ಕಾವೇರಿ ವಿವಾದದ ಹಿಂದಿರುವ ಮೂಲಭೂತ ಸಮಸ್ಯೆಗಳನ್ನು ಸದ್ಗುರುಗಳು ವಿಶ್ಲೇಷಿಸುತ್ತಾ, ಸಮಸ್ಯೆಗಳನ್ನು ಸುಸ್ಥಿರ ರೀತಿಯಲ್ಲಿ ಪರಿಹರಿಸಲು ಏನು ಮಾಡಬಹುದು ಎಂದು ವಿವರಿಸುತ್ತಾರೆ.

ಸದ್ಗುರು: ನೀರು ಒಂದು ನಿರ್ವಹಿಸಬೇಕಾದ ಸಂಪನ್ಮೂಲ. ಕಳೆದ ಕೆಲವು ದಶಕಗಳಲ್ಲಿ ನಾವು ಇದರ ಬಗ್ಗೆ ಗಮನ ಹರಿಸಿಯೇ ಇಲ್ಲ. ನೀರಿನ ಉಳಿತಾಯವನ್ನು ಉತ್ತೇಜಿಸುವ ಸಬ್ಸಿಡಿಗಳಿವೆ, ಆದರೆ ನೀರನ್ನು ಉಳಿತಾಯ ಮಾಡುವ ರೀತಿಯಲ್ಲಿ ಹೇಗೆ ವ್ಯವಸಾಯವನ್ನು ಮಾಡಬಹುದು ಎಂಬುದನ್ನು ನಾವು ಅವಲೋಕಿಸಿಲ್ಲ. ಉದಾಹರಣೆಗೆ ತಮಿಳುನಾಡಿನಲ್ಲಿ, ಹೆಚ್ಚಾಗಿ ಇನ್ನೂ ನೆರೆ ನೀರಾವರಿಯ ಅಭ್ಯಾಸವಿದೆ, ಇದು ನೀರನ್ನು ಬಳಸುವ ಅತ್ಯಂತ ಕ್ರೂರ ಮಾರ್ಗ. ಇದು ಭೂಮಿಗಾಗಲಿ ಅಥವಾ ಬೆಳೆಗಾಗಲಿ ಒಳ್ಳೆಯದಲ್ಲ. ಈ ಪದ್ಧತಿಯನ್ನು ಹಿಂದೆ ಬಳಸಲಾಗುತ್ತಿತ್ತು, ಆದರಿಂದು ವ್ಯವಸಾಯ ಮಾಡಲು ಹೆಚ್ಚು ಪರಿಣಾಮಕಾರಿ ಮಾರ್ಗಗಳಿವೆ. ನೀವು ಒಂದೇ ಸ್ಥಳದಲ್ಲಿ ಅಷ್ಟೊಂದು ನೀರನ್ನು ಹಾಕಿದರೆ, ಮಣ್ಣಿನ ಗುಣಮಟ್ಟದ ಸೋರಿಕೆಯಾಗಿ ಮಣ್ಣಿನಲ್ಲಿನ ಎಲ್ಲಾ ಜೈವಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಗಿಡದೆಲೆಗಳು ಹಸಿರಾಗಿ ಕಾಣಿಸಬಹುದು, ಆದರೆ ಅದು ಅನೇಕ ವಿಧದಲ್ಲಿ ಬಳಲುತ್ತಿರುತ್ತದೆ. ನಾವು ಈ ಪದ್ಧತಿಯನ್ನು ಬದಲಾಯಿಸಿದರೆ, ತಮಿಳುನಾಡು ಮತ್ತು ಕರ್ನಾಟಕ, ತಮ್ಮ ತಮ್ಮ ನೀರಿನ ಪರಿಸ್ಥಿತಿಯನ್ನು ನಿರ್ವಹಿಸಬಹುದು.

river-cauvery-map

ಇದಲ್ಲದೆ, ನಾವು ಕಾವೇರಿಯ ಮೇಲೆಯೇ ಹೆಚ್ಚು ಗಮನ ಹರಿಸಬೇಕಾಗಿದೆ. ಐವತ್ತು ವರ್ಷಗಳ ಹಿಂದಿನ ಪ್ರಮಾಣಕ್ಕೆ ಹೋಲಿಸಿದಲ್ಲಿ ಕಾವೇರಿಯ ನೀರು ಇಂದು ನಲವತ್ತು ಪ್ರತಿಶತದಷ್ಟು ಬತ್ತಿಹೋಗಿದೆ. ವರ್ಷದಲ್ಲಿ ಎರಡು ಮೂರು ತಿಂಗಳು ನದಿಯ ನೀರು ಸಮುದ್ರವನ್ನೇ ಸೇರುವುದಿಲ್ಲ. ಇದು ಕೇವಲ ಕಾವೇರಿ ನದಿಯ ಸಮಸ್ಯೆಯಲ್ಲ, ನಮ್ಮ ದೇಶದ ಬಹುತೇಕ ಎಲ್ಲಾ ನದಿಗಳಿಗೂ ಈ ಸಮಸ್ಯೆಯಿದೆ. ಇದು ಈ ದೇಶದಲ್ಲಿ ನಿಧಾನವಾಗಿ ಅನಾವರಣಗೊಳ್ಳುತ್ತಿರುವ ವಿಪತ್ತು.

ನಾನು ಕರ್ನಾಟಕದ ಭಾಗಮಂಡಲದಿಂದ ಕೃಷ್ಣರಾಜ ಸಾಗರ ಅಣೆಕಟ್ಟಿನವರೆಗೆ ಮತ್ತು ಬೃಂದಾವನದವರೆಗೆ ಕಾವೇರಿಯಲ್ಲಿ ತೆಪ್ಪದ ಮೇಲೆ ಹೋಗಿದ್ದೇನೆ. ಅದು 160 ಕಿಲೋಮೀಟರಿಗಿಂತಲೂ ಹೆಚ್ಚು. ನಾಲ್ಕು ಟ್ರಕ್ ಟ್ಯೂಬ್‌ಗಳು ಮತ್ತು ಹನ್ನೆರಡು ಬಿದಿರುಗಳ ತೆಪ್ಪದಲ್ಲಿ ಈ ದೂರವನ್ನು ಕ್ರಮಿಸಲು ನನಗೆ ಹದಿಮೂರು ದಿನಗಳು ಬೇಕಾಯಿತು. ಈ ಪ್ರಾಂತ್ಯ ನನಗೆ ಚೆನ್ನಾಗೇ ತಿಳಿದಿದೆ. ಅಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ವಿಷಯವಿದು: ಈ 160 ಕಿಲೋಮೀಟರ್‌ಗಳಲ್ಲಿ, ಮೊದಲ 30 ರಿಂದ 35 ಕಿಲೋಮೀಟರ್‌ಗಳಲ್ಲಿ ಮಾತ್ರ ಅರಣ್ಯ ಪ್ರದೇಶವಿದೆ. ಅದರ ನಂತರವಿರುವುದು ಕೇವಲ ಕೃಷಿಭೂಮಿಯಷ್ಟೆ. ಹೀಗಿದ್ದಾಗ ನದಿ ಹೇಗೆ ಹರಿಯುತ್ತದೆ? ದಕ್ಷಿಣ ಭಾರತದಲ್ಲಿ ನಮ್ಮಲ್ಲಿ ಹಿಮಪೋಷಿತ ನದಿಗಳಿಲ್ಲ. ಇವು ಅರಣ್ಯಪೋಷಿತ ನದಿಗಳು. ಕಾಡಿಲ್ಲದಿದ್ದರೆ, ಕೆಲ ಸಮಯದ ನಂತರ ನದಿ ಇರುವುದಿಲ್ಲ. 35 ಕಿಲೋಮೀಟರ್-ಗಳ ನದಿ ಕಣಿವೆ ಮಾತ್ರ ಜಲಾನಯನ ಪ್ರದೇಶ ಎಂದು ನಮ್ಮ ಕಲ್ಪನೆ. ಇಲ್ಲ, ನೀರಿನ ಆಯಕಟ್ಟು ಪ್ರದೇಶ ನದಿ ಹರಿಯುವ ದಾರಿಯುದ್ದಕ್ಕೂ ಇರಬೇಕು.

ನೀರಿನಿಂದಾಗಿ ಮರಗಳಿವೆ ಎಂದು ಜನರು ಎಣಿಸುತ್ತಾರೆ. ತಪ್ಪು, ನೀರಿರುವುದು ಮರಗಳಿಂದ.

ನೀರಿನಿಂದಾಗಿ ಮರಗಳಿವೆ ಎಂದು ಜನರು ಎಣಿಸುತ್ತಾರೆ. ತಪ್ಪು, ನೀರಿರುವುದು ಮರಗಳಿಂದ. ನದಿಯ ಉದ್ದಕ್ಕೂ, ಇಕ್ಕೆಲೆಗಳಲ್ಲಿ ಕನಿಷ್ಟ ಒಂದು ಕಿಲೋಮೀಟರ್, ಎಲ್ಲೆಲ್ಲಿ ಸರ್ಕಾರಿ ಭೂಮಿಯಿದೆಯೋ, ಅದನ್ನೆಲ್ಲಾ ನಾವು ತಕ್ಷಣ ಅರಣ್ಯೀಕರಣಗೊಳಿಸಬೇಕು. ಎಲ್ಲೆಲ್ಲಿ ಭೂಮಿ ಸ್ಥಳೀಯ ರೈತರಿಗೆ ಸೇರಿರುತ್ತದೆಯೋ, ಅಂತಹ ಕಡೆಗಳೆಲ್ಲಾ, ವ್ಯವಸಾಯದಿಂದ ಅರಣ್ಯಕೃಷಿಗೆ ಪರಿವರ್ತಿತವಾಗಬೇಕು. ನೀವು ಸಾಮಾನ್ಯ ಉಳುಮೆಯಿಂದ ತೋಟಗಾರಿಕೆಗೆ ರೈತನನ್ನು ಪರಿವರ್ತಿಸಬೇಕಾದರೆ, ತೋಟಗಾರಿಕೆ ಬೆಳೆಗಳು ಇಳುವರಿಯನ್ನು ನೀಡಲು ಆರಂಭ ಮಾಡುವವರೆಗೆ ನೀವು ಆತನಿಗೆ ಮೊದಲ ಐದು ವರ್ಷಗಳ ಕಾಲ ಸಬ್ಸಿಡಿ ನೀಡಬೇಕು. ಒಮ್ಮೆ ಇಳುವರಿ ಬರಲು ಆರಂಭವಾದಾಗ, ಈ ನೂರಾರು ಕಿಲೋಮೀಟರ್ ವ್ಯಾಪ್ತಿಯ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಬಂಧಿತ ಉದ್ಯಮವನ್ನು ಸ್ಥಾಪಿಸಲು ನೀವು ಖಾಸಗಿ ವಲಯವನ್ನು ಪ್ರೋತ್ಸಾಹಿಸಬೇಕು.

ಮರಗಳನ್ನು ನೆಟ್ಟು, ತೋಟಗಾರಿಕೆ ಬೆಳೆಯನ್ನು ಬೆಳೆಸುವ ಮೂಲಕ ರೈತರು ಸಾಮಾನ್ಯ ಉಳುಮೆಯ ಬೆಳೆಗಳಿಂದ ಹೆಚ್ಚು ಆದಾಯವನ್ನು ಗಳಿಸುತ್ತಾರೆ ಎಂದು ನೀವು ತೋರಿಸಿರೆ, ರೈತರು ಸಹಜವಾಗಿ ಈ ಪರಿವರ್ತನೆಗೆ ಮುಂದಾಗುತ್ತಾರೆ. ಕನಿಷ್ಟ ಒಂದು ಕಿಲೋಮೀಟರ್‌ವರೆಗೆ, ನದಿಯ ಇಕ್ಕೆಲೆಗಳಲ್ಲಿಯೂ ಹೀಗೆ ಮಾಡಿದರೆ - ಒಂದು ಕಿಲೋಮೀಟರ್‌ಗಿಂತ ಹೆಚ್ಚು ಮಾಡಿದರೆ ಇನ್ನೂ ಉತ್ತಮ - ಹದಿನೈದು ವರ್ಷಗಳ ಅವಧಿಯಲ್ಲಿ, ಕಾವೇರಿಯಲ್ಲಿ ಕನಿಷ್ಟ ಹತ್ತರಿಂದ ಇಪ್ಪತ್ತು ಪ್ರತಿಶತದಷ್ಟು ಹೆಚ್ಚು ನೀರು ಹರಿಯುತ್ತದೆ.

ಇದನ್ನು ಕಾರ್ಯರೂಪಕ್ಕೆ ತರಲು, ಸರ್ಕಾರಕ್ಕೆ ನೀಡಲು ನೀತಿ ಶಿಫಾರಸನ್ನು ನಾವು ಸಿದ್ಧಪಡಿಸುತ್ತಿದ್ದೇವೆ. ನಾವು ರ‍್ಯಾಲೀ ಫಾರ್ ರಿವರ್ಸ್ ಎಂಬ ಅಭಿಯಾನವನ್ನು ಆಯೋಜಿಸುತ್ತಿದ್ದೇವೆ. ಇದರ ಪ್ರಯುಕ್ತವಾಗಿ, ನಮ್ಮ ನದಿಗಳು ಬತ್ತುತ್ತಿವೆ ಎಂಬ ಅರಿವು ಮೂಡಿಸಲು ಸೆಪ್ಟೆಂಬರ್ 3 ರಿಂದ ಅಕ್ಟೋಬರ್ 2 ರವರೆಗೆ ನಾನೇ ಖುದ್ದಾಗಿ ಕನ್ಯಾಕುಮಾರಿಯಿಂದ ಹಿಮಾಲಯಕ್ಕೆ ಡ್ರೈವ್ ಮಾಡಲಿದ್ದೇನೆ. ನಾನು 16 ರಾಜ್ಯಗಳಲ್ಲಿ ಪ್ರಮುಖ ಕಾರ್ಯಕ್ರಗಳನ್ನು ನಡೆಸಿಕೊಡಲಿದ್ದೇನೆ. ಹಲವಾರು ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಭಾಗವಹಿಸುವುದಾಗಿ ಹೇಳಿದ್ದಾರೆ. ದೆಹಲಿಯಲ್ಲಿ ನಾವು ನೀತಿ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ (ಅನುವಾದ ಟಿಪ್ಪಣಿ: ಇವೆಲ್ಲವೂ 2017 ರಲ್ಲಿ ಕಾರ್ಯಗತವಾಗಿವೆ).

“ಇಂಡಿಯಾ” (India) ಎಂಬ ಪದವು "ಇಂಡಸ್" ನದಿಯಿಂದ ಬಂದಿದೆ. ನಮ್ಮದೊಂದು ನದಿ ಆಧಾರಿತ ನಾಗರಿಕತೆ. ನಾವು ವಿಕಸನಗೊಂಡಿರುವುದು ನದಿದಡಗಳಲ್ಲಿ. ಇಂದು, ನಮ್ಮೆಲ್ಲಾ ನದಿಗಳು ಅಪಾಯದಲ್ಲಿವೆ. ಪರಸ್ಪರರ ವಿರುದ್ಧ ಹೋರಾಟ ಮಾಡುವ ಬದಲು, ಈ ನದಿಗಳನ್ನು ಹೇಗೆ ಪುನರುಜ್ಜೀವನಗೊಳಿಸಬೇಕು ಎಂಬುದರ ಬಗ್ಗೆ ನಾವು ಗಮನಹರಿಸಬೇಕು. ಇಲ್ಲದಿದ್ದರೆ, ಕೆಲವು ವರ್ಷಗಳಲ್ಲಿ ನಾವು ಬಾಟಲಿಗಳಿಂದ ನೀರು ಕುಡಿಯುವುದಲ್ಲ, ನಾವು ಬಾಟಲಿಗಳಿಂದ ಸ್ನಾನ ಮಾಡುತ್ತೇವೆ. ದೇಶದ ಅರ್ಧದಷ್ಟು ಜನರು ಈಗಾಗಲೇ ಆ ಪರಿಸ್ಥಿತಿಯಲ್ಲಿದ್ದಾರೆ; ಅಲ್ಲವರು ತಮ್ಮ ದಿನವನ್ನು ಸ್ನಾನದಿಂದ ಆರಂಭಿಸುವುದಿಲ್ಲ, ಏಕೆಂದರೆ ಅಲ್ಲಿ ನೀರಿಲ್ಲ. ಕೆಲವು ವರ್ಷಗಳಲ್ಲಿ, ನಾವು ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಪರಿಸ್ಥಿತಿಯಲ್ಲಿರುತ್ತೇವೆ. ಪ್ರಕೃತಿಯು ತಾನೇ ಕೆಲ ಗಂಭೀರವಾದ ತಿದ್ದುಪಾಟು ಮಾಡದ ಹೊರತು ನಿಮ್ಮ ಬಳಿ ಏನೇ ಇರಲಿ, ನಿಮಗೆ ಚೆನ್ನಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂಬಂತಹ ಪರಂಪರೆಯನ್ನು ನಾವು ನಮ್ಮ ಮಕ್ಕಳಿಗೆ ಬಿಟ್ಟು ಹೋಗುತ್ತಿದ್ದೇವೆ. ಇದನ್ನು ನಾವು ಪ್ರಜ್ಞಾಪೂರ್ವಕವಾಗಿ ಸರಿಪಡಿಸುತ್ತೇವೋ ಅಥವಾ ಪ್ರಕೃತಿಯೇ ಅದನ್ನು ಮಾಡಲಿ ಎಂದು ಬಿಡುತ್ತೇವೋ, ಅದು ನಮ್ಮ ಆಯ್ಕೆ. ಪ್ರಕೃತಿಯೇ ಸ್ವತಃ ತಿದ್ದುಪಾಟನ್ನು ಮಾಡಿದರೆ, ಅದನ್ನದು ಅತ್ಯಂತ ಕ್ರೂರ ರೀತಿಯಲ್ಲಿ ಮಾಡುತ್ತದೆ.

ಸಾವಿರಾರು ವರ್ಷಗಳಿಂದ ಈ ನದಿಗಳು ನಮ್ಮನ್ನು ತಮ್ಮ ಬೆಚ್ಚಗಿನ ಅಪ್ಪುಗೆಯಲ್ಲಿ ಪೋಷಿಸಿವೆ. ಈಗ ನಮ್ಮ ಈ ನದಿಗಳನ್ನು ನಮ್ಮ ಅಪ್ಪುಗೆಯಲ್ಲಿ ಪೋಷಿಸಬೇಕಾದ ಸಮಯ ಬಂದಿದೆ.

ಸಂಪಾದಕರ ಟಿಪ್ಪಣಿ: ಸದ್ಗುರು 2017 ರಲ್ಲಿ ವಿಶ್ವದ ಅತಿ ದೊಡ್ಡ ಪರಿಸರ ಆಂದೋಲನಗಳಲ್ಲಿ ಒಂದಾದ ರ‍್ಯಾಲೀ ಫಾರ್ ರಿವರ್ಸ್-ಅನ್ನು ಆರಂಭಿಸಿದರು. ಇದರ ಅಂಗವಾಗಿ ಒಂದು ತಿಂಗಳ ಅವಧಿಯಲ್ಲಿ ಸದ್ಗುರುಗಳು ಸ್ವತಃ 16 ರಾಜ್ಯಗಳ 23 ನಗರಗಳಿಗೆ ಭೇಟಿ ಇತ್ತರು. ಈ ಅಭಿಯಾನವು, ಅಭೂತಪೂರ್ವವಾದ ರೀತಿಯಲ್ಲಿ ರಾಜಕೀಯ ನಾಯಕರು, ರೈತರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು, ಮಾಧ್ಯಮಗಳು ಇನ್ನಿತರರು ಒಟ್ಟಾಗುವುದನ್ನು ಕಂಡಿತು. ಸದ್ಗುರುಗಳು ರ‍್ಯಾಲೀ ಫಾರ್ ರಿವರ್ಸ್-ನ ಕಾಯ್ದೆಯ ರೂಪುರೇಷೆಗಳನ್ನು ಶಿಫಾರಿಸುವ ಕೈಪಿಡಿಯ ಕರಡು ಪ್ರತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡುವಲ್ಲಿ ಇದು ಕೊನೆಗೊಂಡಿತು. ಸಮಾಜದ ಎಲ್ಲಾ ಕ್ಷೇತ್ರಗಳಿಂದ ಬಂದಂತಹ ಸುಮಾರು 162 ದಶಲಕ್ಷಕ್ಕೂ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಈ ಉಪಕ್ರಮವು ಬೃಹತ್ ಮಟ್ಟದ ಸಾರ್ವಜನಿಕ ಆಂದೋಲನವಾಗಿ ಪರಿವರ್ತಿತವಾಯಿತು. ತರುವಾಯ, ಪ್ರಧಾನಮಂತ್ರಿ ಕಾರ್ಯಾಲಯವು ನೀತಿ ಆಯೋಗದ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಿತು. ನದಿ ಪುನರುಜ್ಜೀವನ ನೀತಿಯ ಅನುಷ್ಠಾನವನ್ನು ಶಿಫಾರಸು ಮಾಡಿ, ನೀತಿ ಆಯೋಗವು 6 ಜೂನ್ 2018-ರಂದು ಎಲ್ಲಾ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಪ್ರಕಟಣೆಯನ್ನು ಕಳುಹಿಸಿತು. ಮಾರ್ಚ್ 2019 ರಲ್ಲಿ, ಮಹಾರಾಷ್ಟ್ರ ಯವತ್ಮಾಳ ಜಿಲ್ಲೆಯ ವಾಘರಿ ನದಿಯ ಪುನರುಜ್ಜೀವನಕ್ಕಾಗಿ ಪ್ರಾಯೋಗಿಕವಾಗಿ ರ‍್ಯಾಲೀ ಫಾರ್ ರಿವರ್ಸ್-ನ ಯೋಜನೆಯನ್ನು ಔಪಚಾರಿಕವಾಗಿ
ಅನುಮೋದಿಸಿದ ಮೊದಲ ರಾಜ್ಯವಾಯಿತು. ರಾಷ್ಟ್ರವ್ಯಾಪಿ ನದಿ ಅಭಿಯಾನದಲ್ಲಿ ನೀವು ಹೇಗೆ ಭಾಗವಹಿಸಬಹುದು ಮತ್ತು ತೊಡಗಿಸಿಕೊಳ್ಳಬಹುದು ಎಂದು ತಿಳಿಯಲು RallyForRivers.org ಪುಟಕ್ಕೆ ಭೇಟಿ ನೀಡಿ.

Images courtesy: River Cauvery 1, 2, from Wikipedia