ಪ್ರೀತಿಯ ಸದ್ಗುರು, ಉಪ್ಪಿನ ಬೊಂಬೆಯಾಗಿ ಸಂಪೂರ್ಣವಾಗಿ ಕರಗಿಹೋಗುವುದು ಹೇಗೆ? ಆಧ್ಯಾತ್ಮದ ಪಯಣ ಏಕಿಷ್ಟು ಕಷ್ಟ?

ಷ್ಟಕರವಾಗಿರುವುದು ಪ್ರಯಾಣವಲ್ಲ, ನೀವು. ಒಂದು ಕಲ್ಲನ್ನು ಸಾವಿರ ಬಾರಿ ಸಮುದ್ರದಲ್ಲಿ ಮುಳುಗಿಸಿದರೂ ಸಹ, ಅದು ಕರಗುವುದಿಲ್ಲ. ನನ್ನನ್ನು ಕೇಳಿದರೆ, ವಾಸ್ತವದಲ್ಲಿ, ಪ್ರಯಾಣವೆನ್ನುವಂತದ್ದೇನೂ ಇಲ್ಲ, ಏಕೆಂದರೆ, ಪ್ರಯಾಣ ಮಾಡಲು ನಿಮಗೆ ಅಂತರದ ಅಗತ್ಯವಿದೆ. ನಿಮ್ಮ ಮತ್ತು ನಿಮ್ಮದೇ ನಡುವೆ ಏನಾದರೂ ಅಂತರವಿದೆಯೇ? ಈ ಪ್ರಯಾಣವನ್ನು ಮಾಡಲು ಎಷ್ಟು ಸಮಯ ಬೇಕಾಗಬಹುದು? ಇಲ್ಲಿ “ಪ್ರಯಾಣ" ಎಂಬ ಪದವನ್ನು ಒಂದು ಸಾಧನದಂತೆ ಬಳಸಲಾಗಿದೆ, ಇಲ್ಲದಿದ್ದರೆ ಜನರು ಸುಮ್ಮನೆ ಕುಳಿತಲ್ಲಿಯೇ ಕುಳಿತು ಬಿಡುತ್ತಾರೆ. ಆದರೆ, ನಾವು "ಪ್ರಯಾಣ" ಎಂದು ಹೇಳಿದಾಗ, ಅವರಿಗೆ ಎಲ್ಲಿಗೋ ಹೋಗಬೇಕೆಂಬ ಅರಿವಾಗುತ್ತದೆ.

ಕೆಲ ಸಮಯದ ಹಿಂದೆ, ಲಾಸ್ ಏಂಜಲೀಸ್‌ನಲ್ಲಿ ಏರ್ಪಡಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ನಾವು ಜನರನ್ನು ಶಾಂಭವಿ ಮಹಾಮುದ್ರೆಯ ದೀಕ್ಷೆಗೆ ಒಳಪಡಿಸುತ್ತಿದ್ದೆವು ಮತ್ತು ಅದು ಕೇವಲ ಇಪ್ಪತ್ತೊಂದು ನಿಮಿಷಗಳ ಯೋಗ ಕ್ರಿಯೆಯಾಗಿದೆ. ಲಾಸ್ ಏಂಜಲೀಸ್‌ನ ನಮೂನೆಗೆ ತಕ್ಕಂತೆಯೇ, ಯಾರೋ ಒಬ್ಬರು ನನ್ನನ್ನು, "ಸದ್ಗುರು, ನೀವೇಕೆ ಇಷ್ಟು ದೀರ್ಘ ಹಾಗೂ ಕಷ್ಟಕರವಾದ ಪ್ರಕ್ರಿಯೆಗಳನ್ನು ಕಲಿಸುತ್ತಿದ್ದೀರಿ? ’ನೀವೇನೂ ಮಾಡಬೇಕಿಲ್ಲ, ಅದು ತನ್ನಿಂದ ತಾನೇ ಆಗುತ್ತದೆ’ - ಎಂದು ರಮಣ ಮಹರ್ಷಿಗಳು ಹೇಳಿದ್ದಾರಲ್ಲ.” ಎಂದು ಕೇಳಿದರು. ಅದಕ್ಕೆ ನಾನು, "ಅವರು ಹೇಳಿದ್ದು ಸರಿಯಾಗಿಯೇ ಇದೆ, ಆದರೆ ನೀವು ಅವರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕು. ಹದಿನಾಲ್ಕು ವರ್ಷಗಳ ಕಾಲ ರಮಣ ಮಹರ್ಷಿಗಳು ಏನೂ ಮಾಡದೇ ಒಂದೇ ಕಡೆ ಕುಳಿತಿದ್ದರು. ಇಲಿಗಳು ಬಂದು ಅವರ ತೊಡೆಯನ್ನು ಕಚ್ಚಿ ಮಾಂಸವನ್ನು ತಿಂದು ಹಾಕಿದವು; ಅದು ಕ್ರಿಮಿಗಳಿಂದ ಮುತ್ತಿಕೊಂಡರೂ ಸಹ ಅವರೇನೂ ಮಾಡಲಿಲ್ಲ. ಆದರೆ ನೀವು ಸದ್ಯಕ್ಕೆ ಯಾವ ಸ್ಥಿತಿಯಲ್ಲಿದ್ದೀರೆಂದರೆ, ನಿಮಗೊಂದು ಸೊಳ್ಳೆ ಕಚ್ಚಿದರೂ, ನೀವು ತಕ್ಷಣವೇ ಆಂಬುಲೆನ್ಸ್-ಗೆ ಕರೆ ಮಾಡುತ್ತೀರಿ!" ಎಂದೆ.

ಭೌತಿಕತೆ ನಿಗದಿ ಪಡಿಸಿರುವ ಮಿತಿಗಳನ್ನು ದಾಟುವುದೇ ಬುದ್ಧಿವಂತಿಕೆಯ ಲಕ್ಷಣವಾಗಿದೆ.

ನಿಮಗೆ ರಮಣ ಮಹರ್ಷಿಗಳಂತೆ ಏನನ್ನೂ ಮಾಡದೇ ಸುಮ್ಮನಿರಲು ಸಾಧ್ಯವಿದಿದ್ದರೆ, ನಾನೇಕೆ ನಿಮಗೆ ಶಾಂಭವಿ ಮಹಾಮುದ್ರೆಯನ್ನೋ ಅಥವಾ ಬೇರೆ ಏನನ್ನಾದರೂ ಕಲಿಸಲು ಹೋಗಲಿ? ನೀವು ಏನನ್ನೂ ಮಾಡದಿರುವಂತಹ ಸ್ಥಿತಿಯಲ್ಲಿದ್ದರೆ, ನಾನೇಕೆ ನಿಮಗೆ ಏನನ್ನಾದರೂ ಕಲಿಸಬೇಕು? ಸದ್ಯದಲ್ಲಿ ನಿಮ್ಮನ್ನು ಮೂರು ನಿಮಿಷಗಳ ಕಾಲ ಮೌನವಾಗಿ ಕೂರುವಂತೆ ಮಾಡಲು, ನಾನು ನಿರಂತರವಾಗಿ ಮಾತನಾಡುತ್ತಿರಬೇಕು. ಇಲ್ಲದಿದ್ದರೆ, ನಿಮ್ಮನ್ನು ನೀವೇ ಪರಚಿಕೊಳ್ಳಲು ಪ್ರಾರಂಭಿಸುತ್ತೀರಿ. ನಿಮ್ಮನ್ನು ಏನೋ ಒಂದು ಮಾಡಿಬಿಡಬೇಕು ಎಂಬ ಉದ್ದೇಶ ನಮ್ಮದಲ್ಲ; ಅದು ಹೇಗಿದ್ದರೂ ತುಂಬಾ ಕಷ್ಟ! ನಾವು ಕೇವಲ ನಿಮ್ಮ ಅನಿಯಂತ್ರಿತ ಆಲೋಚನೆಗಳನ್ನು ನಿಲ್ಲಿಸಿ, ನಿಮ್ಮನ್ನು "ಯೋಚನಾರಹಿತ"ರನ್ನಾಗಿ ಮಾಡಬೇಕು ಅಷ್ಟೆ. ಈ ಸರಳವಾದ ವಿಷಯವನ್ನು ನಿಮಗೆ ಅರ್ಥಮಾಡಿಸುವ ಸಲುವಾಗಿ, ನಾವು ನಿಮನ್ನು ಬಗ್ಗಿಸಬೇಕು, ತಿರುಚಬೇಕು, ತಿರುಗಿಸಬೇಕು, ತಲೆ ಕೆಳಗಾಗಿಸಬೇಕು; ಮತ್ತು ಇನ್ನೂ ಹಲವಾರು ವಿಷಯಗಳನ್ನು ಮಾಡಬೇಕಾಗಿ ಬಂದಿದೆ.

ನೀವೇನೋ ಬೇರೆಯೇ ಆಗಿದ್ದೀರಿ ಎಂದು ನೀವು ಭಾವಿಸಿರುವುದೇ ಇಲ್ಲಿ ಸಮಸ್ಯೆಯಾಗಿರುವುದು. ನೀವೇ ಹೇಳಿ - ನೀವು ಯಾವುದರಿಂದ ಮಾಡಲ್ಪಟ್ಟಿದ್ದೀರಿ? ಸೃಷ್ಟಿಯಲ್ಲಿನ ಇತರ ವಸ್ತುಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಅದೇ ವಸ್ತುಗಳಿಂದಲೇ ನೀವೂ ಸಹ ಮಾಡಲ್ಪಟ್ಟಿದ್ದೀರೋ ಅಥವಾ ನೀವು ಇನ್ಯಾವುದೋ ಬೇರೆಯದ್ದೇ ವಸ್ತುವಿನಿಂದ ಮಾಡಲ್ಪಟ್ಟಿದ್ದೀರೋ? ಈ ಅಸ್ತಿತ್ವದಲ್ಲಿ, ಸೃಷ್ಟಿಯ ಮೂಲ ತನ್ನಲ್ಲಿ ಮಿಡಿಯದೆಯೇ ಕಾರ್ಯನಿರ್ವಹಿಸುತ್ತಿರುವಂತಹ ಒಂದೇ ಒಂದು ಎಲೆ, ಪಕ್ಷಿ ಅಥವಾ ಒಂದು ಅಣು ಕಾಣಸಿಗುತ್ತದೆಯೇ? ಇಲ್ಲ! ಅದು ಎಲ್ಲಾ ಕಡೆಯೂ ಇದೆ ಮತ್ತು ನೀವೂ ಕೂಡ ಅದೇ ಮೂಲವಸ್ತುವಿನಿಂದ ಮಾಡಲ್ಪಟ್ಟಿದ್ದೀರಿ. ಹೀಗಿದ್ದ ಮೇಲೆ, ನೀವೇಕೆ ವಿಚಿತ್ರವಾಗಿ ವರ್ತಿಸುತ್ತಿದ್ದೀರಿ ಮತ್ತು ನೀವಿನ್ನೇನೋ ಬೇರೆ ಎಂದು ಏಕೆ ಯೋಚಿಸುತ್ತಿದ್ದೀರಿ? ಅಸ್ತಿತ್ವದಲ್ಲಿನ ವಿಶಾಲವಾದ ಬುದ್ಧಿವಂತಿಕೆಯ ಜೊತೆ ನೀವು ಸ್ಪಂದಿಸುವಂತಾಗಲಿ ಎಂಬ ಕಾರಣಕ್ಕಾಗಿ ನಿಮಗೆ ಬುದ್ಧಿಶಕ್ತಿಯನ್ನು ನೀಡಲಾಯಿತು. ಅಸ್ತಿತ್ವದ ರೀತಿ ಹೇಗಿದೆಯೆಂದರೆ, ಸಾಧ್ಯತೆಗಳ ಬೇರೆ ಬೇರೆ ಆಯಾಮಗಳಲ್ಲಿ ಜೀವಿಸುವಂತಹ ಸಂಭವನೀಯತೆಯನ್ನು ಅದು ನಿಮಗೆ ಒದಗಿಸುತ್ತದೆ. ನೀಡಲಾಗಿರುವ ಆಯ್ಕೆಗಳಲ್ಲಿ, ನೀವು ಕೆಳಸ್ತರದ ಆಯ್ಕೆಯನ್ನು ಮಾಡುತ್ತೀರೋ ಅಥವಾ ಮೇಲ್ಮಟ್ಟದ ಆಯ್ಕೆಯನ್ನು ಮಾಡುತ್ತೀರೋ ಎನ್ನುವುದು ನಿಮಗೆ ಬಿಟ್ಟಿದ್ದು. ಭೌತಿಕತೆ ನಿಗದಿ ಪಡಿಸಿರುವ ಮಿತಿಗಳನ್ನು ದಾಟುವುದೇ ಬುದ್ಧಿವಂತಿಕೆಯ ಲಕ್ಷಣವಾಗಿದೆ. ಆದರೆ, ನಿಮ್ಮ ಬಳಿ ಒಂದಿಷ್ಟು ಮಟ್ಟದ ಬುದ್ಧಿವಂತಿಕೆಯಿರುವ ಕಾರಣದಿಂದ, ನಿಮ್ಮದೇ ಆದ ಅಸಂಬದ್ಧತೆಗಳನ್ನು ಮಾಡಬಹುದೆಂದು ನೀವು ಯೋಚಿಸುತ್ತೀರಿ. ನೀವು ನಿಮ್ಮದೇ ಅವಿವೇಕತೆಗಳನ್ನು ಮಾಡುತ್ತಾ ಹೋದರೆ, ನೀವು ಯಾವುದಕ್ಕೂ ಕರಗದಂತಹ ಒಂದು ಕಲ್ಲಂತಾಗುತ್ತೀರಿ.

ನೀವಿಲ್ಲಿ ಕುಳಿತಿರುವಂತೆಯೇ, ಗಾಳಿ ಉಸಿರಿನ ರೂಪದಲ್ಲಿ ನಿರಂತರವಾಗಿ ನಿಮ್ಮೊಳಗೆ ಪ್ರವೇಶಿಸುತ್ತಿದೆ, ಮತ್ತು ಅದು ನಿಮ್ಮನ್ನು ಜೀವಂತವಾಗಿರಿಸುತ್ತಿದೆ; ನೀವಿದಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ನೀವು ಹಸಿದಿರುವಾಗ, ಜಗತ್ತಿನ್ನೆಲೆಡೆ ಬೆಳೆದ ಆಹಾರ ನಿಮ್ಮ ತಟ್ಟೆಯನ್ನು ಬಂದು ಸೇರುತ್ತದೆ; ನೀವದಕ್ಕೂ ಅವಕಾಶ ಮಾಡಿಕೊಟ್ಟಿದ್ದೀರಿ. ಬದುಕುಳಿಯಲು ನೀವು ಒಂದೆರಡು ಬಾಗಿಲುಗಳನ್ನು ಮಾತ್ರ ತೆರದಿಟ್ಟು, ಬೇರೆಯದೆಲ್ಲವನ್ನೂ ಮುಚ್ಚಿಬಿಟ್ಟಿದ್ದೀರಿ. "ನಾನು ನನ್ನ ಮೂಗಿನ ಹೊಳ್ಳೆಯನ್ನು ತೆರೆಯದಿದ್ದರೆ, ನನಗೆ ಉಸಿರಾಡಲು ಸಾಧ್ಯವಿಲ್ಲ; ನಾನು ನನ್ನ ಬಾಯಿಯನ್ನು ತೆರೆಯದಿದ್ದರೆ, ನನಗೆ ತಿನ್ನಲು ಸಾಧ್ಯವಿಲ್ಲ." ಎನ್ನುವುದು ನಿಮಗೆ ಅರ್ಥವಾಗುತ್ತದೆ. ಆದರೆ, ನೀವು ನಿಜವಾಗಿಯೂ ಬುದ್ಧಿವಂತರಾಗಿದ್ದರೆ, ನೀವು ಅದನ್ನು ವಿಸ್ತರಿಸಿ, "ನಾನು ಸಂಪೂರ್ಣವಾಗಿ ಅಸ್ತಿತ್ವಕ್ಕೆ ತೆರೆದುಕೊಳ್ಳದೇ ಹೋದರೆ, ನನ್ನ ಜೀವನವು ಅದರ ಪರಿಪೂರ್ಣ ಸಾಧ್ಯತೆಯನ್ನು ಕಂಡುಕೊಳ್ಳುವುದಿಲ್ಲ, ಜೀವನದ ಪೂರ್ಣ ಆಯಾಮ ನನ್ನನ್ನು ಸ್ಪರ್ಶಿಸುವುದಿಲ್ಲ." ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರಿ. ಇದಕ್ಕೆ ಅಸಾಮಾನ್ಯ ಬುದ್ಧಿವಂತಿಕೆಯ ಅಗತ್ಯವೇನೂ ಇಲ್ಲ. ಪ್ರತಿಯೊಬ್ಬರಿಗೂ ಇದನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಇದ್ದೇ ಇದೆ.

ಉಪ್ಪಿನ ಬೊಂಬೆಯಾಗುವುದೆಂದರೆ, ನೀವು ಈಗಿರುವ ’ನಿಮ್ಮನ್ನು’ ನಾಶಮಾಡಲು ಸಿದ್ಧರಿದ್ದೀರಿ ಹಾಗೂ ನಿಮಗಿಂತ ಬೃಹತ್ತಾದ ’ಒಂದು’ ನಿಮಗೆ ಸಂಭವಿಸುವುದರ ಸಾಧ್ಯತೆಗೆ  ನೀವು ಎದುರು ನೋಡುತ್ತಿದ್ದೀರಿ ಎಂದು ಅರ್ಥ.

ಉಪ್ಪಿನ ಬೊಂಬೆಯಾಗುವುದೆಂದರೆ, ನೀವು ಈಗಿರುವ ’ನಿಮ್ಮನ್ನು’ ನಾಶಮಾಡಲು ಸಿದ್ಧರಿದ್ದೀರಿ ಹಾಗೂ ನಿಮಗಿಂತ ಬೃಹತ್ತಾದ ’ಒಂದು’ ನಿಮಗೆ ಸಂಭವಿಸುವುದರ ಸಾಧ್ಯತೆಗೆ  ನೀವು ಎದುರು ನೋಡುತ್ತಿದ್ದೀರಿ ಎಂದು ಅರ್ಥ. ಇಲ್ಲಿ ಸಮಸ್ಯೆಯೆಂದರೆ, ನೀವು ನಿಮ್ಮ ಬಗ್ಗೆ ತೀರಾ ಆಸಕ್ತರಾಗಿರುವುದೇ ಆಗಿದೆ. ನೀವಿಂದು ನೀವಾಗಿರುವುದು, ಕೇವಲ ನೀವು ಹೊಂದಿರುವ ಅಭಿಪ್ರಾಯಗಳ ಕಾರಣದಿಂದ ಮಾತ್ರ. ನೀವು ಯಾವುದರ ಬಗ್ಗೆಯೂ ಅಭಿಪ್ರಾಯಗಳನ್ನು ಹೊಂದದೇ ಇರುವುದು ಬಹಳ ಮುಖ್ಯ. ನನ್ನೊಳಗೆ ನಾನು, ಯಾರೊಬ್ಬರ ಬಗ್ಗೆಯೂ ಒಂದೇ ಒಂದು ಅಭಿಪ್ರಾಯವನ್ನು ಎಂದಿಗೂ ಹೊಂದಿದವನಲ್ಲ. ನಾನು ಪ್ರತಿಬಾರಿಯೂ ಜನರನ್ನು ನೋಡುವಾಗ, ನಾನವರನ್ನು ಮೊದಲ ಬಾರಿ ನೋಡುತ್ತಿದ್ದೇನೇನೋ ಎನ್ನುವಂತೆ ನೋಡುತ್ತೇನೆ. ಯಾವಾಗಲೂ ಕೂಡ. ಆದರೆ, ಕೆಲಸ ಮತ್ತು ಚಟುವಟಿಕೆಯ ವಿಷಯಕ್ಕೆ ಬಂದಾಗ, ಅವರು ನಿನ್ನೆ ಏನು ಮಾಡಿದ್ದರೆಂಬುದನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ, ಏಕೆಂದರೆ, ನಿರ್ದಿಷ್ಟವಾದ ಚಟುವಟಿಕೆಗಳ ವಿಷಯಕ್ಕೆ ಬಂದಾಗ, ವ್ಯಕ್ತಿಯ ಧೋರಣೆ ಹಾಗೂ ಪ್ರವೃತ್ತಿಗಳನ್ನು ತಿಳಿದುಕೊಳ್ಳುವುದು ಪ್ರಸ್ತುತವಾಗುತ್ತದೆ. ಆದರೆ ಆಧ್ಯಾತ್ಮದ ವಿಷಯಕ್ಕೆ ಬಂದಾಗ, ನಾನು ಒಬ್ಬರ ಬಗ್ಗೆ ಯಾವುದೇ ತೀರ್ಮಾನಗಳಿಗೆ ಬರಲು, ಅವರ ಕರ್ಮ ಶರೀರದ ಮಾಹಿತಿಯನ್ನು ಪರಿಶೋಧಿಸುತ್ತೇನೆ - ಆದರೆ, ಅದು ಕೇವಲ ಅವರೊಂದಿಗೆ ಕೆಲಸ ಮಾಡಬೇಕಿದ್ದರೆ ಮಾತ್ರ. ನಾನು ಹಾಗೆ ಸುಮ್ಮನೆ ಯಾರನ್ನಾದರೂ ನೋಡಿದರೆ, ನಾನವರನ್ನು ಮೊದಲ ಬಾರಿ ನೋಡುತ್ತಿದ್ದೇನೇನೋ ಎಂಬಂತೆ ನೋಡುತ್ತೇನೆ, ಏಕೆಂದರೆ ಇನ್ನೊಂದು ಜೀವದ ಬಗ್ಗೆ ಅಭಿಪ್ರಾಯವನ್ನು ಹೊಂದುವುದು ನಾವು ಮಾಡಬಹುದಾದ ಅತ್ಯಂತ ಕೆಟ್ಟ ವಿಷಯ. ಬೇರೆ ಯಾವುದೇ ಜೀವದ ಬಗ್ಗೆ ಅಭಿಪ್ರಾಯ ಹೊಂದಲು ನಿಮಗೆ ಯಾವುದೇ ಹಕ್ಕಿಲ್ಲ. 

ನೀವು ಕರಗಿ ಹೋಗಬೇಕೆಂದು ಬಯಸುವುದಾದರೆ, ನೀವು ಯಾವುದರ ಬಗ್ಗೆಯೂ ಯಾವುದೇ ಅಭಿಪ್ರಾಯಗಳನ್ನು ಹೊಂದಿಲ್ಲದಿರುವುದು ತುಂಬ ಮುಖ್ಯ. ಇಂದು ಸಮಾಜವು ಎಲ್ಲದರ ಬಗ್ಗೆಯೂ ಒಂದು ಅಭಿಪ್ರಾಯವನ್ನು ಹೊಂದುವಂತೆ ನಿಮಗೆ ತರಬೇತಿಯನ್ನು ನೀಡುತ್ತಿದೆ; ಇಲ್ಲದಿದ್ದರೆ ನಿಮಗೆ ಯಾವುದೇ ಸ್ವಾಭಿಮಾನವಿರುವುದಿಲ್ಲ ಎಂದದು ಬಿಂಬಿಸುತ್ತಿದೆ. ನಿಮ್ಮ ವ್ಯಕ್ತಿತ್ವವು ಎಷ್ಟು ಟೊಳ್ಳಾಗಿದೆಯೆಂದರೆ, "ಓಹ್! ನೀನೊಬ್ಬ ಅದ್ಭುತ ವ್ಯಕ್ತಿ." ಎಂಬುದಾಗಿ ಜನರು ನಿಮಗೆ ಹೇಳಬೇಕಾಗಿದೆ ಬಂದಿದೆ. ನೀವು ಕೇವಲ ಅಭಿಪ್ರಾಯಗಳ ಮೇಲೆ ಜೀವಿಸುತ್ತಿದ್ದೀರಿ, ಬೇರೆಯವರ ಅಭಿಪ್ರಾಯಗಳ ಮೇಲಷ್ಟೇ ಅಲ್ಲ, ನಿಮ್ಮದೇ ಸ್ವಂತ ಅಭಿಪ್ರಾಯಗಳ ಮೇಲೆ ಬದುಕುತ್ತಿದ್ದೀರಿ. ನೀವು ಹೊಂದಿರುವ ಅಭಿಪ್ರಾಯಗಳಿಂದ ಮಾತ್ರವೇ ನೀವೊಬ್ಬ ವ್ಯಕ್ತಿಯಾಗಿರುವುದು. ನೀವು ಯಾವುದೇ ಅಭಿಪ್ರಾಯಗಳನ್ನು ಹೊಂದಿಲ್ಲದಿದ್ದರೆ, ನೀವೊಂದು ಉಪ್ಪಿನ ಬೊಂಬೆಯಾಗಿರುತ್ತಿದ್ದಿರಿ. ನೀವಿಲ್ಲಿ ಸುಮ್ಮನೆ ಕುಳಿತರೆ, ನಿಮ್ಮೊಳಗೆ ಕೇವಲ ಗಾಳಿ ಮಾತ್ರ ಪ್ರವೇಶಿಸುವುದಿಲ್ಲ, ಇಡೀ ಅಸ್ತಿತ್ವವೇ ನಿಮ್ಮೊಳಗೆ ಪ್ರವೇಶಿಸುತ್ತದೆ. ನಿಮ್ಮ ಬಗ್ಗೆ ನಿಮಗಿರುವ ಕಲ್ಪನೆಗಳನ್ನು ಹೊರತುಪಡಿಸಿ ಬೇರಿನ್ನೇನೂ ಸಹ ಅದನ್ನು ತಡೆಯುತ್ತಿಲ್ಲ. ಹಾಗಾಗಿ, ನಿಮ್ಮ ಬಗ್ಗೆ ಅಥವಾ ಬೇರೆ ಯಾರ ಬಗ್ಗೆಯೂ, ಯಾವುದೇ ಕಲ್ಪನೆಗಳನ್ನು ಇಟ್ಟುಕೊಳ್ಳಲು ಹೋಗಬೇಡಿ; ಎಲ್ಲವನ್ನೂ ಅದಿರುವ ರೀತಿಯಲ್ಲೇ ನೋಡಿ - ಆಗ ನೀವು ಎಲ್ಲದರೊಂದಿಗೆ ಲೀನವಾಗುತ್ತೀರಿ. ಜೀವಿಸಲು ಬೇರಿನ್ಯಾವ ಮಾರ್ಗವೂ ಇಲ್ಲ.

ಉಪ್ಪಿನ ಬೊಂಬೆ

ಸತ್ಯವನು ಅರಸುತ್ತ
ಅಲೆದಾಡಿದೆ ಹಿಂದೆ ಮುಂದೆ

ಶಿಖರಗಳ ನಾ ಏರಿಳಿದೆ
ಪುಣ್ಯ ನದಿಗಳಲಿ ಸಂತರೊಡನೆ ಮುಳುಗೆದ್ದೆ

ಯಾವುದೇ ದಿಕ್ಕಿರಲಿ, ಕುರುಡರೇ ತೋರಿರಲಿ
ಆಸೆ ಉತ್ಸಾಹದಲಿ ಪಯಣಿಸಿದೆ

ಅಲೆದೆ ಅದರ ಪರಿಮಳದ ಸುಳಿವಿದ್ದಲ್ಲೆಲ್ಲ
ಆದರೆ ತಿರುಗಿದೆ ಸುತ್ತು ಸುತ್ತುಗಳನ್ನಷ್ಟೆ

ಇಲ್ಲದವನ ಅರಿಯಲು ಹೊರಟು ಕಳೆದಿರುವೆ ಜನುಮಗಳನೆ
ಆದರೆ ತಾಪದಲಿ ಹುಡುಕಾಟ ಸಾಗಿತ್ತು ಬಿಡದೆ

ಮೀನು ತಿಮಿಂಗಿಲಗಳಿಗೂ ಗೊತ್ತಿರದ ಆಳ
ನಾವೆಂತು ಅಳೆಯುವೆವೋ ಅನಂತ ಕಡಲಾಳ

ಉಪ್ಪೊಂದೇ ತಾನಾಗುವುದು ಕಡಲು
ಉಪ್ಪಿನಾ ಬೊಂಬೆ ನಾನಾದೆ, ಒಂದೆ ಮುಳುಗಿನಲಿ ನಾನೇ ಕಡಲಾದೆ!

Love & Grace