ಇಪ್ಪತ್ತು ವರ್ಷಗಳ ಹಿಂದೆ, ಈಶದ ಮೊದಲ ಹೋಲ್ನೆಸ್ ಪ್ರೋಗ್ರಾಮ್ ಪ್ರಾರಂಭವಾಯಿತು. ಸುಮಾರು ನಲವತ್ತು ಜನ ಮತ್ತು ಬೆರಳೆಣಿಕೆಯಷ್ಟು ಸ್ವಯಂಸೇವಕರು ಇದರಲ್ಲಿ ಭಾಗವಹಿಸಿದ್ದರು. 90 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಹಾರವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೆಚ್ಚುಕಮ್ಮಿ ಒಬ್ಬರೇ ನೋಡಿಕೊಂಡರು. ಅವರೇ ಈಶದ ಅತ್ಯಂತ ಹಿರಿಯ ಸ್ವಯಂ-ಸೇವಕರಲ್ಲಿ ಒಬ್ಬರಾದ ಸರಸ್ವತಿ ಅಜ್ಜಿ.

"ಆಗ, ಇದ್ದಿದ್ದು ಟಿನ್ ಛಾವಣಿಯದ್ದೊಂದು ಚಿಕ್ಕ ಜೋಪಡಿಯಷ್ಟೆ. ಅಡುಗೆ ಮಾಡಲು ನಮ್ಮ ಬಳಿ ಸರಿಯಾದ ಪಾತ್ರೆಗಳೂ ಇರಲಿಲ್ಲ. ಅಲ್ಲೇ ಒಬ್ಬ ದನಕಾಯುವವನ ಬಳಿಯಿದ್ದ ಸ್ಟವ್ ಒಂದನ್ನು ನಾವು ಬಳಸುತ್ತಿದ್ದೆವು." ಎಂದು ಅಜ್ಜಿ ನೆನಪು ಮಾಡಿಕೊಳ್ಳುತ್ತಾರೆ. “ಈ ಕಾರ್ಯಕ್ರಮದ ಸಮಯದಲ್ಲಿ ಎಲ್ಲವೂ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿತ್ತು. ಸ್ವಯಂ-ಸೇವಕರಲ್ಲಿ ಒಬ್ಬರು ತರಕಾರಿಯನ್ನು ತರುತ್ತಿದ್ದರು; ಇಲ್ಲೇ ಪಾಲಕ್ ಸೊಪ್ಪು ಬೆಳೆಯುತ್ತಿತ್ತು, ಹಾಗಾಗಿ ಅದನ್ನು ಉಪಯೋಗಿಸಿ ಏನಾದರೊಂದನ್ನು ಮಾಡುತ್ತಿದ್ದೆ. ಅದೊಂದಿಗೆ, ಅಡೈ, ಉಪ್ಮಾ ಮತ್ತು ಅನ್ನ. ನನಗಿನ್ನೂ ನೆನಪಿದೆ, ಒಬ್ಬ ಸ್ವಯಂ-ಸೇವಕನಿಗೆ ಸಿಹಿ ತಿನಿಸು ಎಂದರೆ ಬಹಳ ಇಷ್ಟ. ಹಾಗಾಗಿ, ನಮ್ಮ ಬಳಿ ಇದ್ದ ಪದಾರ್ಥಗಳಿಂದ ಏನು ಸಾಧ್ಯವೋ ಅದನ್ನು ತಯಾರಿಸುತ್ತಿದ್ದೆ."

ಆಗ, ಕೇವಲ ಮೂರು ಕೊಠಡಿಗಳಿದ್ದವು: ಕಲ್ಲಿನ ಎರಡು ಕೊಠಡಿಗಳು ಮತ್ತು ಅಡುಗೆ ಕೆಲಸ ನಡೆಯುತ್ತಿದ್ದ ಒಂದು ಸಣ್ಣ ಜೋಪಡಿ. ಸದ್ಗುರುಗಳು ಇಲ್ಲಿ ಅಪರೂಪಕ್ಕೊಮ್ಮೆ ತಿನ್ನುತ್ತಿದ್ದರು - ಆಗ ಅವರು ಕೊಯಮತ್ತೂರಿನಲ್ಲಿದ್ದರು. ಅವರು ಇಲ್ಲಿ ಬಂದಾಗಲೆಲ್ಲಾ ಒಂದು ಕೊಠಡಿಯಲ್ಲಿ ಇರುತ್ತಿದ್ದರು ಮತ್ತು ನಾನು ಅವರಿಗೆ ಅಡುಗೆಯನ್ನು ಮಾಡುತ್ತಿದ್ದೆ. ನಾನು ಕೇವಲ ಸದ್ಗುರುಗಳಿಗಾಗಿ ಸಲಾಡ್ ತಯಾರಿಸುತ್ತಿದ್ದೆ, ಮತ್ತು ಅವರಿಗಾಗಿ ಚಪಾತಿಗಳನ್ನು ಮಾಡುತ್ತಿದ್ದೆ. ವಿಜಿ ಮಾ ಬಂದ ನಂತರ ನಾನು ಅವರಿಗೆ ಸಾರು ಕೂಡ ತಯಾರಿಸಲು ಪ್ರಾರಂಭಿಸಿದೆ. ಸದ್ಗುರುಗಳಿಗೂ ಪಾಲಕ್ ಇಷ್ಟವಿತ್ತು ಅಂತ ನನ್ನ ನೆನಪು. ನಾನು ಅವರಿಗೆ ಅದನ್ನು ಬಹಳ ಸಲ ಮಾಡಿದ್ದೇನೆ!

Saraswati Paati

ಸರಸ್ವತಿ ಅಜ್ಜಿ ಹೋಲ್ನೆಸ್ ಪ್ರೋಗ್ರಾಮ್ ನಲ್ಲಿ ಮೊದಲ ಮೂವತ್ತು ದಿನಗಳ ಕಾಲ ಭಾಗವಹಿಸಿದ್ದರು, ಆಕೆ ಆಸನಗಳು, ಅಂಗಮರ್ದನ ಮತ್ತು ಮಹತ್ ಪ್ರಾಣಾಯಮವನ್ನು ಕಲಿತರು. “ಸದ್ಗುರು ಹೇಳಿದ್ದು ನನಗೆ ಅರ್ಥವೇ ಆಗುತ್ತಿರಲಿಲ್ಲ. ಅವರು ಹೆಚ್ಚಿನ ಸಮಯ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ಅವರು ಭಾಷೆಯು ಒಂದು ಅಡ್ಡಿಯಲ್ಲ, ನೀವು ನನ್ನೊಂದಿಗೆ ಇರಿ, ಅಷ್ಟೆ ಮತ್ತು ನೀವು ಹಾಗೆಯೇ ಅರ್ಥಮಾಡಿಕೊಳ್ಳುವಿರಿ ಎಂದು ನನಗೆ ಹೇಳಿದರು. ಅವರು ಹೇಳಿದ್ದು ಸರಿಯಾಗಿಯೇ ಇತ್ತು! ಅವರು ಹೇಳಿಕೊಟ್ಟದ್ದು ನನಗೆ ಯಾವಾಗಲೂ ಅರ್ಥವಾಗುತ್ತಿತ್ತು.”

ಮೂವತ್ತು ದಿನಗಳ ನಂತರ, ಅರವತ್ತು ದಿನಗಳ ಶಿಕ್ಷಕರ ತರಬೇತಿ ಕಾರ್ಯಕ್ರಮವು ಪ್ರಾರಂಭವಾಯಿತು, ಈ ಸಮಯದಲ್ಲಿ ಅಜ್ಜಿ ಸ್ವಯಂ-ಸೇವಕರಾಗಿದ್ದರು. ಅವರು ತರಕಾರಿಯನ್ನು ಕತ್ತರಿಸುತ್ತ, ಅಡುಗೆ ಮಾಡುತ್ತ ಅಡುಗೆ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲ. ಅಡುಗೆಯನ್ನು ಮಾಡುವುದಲ್ಲದೆ, ಸರಸ್ವತಿ ಅಜ್ಜಿ ಕೊಠಡಿಗಳು, ಕಾರ್ಯಕ್ರಮದ ಸ್ಥಳಗಳನ್ನೂ ಸಹ ಸ್ವಚ್ಛಗೊಳಿಸುತ್ತಿದ್ದರು ಮತ್ತು ತೋಟಗಾರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. "ತುಂಬಾ ದಾಸವಾಳದ ಗಿಡಗಳಿದ್ದವು" ಎಂದವರು ಹೇಳುತ್ತಾರೆ. "ನಾನು ಆ ಗಿಡಗಳಿಗೆ ನೀರು ಹಾಕುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದರಲ್ಲೇ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೆ."

ಹಾಗಾದರೆ ಈಶದೊಂದಿಗಿನ ಅವರ ತೊಡಗುಕೊಳ್ಳುವಿಕೆ ಹೇಗೆ ಪ್ರಾರಂಭವಾಯಿತು? “ನನ್ನ ಮಗ ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿ ಸ್ವಯಂ-ಸೇವಕನಾಗಿದ್ದ. ಆ ಸಮಯದಲ್ಲಿ, ಅಡುಗೆ ಮಾಡಲು ಹೆಚ್ಚು ಜನರೇನೂ ಇರಲಿಲ್ಲ, ಆದ್ದರಿಂದ ನಾನು ಇಲ್ಲಿ ಬಂದು ಆಹಾರ ತಯಾರಿಸಲು ಸಾಧ್ಯವೇ ಎಂದು ಅವನು ಕೇಳಿದ. ನಾನು ಆಗಲಿ ಎಂದೆ,  ಮತ್ತು ಅಂದಿನಿಂದ ಇಲ್ಲಿಯೇ ಇದ್ದೇನೆ. ನಾನಿಲ್ಲಿ ಬಂದಾಗ ನನಗೆ 62 ವರ್ಷವಾಗಿತ್ತು.”ಎಂದು ಅಜ್ಜಿ ಹೇಳುತ್ತಾರೆ.

“ಕೆಲವೊಮ್ಮೆ ನಾನು ಆಶ್ರಮವನ್ನು ನೋಡಿದಾಗ, ಅದು ಇಷ್ಟು ಬೇಗ ಹೇಗೆ ಬೆಳೆಯಿತು ಎಂದು ನಾನು ಆಶ್ಚರ್ಯ ಪಡುತ್ತೇನೆ. ನಾನಿಲ್ಲಿಗೆ ಬಂದಾಗ, ನಮಗೆ ಸ್ನಾನ ಮಾಡಲೂ ಸರಿಯಾದ ಜಾಗ ಇರಲಿಲ್ಲ. ಈಗ, ನಮ್ಮಲ್ಲಿ ಚಂದ್ರಕುಂಡ ಮತ್ತು ಸೂರ್ಯಕುಂಡಗಳಲ್ಲದೆ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಹಲವಾರು ಸ್ನಾನಗೃಹಗಳಿವೆ. ಆಗ, ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸಲು ನಮ್ಮ ಬಳಿ ಕೆಲ ಚಾಕುಗಳಿದ್ದವು, ಈಗ ತರಕಾರಿ ಕತ್ತರಿಸಲು ನಮ್ಮಲ್ಲಿ ಯಂತ್ರೋಪಕರಣಗಳು ಮತ್ತು ದೊಡ್ಡ ಕತ್ತರಿಸುವ ಪ್ರದೇಶವಿದೆ. ಈ ಬೆಳವಣಿಗೆ ನನ್ನನ್ನು ಬೆರಗುಗೊಳಿಸುತ್ತದೆ! ”

ಅಜ್ಜಿ 1994 ರಲ್ಲಿ ಕೆಲವು ಜನರಿಗೆ ಆಹಾರವನ್ನು ತಯಾರಿಸಿದಾಗಿನಿಂದ ಈಶ ನಿಜಕ್ಕೂ ಸಾಕಷ್ಟು ಬೆಳೆದಿದೆ. ಊಟದ ಸಮಯದಲ್ಲಿ ಭಿಕ್ಷಾ ಹಾಲ್ ಇಂದು ಸರಾಸರಿ 2000 ಜನರಿಗೆ ಉಣಿಸುತ್ತದೆ. 2014 ರ ಮಹಾಲಯ ಅಮಾವಾಸ್ಯೆಯಂದು, ಸರಸ್ವತಿ ಪಾಟಿಯವರು ಮೊದಲ ಬಾರಿಗೆ ಅಡುಗೆ ಮಾಡಿದ 20 ವರ್ಷಗಳ ನಂತರ ಈಶ ಭಿಕ್ಷಾವನ್ನು ಪ್ರಾರಂಭಿಸಲಾಯಿತು

ಮುಂದಿನ 20 ವರ್ಷಗಳವರೆಗೆ ವರ್ಷಕ್ಕೊಮ್ಮೆ ಅನ್ನಸಂತರ್ಪಣೆಯನ್ನು ಮಾಡುವಂತೆ ಒಂದು ಬಾರಿಯ ಕಾಣಿಕೆ ನೀಡಲು ಈಶ ಭಿಕ್ಷಾ ದಾನಿಗಳಿಗೆ ಅವಕಾಶವನ್ನೊದಗಿಸುತ್ತದೆ. ಇಂತಹ ದಾನಿಗಳನ್ನು, ಮುಂದಿನ 20 ವರ್ಷಗಳವರೆಗೆ ಸದ್ಗುರುಗಳ ಆಶೀರ್ವಾದದ ಕಾರ್ಡ್ ಮತ್ತು ಇತರ ಅಭಿನಂದನಾ ಕೊಡುಗೆಗಳೊಂದಿಗೆ ವಾರ್ಷಿಕವಾಗಿ ಅವರಾಯ್ಕೆಯ ವಿಶೇಷ ದಿನದಂದು ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಆದಿಯೋಗಿ ಆಲಯಮ್-ನಲ್ಲಿ 2014 ರಲ್ಲಿ ನಡೆದ ಮಹಾಲಯ ಅಮಾವಾಸ್ಯೆಯ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಚಪ್ಪಾಳೆ ಮತ್ತು ಸಂಭ್ರಮದ ನಡುವೆ ಸರಸ್ವತಿ ಅಜ್ಜಿ ಅದರ ಬ್ಯಾನರ್ ಅನ್ನು ಅನಾವರಣಗೊಳಿಸಿದ್ದು ಸಮಯೋಚಿತವೇ ಆಗಿತ್ತು!

ಗುರು ಪೌರ್ಣಿಮೆ ಅನ್ನದಾನ

ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಈಶದಲ್ಲಿರುವ ಎಲ್ಲಾ ಸಾಧಕರು ಮತ್ತು ಸ್ವಯಂಸೇವಕರಿಗೆ ಆಹಾರದ ಪವಿತ್ರ ಸಮರ್ಪಣೆಯನ್ನು ಮಾಡಿ

Donate