ಪಶ್ನೆ: ನಮಸ್ಕಾರ. ನನ್ನ ಹೆಸರು ಧನ್ಯ ರವಿ. ನಾನು Osteogenesis imperfecta ಎಂಬ ಅಪರೂಪದ ಅನುವಂಶಿಕ ಖಾಯಿಲೆಯೊಂದಿಗೆ ಹುಟ್ಟಿದ್ದೇನೆ. ಸಾಮಾನ್ಯವಾಗಿ ಇದನ್ನು brittle bone disease ಎಂದು ಕರೆಯಲಾಗುತ್ತದೆ, ಇದರರ್ಥ ನನ್ನ ಮೂಳೆಗಳು ಗಾಜಿನಂತೆ ತುಂಬಾ ದುರ್ಬಲವಾಗಿವೆ. ಒಬ್ಬರ ದೇಹದಲ್ಲಿರುವ ಮೂಳೆಗಳ ಸಂಖ್ಯೆಗಿಂತಲೂ ಹೆಚ್ಚು ಮೂಳೆ ಮುರಿತಗಳನ್ನು ನಾನು ಅನುಭವಿಸಿದ್ದೇನೆ. ಹಾಗಾಗಿ, ಇವತ್ತು ಪ್ರಶ್ನೆಗಿಂತ ಹೆಚ್ಚಾಗಿ ನನ್ನದೊಂದು ವಿನಮ್ರವಾದ ಕೋರಿಕೆಯಿದೆ. ಮುಂದೆ ಯಾವಾಗಾದರೊಮ್ಮೆ ನೀವು ಅಂಗವೈಕಲ್ಯತೆಯ ಬಗ್ಗೆ ಏನನ್ನಾದರೂ ಹೇಳಿದರೆ ಚೆನ್ನಾಗಿರುತ್ತದೆ. ಇದರಿಂದಾಗಿ ಅಂಗವೈಕಲ್ಯತೆ ಇರುವ ಜನರಿಗೆ ಸಮಾಜದಲ್ಲಿ ಹೆಚ್ಚು ವ್ಯಾಪಕವಾದ ಗಮನ ದೊರೆಯಬಹುದೆಂದು ನಾನು ಭಾವಿಸುತ್ತೇನೆ.

ಸದ್ಗುರು: ನೀವಿಲ್ಲಿ ಬಂದಿರುವುದು ನಮ್ಮ ಸುಯೋಗವೆಂದೆಣಿಸುತ್ತೇವೆ. ಜೀವಚೈತನ್ಯವು ಹಲವಾರು ರೂಪಗಳನ್ನು ತಾಳಿಬಂದಿದೆ, ಆದರೆ ಸಮಾಜಗಳು, ಯಾವುದು ಸಹಜ, ಯಾವುದು ಅಸಹಜ ಎನ್ನುವ ಹಣೆಪಟ್ಟಿಗಳನ್ನು ಹಚ್ಚಿಬಿಟ್ಟಿವೆ. ಆದರೆ ನಿಜವಾಗಿ ನೋಡಿದಲ್ಲಿ, ಎಲ್ಲಾ ಅಂಗಾಂಗಗಳು ಸರಿಯಾಗಿರುವ ಒಬ್ಬ ಮನುಷ್ಯನನ್ನು, ಮತ್ತೊಬ್ಬ ವ್ಯಕ್ತಿಯ ಜೊತೆ ಹೋಲಿಸಿದರೆ, ಅವರು ಜೀವನದ ಯಾವುದಾದರೊಂದು ವಿಷಯದಲ್ಲಿ ಅಸಮರ್ಥರಾಗಿರುತ್ತಾರೆ ತಾನೆ? ಉಸೇನ್ ಬೋಲ್ಟ್-ನ ಜೊತೆ ನೀವು ಓಡಿದರೆ, ನಿಮ್ಮ ಬಳಿ ಎರಡು ಒಳ್ಳೆಯ ಕಾಲುಗಳು ಇದ್ದರೂ ಸಹ, ನಿಮಗೆ ನೀವು ಕುಂಟರಂತೆ ಭಾಸವಾಗುವುದಿಲ್ಲವೇ?

ಸಾಮಾನ್ಯರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಬಹಳಷ್ಟು ಜನ, ಪ್ರತಿದಿನ ತಮ್ಮ ಮನಸ್ಸುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಅದನ್ನವರು ಒತ್ತಡ, ಆತಂಕ, ಇನ್ನಿತ್ಯಾದಿ ಬಹಳಷ್ಟು ಹೆಸರುಗಳಿಂದ ಕರೆಯುತ್ತಾರೆ. ಆದರೆ ವಾಸ್ತವದಲ್ಲಿ, ಅವರು ಒಂದಲ್ಲಾ ಒಂದು ರೀತಿ, ತಮ್ಮ ಮನಸ್ಸನ್ನು ಮುರಿದುಕೊಳ್ಳುತ್ತಿದ್ದಾರೆ.

ಹಾಗಾಗಿ ನಾವು, ನಮ್ಮನ್ನು ಅಥವಾ ಇನ್ನೊಬ್ಬರನ್ನು ಒಂದಿಲ್ಲೊಂದು ರೀತಿಯಾಗಿ ಗುರುತಿಸುವುದು ಬೇಡ, ಏಕೆಂದರೆ, ಜೀವವು ಬಹಳಷ್ಟು ವಿಧಗಳಲ್ಲಿ ರೂಪುತಾಳಿದೆ. ನೀವದನ್ನು ಗೌರವಿಸಿ, ನಿಮ್ಮ ಕೈಲಾದಷ್ಟು ಚೆನ್ನಾಗಿ ಅದನ್ನು ನಿರ್ವಹಿಸಬೇಕು, ಏಕೆಂದರೆ ಅದೊಂದು ಪವಾಡ – ನೀವಿವತ್ತು ಬೆಳಗ್ಗೆ ತಿಂದ ದೋಸೆ ಅಥವಾ ಇಡ್ಲಿಯು ನಾವು ನಡೆದಾಡೋ ಮಣ್ಣಿನಲ್ಲಿ ಬೆಳೆದಿರುವುದು, ಮತ್ತು ಆ ತಿಂಡಿಯು ನಿಮ್ಮ ಮೂಳೆ ಮಾಂಸವಾಗಿ ಪರಿವರ್ತನೆಯಾಗುತ್ತಿದೆ. ಇಷ್ಟೊಂದು ಅಗಾಧವಾದ ಸಂಕೀರ್ಣ ಪ್ರಕ್ರಿಯೆಯಲ್ಲಿ - ನಾವು ಇದನ್ನು ದುರದೃಷ್ಟವಶಾತ್ ಗುರುತಿಸೇ ಇಲ್ಲ ಮತ್ತು ಅದು ಮಾಮುಲು ಸಂಗತಿ ಎಂಬಂತೆ ವರ್ತಿಸುತ್ತೇವೆ - ಕೆಲವು ಸಂಗತಿಗಳು ಕೆಲವೊಮ್ಮೆ ನಾವು ಅಂದುಕೊಂಡಂತೆ ನಡೆಯುವುದಿಲ್ಲ.

ಆದ್ದರಿಂದ, ನಿಮ್ಮನ್ನು ನೀವು ಅಸಮರ್ಥರೆಂದು ಕರೆದುಕೊಳ್ಳಬೇಡಿ. ನೀವೊಂದು ರೀತಿಯಲ್ಲಿದ್ದೀರ, ನಾನೊಂದು ರೀತಿಯಲ್ಲಿದ್ದೇನೆ. ಯಾವುದೇ ಮನುಷ್ಯನೂ ಸಹ, ಅವನ ಬಳಿ ಪರ್ಫೆಕ್ಟ್ ಆಗಿರುವ, ನ್ಯೂನತೆಯೇ ಇಲ್ಲದ ದೇಹ ಅಥವಾ ಮನಸ್ಸಿದೆ ಎನ್ನುವುದನ್ನು ಸಾಧಿಸಲಾರ. ನಾನೊಂದು ರೀತಿಯಲ್ಲಿ ಅಸಮರ್ಥ, ನೀವಿನ್ನೊಂದು ರೀತಿಯಲ್ಲಿ ಅಸಮರ್ಥರು. ನಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡರೆ, ನಾವೆಲ್ಲರೂ ಸಹ ಒಂದು ರೀತಿಯಲ್ಲಿ ಅಸಮರ್ಥರೇ.

ನಿಮ್ಮ ಮೂಳೆಗಳು ಮುರಿತಕ್ಕೊಳಗಾಗುವುದು ದುರದೃಷ್ಟಕರ ಮತ್ತು ನೋವಿನ ಸಂಗತಿ. ಆದರೆ ಸಾಮಾನ್ಯರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಬಹಳಷ್ಟು ಜನ, ಪ್ರತಿದಿನ ತಮ್ಮ ಮನಸ್ಸುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಅದನ್ನವರು ಒತ್ತಡ, ಆತಂಕ, ಇನ್ನಿತ್ಯಾದಿ ಬಹಳಷ್ಟು ಹೆಸರುಗಳಿಂದ ಕರೆಯುತ್ತಾರೆ. ಆದರೆ ವಾಸ್ತವದಲ್ಲಿ, ಅವರು ಒಂದಲ್ಲಾ ಒಂದು ರೀತಿ, ತಮ್ಮ ಮನಸ್ಸನ್ನು ಮುರಿದುಕೊಳ್ಳುತ್ತಿದ್ದಾರೆ.

ಯಾವುದೇ ಮನುಷ್ಯನೂ ಸಹ, ಅವನ ಬಳಿ ಪರ್ಫೆಕ್ಟ್ ಆಗಿರುವ, ನ್ಯೂನತೆಯೇ ಇಲ್ಲದ ದೇಹ ಅಥವಾ ಮನಸ್ಸಿದೆ ಎನ್ನುವುದನ್ನು ಸಾಧಿಸಲಾರ. ನಮ್ಮನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಂಡರೆ, ನಾವೆಲ್ಲರೂ ಸಹ ಒಂದು ರೀತಿಯಲ್ಲಿ ಅಸಮರ್ಥರೇ.

ದೈಹಿಕ ಆಕಾರದ ರಚನೆಯು ಒಂದು ಯಾಂತ್ರಿಕವಾದ ಪ್ರಕ್ರಿಯೆ. ಕೆಲವೊಂದು ಸಲ ಅದರಲ್ಲಿ ತಪ್ಪುಗಳಾಗುತ್ತವೆ. ಹುಟ್ಟುತ್ತಾ ಸಹಜವಾಗಿದ್ದು ನಂತರ ಅದರಲ್ಲಿ ತೊಂದರೆ ಉಂಟಾಗಬಹುದು ಅಥವಾ ಗರ್ಭದಲ್ಲಿ ಬೆಳೆಯುತ್ತಿರುವಾಗಲೇ ಏನಾದರೂ ದೋಷವುಂಟಾಗಬಹುದು. ಇದಕ್ಕೂ ಆ ವ್ಯಕ್ತಿಗೂ ಏನೂ ಸಂಬಂಧವಿಲ್ಲ. ಇದು ಬಹಳಷ್ಟು ವಿಚಾರಗಳಿಗೆ ಸಂಬಂಧಿಸಿದೆ, ಏಕೆಂದರೆ ಇದು ಎಷ್ಟು ಜಟಿಲವಾದ ಪ್ರಕ್ರಿಯೆ ಅಂದರೆ, ಕೆಲವೊಂದು ಸಲ ಕೆಲವು ವಿಷಯಗಳು ತಪ್ಪಿ ಹೋಗಬಹುದು.

ಆದರೆ, ನೀವು ಹೇಗೆ ಬದುಕುತ್ತೀರ ಎನ್ನುವುದನ್ನು ಅದು ನಿರ್ಧರಿಸಬಾರದು. ದೈಹಿಕವಾಗಿ ನಾವು ಹೇಗೆ ಬದುಕುತ್ತೇವೆ ಎನ್ನುವುದು ಬಹಳಷ್ಟು ವಿಷಯಗಳಿಂದ ನಿರ್ಧರಿಸಲ್ಪಡಬಹುದಾಗಿದೆ. ಆದರೆ, ನಮ್ಮೊಳಗೆ ನಾವು ಹೇಗಿರುತ್ತೇವೆ ಎಂಬುದನ್ನು, ನಮ್ಮನ್ನು ಬಿಟ್ಟು ಇನ್ಯಾರೂ ಸಹ ನಿರ್ಧರಿಸಲಾಗುವುದಿಲ್ಲ. ನನ್ನೊಳಗೆ ನಾನು ಹೇಗಿರುತ್ತೇನೆಂಬುದನ್ನು ಮತ್ತಿನ್ಯಾರೂ ನಿರ್ಧರಿಸಲು ಸಾಧ್ಯವಿಲ್ಲ. ಆ ಅರ್ಥದಲ್ಲಿ ಯಾರೂ ಕೂಡ ಅಸಮರ್ಥರಲ್ಲ.

ನಿಜವಾದ ಸಮಾನತೆಯನ್ನು ಸಾಧಿಸುವುದು

ದೈಹಿಕ ಮತ್ತು ಮಾನಸಿಕ ಆಯಾಮಗಳಿಂದಾಚೆಗೆ, ಎಲ್ಲಾ ಜೀವಗಳೂ ಒಂದೇ. ಇದನ್ನು ಹೇಳುವುದಕ್ಕಾಗಿ, ದುರದೃಷ್ಟವಶಾತ್, ’ಆಧ್ಯಾತ್ಮಿಕತೆ’ ಎನ್ನುವ ಭ್ರಷ್ಟಗೊಂಡಿರುವ ಪದವನ್ನು ಬಳಸಬೇಕಾಗಿ ಬಂದಿದೆ. ಆಧ್ಯಾತ್ಮಿಕ ಪ್ರಕ್ರಿಯೆಯ ಅರ್ಥ, ಮೇಲೆ ಅಥವಾ ಕೆಳಗೆ ನೋಡುವುದೆಂದಲ್ಲ. ಅದು, ಅಂತರ್ಮುಖರಾಗುವ ಮೂಲಕ, ದೈಹಿಕ ಮತ್ತು ಮಾನಸಿಕ ರಚನೆಗಳಿಂದಾಚೆಗೆ ಇರುವಂತಹ ಒಂದು ಆಯಾಮವನ್ನು ಮುಟ್ಟುವುದಾಗಿದೆ. ಈ ಸ್ಥಿತಿಯಲ್ಲಿ, ನಿಮ್ಮ, ನನ್ನ, ಮತ್ತಿನ್ಯಾರ ನಡುವೆಯೂ, ಯಾವುದೇ ಅಂತರಗಳಿರುವುದಿಲ್ಲ. 

 

ಇದರಿಂದಾಗಿಯೇ ಆಧ್ಯಾತ್ಮಿಕತೆಯು ಮುಖ್ಯವಾಗುತ್ತದೆ. ಸಮಾನತೆಯ ಬಗ್ಗೆ ನಾವೆಷ್ಟೇ ಮಾತನಾಡಿದರೂ ಸಹ, ನಮ್ಮ ದೇಹ ಮತ್ತು ಮನಸ್ಸನ್ನು ಮುಂದಿಟ್ಟುಕೊಂಡು ನಡೆದರೆ, ಅಲ್ಲಿ ಸಮಾನತೆ ಇರಲು ಸಾಧ್ಯವಿಲ್ಲ. ಆದರೆ ಈ ದೇಹ ಮತ್ತು ಮನಸ್ಸೆಂಬ ಎರಡು ಶೇಖರಣೆಗಳಿಂದ ಹೊರಗಿರುವಂತಹ ಜೀವನದ ಆಯಾಮವನ್ನು ನಾವು ಬಳಸಿದರೆ, ಎಲ್ಲವೂ ಸಹ ಸಮಾನವಾಗುತ್ತದೆ.

ಈ ಒಂದು ಅನುಭವ ಮನುಷ್ಯವರ್ಗದಲ್ಲಿ ಉಂಟಾದರೆ, ನೀವಿಲ್ಲಿ ಬಹಳ ಅದ್ಭುತವಾದಂತಹ ಒಳಗೂಡಿಸುಕೊಳ್ಳುವಿಕೆಯ ಅಸ್ತಿತ್ವವನ್ನು ಹೊಂದುತ್ತೀರ. ಯಾರು ಎಷ್ಟು ಸಾಮರ್ಥ್ಯಗಳೊಂದಿಗೆ ಬಂದಿದ್ದಾರೆ ಎನ್ನುವುದು ಮಹತ್ವವಾಗುವುದಿಲ್ಲ. ಪ್ರತಿ ಜೀವಕ್ಕೂ ಅದರದ್ದೇ ಆದ ಸ್ಥಾನವಿರುತ್ತದೆ. ಆದರೆ ಸದ್ಯಕ್ಕೆ ನಾವು, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಆಧಾರದ ಮೇಲೆ ಗುಣಮಟ್ಟವನ್ನು ನಿರ್ಧರಿಸಿ “ಇದು ಉತ್ತಮ, ಇದು ಕಳಪೆ.” ಎಂದು ಹೇಳುತ್ತಿದ್ದೇವೆ. ಹಾಗೆ ಮಾಡಬೇಡಿ.

ದೈಹಿಕ ಮತ್ತು ಮಾನಸಿಕ ಆಯಾಮಗಳಿಂದಾಚೆಗೆ, ಎಲ್ಲಾ ಜೀವಗಳೂ ಒಂದೇ. ಇದನ್ನು ಹೇಳುವುದಕ್ಕಾಗಿ, ದುರದೃಷ್ಟವಶಾತ್, ’ಆಧ್ಯಾತ್ಮಿಕತೆ’ ಎನ್ನುವ ಭ್ರಷ್ಟಗೊಂಡಿರುವ ಪದವನ್ನು ಬಳಸಬೇಕಾಗಿ ಬಂದಿದೆ.

ಒಂದು ಕ್ಯಾರೆಟ್ ಅಥವಾ ಮಿಡತೆಯು ನಿಮಗಿಂತ ಕಡಿಮೆ ಜೀವವೆಂದು ನೀವು ಹೇಳಬಹುದೇ? ನೀವಿಲ್ಲದೆ ಅವುಗಳು ಆರಾಮವಾಗಿ ಬದುಕಬಲ್ಲವು ಆದರೆ ಅವುಗಳಿಲ್ಲದೆ ನಿಮಗೆ ಬದುಕಲು ಸಾಧ್ಯವಿಲ್ಲ. ಪ್ರಕೃತಿಯು ನಮಗೆ ಈ ಎಲ್ಲಾ ಜೀವಿಗಳಿಗಿಂತ ಮೇಲಾಗಿ ಬದುಕುವ ಬುದ್ಧಿವಂತಿಕೆಯನ್ನು ಹೊಂದುವ ಸಾಧ್ಯತೆಯನ್ನು ನೀಡಿದೆ. ನೀವು ಶುದ್ಧ ಮೂರ್ಖರಾಗಿದ್ದರೆ, ನೀವೊಂದು ಎತ್ತರಕ್ಕೆ ಬೆಳೆದಾಗ, ಅದು ಎಲ್ಲವನ್ನೂ ನಿಯಂತ್ರಿಸುವ ಸಮಯ ಎಂಬುದಾಗಿ ಯೋಚಿಸುತ್ತೀರ. ಇಲ್ಲ. ಗೊತ್ತಿದ್ದೋ ಗೊತ್ತಿಲ್ಲದೆಯೋ ಬೇರೆ ಜೀವಗಳು ನಿಮ್ಮತ್ತ ನೋಡುವಂತಹ ಎತ್ತರಕ್ಕೆ ನೀವು ಏರಿದಾಗ, ಅದು ಎಲ್ಲವನ್ನೂ ಒಗ್ಗೂಡಿಸಿಕೊಂಡು  ಎಲ್ಲದರ ಜೊತೆ ಒಂದಾಗುವ ಸಮಯ. ಇದು ಅಧಿಕಾರ ಚಲಾಯಿಸುವ ಸಮಯವಲ್ಲ, ಏಕೆಂದರೆ ಒಮ್ಮೆ ನೀವು ಅಧಿಕಾರ ಚಲಾಯಿಸಲು ಶುರು ಮಾಡಿದರೆ, ನೀವೆಲ್ಲದರಿಂದಲೂ ದೂರಾಗಿಬಿಡುತ್ತೀರ.

ದೊಡ್ಡ ಪ್ರಮಾಣದ ಜೀವವಾಗುವುದು

ಈ ಒಳಗೂಡಿಸಿಕೊಳ್ಳುವಿಕೆಯು ಬರಬೇಕೆಂದರೆ, ಮನುಷ್ಯರು ದೇಹ ಮತ್ತು ಮನಸ್ಸಿನಿಂದಾಚೆ ಇರುವ ಅಂತರಂಗದ ಅನುಭವಕ್ಕೆ ಸ್ವಲ್ಪವಾದರೂ ತೆರೆದುಕೊಳ್ಳಬೇಕು. ನಿಮ್ಮ ದೇಹ ಬೇರೆ, ನನ್ನ ದೇಹ ಬೇರೆ. ಕನಿಷ್ಟ ಪಕ್ಷ ನಾವು ಬದುಕಿರುವವರೆಗಾದರೂ ಅವು ಬೇರೆಯೆಂದು ನಾವಂದುಕೊಳ್ಳುತ್ತೇವೆ. ನಮ್ಮನ್ನು ಹೂತುಹಾಕಿದಾಗ ಮಾತ್ರ, ಇದೆಲ್ಲಾ ಒಂದೇ ಮಣ್ಣೆಂದು ನಮಗೆ ಗೊತ್ತಾಗುತ್ತದೆ. ನನ್ನ ಮನಸ್ಸು ಬೇರೆ, ನಿಮ್ಮ ಮನಸ್ಸು ಬೇರೆ. ಆದರೆ ನೀವಿದನ್ನು ಕೇವಲ ಒಂದು ಜೀವವಾಗಿ ನೋಡಿದರೆ, ನನ್ನ ಜೀವ ಮತ್ತು ನಿಮ್ಮ ಜೀವವೆನ್ನುವುದೆಲ್ಲಾ ಇಲ್ಲ. ಇದೊಂದು ಜೀವಂತ ವಿಶ್ವ. ನೀವಿದರಲ್ಲಿ ಎಷ್ಟು ಜೀವಚೈತನ್ಯವನ್ನು ಸೆರೆಹಿಡಿದಿದ್ದೀರಿ ಎನ್ನುವುದು ಮಾತ್ರವೇ ಪ್ರಶ್ನೆ. ಇದಷ್ಟೇ ಮುಖ್ಯವಾಗುವುದು, ನಿಮ್ಮ ದೇಹ ಅಥವಾ ಮಿದುಳಿನ ಗಾತ್ರವಲ್ಲ. ನೀವೆಷ್ಟು ದೊಡ್ಡದಾಗಿ ಬದುಕುತ್ತೀರಿ ಎನ್ನುವುದು, ಕೇವಲ, ನೀವೆಷ್ಟು ಜೀವಚೈತನ್ಯವನ್ನು ಸೆರೆಹಿಡಿದಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿದೆ.

ಸದ್ಯಕ್ಕೆ ನಿಮಲ್ಲಿರುವುದಕ್ಕಿಂತ ಹೆಚ್ಚಿನ ಜೀವಚೈತನ್ಯವನ್ನು ನೀವು ಸೆರೆಹಿಡಿಯಬೇಕೆಂದಾದರೆ, ನೀವು ನಿಮ್ಮ ಪ್ರತ್ಯೇಕ ಅಸ್ತಿತ್ವದ ಗಡಿಗಳನ್ನು ತೆರೆಯಬೇಕು. ನಿಮ್ಮ ಪ್ರತ್ಯೇಕತೆಯು ಮೆಲ್ಲಗೆ, ಯಾರೂ ಒಳಬರದಂತಹ ಒಂದು ಗಟ್ಟಿಯಾದ ಕವಚದಂತಾಗುತ್ತಿದೆ. ನಿಮ್ಮ ಪ್ರತ್ಯೇಕತೆಯ ಗಡಿಗಳನ್ನು ನಾಶಮಾಡಿದಾಗ ನಾವಿದನ್ನು ಯೋಗವೆಂದು ಕರೆಯುತ್ತೇವೆ.

ಯೋಗವೆಂದರೆ ನಿಮ್ಮ ದೇಹವನ್ನು ತಿರುಚುವುದು ಅಥವಾ ತಲೆಕೆಳಗಾಗಿ ನಿಲ್ಲುವುದಲ್ಲ. ಯೋಗವೆಂದರೆ ಐಕ್ಯತೆ, ಒಂದಾಗುವುದು. ಒಂದಾಗುವುದು ಎಂದರೆ ಪ್ರಜ್ಞಾಪೂರ್ವಕವಾಗಿ ನಿಮ್ಮ ಪ್ರತ್ಯೇಕ ಅಸ್ತಿತ್ವದ ಎಲ್ಲೆಗಳನ್ನು ಅಳಿಸಿಹಾಕುವುದು ಎಂದರ್ಥ. ಆಗ ನಿಮ್ಮೊಳಗೆ, ಯಾರೊಬ್ಬರೂ ಊಹಿಸದಷ್ಟು ಮಹತ್ ಪ್ರಮಾಣದಲ್ಲಿ ಜೀವಚೈತನ್ಯವು ಕಾರ್ಯಪ್ರವೃತ್ತವಾಗುತ್ತದೆ. ಈ ರೀತಿಯ ಚೈತನ್ಯಯುತವಾದ ಬದುಕಿನಿಂದಾಗಿ, ಸಹಜವಾಗಿಯೇ ಎಲ್ಲವೂ ನಿಮಗೆ ಬೇಕಾದಂತೆ ನಡೆಯುತ್ತದೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image