ಜೈಪುರ ಸಾಹಿತ್ಯೋತ್ಸವ 2017ರ ಅಧಿವೇಶನದಲ್ಲಿ ಸಂಜೋಯ್ ರಾಯ್-ವ್ಯವಸ್ಥಾಪಕ ನಿರ್ದೇಶಕರು, ಈ ವಿಶ್ವ ಪ್ರಸಿದ್ಧ ಉತ್ಸವದ ಹಿಂದಿರುವ ರೂವಾರಿ, ಅವರು ನಿದ್ರೆಯ ಬಗ್ಗೆ ಮತ್ತು ಅದೊಂದು ಗೀಳಾಗಿಬಿಡುವ ಪ್ರವೃತ್ತಿಯ ಕುರಿತಾಗಿ ಸದ್ಗುರುಗಳಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಸದ್ಗುರುಗಳು ನಿದ್ರೆ, ವಿಶ್ರಾಂತಿ, ಅವರ ವೈಯಕ್ತಿಕ ನಿದ್ರೆಯ ಅವಧಿ ಮತ್ತು ನಮ್ಮ ದೇಹವೆಂಬ ’ಯಂತ್ರ’ವನ್ನು ಉತ್ತಮಗೊಳಿಸುವ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ.

ಸಂಜೋಯ್ ರಾಯ್: ನಿಮ್ಮ ಪುಸ್ತಕ "ಅಂತರಂಗದ ವಿಜ್ಞಾನ: ಆನಂದಕ್ಕೆ ಯೋಗಿಯ ಕೈಪಿಡಿ"ಯಲ್ಲಿ, ನೀವು ನಿದ್ರೆಯ ಬಗ್ಗೆ, ನಮಗೆ ನಿದ್ರೆಯು ಗೀಳಾಗಿರುವ ಬಗ್ಗೆ ಮತ್ತು ನಾವು ಅನೇಕ ವಿಷಯಗಳನ್ನು ಗೀಳಾಗಿಸಿಕೊಂಡಿರುವ ಬಗ್ಗೆ ಮಾತನ್ನಾಡಿದ್ದೀರಿ.

ಸದ್ಗುರು: ದೇಹಕ್ಕೆ ನಿದ್ರೆಯ ಅಗತ್ಯವಿಲ್ಲ - ಅದಕ್ಕೆ ಬೇಕಿರುವುದು ವಿಶ್ರಾಂತಿ. ಹೆಚ್ಚಿನವರ ಅನುಭವದಲ್ಲಿ, ನಿದ್ರೆ ಎಂಬುದು ಅವರಿಗೆ ತಿಳಿದಿರುವ ವಿಶ್ರಾಂತಿಯ ಆಳವಾದ ರೂಪವಾಗಿದೆ, ಆದ್ದರಿಂದ ಅವರು ನಿದ್ರೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಮೂಲಭೂತವಾಗಿ, ದೇಹವು ನಿದ್ರೆಯನ್ನು ಬೇಡುತ್ತಿಲ್ಲ, ಅದಕ್ಕೆ ಬೇಕಿರುವುದು ವಿಶ್ರಾಂತಿ. ನೀವು ಸಾಕಷ್ಟು ಚಟುವಟಿಕೆಯನ್ನು ಮಾಡಿದಾಗ, ದೈಹಿಕ ಒತ್ತಡದ ಒಂದು ಭಾಗವು ದೇಹದಲ್ಲಿ ಉಳಿದುಕೊಳ್ಳುತ್ತದೆ. ಆದ್ದರಿಂದ ಒಂದಷ್ಟು ಸಮಯದ ನಂತರ, ದೇಹವು ನಿದ್ರಿಸಲು ಬಯಸುತ್ತದೆ.

ತಜ್ಞರು ಎಂದು ಕರೆದುಕೊಳ್ಳುವವರು ನಿದ್ರೆ ಮಾಡುವುದನ್ನು ಉತ್ತೇಜಿಸುತ್ತಿದ್ದಾರೆ. ನಿದ್ರೆಯನ್ನು ಉತ್ತೇಜಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ - ಜನರು ದಣಿದಾಗ ಮಲಗುತ್ತಾರೆ. ಆದರೆ ಎಲ್ಲರೂ ದಿನಕ್ಕೆ ಎಂಟರಿಂದ ಹತ್ತು ಗಂಟೆಗಳ ಕಾಲ ಮಲಗಬೇಕೆಂಬ ಪರಿಭಾಷೆಯಲ್ಲಿ ಜನ ಮಾತನಾಡುತ್ತಿದ್ದಾರೆ. ನೀವು ನೂರು ವರ್ಷಗಳ ಕಾಲ ಬದುಕುತ್ತೀರಿ ಎಂದೆಣಿಸೋಣ - ನೀವು ದಿನಕ್ಕೆ ಎಂಟು ಗಂಟೆಗಳ ಕಾಲ ಮಲಗುವ ಸಲಹೆಯನ್ನು ಅನುಸರಿಸಿದ್ದರೆ, ನೀವು ಮೂವತ್ಮೂರು ವರ್ಷಗಳ ಕಾಲ ಮಲಗಿರುತ್ತೀರಿ.

ವಿಶ್ರಾಂತಿಯ ಅಂಶವನ್ನು ಜನರು ಅರ್ಥಮಾಡಿಕೊಂಡಿಲ್ಲ. ಇಂದು ಇದನ್ನು ಪ್ರಯತ್ನಿಸಿ ನೋಡಿ: ಊಟ ಮಾಡುವ ಮೊದಲು ಮತ್ತು ನಂತರ ನಿಮ್ಮ ನಾಡಿಯನ್ನು ಪರಿಶೀಲಿಸಿ. ದಿನದ ಹನ್ನೆರಡು ನಿಮಿಷಗಳನ್ನು ತೆಗೆದುಕೊಳ್ಳುವ ಈಶ ಕ್ರಿಯಾವನ್ನು ನೀವು ಕಲಿತು, ಅದನ್ನು ನಾಲ್ಕರಿಂದ ಆರು ವಾರಗಳವರೆಗೆ ಮಾಡಿ ಆಹಾರ ಸೇವಿಸುವ ಮೊದಲು ಮತ್ತು ನಂತರ ನಿಮ್ಮ ನಾಡಿಯನ್ನು ಮತ್ತೆ ಪರಿಶೀಲಿಸಿದರೆ, ನಾಡಿ ಬಡಿತ ಕಡಿಮೆಯಾಗಿರುವುದನ್ನು ನೀವು ಕಾಣುತ್ತೀರಿ. ಇದರರ್ಥ ನೀವು ಕಡಿಮೆ ಆರ್‌ಪಿಎಂ(RPM)ನಲ್ಲಿ ಹೋಗುತ್ತಿರುವಿರಿ ಎಂದು. ನೀವು ನಿಮ್ಮ ಕಾರನ್ನು 5000 ಆರ್‌ಪಿಎಂ ನಲ್ಲಿ ಓಡಿಸುತ್ತಿದ್ದರೆ, ಅದನ್ನೇ ನೀವು 2000 ಆರ್‌ಪಿಎಂ ನಲ್ಲಿ ಓಡಿಸಿದಾಗ ಎಷ್ಟು ಹಾಳಾಗುವುದೋ, ಅದಕ್ಕಿಂತ ಹೆಚ್ಚು ಬೇಗ ಹಾಳಾಗುತ್ತದೆ. ಅದೇ ರೀತಿ, ನಿಮ್ಮ ನಾಡಿ ಬಡಿತವು ನಿರಂತರವಾಗಿ ಹೆಚ್ಚಾಗಿದ್ದರೆ, ನಿಮಗೆ ಬಹಳ ಆಯಾಸವಾಗುತ್ತಿರುತ್ತದೆ. ಹೀಗಾದಾಗ ನೀವು ಅದನ್ನು ಹೆಚ್ಚು ನಿದ್ರೆಯಿಂದ ಸರಿದೂಗಿಸಲು ಪ್ರಯತ್ನಿಸುತ್ತೀರಿ.

ನೀವು ದೇಹಕ್ಕೆ ವಿಶ್ರಾಂತಿಯನ್ನು ನೀಡಿದರೆ, ನಿಮ್ಮ ಜೀವ ವ್ಯವಸ್ಥೆಯಲ್ಲಿ ನೀವು ನಿರಾಳತೆಯನ್ನು ತರುತ್ತೀರಿ. ಒಮ್ಮೆ ನೀವಿಲ್ಲಿ ಸಂಪೂರ್ಣ ನಿರಾಳತೆಯಲ್ಲಿ ಕುಳಿತುಕೊಂಡರೆ, ನಿಮ್ಮ ದೇಹದಲ್ಲಿ ಉಳಿದಿಕೊಳ್ಳುವ ಒತ್ತಡದ ಪ್ರಮಾಣವು ಬಹಳ ಕಡಿಮೆ. ಸುಮಾರು ಇಪ್ಪತ್ತೇಳು ವರ್ಷಗಳ ಕಾಲ, ನಾನು ಸರಾಸರಿ ಎರಡೂವರೆ-ಮೂರು ಗಂಟೆಗಳ ನಿದ್ರೆ ಮಾಡುತ್ತಿದ್ದೆ. ಈ ದಿನಗಳಲ್ಲಿ, ನಾನು ಸ್ವಲ್ಪ ಸೋಮಾರಿಯಾಗಿದ್ದೇನೆ, ನಾಲ್ಕರಿಂದ ನಾಲ್ಕೂವರೆ ಗಂಟೆಗಳ ಕಾಲ ನಿದ್ರಿಸುತ್ತೇನೆ!

ಎಷ್ಟು ಗಂಟೆ ನಿದ್ರೆ ಮಾಡಬೇಕೆಂದು ನಿಗದಿಪಡಿಸಿಕೊಳ್ಳುವ ಅಗತ್ಯವಿಲ್ಲ. ನಿಮಗೆ ಸಾಕಷ್ಟು ವಿಶ್ರಾಂತಿ ಸಿಕ್ಕಾಗ, ನೀವು ನಿದ್ದೆಯಿಂದ ಎಚ್ಚರವಾಗಬೇಕು. ದೇಹ ಮತ್ತು ಮನಸ್ಸನ್ನು ಒಂದು ನಿರ್ದಿಷ್ಟ ಮಟ್ಟದ ಚರುಕುತನ ಮತ್ತು ಜಾಗೃತಿಯಲ್ಲಿ ಇರಿಸಿದರೆ, ಒಮ್ಮೆ ಅದು ಚೆನ್ನಾಗಿ ವಿಶ್ರಾಂತಿ ಪಡೆದ ನಂತರ ಎಚ್ಚರಗೊಳ್ಳಲು ಉತ್ಸುಕವಾಗಿದೆ ಎನ್ನುವುದನ್ನು ನೀವು ಕಾಣುತ್ತೀರಿ.

Editor’s Note: Body: The Greatest Gadget is an introduction to the most sophisticated and incredible gadget on the planet. It is a first step on an intriguing and exciting journey that culminates in total mastery of the system, allowing us to stay rooted in the physical, and yet taste the beyond. Download now https://www.ishashoppe.com/downloads/portfolio/body-the-greatest-gadget/

A version of this article was originally published in Forest Flower, October 2017.