ಪುರುಷ ಮತ್ತು ಮಹಿಳೆಯ ನಡುವಿನ ಮೂಲಭೂತ ವ್ಯತ್ಯಾಸಗಳ ಬಗ್ಗೆ ಮಾತನಾಡುತ್ತಾ, ಸದ್ಗುರುಗಳು ನಮ್ಮ ಭೌತಿಕ ಮತ್ತು ಮಾನಸಿಕ ಶರೀರದ ಮೂಲಾಂಶದ ಪ್ರವೃತ್ತಿಯ ಬಗ್ಗೆ ಚರ್ಚಿಸುತ್ತಾರೆ. ಈ ವಿಜ್ಞಾನದ ಹಿಂದಿರುವ ಮಹತ್ವ ಹಾಗೂ ನಮ್ಮ ಗ್ರಹಣಶಕ್ತಿಯು ಭೌತಿಕ ಸ್ವಭಾವವನ್ನು ಮೀರಿ ಬೆಳಯುವ ಸಾಧ್ಯತೆಯನ್ನೂ ಸಹ ಅವರು ವಿವರಿಸುತ್ತಾರೆ.

ಪ್ರಶ್ನೆ: ನಮಸ್ಕಾರ, ಸದ್ಗುರು. ಪಂಚಭೂತಗಳು ಮಾನವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ವಿಚಾರದಲ್ಲಿ ಪುರುಷ ಹಾಗೂ ಮಹಿಳೆಯರ ಶರೀರ ಮತ್ತು ಮನಸ್ಸಿನ ನಡುವೆ ಹೇಗೆ ವ್ಯತ್ಯಾಸವನ್ನು ಉಂಟುಮಾಡುತ್ತವೆ?

ಸದ್ಗುರು:

ಪ್ರತಿಯೊಬ್ಬರಿಗೂ ಇದು ನಿಜವಾಗಿರಬೇಕಾಗಿಲ್ಲ, ಆದರೆ ಸಾಮಾನ್ಯವಾಗಿ, ಮಹಿಳೆಯರು ಜಲದ ಪ್ರಕೃತಿಯನ್ನು ಹೋಲುತ್ತಾರೆ ಮತ್ತು ಪುರುಷರು ಭೂಮಿಯ ಪ್ರಕೃತಿಯನ್ನು ಹೋಲುತ್ತಾರೆ. ಇದು ಒಬ್ಬ ಮಹಿಳೆಗೆ, ಶರೀರ ಮತ್ತು ಮನಸ್ಸುಗಳೆರಡರಲ್ಲೂ ಒಂದು ನಿರ್ದಿಷ್ಟ ಮಟ್ಟದ ಹೊಂದಿಕೂಳ್ಳುವಂತಹ ಸ್ವಭಾವವನ್ನು ನೀಡುತ್ತದೆ. ಭೂಮಿಯ ಪ್ರಕೃತಿಯನ್ನು ಹೋಲುವುದು ಗಂಡಸರಿಗೆ ಒಂದು ರೀತಿಯ ದೃಢತೆ, ಅಧಿಕಾರಯುತ ಸ್ವಭಾವ ಹಾಗೂ ಬಿಗಿತವನ್ನು ನೀಡುತ್ತದೆ ಮತ್ತು ಅದೊಂದು ನಿರ್ದಿಷ್ಟವಾದ ಅಭಿವ್ಯಕ್ತಿಯ ಶಕ್ತಿಯನ್ನೂ ಸಹ ನೀಡುತ್ತದೆ.

ಅನೇಕ ಮಹಿಳೆಯರು ತಾವು ಅಂತರ್ದೃಷ್ಟಿಯುಳ್ಳವರು ಎಂದೆಣಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯಲ್ಲೂ ಇದು ನಿಜವಾಗಿರಬೇಕೆಂದೇನೂ ಇಲ್ಲ. ಆದರೆ ಮಹಿಳೆಯರ ಅನುಭೂತಿಯ ಆಯಾಮವು ಅವರ ತಾರ್ಕಿಕ ಆಯಾಮಕ್ಕಿಂತ ಸ್ವಲ್ಪ ಹೆಚ್ಚಾಗಿರುವುದರಿಂದ, ಅವರುಗಳು ಸ್ವಭಾವತಃ ಸ್ವಲ್ಪ ಕಡಿಮೆ ತಾರ್ಕಿಕವಾಗಿರಬಹುದು. ನಾನು ಮೊದಲೇ ಹೇಳಿದಂತೆ, ಇದು ಪ್ರತಿಯೊಬ್ಬ ಮಹಿಳೆಗೂ ಅನ್ವಯಿಸಬೇಕಾಗಿಲ್ಲ. ಮಹಿಳೆಯರು ಜೀವನವನ್ನು ಅನುಭವಿಸಲು ಇಚ್ಛಿಸುವುದು ಸಾಮಾನ್ಯ ಪ್ರವೃತ್ತಿಯಾದರೆ, ಗಂಡಸರು ಜೀವನವನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ. ಜೀವನವನ್ನು ಅವರು ಅನುಸರಿಸುವ ರೀತಿಯೇ ಅವರಿಬ್ಬರ ನಡುವಿನ ಒಂದು ದೊಡ್ಡ ವ್ಯತ್ಯಾಸ. ಈ ವ್ಯತ್ಯಾಸವು ಮುಖ್ಯವಾಗಿ ಮಹಿಳೆಯರು ಜಲದ ಅಂಶದತ್ತ ಮತ್ತು ಪುರುಷರು ಭೂಮಿಯ ಅಂಶದತ್ತ ವಾಲುವುದರಿಂದಾಗಿದೆ. ಉಳಿದ ಪಂಚಭೂತಗಳು ಪ್ರತಿ ವ್ಯಕ್ತಿಯಲ್ಲೂ ಭಿನ್ನವಾಗಿ ವರ್ತಿಸುತ್ತವೆ.
 

ಶರೀರ ಮತ್ತು ಮನಸ್ಸು 

ಶರೀರ ಮತ್ತು ಮನಸ್ಸು ಎನ್ನುವುದೆಲ್ಲಾ ಇಲ್ಲ; ಇರುವುದು ಶರೀರ, ಶರೀರ ಮತ್ತು ಶರೀರ ಮಾತ್ರ. ಭೌತಿಕ ಶರೀರವಿದೆ, ಮಾನಸಿಕ ಶರೀರವಿದೆ ಮತ್ತು ಪ್ರಾಣಶಕ್ತಿಯ ಶರೀರವಿದೆ. ಮನಸ್ಸು ಎನ್ನುವಂತಹದ್ದೇನು ಇಲ್ಲ. ಅದು ಪಾಶ್ಚಾತ್ಯರ ಆವಿಷ್ಕಾರವಾಗಿದೆ. ಸಾಮಾನ್ಯವಾಗಿ, ಚಿಂತನಾ ಪ್ರಕ್ರಿಯೆ ನಡೆಯುತ್ತಿರುವುದನ್ನು ಮನಸ್ಸು ಎಂದು ಪರಿಗಣಿಸಲಾಗುತ್ತದೆ. ಚಿಂತನಾ ಪ್ರಕ್ರಿಯೆಯು ಕೇವಲ ಮಾನಸಿಕ ಶರೀರದ ಒಂದು ಅಂಶವಷ್ಟೆ. ಮಾನವ ವ್ಯವಸ್ಧೆಯಲ್ಲಿ ಇನ್ನೂ ಬಹಳಷ್ಟು ಪ್ರಕ್ರಿಯೆಗಳು ನಡೆಯುತ್ತಿರುತ್ತವೆ.

ಆಧುನಿಕ ವ್ಯಾಖ್ಯಾನದ ಪ್ರಕಾರ, ಮನಸ್ಸು ಎಂದು ನೀವು ಯಾವುದನ್ನು ಕರೆಯುತ್ತೀರೋ, ಅದು ಕೇವಲ ಒಂದು ನಿರ್ದಿಷ್ಟ ಪ್ರಮಾಣದ ನೆನಪು ಮತ್ತು ಬುದ್ಧಿಶಕ್ತಿಯಾಗಿದೆ. ನೀವು ನಿಮ್ಮ ದೇಹದ ಪ್ರಕೃತಿಯನ್ನು ಗಮನಿಸಿದರೆ, ನಿಮ್ಮ ದೇಹದಲ್ಲಿನ ಪ್ರತಿ ಕೋಶವೂ ಸಹ ನಿಮ್ಮ ಜಾಗೃತ ಮನಸ್ಸಿನಲ್ಲಿರುವುದಕ್ಕಿಂತ ಒಂದು ಲಕ್ಷ ಕೋಟಿ ಪಟ್ಟು ಹೆಚ್ಚಿನ ನೆನಪನ್ನು ಹೊಂದಿದೆ. ಅದಲ್ಲದೆ, ನಾವು  ಯಾವಾಗಲೂ ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಅವನು ಮಾಡಬಹುದಾದ ಚಟುವಟಿಕೆಯ ಸಂಕೀರ್ಣತೆಯ ಅನುಸಾರವಾಗಿ ಅಳೆಯತ್ತೇವೆ. ಯಾರಾದರೂ ಕೇವಲ ಸರಳವಾದ ಕೆಲಸಗಳನ್ನು ಮಾತ್ರ ಮಾಡಬಹುದಾದರೆ, “ಅವನೊಬ್ಬ ಪೆದ್ದ." ಎನ್ನುತ್ತೇವೆ. ಅದೇ ಯಾರಾದರೂ ಹಲವು ಜಟಿಲವಾದ ಕೆಲಸಗಳನ್ನು ಮಾಡಬಹುದಾದರೆ, “ಅವನೊಬ್ಬ ಬುದ್ಧಿವಂತ ವ್ಯಕ್ತಿ." ಎನ್ನುತ್ತೇವೆ. ನೀವು ಈ ರೀತಿಯ ನಿರೂಪಣೆ ಪ್ರಕಾರ ಹೋದರೆ, ನಿಮ್ಮ ಶರೀರದಲ್ಲಿನ ಪ್ರತಿಯೊಂದು ಜೀವಕೋಶ, ನಿಮ್ಮ ವ್ಯವಸ್ಧೆಯಲ್ಲಿನ DNAದ ಪ್ರತಿ ಅಣುವೂ ಸಹ ನಿಮ್ಮ ಚಿಂತನಾ ಪ್ರಕ್ರಿಯೆಯು ಎಂದೂ ಊಹಿಸಲಸಾಧ್ಯವಾದಂತಹ ಸಂಕೀರ್ಣ ಕೆಲಸಗಳನ್ನು ನಿರ್ವಹಿಸುತ್ತಿದೆ.

ಹಾಗಾಗಿ, ನೆನಪು ಮತ್ತು ಬುದ್ಧಿವಂತಿಕೆಯೆಂದು ಕರೆಯಲಾಗುವ ಚಟುವಟಿಕೆಯ ಸಂಕೀರ್ಣತೆಗಳ ಪ್ರಕಾರ, ನಿಮ್ಮ ಶರೀರದಲ್ಲಿರುವ ಪ್ರತಿ ಜೀವಕೋಶದ ಬುದ್ಧಿವಂತಿಕೆಯು ನಿಮ್ಮಿಡೀ ಮೆದುಳಿನ ಬುದ್ಧಿಶಕ್ತಿಗಿಂತ ಬಹಳಷ್ಟು ಹೆಚ್ಚಾಗಿದೆ. ಆದರೆ ಸದ್ಯದಲ್ಲಿ, ಇವುಗಳು ಸ್ವಯಂಚಾಲಿತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ - ನಿಮಗಿದರ ಬಗ್ಗೆ ಅರಿವಿಲ್ಲ. ಮಾನಸಿಕ ಚಟುವಟಿಕೆ ನಡೆಯುತ್ತಿದ್ದಾಗ ನಿಮಗದರ ಅರಿವು ತಕ್ಕ ಮಟ್ಟಿಗೆ ಇರಬಹುದು. ಆದರೆ ಸಾಮಾನ್ಯವಾಗಿ, ನೀವು ಹೊಂದಿರುವ ಮಾನಸಿಕ ಶರೀರದ ಬಗ್ಗೆ ನಿಮಗ್ಯಾವ ಅರಿವೂ ಇರುವುದಿಲ್ಲ.

ಮಾನಸಿಕ ಸ್ತರದಲ್ಲಿ, ಪುರುಷರು ಸಮರ್ಥರಾಗಿರುವ ವಿಷಯಗಳಲ್ಲಿ ಮಹಿಳೆಯರೂ ಸಹ ಸಮರ್ಥ ಅಥವಾ ದಕ್ಷರಾಗಲು ಕಲಿತುಕೊಳ್ಳಬಹುದು. ಇದು ಪುರುಷರಿಗೂ ಕೂಡ ಅನ್ವಯಿಸುತ್ತದೆ. ಇದರರ್ಥ, ಓರ್ವ ಮಹಿಳೆ, ತರಬೇತಿಯನ್ನು ಪಡೆಯುವ ಮೂಲಕ, ಒಬ್ಬ ಪುರುಷ ಯಾವ ರೀತಿಯ ಆಲೋಚನೆಗಳಲ್ಲಿ ಸಮರ್ಥನಾಗಿರುವನೋ ಅವುಗಳಲ್ಲಿ ಸುಲಭವಾಗಿ ಸಮರ್ಥಳಾಗಬಹುದು ಅಥವಾ ಒಬ್ಬ ಪುರುಷನು ಒಬ್ಬ ಮಹಿಳೆಯು ಸಮರ್ಥಳಾಗಿರುವ ಯಾವುದೇ ರೀತಿಯ ಅಂತರ್ದೃಷ್ಟಿತ್ವಗಳಲ್ಲಿ ಸಮರ್ಥನಾಗಬಹುದು. ಆದರೆ ಅದಕ್ಕೆ ಸ್ವಲ್ಪ ಮಟ್ಟದ ತರಬೇತಿಯ ಅಗತ್ಯವಿರುತ್ತದೆ. ಸ್ವಾಭಾವಿಕವಾಗಿ, ಅವರು ಮೇಲೆ ಹೇಳಿದಂತೆ, ಒಂದು ಕಡೆಗೆ ವಾಲುತ್ತಾರೆ, ಏಕೆಂದರೆ, ಒಬ್ಬರಲ್ಲಿ ಭೂಮಿಯ ಅಂಶ, ಇನ್ನೊಬ್ಬರಲ್ಲಿ ಜಲದ ಅಂಶ ಪ್ರಬಲ ಅಥವಾ ಅಗ್ರವಾಗಿರುತ್ತದೆ.

ಪೂರಕ ಅಂಶಗಳು

ಮೂಲಭೂತವಾಗಿ ಪುರುಷ ಮತ್ತು ಮಹಿಳೆಯರಲ್ಲಿನ ಪಂಚಭೂತಗಳ ಈ ಏರುಪೇರು ಅವರು ಪುರುಷ ಮತ್ತು ಮಹಿಳೆಯಾಗಿ ಪ್ರಕೃತಿಯಲ್ಲಿನ ಕೆಲ ಪ್ರಮುಖವಾದ  ಜವಾಬ್ದಾರಿಗಳನ್ನು ತೀರಿಸುವ ಸಲುವಾಗಾಗಿದೆ. ಈಗಿನ ಆಧುನಿಕ ಜಗತ್ತಿನಲ್ಲಿ ನಾವು ನಮ್ಮದೇ ಆದಂತಹ ಒಂದು ಕೃತಕ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಕಾರಣ ಈ ಜವಾಬ್ದಾರಿಗಳನ್ನು ಇಂದು ಚರ್ಚಿಸಬಹುದಾಗಿದೆ. ನಮ್ಮ ನಗರಗಳು, ನಮ್ಮ ಮನೆಗಳು, ನಮ್ಮ ವಾಸಸ್ಥಳಗಳು, ನಾವು ಕೆಲಸ ಮಾಡುವ ಸ್ಥಳಗಳು, ಇವೆಲ್ಲವೂ ನಾವೇ ಮಾಡಿಕೊಂಡಿರುವಂತವುಗಳು. ಇಲ್ಲಿ ಲಿಂಗ ವ್ಯತ್ಯಾಸಗಳನ್ನು ಸರಿದೂಗಿಸಲಾಗಿದೆ.

ಆದರೆ ನೀವು ಕಾಡಿನಲ್ಲಿ ವಾಸವಾಗಿದಿದ್ದರೆ, ಸಹಜವಾಗಿ, ಈ ಏರ್ಪಾಡುಗಳ ಅಗತ್ಯವಿದೆಯೆಂದು ನಿಮಗೆ ತಿಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ತಾಯಿ ಎಂದು ಕರೆಯುವ ಸ್ತ್ರೀ ನಮಗೆ ಜನ್ಮ ನೀಡಿದ ಕಾರಣಕ್ಕೆ ನಾವಿಲ್ಲಿರುವುದು. ಇದರರ್ಥ ಮುಂದಿನ ಪೀಳಿಗೆಯ ಜನರನ್ನು ನಿರ್ಮಿಸುವುದು ಮಹಿಳೆಯ ಶರೀರದ ಜವಾಬ್ದಾರಿಯಾಗಿದೆ ಎಂದು. ಆ ಕಾರಣದಿಂದಾಗಿ, ಅವಳ ಶರೀರವನ್ನು ಒಂದು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಲಾಗಿದೆ ಮತ್ತು ಸಂತಾನೋತ್ಪತ್ತಿಯ ಉದ್ದೇಶಕ್ಕೆ ಜಲ ಒಂದು ಪ್ರಮುಖವಾದ ಅಂಶ.

ಮಾನವ ಜಾತಿಯ ಈ ಎರಡು ಆಯಾಮಗಳನ್ನು ಒಂದು ನಿರ್ದಿಷ್ಟ ವಯಸ್ಸಿನವರೆಗೆ ಒಂದಕ್ಕೊಂದು ಪೂರಕಾವಾಗಿರುವಂತೆ ರೂಪಿಸಲಾಗಿದೆ. ಆ ನಂತರ, ಈ ಆಯಾಮಗಳು ತಮ್ಮನ್ನು ತಾವು ಪುನರ್ಸಂಘಟಿಸಿಕೊಂಡು ಸ್ವತಂತ್ರವಾಗುತ್ತವೆ. ಬಳಿಕ, ಜನರು ತಮ್ಮ ಭಾವನೆಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟು, ಅಭ್ಯಾಸ ಮತ್ತು ಭಾವನಾತ್ಮಕ ಅಭದ್ರತೆಯ ಕಾರಣಗಳಿಂದಾಗಿ ತಮ್ಮ ಆತ್ಮೀಯತೆಯನ್ನು ಉಳಿಸಿಕೊಂಡುಹೋಗಲು ಪ್ರಯತ್ನಿಸುತ್ತಾರೆ. ಇಲ್ಲದಿದ್ದರೆ, ಜಲದ ಪ್ರಕೃತಿಯತ್ತ ಮತ್ತು ಭೂಮಿಯ ಪ್ರಕೃತಿಯತ್ತ ವಾಲುವ ಈ ಎರಡು ಆಯಾಮಗಳ ನಡುವಿನ ಬಾಂಧವ್ಯ - ಒಂದು ನಿರ್ದಿಷ್ಟವಾದ ಹಂತದವರೆಗೆ ಮಾತ್ರ ಜೀವಂತವಾಗಿರುತ್ತದೆ.

ಎಷ್ಟು ತ್ವರಿತವಾಗಿ ಒಬ್ಬರು ಇದರಿಂದ ಹೊರಬರುತ್ತಾರೆನ್ನುವುದೂ ಸಹ ಅವರು ತಮ್ಮೊಳಗೆ ಎಷ್ಟು ಆಕಾಶ ತತ್ವವನ್ನು ಬೆಳೆಸಿಕೊಳ್ಳುತ್ತಾರೆನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಒಮ್ಮೆ ಅವರ ಗ್ರಹಣ ಶಕ್ತಿಯು ಭೌತಿಕತೆಯನ್ನು ಮೀರಿ ಬೆಳೆದಾಕ್ಷಣ, ಅಲ್ಲಿ ಪುರುಷ ಹಾಗೂ ಸ್ತ್ರೀ ಎಂಬ ಭೇದವಿರುವುದಿಲ್ಲ. ಹಲವಾರು ವಿಧಗಳಲ್ಲಿ ಸಮರ್ಥವಾಗಿಸಬಹುದಾದ ಮಾನವ ಸ್ವರೂಪವಿರುತ್ತದೆಯಷ್ಟೆ. ಕೇವಲ ಕೆಲಸವನ್ನು ಮಾಡುವುದರಲ್ಲಿನ ಸಾಮರ್ಥ್ಯವಲ್ಲದೆ, ಗ್ರಹಿಕೆಯಲ್ಲಿನ ಸಾಮರ್ಥ್ಯವಿರುತ್ತದೆ. ಒಬ್ಬ ವ್ಯಕ್ತಿಯಾಗಲ್ಲದೆ ಒಂದು ಜೀವವಾಗಿ ಸಾಮರ್ಥ್ಯವು ಹೆಚ್ಚಾಗುತ್ತದೆ – ಒಂದು ಜೀವವು ಇನ್ನೊಂದು ಜೀವಕ್ಕಿಂತ ಹೆಚ್ಚು ಜೀವಂತವಾಗಿರುವ ಸಾಮರ್ಥ್ಯವನ್ನು ಹೊಂದುತ್ತದೆ. ನಿಮ್ಮ ಸುತ್ತಲಿರುವ ಎಲ್ಲಕ್ಕಿಂತಲೂ ಹೆಚ್ಚು ಜೀವಂತವಾಗಿರುವುದರ ಅರ್ಥ, ನೀವು ಜೀವನವನ್ನು ಇತರರಿಗಿಂತ ದೊಡ್ಡ ಪ್ರಮಾಣದಲ್ಲಿ ತಿಳಿದಿರುವಿರಿ ಎಂದಾಗುತ್ತದೆ.

ಮಿತಿಗಳನ್ನು ಮೀರಿ ಮೇಲೇರುವ ಮಹತ್ವಾಕಾಂಕ್ಷೆ

ಪ್ರತಿಯೊಬ್ಬ ಮನುಷ್ಯರೂ ಇದನ್ನು ಮಾಡಲು ಸಮರ್ಥರಾಗಿದ್ದಾರೆ. ಆದರೆ, ಜೀವನ ಪರ್ಯಂತ ಮಾಡಿಕೊಂಡು ಬಂದಿದ್ದನ್ನೇ ಮುಂದುವರಿಸಿಕೊಂಡು ಹೋಗಬೇಕು, ಇಲ್ಲದಿದ್ದರೆ ನೀವೊಬ್ಬ ಅಂಜುಬುರುಕ ಹೇಡಿಯೆಂಬ ನಂಬಿಕೆಯ ಕಟ್ಟುಪಾಡಿಗೆ ಜನರು ದುರದೃಷ್ಟವಶಾತ್ ಒಳಪಟ್ಟಿದ್ದಾರೆ. ಇಂತಹ ಹಣೆಪಟ್ಟಿಯನ್ನಿಡುವ ಮತ್ತು ಕೀಳುದೃಷ್ಟಿಯಿಂದ ನೋಡುವ ಸಮಾಜ ಮತ್ತು ಅವರದ್ದೇ ಆದ ಭಾವನಾತ್ಮಕ ಹಾಗೂ ಮಾನಸಿಕ ಅಭದ್ರತೆಯ ಕಾರಣಗಳಿಂದಾಗಿ ಜನರು ತಾವೇನು ಮಾಡುತ್ತಿದ್ದಾರೋ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಾರೆ. ಇಲ್ಲವಾದಲ್ಲಿ, ಎಲ್ಲರಲ್ಲಿಯೂ ಸಹ ಮಿತಿಗಳನ್ನು ಮೀರಿಹೋಗಬೇಕೆಂಬ ಹಂಬಲವು ಇದ್ದೇ ಇರುತ್ತದೆ. ಆಫೀಸ್, ಕುಟುಂಬ, ಸ್ನೇಹಿತರು, ಸಾಮಾಜಿಕ ಜಾಲತಾಣ, ತಮ್ಮ ಫೋನ್ ಮತ್ತು ಕಂಪ್ಯೂಟರ್‍ಗಳಿಂದ ದೂರವಿದ್ದು, ಸ್ವಲ್ಪ ಸಮಯವನ್ನು ತಮಗಾಗಿಯೇ ಬದಿಗಿರಿಸಿಕೊಂಡರೆ, ಎಲ್ಲರೂ ತಮ್ಮ ಪ್ರಸ್ತುತ ಮಿತಿಗಳನ್ನು ಮೀರಿಹೋಗುವ ಅಗತ್ಯತೆಯನ್ನು ಕಂಡುಕೊಳ್ಳುತ್ತಾರೆ, ಅದರ ಬಗ್ಗೆ ಎರಡನೇ ಮಾತಿಲ್ಲ. ಅವರಿಗೆ ಅದರ ಬಗ್ಗೆ ಕಲಿಸುವ ಮತ್ತು ಸದಾಕಾಲ ಅವರನ್ನು ಹುರಿದುಂಬಿಸುವ ಅವಶ್ಯಕತೆಯಿಲ್ಲ. ಪ್ರತಿಯೊಬ್ಬ ಮನುಷ್ಯನೂ ಸ್ವಲ್ಪ ಸಮಯವನ್ನು ಅವನಿಗಾಗಿ ಕೊಟ್ಟುಕೊಂಡರೆ, ಖಂಡಿತವಾಗಿ ಅವನಿಗಿದರ ಅರಿವಾಗುತ್ತದೆ.

ಸಂಪಾದಕರ ಟಿಪ್ಪಣಿ: ಈ ಲೇಖನವು ಈಶ ಹಠ ಯೋಗ ಸ್ಕೂಲ್-ನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮದಲ್ಲಿ ಸದ್ಗುರುಗಳು ನೀಡಿದ ಪ್ರವಚನೆಯ ಆಯ್ದ ಭಾಗವಾಗಿದೆ. ಈ ಕಾರ್ಯಕ್ರಮವು ಯೋಗ ಪದ್ಧತಿಯ ಆಳವಾದ ತಿಳುವಳಿಕೆಯನ್ನು ಗಳಿಸಲು ಸಾಟಿಯಿಲ್ಲದ ಅವಕಾಶವನ್ನು ಹಾಗೂ ಹಠ ಯೋಗವನ್ನು ಹೇಳಿಕೊಡುವ ಕುಶಲತೆಯನ್ನು ನಿಮಗೆ ನೀಡುತ್ತದೆ. ಮುಂದಿನ ಇಪ್ಪತ್ತೊಂದು ವಾರಗಳ ಹಠ ಯೋಗ ಟೀಚರ್ಸ್ ಟ್ರೈನಿಂಗ್ ಕಾರ್ಯಕ್ರಮವು ಜುಲೈ 16, 2019ರಿಂದ ಡಿಸೆಂಬರ್ 11, 2019ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ, www.ishahathayoga.com ವೆಬ್ಸೈಟ್-ಅನ್ನು ನೋಡಿ ಅಥವಾ info@ishahatayoga.com ಇಮೇಲ್ ವಿಳಾಸಕ್ಕೆ ಬರೆಯಿರಿ.