ಶಾಂಭವಿ ಮಹಾಮುದ್ರೆ – ಒಂದು ಪ್ರಾಣಪ್ರತಿಷ್ಠಾಪನೆ

ಸದ್ಗುರು : ಅನೇಕ ವಿಧಗಳ ದೀಕ್ಷೆಯ ಪ್ರಕ್ರಿಯೆಗಳಿವೆ. ನಾವು ಅವುಗಳಲ್ಲಿ ಕೆಲವನ್ನು ದೀಕ್ಷೆಗಳೆಂದು ಕರೆದರೂ ಸಹ, ನಿಜವಾಗಿ ಅವೆಲ್ಲವೂ ದೀಕ್ಷೆಗಳಲ್ಲ. ನಾವು ನೀಡುತ್ತಿರುವ ಮೊದಲ ಪ್ರಕ್ರಿಯೆಯಾದ ಶಾಂಭವಿ ಮಹಾಮುದ್ರೆಯು ನಿಜವಾದ ಅರ್ಥದಲ್ಲಿ ಒಂದು ದೀಕ್ಷೆಯಲ್ಲ – ಅದೊಂದು ಪ್ರಾಣಪ್ರತಿಷ್ಠಾಪನೆಯಂತಹ ಪ್ರಕ್ರಿಯೆ. ನಾವು ಜನರನ್ನು ಪ್ರಾಣಪ್ರತಿಷ್ಠಾಪಿಸುತ್ತಿದ್ದೇವೆ. ಯಾವುದೇ ಮಾನದಂಡದಿಂದ ನೋಡಿದರೂ, ಆದಿಯೋಗಿ ಲಿಂಗ(ಈಶ ಯೋಗ ಕೇಂದ್ರದ ಆದಿಯೋಗಿ ಆಲಯದಲ್ಲಿರುವ ಲಿಂಗ) ದಂತಹ ಒಂದು ರೂಪವನ್ನು ಪ್ರಾಣಪ್ರತಿಷ್ಠೆ ಮಾಡುವ ಪ್ರಕ್ರಿಯೆಗೆ ಹೋಲಿಸಿದರೆ, ಒಬ್ಬ ಜೀವಂತ ಮನುಷ್ಯನನ್ನು ಪ್ರಾಣಪ್ರತಿಷ್ಠೆ ಮಾಡುವುದು ಅತ್ಯಂತ ಸುಲಭದ ಕೆಲಸ. ಒಂದು ಲಿಂಗವನ್ನು ಪ್ರಾಣಪ್ರತಿಷ್ಠೆ ಮಾಡಲು ಅಪಾರವಾದ ಶ್ರಮ ಬೇಕಾಗುತ್ತದೆ, ಏಕೆಂದರೆ ನೀವಲ್ಲಿ ಒಂದು ನಿರ್ಜೀವ ವಸ್ತುವನ್ನು ಬಹುತೇಕ ಸಜೀವಗೊಳಿಸುತ್ತಿರುತ್ತೀರಿ, ವಿವೇಚನೆಯುಳ್ಳ ಜೀವಂತ ರೂಪವಾಗಿ ಮಾರ್ಪಡಿಸುತ್ತಿರುತ್ತೀರಿ. ಅವನಿಗೆ ನಿಮ್ಮ ಬಗ್ಗೆ ಎಲ್ಲವೂ ಗೊತ್ತು (ಆದಿಯೋಗಿ ಲಿಂಗವನ್ನು ಸೂಚಿಸುತ್ತಾ).

ಶಾಂಭವಿ ಮಹಾಮುದ್ರೆ ಎನ್ನುವುದು ಒಂದು ಶಕ್ತಿಯುತವಾದ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆ. ಅಲ್ಲಿ ನಿಮ್ಮನ್ನು ನೀವು ಮುಕ್ತವಾಗಿಟ್ಟುಕೊಳ್ಳುವುದಷ್ಟೇ ನೀವು ಮಾಡಬೇಕಾದ ಕೆಲಸ.

ಇದಕ್ಕಾಗಿ ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ. ಆದರೆ ಒಬ್ಬ ಜೀವಂತ ಮನುಷ್ಯನನ್ನು ಪ್ರಾಣಪ್ರತಿಷ್ಠೆಗೊಳಿಸುವುದು ಸುಲಭ. ಜೀವಂತ ಮನುಷ್ಯರ ಏಕೈಕ ಸಮಸ್ಯೆಯೇನೆಂದರೆ, ಅವರು ಯು-ಟರ್ನ್ ಗಳನ್ನು ತೆಗೆದುಕೊಳ್ಳುವುದರಲ್ಲಿ ಪರಿಣತರು. ನಾವು ನಿಮಗೆ ಶಾಂಭವಿ ದೀಕ್ಷೆಯನ್ನು ನೀಡಿದ ಮೊದಲ ದಿನ, ನೀವು ಬೇರೊಂದು ಸ್ಥಿತಿಗೆ ಹೋದಂತೆ ಅನಿಸುತ್ತದೆ; ಅದೊಂದು ಅನುಭವಾತ್ಮಕ ಪ್ರಕ್ರಿಯೆ. ಕೆಲವರು ಅದನ್ನು ಕೆಲವು ದಿನ, ವಾರ, ತಿಂಗಳುಗಳು, ವರ್ಷಗಳ ಕಾಲ ಹಾಗೆಯೇ ಇಟ್ಟುಕೊಳ್ಳುತ್ತಾರೆ, ಇನ್ನು ಕೆಲವರು ಕಾರ್ಯಕ್ರಮ ಮುಗಿದ ತಕ್ಷಣ ಅದನ್ನು ಬಿಟ್ಟುಬಿಡುತ್ತಾರೆ. ಶಾಂಭವಿ ಮಹಾಮುದ್ರೆ ಎನ್ನುವುದು ಒಂದು ಶಕ್ತಿಯುತವಾದ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆ. ಅಲ್ಲಿ ನಿಮ್ಮನ್ನು ನೀವು ಮುಕ್ತವಾಗಿಟ್ಟುಕೊಳ್ಳುವುದಷ್ಟೇ ನೀವು ಮಾಡಬೇಕಾದ ಕೆಲಸ. ಇದೊಂದು ಪ್ರಾಣಪ್ರತಿಷ್ಠಾಪನೆ – ಅಲ್ಲಿ ಕೆಲಸ ಮಾಡಿಯಾಗಿರುತ್ತದೆ. ಅದು ಒಂದು ದೇವಸ್ಥಾನವನ್ನು ಕಟ್ಟಿದಂತೆ - ನೀವೇನಿದ್ದರೂ ಅಲ್ಲಿಗೆ ಹೋಗಿ ಕುಳಿತುಕೊಳ್ಳಬೇಕಷ್ಟೆ. ನೀವು ದಿನನಿತ್ಯ ಅದರ ಲಾಭವನ್ನು ಪಡೆಯಬೇಕು, ಅಷ್ಟೆ.

 

ದೀಕ್ಷೆ – ಪೋಷಿಸಬೇಕಾದಂತಹ ಒಂದು ಬೀಜ

ಆದರೆ ಶೂನ್ಯ-ಧ್ಯಾನ, ಶಕ್ತಿ ಚಲನ ಕ್ರಿಯೆ, ಸಂಯಮ – ಇವೆಲ್ಲವೂ ವಾಸ್ತವದಲ್ಲಿ ದೀಕ್ಷೆಗಳು. ಅವುಗಳು ಒಂದು ನಿರ್ದಿಷ್ಟ ರೀತಿಯವು. ಮೊದಲೆಲ್ಲಾ ಶೂನ್ಯ ಧ್ಯಾನವೇ ಈಶದ ಪರಿಚಯ ಕಾರ್ಯಕ್ರಮವಾಗಿತ್ತು. ಶೂನ್ಯವು ಒಂದು ಪೂರ್ಣಪ್ರಮಾಣದ ದೀಕ್ಷೆ. ದೀಕ್ಷೆ ಎನ್ನುವುದು ಒಂದು ಬೀಜವಿದ್ದಂತೆ. ನೀವದನ್ನು ಪೋಷಿಸಬೇಕು – ಆಗಲೇ ಅದು ಬೆಳೆಯುವುದು. ಬಹಳ ಜನ ಇದನ್ನು ಅರಿತುಕೊಂಡಿದ್ದಾರೆ. ಅವರಿಗೆ ಶೂನ್ಯ ಧ್ಯಾನದ ದೀಕ್ಷೆಯನ್ನು ನೀಡಿದಾಗ, ಅವರು ಅದ್ಭುತವಾಗಿದ್ದರು. ಅವರು ಮನೆಗೆ ಹೋಗಿ, ಕೆಲವು ತಿಂಗಳುಗಳ ಕಾಲ ಅದನ್ನು ಅಭ್ಯಾಸ ಮಾಡಿದ್ದರಿಂದ ಅವರ ಜೀವನ ಬದಲಾಯಿತು. ಅವರ ಚಯಾಪಚಯ ಕ್ರಿಯೆ ಬದಲಾಯಿತು, ಅವರ ನಿದ್ರೆ ಮತ್ತು ಆಹಾರ ಕಡಿಮೆಯಾಯಿತು ಮತ್ತು ಎಲ್ಲವೂ ಅದ್ಭುತವಾಗಿತ್ತು. ಆದರೆ ಆನಂತರ ಅವರು ಏನೋ ಒಂದರಲ್ಲಿ ವ್ಯಸ್ತರಾದರು. ಅದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿಬಿಟ್ಟರು. ನಂತರ ಮತ್ತೆ ಶೂನ್ಯ-ಧ್ಯಾನದ ನೆನಪಾಯಿತು. ಆನಂತರದಲ್ಲಿ ಅದರಿಂದ ಏನೂ ಆಗಲಿಲ್ಲ. ಅದು ಹೊರಟುಹೋಗಿತ್ತು. ಏಕೆಂದರೆ ಅದೊಂದು ಬೀಜ. ಅದನ್ನು ಪೋಷಿಸಬೇಕು. ನೀವದಕ್ಕೆ ನೀರುಣಿಸದಿದ್ದರೆ, ಅದು ಸತ್ತುಹೋಗುತ್ತದೆ. ನೀವದರ ಬಗ್ಗೆ ಕಾಳಜಿ ವಹಿಸದಿದ್ದರೆ, ಅದು ಹೊರಟುಹೋಗುತ್ತದೆ.

ಹಾಗಾಗಿ ನಾವು ಶಾಂಭವಿಯನ್ನು ಪರಿಚಯ ಕಾರ್ಯಕ್ರಮವನ್ನಾಗಿ ಬದಲಿಸಿದೆವು. ಅದೊಂದು ಪ್ರಾಣಪ್ರತಿಷ್ಠಾಪನೆ.  ಅದು ಹೋಗುವುದಿಲ್ಲ – ಅದು ಯಾವಾಗಲೂ ಇರುತ್ತದೆ. ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡು ಅದನ್ನು ನೋಡಿಕೊಳ್ಳುವುದಷ್ಟೇ ನಿಮ್ಮ ಕೆಲಸ. ಅದು ನಿರ್ದಿಷ್ಟ ರೀತಿಯ ತೆರವು ಮತ್ತು ಅನುಭವವನ್ನು ಸೃಷ್ಟಿಸುತ್ತದೆ. ಮತ್ತು ನೀವದನ್ನು ಸರಿಯಾಗಿಟ್ಟುಕೊಂಡರೆ, ಅದು ತನ್ನಷ್ಟಕ್ಕೆ ತಾನೆ ವೃದ್ಧಿಸುತ್ತದೆ. ಆದರೆ ಅದು ಶೂನ್ಯ-ಧ್ಯಾನದಂತೆ ಬೆಳೆಯುವುದಿಲ್ಲ. ಶೂನ್ಯವು ಬೆಳೆಯಬಲ್ಲುದು. ಶೂನ್ಯವು ಹೇಗೆ ಬೆಳೆಯುತ್ತದೆ? ಶೂನ್ಯಾಕಾಶವು ಬೆಳೆದಿರುವುದರಿಂದಲೇ ಬ್ರಹ್ಮಾಂಡ ಹರಡಿಕೊಂಡಿದೆ. ಕೋಟ್ಯಾಂತರ ನಕ್ಷತ್ರಗಳು ಅಥವಾ ಗ್ಯಾಲಕ್ಸಿಗಳಿಂದ ಅದು ಇಷ್ಟು ದೊಡ್ಡದಾದದ್ದಲ್ಲ. ಶೂನ್ಯದ ಬೆಳವಣಿಗೆಯೇ ಅದನ್ನು ಇಷ್ಟು ವಿಸ್ತಾರಗೊಳಿಸಿರುವುದು. ಹಾಗಾಗಿ ಶೂನ್ಯವು ಬೆಳೆಯುತ್ತದೆ. ಅದು ಅಮಿತವಾಗಿ ಬೆಳೆಯಬಲ್ಲದು.

ಯೋಗ ಕಾರ್ಯಕ್ರಮಗಳ ನಡುವೆ ತೊಂದರೆಗಳು

ಶಾಂಭವಿಯು ಒಂದು ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯಾದ ಕಾರಣ, ದೀಕ್ಷೆ ನೀಡುವ ಸಮಯದಲ್ಲಿ ತೊಂದರೆಗಳಾದರೆ ಅದು ನನ್ನ ಮೇಲೆ ಪರಿಣಾಮ ಬೀರುತ್ತದೆ. ನಾನು ಇತ್ತೀಚಿನ ದಿನಗಳಲ್ಲಿ ಒಂದು ಬಾರಿಗೆ ಸುಮಾರು ಹತ್ತು ಸಾವಿರ ಜನರಿಗೆ ದೀಕ್ಷೆ ನೀಡುತ್ತೇನೆ. ಅವರೆಲ್ಲರೂ ಒಂದೇ ವ್ಯಕ್ತಿಯಂತಿದ್ದರೆ ಸಮಸ್ಯೆಯಿಲ್ಲ. ಆದರೆ ಅವರಲ್ಲಿ ಒಂದು ಹದಿನೈದು ಇಪ್ಪತ್ತು ಜನ ಏನೋ ಅಸಂಬದ್ಧತೆಗಳನ್ನು ಮಾಡುತ್ತಿದ್ದರೆ, ಅದು ನನ್ನನ್ನು ಘಾಸಿಗೊಳಿಸುತ್ತದೆ. ನನ್ನೊಂದಿಗಿರುವವರು ಇದನ್ನು ನೋಡುತ್ತಾರೆ. ಒಂದೊಂದು ಸಲ ನಾನು ದೀಕ್ಷೆ ನೀಡಿ ಯಾವ ತೊಂದರೆಯೂ ಇಲ್ಲದಂತೆ ವಾಪಸ್ಸು ಬರುತ್ತೇನೆ. ಇನ್ನೊಂದು ಸಲ ಹೋದಾಗ, ಅದು ನನ್ನನ್ನು ನೆಲಕ್ಕೆ ಬೀಳಿಸಿಬಿಟ್ಟಿರುತ್ತದೆ. ದೀಕ್ಷೆಯ ನಂತರ, ನೀವು ಶಾಂಭವಿ ಅಭ್ಯಾಸವನ್ನು ಹೇಗೆ ಮಾಡುತ್ತೀರಿ ಎನ್ನುವುದು ನನ್ನನ್ನು ಅಷ್ಟೇನೂ ಬಾಧಿಸುವುದಿಲ್ಲ ಏಕೆಂದರೆ ನಾವು ಬಂಡವಾಳವನ್ನು ಹೂಡಿರುತ್ತೇವೆ ಅಷ್ಟೆ. ನಾವು ಬಂಡವಾಳವನ್ನು ಕಳೆದುಕೊಳ್ಳಬಹುದು, ಆದರೆ ನನ್ನ ಜೀವಶಕ್ತಿಯ ಮೂಲಭೂತ ರಚನೆಯಲ್ಲಿ ಏನೂ ಬದಲಾಗುವುದಿಲ್ಲ.

ಇತ್ತೀಚೆಗೆ ನಾವು ಭಾವಸ್ಪಂದನ ಕಾರ್ಯಕ್ರಮಗಳನ್ನು ಕೇವಲ ಅಂತಹ ಕಾರ್ಯಕ್ರಮಗಳಿಗಾಗಿಯೇ ನಿರ್ಮಿಸಲ್ಪಟ್ಟ ಪ್ರತಿಷ್ಠಾಪನೆಗೊಂಡ ಸ್ಥಳಗಳಲ್ಲಿ ಮಾತ್ರ ಮಾಡುತ್ತೇವೆ. ಮೊದಲೆಲ್ಲಾ ನಾವು ಭಾವಸ್ಪಂದನ ಕಾರ್ಯಕ್ರಮಗಳನ್ನು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಎಲ್ಲಾ ರೀತಿಯ ಸಾರ್ವಜನಿಕ ಕಟ್ಟಡಗಳಲ್ಲಿ, ಮದುವೆ ಮತ್ತಿತರ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ನಡೆಸುತ್ತಿದ್ದೆವು. ಹಿಂದಿನ ದಿನ ಅಲ್ಲಿ ಮದುವೆ ಅಥವಾ ಇನ್ಯಾವುದೋ ಪಾರ್ಟಿ ನಡೆದಿರುತ್ತಿತ್ತು. ಬೆಳಿಗ್ಗೆ ನಮ್ಮ ಸ್ವಯಂಸೇವಕರು ಎಲ್ಲವನ್ನೂ ಸ್ವಚ್ಛಗೊಳಿಸಿ, ಸ್ಥಳವನ್ನು ಸಿದ್ಧಗೊಳಿಸಿರುತ್ತಿದ್ದರು.  ಸಂಜೆಯ ಹೊತ್ತಿಗೆಲ್ಲಾ ನಾವು ಭಾವಸ್ಪಂದನವನ್ನು ಪ್ರಾರಂಭಿಸುತ್ತಿದ್ದೆವು. ಆ ಸ್ಥಳಗಳಲ್ಲಿ ನಾವು ಅಪಾರವಾದ ಕಷ್ಟಗಳನ್ನು ಅನುಭವಿಸುತ್ತಿದ್ದೆವು. ಕಾರ್ಯಕ್ರಮದ ನಂತರ ನನ್ನ ಬೆನ್ನುಮೂಳೆಯಲ್ಲಿ ನಿಂಬೆಹಣ್ಣಿನ ಗಾತ್ರದ ಗಡ್ಡೆಗಳೇಳುತ್ತಿದ್ದವು. ಅದು ವಾಸಿಯಾಗಲು ಹಲವಾರು ದಿನಗಳೇ ಬೇಕಾಗುತ್ತಿತ್ತು. ಆದರೆ ಈಗ ನಾವು ಭಾವಸ್ಪಂದನ ಕಾರ್ಯಕ್ರಮಗಳನ್ನು ಪ್ರತಿಷ್ಠಾಪನೆಗೊಂಡ ಸ್ಥಳಗಳ ಸಂರಕ್ಷಣೆಯಲ್ಲಿ ಮಾತ್ರವೇ ನಡೆಸುವುದರಿಂದ ಅದು ಒಂದು ಆಟದಂತೆ ನಡೆದುಹೋಗುತ್ತಿದೆ. ಆದರೆ ಅದನ್ನು ಬೇರೆ ಸ್ಥಳಗಳಲ್ಲಿ ನಡೆಸುವುದೆಂದರೆ ಅದೊಂದು ಬೇರೆಯದ್ದೇ ರೀತಿಯ ಸವಾಲು.

ಪ್ರಾಣಪ್ರತಿಷ್ಠಾಪನೆಗಳ ಸಮಯದಲ್ಲಿ ಆಗಬಹುದಾದ ಹಾನಿ

ಸಾಮಾನ್ಯವಾಗಿ ಆದಿಯೋಗಿ ಲಿಂಗದ ಪ್ರತಿಷ್ಠಾಪನೆಯಂತಹ ಕಾರ್ಯಕ್ರಮಗಳಲ್ಲಿ ಹಾನಿಯಾಗಬಹುದು. ಆ ಕಾರ್ಯಕ್ರಮದಲ್ಲಿ ಎಲ್ಲಾ ಹದಿನಾಲ್ಕು ಸಾವಿರ ಜನರೂ ಒಂದೇ ವ್ಯಕ್ತಿಯಂತೆ ಕುಳಿತಿದ್ದರು. ಇಂದಿಗೂ ನಾನು ಆ ಜನರಿಗೆ ವಂದಿಸುತ್ತೇನೆ, ಅವರು ನಾನು ಕಂಡ ಅತ್ಯದ್ಭುತ ಜನ. ಏಕೆಂದರೆ ನಾನು ಪ್ರಾಣಪ್ರತಿಷ್ಠಾಪನೆಯ ಬಹುತೇಕ ಪ್ರಕ್ರಿಯೆಯನ್ನು ಕೆಲವೇ ಜನರೊಂದಿಗೆ ಖಾಸಗಿಯಾಗಿ ಮಾಡಬೇಕೆಂದುಕೊಂಡಿದ್ದೆ, ಆದರೆ ನನ್ನ ಕಾರ್ಯಕ್ರಮಗಳ ಒತ್ತಡದಿಂದಾಗಿ ನನಗೆ ಹಾಗೆ ಮಾಡಲಾಗಲಿಲ್ಲ. ನಾನು ಪ್ರಾಣಪ್ರತಿಷ್ಠೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಇಲ್ಲಿಗೆ ಬಂದೆ. ಮತ್ತು ಅಷ್ಟು ದೊಡ್ಡ ಜನಸಮೂಹದ ನಡುವೆ ಪ್ರಾಣಪ್ರತಿಷ್ಠೆಯನ್ನು ಮಾಡುವುದು ಹೇಗೆಂಬುದು ನಿಜವಾದ ಕಾಳಜಿಯ ವಿಷಯವಾಗಿತ್ತು. ಆದರೆ ಅದು ಸಾರ್ವಜನಿಕ ಸ್ಥಳದಂತೆ ಇರಲಿಲ್ಲ. ಅದು ನಾನು ಬಹುತೇಕ ಒಂದೇ ವ್ಯಕ್ತಿಯೊಂದಿಗೆ ಇರುವಂತೆ ಇತ್ತು – ಹದಿನಾಲ್ಕು ಸಾವಿರ ಜನ! ಜನರು ಹಾಗಿದ್ದರೆ, ನಾವು ಅತ್ಯದ್ಭುತವಾದ ಸಂಗತಿಗಳನ್ನು ಮಾಡಬಹುದು. 

ನಾವು ಲಿಂಗ ಭೈರವಿ ದೇವಿಯ ಪ್ರಾಣಪ್ರತಿಷ್ಠಾಪನೆಯನ್ನು ಕೆಲವೇ ಕೆಲವು ಜನರೊಂದಿಗೆ ಮಾಡಿದೆವು, ಆದರೂ ಸಹ  ಅಲ್ಲಿ ನಮಗೆ ಅಗತ್ಯವಿದ್ದಷ್ಟು ಶಿಸ್ತು ಕಾಣಸಿಗಲಿಲ್ಲ. ನಾನು ಸಂಪೂರ್ಣವಾಗಿ ಆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೆ, ಮತ್ತು ನನ್ನ ಸುತ್ತಲಿದ್ದ ಜನರು ಆಗಾಗ ಕೆಲವು ಕುಚೇಷ್ಟೆಗಳನ್ನು ಮಾಡುತ್ತಿದ್ದರು. ಇದರಿಂದ ನಾನು ಸುಮಾರು ಒಂದೂವರೆ ವರ್ಷಗಳ ಕಾಲ ನನ್ನ ರುಚಿ ಮತ್ತು ಆಘ್ರಾಣ ಶಕ್ತಿಗಳನ್ನು ಕಳೆದುಕೊಳ್ಳಬೇಕಾಯಿತು. ನಾನು ಎಲ್ಲಾ ರೀತಿಯ ವಾಸನೆಗಳಿಗೆ ಅತ್ಯಂತ ತೀವ್ರವಾಗಿ ಸ್ಪಂದಿಸುತ್ತಿದ್ದೆ, ಮತ್ತು ನನ್ನ ರುಚಿಯ ಅರಿವು ಬಹಳ ಚುರುಕಾಗಿತ್ತು. ಆದರೆ ಸುಮಾರು ಹದಿನೆಂಟು ತಿಂಗಳುಗಳ ಕಾಲ, ನಾನು ರುಚಿಯ ಅರಿವಿಲ್ಲದೆ ಪ್ಲಾಸ್ಟಿಕ್ ಆಹಾರವನ್ನು ತಿನ್ನುವಂತೆ ಭಾಸವಾಗುತಿತ್ತು. ನಾನು ಏನು ತಿನ್ನುತ್ತಿದ್ದೇನೆ ಎನ್ನುವುದೇ ನನಗೆ ತಿಳಿಯುತ್ತಿರಲಿಲ್ಲ. ಸುಮ್ಮನೆ, ಶರೀರ ಪೋಷಣೆಗಾಗಿ ಏನೋ ಒಂದನ್ನು ತಿನ್ನುತ್ತಿದ್ದೆ. ಅದಲ್ಲದೇ ಇನ್ನೂ ಏನೇನೋ ತೊಂದರೆಗಳಾದವು. ಸುಮಾರು ಮೂರು ಸಲ, ನಾನು ನನ್ನ ಎಡಗಡೆಗೆ ಬಿದ್ದೆ – ಒಂದು ಸಲ ಸ್ವಲ್ಪ ಗಾಯಗಳಾದವು, ಇನ್ನೆರಡು ಸಲ ಏನೂ ಆಗದೆ ಪಾರಾದೆ. ಈಗ, ಅವೆಲ್ಲವನ್ನೂ ಒಂದು ಹಂತಕ್ಕೆ ಸರಿಪಡಿಸಲಾಗಿದೆ.

ಹಾಗಾಗಿ ಇದು ನಾವು ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅವಲಂಬಿಸಿದೆ. ಇತ್ತೀಚೆಗೆ ಯಾರೋ ಒಬ್ಬರು, “ಇಷ್ಟೊಂದು ಯೋಗ ಪ್ಯಾಕೇಜುಗಳು ಏಕೆ?” (ವಿವಿಧ ಈಶ ಯೋಗ ಕಾರ್ಯಕ್ರಮಗಳ ಬಗ್ಗೆ ಹೇಳುತ್ತಾ) ಎಂದು ನನ್ನನ್ನು ಕೇಳುತ್ತಿದ್ದರು. ಪ್ಯಾಕೇಜುಗಳು ಸುರಕ್ಷತೆಯ ಸಲುವಾಗಿ ಆಗಿವೆ. ಕೊಡುವವರಿಗೂ ಹಾಗೂ ಪಡೆದುಕೊಳ್ಳುವವರು ಇಬ್ಬರಿಗೂ. ನೀವು ಒಂದು ಪ್ಯಾಕೇಜನ್ನು ಕೊಟ್ಟರೆ, ಅವರದನ್ನು ಅದ್ಭುತವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಅಥವಾ ಹಾಳುಮಾಡಬಹುದು – ಅದು ಶಿಬಿರಾರ್ಥಿಗಳಿಗೆ ಬಿಟ್ಟದ್ದು. ಆದರೆ ಪ್ಯಾಕೇಜಿನ ರೀತಿಯಲ್ಲಿ ಅಲ್ಲದೇ, ಮುಕ್ತವಾದ ನಿರ್ಬಂಧಗಳಿಲ್ಲದ ಸಭೆಗಳನ್ನು ನಡೆಸಿದ್ದೇ ಆದರೆ, ಆಗ ಪರಿಪೂರ್ಣವಾದ ವಿಶ್ವಾಸವು ಬೇಕಾಗುತ್ತದೆ. ಇಲ್ಲದಿದ್ದರೆ, ಅವರ ಮೂರ್ಖತನ ನಿಮ್ಮನ್ನೂ ಸಹ ನಾಶಮಾಡಬಹುದು – ಹಾಗಾಗುವ ಸಾಧ್ಯತೆಯಿದೆ. ಕೆಲವೊಂದು ಸಲ ನಾವು ಆ ರೀತಿಯ ಬೆಲೆಯನ್ನು ತೆತ್ತಿದ್ದೇವೆ ಕೂಡ. ಆದರೆ ಸಾಮಾನ್ಯವಾಗಿ, ನಾವು ಸೃಷ್ಟಿಸಿದ ಫಲಿತಾಂಶಗಳಿಗೆ ಹೋಲಿಸಿದರೆ, ನಾವು ತೆತ್ತ ಬೆಲೆ ಅಷ್ಟೇನೂ ದೊಡ್ಡದಲ್ಲ. 

ಸಂಪಾದಕರ ಟಿಪ್ಪಣಿ: ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದ ಭಾಗವಾಗಿ ಶಾಂಭವಿ ಮಹಾಮುದ್ರೆ ಕ್ರಿಯೆಯ ದೀಕ್ಷೆಯನ್ನು ನಿಮ್ಮ ಹತ್ತಿರದ ಸ್ಥಳದಲ್ಲಿ ಪಡೆದುಕೊಳ್ಳಿ. ಇನ್ನಷ್ಟು ಮಾಹಿತಿಗಾಗಿ ಇಲ್ಲಿ ನೋಡಿ here.

ಈ ಲೇಖನದ ಮೂಲ ಆವೃತ್ತಿಯು ಏಪ್ರಿಲ್ 2019ರ ಫಾರೆಸ್ಟ್ ಫವರ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು Forest Flower, April 2019.