹಣವಿರಬಾರದೆಂದೇ? ಹಾಗಲ್ಲ. ಆದರೆ, ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು - ಯಾವುದು ಮೊದಲು ಬರಬೇಕು? ಎಂಬುದನ್ನು ತಿಳಿದುಕೊಳ್ಳಬೇಕು. ಈ ನಾಲ್ಕು ಅಂಶಗಳು ನಿಮ್ಮಲ್ಲಿ ಹಿತವಾಗಿದ್ದು, ನಿಮ್ಮ ಹತ್ತಿರ ಹಣವೂ ಇದ್ದರೆ, ನಿಮ್ಮ ಹೊರ ಪ್ರಪಂಚವನ್ನು ಹಿತವಾಗಿರಿಸಿಕೊಳ್ಳಬಹುದು. ಆದ್ದರಿಂದ ಹಣವನ್ನು ಹೊಂದುವುದು ಸರಿಯೇ ಅಥವಾ ತಪ್ಪೇ ಎಂಬುದು ಇಲ್ಲಿ ವಿಚಾರವಲ್ಲ. ಅದು ಒಂದು ರೀತಿಯ ಸಾಧನ ಅಥವಾ ಉಪಕರಣ ಅಷ್ಟೇ. ಹಣವು ನಿಮ್ಮ ಜೇಬಿನಲ್ಲಿಲ್ಲದೇ ಅದು ನಿಮ್ಮ ಮೆದುಳಿಗೆ ಏರಿತೆಂದರೆ, ನಿಮ್ಮ ಜೀವನ ದುಃಖಕರವಾಗುತ್ತದೆ.

Editor’s Note: Follow INSIGHT on Twitter and LinkedIn.