ಪ್ರೀತಿಪಾತ್ರರನ್ನು ಕಳೆದುಕೊ೦ಡ ದುಃಖವನ್ನು ನಿಭಾಯಿಸುವುದು ಹೇಗೆ?
ನಮ್ಮಗೆ ಬಹಳ ಪ್ರೀತಿಪಾತ್ರರಾದವರನ್ನು ನಾವು ಕಳೆದುಕೊಂಡಾಗ ಆಗುವ ದುಃಖವನ್ನು ಹೇಗೆ ನಿಭಾಯಿಸಬಹುದೆ೦ದು ಲೇಖಕರಾದ ಅಮಿಶ್ ತ್ರಿಪಾಠಿಯವರು ಸದ್ಗುರುಗಳನ್ನು ಕೇಳುತ್ತಾರೆ.
ಅಮಿಶ್ ತ್ರಿಪಾಠಿ: ನನ್ನ ಪ್ರಶ್ನೆಯಿರುವುದು ದುಃಖದ ಬಗ್ಗೆ. ನಮ್ಮ ತತ್ವಶಾಸ್ತ್ರಗಳು ಹೇಳುತ್ತವೆ, ನಾವು ಸಮಚಿತ್ತರಾಗಿರಬೇಕು ಹಾಗೂ ಸಂತೋಷ ಮತ್ತು ದುಃಖವನ್ನು ಒ೦ದೇ ತೆರನಾದ ನಿರ್ಲಿಪ್ತತೆಯಿಂದ ನೋಡಬೇಕು ಎ೦ದು. ಆದರೆ, ನಮ್ಮ ಸಾಮರ್ಥ್ಯಕ್ಕೆ ಮೀರಿದ, ತಾಳಲಾರದಷ್ಟು ದುಃಖವನ್ನು ಅನುಭವಿಸುತ್ತಿರುವಾಗ ಏನು ಮಾಡಬೇಕು? ನಮಗೆ ಬಹಳ ಅಚ್ಚುಮೆಚ್ಚಾದವರನ್ನು ಕಳೆದುಕೊಂಡರೆ, ಆ ದುಃಖವನ್ನು ಸಂಭಾಳಿಸುವುದು ಹೇಗೆ?
ಸದ್ಗುರು: ನಿಮಗಾಗಿರುವ ನೋವು, ನಷ್ಟವನ್ನು ನಾನು ಕಡೆಗಣಿಸುತ್ತಿಲ್ಲ. ನೀವು ಅರ್ಥಮಾಡಿಕೊಳ್ಳಬೇಕೇನೆ೦ದರೆ, ದುಃಖವಾಗುವುದು ಯಾರೊಬ್ಬರ ಸಾವಿನಿಂದಲ್ಲ, ಅದು ಯಾವಾಗಲೂ ಏನನ್ನಾದರು ಕಳೆದುಕೊಂಡಿರುವುದರ ಬಗ್ಗೆಯಾಗಿರುತ್ತದೆ – ನಾವು ಏನನ್ನೋ ಕಳೆದುಕೊ೦ಡೆವು ಎ೦ಬುದರ ದುಃಖ. ಜನಗಳು, ಆಸ್ತಿ, ಸ್ಥಾನಮಾನ ಮತ್ತು ಉದ್ಯೋಗವನ್ನು ಕಳೆದುಕೊಂಡಾಗ ದುಃಖಪಡಬಹುದು.
ಮೂಲಭೂತವಾಗಿ, ದುಃಖವೆನ್ನುವುದು, ಒಬ್ಬ ಮನುಷ್ಯ ಏನನ್ನಾದರೂ ಕಳೆದುಕೊಳ್ಳುವುದರ ಬಗ್ಗೆಯಾಗಿದೆ. ಜನರ ವಿಷಯಕ್ಕೆ ಬಂದಾಗ, ನಾವು ಅವರನ್ನು ಮೃತ್ಯುವಿಗೆ ಕಳೆದುಕೊ೦ಡಾಗ, ಅದರ ಮಹತ್ವವೇನಂದರೆ, ನಮಗೆ ಅವರು ಪುನಃ ಸಿಗುವುದಿಲ್ಲ. ಆಸ್ತಿ, ಸ್ಥಾನಮಾನ, ಹಣ ಮತ್ತು ಸಂಪತ್ತನ್ನು ಪುನಃ ಸಂಪಾದಿಸಬಹುದು. ಆದರೆ, ನಮ್ಮ ಹತ್ತಿರದವರನ್ನು ಕಳೆದುಕೊಂಡರೆ, ಅವರು ನಮಗೆ ಪುನಃ ಸಿಗುವುದಿಲ್ಲ. ಅದಕ್ಕಾಗಿಯೇ, ದುಃಖವು ತೀವ್ರವಾಗಿರುತ್ತದೆ.
ನಾವು ನಮ್ಮ ವ್ಯಕ್ತಿತ್ವವನ್ನು ಒಂದು ಅಂಟು ಚಿತ್ರಣದ೦ತೆ (collage) ನಿರ್ಮಿಸಿಕೊಂಡಿರುವುದರಿಂದ ನಮಗೆ ಹೀಗಾಗುತ್ತಿದೆ. “ನಾವು ಯಾರು” ಎನ್ನುವುದು ನಮ್ಮ ಆಸ್ತಿ, ನಾವು ಹೊಂದಿರುವ ಸ್ಥಾನಮಾನ, ನಮ್ಮ ಸಂಬಂಧಗಳು ಹಾಗು ನಮ್ಮ ಜೀವನದಲ್ಲಿರುವ ಜನಗಳ ಮೇಲೆ ಅವಲಂಬಿಸಿದೆ. ಇವುಗಳಲ್ಲಿ ಯಾವುದಾದರೊಂದು ಕಳೆದು ಹೋದರೆ, ನಮ್ಮ ವ್ಯಕ್ತಿತ್ವದಲ್ಲಿ ಅದೊ೦ದು ಶೂನ್ಯಪ್ರಜ್ಞೆಯನ್ನು ಉ೦ಟುಮಾಡುತ್ತದೆ. ಇದರ ಬಾಧೆಯನ್ನೇ ನಾವು ಅನುಭವಿಸುತ್ತಿರುವುದು.
ನಮ್ಮ ಸಂಬಂಧಗಳು ನಮ್ಮ ಜೀವನವನ್ನು ಪೂರ್ಣಗೊಳಿಸುವು ಸಾಧನಗಳಾಗದೇ ಇರುವುದು ಅತಿ ಮುಖ್ಯ. ನಮ್ಮ ಪರಿಪೂರ್ಣತೆಯ ಆಧಾರದ ಮೇಲೆ ನಮ್ಮ ಸಂಬಂಧಗಳು ಬೆಳೆಯಬೇಕು. ನಿಮ್ಮನ್ನು ನೀವು ಪರಿಪೂರ್ಣರನ್ನಾಗಿಸಿಕೊಳ್ಳಲೆ೦ದು ಒಂದು ಸಂಬಂಧವನ್ನು ಅವಲಂಬಿಸಿದರೆ, ಅದನ್ನು ಕಳೆದುಕೊಂಡಾಗ, ನೀವು ಬರಿದಾಗುವಿರಿ. ಆದರೆ, ನಿಮ್ಮ ಸಂಪೂರ್ಣತೆಯನ್ನು ಹಂಚಿಕೊಳ್ಳಲು ನೀವೊಂದು ಸಂಬಂಧವನ್ನು ಬೆಳೆಸಿದ್ದೇ ಆದಲ್ಲಿ, ಯಾವ ದುಃಖವೂ ಇರುವುದಿಲ್ಲ.
ಮೇಲೆ ಹೇಳಿದ್ದೆಲ್ಲವು ನಮಗೆ ಬಹಳ ಅಚ್ಚುಮೆಚ್ಚಾಗಿರುವವರನ್ನು ಕಳೆದುಕೊಂಡಾಗ ಕೆಲಸಕ್ಕೆಬಾರದೆ ಇರಬಹುದು ಮತ್ತು ಒಬ್ಬರ ದುಃಖ ಮತ್ತು ಸಂತಾಪವನ್ನು ನಗಣ್ಯ ಮಾಡುತ್ತಿರುವಂತೆ ಇದು ತೋರಬಹುದು. ಹಾಗಾಗಿ, ನಮ್ಮ ಬಳಿಯಿರುವುದು ನಾವು ಯಾರೆಂಬುದನ್ನು ನಿರ್ಧರಿಸುವುದಿಲ್ಲ ಎ೦ಬುದನ್ನು, ನಾವು ನಮ್ಮ ಜೀವನದುದ್ದಕ್ಕೂ ಬೆಳಸಿಕೊ೦ಡುಬರಬೇಕು. ನಾವು ಯಾರೆಂಬುದು ನಮ್ಮ ಬಳಿ ಏನಿದೆ ಎ೦ಬುದನ್ನು ನಿರ್ಧರಿಸುವ೦ತಾಗಬೇಕು. ಇಂತಹ ಮನಃಸ್ಥಿತಿ ಎಲ್ಲರಲ್ಲೂ ಬರಬೇಕು. ಇದೇ ಆಧ್ಯಾತ್ಮಿಕತೆಯ ಅರ್ಥ.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.